ಕ್ರಿಯಾ ಯೋಗ ರಾಜಯೋಗ್ಯ ತಂತ್ರ

ಪರಮಹಂಸ ಯೋಗಾನಂದರು ದಾರಿ ತೋರಿಸುತ್ತಿದ್ದಾರೆ

2011ರಲ್ಲಿ ಆಧುನಿಕ ಜಗತ್ತಿನಲ್ಲಿ ಕ್ರಿಯಾ ಯೋಗದ 150 ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ರಹಸ್ಯವಾದ ಹಿಮಾಲಯದ ಗುಹೆಯಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿ, ಆತ್ಮ ವಿಮೋಚನೆಗಾಗಿರುವ ತಂತ್ರಗಳಲ್ಲೇ ಅತ್ಯುನ್ನತವಾಗಿರುವ ಇದು ಎಲ್ಲಾ ದೇಶಗಳಿಗೆ ಹರಡುತ್ತಿದೆ, ಎಲ್ಲೆಡೆ ದೇವರನ್ನು ಹುಡುಕುವವರಿಗೆ ದೇವರೊಂದಿಗೆ ನೇರವಾದ ವೈಯಕ್ತಿಕ ಒಡನಾಟದ ಅನುಭವವನ್ನು ಒದಗಿಸುವ ಕಡೆಗೆ ಸಾಧ್ಯವಾದಷ್ಟು ವೇಗವಾಗಿ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡುತ್ತಿದೆ.

ಈ ಸಂಕಲನವು, ಪ್ರಸ್ತುತ ಯುಗಕ್ಕೆ ವಿಶೇಷ ಅನುಗ್ರಹವಾಗಿ ದೇವರು ಮತ್ತು ಮಹಾನ್ ಗುರುಗಳಿಂದ ಭೂಮಿಯ ಮೇಲೆ ಕಳುಹಿಸಲ್ಪಟ್ಟ ಮೋಕ್ಷದ ಪ್ರಮುಖ ತಂತ್ರವಾದ ಕ್ರಿಯಾ ಯೋಗದ ಸ್ವರೂಪ, ಪಾತ್ರ ಮತ್ತು ಪರಿಣಾಮಕಾರಿತ್ವದ ಬಗ್ಗೆ ಪರಮಹಂಸ ಯೋಗಾನಂದರ ಆಯ್ದ ನುಡಿಗಳನ್ನು ಪ್ರಸ್ತುತಪಡಿಸುತ್ತದೆ.

150 ವರ್ಷಗಳ ಹಿಂದೆ: ಆಧುನಿಕ ಕಾಲಕ್ಕೆ ಯೋಗದ ಪುನರುಜ್ಜೀವನ

ತಮ್ಮ ಮೂವತ್ತಮೂರನೆಯ ವರ್ಷದಲ್ಲಿ ಲಾಹಿರಿ ಮಹಾಶಯರು ಭೂಮಿಯ ಮೇಲೆ ಪುನರ್ಜನ್ಮ ಪಡೆದ ಉದ್ದೇಶದ ನೆರವೇರಿಕೆಯನ್ನು ಕಂಡರು. ಅವರು ಹಿಮಾಲಯದ ರಾಣಿಖೇತ್ ಬಳಿ ತಮ್ಮ ಮಹಾನ್ ಗುರು ಬಾಬಾಜಿಯವರನ್ನು ಭೇಟಿಯಾದರು ಮತ್ತು ಅವರಿಂದ ಕ್ರಿಯಾ ಯೋಗದ ದೀಕ್ಷೆ ಪಡೆದರು.

ಈ ಮಂಗಳಕರ ಘಟನೆ ಕೇವಲ ಲಾಹಿರಿ ಮಹಾಶಯರಿಗೆ ಮಾತ್ರ ಸಂಭವಿಸಿಲ್ಲ; ಇದು ಎಲ್ಲಾ ಮಾನವ ಜನಾಂಗದ ಅದೃಷ್ಟದ ಕ್ಷಣವಾಗಿತ್ತು. ಕಳೆದುಹೋದ, ಅಥವಾ ದೀರ್ಘಕಾಲದಿಂದ ಕಣ್ಮರೆಯಾದ, ಯೋಗದ ಅತ್ಯುನ್ನತ ಕಲೆಯನ್ನು ಮತ್ತೆ ಬೆಳಕಿಗೆ ತರಲಾಯಿತು.

ಗಂಗಾನದಿಯು ಸ್ವರ್ಗದಿಂದ ಭೂಮಿಗೆ ಬಂದಂತೆ, ಪುರಾಣದ ಕಥೆಯಲ್ಲಿ, ಸೊರಗಿ ಹೋಗಿದ್ದ ಭಕ್ತ ಭಗೀರಥನಿಗೆ ದೈವಿಕ ಪ್ರವಾಹವನ್ನು ಅರ್ಪಿಸಿದಂತೆ, 1861 ರಲ್ಲಿ ಕ್ರಿಯಾ ಯೋಗದ ದಿವ್ಯ ನದಿಯು ಹಿಮಾಲಯದ ರಹಸ್ಯ ತಾಣದಿಂದ ವೇಗವಾಗಿ ಮನುಷ್ಯರ ಧೂಳು ಹಿಡಿದ ತಾಣಗಳೆಡೆಗೆ ಹರಿಯಲು ಪ್ರಾರಂಭಿಸಿತು.

ಜನಸಾಮಾನ್ಯರಿಗೆ ಅರಿವಾಗದಂತೆ ವಾರಾಣಸಿಯ ಅಭುಕ್ತ ಮೂಲೆಯೊಂದರಲ್ಲಿ 1861 ರಲ್ಲಿ ಒಂದು ಮಹತ್ತಾದ ಆಧ್ಯಾತ್ಮಿಕ ಪುನರುಜ್ಜೀವನ ಕಾರ್ಯ ಪ್ರಾರಂಭವಾಯಿತು. ಹೂಗಳ ಪರಿಮಳವನ್ನು ಹೇಗೆ ಅದುಮಿಡಲು ಸಾಧ್ಯವಿಲ್ಲವೋ ಹಾಗೆ ಶಾಂತತೆಯಿಂದ ಆದರ್ಶ ಗೃಹಸ್ಥನಂತೆ ಜೀವಿಸುತ್ತಿದ್ದ ಲಾಹಿರೀ ಮಹಾಶಯರು ತಮ್ಮ ಸಹಜವಾದ ಭವ್ಯತೆಯನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಆ ಮುಕ್ತಾತ್ಮನಾದ ಗುರುವಿನ ಬಳಿ ದಿವ್ಯಮಕರಂದವನ್ನರಸಿಕೊಂಡು ಶಿಷ್ಯ ಮಧುಕರಗಳು ಭಾರತದ ಎಲ್ಲಾ ಭಾಗಗಳಿಂದಲೂ ಬರತೊಡಗಿದರು…..

ಪ್ರವಾದಿಯಾಗಿ ಅವರ ಅನನ್ಯತೆಯು, ಎಲ್ಲಾ ಮನುಷ್ಯರಿಗೆ ಮೊದಲ ಬಾರಿಗೆ ಯೋಗದ ಮೂಲಕ ಪಡೆಯಬಹುದಾದ ಸ್ವಾತಂತ್ರ್ಯದ ಬಾಗಿಲಾದ ಕ್ರಿಯಾ ಎಂಬ ಒಂದು ನಿರ್ದಿಷ್ಟ ವಿಧಾನದ ಬಗ್ಗೆ ಪ್ರಾಯೋಗಿಕವಾಗಿ ಒತ್ತಿ ಹೇಳಿರುವುದೇ ಆಗಿದೆ. ಅವರ ಸ್ವಂತ ಜೀವನದ ಪವಾಡಗಳ ಹೊರತಾಗಿ, ಯೋಗದ ಪ್ರಾಚೀನ ಸಂಕೀರ್ಣತೆಗಳನ್ನು ಸಾಮಾನ್ಯರೂ ಗ್ರಹಿಸುವಂತೆ ಪರಿಣಾಮಕಾರಿಯಾಗಿ ಸರಳವಾಗಿಸಿದುದು ಯೋಗಾವತಾರರನ್ನು ಖಂಡಿತವಾಗಿಯೂ ಎಲ್ಲಾ ಅದ್ಭುತಗಳ ಉತ್ತುಂಗಕ್ಕೆ ಏರಿಸಿದೆ.

“ಸ್ವಪ್ರಯತ್ನದ ಮೂಲಕ ದೈವೀ ಐಕ್ಯತೆ ಸಾಧ್ಯ, ಮತ್ತು ಬರಿಯ ತಾತ್ತ್ವಿಕ ನಂಬಿಕೆಗಳ ಮೇಲಾಗಲೀ, ಬ್ರಹ್ಮಾಂಡ ನಿರ್ದೇಶಕನೊಬ್ಬನ ನಿರಂಕುಶ ಇಚ್ಛೆಯ ಮೇಲಾಗಲೀ ಅದು ಅವಲಂಬಿಸುವುದಿಲ್ಲ” ಎಂದು ಯೋಗಾವತಾರರು ಘೋಷಿಸಿದ್ದಾರೆ.

ಕ್ರಿಯಾ ಯೋಗದ ಕೀಲಿಯನ್ನು ಬಳಸುವ ಮೂಲಕ, ಯಾವುದೇ ಮನುಷ್ಯನ ದೈವತ್ವವನ್ನು ನಂಬಲು ಸಾಧ್ಯವಾಗದ ವ್ಯಕ್ತಿಗಳು ಸಹ ಅಂತಿಮವಾಗಿ ತಮ್ಮದೇ ಆದ ಸಂಪೂರ್ಣ ದೈವತ್ವವನ್ನು ನೋಡುತ್ತಾರೆ.

