ಈ ಕೆಳಗಿನ ಪೋಸ್ಟ್ “ಆತ್ಮಸಾಕ್ಷಾತ್ಕಾರ: ನಿಮ್ಮ ಅನಂತ ಸ್ವಭಾವದ ಅರಿವು,” ಎಂಬ ಪ್ರವಚನದ ಒಂದು ಅಂಶವಾಗಿದೆ. ಈ ಪ್ರವಚನವನ್ನು ಸಂಪೂರ್ಣವಾಗಿ ಸಾಲ್ವಿಂಗ್ ದ ಮಿಸ್ಟರೀ ಆಫ್ ಲೈಫ್, ಎಂಬ ಪರಮಹಂಸ ಯೋಗಾನಂದಜಿಯವರ ಸಂಗ್ರಹಿತ ಭಾಷಣಗಳು ಮತ್ತು ಪ್ರಬಂಧಗಳ ನಾಲ್ಕನೇ ಸಂಪುಟದಲ್ಲಿ ಓದಬಹುದಾಗಿದ್ದು ಇದನ್ನು ಶೀಘ್ರದಲ್ಲೇ ಸೆಲ್ಫ್-ರಿಯಲೈಜೇಶನ್ ಫೆಲೋಶಿಪ್, ನಂತರ ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಪ್ರಕಟಿಸಲಿವೆ.

ಎಲ್ಲಾ ಮಹಾ ಧರ್ಮಗಳ ಉಪದೇಶಗಳು ದೇವರತ್ತ ಕರೆದೊಯ್ಯುತ್ತವೆ; ಆದರೆ ಅವುಗಳ ವಿಭಿನ್ನ ಬಾಹ್ಯ ಆಚರಣೆಗಳು ತಾತ್ಕಾಲಿಕ ಕಿರುದಾರಿಗಳಾಗಿದ್ದು ಅವು ಕೊನೆಗೂ ಧ್ಯಾನದ ಆಂತರಿಕ ಹೆದ್ದಾರಿಯೊಂದರತ್ತ, ಒಬ್ಬ ಅನ್ವೇಷಕನನ್ನು ನಿಸ್ಸಂದೇಹವಾಗಿ ಒಯ್ಯುತ್ತವೆ.
ಪ್ರಜ್ಞೆಯನ್ನು ದೇಹದಿಂದ ಮತ್ತು ಸೀಮಿತ ಜಗತ್ತಿನಿಂದ ಹಿಂಪಡೆದು ಅದನ್ನು ದಿವ್ಯದಲ್ಲಿ ಲೀನಗೊಳಿಸುವದೇ ದೇವರಲ್ಲಿ ವಿಮೋಚನೆಗೊಳ್ಳಲು ಏಕಮಾತ್ರ ಮಾರ್ಗವಾಗಿದೆ. ಯೇಸು ಧ್ಯಾನ ಮಾಡಿದರು. ಜನಸಮೂಹಗಳಿಗೆ ಅವರು ನೈತಿಕ ಹಾಗೂ ಆಧ್ಯಾತ್ಮಿಕ ಸತ್ಯಗಳಾದ — ದೇವರತ್ತ ಒಯ್ಯುವ ಅತ್ಯಗತ್ಯ ಪ್ರಾರಂಭಿಕ ಹೆಜ್ಜೆಗಳು ಎಂಬುದರ ಬಗ್ಗೆ ಬೋಧಿಸಿದರು. ಆದರೆ ತನ್ನ ನಿಕಟ ಶಿಷ್ಯರಿಗೆ ಮಾತ್ರ ಅವರು ದೇವರೊಂದಿಗೆ ನಿಜವಾದ ಏಕತ್ವವನ್ನು ಸಾಧಿಸುವ ಮಾರ್ಗವಾದ ಧ್ಯಾನದ ಉನ್ನತ ವಿಜ್ಞಾನವನ್ನು ಬೋಧಿಸಿದರು.
