ದಕ್ಷಿಣೇಶ್ವರದ 75 ವರ್ಷಗಳು

“ಲಾಹಿರಿ ಮಹಾಶಯ ಮತ್ತು ಬಾಬಾಜಿಯವರ ಇಚ್ಛೆ ಹಾಗೂ ಆಶೀರ್ವಾದಗಳಿಂದಾಗಿ, ಗಂಗಾ ನದಿಯ ತೀರದಲ್ಲಿ ದಕ್ಷಿಣೇಶ್ವರದ ನಮ್ಮ ಯೋಗದಾ ಮಠದ ಅತ್ಯಂತ ಸುಂದರ ಸ್ಥಳವನ್ನು ನಾನು ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಾಯಿತು. ಅದು ಕಲ್ಕತ್ತಾದಿಂದ 20 ನಿಮಿಷಗಳಷ್ಟು ದೂರದಲ್ಲಿದ್ದು, ನಮ್ಮ ಕಾರ್ಯ ವ್ಯಾಪ್ತಿಗೆ ಮಹಾ ಸಂಪತ್ತು ಆಗಿದೆ. ಅದರಿಂದ ನನಗೆ ಬಹಳ ಸಂತೋಷವಾಗಿದೆ.”

ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರು 1935-36 ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ, ಕಲ್ಕತ್ತೆಯಿಂದ ರಾಜಶ್ರೀ ಜನಕಾನಂದರಿಗೆ ಹೀಗೆ ಬರೆದರು,”ಬಂಗಾಳದ ಮಕುಟ ಪ್ರಾಯದಂತಿರುವ ನಗರ, ಕಲ್ಕತ್ತಾದಲ್ಲಿ ಒಂದು ಶಾಶ್ವತ ಕೇಂದ್ರವನ್ನು ಪ್ರಾರಂಭಿಸುವ ಸಲುವಾಗಿ ಅವ್ಯಾಹತವಾಗಿ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ಅರಿತು ನೀನು ಬಹಳ ಸಂತೋಷ ಪಡುವೆ ಮತ್ತು ಅದರಲ್ಲಿ ಬಹುಮಟ್ಟಿಗೆ ಸಫಲತೆಯನ್ನು ಪಡೆದಿದ್ದೇನೆ.” ಆ ಅವಧಿಯಲ್ಲಿ ಗುರುದೇವರು ದೇಶದ ಉದ್ದಗಲಕ್ಕೂ ಪ್ರವಾಸದ ಮಧ್ಯದಲ್ಲಿದ್ದರೂ ಸಹ, ಒಂದು ಸೂಕ್ತ ನಿವೇಶನವನ್ನು ಹುಡುಕಲು, ಕಲ್ಕತ್ತಾದ ಸುತ್ತಮುತ್ತಲೂ ಅನೇಕ ಆಸ್ತಿಗಳನ್ನು ಪರಿಶೀಲಿಸಲು ಸಮಯ ಮಾಡಿಕೊಂಡರು. ಆದಾಗ್ಯೂ ಅವರು ಅಮೆರಿಕಾಗೆ ಶೀಘ್ರದಲ್ಲೇ ಹಿಂತಿರುಗಬೇಕಾಗಿದ್ದುದರಿಂದ ಅವರು ಈ ವಿಷಯದ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳಲು ಆಗಲಿಲ್ಲ. ನಂತರ 1939 ರಲ್ಲಷ್ಟೇ, ಈಗಿನ ನಿವೇಶನವನ್ನು — ಗಂಗಾ ನದಿಯ ದಡದಲ್ಲಿ, ಅದರ ಹಣ್ಣಿನ ಮರಗಳು ಮತ್ತು ಹೂವಿನ ಗಿಡಗಳಿಂದ ಕೂಡಿದ ಉತ್ತಮವಾದ ತೋಟಗಳೊಡನೆ — ಅಂತಿಮವಾಗಿ ತೀರ್ಮಾನಿಸಿ, 9 ಅಕ್ಟೋಬರ್ 1939 ರಂದು ಜಮೀನ್ದಾರರೂ, ಕಲ್ಕತ್ತಾದ ಪ್ರಸಿದ್ಧ ವ್ಯಾಪಾರಿ ಎಂದು ಗುರುತಿಸಲ್ಪಟ್ಟವರೂ ಮತ್ತು ಉತ್ಕೃಷ್ಟ ಕ್ರಿಯಾಯೋಗಿ ಶ್ರೀ ಪಂಚಾನನ ಭಟ್ಟಾಚಾರ್ಯರ (ನಮ್ಮ ಪರಮ ಪರಮ ಗುರು ಶ್ರೀ ಶ್ರೀ ಲಾಹಿರಿ ಮಹಾಶಯರ ಶಿಷ್ಯರು) ಶಿಷ್ಯರೂ ಆಗಿದ್ದ ಶ್ರೀ ನಂದೋಲಾಲ್ ಕೋರೂರಿ ಅವರಿಂದ ಖರೀದಿಸಲಾಯಿತು.

