ಗುರುಚರಣರಿಂದ “ಬಿದಿರಿನ ಕೊಳಲು”

10 ಮಾರ್ಚ್‌, 2023

2018ರಲ್ಲಿ ಯೋಗದಾ ಸತ್ಸಂಗ ನಿಯತಕಾಲಿಕೆಯಲ್ಲಿ ಪ್ರಕಟವಾದ ಭಾರತದ ಪಾರಂಪರಿಕ ಕತೆಯ ಮರುಕಥನ.

ಒಂದು ಮಧ್ಯಾಹ್ನದ ಇಳಿಹೊತ್ತಿನಲ್ಲಿ, ಬೃಂದಾವನದ ಬಳಿಯಿದ್ದ ಒಂದು ಕಾಡಿನ ಹಾದಿಯಲ್ಲಿದ್ದ ಕದಂಬ ಮರದ ನೆರಳಿನಲ್ಲಿ ಕೂತು ಕೃಷ್ಣ ತನ್ನ ಮುರಳಿಯನ್ನು (ಬಿದಿರಿನ ಕೊಳಲು) ನುಡಿಸಲು ಆರಂಭಿಸಿದನು. ಎಲೆಗಳ ಮಧ್ಯದಿಂದ ಹೊಂಗಿರಣಗಳು ಪ್ರವೇಶಿಸುತ್ತಿದ್ದವು. ತಮ್ಮ ನಡಿಗೆಯ ಮಧ್ಯೆ ನವಿಲುಗಳು ಹಾಗೇ ನಿಂತು ತಮ್ಮ ಕತ್ತುಗಳನ್ನು ತಿರುಗಿಸಿ ಸಮ್ಮೋಹಕ ಗಾನವನ್ನು ಕೇಳುತ್ತಿದ್ದವು. ನೆತ್ತಿಯ ಮೇಲೆ, ಚಿಲಿಪಿಲಿಗುಟ್ಟುತ್ತಿದ್ದ ಪಕ್ಷಿಗಳು ಸುಮ್ಮನಾದವು. ಜಿಂಕೆಗಳು ತಮ್ಮ ಕಿವಿಗಳನ್ನು ಮುದುಡದೇ ಪೊದೆಗಳ ಮೂಲಕ ಇಣುಕಿದವು. ಭಗವಂತನ ಪಾದಗಳ ಬಳಿ ಒಂದು ಹಸು ಶಾಂತವಾಗಿ ಮಲಗಿತ್ತು. ಬಳಿಯಲ್ಲಿದ್ದ ತೊರೆಯೂ ಕೂಡ ಬಲು ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ಹರಿಯುತ್ತಿರುವಂತೆ ಕಾಣುತ್ತಿತ್ತು. ಇಡೀ ಪ್ರಕೃತಿಯು ಸುತ್ತಲೂ ಹರಡಿದ ಪ್ರೇಮದ ಭಾವಸಮಾಧಿಯಲ್ಲಿ ಮೂರ್ಛೆ ಹೋದಂತೆ ಕಾಣುತ್ತಿತ್ತು.

ಗೋಪಿಯರು ಕೃಷ್ಣನ ಬಳಿ ಬಂದು ಹೇಳಿದರು, “ಗೋಪಾಲ! ನಮಗೊಂದು ಸಮಸ್ಯೆ ಉದ್ಭವಿಸಿದೆ. ಅದಕ್ಕೆ ನೀನೇ ಕಾರಣ. ಆದ್ದರಿಂದ ನೀನೇ ಅದನ್ನು ಬಗೆಹರಿಸಬೇಕು.”

ಕೃಷ್ಣನು ನುಡಿಸುವುದನ್ನು ನಿಲ್ಲಿಸಿ ಅವರೆಡೆ ಪ್ರಶ್ನಾರ್ಥಕವಾಗಿ ನೋಡಿದನು.

