“ಕರುಣೆ ಮತ್ತು ಆಳವಾದ ದೃಷ್ಟಿಯ ಮೂಲಕ, ನಿಜವಾದ ಗುರುವಿಗೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬಡವರಾಗಿರುವವರಲ್ಲಿ ಭಗವಂತನು ನೋವನ್ನು ಅನುಭವಿಸುತ್ತಿರುವುದು ಕಾಣುತ್ತದೆ. ಅದಕ್ಕಾಗಿಯೇ ಅವರಿಗೆ ಸಹಾಯ ಮಾಡುವುದು ತನ್ನ ಆನಂದಮಯ ಕರ್ತವ್ಯವೆಂದು ಅವರು ಭಾವಿಸುತ್ತಾರೆ.”
— ಶ್ರೀ ಶ್ರೀ ಪರಮಹಂಸ ಯೋಗಾನಂದ
ಗುರು ಪೂರ್ಣಿಮೆಯಂದು ವಿಶೇಷ ಕಾಣಿಕೆ ಸಲ್ಲಿಸಿ
ನಮ್ಮ ಪ್ರೀತಿಯ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರು ನಮಗೆ ನೆನಪಿಸುವುದೇನೆಂದರೆ, ಒಬ್ಬ ನಿಜವಾದ ಗುರುವು ಎಲ್ಲರಲ್ಲೂ ದೈವತ್ವವನ್ನು ಕಾಣುತ್ತಾನೆ ಮತ್ತು ಅವರ ಉದ್ಧಾರಕ್ಕಾಗಿ ಸಂತೋಷದಿಂದ ತನ್ನನ್ನು ಅರ್ಪಿಸಿಕೊಳ್ಳುತ್ತಾನೆ. ಗುರು ಪೂರ್ಣಿಮೆಯು ಅಂತಹ ಪವಿತ್ರ ಸಂದರ್ಭವಾಗಿದ್ದು, ನಾವು ಅಂತಹ ಸದ್ಗುರುಗಳನ್ನು — ದೇವರ ಪ್ರೀತಿ ಮತ್ತು ಬೆಳಕಿನ ದೈವಿಕ ಪ್ರತಿನಿಧಿಗಳನ್ನು — ಗೌರವಿಸುತ್ತೇವೆ ಮತ್ತು ಅವರಿಗೆ ಅತ್ಯಂತ ಆಳವಾದ ಕೃತಜ್ಞತೆಯಿಂದ ಆಂತರಿಕವಾಗಿ ನಮಸ್ಕರಿಸುತ್ತೇವೆ.
ನಮಗೆ, ಪರಮಹಂಸಜಿಯವರ ಶಿಷ್ಯರಿಗೆ, ಈ ದಿನವು ಕೇವಲ ಒಂದು ಆಚರಣೆಯಲ್ಲ. ಇದು ನಮ್ಮ ಆಧ್ಯಾತ್ಮಿಕ ಪಯಣದಲ್ಲಿ ನಮ್ಮ ಗುರುದೇವರಿಂದ ಪಡೆದ ಆಶೀರ್ವಾದಗಳನ್ನು ಸ್ಮರಿಸಿಕೊಳ್ಳುವ ಹಾಗೂ ನಮಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ಅವರಿಗೆ ಸೇವೆ ಸಲ್ಲಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿಕೊಳ್ಳುವ ಸಮಯವಾಗಿದೆ.
ಗುರುದೇವರ ಕಾರ್ಯದಲ್ಲಿ ಪ್ರೀತಿಯಿಂದ ಸೇವೆ ಸಲ್ಲಿಸಲು ಆಹ್ವಾನ
ಈ ಪವಿತ್ರ ಸಂದರ್ಭದಲ್ಲಿ ನಮ್ಮ ಪ್ರೀತಿಯ ಗುರುದೇವರ ಕಮಲ ಚರಣಗಳಿಗೆ ನಮ್ಮ ಹೃದಯದ ಪ್ರೀತಿಯನ್ನು ಸಮರ್ಪಿಸುವಾಗ, ಅನೇಕ ಭಕ್ತರು ಅಂತರಿಕವಾಗಿ ಹೀಗೆ ಕೇಳಲು ಪ್ರೇರಿತರಾಗುತ್ತಾರೆ:
“ಇತರರಿಗೆ ಸಂತೋಷದಿಂದ ಸೇವೆ ಸಲ್ಲಿಸುವಲ್ಲಿ ನಾನು ಹೇಗೆ ಅವರ ಸಾಧನವಾಗಬಹುದು?”
