ಪರಮಹಂಸ ಯೋಗಾನಂದರ ಉಪನ್ಯಾಸ “ಹೌಟು ಬಿ ಹ್ಯಾಪಿ ಅಟ್ ವಿಲ್,” ದಿಂದ ಆಯ್ದ ಭಾಗಗಳು. ಪೂರ್ಣ ಉಪನ್ಯಾಸವು ವೈಎಸ್‌ಎಸ್‌ನಿಂದ ಪ್ರಕಟಿತವಾದ ಪರಮಹಂಸಜೀಯವರ ಉಪನ್ಯಾಸಗಳು ಮತ್ತು ಪ್ರಬಂಧಗಳ ಸಂಗ್ರಹದ ಮೊದಲ ಸಂಪುಟ ಮ್ಯಾನ್ಸ್ ಇಟರ್ನಲ್ ಕ್ವೆಸ್ಟ್‌ನಲ್ಲಿ ಲಭ್ಯವಿದೆ.
ಮಾನವ ಜೀವಿಗಳನ್ನು ನೀವು ಗಮನಿಸಿದಾಗ, ಅವರ ಮುಖಭಾವವನ್ನು ಮಾನಸಿಕ ಸ್ಥಿತಿಗಳಿಗನುಗುಣವಾಗಿ ಸಾಮಾನ್ಯವಾಗಿ ನಾಲ್ಕು ಮೂಲ ವಿಧಗಳಾಗಿ ವರ್ಗೀಕರಿಸಬಹುದು: ಆಂತರಿಕ ಹಾಗೂ ಬಾಹ್ಯ ಸಂತೋಷವನ್ನು ಸೂಚಿಸುವ ನಗುಮುಖಗಳು; ದುಃಖವನ್ನು ಸೂಚಿಸುವ ಕಠೋರ ಮುಖಗಳು; ಅಂತರಂಗದ ಬೇಸರವನ್ನು ಹೊರಗೆಡಹುವ ನಿಸ್ತೇಜ, ಅಪ್ರಸನ್ನ ಮುಖಗಳು; ಹಾಗೂ ಅಂತರಂಗದ ಶಾಂತಿಯನ್ನು ಪ್ರತಿಫಲಿಸುವ ಶಾಂತ ಮುಖಗಳು.
ನೆರವೇರಿದ ಬಯಕೆ ಸಂತೋಷವನ್ನು ತರುತ್ತದೆ. ಈಡೇರದ ಹಂಬಲ ದುಃಖವನ್ನು ಉಂಟುಮಾಡುತ್ತದೆ. ಸಂತೋಷ ಮತ್ತು ದುಃಖದ ಮಾನಸಿಕ ಉಬ್ಬರಗಳ ನಡುವೆ ಬೇಸರದ ತಗ್ಗುಗಳಿರುತ್ತವೆ. ಸಂತೋಷ ಮತ್ತು ದುಃಖದ ಉನ್ನತ ಅಲೆಗಳು ಹಾಗೂ ಬೇಸರದ ಖಿನ್ನತೆಗಳು ತಟಸ್ಥವಾದಾಗ ಶಾಂತಸ್ಥಿತಿಯುಂಟಾಗುತ್ತದೆ.
