
ಪ್ರತಿ ವರ್ಷ ಕ್ರಿಸ್ಮಸ್ ಸಮಯದಲ್ಲಿ ಸ್ವರ್ಗೀಯ ಸ್ತರಗಳಿಂದ ಭೂಮಿಯೆಡೆಗೆ ಹರಿದುಬರುವ ಕ್ರಿಸ್ತ-ಪ್ರೀತಿ ಮತ್ತು ಆನಂದಗಳ ಸ್ಪಂದನಗಳು ಯಾವಾಗಲೂ ಇರುವುದಕ್ಕಿಂತ ಹೆಚ್ಚು ಬಲವಾಗಿರುತ್ತವೆ. ಏಸುವು ಜನಿಸಿದಾಗ ಭೂಮಿಯ ಮೇಲೆ ಬೆಳಗಿದ ಅದೇ ಅನಂತ ಬೆಳಕು ಆಕಾಶವನ್ನು ತುಂಬಿಕೊಳ್ಳುತ್ತದೆ. ಭಕ್ತಿ ಮತ್ತು ಆಳವಾದ ಧ್ಯಾನದ ಮೂಲಕ ಶ್ರುತಿಗೂಡಿಕೊಂಡಿರುವ ಜನರು ಕ್ರಿಸ್ತ ಯೇಸುವಿನಲ್ಲಿದ್ದ ಸರ್ವವ್ಯಾಪಿ ಪ್ರಜ್ಞೆಯ ಪರಿವರ್ತನಕಾರೀ ಸ್ಪಂದನಗಳನ್ನು ಅದ್ಭುತವಾಗಿ ಸ್ಪಷ್ಟವಾದ ರೀತಿಯಲ್ಲಿ ಅನುಭವಿಸುತ್ತಾರೆ.
ಇಡೀ ದಿನದ ಕ್ರಿಸ್ಮಸ್ ಧ್ಯಾನದ ಕಲ್ಪನೆಯನ್ನು ನಿಜವಾಗಿಯೂ ನನಗೆ ಕ್ರಿಸ್ತನೇ ನೀಡಿದ್ದು, ಅದರಿಂದ ಅವನು ನಿಮಗಾಗಿ ಏನನ್ನಾದರೂ ಮಾಡಬಹುದೆಂದು. ಅವನು ನಿಮ್ಮನ್ನು ಆಶೀರ್ವದಿಸಬೇಕೆಂದಿದ್ದಾನೆ, ಆದರೆ ನೀವು ಗ್ರಹಣಶೀಲರಾಗಿರದಿದ್ದರೆ, ಅವನ ಕೈಗಳು ಕಟ್ಟಿಹಾಕಿದಂತಿರುತ್ತವೆ. ಅವನು ನಿಮ್ಮ ಬಳಿಗೆ ಬರಲು ಬಯಸುತ್ತಾನೆ, ಆದರೆ ಭಕ್ತಿಯ ದ್ವಾರಗಳ ಮೂಲಕ ಮಾತ್ರ ಅವನು ಪ್ರವೇಶಿಸಲು ಸಾಧ್ಯ, ಅವು ಮುಚ್ಚಿದ್ದರೆ ಅವನು ನಿಮ್ಮ ಜೀವನವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಪ್ರಾಮಾಣಿಕ ಆತ್ಮಗಳು ಅವನಿಗೆ ಎಲ್ಲಿ ಕಂಡರೂ, ಅವನು ಅವರ ಬಳಿಗೆ ಬರಲು ಯತ್ನಿಸುತ್ತಾನೆ; ಆದರೆ ಶಾಂತತೆಯ ಬಾಗಿಲುಗಳು ಮುಚ್ಚಿದ್ದಾಗ ಮತ್ತು ಅಶಾಂತತೆಯ ಚಿಲಕವು ಆತ್ಮವನ್ನು ಬಂಧಿಸಿಟ್ಟಿದ್ದಾಗ ಅವನು ಹೇಗೆ ಒಳಬರಲು ಸಾಧ್ಯ? ಆದರೂ ನೀವು ದೀರ್ಘವಾಗಿ ಮತ್ತು ಆಳವಾಗಿ ಧ್ಯಾನ ಮಾಡಿದರೆ ಮತ್ತು ನಿಮ್ಮ ಆತ್ಮದ ಎಲ್ಲ ಪ್ರೀತಿಯಿಂದ ಕ್ರಿಸ್ತನನ್ನು ಕರೆದರೆ, ಚಡಪಡಿಕೆ ಮತ್ತು ಸಂದೇಹದ ಎಲ್ಲ ಅಡೆತಡೆಗಳನ್ನು ತೆಗೆದುಹಾಕಿದರೆ, ಅವನು ಸ್ವಇಚ್ಛೆಯಿಂದ ಒಳಬರುವುದನ್ನು ನೀವು ಕಾಣಬಹುದು. ಆಗ ನಿಮಗೆ ಕ್ರಿಸ್ಮಸ್‌ನ ನಿಜವಾದ ಅರ್ಥ ಮತ್ತು ಆನಂದಗಳು ತಿಳಿದುಬರುತ್ತವೆ.
