ಯೋಗದಾ ಸತ್ಸಂಗ ಸಮಾಚಾರ

12 ಮೇ, 2017

ಭಾರತ ಸರ್ಕಾರವು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ವೈಎಸ್ಎಸ್ ಅನ್ನು ಗೌರವಿಸಿತು

Postage stamp commemorating the 100th anniversary of Yogoda Satsanga Society.

ಮಾರ್ಚ್ 7, ಒಬ್ಬ ವೈಎಸ್ಎಸ್ ಭಕ್ತನ ಹೃದಯಕ್ಕೆ ಹತ್ತಿರವಾದ ಹಲವಾರು ಪವಿತ್ರ ಘಟನೆಗಳೊಂದಿಗೆ ಸಂಬಂಧ ಹೊಂದಿದೆ. ಅರವತ್ತೈದು ವರ್ಷಗಳ ಹಿಂದೆ, 1952 ರ ಇದೇ ದಿನದಂದು, ಪರಮಹಂಸ ಯೋಗಾನಂದರು ಭಗವಂತ ಮತ್ತು ತಮ್ಮ ಪ್ರೀತಿಯ ಭಾರತದ ಬಗ್ಗೆ ಮಾತನಾಡುತ್ತ ಮಹಾಸಮಾಧಿಯನ್ನು ಹೊಂದಿದರು. 1977 ರಲ್ಲಿ, ಭಾರತ ಸರ್ಕಾರವು ಈ ದಿನದಂದು ಗುರೂಜಿಯವರ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಅವರನ್ನು ಗೌರವಿಸಿತು, ಈ ರೀತಿಯಲ್ಲಿ, ವಿಶ್ವದ ಆಧ್ಯಾತ್ಮಿಕ ಸಂಪತ್ತಿಗೆ ಅವರ ಅಪಾರ ಕೊಡುಗೆಗಳನ್ನು ಔಪಚಾರಿಕವಾಗಿ ಗುರುತಿಸಿತು. ಮತ್ತು ಈ ವರ್ಷ ಮಾರ್ಚ್ 7 ರಂದು, ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಗೌರವಾರ್ಥವಾಗಿ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಪ್ರೇಮಾವತಾರರು ಸ್ಥಾಪಿಸಿದ ಸಂಸ್ಥೆಗೆ ಸೂಕ್ತ ಗೌರವ ಸಲ್ಲಿಸಿದರು. 1,800 ಕ್ಕೂ ಹೆಚ್ಚು ವೈಎಸ್ಎಸ್ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೈಎಸ್‌ಎಸ್‌ನ ನಿರ್ದೇಶಕರ ಮಂಡಳಿಯೂ ಸೇರಿದಂತೆ ಅದರ ಹಲವಾರು ಸನ್ಯಾಸಿಗಳು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಧಾನ ಮಂತ್ರಿಯವರನ್ನು ಸ್ವಾಮಿಗಳಾದ ವಿಶ್ವಾನಂದ ಮತ್ತು ಸ್ಮರಣಾನಂದರು ಪ್ರವೇಶದ್ವಾರದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಸಭಾಂಗಣಕ್ಕೆ ಕರೆದೊಯ್ದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ವೈಎಸ್ಎಸ್ ನಿರ್ದೇಶಕರ ಮಂಡಳಿಯು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಸ್ವಾಮಿ ವಿಶ್ವಾನಂದರು ಪ್ರಧಾನ ಮಂತ್ರಿಯವರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು ಮತ್ತು ಸ್ವಾಮಿ ಸ್ಮರಣಾನಂದರು ಗೌರವಾನ್ವಿತ ಅತಿಥಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಸ್ವಾಮಿ ಸ್ಮರಣಾನಂದರು ತಮ್ಮ ಭಾಷಣವನ್ನು ಭಗವದ್ಗೀತೆಯ ಒಂದು ಶ್ಲೋಕವನ್ನು ಉಲ್ಲೇಖಿಸುತ್ತ ಪ್ರಾರಂಭಿಸಿದರು, ಆ ಶ್ಲೋಕವು, ಪ್ರತಿ ಯುಗದಲ್ಲೂ ಅವತಾರಗಳು ಸದ್ಗುಣಗಳನ್ನು ರಕ್ಷಿಸಲು ಮತ್ತು ದುರ್ಗುಣಗಳನ್ನು ನಾಶಮಾಡಲು ಬರುತ್ತವೆ ಎಂದು ಹೇಳುತ್ತದೆ. ಸ್ವಾಮೀಜಿ ಮುಂದುವರಿಸುತ್ತ, ಒಳಗಿರುವ ಮಾಯೆಯೆಂಬ ಅಸುರರನ್ನು ನಾಶಮಾಡಲು ಭಕ್ತರಿಗೆ ನೆರವಾಗುವುದು ಕೆಲವು ಅವತಾರಗಳ ಧ್ಯೇಯವಾಗಿರುತ್ತದೆ; ಮತ್ತು ನಮ್ಮ ಪ್ರೀತಿಯ ಗುರುದೇವರು ಅಂತಹ ಅವತಾರಗಳಲ್ಲಿ ಒಬ್ಬರು, ಅವರು ಭ್ರಮಾಧೀನ ಮನುಕುಲವನ್ನು ದಿವ್ಯ ಜ್ಞಾನದೆಡೆಗೆ ಮಾರ್ಗದರ್ಶನ ಮಾಡಲು ಬಂದರು, ಎಂದು ಹೇಳಿದರು. ಪರಮಹಂಸಜಿ ಸ್ಥಾಪಿಸಿದ ಸಂಸ್ಥೆಯ ಮಹತ್ವ ಮತ್ತು ಅದರ ಅಗಾಧ ಕೊಡುಗೆಯನ್ನು ಸ್ವಾಮೀಜಿ ವಿವರಿಸಿದರು. “ನಾನು ಇನ್ನು ಮುಂದೆ ದೇಹದಲ್ಲಿ ಇಲ್ಲದಿರುವಾಗ, ಈ ಸಂಸ್ಥೆ ನನ್ನ ದೇಹವಾಗಿರುತ್ತದೆ, “ಎಂಬ ಗುರೂಜಿಯವರ ಮಾತುಗಳನ್ನು ಅವರು ಉಲ್ಲೇಖಿಸಿದರು. ಗುರೂಜಿಯವರ ಸಂಸ್ಥೆಯ ಅಗಾಧ ಪ್ರಭಾವವನ್ನು ಒಂದೊಂದಾಗಿ ಪಟ್ಟಿ ಮಾಡುತ್ತ, ಸ್ವಾಮೀಜಿ, “ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾವು ಅವರದೇ ದೀರ್ಘ ನೆರಳಾಗಿದ್ದು, ಅವರ ಪ್ರೀತಿ, ಆನಂದ, ಜ್ಞಾನ ಮತ್ತು ಸೇವೆಯ ಸಂದೇಶವನ್ನು ಹರಡುವುದನ್ನು ಮುಂದುವರೆಸಿದೆ. ಯೋಗದಾ ಸತ್ಸಂಗ/ಸೆಲ್ಫ್-ರಿಯಲೈಝೇಷನ್‌ ಬೋಧನೆಗಳ ಮೂಲಕ ಲಕ್ಷಾಂತರ ಜನರು ಧರ್ಮದ ನಿಜವಾದ ಅರ್ಥವನ್ನು ಮತ್ತು ಬಹಳ ಮುಖ್ಯವಾಗಿ ಧರ್ಮದ ಅನುಷ್ಠಾನದ ಪರಿಣಾಮಕಾರಿತ್ವವನ್ನು ಅರ್ಥಮಾಡಿಕೊಂಡಿದ್ದಾರೆ. ಯೋಗ ಧ್ಯಾನವು ಎಲ್ಲ ಸತ್ಯಾನ್ವೇಷಕರಿಗೆ ಅವರವರ ಮನೆ ಬಾಗಿಲಲ್ಲೇ ಲಭ್ಯವಿದೆ,” ಎಂದು ಹೇಳಿದರು.