ಗೋಪಿಯರಲ್ಲಿ ಮುಖ್ಯಸ್ಥಳಾದ ರಾಧೆ ಹೇಳಿದಳು, “ನಾವು ಕೂಡ ನಿಮ್ಮ ಭಕ್ತರಲ್ಲವೇ? ನಾವು ಕೂಡ ಸದಾ ನಿನ್ನ ಬಗ್ಗೆ ಯೋಚಿಸುವುದಿಲ್ಲವೇ, ನಿನಗಾಗಿ ಕೊರಗುವುದಿಲ್ಲವೇ ಮತ್ತು ನಿನ್ನ ಬಳಿಯೇ ಸದಾ ಇರುವುದಕ್ಕೆ ಹಂಬಲಿಸುವುದಿಲ್ಲವೇ?”

“ಹೌದೂ?”

“ಆದರೆ, ಪ್ರತಿದಿನದ ಕೊನೆಯಲ್ಲಿ, ನೀನು ಇತರ ಗೋಪಾಲಕರ ಜೊತೆಯಲ್ಲಿ ಹಳ್ಳಿಯಲ್ಲಿರುವ ನಿನ್ನ ಮನೆಗೆ ಹಿಂತಿರುಗುತ್ತಿರುವಾಗ ನಾವು ಮನೆ ಬಾಗಿಲುಗಳಿಂದ ಅಪರೂಪಕ್ಕೆ ನಿನ್ನ ಒಂದು ಇಣುಕು ನೋಟವನ್ನು ಕಾಣುತ್ತೇವೆ. ಓಡಿ ಬಂದು ಇಡೀ ಸಂಜೆ ನಿನ್ನೊಡನೆ ಇರೋಣವೆಂದು ನಮಗೆ ಆಸೆಯಿದ್ದರೂ, ನಮ್ಮ ಸಂಸಾರಗಳನ್ನು ನಾವು ನೋಡಿಕೊಳ್ಳಬೇಕಾಗಿದೆ. ನಮ್ಮ ಮನೆಯ ಕೆಲಸಕಾರ್ಯಗಳು ನಮ್ಮನ್ನು ಹಿಡಿದೆಳೆಯುತ್ತವೆ. ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರ ನಾವು ನಿನ್ನೊಡನೆ ಬೇರೆಯ ದಿನಗಳಿಗಿಂತ ಹೆಚ್ಚು ಕಾಲ ಕಳೆಯಬಹುದು. ಆದರೆ ಇದು ಸಾಲದು. ನಮ್ಮ ಆತ್ಮಗಳು ನಿನ್ನ ನಿರಂತರ ಸಾನ್ನಿಧ್ಯವಿಲ್ಲದೇ ಪರಿತಪಿಸುತ್ತಿವೆ.

ಕೃಷ್ಣ ಮುಗುಳ್ನಕ್ಕು ಮತ್ತೆ ತನ್ನ ಕೊಳಲನ್ನು ಕೈಗೆತ್ತಿಕೊಂಡು ಅವರಿಗೆ ಕೂರಲು ಸನ್ನೆ ಮಾಡಿದನು. ಅವನ ಗಾನವು ಅವರ ಹೃದಯಗಳನ್ನು ಮೇಲೆತ್ತಿತು ಮತ್ತು ಅವರ ಕಳವಳಗಳನ್ನು ಶಾಂತಗೊಳಿಸಿತು.

ಗಾಢವಾದ ಸಂಸರ್ಗದಲ್ಲಿ, ಅವರು ತಮ್ಮೆಲ್ಲ ದೇಹಗಳನ್ನು, ಸಂಸಾರಗಳನ್ನು ಮತ್ತು ಜವಾಬ್ದಾರಿಗಳನ್ನು ಮರೆತರು. ತಮ್ಮ ಒಲುಮೆಯ ಭಗವಂತನೊಡನೆಯ ಈ ತೃಪ್ತಿದಾಯಕ ಕ್ಷಣದಿಂದಾಚೆಗೆ ಜೀವನವಿದೆ ಎಂಬುದನ್ನೇ ಅವರು ಮರೆತರು.

ಅಂತಿಮ ಸ್ವರಗಳು ಗುಂಪುಗೂಡುತ್ತಿರುವ ಸಂಜೆಯ ಮೌನದಲ್ಲಿ ಮರೆಯಾಗುತ್ತಿರುವಾಗ ಮತ್ತು ಅನಂತಕಾಲವು ಒಂದೇ ನಿಮಿಷದಲ್ಲಿ ಮುಗಿಯಿತು ಎಂದು ಭಾಸವಾದಾಗ, ಇನ್ನು ತಾವು ಅಲ್ಲಿಂದ ಹೋಗಬೇಕಾದ ಸಮಯ ಬಂತೆಂದು ಗೋಪಿಯರು ದುಃಖದಿಂದ ಗೋಳಿಟ್ಟರು.