ಒಂದು ಪ್ರಾಚೀನ ವಿಜ್ಞಾನ

ಪರಮಹಂಸ ಯೋಗಾನಂದರು ತಮ್ಮ ಯೋಗಿಯ ಆತ್ಮಕಥೆಯಲ್ಲಿ ಒಂದು ಅಧ್ಯಾಯವನ್ನು “ಕ್ರಿಯಾ ಯೋಗದ ವಿಜ್ಞಾನ” ಕ್ಕೆ ಮೀಸಲಿಟ್ಟಿದ್ದಾರೆ. ಗಾಡ್ ಟಾಕ್ಸ್‌ ವಿತ್‌ ಅರ್ಜುನ: ಭಗವದ್ಗೀತೆ, ಅಧ್ಯಾಯ IV, ಶ್ಲೋಕಗಳು 1–2, 7–8, ಮತ್ತು 28–29, ಮತ್ತು ಅಧ್ಯಾಯ V, 27–28 ಶ್ಲೋಕಗಳ ಕುರಿತಾದ ಅವರ ವ್ಯಾಖ್ಯಾನಗಳು, ಯೋಗ ತತ್ವಗಳನ್ನು ಒಳಗೊಂಡಿರುವ ಮುಂದುವರಿದ ವಿವರಣೆಯನ್ನು ನೀಡುತ್ತವೆ. ಕ್ರಿಯಾ ಯೋಗದ ನಿಜವಾದ ತಂತ್ರಗಳಲ್ಲಿ ಸೂಚನೆಗಳನ್ನು ಕೆಲವು ಪ್ರಾಥಮಿಕ ಆಧ್ಯಾತ್ಮಿಕ ವಿಭಾಗಗಳ ಅವಶ್ಯಕತೆಗಳನ್ನು ಪೂರೈಸುವ ಯೋಗದಾ ಸತ್ಸಂಗ ಪಾಠಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಭಗವದ್ಗೀತೆಯಲ್ಲಿ ಭಗವಂತನು ಅರ್ಜುನನಿಗೆ ಹೀಗೆ ಹೇಳಿದನು:

“ನಾನು ಈ ಅವಿನಾಶಿ ಯೋಗವನ್ನು ವಿವಸ್ವತ್‌ನಿಗೆ (ಸೂರ್ಯದೇವರು) ನೀಡಿದೆ; ವಿವಸ್ವತನು ಮನುವಿಗೆ (ಹಿಂದೂ ನ್ಯಾಯಸಂಹಿತೆಕಾರ) ಈ ಜ್ಞಾನವನ್ನು ರವಾನಿಸಿದನು; ಮನು ಅದನ್ನು ಇಕ್ಷ್ವಾಕುವಿಗೆ (ಕ್ಷತ್ರಿಯರ ಸೂರ್ಯವಂಶದ ಸ್ಥಾಪಕ) ಹೇಳಿದನು. ಹೀಗೆ ಕ್ರಮಬದ್ಧವಾಗಿ ಅನುಕ್ರಮವಾಗಿ ಹಸ್ತಾಂತರಿಸಲ್ಪಟ್ಟದ್ದನ್ನು, ರಾಜಋಷಿಗಳು ತಿಳಿದಿದ್ದರು. ಆದರೆ, ಓ ವೈರಿಗಳ ವಿನಾಶಕನೇ (ಅರ್ಜುನ)! ಕಾಲಾನಂತರದಲ್ಲಿ, ಈ ಯೋಗವು ಭೂಮಿಯ ಮೇಲಿಂದ ಕಣ್ಮರೆಯಾಯಿತು.”  — IV:1–2

ಈ ಎರಡು ಶ್ಲೋಕಗಳು ರಾಜ (“ರಾಜಯೋಗ್ಯ”) ಯೋಗದ, ಅಂದರೆ ಆತ್ಮ ಮತ್ತು ಪರಮಾತ್ಮನನ್ನು ಒಂದುಗೂಡಿಸುವ ಶಾಶ್ವತವಾದ, ಅಪರಿವರ್ತನೀಯವಾದ ವಿಜ್ಞಾನದ ಐತಿಹಾಸಿಕ ಪ್ರಾಚೀನತೆಯನ್ನು ಘೋಷಿಸುತ್ತವೆ. ಅದೇ ಸಮಯದಲ್ಲಿ, ಆಂತರಿಕ ಅರ್ಥವನ್ನು ಗ್ರಹಿಸಿದರೆ, ಅವು — ಆತ್ಮವು ವಿಶ್ವಾತ್ಮಕ ಪ್ರಜ್ಞೆಯ ಸ್ಥಿತಿಯಿಂದ ಮಾನವ ದೇಹದೊಂದಿಗೆ ಗುರುತಿಸಿಕೊಳ್ಳುವ ಮರ್ತ್ಯ ಸ್ಥಿತಿಗೆ ಇಳಿಯುವ ಹಂತಗಳು ಮತ್ತು ಅದರ ಮೂಲವಾದ ಶಾಶ್ವತ-ಆನಂದಮಯ ಪರಮಾತ್ಮನೆಡೆಗೆ ಮರಳಲು ಅದು ಅನುಸರಿಸಬೇಕಾದ ಹಾದಿಯ ಬಗ್ಗೆ ಆ ವಿಜ್ಞಾನದಲ್ಲಿರುವ ಸಂಕ್ಷಿಪ್ತ ವಿವರಣೆಯನ್ನು ನೀಡುತ್ತವೆ….

ಆರೋಹಣವು ನಿಖರವಾಗಿ ಅವರೋಹಣದ ವಿರುದ್ಧ ಹಾದಿಯನ್ನು ಅನುಸರಿಸುತ್ತದೆ. ಮನುಷ್ಯನಲ್ಲಿ, ಆ ಹಾದಿಯು ಅನಂತದೆಡೆಗೆ ಇರುವ ಆಂತರಿಕ ಹೆದ್ದಾರಿಯಾಗಿದೆ, ಇದು ಎಲ್ಲಾ ಕಾಲದಲ್ಲಿ, ಎಲ್ಲಾ ಧರ್ಮಗಳ ಅನುಯಾಯಿಗಳಿಗೆ ಭಗವಂತನೊಡನೆ ಒಗ್ಗೂಡುವಿಕೆಗೆ ಇರುವ ಏಕೈಕ ಮಾರ್ಗವಾಗಿದೆ. ನಂಬಿಕೆಗಳು ಅಥವಾ ಅಭ್ಯಾಸಗಳ ಯಾವುದೇ ಪಥವನ್ನು ಅನುಸರಿಸಿ ಜೀವಿ ಆ ವಿಶೇಷ ಹೆದ್ದಾರಿಯನ್ನು ತಲುಪಿದಾಗ, ದೇಹ ಪ್ರಜ್ಞೆಯಿಂದ ಆತ್ಮದ ಕಡೆಗಿನ ಅಂತಿಮ ಆರೋಹಣವು ಎಲ್ಲರಿಗೂ ಒಂದೇ ರೀತಿಯಾಗಿರುತ್ತದೆ: ಜೀವ ಮತ್ತು ಪ್ರಜ್ಞೆಗಳನ್ನು ಇಂದ್ರಿಯಗಳಿಂದ ಬಿಡಿಸಿಕೊಂಡು ಬೆನ್ನುಹುರಿಯಲ್ಲಿರುವ ಸೂಕ್ಷ್ಮ ಶಕ್ತಿ ಕೇಂದ್ರಗಳಲ್ಲಿರುವ ಬೆಳಕಿನ ದ್ವಾರಗಳ ಮೂಲಕ ಮೇಲಕ್ಕೆ ಸೆಳೆದುಕೊಳ್ಳುವುದು, ಈ ಪ್ರಕ್ರಿಯೆಯಲ್ಲಿ, ವಸ್ತು ಪ್ರಜ್ಞೆಯು ಪ್ರಾಣಶಕ್ತಿಯಲ್ಲಿ, ಪ್ರಾಣಶಕ್ತಿಯು ಮನಸ್ಸಿನಲ್ಲಿ, ಮನಸ್ಸು ಆತ್ಮನಲ್ಲಿ ಮತ್ತು ಆತ್ಮವು ಪರಮಾತ್ಮನಲ್ಲಿ ವಿಲೀನಗೊಳ್ಳುತ್ತವೆ.

ಈ ಆರೋಹಣದ ವಿಧಾನವೇ ರಾಜಯೋಗ, ಇದು ಪ್ರಾರಂಭದಿಂದಲೂ ಸೃಷ್ಟಿಯ ಅವಿಭಾಜ್ಯ ಅಂಗವಾಗಿರುವ ಶಾಶ್ವತ ವಿಜ್ಞಾನವಾಗಿದೆ.

ಪ್ರಸ್ತುತ ಕಾಲದ ಜಗತ್ತಿಗೆ ವಿಶೇಷ ಅನುಗ್ರಹ

ಆಧ್ಯಾತ್ಮಿಕ ಯುಗದಿಂದ ಭೌತಿಕ ಯುಗಕ್ಕೆ ಮಾನವನ ಅವರೋಹಣದಲ್ಲಿ, ಯೋಗ ವಿಜ್ಞಾನದ ಜ್ಞಾನವು ಕ್ಷೀಣಿಸುತ್ತದೆ ಮತ್ತು ಮರೆತುಹೋಗುತ್ತದೆ….ಈಗ ಮತ್ತೊಮ್ಮೆ – ಪರಮಾಣು ಯುಗಕ್ಕೆ ಆರೋಹಣಗೊಳ್ಳುತ್ತಿರುವ ಈ ಸಮಯದಲ್ಲಿ, ರಾಜಯೋಗದ ಅಜರಾಮರ ವಿಜ್ಞಾನವು ಕ್ರಿಯಾ ಯೋಗವಾಗಿ ಮಹಾವತಾರ ಬಾಬಾಜಿ, ಶ್ಯಾಮ ಚರಣ್ ಲಾಹಿರಿ ಮಹಾಶಯ, ಸ್ವಾಮಿ ಶ್ರೀ ಯುಕ್ತೇಶ್ವರ್ ಮತ್ತು ಅವರ ಶಿಷ್ಯರ ಅನುಗ್ರಹದಿಂದ ಪುನರುಜ್ಜೀವನಗೊಳ್ಳುತ್ತಿದೆ….