ಯೇಸುವಿನ ಸಾರ್ವತ್ರಿಕ ಪ್ರೀತಿ, ಕ್ಷಮೆ, ನೈತಿಕ ಸತ್ತ್ವ, ವೈರಾಗ್ಯ ಮತ್ತು ಭಕ್ತಿಯನ್ನು ನಿಮ್ಮೊಳಗೆ ಸಾಧಿಸಿಕೊಳ್ಳುವ ಮೂಲಕ ಮತ್ತು ಎಲ್ಲ ಸೋದರ ಜನಾಂಗಗಳು ಮತ್ತು ಎಲ್ಲ ಜೀವಿಗಳೆಡೆಗೆ ಕ್ರಿಸ್ತ ಪ್ರೀತಿಯನ್ನು ಅನುಭವಿಸುವ ಮೂಲಕ ಅವನ ಜನನವನ್ನು ನಿಜವಾಗಿಯೂ ಆಚರಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ.
ನಿಮ್ಮ ಸಾಮಾಜಿಕ ಸಂಭ್ರಮಗಳೊಂದಿಗೆ ಕ್ರಿಸ್ತನನ್ನು ನಿಮ್ಮ ಧ್ಯಾನಸ್ಥ ಪ್ರಜ್ಞೆಯಲ್ಲಿ ಎರಡನೇ ಬಾರಿಗೆ ತರುವುದನ್ನು ಸೇರಿಸಿ. ಕ್ರಿಸ್ಮಸ್‌ನ ಆಚರಣೆಯಲ್ಲಿ ಕ್ರಿಸ್ತನ ಬಗ್ಗೆ ತೀರ ಸಣ್ಣ ಕುರುಹು ಮಾತ್ರ ಇದೆ; ಆದರೆ ಧ್ಯಾನದಲ್ಲಿ ದಿವ್ಯ ಭಾವಪರವಶತೆಯ ತೊಟ್ಟಿಲಿನಲ್ಲಿ ಅವನನ್ನು ನಿರಂತರ ಮತ್ತು ನಿತ್ಯಾನಂದಕರ ವಾಸ್ತವವಾಗಿ ಕಾಣಬಹುದು ಮತ್ತು ಅನುಭವಿಸಬಹುದು.
ಅನಂತ ಕ್ರಿಸ್ತನನ್ನು ಕುರಿತ ಮಾರ್ಗದರ್ಶಿತ ಧ್ಯಾನಕ್ಕಾಗಿ ಮತ್ತು ಪರಮಹಂಸ ಯೋಗಾನಂದರ ಹೆಚ್ಚಿನ ಬರಹಗಳಿಗಾಗಿ “ಋತುವಿನ ಸ್ಫೂರ್ತಿ” (Seasonal Inspiration) ಪುಟವನ್ನು ಭೇಟಿ ಮಾಡಿ, ಅವು ನಿಮಗೆ ಈ ಋತುವಿನ ಆಳವಾದ ಪ್ರಾಮುಖ್ಯತೆಯನ್ನು ಅನುಭವಿಸಲು ನೆರವಾಗುತ್ತವೆ.