ನಂತರದಲ್ಲಿ, ಪರಮಹಂಸಜಿಯವರು ತಮ್ಮ ‘ಯೋಗಿಯ ಆತ್ಮಕಥೆ ‘ಯಲ್ಲಿ ಬರೆದರು, “1939ರಲ್ಲಿ ಗಂಗೆಯ ಎದುರಿಗೆ ದಕ್ಷಿಣೇಶ್ವರದಲ್ಲಿ ಒಂದು ಭವ್ಯವಾದ ಯೋಗದಾ ಮಠವನ್ನು ಲೋಕಾರ್ಪಣೆ ಮಾಡಲಾಗಿದೆ. ಕಲ್ಕತ್ತೆಯ ಉತ್ತರಕ್ಕೆ ಕೆಲವೇ ಮೈಲುಗಳ ದೂರದಲ್ಲಿರುವ ಆ ಆಶ್ರಮವು ನಗರ ನಿವಾಸಿಗಳಿಗೆ ಶಾಂತಿಧಾಮವಾಗಿದೆ. ದಕ್ಷಿಣೇಶ್ವರದ ಆ ಮಠ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಮತ್ತು ಭಾರತದ ಎಲ್ಲೆಡೆ ವ್ಯಾಪಿಸಿರುವ ಅದರ ಶಾಲೆಗಳು, ಕೇಂದ್ರಗಳು ಮತ್ತು ಅಶ್ರಮಗಳೆಲ್ಲದರ ಕೇಂದ್ರ ಕಾರ್ಯಸ್ಥಾನವಾಗಿದೆ.”

ದಯಾಮಾತಾಜಿಯವರು ದಕ್ಷಿಣೇಶ್ವರದಲ್ಲಿ ಆಶ್ರಮ ನಿವಾಸಿಗಳು ಮತ್ತು ಭಕ್ತರ ಜೊತೆಯಲ್ಲಿ ಒಂದು ಔಪಚಾರಿಕ ಸತ್ಸಂಗದಲ್ಲಿ ಮಾತನಾಡುತ್ತಿರುವುದು. ಅವರ ಎಡಭಾಗದಲ್ಲಿ ಇರುವವರು ಶ್ರೀ ಶ್ರೀ ಮೃಣಾಲಿನಿ ಮಾತಾ.
ಶ್ರೀದಯಾಮಾತಾರವರು1964ರಲ್ಲಿ ದಕ್ಷಿಣೇಶ್ವರದ ವೈ ಎಸ್ ಎಸ್ ಮಠದ ಧ್ಯಾನ ಮಂದಿರದಲ್ಲಿ ಕ್ರಿಯಾಯೋಗ ದೀಕ್ಷೆಯ ಸಮಾರಂಭವನ್ನು ನಡೆಸಿಕೊಡುತ್ತಿರುವುದು. ಬಲಗಡೆ ಇರುವವರು ಸ್ವಾಮಿ ಶ್ಯಾಮಾನಂದರು.
ಪುರಿಯ ಗೋವರ್ಧನ ಮಠದ ಪೂಜ್ಯ ಶ್ರೀ ಜಗದ್ಗುರು ಶಂಕರಾಚಾರ್ಯ ಭಾರತಿ ಕೃಷ್ಣತೀರ್ಥರು ಮತ್ತು ಶ್ರೀ ದಯಾಮಾತಾಜಿಯವರು, ಶಂಕರಾಚಾರ್ಯರು ದಕ್ಷಿಣೇಶ್ವರದ ಯೋಗದಾ ಸತ್ಸಂಗ ಮಠಕ್ಕೆ ಮೇ 1959ರಲ್ಲಿ ಭೇಟಿ ನೀಡಿದಾಗ.