ಸ್ವಾಮಿ ವಿಶ್ವಾನಂದರು ನಮ್ಮ ಪ್ರೀತಿಯ ಸಂಘಮಾತಾ ಮತ್ತು ಅಧ್ಯಕ್ಷೆ ಶ್ರೀ ಶ್ರೀ ಮೃಣಾಲಿನಿ ಮಾತಾರ ಆಶೀರ್ವಾದಗಳನ್ನು ತಿಳಿಯಪಡಿಸಿದರು ಮತ್ತು ಈ ಮಹತ್ವದ ಸಂದರ್ಭದಲ್ಲಿ ಆಕೆಯ ಸಂದೇಶವನ್ನು ಅವರು ಓದಿದರು. ಆಕೆ ತಮ್ಮ ಸಂದೇಶದಲ್ಲಿ ಹೀಗೆ ಬರೆದಿದ್ದಾರೆ:

      ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ದ ಶತಮಾನೋತ್ಸವವನ್ನು ಗೌರವಿಸುವ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆಯ ಈ ವಿಶೇಷ ಸಂದರ್ಭದಲ್ಲಿ, ನಾನು ನಿಮಗೆ ನನ್ನ ಆತ್ಮದ ಶುಭಾಶಯ ಮತ್ತು ದಿವ್ಯ ಪ್ರೀತಿಯನ್ನು ಕಳುಹಿಸುತ್ತೇನೆ. ಈ ಕಾರ್ಯಕ್ರಮದ ಮೂಲಕ ಭಾರತ ಸರ್ಕಾರವು ವೈಎಸ್ಎಸ್ ಮತ್ತು ಅದರ ಸಂಸ್ಥಾಪಕರೂ, ಭಾರತದ ಮಹಾನ್ ಸಂತರಲ್ಲಿ ಒಬ್ಬರೂ ಆದ ಶ್ರೀ ಶ್ರೀ ಪರಮಹಂಸ ಯೋಗಾನಂದರಿಗೆ ಗೌರವ ಸಲ್ಲಿಸುತ್ತಿರುವುದು ನನ್ನಲ್ಲಿ ಅಪಾರ ಸಂತೋಷ ಮತ್ತು ಕೃತಜ್ಞತೆಯನ್ನು ತುಂಬುತ್ತಿದೆ. ಇದನ್ನು ಸಾಧಿಸುವಲ್ಲಿ ಪಾತ್ರವಹಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಭಾರತದ ಸಾರ್ವತ್ರಿಕ ಆಧ್ಯಾತ್ಮಿಕತೆ ಮತ್ತು ಪ್ರಾಚೀನ ಯೋಗ ಧ್ಯಾನ ವಿಜ್ಞಾನವನ್ನು ಹರಡಲು ಅವರು ಅಮೆರಿಕದಲ್ಲಿ ಹೆಚ್ಚಿನ ಸಮಯವನ್ನು ಕಳೆದಿದ್ದರೂ, ಪರಮಹಂಸ ಯೋಗಾನಂದಜಿ ಅವರ ಮಾತೃಭೂಮಿಯ ಮೇಲಿನ ಪ್ರೀತಿ ಮತ್ತು ಕಾಳಜಿ ಎಂದಿಗೂ ಕಡಿಮೆಯಾಗಲಿಲ್ಲ. 1952 ರಲ್ಲಿ ಇದೇ ದಿನದಂದು ಇಹಲೋಕವನ್ನು ತ್ಯಜಿಸುವ ಮೊದಲು ಅವರು ಹೇಳಿದ ಕೊನೆಯ ಮಾತುಗಳು ಪ್ರೀತಿಯ ಭಾರತಕ್ಕೆ ಅವರು ಸಲ್ಲಿಸಿದ ಹೃತ್ಪೂರ್ವಕ ಗೌರವವಾಗಿತ್ತು.

ಈ ಸಂದರ್ಭದಲ್ಲಿ ಸ್ವಾಮಿ ವಿಶ್ವಾನಂದರು ಸಂಘಮಾತಾ ಮತ್ತು ಅಧ್ಯಕ್ಷೆ ಶ್ರೀ ಶ್ರೀ ಮೃಣಾಲಿನಿ ಮಾತಾರವರ ಸಂದೇಶವನ್ನು ಓದಿದರು.