ಧ್ಯಾನದ ತಂತ್ರ ಮಾತ್ರ ನಿಮಗೆ ಮುಕ್ತಿಯನ್ನು ತಂದು ಕೊಡದು; ನಿಮ್ಮ ವ್ಯಕ್ತಿತ್ವ ಶಕ್ತಿಶಾಲಿ ಮತ್ತು ಶುದ್ಧವಾಗಿರಬೇಕು. ನಿಮ್ಮ ಸಂಪೂರ್ಣ ಜೀವನ ಮತ್ತು ನಡವಳಿಕೆ ಸತ್ಯದ ನಿಬಂಧನೆಗಳೊಂದಿಗೆ ಸಮ್ಮತವಾಗಿರಬೇಕು. ಧ್ಯಾನಯೋಗದ ಮಾರ್ಗದಲ್ಲಿ ಪ್ರಥಮ ನಿಯಮಗಳು ಯಮ ಮತ್ತು ನಿಯಮ — ನೀವು ಮಾಡಬಾರಾದ ಕೆಲವು ನಿಯಮಗಳು, ದಶ ಆಜ್ಞೆಗಳಂತೆ (“ನೀನು ಕೊಲ್ಲಬಾರದು,” “ನೀನು ಸುಳ್ಳು ಸಾಕ್ಷ್ಯ ನೀಡಬಾರದು,” “ನೀನು ವ್ಯಭಿಚಾರ ಮಾಡಬಾರದು” ಇತ್ಯಾದಿ); ಹಾಗೆಯೇ ನೀವು ಪಾಲಿಸಬೇಕಾದ ಧನಾತ್ಮಕ ನಿಯಮಗಳಾದ: ಶುದ್ಧತೆ, ಸಮಭಾವತೆಯ ತೃಪ್ತಿ, ಆತ್ಮಪರಿಶೀಲನೆ (ಸ್ವ ಅಧ್ಯಯನ), ದೇವರಲ್ಲಿ ಭಕ್ತಿ, ಮತ್ತು ಸ್ವ ನಿಯಂತ್ರಣ.
ಧ್ಯಾನದಲ್ಲಿ ಪ್ರಗತಿ ಸಾಧಿಸಬೇಕೆಂದರೆ, ನೀವು ದುರಹಂಕಾರ, ಕೋಪ, ಲಾಲಸೆ, ಮತ್ತು ಅಸೂಯೆಗಳಿಂದ ನಿಮ್ಮನ್ನು ಮುಕ್ತಗೊಳಿಸಲು ಶ್ರಮಿಸಬೇಕು. ಇತರರೊಂದಿಗೆ ಅಪ್ರಾಮಾಣಿಕರಾಗಬಾರದು; ನಿಮಗೆ ಪ್ರಮಾಣಿಕವಾಗಿ ಸತ್ಯವೆಂದೆನಿಸದ ಮಾತುಗಳನ್ನಾಡಬಾರದು. ಸ್ವಾರ್ಥಪೂರ್ವಕವಾಗಿ ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡಿ; ನೀವು ಯಾವುದೇ ನಿರೀಕ್ಷೆಗಳಿಲ್ಲದವರಾದರೆ, ಜನರು ನಿಮ್ಮಿಂದ ಏನನ್ನು ಕಸಿದುಕೊಳ್ಳಲು ಸಾಧ್ಯ? ನನಗೆ ದೇವರ ಹೊರತು ಬೇರೆ ಯಾವ ಆಸೆಯೂ ಇಲ್ಲದ ಕಾರಣದಿಂದ ಯಾರೂ ನನ್ನನ್ನು ನೋಯಿಸಲಾರರು. ನನಗೆ ಯಾರ ಮೇಲೂ ಕೋಪವಿಲ್ಲ; ಯಾರ ಕೋಪದ ಪ್ರದರ್ಶನವೂ ನನ್ನನ್ನು ಪ್ರತಿಕ್ರಿಯಿಸುವಂತೆ ಮಾಡಲಾರದು. ಆದ್ದರಿಂದ, ಶಾಂತಿಯುತವಾಗಿ, ಆತ್ಮನಿಯಂತ್ರಣದೊಂದಿಗೆ, ಮತ್ತು ಪ್ರಾಮಾಣಿಕತೆಯೊಂದಿಗೆ ಬದುಕಲು ಯತ್ನಿಸಿ. ಇಲ್ಲವಾದರೆ, ತಪ್ಪಾದ ನಡವಳಿಕೆ ಧ್ಯಾನದ ಪವಿತ್ರ ಫಲಿತಾಂಶಗಳನ್ನು ಇಲ್ಲದಂತೆ ಮಾಡುತ್ತದೆ.
