
ಕೃತಜ್ಞತೆ ಮತ್ತು ಸ್ತುತಿಗಳು ಆಧ್ಯಾತ್ಮಿಕ ಬೆಳವಣಿಗೆ ಹಾಗೂ ಪೂರೈಕೆಯು ನಿಮ್ಮೆಡೆಗೆ ಬರಲು ಇರುವ ಮಾರ್ಗವನ್ನು ನಿಮ್ಮ ಪ್ರಜ್ಞೆಯಲ್ಲಿ ತೆರೆಯುವುವು. ತಾನು ಹರಿಯಲು ಹಾದಿ ತೆರೆದುಕೊಂಡ ಕೂಡಲೇ ಆ ಚೈತನ್ಯವು ಪ್ರತ್ಯಕ್ಷವಾದ ಅಭಿವ್ಯಕ್ತಿಯಾಗಿ ನುಗ್ಗಿ ಬರುತ್ತದೆ. ನೀವು ಸದಾ ಎಲ್ಲದಕ್ಕೂ ಕೃತಜ್ಞರಾಗಿರಬೇಕು. ಆಲೋಚಿಸಲು, ಮಾತನಾಡಲು ಮತ್ತು ಕ್ರಿಯಾಶೀಲವಾಗಿರಲು ಬೇಕಾದ ಸಕಲ ಶಕ್ತಿಯೂ ಭಗವಂತನ ಅನುಗ್ರಹದಿಂದ ಲಭ್ಯವಾದುದೆಂದೂ, ಮತ್ತು ನಿಮಗೆ ಮಾರ್ಗದರ್ಶನ ಮಾಡುತ್ತಾ, ಸ್ಫೂರ್ತಿ ನೀಡುತ್ತಾ ಅವನು ಈಗಲೂ ನಿಮ್ಮೊಂದಿಗೇ ಇದ್ದಾನೆಂದು ಅರಿತುಕೊಳ್ಳಿ.
ನಿಮ್ಮ ಕಣ್ಣುಗಳನ್ನು ತೆರೆಯಿರಿ ಮತ್ತು ನೀವು ಈಗ ನಿಮ್ಮಲ್ಲಿರುವ ಒಳ್ಳೆಯದನ್ನು ನೋಡಿ, ನಂತರ ಪ್ರತಿಯೊಂದು ಹೊಸ ಅಭಿವ್ಯಕ್ತಿಯು ನಿಮ್ಮೆಡೆಗೆ ಬರುತ್ತಿರುವಂತೆಯೇ ಅದನ್ನು ಗುರುತಿಸಲು ಎಚ್ಚರಿಕೆಯಿಂದಿರಿ ಮತ್ತು ಜಾಗೃತರಾಗಿರಿ. ಭಗವಂತನೊಂದಿಗೆ ಭಕ್ತಿಯಿಂದ ಮಾತನಾಡಿ ಮತ್ತು ಜೀವನದ ಎಲ್ಲ ಒಳ್ಳೆಯ ವಿಷಯಗಳಿಗಾಗಿ ಅವನಿಗೆ ಕೃತಜ್ಞತೆ ಸಲ್ಲಿಸಿ. ಅವನು ಯಾವಾಗಲೂ ನಿಮ್ಮೊಂದಿಗಿದ್ದಾನೆ ಮತ್ತು ನಿಮ್ಮೊಳಗಿರುವ ದಿವ್ಯ ಶಕ್ತಿಯನ್ನು ನೀವು ಮಾನ್ಯ ಮಾಡಿದರೆ ಯಾವುದೂ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ.
ನಮ್ಮ ಕೃತಜ್ಞತೆಯು ಎಷ್ಟೇ ಹೃತ್ಪೂರ್ವಕವಾಗಿದ್ದರೂ ಸರ್ವ-ಸಮೃದ್ಧನಾದ ಅವನಿಗೆ ಅದರ ಅವಶ್ಯಕತೆ ಇಲ್ಲ. ಆದರೆ ನಾವು ಅವನಿಗೆ ಕೃತಜ್ಞರಾದಾಗ, ನಮ್ಮ ಅತ್ಯುನ್ನತ ಒಳಿತಿಗಾಗಿಯೇ, ಎಲ್ಲ ಪೂರೈಕೆಯ ಆ ಮಹಾ ಮೂಲದ ಮೇಲೆ ನಮ್ಮ ಗಮನವು ಕೇಂದ್ರೀಕೃತವಾಗುತ್ತದೆ.