ಈ ಗುರು ಪೂರ್ಣಿಮೆ, ಎರಡು ಪವಿತ್ರ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಅಂತಹ ಸಾಧನವಾಗಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ, ಅಲ್ಲಿ ನಿಮ್ಮ ಪ್ರೀತಿಯ ಬೆಂಬಲವು ಪರಮಹಂಸಜಿಯವರ ಧ್ಯೇಯವನ್ನು ಮುಂದುವರಿಸಲು ಸಹಾಯ ಮಾಡುತ್ತದೆ:
ಒಟ್ಟು ಅಂದಾಜು ವೆಚ್ಚ: ₹14 ಕೋಟಿ
ಗುರುದೇವರ ಕ್ರಿಯಾ ಯೋಗ ಬೋಧನೆಗಳ ಬೆಳಕನ್ನು ಮತ್ತು ಅವರ ಕರುಣಾಮಯಿ ಪ್ರೀತಿಯನ್ನು ಜಗತ್ತಿನಾದ್ಯಂತ ಹರಡಲು ನಮಗೆ ಸಾಧ್ಯವಾಗುವಂತೆ ಮಾಡಿದ ನಿಮ್ಮ ಪ್ರಾರ್ಥನೆಗಳು, ಸೇವೆ ಮತ್ತು ಉದಾರ ಕೊಡುಗೆಗಳಿಗಾಗಿ ನಾವು ಆಳವಾಗಿ ಕೃತಜ್ಞರಾಗಿದ್ದೇವೆ.
ಕೆಳಗಿನ ವಿವರವಾದ ಮನವಿಯನ್ನು ಓದಿರಿ.
ಭಾಗ I
ಮಹಾವತಾರ ಬಾಬಾಜಿಯ ಗುಹೆಯ ಬಳಿ, ರತ್ಖಲ್‌ನಲ್ಲಿ ಒಂದು ಸಂದರ್ಶಕರ ಮಾಹಿತಿ ಕೇಂದ್ರ
ಮಹಾವತಾರ ಬಾಬಾಜಿಯವರ ಗುಹೆಯ ಈ ಪವಿತ್ರ ಸ್ಥಳವು ಜಗತ್ತಿನಾದ್ಯಂತ ಸತ್ಯಾನ್ವೇಷಕರಿಗೆ ದಾರಿದೀಪವಾಗಿದೆ. 1861ರಲ್ಲಿ ಈ ಪುಣ್ಯ ಸ್ಥಳದಲ್ಲಿಯೇ ಅಮರರಾದ ಬಾಬಾಜಿಯವರು ತಮ್ಮ ಶ್ರೇಷ್ಠ ಶಿಷ್ಯರಾದ ಲಾಹಿರಿ ಮಹಾಶಯರನ್ನು ಭೇಟಿಯಾಗಿ, ಅವರ ಮೂಲಕ ಕಳೆದುಹೋಗಿದ್ದ ಕ್ರಿಯಾಯೋಗ ವಿಜ್ಞಾನವನ್ನು ಈ ಯುಗಕ್ಕಾಗಿ ಪುನರುಜ್ಜೀವನಗೊಳಿಸಿದರು.
ನಮ್ಮ ಪ್ರೀತಿಯ ಗುರುದೇವರ ಯೋಗಿಯ ಆತ್ಮಕಥೆ ಅಂತರಜಾಲ ಮತ್ತು ಆನ್‌ಲೈನ್ ಮಾಧ್ಯಮದ ಮೂಲಕ ಮಹಾವತಾರ ಬಾಬಾಜಿ ಬಗ್ಗೆ ಹೆಚ್ಚು ಹೆಚ್ಚು ಜನರು ತಿಳಿಯುತ್ತಾ ಹೋದಂತೆ, ಹೆಚ್ಚಿನ ಸಂಖ್ಯೆಯ ಸಂದರ್ಶಕರು — ಕೆಲವೊಮ್ಮೆ ಬಸ್ ತುಂಬಿ ಬರುವವರು — ಮತ್ತು ಅವರಲ್ಲಿ ಗಣ್ಯ ವ್ಯಕ್ತಿಗಳು ಹಾಗೂ ಪ್ರತಿಷ್ಠಿತರು, ಮಹಾನ್ ಅಮರ ಗುರುವಿನ ಆಶೀರ್ವಾದವನ್ನು ಪಡೆಯಲು ಪ್ರತಿದಿನ ಈ ಪವಿತ್ರ ಸ್ಥಳಕ್ಕೆ ಯಾತ್ರೆ ಕೈಗೊಳ್ಳುತ್ತಾರೆ. ಕೆಲವರಿಗೆ ಈಗಾಗಲೇ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ಮತ್ತು ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ (ಎಸ್‌ಆರ್‌ಎಫ್) ಬಗ್ಗೆ ಪರಿಚಯವಿದೆ, ಆದರೆ ಈ ಸಂಸ್ಥೆಗಳನ್ನು ಯೋಗಾನಂದಜಿಯವರು ಬಾಬಾಜಿಯವರ ಆಶೀರ್ವಾದದಿಂದ ಕ್ರಿಯಾಯೋಗದ ವಿಜ್ಞಾನವನ್ನು ಜಗತ್ತಿಗೆ ತಲುಪಿಸಲು ಸ್ಥಾಪಿಸಿದ್ದಾರೆ ಎಂಬುದು ಅನೇಕರಿಗೆ ಇನ್ನೂ ತಿಳಿದಿಲ್ಲ.
ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಅವರು ತಮ್ಮ ಪರಿವಾರದೊಂದಿಗೆ ಗುಹೆ ಮತ್ತು ಸ್ಮೃತಿ ಭವನಕ್ಕೆ (ಗುಹೆಯ ಕೆಳಭಾಗದಲ್ಲಿರುವ) ಭೇಟಿ ನೀಡಿದರು.
ಈ ಯಾತ್ರಿಕರು ಗುಹೆಗೆ ಹೋಗುವ ಮತ್ತು ಹಿಂತಿರುಗುವ ಮಾರ್ಗದಲ್ಲಿ ವಿಶ್ರಾಂತಿ ಪಡೆಯಲು ಮತ್ತು ಆರಾಮವಾಗಿರಲು ಬಾಬಾಜಿಯವರ ಗುಹೆಯ ಬಳಿ ಸಂಪೂರ್ಣ ಸೌಲಭ್ಯಗಳಿರುವ ಸಂದರ್ಶಕರ ಕೇಂದ್ರವನ್ನು ನಿರ್ಮಿಸಲು ವೈಎಸ್ಎಸ್ ಬಹಳ ದಿನಗಳಿಂದ ಬಯಸುತ್ತಿದೆ. ಈ ಸೌಲಭ್ಯವು ವೈಎಸ್ಎಸ್/ಎಸ್‌ಆರ್‌ಎಫ್ ಮತ್ತು ಗುರುದೇವರ ಕ್ರಿಯಾಯೋಗ ಬೋಧನೆಗಳ ಬಗ್ಗೆ ಆಸಕ್ತರಿಗೆ ಮಾಹಿತಿಯನ್ನು ಸಹ ಒದಗಿಸುತ್ತದೆ.
ಇದಲ್ಲದೆ, ಸಂದರ್ಶಕರ ಕೇಂದ್ರ, ಬಾಬಾಜಿಯವರ ಗುಹೆ ಹಾಗೂ ಗುಹೆಯ ಕೆಳಭಾಗದಲ್ಲಿರುವ ಸ್ಮೃತಿ ಭವನವನ್ನು ನೋಡಿಕೊಳ್ಳಲು ಕೆಲವು ಸೇವಕರು ಅಲ್ಲಿಯೇ ವಾಸಿಸಬಹುದಾದ ಒಂದು ಸೇವಾ ಸೌಲಭ್ಯವನ್ನು ನಿರ್ಮಿಸುವ ಆಶಯವೂ ವೈಎಸ್ಎಸ್‌ಗೆ ಇತ್ತು. ಈ ಉದ್ದೇಶದಿಂದ, ವೈಎಸ್ಎಸ್ ಕೆಲವು ವರ್ಷಗಳ ಹಿಂದೆ ಬಾಬಾಜಿಯವರ ಗುಹೆಯ ಸಮೀಪ 11 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು.
2024ರಲ್ಲಿ, ನಮ್ಮ ಪರಮ ಪೂಜ್ಯ ಅಧ್ಯಕ್ಷರು ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು ಈ ಕೆಳಗಿನ ಎರಡು ಕಟ್ಟಡಗಳ ನಿರ್ಮಾಣಕ್ಕೆ ತಮ್ಮ ಆಶೀರ್ವಾದವನ್ನು ನೀಡಿದರು:
I. ಸಂದರ್ಶಕರ ಕೇಂದ್ರ (ಅತಿಥಿ ಭವನ)
ಇದು 6,200 ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ಸೌಲಭ್ಯವಾಗಿದ್ದು, ಬಾಬಾಜಿ ಗುಹೆಗೆ ಭೇಟಿ ನೀಡುವ ಯಾತ್ರಿಕರು ಮತ್ತು ಯೋಗದಾ ಭಕ್ತರನ್ನು ಸ್ವಾಗತಿಸಲು ನಿರ್ಮಿಸಲಾಗಿದೆ. ಇದು ಈ ಕೆಳಗಿನ ಸೌಲಭ್ಯಗಳನ್ನು ಒಳಗೊಂಡಿದೆ:
- ಒಂದು ಸ್ವಾಗತ ವಿಭಾಗ
- ವೈಎಸ್ಎಸ್‌ನ ಆಧ್ಯಾತ್ಮಿಕ ಸಾಹಿತ್ಯವನ್ನು ಒದಗಿಸುವ ಪುಸ್ತಕ ಕೊಠಡಿ