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಬೋಧನೆಗಳಲ್ಲಿ ಸೂಚಿಸಿರುವಂತೆ ಕೃಷ್ಣನ ಮೂಲ ಯೋಗ ಮತ್ತು ಯೇಸು ಕ್ರಿಸ್ತನ ಮೂಲ ಕ್ರೈಸ್ತಧರ್ಮವನ್ನು ಒಂದುಗೂಡಿಸುವ ಮೂಲಕ ಕ್ರಿಯಾ ಯೋಗ ವಿಜ್ಞಾನವನ್ನು ಒಂದು ವಿಶಿಷ್ಟ ದೈವ ಸಂಕಲ್ಪದಂತೆ ಪ್ರಪಂಚದಾದ್ಯಂತ ಪ್ರಸರಿಸಲು, ಕೃಷ್ಣ, ಯೇಸು ಕ್ರಿಸ್ತ, ಮಹಾವತಾರ್‌ ಬಾಬಾಜಿ, ಲಾಹಿರಿ ಮಹಾಶಯ ಮತ್ತು ಸ್ವಾಮಿ ಶ್ರೀ ಯುಕ್ತೇಶ್ವರರ ಮೂಲಕ ನನ್ನನ್ನು ಆಯ್ಕೆ ಮಾಡಲಾಯಿತು.

ಮಹಾವತಾರ್‌ ಬಾಬಾಜಿ (ನಾನು ಎಂದೆಂದಿಗೂ ಅವರನ್ನು ಕೃಷ್ಣನ ಚೈತನ್ಯದೊಂದಿಗೆ ಒಂದಾದವರು ಎಂದು ಪರಿಗಣಿಸುತ್ತೇನೆ) ಮತ್ತು ಯೇಸು ಕ್ರಿಸ್ತ ಮತ್ತು ನನ್ನ ಗುರು ಮತ್ತು ಪರಮಗುರುಗಳ ಕಾರಣದಿಂದ ಮತ್ತು ಆಶೀರ್ವಾದಗಳಿಂದ ನನ್ನನ್ನು ಪಶ್ಚಿಮಕ್ಕೆ ಕಳುಹಿಸಲಾಯಿತು ಮತ್ತು ಜಗದಾದ್ಯಂತದ ಕ್ರಿಯಾ ಯೋಗ ವಿಜ್ಞಾನದ ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ಒಂದು ಸಾಧನಭೂತನಾಗಿ ಅಲ್ಲಿ ನಾನು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಸ್ಥಾಪನೆಯನ್ನು ಕೈಗೊಂಡೆ.

ಪೂರ್ವದಲ್ಲಿ ಕೃಷ್ಣನು ಯೋಗದ ದಿವ್ಯ ಆದರ್ಶವಾಗಿದ್ದಾನೆ; ಯೇಸು ಕ್ರಿಸ್ತನನ್ನು ಭಗವಂತನು ಪಶ್ಚಿಮದಲ್ಲಿ ಭಗವದ್‌-ಸಂಯೋಗದ ಆದರ್ಶವನ್ನಾಗಿ ಆಯ್ಕೆ ಮಾಡಿದ್ದಾನೆ. ಅದನ್ನು ಯೇಸುವು ತಿಳಿದಿದ್ದ ಮತ್ತು ತನ್ನ ಶಿಷ್ಯರಿಗೆ ಭಗವಂತನೊಡನೆ ಆತ್ಮವು ಸಂಯೋಗಗೊಳ್ಳುವ ರಾಜ ಯೋಗ ತಂತ್ರವನ್ನು ಕಲಿಸಿದ ಎಂಬುದು ಗಾಢವಾಗಿ ಸಾಂಕೇತಿಸುವ ಬೈಬಲ್ಲಿನ ಅಧ್ಯಾಯ “ಸಂತ ಜಾನನಿಗೆ ಯೇಸು ಕ್ರಿಸ್ತನ ಜ್ಞಾನಪ್ರಕಾಶನ”*ದಲ್ಲಿ ಸುವ್ಯಕ್ತವಾಗಿದೆ.

ಬಾಬಾಜಿ ಸದಾ ಯೇಸು ಕ್ರಿಸ್ತನೊಂದಿಗೆ ಸಂಸರ್ಗದಲ್ಲಿದ್ದಾರೆ; ಅವರಿಬ್ಬರೂ ಒಟ್ಟುಗೂಡಿ ವಿಮೋಚನೆಯ ಸ್ಪಂದನಗಳನ್ನು ಕಳಿಸುತ್ತಾರೆ ಮತ್ತು ಈ ಯುಗಕ್ಕೆ ಅವರು ಮುಕ್ತಿಯ ಆಧ್ಯಾತ್ಮಿಕ ತಂತ್ರವನ್ನು ನಿಯೋಜಿಸಿದ್ದಾರೆ.

ಕ್ರಿಯಾ ಯೋಗವು ಸತ್ಯದ ಮೇಲೆ ಕೇಂದ್ರೀಕರಿಸುತ್ತದೆ, ಒಳಪಂಗಡಗಳ ಸಿದ್ಧಾಂತಗಳ ಮೇಲಲ್ಲ

ಭಗವದ್ಗೀತೆ ದೇವರು ಅರ್ಜುನನೊಂದಿಗೆ ಮಾತನಾಡುತ್ತಾನೆ

ಭಗವದ್ಗೀತೆಯು ಭಾರತದ ಬಹಳ ಅಚ್ಚುಮೆಚ್ಚಿನ ಯೋಗದ ಸದ್ಗ್ರಂಥ, ದಿವ್ಯ ಸಂಯೋಗದ ವಿಜ್ಞಾನ — ದಿನನಿತ್ಯದ ಜೀವನದಲ್ಲಿಯ ಸಂತೋಷ ಮತ್ತು ಸಂತುಲಿತ ಯಶಸ್ಸಿಗೆ ಒಂದು ಕಾಲಾತೀತ ಅನುಶಾಸನ. ಪರಮಹಂಸ ಯೋಗಾನಂದರ ಗೀತೆಯ ಮೇಲಿನ ಸಮಗ್ರ ಕಾರ್ಯವು ಗಾಡ್‌ ಟಾಕ್ಸ್‌ ವಿತ್‌ ಅರ್ಜುನ: ದಿ ಭಗವದ್ಗೀತ ಎಂಬ ಶೀರ್ಷಿಕೆಯನ್ನು ಹೊಂದಿದೆ — ಭಗವತ್‌-ಸಾಕ್ಷಾತ್ಕಾರದ ರಾಜಯೋಗ್ಯ ವಿಜ್ಞಾನ (ಎರಡು ಸಂಪುಟಗಳು; ಭಾರತದ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದಿಂದ ಪ್ರಕಟಿಸಲಾಗಿದೆ, ಲಾಸ್‌ ಏಂಜಲೀಸ್). ಅವರು ಬರೆದಿದ್ದಾರೆ: “ನನ್ನ ಗುರು ಮತ್ತು ಪರಮಗುರುಗಳು — ಸ್ವಾಮಿ ಶ್ರೀ ಯುಕ್ತೇಶ್ವರ್‌, ಲಾಹಿರಿ ಮಹಾಶಯ ಮತ್ತು ಮಹಾವತಾರ್‌ ಬಾಬಾಜಿ — ಇಂದಿನ ಯುಗದ ಋಷಿಗಳಾಗಿದ್ದಾರೆ, ತಾವೇ ಭಗವತ್‌-ಸಾಕ್ಷಾತ್ಕಾರ ಹೊಂದಿದ ಜೀವಂತ ಸದ್ಗ್ರಂಥಗಳಾಗಿರುವ ಮಹಾನ್‌ ಪುರುಷರು‌. ಅವರು‌, ದೀರ್ಘ-ಕಾಲದಿಂದ ಕಣ್ಮರೆಯಾಗಿದ್ದ ಕ್ರಿಯಾ ಯೋಗದ ವೈಜ್ಞಾನಿಕ ತಂತ್ರದ ಜೊತೆಗೆ — ಮೂಲಭೂತವಾಗಿ ಯೋಗ ವಿಜ್ಞಾನಕ್ಕೆ ಮತ್ತು ನಿರ್ದಿಷ್ಟವಾಗಿ ಕ್ರಿಯಾ ಯೋಗಕ್ಕೆ ಸಂಬಂಧಪಟ್ಟಂತೆ ಪವಿತ್ರ ಭಗವದ್ಗೀತೆಯ ಒಂದು ಹೊಸ ದಿವ್ಯಜ್ಞಾನವನ್ನು ಮುಂದಿನ ಪೀಳಿಗೆಗೆ ಬಿಟ್ಟುಹೋಗಿದ್ದಾರೆ.

ಲಾಹಿರಿ ಮಹಾಶಯರ ಬೋಧನೆಯು ವಿಶೇಷವಾಗಿ ಆಧುನಿಕ ಯುಗಕ್ಕೆ ಅನುರೂಪವಾಗಿದೆ. ಏಕೆಂದರೆ, ಅದು ಯಾರನ್ನೂ ಸೈದ್ಧಾಂತಿಕವಾಗಿ ನಂಬಲು ಹೇಳುವುದಿಲ್ಲ, ಬದಲಾಗಿ “ನಿಜ ಯಾವುದು?” ಎಂದು ತಮ್ಮ ಬಗ್ಗೆ ಮತ್ತು ಭಗವಂತನ ಬಗ್ಗೆ ಕೇಳುವ ನಿರಂತರ ಪ್ರಶ್ನೆಗೆ ಕ್ರಿಯಾ ಯೋಗದ ಖಚಿತವಾದ ತಂತ್ರಗಳ ಅಭ್ಯಾಸದ ಮೂಲಕ ವೈಯಕ್ತಿಕ ಅರಿವಿನಿಂದ ಉತ್ತರವನ್ನು ಕಂಡುಕೊಳ್ಳುವಂತೆ ಹೇಳುತ್ತದೆ.

ಸತ್ಯವು ಸಿದ್ಧಾಂತವಲ್ಲ, ತತ್ವಶಾಸ್ತ್ರದ ಊಹಾಪೋಹ ಪದ್ಧತಿಯಲ್ಲ. ಸತ್ಯವು ವಾಸ್ತವತೆಯ ನಿಖರವಾದ ಸಾದೃಶ್ಯ. ಮನುಷ್ಯನಿಗೆ, ಸತ್ಯವು ಅವನ ನೈಜ ಪ್ರಕೃತಿಯ, ಆತ್ಮವು ಅವನ ಸ್ವಯಂ ಎಂಬ ಅಲುಗಾಡದ ಜ್ಞಾನ.