ನೀವು ಯೋಚಿಸುವ ಪ್ರತಿಯೊಂದು ಆಧ್ಯಾತ್ಮಿಕ ಚಿಂತನೆಯೂ ನಿಮ್ಮ ಶಾಶ್ವತ ಸ್ನೇಹಿತನಾಗಿರುತ್ತದೆ. ಆದರೆ ನೀವು ಗಳಿಸುವ ಪ್ರತಿಯೊಂದು ಕೆಟ್ಟ ವೃತ್ತಿಯೂ ನಿಮ್ಮ ದೀರ್ಘಕಾಲದ ಶತ್ರುವಾಗಿರುತ್ತದೆ; ನೀವು ಅದನ್ನು ನಿರ್ಮೂಲನ ಮಾಡುವವರೆಗೆ ಅದು ನಿಮ್ಮ ಹಿಂದೆ ಬಂದುಬಂದು ಕಾಡುತ್ತದೆ. ಇದನ್ನು ನೆನಪಿಟ್ಟುಕೊಳ್ಳಿ. ನಾನು ನಿಮಗೆ ಹಂತ-ಹಂತವಾಗಿ ನಿಮ್ಮನ್ನು ದೇವರತ್ತ ಒಯ್ಯುವ ಮಾರ್ಗಗಳನ್ನು ತೋರಿಸುತ್ತಿದ್ದೇನೆ. ಮೊದಲನೆಯದಾಗಿ, ತಪ್ಪಾದ ಚಿಂತನೆಯು ಮತ್ತು ದುಷ್ಚಟಗಳಿಂದ ನಿಮ್ಮನ್ನು ಮುಕ್ತಗೊಳಿಸಿಕೊಳ್ಳಿ. ಎರಡನೆಯದಾಗಿ, ಉತ್ತಮ ಚಟಗಳು ಮತ್ತು ಉತ್ತಮ ಕರ್ಮಗಳನ್ನು ಸ್ಥಾಪಿಸಿ ಹಾಗೂ ಆಚರಿಸಿ.
ಮೂರನೆಯ ಹಂತ ಆಸನ ಅಥವಾ ಭಂಗಿ: ಆಳವಾಗಿ ಧ್ಯಾನ ಮಾಡಬೇಕಾದರೆ ದೇಹವು ನಿಮ್ಮ ನಿಯಂತ್ರಣದಲ್ಲಿ ಇರಬೇಕು.
ಅನಂತರ ಬರುತ್ತದೆ ಪ್ರಾಣಾಯಾಮ (ಅಂದರೆ ಪ್ರಾಣ ಅಥವ ಪ್ರಾಣಶಕ್ತಿಯ ನಿಯಂತ್ರಣ), ಇದು ದೇಹ ಮತ್ತು ಮನಸ್ಸನ್ನು, ಉಸಿರಾಟ ಮತ್ತು ಹೃದಯದ ಸ್ಪಂದನವನ್ನು ಶಮನಗೊಳಿಸುವ ತಂತ್ರವಾಗಿದೆ. ಪ್ರಾಣಾಯಾಮವೆಂದರೆ ಆತ್ಮಸಾಕ್ಷಾತ್ಕಾರದ ಮೂಲಕಲೆಯಾಗಿದೆ. ನೀವು ಮರ್ತ್ಯ ಉಸಿರನ್ನು ನಿಯಂತ್ರಣಕ್ಕೆ ತರದೆ ಇದ್ದರೆ, ದೇವರನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಉಸಿರಾಟವು ಮನಸ್ಸನ್ನು ಇಂದ್ರಿಯ ಜಗತ್ತಿಗೆ ಬಂಧಿಸುತ್ತದೆ. ಉಸಿರಾಟ ಶಾಂತವಾದಾಗ ಮನಸ್ಸು ಒಳಗೆ ಹೊರಳುತ್ತದೆ. ಉಸಿರಿಲ್ಲದ ಆ ಆಂತರಿಕ ಶಾಂತಿಯೇ ದೇವರತ್ತ ಒಯ್ಯುವ ದಾರಿ. ಪ್ರಾಣಾಯಾಮವನ್ನು ಅಭ್ಯಾಸಮಾಡಿ — ಅದರಿಂದ ನೀವು ಧ್ಯಾನ ಹೇಗೆ ಮಾಡಬೇಕು, ದೇವರನ್ನು ಹೇಗೆ ಗ್ರಹಿಸಬೇಕು, ಮತ್ತು ಆತನೊಂದಿಗೆ ಹೇಗೆ ಒಂದಾಗುವುದು ಎಂಬುದನ್ನು ಅರಿಯುತ್ತೀರಿ.