      ಭಾರತದ ಸುದೀರ್ಘ ಇತಿಹಾಸದುದ್ದಕ್ಕೂ ಮತ್ತು ಇಂದಿಗೂ, ಅದರ ಅತ್ಯಂತ ದೊಡ್ಡ ಸಂಪತ್ತು ಮತ್ತು ಶಕ್ತಿ ಎಂದರೆ, ಅದರ ಋಷಿಗಳು ಗ್ರಹಿಸಿ, ಮನುಕುಲಕ್ಕೆ ನೀಡಿದ ಶಾಶ್ವತ ಆಧ್ಯಾತ್ಮಿಕ ಸತ್ಯಗಳನ್ನು ಪಾಲಿಸುತ್ತಿರುವುದು ಮತ್ತು ಸಕ್ರಿಯವಾಗಿ ಅಭಿವ್ಯಕ್ತಿಸುತ್ತಿರುವುದು. ಯುಗಯುಗಾಂತರಗಳಿಂದ, ಮಹಾನ್ ಆತ್ಮಗಳು — ಮಹಾತ್ಮರು, ಸಂತರು, ಅತ್ಯುನ್ನತ ದೈವ ಸಾಕ್ಷಾತ್ಕಾರ ಹೊಂದಿದ ಋಷಿಗಳು — ಆ ಶ್ರೇಷ್ಠ ಮತ್ತು ಅತ್ಯಂತ ಉದಾತ್ತ ಉದ್ದೇಶಕ್ಕಾಗಿ ಸೇವೆ ಸಲ್ಲಿಸಲು ಭಾರತ ಮಾತೆಯ ಮೇಲಿನ ತಮ್ಮ ಮಹಾನ್ ಪ್ರೀತಿಯಿಂದ ಪ್ರೇರಿತರಾಗಿದ್ದಾರೆ. ಅಂತಹ ಒಬ್ಬ ಅನುಕರಣೀಯ ದಿವ್ಯ ವ್ಯಕ್ತಿಯ ಜೀವನಸಾಧನೆಯನ್ನು ಗೌರವಿಸಲು ಇಂದು ಭಾರತ ಸರ್ಕಾರ ಆಯ್ಕೆ ಮಾಡಿಕೊಂಡಿರುವುದು ಭಾರತಕ್ಕೆ ಮಾತ್ರವಲ್ಲದೆ, ಈ ಕಷ್ಟಕಾಲದಲ್ಲಿ ಆಧ್ಯಾತ್ಮಿಕ ಬೆಳಕಿಗಾಗಿ ಅವಳನ್ನು ನೋಡುವ ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಜನರಿಗೆ ಭರವಸೆ ಮತ್ತು ಸ್ಫೂರ್ತಿಯ ಆಳವಾದ ಮೂಲವಾಗಿದೆ.

      ಶ್ರೀ ಶ್ರೀ ಪರಮಹಂಸ ಯೋಗಾನಂದರು ಆಗಾಗ್ಗೆ ಹೇಳುತ್ತಿದ್ದರು, “ನಿಮ್ಮನ್ನು ನೀವು ಸುಧಾರಿಸಿಕೊಂಡರೆ ನೀವು ಸಾವಿರಾರು ಜನರನ್ನು ಸುಧಾರಿಸುವಿರಿ.” ಭಾರತದ ದೈವಿಕ ಮತ್ತು ಸಾರ್ವತ್ರಿಕ ವಿಜ್ಞಾನವಾದ ಯೋಗ ಮತ್ತು ಧ್ಯಾನವು ನಮ್ಮ ನಡವಳಿಕೆ ಮತ್ತು ಆಲೋಚನಾ ಕ್ರಮಗಳಲ್ಲಿ ಶಾಶ್ವತವಾದ ಸಕಾರಾತ್ಮಕ ಪರಿವರ್ತನೆಗಳನ್ನು ತರುವ ಅತ್ಯಂತ ಪರಿಣಾಮಕಾರಿ ವಿಧಾನಗಳನ್ನು ಒಳಗೊಂಡಿದೆ. ಪರಮಹಂಸ ಯೋಗಾನಂದಜಿಯವರ ಸಂಸ್ಥೆಯ ಮುಖ್ಯ ಗುರಿ ಮತ್ತು ಆದರ್ಶಗಳಲ್ಲಿ ಒಂದೆಂದರೆ, ಭಾರತದ ಮಹಾನ್ ಋಷಿಗಳು ಸಹಸ್ರಾರು ವರ್ಷಗಳಿಂದ ಕಲಿಸಿದ ಧ್ಯಾನದ ವೈಜ್ಞಾನಿಕ ತಂತ್ರಗಳ ಜ್ಞಾನವನ್ನು ಎಲ್ಲಾ ರಾಷ್ಟ್ರಗಳಲ್ಲಿ ಪ್ರಸಾರ ಮಾಡುವುದು, ಇದರ ಮೂಲಕ ಪ್ರತಿಯೊಬ್ಬ ವ್ಯಕ್ತಿಯು- ಯಾವುದೇ ರಾಷ್ಟ್ರೀಯತೆ, ಜಾತಿ ಅಥವಾ ಧರ್ಮದವನಾಗಿದ್ದರೂ — ಅವನು ತನ್ನದೇ ದೈವತ್ವವನ್ನು ಅರಿತುಕೊಳ್ಳಬಹುದು ಹಾಗೂ ಆಂತರಿಕ ಶಾಂತಿ, ಪ್ರೀತಿ ಮತ್ತು ಆನಂದವನ್ನು ಅನುಭವಿಸಬಹುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗೆ ಶಾಂತಿಯನ್ನು ಹೊಂದಿರುವಾಗ, ವಿಶ್ವ ಶಾಂತಿಯು ತಾನಾಗಿಯೇ ಉಂಟಾಗುತ್ತದೆ.

