ಸ್ವಾಮಿ ಚಿದಾನಂದ ಗಿರಿಯವರ 2026ರ ಗುರು ಪೂರ್ಣಿಮ ಸಂದೇಶ

14 ಜುಲೈ, 2026

ಗುರುವು ತನ್ನೊಡನೆ ಮಾನಸಿಕವಾಗಿ ಶ್ರುತಿಗೂಡಿರುವ ಶಿಷ್ಯರಿಗೆ ತನ್ನ ಮೂಲಕ ಹರಿಯುವ ಭಗವಂತನ ಬೆಳಕನ್ನು ಪ್ರಸರಿಸುತ್ತಾನೆ. ಗಾಢವಾದ ಮಾನಸಿಕ ಏಕಾಗ್ರತೆಯಿಂದ ಭಕ್ತನು ತನ್ನ ಗುರುವಿಗೆ ಪ್ರಸಾರ ಮಾಡಿದರೆ, ಗುರುವು ಅದನ್ನು ಸ್ವೀಕರಿಸುತ್ತಾನೆ ಮತ್ತು ಅದೇ ರೀತಿ ಅಗತ್ಯವಿರುವ ಸಹಾಯವನ್ನು ಸದ್ದಿಲ್ಲದೆ ಕಳುಹಿಸುತ್ತಾನೆ.

— ಶ್ರೀ ಶ್ರೀ ಪರಮಹಂಸ ಯೋಗಾನಂದ

ಪ್ರೀತಿಪಾತ್ರರೇ,

A ನಿಮ್ಮ ಪ್ರತಿಯೊಬ್ಬರಿಗೂ ಅನುಗ್ರಹಪೂರಿತ ಗುರು ಪೂರ್ಣಿಮದ ಶುಭಾಶಯಗಳು. ಈ ಪವಿತ್ರ ದಿನದಂದು, ಯುಗ ಯುಗಳಿಂದ ದಿವ್ಯ ಸಾಕ್ಷಾತ್ಕಾರದ ಜ್ಯೋತಿಯನ್ನು ಉಜ್ವಲವಾಗಿ ಉರಿಯುವಂತಿಟ್ಟ ಭಗವತ್‌-ಪ್ರಕಾಶಿತ ಗುರುಗಳೆಲ್ಲರಿಗೆ ನಾವು ನಮ್ಮ ಕೃತಜ್ಞತೆಯನ್ನು ಅರ್ಪಿಸುತ್ತಿರುವಾಗ, ನಾವೆಲ್ಲರೂ ಒಟ್ಟುಗೂಡಿ ನಮ್ಮ ಪ್ರೀತಿಪಾತ್ರ ಗುರುದೇವರಾದ ಶ್ರೀ ಶ್ರೀ ಪರಮಹಂಸ ಯೋಗಾನಂದಜಿಯವರಿಗೆ ನಮ್ಮ ಗಾಢವಾದ ಕೃತಜ್ಞತಾಭಾವವನ್ನು ಸೂಸುವುದರಲ್ಲಿ ಒಂದಾಗೋಣ. ನಾವು ಅವರು ಒಬ್ಬ ಜಗದ್ಗುರುವಾಗಿ ಜಗತ್ತಿಗೆ ನೀಡಿದ ಅನನ್ಯ ಕೊಡುಗೆಗಳಿಗಾಗಿ ಅವರನ್ನು ಗೌರವಿಸುತ್ತಿದ್ದೇವೆ ಮತ್ತು ಹೆಚ್ಚು ವೈಯಕ್ತಿಕವಾಗಿ ನಮ್ಮ ಆಧ್ಯಾತ್ಮಿಕ ವಿಕಸನಕ್ಕಾಗಿ ಅವರ ಪ್ರೀತಿಪೂರ್ವಕ ಮತ್ತು ನಿರಂತರ ಗಮನಿಸುವಿಕೆಗಾಗಿ — ಭಗವಂತನು ನಮ್ಮನ್ನು ಸಂರಕ್ಷಿಸಲು, ಮಾರ್ಗದರ್ಶಿಸಲು ಮತ್ತು ಎಚ್ಚರಗೊಳಿಸಲು ದಿವ್ಯ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕಾಗಿ.