- ಯಾತ್ರಿಕರಿಗೆ ವೈಎಸ್ಎಸ್ ಗುರುಗಳ ಇತಿಹಾಸ, ಪವಿತ್ರ ಗುರುಪರಂಪರೆ ಹಾಗೂ ವೈಎಸ್ಎಸ್‌ನ ಕ್ರಿಯಾಯೋಗ ಬೋಧನೆಗಳನ್ನು ಪರಿಚಯಿಸುವ ಉದ್ದೇಶದಿಂದ ಒಂದು ದೃಶ್ಯ-ಶ್ರಾವ್ಯ ಪ್ರಸ್ತುತಿ ಕೊಠಡಿ ಮತ್ತು ಒಂದು ಛಾಯಾಚಿತ್ರ ಪ್ರದರ್ಶನ ಕೊಠಡಿ
- ಯಾತ್ರಿಕರಿಗೆ ನೀರು ಮತ್ತು ಉಪಾಹಾರ
- ಸ್ವಚ್ಛ ಮತ್ತು ಸುಲಭವಾಗಿ ಲಭ್ಯವಿರುವ ಶೌಚಾಲಯಗಳು, ಮತ್ತು
- ಭದ್ರತೆ, ನೀರಿನ ಸಂಗ್ರಹಣೆ ಹಾಗೂ ಮೇಲ್ವಿಚಾರಕರ ನಿವಾಸಗಳಂತಹ ಇತರ ಪೂರಕ ಸೌಲಭ್ಯಗಳು





II. ಸೌಲಭ್ಯಗಳ ಕಟ್ಟಡ
ಈ ನಾಲ್ಕು ಅಂತಸ್ತಿನ ಕಟ್ಟಡವು (16,000 ಚದರ ಅಡಿ ನಿರ್ಮಿತ ವಿಸ್ತೀರ್ಣವನ್ನು ಹೊಂದಿದ್ದು) ಯಾತ್ರಿಕರಿಗೆ ಸೇವೆ ಸಲ್ಲಿಸುವ ಹಾಗೂ ಅತಿಥಿ ಭವನ, ಸೇವಾ ಸೌಲಭ್ಯಗಳ ಕಟ್ಟಡ, ಬಾಬಾಜಿಯವರ ಗುಹೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶ, ಹಾಗೂ ಸ್ಮೃತಿ ಭವನದ ನಿರ್ವಹಣೆಯನ್ನು ನೋಡಿಕೊಳ್ಳುವ ಸೇವಕರ ವಾಸಕ್ಕೆ ನಿರ್ಮಿಸಲಾಗುತ್ತದೆ. ಇದರಲ್ಲಿರುವ ಪ್ರಸ್ತಾವಿತ ಸೌಲಭ್ಯಗಳು ಹೀಗಿವೆ:
- ನಿವಾಸಿ ಸೇವಕರಿಗೆ ವಸತಿ ಗೃಹಗಳು
- ಸಣ್ಣ ಸಂಖ್ಯೆಯ ಭಕ್ತರು ಭೇಟಿ ನೀಡಲು ವಸತಿ ಮತ್ತು ಊಟದ ವ್ಯವಸ್ಥೆ
- ಒಂದು ದತ್ತಿ ಔಷಧಾಲಯ
- ಪೂರಕ ಮೂಲಸೌಕರ್ಯಗಳು — ಮಳೆನೀರು ಕೊಯ್ಲಿನ ವ್ಯವಸ್ಥೆಯೊಂದಿಗೆ ವಿಶ್ವಾಸಾರ್ಹ ನೀರಿನ ಸಂಗ್ರಹಣೆ ಹಾಗೂ ಜನರೇಟರ್‌ನ ಪರ್ಯಾಯ ವ್ಯವಸ್ಥೆಯೊಂದಿಗೆ ನಿರಂತರ ವಿದ್ಯುತ್ ಪೂರೈಕೆ. ಇದರಿಂದ ಎಲ್ಲಾ ಋತುಗಳಲ್ಲಿಯೂ ಯಾತ್ರಿಕರಿಗೆ ಸೇವೆಯು ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಮುಂದುವರಿಯುತ್ತದೆ
- ಕಚೇರಿ ಸ್ಥಳಗಳು, ಸಿಬ್ಬಂದಿ ವಸತಿ, ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಕಾರ್ಯಗಳು ಸುಗಮವಾಗಿ ನಡೆಯಲು ಅಗತ್ಯವಾದ ಇತರ ಪೂರಕ ಸೌಲಭ್ಯಗಳು
ಆರ್ಥಿಕ ಅವಲೋಕನ ಮತ್ತು ಕಾಲಮಿತಿ
- ಒಟ್ಟು ಅಂದಾಜು ನಿರ್ಮಾಣ ವೆಚ್ಚ: ₹10 ಕೋಟಿ
- ನಿರೀಕ್ಷಿತ ಪೂರ್ಣಗೊಳ್ಳುವ ಸಮಯ: 2027ರ ಆರಂಭ
ಈ ದಿವ್ಯ ದೃಷ್ಟಿಯನ್ನು ಕಾರ್ಯರೂಪಕ್ಕೆ ತರಲು ನಿಮ್ಮ ಬೆಂಬಲವನ್ನು ನಾವು ಸ್ವಾಗತಿಸುತ್ತೇವೆ.