      ಈ ವಿಶೇಷ ದಿನದಂದು ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆ ಸಮಯ ಮಾಡಿಕೊಂಡು ವೈಯಕ್ತಿಕವಾಗಿ ಬಂದುದಕ್ಕಾಗಿ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ನನ್ನ ಆಳವಾದ ಕೃತಜ್ಞತೆಗಳು. ವೈಎಸ್ಎಸ್ ಶತಮಾನೋತ್ಸವದ ಸ್ಮರಣಾರ್ಥ ಅಂಚೆಚೀಟಿಯನ್ನು ಸ್ವತಃ ಯೋಗದ ಉತ್ಕಟ ಸಾಧಕರಾದ ಶ್ರೀ ಮೋದಿಯವರೇ ಬಿಡುಗಡೆ ಮಾಡುತ್ತಿರುವುದು ಬಹಳ ಸೂಕ್ತವಾಗಿದೆ. ಅವರು ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರಸ್ತಾಪಿಸಿದರು ಮತ್ತು ಇದು ವಿಶ್ವಸಂಸ್ಥೆಯಲ್ಲಿ ತೀರ್ಮಾನವಾದ ನಂತರ ದಾಖಲೆಯ ಸಂಖ್ಯೆಯ ರಾಷ್ಟ್ರಗಳು ಬಹಳ ಕಡಿಮೆ ಸಮಯದಲ್ಲಿ ಅಂಗೀಕರಿಸಿದವು — ಅಂತರರಾಷ್ಟ್ರೀಯ ಯೋಗ ದಿನವು ಪ್ರಪಂಚದಾದ್ಯಂತ ಯೋಗ ವಿಜ್ಞಾನದ ಸಾರ್ವತ್ರಿಕ ಸಂದೇಶವನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಮಹತ್ವದ ಉಪಕ್ರಮಕ್ಕಾಗಿ ನಾವು ಶ್ರೀ ಮೋದಿಯವರಿಗೆ ಕೃತಜ್ಞರಾಗಿರುತ್ತೇವೆ.