ಗುರುಗಳ ಗೆಲುವಿನ ಜೀವನ ಮತ್ತು ಅವರ ಪರಿವರ್ತನಾಶೀಲ ಬೋಧನೆಗಳ ಸ್ಫೂರ್ತಿ ಮತ್ತು ಉದಾಹರಣೆಯನ್ನು ಹೊಂದಿರುವ ನಾವು ಎಷ್ಟು ಅದೃಷ್ಟವಂತರು. ಅದರ ಮೂಲಕ ಅವರು ನಮ್ಮ ಆಂತರಿಕ ಪ್ರಕಾಶವನ್ನು ಅನಾವರಣಗೊಳಿಸುವ ಕೀಲಿ ಕೈಯನ್ನು ನಮಗೆ ನೀಡಿದ್ದಾರೆ. ಅವರ ಅನುಗ್ರಹದ ನಿರಂತರ ಪ್ರವಾಹಕ್ಕೆ ನಾವು ನಮ್ಮ ಹೃದಯಗಳನ್ನು ಸಂಪೂರ್ಣವಾಗಿ ತೆರೆದಿಟ್ಟಾಗ ಮತ್ತು ನಮ್ಮನ್ನು ನಾವು ಪವಿತ್ರ ಕ್ರಿಯಾ ಯೋಗ ಸಾಧನೆಗೆ ಅರ್ಪಿಸಿಕೊಂಡಾಗ, ಅವರೊಡನೆಯ ನಮ್ಮ ಶ್ರುತಿಗೂಡುವಿಕೆ ಗಾಢವಾಗುತ್ತದೆ ಮತ್ತು ನಮ್ಮ ದಿನನಿತ್ಯ ಜೀವನದಲ್ಲಿ ಅವರ ಉಪಸ್ಥಿತಿಯು ಜೀವಂತವಾದ, ಸ್ಪಷ್ಟವಾದ ವಾಸ್ತವವಾಗುತ್ತದೆ. ಆ ಉಪಸ್ಥಿತಿಗೆ ನಮ್ಮ ಗ್ರಹಿಕೆಯ ಮೂಲಕ ಮತ್ತು ಅವರ ಬೋಧನೆಗಳ ಪ್ರತಿಯೊಂದು ಚಿಂತನಾಮಣಿಯಿಂದ ಹರಿಯುವ ಪವಿತ್ರ ಶಕ್ತಿಯ ಮೂಲಕ, ನಮ್ಮನ್ನು ಕನಸಿನ ಅಗಲುವಿಕೆಯಿಂದ ಎಚ್ಚರಗೊಳಿಸುತ್ತಾ ಮತ್ತು ನಮ್ಮೊಳಗೆ ಹರಿಯುತ್ತಿರುವ ಭಗವಂತನ ಪ್ರಕಾಶವನ್ನು ಗುರುತಿಸುವುದಕ್ಕೆ ನಮಗೆ ಸಹಾಯ ಮಾಡುತ್ತಾ, ಅವರು ಶಾರೀರಿಕ ರೂಪದಲ್ಲಿ ಭೂಮಿಯ ಮೇಲೆ ನಡೆದಾಡುತ್ತಿದ್ದಾಗ ಹೇಗಿದ್ದರೋ ಹಾಗೆ ಸದಾ ಜೀವಂತರಾಗಿ ಮತ್ತು ಸದಾ ಬಳಿಯಲ್ಲೇ ಇರುತ್ತಾರೆ.

“ಮೌನ ಭಗವಂತನ ಮಾತನಾಡುವ ಧ್ವನಿ”ಯಾದ ಗುರುದೇವರ ಪಾದಪದ್ಮಗಳಿಗೆ ನಾವು ಸಮರ್ಪಿಸಬಹುದಾಗ ಅತ್ಯಂತ ಶ್ರೇಷ್ಠವಾದದ್ದೆಂದರೆ ನಮ್ಮ ವಿನೀತ ಗ್ರಹಿಕೆ, ಸಮರ್ಪಿತ ಆಧ್ಯಾತ್ಮಿಕ ಶ್ರಮ ಮತ್ತು ಅಲುಗಾಡದ, ಆತ್ಮ-ಸ್ಪರ್ಶಿ ನಿಷ್ಠೆ. ನೀವೆಲ್ಲರೂ ನಿಮ್ಮ ಪ್ರಜ್ಞೆಯನ್ನು ಶುದ್ಧೀಕರಿಸುವ ಅವರ ನಿರಂತರ ಆಶೀರ್ವಾದಗಳ ಪವಿತ್ರ ನದಿಯನ್ನು ಮನಗಾಣಲಿ ಎಂಬ ನನ್ನ ಪ್ರಾರ್ಥನೆಗಳು ನಿಮ್ಮೊಂದಿಗಿವೆ — ಆ ದಿವ್ಯ ಪ್ರವಾಹವು ನಿಮ್ಮನ್ನು ಸ್ಥೈರ್ಯದಿಂದ ಮತ್ತು ನಿತ್ಯ ಆನಂದದಿಂದ ಹಾಗೂ ನಮ್ಮೆಲ್ಲರನ್ನೂ ಭಗವಂತನಲ್ಲಿ ಒಂದುಗೂಡಿಸುವ ಮಹಾನ್‌ ದಿವ್ಯ ಪ್ರಕಾಶದಿಂದ ತುಂಬಲಿ. ಜೈ ಗುರು!

ಭಗವಂತ ಮತ್ತು ಗುರುದೇವರ ನಿಲ್ಲದ ಪ್ರೀತಿ ಮತ್ತು ಆಶೀರ್ವಾದಗಳೊಂದಿಗೆ,

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