ಪ್ರಾಣಾಯಾಮದ ಮೂಲಕ ಸಂಭವಿಸುವ ಮನಸ್ಸಿನ ಅಂತರ್ಮುಖತೆಯನ್ನು ಪ್ರತ್ಯಾಹಾರ ಎಂದು ಕರೆಯಲಾಗುತ್ತದೆ. ಅದು ಮುಂದಿನ ಹಂತವಾಗಿದೆ: ಪ್ರಜ್ಞೆಯನ್ನು ಇಂದ್ರಿಯಗಳಿಂದ ದೂರವಿಟ್ಟು ತನ್ನೊಳಗೆ ಹರಿಸಲಾಗುತ್ತದೆ. ಆಗಲೇ ನಿಜವಾದ ಧ್ಯಾನ ಆರಂಭವಾಗುತ್ತದೆ.
ನಿಮ್ಮ ಗಮನವು ಉಸಿರಾಟ ಮತ್ತು ದೇಹ ಮತ್ತು ಬಾಹ್ಯ ಇಂದ್ರಿಯಗಳ ಚಂಚಲತೆಗಳಿಂದ ಮುಕ್ತವಾದಾಗ, ಅದು ದೇವರ ಮೇಲೆಯೇ ಸಂಪೂರ್ಣ ಏಕಾಗ್ರತೆಯಿಂದ ಕೇಂದ್ರೀಕರಿಸಲು ಶಕ್ತವಾಗುತ್ತದೆ. ಇದನ್ನೇ ಅಷ್ಟಾಂಗ ಯೋಗದ ಆರನೆಯ ಹಂತವಾದ ಧಾರಣ, ಏಕಾಗ್ರತೆ ಎಂದು ಕರೆಯುತ್ತಾರೆ. ಆ ಆಂತರಿಕ ಶಾಂತತೆಯಲ್ಲಿ, ಆತ್ಮದ ಮಹಾ ಧ್ವನಿಯನ್ನು ‘ಓಂ’ ಎಂಬ ಶಬ್ದವಾಗಿ, ಅಥವಾ ‘ಆಮೆನ್’ ಕೇಳಬಹುದು.
ನೀವು ಆ ಮಹಾನ್ ಶಾಂತಿದಾಯಕ ಬ್ರಹ್ಮಾಂಡದ ಧ್ವನಿಯನ್ನು ಆಲಿಸಿ ಅದರಲ್ಲಿ ಲೀನರಾಗುತ್ತಾ ಹೋದಂತೆ, ಪ್ರಜ್ಞೆಯೂ ಅದರೊಂದಿಗೆ ಎಲ್ಲೆಡೆ ವ್ಯಾಪಿಸುತ್ತಾ ವಿಸ್ತಾರಗೊಳ್ಳುತ್ತದೆ. ಇದನ್ನೇ ಧ್ಯಾನ, ದೇವರ ಅನಂತತೆಯ ಭಾವನೆಯ ಮೇಲಿನ ಚಿಂತನೆಯಲ್ಲಿ ತೊಡಗುವ ಸ್ಥಿತಿ ಎನ್ನಲಾಗುತ್ತದೆ.