ಅವರು ಹೇಳಿದರು, “ನಮಗೆ ನಿನ್ನ ಮರುಳಿಯ ಬಗ್ಗೆ ಹೊಟ್ಟೆಕಿಚ್ಚಿದೆ. ನೀನು ಎಂದಿಗೂ ಅದನ್ನು ಬಿಟ್ಟಿರುವುದಿಲ್ಲ. ನೀನೆಲ್ಲೇ ಹೋದರೂ ಅದನ್ನು ನಿನ್ನ ಕರಕಮಲಗಳಲ್ಲಿ ಹಿಡಿದುಕೊಂಡಿರುತ್ತೀಯೆ. ಅದನ್ನು ನಿನ್ನ ತುಟಿಗಳ ಮೇಲಿಟ್ಟುಕೊಂಡು ಹೃದಯವನ್ನು-ಹಿಡಿದೆಳೆಯುವ ಸುಮಧರ ಗಾನಗಳನ್ನು ನುಡಿಸುತ್ತೀಯೆ. ಅದನ್ನು ನಿನ್ನ ಎದೆಯ ಮೇಲೆ ಮಲಗಿಸಿಕೊಂಡು ಅದರೊಡನೆಯೇ ನಿದ್ರೆಗೆ ಹೋಗುತ್ತೀಯೆ. ನಿನ್ನ ಮುರಳಿಯೇ ಎಂದೂ ನಿನ್ನ ಬಿಡದಿದ್ದಾಗ, ನಾವೇಕೆ ನಿನ್ನ ಸಾನ್ನಿಧ್ಯವನ್ನು ತೊರೆಯಬೇಕು?”

“ಏಕೆಂದು ನಾನು ನಿಮಗೆ ಹೇಳುತ್ತೇನೆ” ಎಂದು ಭಗವಾನ್‌ ಕೃಷ್ಣ ಪ್ರತಿಕ್ರಿಯಿಸಿದ. “ನಾನು ನಿಮಗೆ ನನ್ನ ಮುರಳಿಯ ಕಥೆಯನ್ನು ಹೇಳುತ್ತೇನೆ.”

ಗೋಪಿಯರೆಲ್ಲರೂ ತದೇಕಚಿತ್ತರಾದರು. ಕಡೆಗೂ ಆ ರಹಸ್ಯ ಇಲ್ಲಿದೆ!

“ಒಂದು ದಿನ ನಾನು ಬಿದಿರಿನ ಗಿಡದ ಬಳಿಗೆ ಹೋಗಿ ಹೇಳಿದೆ, ‘ನಾನು ಏನು ಕೇಳಿದರೂ ನೀನು ನನಗೆ ಕೊಡಬಲ್ಲೆಯಾ?’ ಬಿದಿರಿನ ಗಿಡ ಹೇಳಿತು, ‘ಖಂಡಿತವಾಗಿ, ನಿನ್ನ ಇಚ್ಛೆಯೇ ನನಗೆ ಅಪ್ಪಣೆ. ನೀನು ವಿಶ್ವಾತ್ಮನೊಡನೆ ಒಂದಾಗಿದ್ದೇಯೆ. ನಿನಗೆ ಸೇವೆ ಸಲ್ಲಿಸುವುದೇ ನನ್ನ ಭಾಗ್ಯ.’

“ನಾನು ಹೇಳಿದೆ, ‘ಅದು ಬಹಳ ನೋವಿನಿಂದ ಕೂಡಿರುತ್ತದೆ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನಾನು ನಿನ್ನನ್ನು ಕತ್ತರಿಸಬೇಕಾಗುತ್ತದೆ.’

“‘ಈ ವಿಶೇಷ ಉದ್ದೇಶವನ್ನು ಪೂರೈಸಲು ಬೇರೆ ಯಾವ ದಾರಿಯೂ ಇಲ್ಲವೇ’ ಎಂದು ಬಿದಿರು ಕೇಳಿತು.