      ಭಾರತದ ಆಧ್ಯಾತ್ಮಿಕತೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ಭೌತಿಕ ಕಾರ್ಯಪಟುತ್ವದೊಂದಿಗೆ ಒಗ್ಗೂಡಿಸುವ ಮೂಲಕ ಆದರ್ಶ ವಿಶ್ವ ನಾಗರಿಕತೆ ಹೊರಹೊಮ್ಮುತ್ತದೆ ಎಂದು ಪರಮಹಂಸ ಯೋಗಾನಂದಜಿ ಭವಿಷ್ಯ ನುಡಿದಿದ್ದಾರೆ. ಆದ್ದರಿಂದ ಮಾನವ ಪ್ರಜ್ಞೆಯನ್ನು ಅದರ ಮೇಲ್ಮುಖ ವಿಕಸನ ಚಕ್ರದಲ್ಲಿ ಉನ್ನತೀಕರಿಸುವಲ್ಲಿ ಭಾರತಕ್ಕೆ ಒಂದು ಪ್ರಮುಖ ಮತ್ತು ಅಗತ್ಯವಾದ ಪಾತ್ರವಿದೆ. ಶ್ರೀ ಶ್ರೀ ಯೋಗಾನಂದಜಿ ಮತ್ತು ಭಾರತದ ಇತರ ಮಹಾನ್ ಗುರುಗಳು ನಿರೂಪಿಸಿದ ಏಕತೆಯನ್ನು-ನೀಡುವ ಆಧ್ಯಾತ್ಮಿಕ ಬೋಧನೆಗಳ ಅಭ್ಯಾಸದ ಮೂಲಕ ನಮ್ಮ ಮಾನವ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಜಾಗತಿಕ ಶಾಂತಿ, ದಿವ್ಯ ಸಾಮರಸ್ಯ ಮತ್ತು ಸಮೃದ್ಧಿಯನ್ನು ತರುವಂತಹ ಯುಗದತ್ತ ನಾವು ಸಾಗುವಂತಾಗಲಿ ಎಂಬುದೇ ನನ್ನ ಉತ್ಕಟ ಪ್ರಾರ್ಥನೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಭೆಯನ್ನುದ್ದೇಶಿಸಿ ಮಾತನಾಡಲು ಎದ್ದು ನಿಂತ ಕೂಡಲೆ ಎಲ್ಲಡೆ ಪ್ರಚಂಡ ಕರತಾಡನ ಮೊಳಗಿತು. ಅರವತ್ತೈದು ವರ್ಷಗಳ ಹಿಂದೆ ಇದೇ ದಿನದಂದು ಒಂದು ಮಹಾನ್ ಆತ್ಮವು ನಶ್ವರ ದೇಹದ ಮಿತಿಗಳಿಂದ ಮುಕ್ತವಾಗಿ, ಮುಂಬರುವ ಯುಗಗಳಿಗೆ ಪೂಜನೀಯ ವಸ್ತುವಾಯಿತು ಎಂದು ಹೇಳುತ್ತ ಅವರು ತಮ್ಮ ಭಾಷಣದಲ್ಲಿ, ಮಾರ್ಚ್ 7 ರ ಮಹತ್ವವನ್ನು ಎತ್ತಿ ತೋರಿಸಿದರು.

ಶ್ರೀ ಮೋದಿ ಅವರು ಯೋಗಿಯ ಆತ್ಮಕಥೆ ಪುಸ್ತಕದ ಶಕ್ತಿ ಮತ್ತು ಜನಪ್ರಿಯತೆಯತ್ತ ಪ್ರೇಕ್ಷಕರ ಗಮನ ಸೆಳೆದರು, ಈ ಪುಸ್ತಕವು ಈಗ ಎಷ್ಟೊಂದು ಭಾಷೆಗಳಲ್ಲಿ ಲಭ್ಯವಿದೆ ಎಂದರೆ, ವಿಶ್ವದ ಜನಸಂಖ್ಯೆಯ 95% ಜನರು ಅದನ್ನು ತಮ್ಮ ಸ್ವಂತ ಭಾಷೆಯಲ್ಲಿ ಓದಬಹುದು. ಇದನ್ನು ಓದುವವರೆಲ್ಲರೂ ಇದನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ, ಜನರು ದೇವಾಲಯದಲ್ಲಿ ಸ್ವೀಕರಿಸುವ ಎಲ್ಲ ಪ್ರಸಾದವನ್ನೂ ತಿನ್ನದೆ, ಅದನ್ನು ಇತರರೊಂದಿಗೆ ಹಂಚಿಕೊಂಡು ಅಪಾರ ಸಂತೋಷವನ್ನು ಅನುಭವಿಸುವಂತೆಯೇ, ಎಂದು ಅವರು ಹೇಳಿದರು. ಹೀಗೇಕೆಂದರೆ ಯೋಗಾನಂದಜಿಯವರ ಜೀವನ ಮತ್ತು ಸಂದೇಶವು ದೇವಾಲಯದಿಂದ ಪಡೆದ ಪ್ರಸಾದದಷ್ಟೇ ಪವಿತ್ರ ಮತ್ತು ಪಾವನವಾಗಿದೆ ಎಂದು ಪ್ರಧಾನಿ ಹೇಳಿದರು.

ಗುರೂಜಿಯವರ ಮಾತೃಭೂಮಿಯ ಮೇಲಿನ ಆಳವಾದ ಪ್ರೀತಿ ಮತ್ತು ಭಕ್ತಿಗೆ ಹಾಗೂ ಅದಕ್ಕೆ ಸಲ್ಲಿಸಿದ ಸೇವೆಗೆ ಗೌರವ ಸಲ್ಲಿಸುತ್ತಾ, ಪ್ರಧಾನ ಮಂತ್ರಿಗಳು ಗುರೂಜಿಯವರ “ಮೈ ಇಂಡಿಯಾ (ನನ್ನ ಭಾರತ)” ಕವಿತೆಯನ್ನು ಉಲ್ಲೇಖಿಸಿದರು. ಗುರೂಜಿಯವರ ಕವಿತೆ, “ಸಮಾಧಿ” ಮತ್ತು ಇತರ ಬರಹಗಳ ಬಗ್ಗೆ ತಮ್ಮ ವ್ಯಾಖ್ಯಾನವನ್ನು ಹಂಚಿಕೊಳ್ಳುತ್ತ ಅವರು ಯೋಗ ತತ್ವಶಾಸ್ತ್ರದ ಸೂಕ್ಷ್ಮಾತಿಸೂಕ್ಷ್ಮಗಳ ಬಗ್ಗೆ ಬಹಳ ಸ್ಪಷ್ಟತೆಯಿಂದ ಮಾತನಾಡಿದರು. ಯೋಗದಾ ಸತ್ಸಂಗ ಸೊಸೈಟಿ ಮಾಡಿದ ಶ್ಲಾಘನೀಯ ಕಾರ್ಯವನ್ನು ಪ್ರಶಂಸಿಸಿದ ಪ್ರಧಾನಿಯವರು, ಯೋಗಾನಂದಜಿಯವರ ನಿಸ್ವಾರ್ಥ, ನಿರ್ಮೋಹ ಸೇವೆಯಿಂದಾಗಿ ಸಂಸ್ಥೆಯು ಕೇವಲ ಒಂದು ಶತಮಾನವನ್ನು ದಾಟಿರುವುದಷ್ಟೇ ಅಲ್ಲ, ಬದಲಿಗೆ ಅದರ ಸಂಸ್ಥಾಪಕರ ಉತ್ಸಾಹಪೂರ್ಣ ಉಪಸ್ಥಿತಿಯಿಂದಾಗಿ ಅಭಿವೃದ್ಧಿ ಹೊಂದುತ್ತಿದೆ ಮತ್ತು ತುಡಿಯುತ್ತಿದೆ ಎಂದು ಹೇಳಿದರು. ವೈಎಸ್ಎಸ್ ಗುರೂಜಿಯವರ ಬೋಧನೆಗಳ ಶುದ್ಧತೆಯನ್ನು ಮುಖ್ಯ ವಿಷಯದಿಂದ “ದುರ್ಬಲಗೊಳ್ಳಲು ಅಥವಾ ಬದಲಾಗಲು” ಬಿಡದೆ ಯಶಸ್ವಿಯಾಗಿ ಜೀವಂತವಾಗಿರಿಸಿದೆ, ಎಂದು ಪ್ರಧಾನಿ, ಒಂದು ಕುಟುಂಬವನ್ನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಸಾದೃಶ್ಯವನ್ನು ಬಳಸಿಕೊಂಡು ಹೇಳಿದರು.

ಮಹಾನ್ ಸಂತ ಕಬೀರರ ಕವಿತೆಯ ಕೆಲವು ಸಾಲುಗಳನ್ನು ಉದ್ಧರಿಸುತ್ತ, ಪ್ರಧಾನಿಯವರು ಪರಮಹಂಸ ಯೋಗಾನಂದಜಿಯವರ ಬಗ್ಗೆ ತಮ್ಮ ಗೌರವ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಯೋಗಿಗಳು ಅಮರರು; ಅವರು ಎಂದಿಗೂ ಕಣ್ಮರೆಯಾಗುವುದೂ ಇಲ್ಲ ಅಥವಾ ಅಳಿಯುವುದೂ ಇಲ್ಲ, ಬದಲಿಗೆ ನಮ್ಮೊಂದಿಗೆ ಶಾಶ್ವತವಾಗಿ ಇರುತ್ತಾರೆ ಎಂದು ಅವರು ಹೇಳಿದರು. ಯಾರ ಚೇತನವು ಸದಾ ಜೀವಂತವಾಗಿದೆಯೋ ಅಂತಹ ಒಬ್ಬರ ಬಗ್ಗೆ ತಿಳಿದುಕೊಳ್ಳುವುದು ನನ್ನ ಸೌಭಾಗ್ಯವಾಗಿತ್ತು ಎಂದು ಹೇಳುವ ಮೂಲಕ ಅವರು ತಮ್ಮ ಭಾಷಣವನ್ನು ಮುಗಿಸಿದರು. ಗುರೂಜಿ ಪ್ರಾರಂಭಿಸಿದ ಮಹಾನ್ ಸಂಪ್ರದಾಯಕ್ಕೆ, ಎಲ್ಲಾ ಸಂತರಿಗೆ ಮತ್ತು ಎಲ್ಲಾ ಸತ್ಯಾನ್ವೇಷಕರಿಗೆ ವಂದಿಸುತ್ತ ಪ್ರಧಾನಿಯವರು ತಮ್ಮ ಭಾಷಣವನ್ನು ಕೊನೆಗೊಳಿಸಿದರು.