ಭಾಗ II
ಗುರುದೇವರ ರಾಂಚಿ ಆಶ್ರಮದ ಸಂರಕ್ಷಣೆ
ಒಂದು ಶತಮಾನಕ್ಕೂ ಹೆಚ್ಚು ಕಾಲ, ವೈಎಸ್ಎಸ್ ರಾಂಚಿ ಆಶ್ರಮವು ಒಂದು ಪವಿತ್ರ ತಾಣವಾಗಿದ್ದು, ಗುರುದೇವರ ಉಪಸ್ಥಿತಿಯಿಂದ ಪಾವನಗೊಂಡ ಆವರಣದಲ್ಲಿ ನಡೆಯುವ ಮೂಲಕ ಮತ್ತು ಧ್ಯಾನಿಸುವ ಮೂಲಕ ಭಕ್ತರು ಮತ್ತು ಸಂದರ್ಶಕರು ತಮ್ಮ ಹೃದಯವನ್ನು ಶಾಂತಿ ಮತ್ತು ಆನಂದದಿಂದ ತುಂಬಿಕೊಳ್ಳುತ್ತಾರೆ.
ನಮ್ಮ ಜನವರಿ 2026ರ ಸುದ್ದಿಪತ್ರದಲ್ಲಿ, ಇಲ್ಲಿಗೆ ಭೇಟಿ ನೀಡುವ ಅಥವಾ ಸೇವೆ ಸಲ್ಲಿಸುವವರನ್ನು ನೋಡಿಕೊಳ್ಳಲು ಮತ್ತು ಈ ಪವಿತ್ರ ಆಶ್ರಮದ ಪ್ರಶಾಂತತೆ ಮತ್ತು ಸೌಂದರ್ಯವನ್ನು ಮುಂದಿನ ಪೀಳಿಗೆಗಳಿಗಾಗಿ ಸಂರಕ್ಷಿಸಲು ಕೈಗೊಳ್ಳಲಾಗುತ್ತಿರುವ ಉಪಕ್ರಮಗಳನ್ನು ನಾವು ಹಂಚಿಕೊಂಡಿದ್ದೆವು:
- ರಸ್ತೆಗಳು ಮತ್ತು ಆವರಣದ ಪರಿಸರದ ಉನ್ನತೀಕರಣ — ಬಾಳಿಕೆ ಬರುವ ರಸ್ತೆಗಳು, ಕಲ್ಲುಹಾಸಿದ ಮಾರ್ಗಗಳು ಮತ್ತು ಪಾದಚಾರಿ ಮಾರ್ಗಗಳು; ಪ್ರಶಾಂತ ವಾತಾವರಣವನ್ನು ಆಳವಾಗಿಸಲು ಭೂದೃಶ್ಯ ವಿನ್ಯಾಸ; ಸೌರ ದೀಪಗಳು ಮತ್ತು ಉನ್ನತೀಕರಿಸಿದ ವಿದ್ಯುತ್ ಜಾಲಗಳು; ಮತ್ತು ಕೇಂದ್ರೀಕೃತ ಒಳಚರಂಡಿ ಮತ್ತು ನೀರು ಸರಬರಾಜು ವ್ಯವಸ್ಥೆಗಳು.
- ಮಕ್ಕಳು, ಸಾರ್ವಜನಿಕ ಸಂಪರ್ಕ ಹಾಗೂ ಸೇವಾ ಕಾರ್ಯಗಳಿಗಾಗಿ ಸೌಲಭ್ಯಗಳನ್ನು ಸುಧಾರಿಸುವುದು — ಯುವ ಸೇವೆಗಳಿಗಾಗಿ ಮೀಸಲಾದ ಕಟ್ಟಡ; ವೈಎಸ್ಎಸ್ ಪಾಠಗಳ ಮುದ್ರಣ ಮತ್ತು ಸಂಗ್ರಹಣೆಗಾಗಿ ಹೆಚ್ಚುವರಿ ಸ್ಥಳ; ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಹೊಸ ದಂತ ವಿಭಾಗದೊಂದಿಗೆ ನವೀಕರಿಸಲಾದ ಧರ್ಮಾರ್ಥ ಚಿಕಿತ್ಸಾಲಯ.