ಶಾಂತಸ್ಥಿತಿಯಿಂದಾಚೆಗೆ ನಿತ್ಯನೂತನ ಆನಂದದ ಸ್ಥಿತಿಯಿದೆ, ಅದನ್ನು ಒಬ್ಬ ವ್ಯಕ್ತಿಯು ತನ್ನೊಳಗೆ ಕಂಡುಕೊಳ್ಳಬಹುದು ಹಾಗೂ ಅದನ್ನು ತನ್ನ ಆತ್ಮದ ನೈಜಸ್ವಭಾವದ ಸ್ಥಿತಿ ಎಂದು ಗುರುತಿಸಬಹುದು. ಈ ಆನಂದವು ಪ್ರಚೋದಕ ಮಾನಸಿಕ ಅಲೆಗಳ ತುಂಬಿತುಳುಕುವ ಸಂತೋಷ ಹಾಗೂ ಆಳವಾದ ಖಿನ್ನತೆ ಹಾಗೂ ಉದಾಸೀನತೆಯ ಕಂದರಗಳಡಿಯಲ್ಲಿ ಹುದುಗಿರುತ್ತದೆ. ಮಾನಸಿಕ ಜಲಗಳಿಂದ ಈ ಅಲೆಗಳು ಅದೃಶ್ಯವಾದಾಗ ಶಾಂತಿಯ ಸೌಮ್ಯಾವಸ್ಥೆಯ ಅನುಭವವಾಗುತ್ತದೆ. ಶಾಂತಿಯ ನಿಶ್ಚಲ ಜಲಗಳಲ್ಲಿ ನಿತ್ಯನೂತನ ಆನಂದವು ಪ್ರತಿಫಲಿತವಾಗುತ್ತದೆ.
ಜನರ ಪ್ರತಿಕ್ರಿಯೆಗಳ ಮೂಲ
ಜಗತ್ತಿನಲ್ಲಿ ಬಹುತೇಕ ಜನರು ಉತ್ತೇಜಿತ ಸುಖ ಅಥವಾ ದುಃಖದ ಅಲೆಗಳ ಮೇಲೆ ಹೊಯ್ದಾಡುತ್ತಿದ್ದಾರೆ, ಹಾಗೂ ಅವು ಇಲ್ಲದಾದಾಗ ಅವರಿಗೆ ಬೇಸರವಾಗುತ್ತದೆ. ದಿನವಿಡೀ ನೀವು ಇತರರ ಮುಖಗಳನ್ನು ನೋಡಿದಾಗ, ಮನೆಯಲ್ಲಿ, ಆಫೀಸಿನಲ್ಲಿ, ರಸ್ತೆಯಲ್ಲಿ ಅಥವಾ ಕೂಟದಲ್ಲಿ ಶಾಂತಿಯನ್ನು ಅಭಿವ್ಯಕ್ತಿಸುವುದು ಕೆಲವರು ಮಾತ್ರ ಎನ್ನುವುದನ್ನು ನೀವು ನೋಡಬಹುದು.
ನೀವು ಒಂದು ಉಲ್ಲಾಸಮಯ ಮುಖವನ್ನು ಕಂಡು, ಆ ವ್ಯಕ್ತಿಯನ್ನು, “ನಿನ್ನ ಸಂತೋಷದ ಕಾರಣವೇನು?” ಎಂದು ಕೇಳಿದಾಗ ಅವನು ಹೀಗೆ ಉತ್ತರ ಕೊಡಬಹುದು: “ನನಗೆ ಸಂಬಳ ಜಾಸ್ತಿಯಾಯಿತು,” ಅಥವಾ, “ನಾನು ಒಬ್ಬ ಸ್ವಾರಸ್ಯಕರ ವ್ಯಕ್ತಿಯನ್ನು ಭೇಟಿ ಮಾಡಿದೆ.” ಸಂತೋಷದ ಹಿಂದೆ ಬಯಕೆ ಪೂರೈಕೆಯಾದ ಕಾರಣವಿರುತ್ತದೆ.
ನೀವು ಒಂದು ಮ್ಲಾನವದನವನ್ನು ನೋಡಿ ಸಹಾನುಭೂತಿಯಿಂದ ವಿಚಾರಿಸಿದಾಗ ಅದರ ಯಜಮಾನ, “ನಾನೊಬ್ಬ ರೋಗಿ,” ಅಥವಾ, “ನನ್ನ ಪರ್ಸನ್ನು ಕಳೆದುಕೊಂಡೆ,” ಎಂದು ಉತ್ತರಿಸಬಹುದು. ಇದರಿಂದ ಆರೋಗ್ಯವನ್ನು (ಅಥವಾ ಅವನು ಕಳೆದುಕೊಂಡ ಹಣವನ್ನು) ಮರಳಿ ಹೊಂದುವ ಬಯಕೆಯನ್ನು ಅಲ್ಲಗಳೆದಂತಾಯಿತು.
ಒಂದು ತರಹದ ಭಾವಶೂನ್ಯ ತಾಟಸ್ಥ್ಯವನ್ನು ಸೂಚಿಸುವ ಮುಖವನ್ನು ನೋಡಿ, “ಏನು ವಿಷಯ? ಯಾವುದೋ ವಿಷಯದ ಬಗ್ಗೆ ದುಃಖವಾಗುತ್ತಿದೆಯೇ?” ಎಂದು ಕೇಳಿ. ಅವನು ತಕ್ಷಣವೇ ನಕಾರಾತ್ಮಕವಾಗಿ ಉತ್ತರಿಸುತ್ತಾನೆ. ಆದರೆ ನೀವು ಅವನನ್ನು, “ನೀನು ಸುಖಿಯೇ?” ಎಂದು ಮತ್ತೂ ಕೇಳಿದರೆ, ಅವನು, “ಓಹ್, ಏನಿಲ್ಲ, ನನಗೆ ಬೇಜಾರು ಅಷ್ಟೆ” ಎಂದು ಹೇಳುತ್ತಾನೆ.
ನಕಾರಾತ್ಮಕ ಹಾಗೂ ಸಕಾರಾತ್ಮಕ ಶಾಂತಿ
ಒಂದು ಎಸ್ಟೇಟ್‌ನಲ್ಲಿರುವ, ಆರೋಗ್ಯವಂತನೂ, ದಷ್ಟಪುಷ್ಟನೂ, ಅತಿ ಸುಖಿಯೂ ಅಲ್ಲದ ಅತಿ ದುಃಖಿಯೂ ಅಲ್ಲದ ಅತಿ ಬೇಜಾರೂ ಇಲ್ಲದ ಒಬ್ಬ ಸುಸಂಸ್ಕೃತ ಶ್ರೀಮಂತನನ್ನು ನೀವು ಭೇಟಿಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಅವನು ಶಾಂತಿಯಿಂದಿದ್ದಾನೆ ಎಂದು ನೀವು ಹೇಳಬಹುದು. ಆದರೆ ಹೀಗೆ ನೆಮ್ಮದಿಯಿಂದ ನೆಲೆಯೂರಿರುವ ವ್ಯಕ್ತಿಗೆ ಇಂತಹ ಶಾಂತಿ ಅತಿ ಹೆಚ್ಚಾದಾಗ — ಕೆಲವೇ ಜನರಿಗೆ ಇದನ್ನು ಅನುಭವಿಸುವ ಅದೃಷ್ಟವಿರುತ್ತದೆ — ಅವನು ಆಲೋಚಿಸುತ್ತಾನೆ, “ನಾನು ಸಾಕಷ್ಟು ಶಾಂತಿಯನ್ನು ಅನುಭವಿಸಿದ್ದೇನೆ — ನನಗೆ ಸ್ವಲ್ಪ ಉದ್ರೇಕಗೊಳಿಸುವಂಥದ್ದು ಹಾಗೂ ವಿನೋದಗೊಳಿಸುವಂಥದ್ದು ಬೇಕಾಗಿದೆ.” ಅಥವಾ ಅವನು ತನ್ನ ಗೆಳೆಯನಿಗೆ ಹೇಳಬಹುದು, “ನಾನು ಬದುಕಿರುವೆನೆಂದು ಅರಿಯಲು ದಯವಿಟ್ಟು ನನ್ನ ತಲೆಯ ಮೇಲೆ ಮೊಟಕು!”