ಅಂತಿಮವಾಗಿ ಭಗವಂತ ಮತ್ತು ಸೃಷ್ಟಿಯ ಆತ್ಯಂತಿಕ ರಹಸ್ಯಗಳ ಎಲ್ಲ ಊಹಾಪೋಹಗಳು ಅಪ್ರಯೋಜಕವಾದಂಥವು. ಕಣ್ಣಿಗೆ ರಾಚುವಂಥ ವಾಸ್ತವಾಂಶವು ಸದಾ ನಮ್ಮೊಡನಿರುತ್ತದೆ: ಮನುಷ್ಯನು ಇಲ್ಲಿ ಮತ್ತು ಈಗಲೇ ಮನುಷ್ಯ ಜನ್ಮದ ಯಾತನಾಮಯ ಪರೀಕ್ಷೆಗಳನ್ನು ಹಾದುಹೋಗುತ್ತಿದ್ದಾನೆ. ಹೇಗೆ ಕೈದಿಗಳು ಅವರ ಸ್ವಾತಂತ್ರ್ಯವನ್ನು ಮತ್ತೆ ಪಡೆದುಕೊಳ್ಳಲು ನಿರಂತರವಾಗಿ ಸಂಚು ಮಾಡುತ್ತಿರುತ್ತಾರೋ, ಹಾಗೆ ಮನುಷ್ಯರಲ್ಲಿ ಜ್ಞಾನಿಯಾದವನು ಮರಣಾಧೀನತೆಯ ಬಂಧನವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ.

ಕ್ರಿಯಾ ಯೋಗವು ಕೇವಲ ಭಗವಂತನೆಡೆಗೆ ಆತ್ಮವು ಆರೋಹಣಗೊಳ್ಳುವ ಸಾರ್ವತ್ರಿಕ ರಾಜಮಾರ್ಗವನ್ನು ತೋರಿಸುವುದಷ್ಟೇ ಅಲ್ಲದೆ, ಮಾನವಕೋಟಿಗೆ ದಿನನಿತ್ಯ ಉಪಯೋಗಿಸಬಲ್ಲ ತಂತ್ರವನ್ನು ನೀಡುತ್ತದೆ, ಅದರ ಅಭ್ಯಾಸದಿಂದ ಭಕ್ತನು ಗುರುಗಳ ಸಹಾಯದಿಂದ ಭಗವಂತನ ಸಾಮ್ರಾಜ್ಯವನ್ನು ಪುನಃ ಪ್ರವೇಶಿಸಬಹುದು. ಒಂದು ಸೈದ್ಧಾಂತಿಕ ಬೋಧನೆಯು ಕೇವಲ ಇನ್ನೊಂದಕ್ಕೆ ಮಾತ್ರ ದಾರಿ ತೋರಿಸುತ್ತದೆ, ಆದರೆ ಕ್ರಿಯಾ ಯೋಗದ ಯಾರೊಬ್ಬ ನೈಜ ಅಭ್ಯಾಸಿಗನೂ ಕೂಡ ಇದನ್ನು ಭಗವಂತನ ಸಾಮ್ರಾಜ್ಯಕ್ಕೆ ಅತಿ ಸಮೀಪದ ಮಾರ್ಗ ಮತ್ತು ಅತಿ ಶೀಘ್ರವಾಗಿ ಕರೆದೊಯ್ಯುವ ವಾಹನ ಎಂದು ಕಂಡುಕೊಳ್ಳುತ್ತಾನೆ.

ಒಬ್ಬ ನಿರೀಶ್ವರವಾದಿಯೂ ಕೂಡ ಕ್ರಿಯಾದ ನಿಯತ ಅಭ್ಯಾಸದಿಂದ ಪುಟಿದೇಳುವ ಸತತವಾಗಿ-ವೃದ್ಧಿಸುವ ಆನಂದವನ್ನು ಅಲ್ಲಗಳೆಯಲಾರ. ಒಬ್ಬ ಬೋಧಕನಾಗಿ, ಈ ಮಾರ್ಗವನ್ನು ನಾನು ನನ್ನ ಶಾಲೆಯಲ್ಲಿ ಸಂದೇಹಪಡುವ ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸಿದೆ ಮತ್ತು ಅವರು ಬದಲಾಯಿಸಿದ್ದನ್ನು ಕಂಡೆ, ನನ್ನ ಮಾತುಗಳಿಂದಲ್ಲ, ಬದಲಾಗಿ ಇದರ ನಿಯತ ಅಭ್ಯಾಸದಿಂದ ಸಂಭವಿಸಿದ ನಿರಂತರ ಆಹ್ಲಾದವನ್ನುಂಟುಮಾಡುವ ಪರಿಣಾಮಗಳಿಂದಾಗಿ.

ತನ್ನ ಸೈದ್ಧಾಂತಿಕ ರೂಪದಲ್ಲಿ ಧರ್ಮವು ಕೇವಲ ಭಾಗಶಃ ಸಂತೃಪ್ತಿಯನ್ನು ನೀಡುತ್ತದೆ, ಎಂದಿಗೂ ಸಂಪೂರ್ಣವಾಗಿ ಮನದಟ್ಟು ಮಾಡುವುದಿಲ್ಲ. ನನ್ನ ಗುರುಗಳ ಜೀವನ ವಿಧಾನಕ್ಕೆ ನಾನು ಮಾರುಹೋಗಿದ್ದೆ, ಭಾಗಶಃ ಅವರ ಜ್ಞಾನದ ನುಡಿಗಳಿಗಾಗಿ, ಆದರೆ ಪ್ರಮುಖವಾಗಿ ಅಪರಿಮಿತ ಆನಂದದ ದೊಡ್ಡ ಅಲೆಗಳ ಮೇಲೆ ತೇಲಾಡಲು ನನಗೆ ಸಾಧ್ಯವಾಗಿಸಲು ಕಾರಣವಾದ ಕ್ರಿಯಾ ಯೋಗದ ಆಳವಾದ ಮತ್ತು ನಿಯತ ಅಭ್ಯಾಸದ ಮೇಲೆ ಅವರು ನೀಡಿದ ಪ್ರಾಮುಖ್ಯತೆಯಿಂದಾಗಿ. ಲಾಹಿರಿ ಮಹಾಶಯರ ಮಾರ್ಗವು ನನಗೆ ಸತತವಾಗಿ-ವೃದ್ಧಿಸುವ ಆನಂದವನ್ನು ನೀಡುತ್ತಿದೆ ಮತ್ತು ನಿರಂತರವಾಗಿ ನೀಡುತ್ತಿದೆ ಎಂದು ಜಗತ್ತಿಗೆ ಘೋಷಿಸುತ್ತೇನೆ; ಮತ್ತು ಅದೇ ಆನಂದವು ಯಾರೆಲ್ಲರೂ, ಯಾವುದೇ ಮಾನಸಿಕ ಪ್ರವೃತ್ತಿಯುಳ್ಳವರಾದರೂ ಕೂಡ, ಇದನ್ನು ಗಂಭೀರವಾಗಿ ಮತ್ತು ನಿಯತವಾಗಿ ಅಭ್ಯಾಸ ಮಾಡುತ್ತಾರೋ ಅವರೆಲ್ಲರಿಗೂ ಲಭ್ಯವಾಗುತ್ತದೆ ಎಂದು ಸಂಪೂರ್ಣವಾಗಿ ಭರವಸೆ ಕೊಡುತ್ತೇನೆ.

ಪ್ರಾಣಾಯಾಮದ ಕ್ರಿಯಾ ಯೋಗ ವಿಜ್ಞಾನ (ಪ್ರಾಣ-ಶಕ್ತಿಯ ನಿಯಂತ್ರಣ)

ಯಾವುದೇ ಧರ್ಮಕ್ಕೆ ಸೇರಿದ ಭಕ್ತನೂ ಪರೀಕ್ಷಿಸದ ನಂಬಿಕೆಗಳು ಮತ್ತು ಸಿದ್ಧಾಂತಗಳಿಂದ ತೃಪ್ತನಾಗಬಾರದು, ಬದಲಾಗಿ ಅವನು ಭಗವತ್‌-ಸಾಕ್ಷಾತ್ಕಾರವನ್ನು ಹೊಂದಲು ಕ್ರಿಯಾಶೀಲ ಪ್ರಯತ್ನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಭಕ್ತನು, ವ್ರತಾಚರಣೆಯ ಪೂಜೆಯ ತೋರಿಕೆಯ, ಅಥವಾ “ಮೌನಕ್ಕೆ ಶರಣಾಗುವುದರ” ನಿಷ್ಪ್ರಯೋಜಕ ಮಾರ್ಗವನ್ನು ಪಕ್ಕಕ್ಕೆ ಸರಿಸಿ ಭಗವತ್‌-ಸಾಕ್ಷಾತ್ಕಾರದ ವೈಜ್ಞಾನಿಕ ಅಭ್ಯಾಸವನ್ನು ಆರಂಭಿಸಿದಾಗ ಮಾತ್ರ ಭಗವಂತನೊಡನೆಯ ಸಂಸರ್ಗವು ಸಾಧ್ಯವಾಗುತ್ತದೆ.

ಕೇವಲ ಮಾನಸಿಕ ಧ್ಯಾನದಿಂದ ಒಬ್ಬರು ಈ ಗುರಿಯನ್ನು ಸಾಧಿಸಲಾಗುವುದಿಲ್ಲ. ಉಸಿರು, ಪ್ರಾಣಶಕ್ತಿ ಮತ್ತು ಇಂದ್ರಿಯಗಳಿಂದ ಮನಸ್ಸನ್ನು ಬೇರ್ಪಡಿಸುವ ಮತ್ತು ಅಹಂಕಾರವನ್ನು ಆತ್ಮದೊಂದಿಗೆ ಒಂದುಗೂಡಿಸುವ ಆಳವಾದ ಏಕಾಗ್ರತೆ ಮಾತ್ರ ಆತ್ಮಸಾಕ್ಷಾತ್ಕಾರದ ಭಗವತ್‌ಜ್ಞಾನವನ್ನು ಕೊಡುವಲ್ಲಿ ಯಶಸ್ವಿಯಾಗುತ್ತದೆ.