ಆನಂದಮಯಿ ಮಾ ಮತ್ತು ದಯಾ ಮಾತಾಜಿ, 1961ರಲ್ಲಿ

ಹಲವಾರು ವರ್ಷಗಳಲ್ಲಿ ಯೋಗದಾ ಸತ್ಸಂಗ ಮಠವು ಗುರುದೇವರ ಅಸಂಖ್ಯಾತ ನೇರ ಭಕ್ತರ ಭೇಟಿಯಿಂದ ಅನುಗ್ರಹಿತವಾಗಿದೆ. ಅವರಲ್ಲಿ ಶ್ರೀ ಶ್ರೀ ದಯಾಮಾತಾ, 55 ವರ್ಷಗಳಿಗೂ ಮಿಗಿಲಾಗಿ ನಮ್ಮ ಸಂಘಮಾತಾ ಮತ್ತು ಅಧ್ಯಕ್ಷರಾಗಿದ್ದವರು, ಈಗಿನ ಸಂಘಮಾತಾ ಮತ್ತು ಅಧ್ಯಕ್ಷರಾದ ಶ್ರೀ ಶ್ರೀ ಮೃಣಾಲಿನಿ ಮಾತಾರವರೂ ಸೇರಿದ್ದಾರೆ. ತಮ್ಮ ಭೌತಿಕ ಉಪಸ್ಥಿತಿಯಿಂದ ಆ ಸ್ಥಳವನ್ನು ಅನುಗ್ರಹಿಸಿರುವ ಇತರ ನೇರ ಸಂನ್ಯಾಸಿ ಶಿಷ್ಯರೆಂದರೆ ಶ್ರೀ ಆನಂದ ಮಾತಾ, ಶ್ರೀ ಸೈಲಸುತ ಮಾತಾ, ಶ್ರೀ ಉಮಾಮಾತಾ, ಶ್ರೀ ಮುಕ್ತಿಮಾತಾ, ಸ್ವಾಮಿ ಆನಂದಮೊಯಿ, ಸ್ವಾಮಿ ಭಕ್ತಾನಂದ ಮತ್ತು ಸ್ವಾಮಿ ಬಿಮಲಾನಂದ ಅವರ ಸ್ಫೂರ್ತಿದಾಯಕ ಸತ್ಸಂಗಗಳು ಮತ್ತು ಕ್ರಿಯಾಯೋಗ ದೀಕ್ಷೆಗಳು, ನಮ್ಮ ಪ್ರಿಯ ಗುರುದೇವರು ದಯಪಾಲಿಸಿರುವ ಯೋಗ ಸಾಧನೆಯ ಜ್ಯೋತಿಯನ್ನು ಇಂದಿಗೂ ಜೀವಂತವಾಗಿರಿಸಿವೆ. ದಕ್ಷಿಣೇಶ್ವರಕ್ಕೆ ಭೇಟಿ ನೀಡುವ ಭಕ್ತರು ಇಂದಿಗೂ ಬಹುವಾಗಿ ಆಧ್ಯಾತ್ಮ ಅನುಗ್ರಹವನ್ನು ಪಡೆಯುವರು ಮತ್ತು ತಮ್ಮದೇ ಭಗವದ್ ಅನ್ವೇಷಣೆಯಲ್ಲಿ ಮತ್ತಷ್ಟು ದೃಢತೆಯನ್ನು ಸಾಧಿಸುವರು.

ಶ್ರೀ ಆನಂದಮಯಿ ಮಾರವರು 1958 ರಲ್ಲಿ ಯೋಗದಾ ಸತ್ಸಂಗ ಮಠದ ಮೈದಾನಕ್ಕೆ ಭೇಟಿ ನೀಡಿದಾಗ, ಯೋಗದಾ ಸತ್ಸಂಗ ಮಠದ ಚಟುವಟಿಕೆಗಳನ್ನು ಕಂಡು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಪುರಿಯ ಗೋವರ್ಧನ ಮಠದ ಶ್ರೀ ಶಂಕರಾಚಾರ್ಯ ಜಗದ್ಗುರು ಭಾರತೀ ಕೃಷ್ಣ ತೀರ್ಥರು( 1958ರಲ್ಲಿನ ಅವರ ಅಮೆರಿಕಾದ ಐತಿಹಾಸಿಕ ಭೇಟಿಯನ್ನು ಎಸ್ಆರ್‌ಎಫ್/ವೈಎಸ್ಎಸ್ ಪ್ರಾಯೋಜಿಸಿತ್ತು) ಯೋಗದಾ ಸತ್ಸಂಗ ಮಠವನ್ನು 1959 ರಲ್ಲಿ ಭೇಟಿ ನೀಡಿ, ಶ್ರೀ ದಯಾ ಮಾತಾಜಿಯವರನ್ನು ಭೇಟಿ ಮಾಡಿದರು. ಅವರು ವೈಎಸ್ಎಸ್ ಮತ್ತು ಎಸ್ಆರ್‌ಎಫ್ ನ ಕಾರ್ಯವನ್ನು ಬಹುವಾಗಿ ಪ್ರಶಂಸಿಸಿದರು.