ಸುಖ, ದುಃಖ, ಬೇಜಾರು ಎಂಬ ಮೂರು ಮಾನಸಿಕ ಸ್ಥಿತಿಗಳ ಅನುಪಸ್ಥಿತಿಯಿಂದ ನಿಷೇಧಾರ್ಥಕ ಶಾಂತಿ ಉಂಟಾಗುತ್ತದೆ. ಬದಲಾವಣೆ ಅಥವಾ ಉದ್ರೇಕಗಳಿಲ್ಲದ ದೀರ್ಘ ಕಾಲೀನ ನಿಷೇಧಾರ್ಥಕ ಶಾಂತಿಯು ಹಳತಾಗುತ್ತದೆ ಹಾಗೂ ಆನಂದಿಸದಂತಾಗುತ್ತದೆ. ಆದರೆ ಸುಖ, ದುಃಖ ಹಾಗೂ ಬೇಜಾರಿನ ಸ್ಥಿತಿಗಳಲ್ಲಿ ಸತತವಾಗಿ ದೀರ್ಘಕಾಲದಿಂದ ಮುಳುಗಿದ್ದ ನಂತರ ನಿಷೇಧಾರ್ಥಕ ಶಾಂತಿಯೂ ಇಷ್ಟವಾಗುತ್ತದೆ. ಈ ಕಾರಣಕ್ಕಾಗಿಯೇ ಯೋಗಿಗಳು ಮಾನಸಿಕ ಶಾಂತಿಯನ್ನು ಹೊಂದಲು ಏಕಾಗ್ರತೆಯ ಮೂಲಕ ಆಲೋಚನಾ ಅಲೆಗಳನ್ನು ತಟಸ್ಥಗೊಳಿಸುವುದನ್ನು ಶಿಫಾರಸು ಮಾಡುತ್ತಾರೆ.
ಯೋಗಿಯು ಒಮ್ಮೆ ಆಲೋಚನಾ ಅಲೆಯನ್ನು ತಟಸ್ಥಗೊಳಿಸಿದ ಮೇಲೆ, ಅವನು ಶಾಂತ ಸರೋವರದಡಿಯಲ್ಲಿ ನೋಡತೊಡಗುತ್ತಾನೆ, ಅಲ್ಲಿ ಅವನು ಶಾಂತಿಯ ಸಕಾರಾತ್ಮಕ ಸ್ಥಿತಿಯನ್ನು ಕಾಣುತ್ತಾನೆ — ಆತ್ಮದ ನಿತ್ಯನೂತನ ಆನಂದ.
ನಾನು ನ್ಯೂಯಾರ್ಕ್‌ನಲ್ಲಿ ಒಬ್ಬ ದೊಡ್ಡ ಶ್ರೀಮಂತ ವ್ಯಕ್ತಿಯನ್ನು ಭೇಟಿಯಾದೆ. ತನ್ನ ಜೀವನದ ಕೆಲವೊಂದು ವಿಷಯಗಳನ್ನು ಹೇಳುತ್ತ ಅವನು ನಿಧಾನವಾಗಿ ಹೇಳಿದ, “ನಾನು ಜುಗುಪ್ಸೆ ಬರುವಷ್ಟು ಶ್ರೀಮಂತನಾಗಿದ್ದೇನೆ ಹಾಗೂ ಜುಗುಪ್ಸೆ ಬರುವಷ್ಟು ಆರೋಗ್ಯವಾಗಿದ್ದೇನೆ — ” ಆತ ಮುಗಿಸುವ ಮುನ್ನವೇ ನಾನು ಉದ್ಗರಿಸಿದೆ, “ಆದರೆ ನೀನು ಜುಗುಪ್ಸೆ ಬರುವಷ್ಟು ಸುಖಿಯಾಗಿಲ್ಲ! ನಿತ್ಯನೂತನ ಸಂತೋಷದಿಂದಿರಲು ಹೇಗೆ ನಿರಂತರವಾದ ಆಸಕ್ತಿ ಹೊಂದಿರಬೇಕೆಂದು ನಾನು ನಿನಗೆ ಕಲಿಸಬಲ್ಲೆ.”
ಆತ ನನ್ನ ವಿದ್ಯಾರ್ಥಿಯಾದ. ಅವನು ಕ್ರಿಯಾಯೋಗದ ಅಭ್ಯಾಸ ಮಾಡಿಕೊಂಡು ಹಾಗೂ ಸಮತೋಲನದ ಜೀವನ ನಡೆಸಿಕೊಂಡು ಆಂತರಿಕವಾಗಿ ಭಗವದ್ಭಕ್ತನಾಗಿದ್ದುಕೊಂಡು, ಸದಾ ನಿತ್ಯ ನೂತನ ಸಂತೋಷದಿಂದ ತುಂಬಿತುಳುಕುತ್ತ ಇಳಿವಯಸ್ಸಿನವರೆಗೆ ಬದುಕಿದ್ದ.