ಧ್ಯಾನದ ಏಕಾಗ್ರತೆಯೂ ಹಾಗೂ ಒಳ ಅರಿವು ಆಳವಾದಾಗ, ಕೊನೆಯ ಸ್ಥಿತಿಯಾಗಿರುವ ಸಮಾಧಿಗೆ ತಲುಪಲಾಗುತ್ತದೆ, ಅದರಲ್ಲಿ ಧ್ಯಾನಸ್ಥ, ಧ್ಯಾನ ಮತ್ತು ಧ್ಯಾನದ ಗುರಿ (ದೇವರು) ಏಕತೆಯಲ್ಲಿ ಲೀನವಾಗುತ್ತವೆ. ಸಮಾಧಿಯಲ್ಲಿ, ನೀವು ನೇರ ಅನುಭವದ ಮೂಲಕ ದೇವರು ಮತ್ತು ನೀವು ಒಂದೇ ಎಂಬ ಸತ್ಯವನ್ನು ತಿಳಿಯುತ್ತೀರಿ.

ಧ್ಯಾನವೇ ಏಕಮಾತ್ರ ಮಾರ್ಗ. ಯೇಸು ಬೋಧಿಸಿದರು “ನಿರಂತರವಾಗಿ ಪ್ರಾರ್ಥಿಸಿರಿ.” ಇದರ ಅರ್ಥವೇನು? ಅದು ಕೇವಲ ಐದು ನಿಮಿಷಗಳ ಏಕಾಗ್ರತೆಯಿಲ್ಲದೆ ಪ್ರಾರ್ಥನೆ ಮಾಡಿ ನಂತರ ಬೇರೆ ಕೆಲಸಗಳಿಗೆ ಓಡುವುದು ಅಲ್ಲ; ಬದಲಿಗೆ ದೇವರನ್ನು ಅರಿಯಬೇಕೆಂಬ ನಿಮ್ಮ ಆತ್ಮದ ಕೂಗಿಗೆ ಉತ್ತರ ಸಿಗುವವರೆಗೆ ಧ್ಯಾನ ಮಾಡುವುದೇ ಅದರ ಅರ್ಥ.
ಅನಂತ ಪರಮ ಸತ್ಯವಾದ, ಅವನು ನಿರಾಕಾರಿ. ಆದರೂ ಎಲ್ಲರ ತಂದೆ-ತಾಯಿ-ಸ್ನೇಹಿತನಾಗಿ, ಆ ಪರಮಾತ್ಮನು ಆತ್ಮೀಯವಾಗಿ ವೈಯಕ್ತಿಕನಾಗಿದ್ದಾನೆ; ಮತ್ತು ಅಂತೆಯೇ, ಆತನು ನಿಮಗೆ ಉತ್ತರಿಸುವನು. ಆರಂಭದಲ್ಲಿ ಆತನು ಮೌನವಾಗಿರುವನು; ಆದರೆ ನೀವು ನಿಮ್ಮ ಬೇಡಿಕೆಗಳಲ್ಲಿ ಪಟ್ಟುಬಿಡದವರಾಗಿದ್ದರೆ, ಆತನು ಪ್ರತಿಕ್ರಿಯಿಸುವನು. ನಿಮ್ಮಲ್ಲಿ ಕೆಲವರು ಆತನು ನಿಮಗೆ ಪಿಸುಗುಡುವ ಸ್ಥಳಕ್ಕೆ ಸಮೀಪವಾಗುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ.