ಗುರೂಜಿಯವರ ಕೃಪೆಯಿಂದ, ಆವರಣದಲ್ಲಿ ಈ ಎಲ್ಲಾ ಉಪಕ್ರಮಗಳ ನಿರ್ಮಾಣ ಕಾರ್ಯವು ಉತ್ತಮವಾಗಿ ಪ್ರಗತಿಯಲ್ಲಿದೆ; ಮತ್ತು ಈ ಕೆಳಗಿನ ಛಾಯಾಚಿತ್ರ ಪ್ರಸ್ತುತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಈ ಎಲ್ಲಾ ಯೋಜನೆಗಳು 2027ರ ಆರಂಭದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
I. ರಸ್ತೆಗಳು ಮತ್ತು ಮಾರ್ಗಗಳು
ರಸ್ತೆ ನಿರ್ಮಾಣದ ಹಂತಗಳು






II. ಚರಂಡಿ ಮತ್ತು ಒಳಚರಂಡಿ ವ್ಯವಸ್ಥೆಗಳು



III. ಸಂಗ್ರಹಣಾ ಸೌಲಭ್ಯಗಳು



ನಿಮ್ಮ ದಯೆ ಮತ್ತು ಆರ್ಥಿಕ ಬೆಂಬಲದ ಮೂಲಕ, ನಾವು ಈ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.
ಈ ನವೀಕರಣ ಕಾರ್ಯಗಳಿಂದಾಗಿ ನಾವು ರಾಂಚಿ ಆಶ್ರಮವನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಯಿತು. ಇದರಲ್ಲಿ ನಾವು ಬಹಳ ದಿನಗಳಿಂದ ಬಾಕಿ ಉಳಿದಿದ್ದ ಹೆಚ್ಚುವರಿ ಯೋಜನೆಗಳನ್ನು ಏಕಕಾಲದಲ್ಲಿ ಕೈಗೊಳ್ಳಲು ಒಂದು ಅವಕಾಶವನ್ನು ಕಂಡೆವು.
IV. ಭೂಗತ ಮಳೆನೀರು ಸಂಗ್ರಹಣಾ ತೊಟ್ಟಿ
ಆಶ್ರಮದ ಸುತ್ತಮುತ್ತ ಎತ್ತರದ ಕಟ್ಟಡಗಳ ಇತ್ತೀಚಿನ ಏರಿಕೆಯು ಅಂತರ್ಜಲ ಮಟ್ಟದಲ್ಲಿ ಕ್ರಮೇಣ ಇಳಿಕೆಗೆ ಕಾರಣವಾಗಿದೆ. ಬೇಸಿಗೆಯ ಉತ್ತುಂಗದಲ್ಲಿ ಆಶ್ರಮದ ಕೆಲವು ಬಾವಿಗಳು ಈಗ ಒಣಗಿ ಹೋಗುತ್ತಿವೆ, ಮತ್ತು ನಮ್ಮ ಕೊಳವೆಬಾವಿಗಳಿಂದ ದೊರೆಯುವ ನೀರು ಸ್ಥಿರವಾಗಿ ಕಡಿಮೆಯಾಗುತ್ತಿದೆ. ಪುರಸಭೆಯ ನೀರು ಲಭ್ಯವಿದ್ದರೂ, ಅದು ಅನಿಶ್ಚಿತವಾಗಿದೆ ಮತ್ತು ಆಶ್ರಮದ ಬೆಳೆಯುತ್ತಿರುವ ಅಗತ್ಯಗಳಿಗೆ ಎಂದಿಗೂ ಸಾಕಾಗುವುದಿಲ್ಲ. ಆದ್ದರಿಂದ, ನಾವು ಸುಮಾರು 5 ಲಕ್ಷ ಲೀಟರ್ ಸಾಮರ್ಥ್ಯದ ಭೂಗತ ಮಳೆನೀರು ಸಂಗ್ರಹಣಾ ತೊಟ್ಟಿಯನ್ನು ನಿರ್ಮಿಸುವುದು ವಿವೇಕಯುತವೆಂದು ಭಾವಿಸಿದ್ದೇವೆ. ಇದು ಮೇಲ್ಮೈ ಹರಿವಿನಿಂದ ನಷ್ಟವಾಗುವ ಮಳೆನೀರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಸಂರಕ್ಷಿಸಲು ಒಂದು ಸುಸ್ಥಿರ ಮಾರ್ಗವಾಗಿದೆ.
ಈ ತೊಟ್ಟಿಯ ಪ್ರಾಥಮಿಕ ಉದ್ದೇಶವೆಂದರೆ ಮಳೆಗಾಲದಲ್ಲಿ ಮಳೆನೀರನ್ನು ಸಂಗ್ರಹಿಸಿ ಬೇಸಿಗೆ ತಿಂಗಳುಗಳಲ್ಲಿ, ವಿಶೇಷವಾಗಿ ಆಶ್ರಮದ ಉದ್ಯಾನಗಳನ್ನು ನಿರ್ವಹಿಸಲು ಬಳಸುವುದು.
