ಪರಮಹಂಸ ಯೋಗಾನಂದರ ಜನ್ಮಸ್ಥಳ — ಗೋರಖ್‌ಪುರ್

15 ಮೇ, 2025

ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಶ್ರೀ ಯೋಗಿ ಆದಿತ್ಯನಾಥ್ ಅವರು ಮೇ 11, 2025 ರಂದು ಭೂಮಿ ಪೂಜೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಿದರು

ನಮ್ಮ ಪ್ರೀತಿ ಪಾತ್ರ ಗುರುದೇವರಾದ ಶ್ರೀ ಶ್ರೀ ಪರಮಹಂಸ ಯೋಗಾನಂದರು ದಿನಾಂಕ ಜನವರಿ 5, 1893 ರಂದು ಜನಿಸಿದ ಉತ್ತರ ಪ್ರದೇಶದ (ಯು.ಪಿ.) ಗೋರಖ್‌ಪುರದಲ್ಲಿನ ಸ್ಥಳವನ್ನು ಪವಿತ್ರ ಸ್ಮಾರಕವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಶುಭ ಸುದ್ದಿಯನ್ನು ನಿಮ್ಮೊಡನೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತಿದ್ದೇವೆ.

ಮೂಲ ಮನೆಯ ನೋಟ. ಸುಮಾರು 1990ರಲ್ಲಿ ತೆಗೆದ ಫೋಟೋ
ಹೊಸ ಸ್ಮಾರಕ ಮಂದಿರದ ವಾಸ್ತುಶಿಲ್ಪದ ರೂಪುರೇಷೆ

ಅನೇಕ ವರ್ಷಗಳಿಂದ, ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ಖಾಸಗಿ ಮಾಲೀಕತ್ವದಲ್ಲಿದ್ದ ಆಸ್ತಿ ಹಾಗೂ ಮೂಲ ಮನೆಯನ್ನು ಪಡೆಯಲು ಸಕ್ರಿಯವಾಗಿ ಪ್ರಯತ್ನಿಸುತ್ತಿತ್ತು. ಆದರೆ, ನಮ್ಮ ನಿಯಂತ್ರಣದ ಹೊರಗಿನ ಹಲವಾರು ಕಾರಣಗಳು ಈ ಕನಸನ್ನು ಸಾಕಾರಗೊಳಿಸಲು ಅಡ್ಡಿಯಾಗಿ ನಿಂತಿದ್ದವು. ಇತ್ತೀಚೆಗೆ ಮಾತ್ರ, ಮಾನ್ಯ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರ ಮಾರ್ಗದರ್ಶನದಲ್ಲಿ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಈ ಬಹುಕಾಲದ ಅಡೆತಡೆಗಳನ್ನು ದಾಟಿ ಆ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಯಿತು.

ವೈಎಸ್ಎಸ್ ನ ಸಹಯೋಗದಲ್ಲಿ, ಶ್ರೀ ಶ್ರೀ ಪರಮಹಂಸ ಯೋಗಾನಂದರಿಗೆ ಸಮರ್ಪಿತವಾಗಿ ಒಂದು ಸುಂದರ ಸ್ಮಾರಕ ಸೌಲಭ್ಯವನ್ನು ನಿರ್ಮಿಸಲು ಯೋಜನೆ ರೂಪುಗೊಂಡಿದೆ. ಈ ಸ್ಮಾರಕದಲ್ಲಿ ಒಂದು ಮಂದಿರ, ಸಂಗ್ರಹಾಲಯ, ಮತ್ತು ಒಂದು ಧ್ಯಾನ ಭವನವಿರುತ್ತದೆ. ಈ ಮಂದಿರವು ವಿಶ್ವದ ಎಲ್ಲ ಭಾಗಗಳಿಂದ ಭೇಟಿಕೊಟ್ಟು, ನಮನ ಸಲ್ಲಿಸಿ, ಈ ಪವಿತ್ರ ಸ್ಥಳದಲ್ಲಿ ಧ್ಯಾನ ಮಾಡಲು ಬಯಸುವ ನಮ್ಮ ಪ್ರಿಯ ಗುರುದೇವರ ಭಕ್ತರು ಮತ್ತು ಸ್ನೇಹಿತರಿಗೆ ತೆರೆದಿರುತ್ತದೆ. ಇದು ಭಾರತದ ದಿವ್ಯ ಪ್ರೇಮಾವತಾರದಾದ ಯೋಗಾನಂದರ ಜನ್ಮ, ಜೀವನ ಮತ್ತು ಕಾರ್ಯಕ್ಕೆ ಗೌರವಾರ್ಥವಾಗಿರುವ ಒಂದು ತೀರ್ಥಕ್ಷೇತ್ರವಾಗಿರುತ್ತದೆ.

