2016 ರ ಮಾರ್ಚ್ 4 ರಂದು, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ, ಶ್ರೀ ನರೇಂದ್ರ ಮೋದಿ ಅವರು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಗಳಾದ, ಸ್ವಾಮಿ ಸ್ಮರಣಾನಂದರನ್ನು ಭೇಟಿಯಾದರು.
ಹೊಸ ದಿಲ್ಲಿಯ ಸಂಸದ್ ಭವನದ ಪ್ರಧಾನ ಮಂತ್ರಿಗಳ ಕಛೇರಿಯಲ್ಲಿ ಭೇಟಿ ನಡೆಯಿತು. ಸ್ವಾಮಿ ಸ್ಮರಣಾನಂದರ ಜೊತೆಯಲ್ಲಿ, ಇನ್ನೂ ಇಬ್ಬರು ಹಿರಿಯ ಸನ್ಯಾಸಿಗಳು ಭಾಗವಹಿಸಿದ್ದರು: ಸ್ವಾಮಿ ನಿತ್ಯಾನಂದ ಹಾಗೂ ಸ್ವಾಮಿ ಈಶ್ವರಾನಂದ (ವೈಎಸ್‌ಎಸ್ ನಿರ್ದೇಶಕರ ಮಂಡಳಿಯ ಸದಸ್ಯರು). ಶ್ರೀ ಭೂಪೇಂದ್ರ ಯಾದವ್ (ಸಂಸತ್ತಿನ ರಾಜ್ಯ ಸಭೆಯ ಸದಸ್ಯರು) ಅವರೂ ಸಹ ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪರಮಹಂಸ ಯೋಗಾನಂದರ ಭಾರತದಲ್ಲಿನ ಕಾರ್ಯ, 1917 ರಲ್ಲಿ ಆರಂಭವಾಗಿದ್ದು, ಮುಂಬರುವ ಶತಮಾನೋತ್ಸವದ ವಿಷಯದ ಬಗ್ಗೆ; ಭಾರತದ ಒಳಗೆ ಹಾಗೂ ಹೊರಗೆ ಯೋಗದ ಆಳವಾದ ಅರಿವನ್ನು ತರುವುದರಲ್ಲಿ ಆದ್ಯ ಪ್ರವರ್ತಕರಾಗಿ ಅವರ ಪಾತ್ರವನ್ನು ಹಂಚಿಕೊಂಡರು. ವೈಎಸ್‌ಎಸ್/ಎಸ್‌ಆರ್‌ಎಫ್ ನ ಅಧ್ಯಕ್ಷೆ, ಶ್ರೀ ಮೃಣಾಲಿನಿ ಮಾತಾ ಅವರ ಪತ್ರವನ್ನು ಕೊಟ್ಟರು, ಅದರಲ್ಲಿ ಅವರು ಸಂಯುಕ್ತ ರಾಷ್ಟ್ರಗಳ ಅಂತರರಾಷ್ಟ್ರೀಯ ಯೋಗ ದಿನದ ಸ್ಥಾಪನೆಯಲ್ಲಿ ಪ್ರಧಾನ ಮಂತ್ರಿಗಳ ಪಾತ್ರವನ್ನು ಶ್ಲಾಘಿಸಿದ್ದರು, ಈಗ ಅದನ್ನು ಪ್ರತಿ ವರ್ಷ ಜೂನ್ 21 ರಂದು ಹಮ್ಮಿಕೊಳ್ಳಲಾಗುತ್ತಿದೆ.