ದೇವರು ಪ್ರತಿಕ್ರಿಯಿಸುವವರೆಗೆ ಸೋಲೊಪ್ಪಿಕೊಳ್ಳಬೇಡಿ: “ನೀನು ನನ್ನೊಂದಿಗೆ ಮಾತಾಡಲೇಬೇಕು ದಿವ್ಯ ತಾಯಿ. ನೀನು ನನ್ನೊಂದಿಗೆ ಮಾತಾಡದಿದ್ದರೆ ನಾನು ಸಾವಿರ ಸಾವುಗಳನ್ನು ಅನುಭವಿಸುತ್ತೇನೆ.” ಯಾವಾಗ ನೀವು ಸಂಪೂರ್ಣ ನಿಷ್ಠೆಯಿಂದ ಪ್ರಾರ್ಥಿಸುತ್ತಿರುವೆನೆಂಬ ನಂಬಿಕೆಯನ್ನು ತಾಯಿಗೆ ಉಂಟುಮಾಡಿದಾಗ, ನಾನು ಹೇಳುತ್ತಿರುವ ಮಾತುಗಳ ಸಾರ್ಥಕತೆಯನ್ನು ನೀವು ಅನುಭವಿಸುತ್ತೀಯೆ.
ನೀವು ಮಾಡುವ ಧ್ಯಾನವು ಎಷ್ಟು ಆಳವಾಗಿರಲಿ ಎಂದರೆ ಅದರ ಪ್ರಭಾವವು ನಿಮ್ಮ ದಿನದ ಎಲ್ಲ ಚಟುವಟಿಕೆಗಳಲ್ಲೂ ಮುಂದುವರಿಯಲಿ. ನಿಮ್ಮನ್ನು ಸೃಷ್ಟಿಸಿದಾತನನ್ನು ಹುಡುಕಲು ಸಾಧ್ಯವಾಗದಷ್ಟೂ ವ್ಯಸ್ತನಾಗಬೇಡಿ. ನೀವು ಲೋಕದ ರಾಜನಾದರೂ, ಏನು ಪ್ರಯೋಜನ? ಎಲ್ಲ ರಾಷ್ಟ್ರಗಳನ್ನೂ ಗೆದ್ದರೂ, ಏನು ಲಾಭ? ಒಂದು ದಿನ ನಿಮ್ಮನ್ನು ನೀವು ಮರ್ತ್ಯರಾಗಿ, ಅಸಹಾಯರಾಗಿ ಕಾಣುತ್ತೀರಿ. ಈ ಜಗತ್ತಿನ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕೆಂಬ ಲಾಲಸೆಯೇಕೆ? ಅವುಗಳನ್ನು ಯಾವುದೇ ಕ್ಷಣದಲ್ಲಾದರೂ ನಿಮ್ಮಿಂದ ಕಸಿದುಕೊಳ್ಳಬಹುದಾಗಿದೆ — ನಿಮ್ಮ ಮರಣದ ಬಾಗಿಲನ್ನು ದಾಟುವಾಗ ಖಚಿತವಾಗಿ ಕಳೆದುಹೋಗುತ್ತವೆ. ಬದಲಾಗಿ, ಯಾವುದನ್ನು ನಿಮ್ಮಿಂದ ಕಸಿದುಕೊಳ್ಳಲಾಗದ ಆ ಪರಮ ಸತ್ಯವನ್ನು ಅರಿಯಲು ಶ್ರಮಿಸಿ. ಧ್ಯಾನ ಮಾಡದವರಿಗೆ ದೇವರು ಅತ್ಯಂತ ಅನಿಶ್ಚಿತನಂತೆ ತೋರುತ್ತಾನೆ; ಆದರೆ ಯೋಗಿಗೆ ಮಾತ್ರ ಅವನು ಅತೀವ ನಂಬಿಕಸ್ಥನಾದ ನಿತ್ಯ ಸತ್ಯನಾಗಿರುವನು. ಮತ್ತು ಯಾರು ಆತನನ್ನು ಕಂಡುಕೊಳ್ಳುತ್ತಾರೋ “ಅವರ ಪ್ರತಿಫಲವು ಮಹತ್ತಾದ್ದಾಗಿದೆ.”
ನಿಜವಾದ ಸಂತೋಷವನ್ನು ನಾನು ಭಾರತದ ಮಹಾನ್ ಯೋಗಿಗಳಲ್ಲಿ ಕಂಡಿದ್ದೇನೆ. ಭೌತಿಕವಾಗಿ ಅವರ ನಿವಾಸ ಕೇವಲ ಬಡ ಗುಹೆಯೇ ಆಗಿರಬಹುದು; ಆದರೆ ಅವರು ದೇವರ ಆನಂದದಲ್ಲಿ ನಗುತ್ತಿರುವ ರಾಜರು, ಎಲ್ಲ ಸೃಷ್ಟಿಯ ಮೇಲಿನ ತಮ್ಮ ಅಧಿಕಾರದಲ್ಲಿ ಸುರಕ್ಷಿತವಾಗಿರುವರು.