2025 ರ ಮೇ 11ರಂದು, ಭಾನುವಾರದ ಮಧ್ಯಾಹ್ನ, ಶ್ರೀ ಯೋಗಿ ಆದಿತ್ಯನಾಥ್ ಅವರು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್ ಮಂಡಳಿಯ ಸದಸ್ಯರಾದ ಸ್ವಾಮಿ ವಿಷ್ವಾನಂದ ಗಿರಿ, ಹಾಗೂ ವೈಎಸ್ಎಸ್ ಮಂಡಳಿಯ ಸದಸ್ಯರಾದ ಸ್ವಾಮಿ ಈಶ್ವರಾನಂದ ಗಿರಿ ಮತ್ತು ಸ್ವಾಮಿ ಚೈತನ್ಯಾನಂದ ಗಿರಿಯವರೊಂದಿಗೆ, ಆ ಪವಿತ್ರ ಸ್ಥಳದಲ್ಲಿ ಭೂಮಿಪೂಜೆ ಹಾಗೂ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಮಾರಂಭದಲ್ಲಿ ಸುಮಾರು ಗೋರಖ್‌ಪುರ್‌ನ 600 ಜನ ಸ್ಥಳೀಯ ಗಣ್ಯರು, ವೈಎಸ್ಎಸ್ ನ ಭಕ್ತರು ಮತ್ತು ಗುರುದೇವರ ಜಾಗತಿಕ ಆಧ್ಯಾತ್ಮಿಕ ಕೊಡುಗೆಯನ್ನು ಗೌರವಿಸುವ ಅಭಿಮಾನಿಗಳು ಭಾಗವಹಿಸಿದ್ದರು.

ಮೂಲ ಮನೆಯು ಸಂಪೂರ್ಣ ಜೀರ್ಣಗೊಂಡು ದುರಸ್ತಿಯಾಗಲಾರದ ಸ್ಥಿತಿಗೆ ತಲುಪಿದ್ದರಿಂದ ಅದನ್ನು ಕೆಡವಲಾಯಿತು. ಈಗ ನಿರ್ಮಿಸಲಾಗಲಿರುವ ಸ್ಮಾರಕ ಮಂದಿರವನ್ನು ಅದೇ ಸ್ಥಳದಲ್ಲಿ ಕಟ್ಟಲಾಗುವುದು, ಮತ್ತು ಗುರೂಜಿಯವರ ಪವಿತ್ರ ಕಂಪನಗಳನ್ನು ಹೊಂದಿರುವ ಮೂಲ ಕಟ್ಟಡದ ಕೆಲ ಇಟ್ಟಿಗೆಗಳನ್ನು ಅದರಲ್ಲಿ ಅಳವಡಿಸಲಾಗುವುದು. ನಿರ್ಮಾಣ ಕಾರ್ಯವನ್ನು ತಕ್ಷಣವೇ ಪ್ರಾರಂಭಿಸಲಾಗುವುದು ಮತ್ತು ಸುಮಾರು 18 ತಿಂಗಳ ಒಳಗಾಗಿ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಈ ಪುಣ್ಯ ಯೋಜನೆಯ ಪ್ರಗತಿಯ ಕುರಿತು ನಿರಂತರ ಮಾಹಿತಿಯನ್ನು ವೈಎಸ್ಎಸ್ ಬ್ಲಾಗ್‌ನಲ್ಲಿ ಹಂಚಿಕೊಳ್ಳಲಾಗುತ್ತದೆ.

ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿ ಅವರು ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು
ಯೋಗದಾ ಸತ್ಸಂಗ ಸೊಸೈಟಿ/ಸ್ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್ ಸಂನ್ಯಾಸಿಗಳು ಭೂಮಿ ಪೂಜೆಯಲ್ಲಿ ಭಾಗವಹಿಸಿದರು

ಇದನ್ನು ಹಂಚಿಕೊಳ್ಳಿ