V. ಶಿವ ಮಂದಿರ ಮತ್ತು ಹವನ ಕುಂಡ
ಹಲವು ದಶಕಗಳಿಂದ, ಶಿವ ಮಂದಿರ ಮತ್ತು ಅದರ ಹವನ ಕುಂಡವು ನಮ್ಮ ಗುರುಗಳ ಗೌರವಾರ್ಥವಾಗಿ ನಡೆಯುವ ಪೂಜೆ ಹಾಗೂ ಭಕ್ತಿ ಸಮಾರಂಭಗಳ ಪವಿತ್ರ ಸ್ಥಳವಾಗಿದೆ. ಕಾಲಾನಂತರದಲ್ಲಿ ಹವಾಮಾನದ ಏರಿಳಿತಗಳಿಂದಾಗಿ ಈ ನಿರ್ಮಾಣಗಳು ಜೀರ್ಣಾವಸ್ಥೆಗೆ ತಲುಪಿದ್ದು, ಈ ಪವಿತ್ರ ಸ್ಥಳಕ್ಕೆ ಈಗ ತುರ್ತು ನವೀಕರಣದ ಅಗತ್ಯವಿದೆ. ಆದ್ದರಿಂದ, ಸೂಕ್ತ ನವೀಕರಣ ಕಾರ್ಯವನ್ನು ಯೋಜಿಸಲಾಗಿದೆ.
ಪ್ರಮುಖ ಲಕ್ಷಣಗಳು ಮತ್ತು ಕಾರ್ಯಕ್ಷೇತ್ರ:
- ಛಾವಣಿಯ ಬದಲಾವಣೆ — ಹಳೆಯದಾದ ಆಸ್ಬೆಸ್ಟಾಸ್ ಶೀಟ್ ಛಾವಣಿ ಹಾಗೂ ಶಿಥಿಲಗೊಂಡಿರುವ ಪಟ್ಟಿಕೆಗಳನ್ನು ತೆರವುಗೊಳಿಸಿ, ಮಂದಿರದ ಪಾವಿತ್ರ್ಯತೆ ಮತ್ತು ಸೌಂದರ್ಯಕ್ಕೆ ಯಾವುದೇ ಕುಂದುಬಾರದಂತೆ, ಅತ್ಯಂತ ಬಾಳಿಕೆ ಬರುವ ಹಾಗೂ ಸುರಕ್ಷಿತವಾದ ನೂತನ ಛಾವಣಿ ವ್ಯವಸ್ಥೆಯನ್ನು ನಿರ್ಮಿಸಲಾಗುವುದು.
- ಹೊಸ ಗ್ರಾನೈಟ್ ನೆಲಹಾಸು ಅಳವಡಿಕೆ — ಬಾಳಿಕೆ, ನಿರ್ವಹಣೆಯ ಸುಲಭತೆ ಮತ್ತು ಪ್ರದೇಶದ ಸೌಂದರ್ಯವನ್ನು ಹೆಚ್ಚಿಸಲು.
- ಹವನ ಕುಂಡದ ಪುನರ್ನಿರ್ಮಾಣ — ರಚನಾತ್ಮಕ ಸಮಗ್ರತೆಯನ್ನು ಮರುಸ್ಥಾಪಿಸಲು ಮತ್ತು ಸಮಾರಂಭಗಳು ಮತ್ತು ಭಕ್ತಿ ಆಚರಣೆಗಳಿಗೆ ಸುರಕ್ಷಿತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಅದನ್ನು ಪುನರ್ನಿರ್ಮಿಸುವುದು.
ಹಣಕಾಸು ಅವಲೋಕನ ಮತ್ತು ಸಮಯಾವಧಿ
- ಒಟ್ಟು ಅಂದಾಜು ವೆಚ್ಚ: ₹4 ಕೋಟಿ
- ನಿರೀಕ್ಷಿತ ಪೂರ್ಣಗೊಳ್ಳುವ ಸಮಯ: 2027 ರ ಆರಂಭ
ಈ ದೈವಿಕ ದೃಷ್ಟಿಯನ್ನು ಕಾರ್ಯರೂಪಕ್ಕೆ ತರಲು ನಿಮ್ಮ ಬೆಂಬಲವನ್ನು ನಾವು ಸ್ವಾಗತಿಸುತ್ತೇವೆ.