ಪ್ರಧಾನ ಮಂತ್ರಿ ಮೋದಿಯವರು ಸೆಪ್ಟಂಬರ್ 2014 ರಂದು ಸಂಯುಕ್ತ ರಾಷ್ಟ್ರಗಳ ಒಕ್ಕೂಟಕ್ಕೆ ಅಂತರರಾಷ್ಟ್ರೀಯ ಯೋಗದಿನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಪ್ರಸ್ತಾಪಿಸಿದರು, ಹೀಗೆ ಹೇಳಿದರು: “ಯೋಗವು ಭಾರತೀಯ ಪ್ರಾಚೀನ ಸಂಸ್ಕೃತಿಯ ಅಮೂಲ್ಯವಾದ ಕೊಡುಗೆ. ಅದು ದೇಹ ಹಾಗೂ ಮನಸ್ಸು; ಆಲೋಚನೆ ಹಾಗೂ ಕೃತಿ; ನಿಗ್ರಹ ಹಾಗೂ ಪೂರೈಕೆ; ಮಾನವ ಹಾಗೂ ಪ್ರಕೃತಿಯ ಏಕತೆಯನ್ನು ಸಾಕಾರಗೊಳಿಸುತ್ತದೆ; ಆರೋಗ್ಯ ಹಾಗೂ ಸೌಖ್ಯದ ಬಗ್ಗೆ ಸಮಗ್ರವಾದ ಅನುಸಂಧಾನ.” ಅವರ ಪ್ರಸ್ತಾವನೆಯನ್ನು ಅನುಸರಿಸಿ, ಯುಎನ್ ನಿರ್ಣಯವನ್ನು ಅಂಗೀಕರಿಸಿತು, ಸಂಘಟನೆಯ ಇತಿಹಾಸದಲ್ಲಿ ಅತಿ ಹೆಚ್ಚು ಸಂಖ್ಯೆಯ ಬೆಂಬಲದೊಂದಿಗೆ, 175 ರಾಷ್ಟ್ರಗಳ ಸಹ – ಪ್ರಾಯೋಜಕತ್ವದ ದಾಖಲೆಯೊಂದಿಗೆ ಆರಂಭಿಸಲಾಯಿತು.
ಪ್ರಧಾನಿಗೆ ಮೃಣಾಲಿನಿ ಮಾತಾ ಅವರ ಪತ್ರ
ಶ್ರೀ ಮೃಣಾಲಿನಿ ಮಾತಾ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ:
ಯೋಗ ಹಾಗೂ ಭಾರತೀಯ ಆಧ್ಯಾತ್ಮದ ದೃಢವಾದ ಸಾಧಕರಾಗಿ, ಬಹುಶಃ ನಿಮಗೆ ಆಧ್ಯಾತ್ಮದ ಉತ್ಕೃಷ್ಟ ಕೃತಿ ಯೋಗಿಯ ಆತ್ಮ ಕಥೆಯ ಲೇಖಕರಾದ ಶ್ರೀ ಶ್ರೀ ಪರಮಹಂಸ ಯೋಗಾನಂದರ ಬೋಧನೆಗಳ ಪರಿಚಯವಿರಬೇಕು, ಆದಾಗ್ಯೂ ಅವರ ಹೆಚ್ಚಿನ ಸಮಯವನ್ನು ಪಾಶ್ಚಾತ್ಯ ದೇಶಗಳಲ್ಲಿ ಭಾರತದ ಪುರಾತನ ಯೋಗ ಧ್ಯಾನದಿಂದ ನೇರವಾಗಿ ವೈಯಕ್ತಿಕ ದೈವಾನುಭವವನ್ನು ಪಡೆಯುವ ವಿಜ್ಞಾನವನ್ನು ಪಸರಿಸಲು ಉಪಯೋಗಿಸಿದರು, ಪರಮಹಂಸಜೀಯವರು ಸದಾ ಅವರ ಹೃದಯದಲ್ಲಿ ಭಾರತದ ಬಗ್ಗೆ ಗಾಢ ಪ್ರೇಮವನ್ನು ಹೊಂದಿದ್ದರು ಹಾಗೂ ತಮ್ಮ ಭೌತ ದೇಹವನ್ನು ತ್ಯಾಗ ಮಾಡುವಾಗ ಅವರು ತಮ್ಮ ಪದ್ಯ “ಮೈ ಇಂಡಿಯಾ” ಕುರಿತು ಮಾತನಾಡುತ್ತಿದ್ದರು. ಅವರ ಉದ್ದೇಶಗಳಲ್ಲಿ ಒಂದು ಪೂರ್ವ ಹಾಗೂ ಪಶ್ಚಿಮದ ಐಕ್ಯತೆಗಾಗಿ ಪ್ರಚಾರಮಾಡುವುದಾಗಿದೆ, ವರ್ಷಗಳುರುಳಿದಂತೆ ಅನೇಕ ನಂಬಿಕೆಯುಳ್ಳವರು ಹಾಗೂ ಅನೇಕ ರಾಷ್ಟ್ರೀಯರು ಅವರ ಸಾರ್ವತ್ರಿಕ ಸಂದೇಶಕ್ಕೆ ಸೆಳೆಯಲ್ಪಟ್ಟರು. ಒಂದು ದಿನ ಯೋಗವು ಇಡೀ ವಿಶ್ವವನ್ನು ಸುತ್ತುವರೆದು ಏಕ ದೇವನೆಂಬುದನ್ನು ಮಾನವತೆಯು ಪ್ರತ್ಯಕ್ಷವಾಗಿ ಮನಗಂಡು ವಿಶ್ವದಲ್ಲಿ ಶಾಂತಿ ಸ್ಥಾಪಿತವಾಗುವ ಭವಿಷ್ಯವನ್ನು ಅವರು ಕಂಡಿದ್ದರು. ಆದ್ದರಿಂದ ನೀವು ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರಸ್ತಾಪಿಸಿದಾಗ ನನಗೆ ಅತೀವ ಹರ್ಷವಾಯಿತು, ಅದು ನಂತರದಲ್ಲಿ ಅಲ್ಪ ಸಮಯದಲ್ಲಿ ಸಂಯುಕ್ತ ರಾಷ್ಟ್ರಗಳ ನಿರ್ಣಯವಾಗಿ ಅನೇಕ ರಾಷ್ಟ್ರಗಳ ದಾಖಲೆಯೊಂದಿಗೆ ಅಂಗೀಕಾರವಾಯಿತು. ಮೊದಲ ಅಂತರರಾಷ್ಟ್ರೀಯ ಯೋಗದಿನವನ್ನು ವಿಶ್ವದಾದ್ಯಂತ ಜನರು ದೊಡ್ಡಗುಂಪುಗಳಲ್ಲಿ ಬಂದು ಆಚರಿಸುವುದನ್ನು ವೀಕ್ಷಿಸುವುದು ಸ್ಫೂರ್ತಿದಾಯಕವಾಗಿತ್ತು. ಜೂನ್ 21, 2015ರಂದು, ಈ ಪ್ರಮುಖವಾದ ವಾರ್ಷಿಕ ಘಟನೆಯಲ್ಲಿ ಭಾಗವಹಿಸುವಿಕೆಯು ಕಾಲಾನಂತರದಲ್ಲಿ ವೃದ್ಧಿಯಾಗುತ್ತಾ ಕ್ರಮೇಣ ಮಾನವತೆಯ ಪ್ರಜ್ಞೆಯ ಉನ್ನತಿಗೆ ಸಹಾಯ ಮಾಡುವುದೆಂದು ನನ್ನ ನಿಶ್ಚಿತಾಭಿಪ್ರಾಯ….
“ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಪ್-ರಿಯಲೈಝೇಷನ್ ಫೆಲೊಷಿಪ್‌ನ ಪರವಾಗಿ ನಿಮಗೆ ಶುಭಹಾರೈಕೆಗಳು ಹಾಗೂ ನನ್ನ ಪ್ರಾರ್ಥನೆ – ಭಾರತದ ಅಭಿವೃದ್ಧಿಗಾಗಿ ಹಾಗೂ ಸೌಖ್ಯಕ್ಕಾಗಿ ಶ್ರಮಿಸುತ್ತಿರುವ ನಿಮ್ಮ ಕಾರ್ಯದಲ್ಲಿ ಭಗವಂತನ ಮಾರ್ಗದರ್ಶನ ಹಾಗೂ ಆಶೀರ್ವಾದವಿರಲಿ.”
ವೈಎಸ್‌ಎಸ್ ಸನ್ಯಾಸಿಗಳು ಪ್ರಧಾನ ಮಂತ್ರಿಗಳಿಗೆ ಪರಮಹಂಸ ಯೋಗಾನಂದರ ಆಟೋಬಯಾಗ್ರಫಿ ಆಫ್ ಯೋಗಿಯ ಸಂಸ್ಕೃತ ಹಾಗೂ ಗುಜರಾತಿ ಭಾಷಾಂತರದ ಕೊಡುಗೆಯನ್ನು ನೀಡಿದರು; ಹಾಗೇ ಯೋಗಾನಂದರ ಭಗವದ್ಗೀತೆಯ ಭಾಷಾಂತರ ಮತ್ತು ವ್ಯಾಖ್ಯಾನ, ಗಾಡ್ ಟಾಕ್ಸ್ ವಿತ್ ಅರ್ಜುನ, ಹಾಗೂ ಧ್ಯಾನ ಭಂಗಿಯಲ್ಲಿರುವ ಭಗವಾನ್ ಕೃಷ್ಣನ ಕಟ್ಟು ಹಾಕಿದ ಚಿತ್ರಪಟವನ್ನೂ, ಅಲ್ಲದೇ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ದಾನವನ್ನು ಕೊಡಲಾಯಿತು.




