ತಾವರೆಯ ಕೊಳ, ಯೋಗದಾ ಸತ್ಸಂಗ ಮಠ, ದಕ್ಷಿಣೇಶ್ವರ

ತಾವರೆಯ ಕೊಳ, ಯೋಗದಾ ಸತ್ಸಂಗ ಮಠ, ದಕ್ಷಿಣೇಶ್ವರ

ಇನ್ನೂ ಅನೇಕ ಆಧ್ಯಾತ್ಮ ವ್ಯಕ್ತಿಗಳು, ಪರಮಹಂಸ ಯೋಗಾನಂದಜಿಯವರ ‘ಆಟೋಬಯೋಗ್ರಫಿ ಆಫ್ ಯೋಗಿ ‘ಯನ್ನು ಓದಿ ಅಥವಾ ಈ ಸ್ಥಳದ ಪ್ರಶಾಂತತೆಯ ಬಗ್ಗೆ ಅರಿತವರು, ಇಲ್ಲಿಗೆ ಭೇಟಿ ನೀಡಲು ಆಕರ್ಷಿತರಾಗಿರುವರು. ಅವರಲ್ಲಿ ಕೆಲವರ ಹೃತ್ಪೂರ್ವಕ ಮೆಚ್ಚುಗೆಯ ನುಡಿಗಳು, ಇಲ್ಲಿ ಕೊಡಲಾದ ಸ್ವಯಂಪ್ರೇರಿತ ಹೇಳಿಕೆಗಳಲ್ಲಿ ಪ್ರತಿಫಲಿಸುತ್ತವೆ: “ನಮ್ಮ ತೀರ್ಥಯಾತ್ರೆಯ ಸ್ಥಳಗಳಲ್ಲಿ ಒಂದು ಅತ್ಯಂತ ಮಹತ್ವಪೂರ್ಣ ಸ್ಥಳ,” “ಪವಿತ್ರ ಬೃಂದಾವನ ಮೈದಾನ,” “ಭೂಮಿಯ ಮೇಲಿನ ಸ್ವರ್ಗ,” “ಗಂಗಾ ತೀರದಲ್ಲಿರುವ ಒಂದು ಆಧ್ಯಾತ್ಮಿಕ ಧಾಮ,” “ತಪೋವನದಂತಹ ವಾತಾವರಣ ಇರುವ ಸ್ಥಳ,” “ಮೌನವಾದ ಪ್ರಶಾಂತ ಭವ್ಯತೆಯ ತಾಣ, ಅದರ ದ್ವಾರಗಳಿಂದಾಚೆಗೆ ಊಹಿಸಲಾಗದುದು,” “ಹೃದಯ ಮತ್ತು ಆತ್ಮಗಳ ಮೇಲೆ ಆಧ್ಯಾತ್ಮಿಕ ಪ್ರಭಾವ ಬೀರುವ, ಅಸಾಮಾನ್ಯ ವಾತಾವರಣವುಳ್ಳ ತಾಣ”.