ಈ ದೈವ ಪ್ರಜ್ಞೆಯನ್ನು ಹೊಂದುವುದು ನಿಮ್ಮ ಅಂತಿಮವೂ ಅತ್ಯಂತ ಮೌಲ್ಯಮಯವಾದ ಗುರಿಯೆಂಬುದನ್ನು ಅರಿತುಕೊಳ್ಳಿ. ನಾನು ನಿಮಗೆ ಎಲ್ಲಾ ಹಂತಗಳನ್ನು ವಿವರಿಸುತ್ತಿದ್ದೇನೆ, ಏಕೆಂದರೆ ನೀವು ಆ ಗುರಿಗೆ ಹೇಗೆ ತಲುಪಬೇಕೆಂದು ತಿಳಿದುಕೊಳ್ಳಬೇಕು.
ಶಾಂತವಾಗಿ ಕುಳಿತು ಸ್ವಲ್ಪ ಪ್ರಾರ್ಥನೆ ಮಾಡುವುದು ಮಾತ್ರ ದೇವರ ಸಾಕ್ಷಾತ್ಕಾರವನ್ನು ನೀಡುವುದಿಲ್ಲ; ಪ್ರಾರ್ಥನೆ ಮತ್ತು ದೇವರನ್ನು ಪಡೆಯುವ ಬಯಕೆಯೊಂದಿಗೆ ಮೌನವನ್ನು ಕಡೆಯಿರಿ. ಅದರ ಫಲವಾಗಿ ಅದ್ಭುತವಾದ ಅನುಭವವಾಗುವುದು. ನೀವೇ ಪ್ರಯತ್ನಿಸಬೇಕು: ನಾನು ಇಲ್ಲಿ ನಿಮಗೆ ಮಾತುಗಳನ್ನು ಉಣಬಡಿಸಲು ಬರಲಿಲ್ಲ, ಬದಲಾಗಿ ನಿಮ್ಮ ಆತ್ಮವನ್ನು ದೇವರ ಪ್ರೀತಿಯಿಂದ ಪೋಷಿಸಲು ಬಂದಿದ್ದೇನೆ.

ಈ ಬ್ಲಾಗ್ ಪೋಸ್ಟ್‌ನಲ್ಲಿ ಪರಮಹಂಸಜೀ ಅವರು ದೇವರೊಂದಿಗಿನ ನಮ್ಮ ಏಕತ್ವವನ್ನು ಅರಿಯಲು ಪ್ರಾಣಾಯಾಮ ತಂತ್ರಗಳ ಮಹತ್ವವನ್ನು ಉಲ್ಲೇಖಿಸಿದ್ದಾರೆ. ಅತ್ಯುನ್ನತ ಪ್ರಾಣಾಯಾಮ ತಂತ್ರಗಳು ಕ್ರಿಯಾ ಯೋಗ ವಿಜ್ಞಾನದ ಭಾಗವಾಗಿವೆ, ಮತ್ತು ಅವುಗಳನ್ನು ಯೋಗದ ಸತ್ಸಂಗ ಪಾಠಗಳ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಪರಮಹಂಸ ಯೋಗಾನಂದರು ಕ್ರಿಯಾ ಯೋಗ ಧ್ಯಾನ ವಿಜ್ಞಾನದ ಹಂತ ಹಂತದ ವಿಧಾನಗಳು ಹಾಗೂ “ಹೇಗೆ ಬದುಕಬೇಕು” ಎಂಬ ನೈತಿಕ ತತ್ವಗಳನ್ನು ವಿವರಿಸಲು ಯೋಗದ ಸತ್ಸಂಗ ಪಾಠಗಳನ್ನು ಸ್ಥಾಪಿಸಿದರು.