ರಾಷ್ಟ್ರಪತಿ ಭವನಕ್ಕೆ ವೈಎಸ್ಎಸ್ ಸನ್ಯಾಸಿಗಳ ಭೇಟಿ

16 ಡಿಸೆಂಬರ್, 2022

ಸ್ವಾಮಿ ಸ್ಮರಣಾನಂದ ಗಿರಿ ಮತ್ತು ಬ್ರಹ್ಮಚಾರಿ ಆದ್ಯಾನಂದ ಅವರು ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ನವೆಂಬರ್ 9, 2022 ರಂದು ಭೇಟಿಯಾದರು. ಅವರು ವೈಎಸ್ಎಸ್ ಸನ್ಯಾಸಿಗಳನ್ನು ಸ್ವಾಗತಿಸಿದರು ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಆಧ್ಯಾತ್ಮಿಕ ಮತ್ತು ದತ್ತಿ ಚಟುವಟಿಕೆಗಳನ್ನು ಶ್ಲಾಘಿಸಿದರು. ಪರಮಹಂಸ ಯೋಗಾನಂದಜಿ ಅವರ ಬಗ್ಗೆ ಅಪಾರ ಗೌರವವನ್ನು ವ್ಯಕ್ತಪಡಿಸುತ್ತಾ ಅವರು ಹೇಳಿದರು: “ಪರಮಹಂಸ ಯೋಗಾನಂದಜಿ ಅವರ ಮುಖವು ಅಲೌಕಿಕ ತೇಜಸ್ಸಿನಿಂದ ಕೂಡಿದೆ. ಅವರು [ಜಗತ್ತಿಗೆ] ಮಾನವಕುಲಕ್ಕೆ ಬೇಕಾದ ಆಹಾರ, ಬಟ್ಟೆ ಮತ್ತು ವಸತಿಗಿಂತ ಹೆಚ್ಚಿನದನ್ನು ನೀಡಿದರು. ಅವರು ಒಬ್ಬ ಮಹಾನ್ ಋಷಿ, ಅನೇಕ ಮಹಾನ್ ವ್ಯಕ್ತಿಗಳಂತೆ, ಅವರು ಕಡಿಮೆ ವಯಸ್ಸಿನಲ್ಲೇ ತಮ್ಮ ದೇಹವನ್ನು ತೊರೆದರು, ಆದರೆ ಅವರ ಆಧ್ಯಾತ್ಮಿಕ ಕೊಡುಗೆಯು ಅಪಾರವಾಗಿದೆ. ನಾನು ವೈಎಸ್‌ಎಸ್ ರಾಂಚಿ ಆಶ್ರಮಕ್ಕೆ, ಅದರಲ್ಲೂ ಪರಮಹಂಸಜಿಯವರು ಪೋಷಿಸಿದ ಲಿಚ್ಚಿ ಮರಕ್ಕೆ ಭೇಟಿ ನೀಡಿದಾಗಲೆಲ್ಲ ನಾನು ಮಹತ್ವದ ಆಧ್ಯಾತ್ಮಿಕ ಸ್ಪಂದನಗಳನ್ನು ಅನುಭವಿಸಿದ್ದೇನೆ. ಈ ಲಿಚಿಗಳು ಇತರ ಲಿಚಿಗಳಿಗಿಂತ ಭಿನ್ನವಾಗಿವೆ ಎಂದು ನಾನು ಯಾವಾಗಲೂ ಗ್ರಹಿಸಿದೆ ಮತ್ತು ಉತ್ಕೃಷ್ಟತೆಯನ್ನು ಅನುಭವಿಸಿದೆ.”

ವೈಎಸ್ಎಸ್ ಸನ್ಯಾಸಿಗಳು ಅವರಿಗೆ ವೈಎಸ್ಎಸ್/ಎಸ್ಆರ್‌ಎಫ್ ಅಧ್ಯಕ್ಷ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರ ಪತ್ರ, ಪುಷ್ಪಗುಚ್ಛ, ಇನ್ನರ್‌ ರಿಫ್ಲೆಕ್ಷನ್ಸ್‌ — ಎಸ್ಆರ್‌ಎಫ್ ನಿಗದಿತ ಕಾರ್ಯಕ್ರಮದ ಕ್ಯಾಲೆಂಡರ್ ಮತ್ತು ವೈಎಸ್ಎಸ್‌ನ ಚಿತ್ರಾತ್ಮಕ ಇತಿಹಾಸವನ್ನು ಕೊಡುಗೆಯಾಗಿ ನೀಡಿದರು.

2016ರಲ್ಲಿ‌, ವೈಎಸ್‌ಎಸ್‌ ರಾಂಚಿ ಆಶ್ರಮದಲ್ಲಿ ನಡೆದ ಯುಎನ್ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಅವರನ್ನು ಮುಖ್ಯ ಅತಿಥಿಯನ್ನಾಗಿ ಮಾಡಿ ಗೌರವಿಸಲಾಯಿತು. ಆಗ ಮಾತನಾಡಿದ ಅವರು, ಪರಮಹಂಸ ಯೋಗಾನಂದರ ಬಗ್ಗೆ ತಮ್ಮ ಮೆಚ್ಚುಗೆಯನ್ನು ಹಂಚಿಕೊಂಡರು ಮತ್ತು ಜೀವನದಲ್ಲಿ ಗುರುಗಳ ಆಧ್ಯಾತ್ಮಿಕ ಬೋಧನೆಗಳು ಬಹುಮುಖ್ಯವಾದುದು ಎಂದು ಹೇಳಿದರು. ಮುಂದುವರೆದು, ಆಧ್ಯಾತ್ಮಿಕ ಜ್ಞಾನವನ್ನು ಪಡೆಯುವುದು ಕಷ್ಟವಾಗಬಹುದು ಆದರೆ ಅದಿಲ್ಲದೇ ಭೌತಿಕ ಯಶಸ್ಸು ನಿಷ್ಪ್ರಯೋಜಕವಾಗುತ್ತದೆ ಎಂದು ಹೇಳಿದರು.

ನವೆಂಬರ್ 2017 ರಲ್ಲಿ, ಆಗಿನ ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರೊಂದಿಗೆ ಗಾಡ್ ಟಾಕ್ಸ್ ವಿಥ್ ಅರ್ಜುನನ ಹಿಂದಿ ಅನುವಾದದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಭಾರತದ ಪ್ರಾಚೀನ ಆಧ್ಯಾತ್ಮಿಕ ಸಂಪ್ರದಾಯವನ್ನು ಕಾಪಾಡುವಲ್ಲಿ ಮತ್ತು ಗುರುದೇವರ ಪ್ರಾಯೋಗಿಕ ಮತ್ತು ಆತ್ಮ-ವಿಮೋಚನೆಯ ಬೋಧನೆಗಳನ್ನು ಪ್ರಸಾರ ಮಾಡುವುದರಲ್ಲಿ ವೈಎಸ್‌ಎಸ್ ನ ಪಾತ್ರಕ್ಕಾಗಿ ತಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಇದನ್ನು ಹಂಚಿಕೊಳ್ಳಿ