1977ರ ಮಾರ್ಚ್ 7 ರಂದು ದಕ್ಷಿಣೇಶ್ವರದ ಯೋಗದಾ ಸತ್ಸಂಗ ಮಠದ ಪವಿತ್ರ ಮೈದಾನದಲ್ಲಿ ಶ್ರೀ ಶ್ರೀ ಪರಮಹಂಸ ಯೋಗಾನಂದಜಿಯವರ ಆದರ್ಶಪ್ರಾಯ ಜೀವನ ಮತ್ತು ಮಾನವ ಜನಾಂಗಕ್ಕೆ ಅವರು ನೀಡಿದ ಕೊಡುಗೆಗಾಗಿ ಅವರನ್ನು ಗೌರವಿಸಲು, ಭಾರತ ಸರ್ಕಾರದಿಂದ ಅಂಚೆ ಚೀಟಿ ಮತ್ತು ಮೊದಲ ದಿನದ ಲಕೋಟೆಯ ಬಿಡುಗಡೆಯ ವಿಶೇಷ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅಮೆರಿಕಾಗೆ ಭಾರತದ ಮಾಜಿ ರಾಯಭಾರಿ ಡಾಕ್ಟರ್ ಬಿನಯ್ ರಂಜನ್ ಸೇನ್ ಮತ್ತು ಅಂದಿನ ಪೋಸ್ಟ್ ಮಾಸ್ಟರ್ ಜನರಲ್, ಪಶ್ಚಿಮ ಬಂಗಾಳ ವೃತ್ತ, ಶ್ರೀ ಎಸ್ ಕೆ ಘೋಷ್ ರವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ಸೇನ್, ಪರಮಹಂಸಜಿಯವರು ತಮ್ಮ ಪ್ರೀತಿಯ ಭಾರತದ ಕುರಿತಾದ ತಮ್ಮ ಕವನದೊಂದಿಗೆ ತಮ್ಮ ಭಾಷಣವನ್ನು ಮುಗಿಸಿದ ತಕ್ಷಣ, ಯೋಗಾನಂದಜಿ ಮಹಾಸಮಾಧಿಗೆ ಹೋಗುವುದನ್ನು ವೀಕ್ಷಿಸಿದ ಅತ್ಯಂತ ಅಸಾಮಾನ್ಯ ಅನುಭವವನ್ನು ಕುರಿತು ಮಾತನಾಡಿದರು. ಇದು ಲಾಸ್ ಎಂಜಲೀಸ್ ನ ಬಿಲ್ಟ್ ಮೋರ್ ಹೋಟೆಲ್ ನ ಸಭಾಂಗಣದಲ್ಲಿ 7 ಮಾರ್ಚ್ 1952 ರಂದು ನಡೆಯಿತು. ಡಾ. ಸೇನ್ ಮತ್ತೂ ಹೇಳಿದರು, “ಯೋಗಾನಂದಜಿಯಂತಹ ವ್ಯಕ್ತಿಗಳು ಮಾತ್ರ ಮಾನವನ ಜೀವನಕ್ಕೆ ಸಮೃದ್ಧಿ ತರುತ್ತಾರೆ ಎಂಬುದನ್ನು ಯಾರಾದರೂ ಕೇವಲ ಅನುಭವಿಸಬಹುದಷ್ಟೇ….ಅವರಂತಹ ಮಾನವರು ಎಂದಿಗೂ ಮರೆಯಾಗುವುದಿಲ್ಲ…. ತಮ್ಮ ಸಂದೇಶದಿಂದ ಸ್ಫೂರ್ತಿಗೊಂಡ ಲಕ್ಷಾಂತರ ಜನರ ಮನಸ್ಸು ಮತ್ತು ಹೃದಯಗಳಲ್ಲಿ ಅವರು ಜೀವಂತವಾಗಿದ್ದಾರೆ. ಅವರು ಸದಾಕಾಲ ಜೀವಿಸಿರುವರು… ಪರಮಹಂಸಜಿಯವರು ನಿಜವಾಗಿಯೂ, ನಮ್ಮ ವಿಧಿ ಬರಹಕ್ಕೆ ಮಾರ್ಗದರ್ಶನ ನೀಡಬಲ್ಲ ನಕ್ಷತ್ರವೇ ಹೌದು.”

ದಕ್ಷಿಣೇಶ್ವರದಲ್ಲಿ ಸ್ಥಾಪಿಸಲಾಗಿರುವ ಯೋಗದಾ ಸತ್ಸಂಗ ಮಠದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾವು ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ.

7 ಮಾರ್ಚ್ 1977 ರಂದು, ದಕ್ಷಿಣೇಶ್ವರದ ಯೋಗದಾ ಸತ್ಸಂಗ ಮಠದಲ್ಲಿ, ಶ್ರೀ ಶ್ರೀ ಪರಮಹಂಸ ಯೋಗಾನಂದರವರ ಗೌರವಾರ್ಥ, ಭಾರತ ಸರ್ಕಾರವು ಬಿಡುಗಡೆ ಮಾಡಿರುವ ಅಂಚೆಚೀಟಿಯ ಉದ್ಘಾಟನಾ ಸಮಾರಂಭ. ಡಾಕ್ಟರ್ ಬಿನಯ್ ರಂಜನ್ ಸೇನ್, ಅಮೆರಿಕಾಗೆ ಭಾರತದ ಮಾಜಿ ರಾಯಭಾರಿ ಮತ್ತು ಮುಖ್ಯ ಅತಿಥಿ, ಮಾತನಾಡುತ್ತಿರುವವರು. (ಎಡದಿಂದ ಬಲಕ್ಕೆ) ಸ್ವಾಮಿ ಶಾಂತಾನಂದಜಿ, ಶ್ರೀ ಜಿ.ಎನ್. ಜಾಟಿಯ ಮತ್ತು ಶ್ರೀ ಬನಮಾಲಿ ದಾಸ್.

ಇದನ್ನು ಹಂಚಿಕೊಳ್ಳಿ