ಮರಣಶಯ್ಯೆಯಲ್ಲಿದ್ದಾಗ ಅವನು ತನ್ನ ಪತ್ನಿಗೆ ಹೇಳಿದ, “ನಾನು ಹೋಗುವುದನ್ನು ನೀನು ನೋಡಬೇಕಾಗಿ ಬಂದುದಕ್ಕೆ ನಿನ್ನ ಬಗ್ಗೆ ನನಗೆ ವಿಷಾದವಿದೆ. ಆದರೆ ವಿಶ್ವಪ್ರಿಯ ಭಗವಂತನನ್ನು ಸೇರಲು ನಾನು ಹೋಗುತ್ತಿರುವ ಬಗ್ಗೆ ನನಗೆ ಬಹಳ ಸಂತೋಷವಿದೆ. ನನ್ನ ಆನಂದದಲ್ಲಿ ಭಾಗಿಯಾಗು, ದುಃಖಪಟ್ಟು ಸ್ವಾರ್ಥಿಯಾಗಬೇಡ. ನನ್ನ ಪ್ರೀತಿಯ ಭಗವಂತನನ್ನು ಭೇಟಿಯಾಗಲು ಹೋಗುತ್ತಿರುವುದಕ್ಕೆ ನನಗೆಷ್ಟು ಸಂತೋಷವಾಗುತ್ತಿದೆಯೆಂದು ನಿನಗೆ ತಿಳಿದಿದ್ದರೆ ನೀನು ದುಃಖಿತಳಾಗುತ್ತಿರಲಿಲ್ಲ. ಶಾಶ್ವತ ಪರಮಾನಂದದ ಸಮಾರಂಭದಲ್ಲಿ ಒಂದು ದಿನ ನೀನು ನನ್ನನ್ನು ಸೇರುವಿಯೆಂಬ ಅರಿವಿನಲ್ಲಿ ಖುಷಿಪಡು.”
ಪರಮಾನಂದವನ್ನು ಹೃತ್ಪೂರ್ವಕವಾಗಿ ಸವಿಯಿರಿ
ಈಗ, ಸುಖ, ದುಃಖ, ಬೇಸರ ಹಾಗೂ ತಾತ್ಕಾಲಿಕ ಶಾಂತಿಯನ್ನು ವ್ಯಕ್ತಪಡಿಸುವ ಮುಖಗಳನ್ನು ಗಮನಿಸಿದ ಮೇಲೆ, ನಿಮ್ಮ ಮುಖವು ಪರಮಾತ್ಮನ ಸಾಂಕ್ರಾಮಿಕವಾದ ನಿತ್ಯನೂತನ ಆನಂದವನ್ನು ಪ್ರತಿಫಲಿಸುವುದು ಲೇಸೆಂದು ನಿಮಗೆ ಅನಿಸುವುದಿಲ್ಲವೇ?
ಇದು ಸಾಧ್ಯವಾಗಬೇಕಾದರೆ ನೀವು ಆಳವಾದ ಧ್ಯಾನವೆಂಬ ಪಾತ್ರೆಯಿಂದ ಪರಮಾತ್ಮನ ಪರಮಾನಂದವನ್ನು ಕುಡಿಯುತ್ತಲೇ ಇರಬೇಕು, ಎಲ್ಲಿಯವರೆಗೆಂದರೆ, ನಿಮಗೆ ನಿದ್ದೆಯಲ್ಲಿ, ಕನಸಿನಲ್ಲಿ, ಜಾಗೃತಾವಸ್ಥೆಯಲ್ಲಿ ಹಾಗೂ ಜೀವನದ ಎಲ್ಲಾ ಸಂದರ್ಭಗಳಲ್ಲಿ ಪರಮಾನಂದವನ್ನು ವ್ಯಕ್ತಪಡಿಸುವಷ್ಟು ಅಮಲೇರುವವರೆಗೆ, ಇಲ್ಲದಿದ್ದರೆ ಅದು ನಿಮ್ಮನ್ನು ಹಿರಿಹಿಗ್ಗಿಸುವಷ್ಟು ಸುಖಿಯನ್ನಾಗಿಯೂ, ಅಥವಾ ಅಗಾಧ ದುಃಖಿಯನ್ನಾಗಿಯೂ ಅಥವಾ ಬೇಸರ ಅಥವಾ ತಾತ್ಕಾಲಿಕ ನಿಷೇಧಾರ್ಥಕ ಶಾಂತಿ ತುಂಬಿದವರನ್ನಾಗಿಯೂ ಮಾಡುತ್ತದೆ.