ಪ್ರಧಾನ ಮಂತ್ರಿಯವರ ನೇರ ನುಡಿಗೆ ಜನರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಗುರೂಜಿಯವರ ಮೈ ಇಂಡಿಯಾ ಕವಿತೆಯ ಹಿಂದಿ ಅನುವಾದದ ಕಟ್ಟು ಹಾಕಿಸಿದ ಪ್ರತಿಯನ್ನು ಪ್ರಧಾನ ಮಂತ್ರಿಯವರಿಗೆ ನೀಡಲಾಯಿತು. ಮಾನ್ಯ ಪ್ರಧಾನ ಮಂತ್ರಿಯವರು ತಮ್ಮ ಭಾಷಣದಲ್ಲಿ ಅದೇ ಕವಿತೆಯ ಸಾಲುಗಳನ್ನು ಹೇಳಿದ್ದು ನಿಜಕ್ಕೂ ದಿವ್ಯ ಕಾಕತಾಳೀಯವಾಗಿತ್ತು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ, ಅಂಚೆಚೀಟಿ ಆಲ್ಬಮ್ ಅನ್ನು ಪ್ರದರ್ಶಿಸುತ್ತಿದ್ದಾರೆ. ವೈಎಸ್ಎಸ್ ಮಂಡಳಿಯ ಸದಸ್ಯರು (ಎಡದಿಂದ ಬಲಕ್ಕೆ) ಸ್ವಾಮಿಗಳಾದ ಶ್ರದ್ಧಾನಂದ, ಶುದ್ಧಾನಂದ, ಸ್ಮರಣಾನಂದ, ವಿಶ್ವಾನಂದ ಮತ್ತು ನಿತ್ಯಾನಂದರ ಜೊತೆಗೆ ಶ್ರೀ ಕಮಲ್ ನೈನ್ ಬಕ್ಷಿ ಕೂಡ ಇದ್ದಾರೆ.

ಈ ಕಾರ್ಯಕ್ರಮವನ್ನು ಮುದ್ರಣಾಲಯದ ಸಿಬ್ಬಂದಿಯು ಮುದ್ರಣದಲ್ಲಿ, ಟಿವಿ ಮತ್ತು ಆನ್‌ಲೈನ್ ಮಾಧ್ಯಮಗಳ ಚಾನಲ್‌ಗಳಲ್ಲಿ ವ್ಯಾಪಕವಾಗಿ ವರದಿ ಮಾಡಿತು. ಸ್ಮರಣಾರ್ಥ ಅಂಚೆಚೀಟಿಯ ಮೊದಲ ದಿನದ ಮುಖಪುಟವನ್ನು ದೇಣಿಗೆ ಆಧಾರದ ಮೇಲೆ ನೆನಪಿನ ಕಾಣಿಕೆಯಾಗಿ ಲಭ್ಯವಾಗುವಂತೆ ಮಾಡಲಾಯಿತು. ಇದು ನಿಜಕ್ಕೂ ವೈಎಸ್‌ಎಸ್‌ನ ಶತಮಾನೋತ್ಸವಕ್ಕೆ ಸೂಕ್ತವಾದ ಕಾರ್ಯಕ್ರಮವಾಗಿತ್ತು ಮತ್ತು ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರ ನೆನಪಿನಲ್ಲಿ ದೀರ್ಘಕಾಲ ಉಳಿಯುತ್ತದೆ. ಇದನ್ನು ಯಶಸ್ವಿಯಾಗಿ ಮುಗಿಸಲು ಅಪಾರ ಭಕ್ತಿ ಮತ್ತು ಸಮರ್ಪಣಾಭಾವದಿಂದ ಹಗಲೂರಾತ್ರಿ ಕೆಲಸ ಮಾಡಿದ ಎಲ್ಲಾ ಸ್ವಯಂಸೇವಕರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಇದನ್ನು ಹಂಚಿಕೊಳ್ಳಿ