ಪ್ರಾಣ ಶಕ್ತಿಯು ಭೌತವಸ್ತು ಮತ್ತು ಚೇತನದ ನಡುವಿನ ಕೊಂಡಿ. ಬಾಹ್ಯದೆಡೆಗೆ ಪ್ರವಹಿಸುವ ಅದು ಹುಸಿಯಾಗಿ ಮರುಳುಗೊಳಿಸುವ ಇಂದ್ರಿಯಗಳ ಪ್ರಪಂಚವನ್ನು ತೆರೆದು ತೋರಿಸುತ್ತದೆ; ಅದನ್ನು ಆಂತರ್ಯದೊಳಗೆ ತೆಗೆದುಕೊಂಡಾಗ ಪ್ರಜ್ಞೆಯನ್ನು ಶಾಶ್ವತವಾಗಿ ಸಂತೃಪ್ತಿ ನೀಡುವ ಭಗವಂತನ ಆನಂದದೆಡೆಗೆ ಸೆಳೆಯುತ್ತದೆ.

ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಕೋಣೆಗಳಲ್ಲಿ ಧ್ಯಾನ ಮಾಡುತ್ತಿದ್ದರು. ಎರಡೂ ಕೋಣೆಗಳಲ್ಲೂ ಟೆಲಿಫೋನ್‌ ಇತ್ತು. ಎರಡೂ ಕೋಣೆಗಳಲ್ಲೂ ಟೆಲಿಫೋನ್‌ ರಿಂಗ್‌ ಆಯಿತು. ಬೌದ್ಧಿಕ ಮೊಂಡತನವಿರುವವನು ತನಗೆ ತಾನೇ ಹೇಳಿಕೊಂಡ: “ನಾನು ಎಷ್ಟು ಗಾಢವಾಗಿ ಏಕಾಗ್ರನಾಗುತ್ತೇನೆಂದರೆ, ನನಗೆ ಟೆಲಿಫೋನ್‌ ರಿಂಗ್‌ ಆಗುವುದೇ ಕೇಳಿಸದಂತೆ!” ನಿಜ, ಬಾಹ್ಯದಲ್ಲಿ ಸದ್ದುಗದ್ದಲವಿದ್ದರೂ ಅವನು ಆಂತರ್ಯದೊಳಗೆ ಏಕಾಗ್ರನಾಗುವುದರಲ್ಲಿ ಯಶಸ್ವಿಯಾಗಬಹುದು; ಆದರೆ ಅನಾವಶ್ಯಕವಾಗಿ ಅವನು ತನ್ನ ಕೆಲಸವನ್ನು ಗೋಜಲುಗೊಳಿಸಿಕೊಂಡಿದ್ದಾನೆ. ಈ ವ್ಯಕ್ತಿಯನ್ನು ದೃಶ್ಯ, ಶಬ್ದ, ಗಂಧ, ರುಚಿ ಮತ್ತು ಸ್ಪರ್ಶಗಳ ನಿರಂತರವಾದ ಟೆಲಿಫೋನಿನ ಸಂದೇಶಗಳನ್ನು ಮತ್ತು ಪ್ರಾಣ ಶಕ್ತಿಯ ಹೊರಗೆಳೆಯುವ ಸೆಳೆತಗಳನ್ನು ಕಡೆಗಣಿಸುತ್ತಾ ಭಗವಂತನನ್ನು ಕುರಿತು ಧ್ಯಾನ ಮಾಡಲು ಪ್ರಯತ್ನಿಸುವ ಒಬ್ಬ ಜ್ಞಾನ ಯೋಗಿಗೆ ಹೋಲಿಸಬಹುದು.

ನಮ್ಮ ನಿರೂಪಣೆಯ ಎರಡನೆಯ ವ್ಯಕ್ತಿಯು ಟೆಲಿಫೋನಿನ ಕರ್ಕಶ ಶಬ್ದವನ್ನು ಕಡೆಗಣಿಸುವ ತನ್ನ ಶಕ್ತಿಯ ಬಗ್ಗೆ ಯಾವ ಭ್ರಮೆಯನ್ನೂ ಹೊಂದಿರಲಿಲ್ಲ. ಅವನು ಎಚ್ಚರಿಕೆಯಿಂದ ಎಲೆಕ್ಟ್ರಿಕಲ್‌ ಪ್ಲಗ್‌ ಅನ್ನು ತೆಗೆದ ಮತ್ತು ಸಾಧನವನ್ನು ಬೇರ್ಪಡಿಸಿದ. ಇವನನ್ನು ಧ್ಯಾನದ ಸಮಯದಲ್ಲಿ ಪ್ರಾಣ ಶಕ್ತಿಯನ್ನು ಇಂದ್ರಿಯಗಳಿಂದ ಬೇರ್ಪಡಿಸಿ ಇಂದ್ರಿಯಗಳ ಸಂವೇದನೆಯನ್ನು ತಪ್ಪಿಸಿಕೊಂಡು ನಂತರ ಅದರ ಹರಿವನ್ನು ಮೇಲಿನ ಕೇಂದ್ರಗಳೆಡೆಗೆ ಹರಿಯುವಂತೆ ತಿರುಗಿಸಬಲ್ಲ ಒಬ್ಬ ಕ್ರಿಯಾ ಯೋಗಿಗೆ ಹೋಲಿಸಬಹುದು.

ಭಗವಂತನ ಸಾಮ್ರಾಜ್ಯವನ್ನು ಪ್ರವೇಶಿಸಲು ಪ್ರಯತ್ನಿಸುತ್ತ, ಆದರೆ ಇಂದ್ರಿಯಗಳೊಡನೆ ಸೆಣಸಾಡುವುದರಲ್ಲಿ ನಿರತನಾಗಿರುತ್ತ ಧ್ಯಾನಿಸುವ ಭಕ್ತನು ಎರಡು ಪ್ರಪಂಚಗಳ ನಡುವೆ ಕೂರುತ್ತಾನೆ. ಪ್ರಾಣಾಯಾಮದ [ಕ್ರಿಯಾ ಯೋಗದಂತಹ] ವೈಜ್ಞಾನಿಕ ತಂತ್ರದ ಸಹಾಯದಿಂದ, ಯೋಗಿಯು ತನ್ನ ಪ್ರಜ್ಞೆಯನ್ನು ಉಸಿರು, ಹೃದಯ ಮತ್ತು ಇಂದ್ರಿಯ-ಬಂಧನಕ್ಕೊಳಗಾದ ಪ್ರಾಣ ಪ್ರವಾಹಗಳ ಕ್ರಿಯೆಯಲ್ಲಿ ಬಾಹ್ಯೀಕರಿಸಿದ ಹೊರ-ಹರಿಯುವ ಪ್ರಾಣಶಕ್ತಿಯನ್ನು ಹಿಂದಕ್ಕೆ ತಿರುಗಿಸುವಲ್ಲಿ ಅಂತಿಮವಾಗಿ ಜಯಶಾಲಿಯಾಗುತ್ತಾನೆ. ಅವನು ಆತ್ಮ ಮತ್ತು ಪರಮಾತ್ಮನ ಸಹಜ ಆಂತರಿಕ ಶಾಂತ ಲೋಕವನ್ನು ಪ್ರವೇಶಿಸುತ್ತಾನೆ.

ಮನಸ್ಸು ಮತ್ತು ಪ್ರಾಣ ಶಕ್ತಿಯನ್ನು ಸಂವೇದಕ ಮತ್ತು ಚಾಲಕ ನರಗಳಿಂದ ಹಿಂದಕ್ಕೆಳೆದುಕೊಂಡು, ಯೋಗಿಯು ಬೆನ್ನುಹುರಿಯಿಂದ ಮಿದುಳಿನೆಡೆಗೆ, ನಿತ್ಯ ಪ್ರಕಾಶದೆಡೆಗೆ ಕರೆದೊಯ್ಯುತ್ತಾನೆ. ಇಲ್ಲಿ ಮನಸ್ಸು ಮತ್ತು ಜೀವಗಳು ಮಿದುಳಿನಲ್ಲಿ ಅಭಿವ್ಯಕ್ತಿಯಾಗಿರುವ ಚೇತನದ ನಿತ್ಯ ಜ್ಞಾನದೊಂದಿಗೆ ಸಂಯೋಗವಾಗುತ್ತವೆ.

ಸಾಧಾರಣ ವ್ಯಕ್ತಿಗೆ ಅವನ ಶರೀರ ಮತ್ತು ಹೊರಗಿನ ಪ್ರಪಂಚಗಳೇ ಪ್ರಜ್ಞೆಯ ಕೇಂದ್ರವಾಗಿರುತ್ತವೆ. ಯೋಗಿಯು ಶರೀರ ಹಾಗೂ ಐಹಿಕ ನಿರೀಕ್ಷೆಗಳು ಮತ್ತು ಭಯಗಳೆಡೆಗೆ ವೈರಾಗ್ಯ ಭಾವವನ್ನು ತಾಳುವ ಮೂಲಕ ತನ್ನ ಪ್ರಜ್ಞೆಯ ಕೇಂದ್ರವನ್ನು ಬದಲಿಸುತ್ತಾನೆ. ಪ್ರಜ್ಞೆಯನ್ನು ಶರೀರಕ್ಕೆ ಬಂಧಿಸುವ ಪ್ರಾಣ ಪ್ರಕ್ರಿಯೆಗಳನ್ನು ಕ್ರಿಯಾ ಯೋಗದಂತಹ ಒಂದು ತಂತ್ರದ ಮೂಲಕ ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸುತ್ತಾ (ಹೃದಯ ಮತ್ತು ಉಸಿರಾಟವನ್ನು ನಿಶ್ಚಲಗೊಳಿಸಿ), ಯೋಗಿಯು ಮಿದುಳಿನ ಬ್ರಹ್ಮಾಂಡ ಪ್ರಜ್ಞೆಯ ಆಧ್ಯಾತ್ಮಿಕ ಕೇಂದ್ರದಲ್ಲಿ ಪ್ರಕಟವಾಗುವ ಚೇತನದ ನಿತ್ಯ ಜ್ಞಾನ-ಗ್ರಹಿಕೆಯಲ್ಲಿ ಸ್ಥಿತನಾಗುತ್ತಾನೆ. ತನ್ನ ಪ್ರಜ್ಞಾ ಕೇಂದ್ರವನ್ನು ಸಂವೇದಕ ಶರೀರದಿಂದ ಚೇತನದ ಮಿದುಳಿನ ಸಿಂಹಾಸನದೆಡೆಗೆ ಬದಲಾಯಿಸಬಲ್ಲ ಯೋಗಿಯು, ಕಟ್ಟಕಡೆಯಲ್ಲಿ ತನ್ನ ಪ್ರಜ್ಞೆಯನ್ನು ಸರ್ವವ್ಯಾಪಿತ್ವದಲ್ಲಿ ಕೇಂದ್ರೀಕರಿಸುತ್ತಾನೆ. ಅವನು ನಿತ್ಯ ಜ್ಞಾನವನ್ನು ಸಿದ್ಧಿಸಿಕೊಳ್ಳುತ್ತಾನೆ.