ನಿಮ್ಮ ನಗು ಪ್ರಾಮಾಣಿಕತೆಯ ಕಂದರಗಳಿಂದ ಪ್ರತಿಧ್ವನಿಸಬೇಕು. ನಿಮ್ಮ ಆನಂದ ನಿಮ್ಮ ಆತ್ಮಾನುಭೂತಿಯ ಚಿಲುಮೆಯಿಂದ ಪ್ರವಹಿಸಬೇಕು. ನಿಮ್ಮ ಮಂದಹಾಸ ನೀವು ಭೇಟಿ ಮಾಡುವ ಎಲ್ಲ ಆತ್ಮಗಳನ್ನೂ, ಸಮಗ್ರ ಬ್ರಹ್ಮಾಂಡವನ್ನೂ ವ್ಯಾಪಿಸಬೇಕು. ನಿಮ್ಮ ಪ್ರತಿ ನೋಟವೂ ನಿಮ್ಮ ಆನಂದಕರ ಆತ್ಮವನ್ನು ಪ್ರತಿಬಿಂಬಿಸುವಂತಿರಬೇಕು ಹಾಗೂ ವಿಷಾದಗ್ರಸ್ತ ಮನಸ್ಸುಗಳಿಗೆ ಅದರ ಪ್ರಭಾವ ಬೀರುವಂತಿರಬೇಕು.
ನೀವೊಬ್ಬ, ನಿರಂತರವಾದ ಮಾನಸಿಕ ಏಳುಬೀಳುಗಳನ್ನು ಅನುಭವಿಸುತ್ತಿರುವ ಸಾಮಾನ್ಯ ಮರ್ತ್ಯ ಎಂಬ ಕನಸು ಕಾಣುವುದನ್ನು ನಿಲ್ಲಿಸಿ. ಏನೇ ಆದರೂ, ನೀವು ಪರಮಾತ್ಮನ ನಿಜ ಪ್ರತಿರೂಪದಲ್ಲಿ ಮಾಡಲ್ಪಟ್ಟವರು ಎಂಬುದನ್ನು ಸದಾ ನೆನಪಿನಲ್ಲಿಡಿ.
ಎಲ್ಲ ವಸ್ತುಗಳಲ್ಲಿರುವ ಜೀವಂತ ಆನಂದ — ಬ್ರಹ್ಮಾಂಡೀಯ ಪರಮಾನಂದದ ಚಿಲುಮೆ — ನಿಮ್ಮ ಮೇಲೆ ತನ್ನ ತುಂತುರು ಹನಿಗಳನ್ನು ವರ್ಷಿಸಬೇಕು ಹಾಗೂ ನಿಮ್ಮ ಆಲೋಚನೆಗಳ ಹಾಗೂ ನಿಮ್ಮ ಸಂಪೂರ್ಣ ಅಸ್ತಿತ್ವದ ಪ್ರತಿ ಜೀವಕೋಶ, ಪ್ರತಿ ಅಂಗಾಂಶದ ಮೂಲಕ ಆನಂದವನ್ನು ತೊಟ್ಟಿಕ್ಕಿಸಬೇಕು.