ಬನ್ನಿ, ನಾವು ಒಟ್ಟಾಗಿ ಇದನ್ನು ನಿರ್ಮಿಸೋಣ
ಈ ವಿವಿಧ ಯೋಜನೆಗಳ ಮೂಲಕ — ಮಹಾವತಾರ ಬಾಬಾಜಿಗಳ ಗುಹೆಯ ಬಳಿಯ ಪವಿತ್ರ ಸ್ಥಳದಲ್ಲಿ ಮತ್ತು ಗುರುದೇವರ ಪ್ರೀತಿಯ ರಾಂಚಿ ಆಶ್ರಮದಲ್ಲಿ — ನಾವು ಪ್ರತಿಯೊಬ್ಬ ಸತ್ಯಾನ್ವೇಷಕರನ್ನು ಪ್ರೀತಿ ಮತ್ತು ಗೌರವದಿಂದ ಸ್ವಾಗತಿಸಲು ಮತ್ತು ಭವಿಷ್ಯದ ಅನ್ವೇಷಕರ ಪೀಳಿಗೆಗಾಗಿ ಈ ಪವಿತ್ರ ಸ್ಥಳಗಳನ್ನು ಸಂರಕ್ಷಿಸಲು ಪ್ರಯತ್ನಿಸುತ್ತೇವೆ.
ವರ್ಷಗಳಿಂದ ನಿಮ್ಮ ಉದಾರತೆ ಮತ್ತು ನಿರಂತರ ಬೆಂಬಲವೇ ನಾವು ಸಾಧಿಸಿದ ಎಲ್ಲವನ್ನೂ ಪೂರೈಸಲು ನಮಗೆ ಸಾಧ್ಯವಾಗಿಸಿದೆ.
ನಿಮ್ಮ ನೆರವು ನೀಡುವುದು ಹೇಗೆ
ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಪ್ರಾರ್ಥನೆಗಳನ್ನು ನಾವು ಬಯಸುತ್ತೇವೆ — ಈ ಪವಿತ್ರ ಕಾರ್ಯಗಳು ಸುಗಮವಾಗಿ ಪೂರ್ಣಗೊಳ್ಳಲಿ ಎಂಬ ಹೃತ್ಪೂರ್ವಕ ಪ್ರಾರ್ಥನೆಯು ಪ್ರತಿಯೊಂದು ಅರ್ಪಣೆಯ ನಿಜವಾದ ಅಡಿಪಾಯವಾಗಿದೆ.
ಈ ಪವಿತ್ರ ಕಾರ್ಯಗಳಿಗೆ ಬೆಂಬಲ ನೀಡಲು ನಿಮಗೆ ಪ್ರೇರಣೆಯಾದರೆ, ಕೆಳಗಿನ ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಿ, ವೈಎಸ್‌ಎಸ್ ದೇಣಿಗೆ ಪುಟದ ಮೂಲಕ ಒಂದು ಬಾರಿ ಅಥವಾ ಮಾಸಿಕ ಪುನರಾವರ್ತಿತ ದೇಣಿಗೆಯನ್ನು ನೀಡಬಹುದು:
ನೀವು ದೊಡ್ಡ ದೇಣಿಗೆ ನೀಡಲು ಅಥವಾ ನಿರ್ದಿಷ್ಟ ಯೋಜನೆಗೆ ಬೆಂಬಲ ನೀಡಲು ಬಯಸಿದರೆ, ನಾವು ನಿಮ್ಮೊಂದಿಗೆ ವೈಯಕ್ತಿಕವಾಗಿ ಮಾತನಾಡಲು ಸಂತೋಷಪಡುತ್ತೇವೆ. ದಯವಿಟ್ಟು ವೈಎಸ್ಎಸ್ ಸಹಾಯವಾಣಿಯನ್ನು (0651) 6655 555 (ಸೋಮವಾರ–ಶನಿವಾರ, ಬೆಳಿಗ್ಗೆ 9:30 ರಿಂದ ಸಂಜೆ 4:30 ರವರೆಗೆ) ಸಂಪರ್ಕಿಸಿ.
ಗುರೂಜಿಯವರ ಆಶ್ರಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸನ್ಯಾಸಿ ವೃಂದ ಹಾಗೂ ಸೇವಕರಾದ ನಾವು, ನಿಮ್ಮ ಯೋಗಕ್ಷೇಮಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಪ್ರತಿದಿನವೂ ಪ್ರಾರ್ಥಿಸುತ್ತೇವೆ. ನಿಮ್ಮ ಪ್ರೀತಿ ಮತ್ತು ಸಹಕಾರದೊಂದಿಗೆ, ಈ ಪವಿತ್ರ ಸನ್ನಿಧಿಯು ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರಿಗೂ ಗುರುದೇವರ ಬೆಳಕು, ಪ್ರೀತಿ ಮತ್ತು ಜ್ಞಾನವನ್ನು ನಿರಂತರವಾಗಿ ಪಸರಿಸುತ್ತಿರಲಿ.
ನಮ್ಮ ಮಹಾನ್ ಗುರುಗಳ ಆಶೀರ್ವಾದ ಸದಾ ನಿಮ್ಮೊಂದಿಗೆ ಇರಲಿ.
ದೈವಿಕ ಸ್ನೇಹದಲ್ಲಿ,
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ




