ಕ್ರಿಯಾ ಯೋಗದ ಅಭ್ಯಾಸವು ಶಾಂತಿ ಮತ್ತು ಪರಮಾನಂದವನ್ನು ಅನುಗ್ರಹಿಸುತ್ತದೆ

ಕ್ರಿಯಾಯೋಗದ ತರುವಾಯದ ಪರಿಣಾಮಗಳು ತಮ್ಮೊಂದಿಗೆ ಅಪರಿಮಿತ ಶಾಂತಿ ಮತ್ತು ಪರಮಾನಂದವನ್ನು ತರುತ್ತವೆ. ಕ್ರಿಯಾಯೋಗದಿಂದ ಬರುವ ಆನಂದವು ಎಲ್ಲ ಸಂತೋಷಕರ ಶಾರೀರಿಕ ಸಂವೇದನೆಗಳನ್ನು ಒಟ್ಟುಗೂಡಿಸಿದ ಆನಂದಗಳಿಗಿಂತಲೂ ಮಹತ್ತಾದದ್ದಾಗಿದೆ. “ಐಹಿಕ ಪ್ರಪಂಚದ ಸಂವೇದನೆಗಳಿಂದ ಆಕರ್ಷಿಸಲ್ಪಡದ ಯೋಗಿಯು ತನ್ನೊಳಗೆ ಅಂತಸ್ಥವಾಗಿರುವ ನಿತ್ಯ ನೂತನ ಆನಂದವನ್ನು ಮನಗಾಣುತ್ತಾನೆ. ಭಗವಂತನೊಂದಿಗೆ ಆತ್ಮದ ದಿವ್ಯ ಸಂಯೋಗದಲ್ಲಿ ನಿರತನಾಗಿ, ಅವನು ಅವಿನಾಶಿ ಪರಮಾನಂದವನ್ನು ಹೊಂದುತ್ತಾನೆ.”

ನ್ಯೂ ಯಾರ್ಕ್‌ನಲ್ಲಿ ನಾನು ಒಬ್ಬ ಶ್ರೀಮಂತ ವ್ಯಕ್ತಿಯನ್ನು ಭೇಟಿಯಾದೆ. ತನ್ನ ಜೀವನದ ಬಗ್ಗೆ ಕೆಲವೊಂದು ವಿಷಯಗಳನ್ನು ಹೇಳುವ ಸಮಯದಲ್ಲಿ, ಅವನು ಸೋಗಿನಿಂದ ನಿಧಾನವಾಗಿ ಎಳೆಯುತ್ತಾ ಮಾತನಾಡಿದ, “ನಾನು ಜಿಗುಪ್ಸೆಗೊಳ್ಳುವಷ್ಟು ಶ್ರೀಮಂತ ಮತ್ತು ಜಿಗುಪ್ಸೆಗೊಳ್ಳುವಷ್ಟು ಆರೋಗ್ಯವಂತ —” ಅವನು ತನ್ನ ಮಾತನ್ನು ಮುಗಿಸುವ ಮುನ್ನವೇ ನಾನು ಉದ್ಗಾರ ತೆಗೆದೆ, “ಆದರೆ ನೀವು ಜಿಗುಪ್ಸೆಗೊಳ್ಳುವಷ್ಟು ಸಂತೋಷವಾಗಿಲ್ಲ! ನಿತ್ಯ ನೂತನವಾಗಿ ಸಂತೋಷದಿಂದಿರಲು ಹೇಗೆ ಅವಿರತವಾಗಿ ಆಸಕ್ತಿಯುಳ್ಳವನಾಗಿರುವುದು ಎಂಬುದನ್ನು ನಾನು ನಿಮಗೆ ಕಲಿಸುತ್ತೇನೆ.”

ಆತ ನನ್ನ ಶಿಷ್ಯನಾದ. ಕ್ರಿಯಾ ಯೋಗವನ್ನು ಅಭ್ಯಾಸ ಮಾಡುತ್ತ ಮತ್ತು ಭಗವಂತನಿಗೆ ಸದಾ ಆಂತರ್ಯದಲ್ಲಿ ಭಕ್ತಿಯನ್ನು ಸೂಸುತ್ತ, ಒಂದು ಸಮತೋಲಿತ ಜೀವನವನ್ನು ನಡೆಸುತ್ತ, ಸದಾ ನಿತ್ಯ ನೂತನ ಸಂತೋಷದಿಂದ ತುಂಬಿತುಳುಕುತ್ತಾ ಆತ ದೀರ್ಘಕಾಲದವರೆಗೂ ಬದುಕಿದ.

ಮರಣಶಯ್ಯೆಯಲ್ಲಿ ಆತ ತನ್ನ ಹೆಂಡತಿಗೆ ಹೇಳಿದ, “ನಿನಗಾಗಿ ನಾನು ಮರುಕಪಡುತ್ತೇನೆ — ನಾನು ಹೋಗುವುದನ್ನು ನೀನು ನೋಡಬೇಕಾಗಿ ಬಂದಿದೆ — ಅದರೆ ಬ್ರಹ್ಮಾಂಡದ ಪ್ರಿಯತಮನನ್ನು ಸೇರಲು ನಾನು ಬಹಳ ಸಂತೋಷದಿಂದಿದ್ದೇನೆ. ನನ್ನ ಸಂತೋಷವನ್ನು ನೋಡಿ ಆನಂದಪಡು ಮತ್ತು ದುಃಖಪಡುತ್ತಾ ಸ್ವಾರ್ಥಿಯಾಗಬೇಡ. ನಾನು ನನ್ನ ಪ್ರೀತಿಯ ಭಗವಂತನನ್ನು ಸಂಧಿಸಲು ಎಷ್ಟು ಸಂತೋಷದಿಂದಿದ್ದೇನೆ ಎಂದು ನಿನಗೆ ತಿಳಿದರೆ, ನೀನು ದುಃಖಿತಳಾಗಿರುವುದಿಲ್ಲ; ಒಂದು ದಿನ ಅನಂತ ಪರಮಾನಂದದ ಉತ್ಸವಗಳಲ್ಲಿ ನೀನು ನನ್ನೊಡನೆ ಒಂದುಗೂಡುತ್ತೀಯ ಎಂಬುದನ್ನು ತಿಳಿದು ಆನಂದಿಸು.”

ಯಾರು ಕ್ರಿಯಾವನ್ನು ಎಂದೂ ತಪ್ಪಿಸಿಕೊಳ್ಳುವುದಿಲ್ಲವೋ ಮತ್ತು ಧ್ಯಾನದಲ್ಲಿ ದೀರ್ಘಾವಧಿಯವರೆಗೆ ಕುಳಿತು ತೀವ್ರವಾಗಿ ಭಗವಂತನನ್ನು ಧ್ಯಾನಿಸುತ್ತಾರೋ, ಅವರು ತಾವು ಬಯಸಿದ ನಿಧಿಯನ್ನು ಕಂಡುಕೊಳ್ಳುತ್ತಾರೆ.

ಕ್ರಿಯಾವು ಆಂತರಿಕ ಅಂತರ್ಬೋಧಿತ ಮಾರ್ಗದರ್ಶನವನ್ನು ಜಾಗೃತಗೊಳಿಸುತ್ತದೆ

Paramahansa Yogananda holding Autobiography of a yogi

ಕ್ರಿಯಾ ಯೋಗದ ವಿಜ್ಞಾನವು 1946ರಲ್ಲಿ ಪ್ರಕಟವಾದ ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆಯೊಂದಿಗೆ ಜಗತ್ತಿನ ಓದುಗರಿಗೆ ಮೊದಲು ಪರಿಚಿತವಾಯಿತು. ಪುಸ್ತಕದಲ್ಲಿ, ಅವರು ವರ್ಷಗಳ ಹಿಂದೆ ತಮ್ಮ ಗುರುವಿನೊಡನೆ ನಡೆಸಿದ ಸಂಭಾಷಣೆಯನ್ನು ನಿರೂಪಿಸಿದ್ದಾರೆ:

ಅಸಾಧಾರಣ ಗಾಂಭೀರ್ಯದಿಂದ ಶ್ರೀ ಯುಕ್ತೇಶ್ವರರು ಹೇಳಿದರು, “ಯೋಗಾನಂದ, ನೀನು ಹುಟ್ಟಿದಾಗಿನಿಂದಲೂ ಲಾಹಿರಿ ಮಹಾಶಯರ ನೇರ ಶಿಷ್ಯರುಗಳಿಂದ ಸುತ್ತುವರಿಯಲ್ಪಟ್ಟಿದ್ದೀಯೆ. ಆ ಮಹಾಗುರು ತನ್ನ ಭವ್ಯವಾದ ಬಾಳನ್ನು ಭಾಗಶಃ ಏಕಾಂತದಲ್ಲಿ ಕಳೆದರು. ತಮ್ಮ ಅನುಯಾಯಿಗಳು ತಮ್ಮ ಉಪದೇಶಗಳ ಪ್ರಚಾರಕ್ಕಾಗಿ ಸಂಸ್ಥೆ ಕಟ್ಟುವುದನ್ನು ಪ್ರಬಲವಾಗಿ ವಿರೋಧಿಸಿದರು. ಆದಾಗ್ಯೂ ಅವರು ಗಮನಾರ್ಹವಾದ ಭವಿಷ್ಯವೊಂದನ್ನು ನುಡಿದರು.