ನೆನಪಿರಲಿ, ಅಪ್ರಜ್ಞಾ ಆತ್ಮಬೋಧೆಯ ಸ್ಥಿತಿಯಾದ ಗಾಢವಾದ, ಸ್ವಪ್ನರಹಿತ ನಿದ್ರಾವಸ್ಥೆಯಲ್ಲಿ ನೀವು ಆ ಇಡೀ ಸಮಯ ಸಂತೋಷದಿಂದಿರುವಿರಿ. ಆದ್ದರಿಂದ ಹಗಲು ಹೊತ್ತಿನಲ್ಲಿ ದುಃಸ್ವಪ್ನದಂತಹ ಮಾನಸಿಕ ಕ್ಲೇಶಗಳು ಹಾಗೂ ತುಮುಲಗಳಿಂದ ಎಷ್ಟೇ ತೊಂದರೆಗೊಳಗಾದರೂ ಎಲ್ಲಾ ಸಮಯದಲ್ಲೂ ಆಂತರಿಕವಾಗಿ ನಿತ್ಯನೂತನ ಆನಂದದಿಂದಿರಲು ಪ್ರಯತ್ನಿಸಬೇಕು, ಜುಳುಜುಳು ಹರಿವ ತೊರೆಯ ನಿತ್ಯನಿರ್ಮಲ ಹೊಳೆವ ಜಲದ ತೆರದಿ.
ಒಬ್ಬ ವ್ಯಕ್ತಿ ನಿರಂತರವಾಗಿ ಎಲ್ಲಾ ಸಮಯದಲ್ಲೂ ಮದ್ಯ ಕುಡಿದು ಮತ್ತನಾಗಿರುವಂತೆ ನೀವೂ ಕೂಡ ಧ್ಯಾನದ ನಂತರದ ನಿಮ್ಮ ಆತ್ಮದ ಆನಂದವನ್ನು ನಿರಂತರವಾಗಿ ಗ್ರಹಿಸುತ್ತ ನಿಜವಾದ ಸುಖದಲ್ಲಿ ಪರವಶರಾಗಬಹುದು.
ಧ್ಯಾನಾನಂತರದ ಪರಮಾನಂದದ ಸ್ಥಿತಿಯನ್ನು ನಿರಂತರವಾಗಿ ಅನುಭವಿಸಲು ಸಾಧ್ಯವಾದಾಗ ನೀವು ಆನಂದಪರವಶತೆಯಲ್ಲಿ ಬದುಕುವಿರಿ; ನಿಮ್ಮ ಆತ್ಮದ ನಿತ್ಯನೂತನ ಆನಂದದೊಂದಿಗೆ ಒಂದಾಗಿರುವಿರಿ, ನಿಮ್ಮ ಸುತ್ತಮುತ್ತ ಯಾರಿದ್ದರೂ ಅವರು ನಿಮ್ಮಂತೆಯೇ ಇರುತ್ತಾರೆ — ಶ್ರೀಗಂಧವನ್ನು ಒಂದೇ ಸಮನಾಗಿ ಸ್ಪರ್ಶಿಸುತ್ತಿರುವ ಕೈ ಪರಿಮಳವನ್ನು ಸೂಸುವಂತೆ.
“ಅವರ ಆಲೋಚನೆಗಳನ್ನು ಸಂಪೂರ್ಣವಾಗಿ ನನ್ನಲ್ಲೇ ತೊಡಗಿಸಿಕೊಂಡು, ಅವರ ಅಸ್ತಿತ್ವಗಳನ್ನು ನನಗೇ ಸಮರ್ಪಿಸಿ, ಒಬ್ಬರು ಮತ್ತೊಬ್ಬರಿಗೆ ಅರಿವುಂಟುಮಾಡುತ್ತ, ಸದಾ ನನ್ನ ಸಂಕೀರ್ತನೆ ಮಾಡುತ್ತ ನನ್ನ ಭಕ್ತರು ಸಂತೃಪ್ತರೂ ಆನಂದಿತರೂ ಆಗಿರುತ್ತಾರೆ.” (ಭಗವದ್ಗೀತೆ, ಅಧ್ಯಾಯ X, ಶ್ಲೋಕ 9).