“‘ಇಲ್ಲ’ ಎಂದು ನಾನು ಹೇಳಿದೆ. ಬಿದಿರು ಅದನ್ನು ಕತ್ತರಿಸುವುದಕ್ಕೆ ಒಪ್ಪಿಕೊಂಡಿತು. ನಾನು ಒಂದು ಪೆಟ್ಟನ್ನು ಕೊಟ್ಟೆ. ಅದು ನೋವಿನಿಂದ ನುಲಿಯಿತು. ಅದು ತನ್ನ ಬೇರಿನಿಂದಾಚೆಗೆ ಬರುವವರೆಗೂ ಹೊಡೆಯುತ್ತಾ ಹೋದೆ. ನಂತರ ಒಂದು ಚಾಕುವಿನಿಂದ ಅದಕ್ಕೆ ರೂಪ ಕೊಟ್ಟೆ ಮತ್ತು ಒಂದು ಚೂಪಾದ ಆಯುಧದಿಂದ ಅದನ್ನು ಟೊಳ್ಳಾಗಿಸಿದೆ. ನಂತರ ಎಲ್ಲ ಒರಟಾದ ಜಾಗಗಳನ್ನೂ ಉಜ್ಜಿ ನಯಗೊಳಿಸಿದೆ. ಬಿದುರು ನಡುಗಿತು ಮತ್ತು ಕಂಪಿಸಿತು, ಆದರೆ ತುಟಿಪಿಟಿಕ್ಕೆನ್ನಲಿಲ್ಲ. ತನ್ನನ್ನು ತಾನು ನನ್ನ ಕೈಗಳಿಗೆ ಸಮರ್ಪಿಸಿಕೊಂಡು ಅದು ನನ್ನ ಸಂಗೀತಕ್ಕೆ ಒಂದು ಪರಿಪೂರ್ಣ ಸಂಗೀತ ವಾದ್ಯವಾಯಿತು. ಅದರ ಸಹಾಯದಿಂದ, ಈಗ ನಾನು ಇಡೀ ಜಗತ್ತನ್ನು ಅದರ ಮಾಯೆಯ-ಭ್ರಮೆಯ ನಿದ್ರೆಯಿಂದ ಎಚ್ಚರಗೊಳಿಸುತ್ತೇನೆ. ನನ್ನ ಉದ್ದೇಶವನ್ನು ಪೂರ್ಣಗೊಳಿಸುವುದಕ್ಕೆ ಸಹಾಯ ಮಾಡಿ, ಅದು ನನಗೆ ಅತ್ಯಂತ ಪ್ರಿಯವಾದ ವಸ್ತುವಾಗಿದೆ. ಆದ್ದರಿಂದ ನಾನು ಎಂದೂ ಅದನ್ನು ಬಿಟ್ಟಿರುವುದಿಲ್ಲ.”

ಗೋಪಿಯರಿಗೆ ಈಗ ಅರ್ಥವಾಯಿತು: ನಮ್ರತೆಯಿಂದ ತನ್ನ ಅಹಂಕಾರವನ್ನು ಬಿಟ್ಟುಕೊಟ್ಟು, ತನ್ನ ಜೀವನವನ್ನೇ ಭಗವಂತನ ಇಚ್ಛೆಗಾಗಿ ಸಮರ್ಪಿಸುವ ಮೂಲಕ, ಮುರಳಿ ಭಗವಾನ್‌ ಕೃಷ್ಣನಿಂದ ಬೇರೆಯಾಗದಂತಾಗಿದೆ. ಭಗವಂತನು ತನ್ನ ಮನಮೋಹಕ ಗಾನಗಳನ್ನು ಅವರ ಮೂಲಕ ನುಡಿಸುವುದಕ್ಕೆ ಅನುವು ಮಾಡಿಕೊಟ್ಟು ಅವರು ಕೂಡ ದಿವ್ಯ ವಾದ್ಯಗಳಾಗಬೇಕು. ಆಗ ಅವರಿಗೂ ಕೂಡ ಯಾವುದೇ ಅಗಲಿಕೆ ಇರುವುದಿಲ್ಲ.

ಇದನ್ನು ಹಂಚಿಕೊಳ್ಳಿ