“ ಅವರು ಹೇಳಿದರು, ‘ನಾನು ಹೊರಟುಹೋದ ಸುಮಾರು ಐವತ್ತು ವರ್ಷಗಳ ಮೇಲೆ, ಯೋಗದ ಬಗ್ಗೆ ಪಾಶ್ಚಾತ್ಯ ದೇಶಗಳಲ್ಲಿ, ತೀವ್ರವಾದ ಆಸಕ್ತಿಯುಂಟಾಗುವುದರಿಂದ, ನನ್ನ ಜೀವನದ ಪ್ರಸಂಗಗಳನ್ನು ಬರೆಯಲಾಗುತ್ತದೆ. ಯೋಗದ ಸಂದೇಶವು ಭೂಮಂಡಲವನ್ನೆಲ್ಲ ಆವರಿಸುತ್ತದೆ. ಮನುಷ್ಯರ ಭ್ರಾತೃತ್ವವನ್ನು ಸ್ಥಾಪಿಸುವುದಕ್ಕೆ, ಅದರಿಂದ ಸಹಾಯವಾಗುತ್ತದೆ: ಮಾನವರೆಲ್ಲ ಒಬ್ಬನೇ ತಂದೆಯ ಮಕ್ಕಳು ಎಂಬ ನೇರ ಅರಿವಿನಿಂದ ಮೂಡುವ ಒಗ್ಗಟ್ಟು ಅದು.’

“ಮಗು, ಯೋಗಾನಂದ, ಆ ಸಂದೇಶವನ್ನು ಹರಡಲು ಮತ್ತು ಅವರ ಪವಿತ್ರ ಜೀವನವನ್ನು ಕುರಿತು ಬರೆಯಲು ನಿನ್ನ ಪಾಲಿನ ಕೆಲಸವನ್ನು ನೀನು ಮಾಡಬೇಕು,” ಎಂದು ಶ್ರೀ ಯುಕ್ತೇಶ್ವರರು ಹೇಳಿದರು.

1895ರಲ್ಲಿ ಲಾಹಿರಿ ಮಹಾಶಯರು ಅಗಲಿದರು, ಐವತ್ತು ವರ್ಷಗಳ ನಂತರ 1945ಕ್ಕೆ ಸರಿಯಾಗಿ ಈ ಪುಸ್ತಕ ಮುಗಿಯಿತು. 1945ನೇ ವರ್ಷದಲ್ಲೇ ಕ್ರಾಂತಿಕಾರಕ ಹೊಸ ಅಣುಶಕ್ತಿಯುಗದ ಪ್ರವೇಶವೂ ಆದದ್ದು ನನಗೆ ವಿಸ್ಮಯವೆನಿಸಿದೆ. ಎಲ್ಲ ಚಿಂತನಶೀಲ ವಿಚಾರವಂತರೂ ಶಾಂತಿ ಮತ್ತು ಸೌಹಾರ್ದತೆಯ ತುರ್ತು ಸಮಸ್ಯೆಗಳತ್ತ ಹಿಂದೆಂದೂ ಇಲ್ಲದಷ್ಟು ಗಮನವನ್ನು ಹರಿಸುತ್ತಾರೆ, ಭೌತಶಕ್ತಿಗಳ ಎಡೆಬಿಡದ ಉಪಯೋಗವು ಅವರ ಸಮಸ್ಯೆಗಳ ಜೊತೆ ಎಲ್ಲ ಜೀವಿಗಳನ್ನೂ ನಾಶಮಾಡದಿರಲೆಂದು.

[ಶ್ರೀ ಯುಕ್ತೇಶ್ವರರು ನನಗೆ ಹೇಳಿದರು:] “ಕ್ರಿಯಾಯೋಗದ ಮೂಲಕ ಮನಸ್ಸನ್ನು ಇಂದ್ರಿಯದ ಅಡಚಣೆಗಳಿಂದ ಮುಕ್ತಗೊಳಿಸಿದ ಮೇಲೆ, ಧ್ಯಾನವು ಪರಮಾತ್ಮನ ಬಗ್ಗೆ ಎರಡು ರೀತಿಯ ಸಾಕ್ಷ್ಯಗಳನ್ನೊದಗಿಸುತ್ತದೆ. ಚಿರನೂತನ ಆನಂದವು ಅವನ ಅಸ್ತಿತ್ವಕ್ಕೆ ಸಾಕ್ಷಿಯೆಂದು ನಮ್ಮ ಅಣುಗಳಿಗೂ ಮನದಟ್ಟು ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ನಮ್ಮ ಪ್ರತಿಯೊಂದು ಕಷ್ಟಕ್ಕೂ ಧ್ಯಾನದಲ್ಲಿ ಆತನ ತತ್ಕ್ಷಣದ ಮಾರ್ಗದರ್ಶನ, ಸಮರ್ಪಕವಾದ ಪ್ರತಿಕ್ರಿಯೆ, ದೊರೆಯತ್ತದೆ.”

ಕ್ರಿಯಾ ಯೋಗದಲ್ಲಿರುವಂತೆ ನಿಷ್ಪಕ್ಷಪಾತ ಆತ್ಮಾವಲೋಕನ ಮತ್ತು ಆಳವಾದ ಧ್ಯಾನದ ಮೂಲಕ ಆತ್ಮ ಮತ್ತು ಪರಮಾತ್ಮನ ಸಂಸರ್ಗವನ್ನು ಅನುಭವಿಸಲು ತನ್ನ ಅಂತರ್ಬೋಧೆಯನ್ನು ಸಾಕಷ್ಟು ಅಭಿವೃದ್ಧಿಪಡಿಸುವವರೆಗೆ ಯಾವುದೇ ಭಕ್ತನು ತೃಪ್ತನಾಗಬಾರದು.

ಒಬ್ಬ ಭಕ್ತನು ಪ್ರತಿದಿನ ಸ್ವಲ್ಪ ಕಾಲದವರೆಗಾದರೂ ಗಾಢವಾಗಿ ಧ್ಯಾನಿಸಿದಲ್ಲಿ, ಮತ್ತು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮೂರು ಅಥವಾ ನಾಲ್ಕು ಘಂಟೆಗಳ ದೀರ್ಘಾವಧಿಯ ಗಾಢವಾದ ಧ್ಯಾನ ಮಾಡಿದಲ್ಲಿ, ಭಗವಂತ ಮತ್ತು ಆತ್ಮದ ನಡುವಿನ ಆನಂದಮಯ ಪರಿಜ್ಞಾನದ ವಿಚಾರ ವಿನಿಮಯವನ್ನು ನಿರಂತರವಾಗಿ ಅರಿಯುವ ಹಾಗೆ ಅವನ ಅಂತರ್ಬೋಧೆಯು ಸಾಕಷ್ಟು ಸುಸಂಸ್ಕೃತವಾಗುವುದನ್ನು ಅವನು ಮನಗಾಣುತ್ತಾನೆ. ಆತ್ಮವು ಭಗವಂತನೊಂದಿಗೆ “ಮಾತನಾಡುವ” ಮತ್ತು ಅವನ ಪ್ರತಿಸ್ಪಂದನವನ್ನು ಪಡೆಯುವ ಸಂಸರ್ಗದ ಆಂತರೀಕರಣಗೊಂಡ ಸ್ಥಿತಿಯನ್ನು ಅವನು ಅರಿಯುತ್ತಾನೆ, ಯಾವುದೇ ಮಾನವ ನುಡಿಗಳ ಉಚ್ಚಾರಣೆಯಿಂದಲ್ಲ, ಬದಲಾಗಿ ನುಡಿಗಳಿಲ್ಲದ ಅಂತರ್ಬೋಧಿತ ವಿನಿಮಯಗಳ ಮೂಲಕ.

ಒಬ್ಬ ಪ್ರಗತಿ ಸಾಧಿಸಿದ ಕ್ರಿಯಾ ಯೋಗಿಯ ಜೀವನವು, ಕರ್ಮಗಳಿಂದಲ್ಲ, ಬದಲಾಗಿ ಆತ್ಮದ ನಿರ್ದೇಶನಗಳ ಮೂಲಕ ಮಾತ್ರ ಪ್ರಭಾವಿತವಾಗುತ್ತದೆ.

ಸಮಸ್ಯೆಗಳು ಮತ್ತು ಅನುಚಿತ ಅಭ್ಯಾಸಗಳಿಂದ ಹೊರಬರುವ ದಿವ್ಯ ಮಾರ್ಗ

ಶಿಷ್ಯನ ಸಮಸ್ಯೆ ಏನೇ ಇರಲಿ, ಲಾಹಿರಿ ಮಹಾಶಯರು ಅದಕ್ಕೆ ಪರಿಹಾರವಾಗಿ ಕ್ರಿಯಾ ಯೋಗವನ್ನು ಸಲಹೆ ಮಾಡಿದರು.