ನಿಮ್ಮ ಅನೇಕ ಅನುಗ್ರಹಗಳಿಗಾಗಿ ಪ್ರತಿದಿನ ಕೃತಜ್ಞರಾಗಿರಿ, ಕೃತಜ್ಞತಾ ಸಮಯವೆಂದು ಕ್ಯಾಲೆಂಡರ್ ಸೂಚಿಸಿದಾಗ ಮಾತ್ರವಲ್ಲ. ನಿಮ್ಮ ಕೃತಜ್ಞತೆಯ ಆಧಾರವು ಲೌಕಿಕ ಸಮೃದ್ಧಿಯಾಗಿರಬಾರದು. ನಿಮ್ಮ ಪ್ರಾಪಂಚಿಕ ಸಂಪತ್ತು ಹೆಚ್ಚಿದ್ದರೂ ಕಡಿಮೆಯಿದ್ದರೂ, ನೀವು ಭಗವಂತನ ಕೊಡುಗೆಗಳಿಂದ ಶ್ರೀಮಂತರೇ ಆಗಿರುವಿರಿ. ಅವನನ್ನು ಪ್ರೀತಿಸಿ, ಅವನು ನಿಮಗೆ ನೀಡಬಹುದಾದ ಬಾಹ್ಯ ವಿಷಯಗಳಿಗಾಗಿ ಅಲ್ಲ, ಬದಲಿಗೆ ನಿಮ್ಮ ತಂದೆಯಾಗಿ ತನ್ನನ್ನೇ ನಿಮಗೆ ಉಡುಗೊರೆಯಾಗಿ ನೀಡುವುದಕ್ಕಾಗಿ.
ಅವನ ದಯೆಯು ನನ್ನ ಹೃದಯವನ್ನು ಕೃತಜ್ಞತೆಯಿಂದ ತುಂಬಿಸಿದೆ. ಈ ಜೀವನದಲ್ಲಿ ನಾನು ಬಯಸಿದ್ದೆಲ್ಲವನ್ನೂ ಅವನು ನನಗೆ ಕೊಟ್ಟಿದ್ದಾನೆ; ಆದರೆ, ಎಲ್ಲಕ್ಕಿಂತ ಹೆಚ್ಚಾಗಿ, ಅವನು ತನ್ನನ್ನು ತಾನೇ ಕೊಟ್ಟಿದ್ದಾನೆ. ಎಂತಹ ಕೃತಜ್ಞತೆಯನ್ನು ನಾನು ಅನುಭವಿಸುತ್ತೇನೆ! ನನ್ನ ಹೃದಯದಲ್ಲಿ ಕಣ್ಣಾಮುಚ್ಚಾಲೆ ಆಡಿದವನು ಈಗ ನನಗೆ ಸದಾ ಹತ್ತಿರವಾಗಿದ್ದಾನೆ. ಅವನು ಎಲ್ಲಾ “ನೈಜ” ಅಭಿವ್ಯಕ್ತಿಗಳ ಕೆಚ್ಚೆದೆಯ ಹಿಂದೆ ಅಡಗಿಕೊಂಡಿದ್ದಾನೆ. ನಿಮಗಾಗಿ ಕಾಯುತ್ತ ಅವನು ಅಲ್ಲಿಯೇ ಇದ್ದಾನೆ. ನೀವು ಕಷ್ಟವನ್ನು ಪ್ರಯಾಸದಿಂದ ದಾಟುವ ಅಗತ್ಯವಿಲ್ಲ. ಅವನ ಬಳಿ ಹೋಗಿ. ಅತ್ಯಂತ ಪ್ರಿಯನು ಕಾಯುತ್ತಿದ್ದಾನೆ; ನಿಮ್ಮನ್ನು ಸ್ವಾಗತಿಸಲು, ನಿಮ್ಮನ್ನು ಆಧ್ಯಾತ್ಮೀಕರಿಸಲು ಮತ್ತು ನಿಮ್ಮನ್ನು ಅಮರರನ್ನಾಗಿಸಲು ಅವನ ತೋಳುಗಳು ತೆರೆದಿವೆ.