ನೀವೊಬ್ಬರು ಆರ್ಥಿಕವಾಗಿ ವೈಫಲ್ಯರು ಅಥವಾ ನೈತಿಕವಾಗಿ ವೈಫಲ್ಯರು ಅಥವಾ ಆಧ್ಯಾತ್ಮಿಕವಾಗಿ ವೈಫಲ್ಯರು ಎಂದುಕೊಳ್ಳೋಣ. ಆಳವಾದ ಧ್ಯಾನದ ಮೂಲಕ, “ನಾನು ಮತ್ತು ನನ್ನ ತಂದೆ ಒಂದೇ” ಎಂದು ದೃಢೀಕರಿಸುವುದರಿಂದ, ನೀವು ಭಗವಂತನ ಮಗು ಎಂದು ಅರಿಯುವಿರಿ. ಆ ಆದರ್ಶವನ್ನು ಹಿಡಿದುಕೊಳ್ಳಿ. ನೀವು ಮಹದಾನಂದವನ್ನು ಅನುಭವಿಸುವವರೆಗೆ ಧ್ಯಾನ ಮಾಡಿ. ಆನಂದವು ನಿಮ್ಮ ಹೃದಯವನ್ನು ಸೋಕಿದಾಗ, ಭಗವಂತನು ನಿಮ್ಮ ಪ್ರಸಾರಕ್ಕೆ ಉತ್ತರಿಸಿದ್ದಾನೆ; ಅವನು ನಿಮ್ಮ ಪ್ರಾರ್ಥನೆಗಳಿಗೆ ಮತ್ತು ಸಕಾರಾತ್ಮಕ ಚಿಂತನೆಗೆ ಪ್ರತಿಕ್ರಯಿಸುತ್ತಿದ್ದಾನೆ ಎಂದರ್ಥ. ಇದು ಒಂದು ವಿಶಿಷ್ಟ ಮತ್ತು ನಿರ್ದಿಷ್ಟ ವಿಧಾನವಾಗಿದೆ:

ಮಹತ್ತರ ಶಾಂತಿಯನ್ನು, ಮತ್ತು ನಂತರ ನಿಮ್ಮ ಹೃದಯದಲ್ಲಿ ಮಹದಾನಂದವನ್ನು ಅನುಭವಿಸಲು ಪ್ರಯತ್ನಿಸುತ್ತ, ಮೊದಲು, “ನಾನು ಮತ್ತು ನನ್ನ ತಂದೆ ಒಂದೇ” ಎಂಬ ಚಿಂತನೆಯನ್ನು ಕುರಿತು ಧ್ಯಾನಿಸಿ. ಆ ಆನಂದ ಬಂದಾಗ, “ತಂದೆ, ನೀನು ನನ್ನೊಂದಿಗಿರುವೆ. ನನ್ನ ಮಿದುಳಿನ ಜೀವಕೋಶಗಳಲ್ಲಿರುವ ದೋಷಪೂರಿತ ಅಭ್ಯಾಸಗಳು ಮತ್ತು ಹಿಂದಿನ ಬೀಜ ಪ್ರವೃತ್ತಿಗಳನ್ನು ದಹಿಸಿ ಹಾಕಲು ನಾನು ನನ್ನೊಳಗಿರುವ ನಿನ್ನ ಶಕ್ತಿಯನ್ನು ಆಜ್ಞಾಪಿಸುತ್ತೇನೆ.” ಧ್ಯಾನದಲ್ಲಿರುವ ಭಗವಂತನ ಶಕ್ತಿ ಅದನ್ನು ಮಾಡುತ್ತದೆ. ನೀವು ಪುರುಷ ಅಥವಾ ಮಹಿಳೆ ಎಂಬ ಸೀಮಿತ ಪ್ರಜ್ಞೆಯನ್ನು ತೊಡೆದುಹಾಕಿ; ನೀವು ಭಗವಂತನ ಮಗು ಎಂದು ಅರಿಯಿರಿ. ನಂತರ ಮನಸ್ಸಿನಲ್ಲೇ ದೃಢೀಕರಿಸಿ ಮತ್ತು ಭಗವಂತನಲ್ಲಿ ಪ್ರಾರ್ಥಿಸಿ: “ನಾನು, ನನ್ನ ಮಿದುಳಿನ ಜೀವಕೋಶಗಳಿಗೆ ಬದಲಾಗಲು, ನನ್ನನ್ನು ಸೂತ್ರದ ಗೊಂಬೆಯನ್ನಾಗಿ ಮಾಡಿದ ದುರಭ್ಯಾಸಗಳ ತೋಡುಗಳನ್ನು ನಾಶಮಾಡಲು ಆಜ್ಞಾಪಿಸುತ್ತೇನೆ. ಪ್ರಭುವೆ, ನಿನ್ನ ದಿವ್ಯ ಬೆಳಕಿನಲ್ಲಿ ಅವುಗಳನ್ನು ದಹಿಸಿಬಿಡು.” ಮತ್ತು ನೀವು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಧ್ಯಾನ ತಂತ್ರಗಳನ್ನು, ಅದರಲ್ಲೂ ವಿಶೇಷವಾಗಿ ಕ್ರಿಯಾ ಯೋಗವನ್ನು ಅಭ್ಯಾಸ ಮಾಡಿದಾಗ, ಭಗವಂತನ ಬೆಳಕು ನಿಮಗೆ ದೀಕ್ಷಾಸ್ನಾನ ಮಾಡಿಸುವುದನ್ನು ನೀವು ನಿಜವಾಗಿಯೂ ಕಾಣುವಿರಿ.

ಭಾರತದಲ್ಲಿ, ಕೆಟ್ಟ ಕೋಪವಿರುವ ಒಬ್ಬ ವ್ಯಕ್ತಿ ನನ್ನ ಬಳಿ ಬಂದ. ಅವನಿಗೆ ಕೋಪ ಬಂದಾಗ ತನ್ನ ಮೇಲಧಿಕಾರಿಗಳಿಗೆ ಕಪಾಳಮೋಕ್ಷ ಮಾಡುವುದರಲ್ಲಿ ಅವನು ಪರಿಣತನಾಗಿದ್ದನು; ಆದ್ದರಿಂದ ಅವನು ಒಂದರ ನಂತರ ಒಂದರಂತೆ ಕೆಲಸವನ್ನು ಕಳೆದುಕೊಳ್ಳುತ್ತಿದ್ದನು. ಅವನು ಅನಿಯಂತ್ರಿತವಾಗಿ ಎಷ್ಟು ಕುಪಿತನಾಗುತ್ತಿದ್ದನೆಂದರೆ, ತನಗೆ ತೊಂದರೆ ಕೊಟ್ಟವರೆಡೆಗೆ ಕೈಗೆ ಸಿಕ್ಕಿದ್ದನ್ನು ಎಸೆದುಬಿಡುತ್ತಿದ್ದ. ಅವನು ನನ್ನ ಸಹಾಯ ಕೇಳಿದ. ನಾನು ಅವನಿಗೆ, “ಮುಂದಿನ ಬಾರಿ ನೀನು ಕೋಪಗೊಂಡಾಗ, ಏನಾದರೂ ಮಾಡುವ ಮುನ್ನ ನೂರನ್ನು ಎಣಿಸು,” ಎಂದು ಹೇಳಿದೆ. ಅವನು ಪ್ರಯತ್ನಿಸಿದ, ಆದರೆ ನನ್ನ ಬಳಿಗೆ ಹಿಂದಿರುಗಿ ಬಂದು ಹೇಳಿದ, “ನಾನು ಅದನ್ನು ಮಾಡುವಾಗ ಇನ್ನಷ್ಟು ಕೋಪ ಬರುತ್ತದೆ. ನಾನು ಎಣಿಸುತ್ತಿರುವಾಗ, ಅಷ್ಟು ಹೊತ್ತು ಕಾಯಬೇಕಾದುದಕ್ಕಾಗಿ ನನ್ನ ಕೋಪ ತೀವ್ರವಾಗುತ್ತಿತ್ತು.” ಅವನ ಪರಿಸ್ಥಿತಿ ನಿರಾಶಾದಾಯಕವಾಗಿತ್ತು.

ನಂತರ ನಾನು ಅವನಿಗೆ ಕ್ರಿಯಾ ಯೋಗವನ್ನು ಅಭ್ಯಾಸ ಮಾಡಲು ಹೇಳಿದೆ, ಜೊತೆಗೆ ಈ ಸೂಚನೆಯನ್ನೂ ನೀಡಿದೆ: “ನೀನು ನಿನ್ನ ಕ್ರಿಯಾವನ್ನು ಅಭ್ಯಾಸ ಮಾಡಿದ ನಂತರ, ದೇವರ ದಿವ್ಯ ಬೆಳಕು ನಿನ್ನ ಮಿದುಳಿಗೆ ಹೋಗುತ್ತಿದೆ, ಅದು ಮಿದುಳನ್ನು ಶಮನಗೊಳಿಸುತ್ತಿದೆ, ನಿನ್ನ ನರಗಳನ್ನು ಶಾಂತಗೊಳಿಸುತ್ತಿದೆ, ನಿನ್ನ ಭಾವನೆಗಳನ್ನು ಶಾಂತಗೊಳಿಸುತ್ತಿದೆ, ಎಲ್ಲಾ ಕೋಪವನ್ನು ಅಳಿಸಿಹಾಕುತ್ತಿದೆ ಎಂದು ಭಾವಿಸು. ಮತ್ತು ಒಂದಲ್ಲ ಒಂದು ದಿನ ನಿನ್ನ ಕೂಗಾಟ-ಹಾರಾಟ ಹೊರಟುಹೋಗುತ್ತದೆ.” ಸ್ವಲ್ಪ ಸಮಯದ ನಂತರ ಅವನು ಮತ್ತೆ ನನ್ನ ಬಳಿ ಬಂದ, ಮತ್ತು ಈ ಬಾರಿ ಹೇಳಿದ, “ನಾನು ಕೋಪದ ಅಭ್ಯಾಸದಿಂದ ಮುಕ್ತನಾಗಿದ್ದೇನೆ. ನಾನು ತುಂಬಾ ಕೃತಜ್ಞನಾಗಿದ್ದೇನೆ.”

ನಾನು ಅವನನ್ನು ಪರೀಕ್ಷಿಸಲು ನಿರ್ಧರಿಸಿದೆ. ಕೆಲವು ಹುಡುಗರನ್ನು ಅವನೊಂದಿಗೆ ಜಗಳವಾಡಲು ವ್ಯವಸ್ಥೆ ಮಾಡಿದೆ. ನಾನು ಗಮನಿಸಲು ಸಾಧ್ಯವಾಗುವಂತೆ, ಅವನು ನಿಯತವಾಗಿ ಹಾದು ಹೋಗುವ ಮಾರ್ಗದಲ್ಲಿದ್ದ ಪಾರ್ಕ್‌ನಲ್ಲಿ ಬಚ್ಚಿಟ್ಟುಕೊಂಡೆ. ಹುಡುಗರು ಅವನೊಂದಿಗೆ ಜಗಳವಾಡುವ ಪ್ರಯತ್ನ ಮತ್ತೆ ಮತ್ತೆ ಮಾಡಿದರೂ ಅವನು ಪ್ರತಿಕ್ರಯಿಸಲಿಲ್ಲ. ಅವನು ತನ್ನ ಶಾಂತಿಯನ್ನು ಕಾಪಾಡಿಕೊಂಡಿದ್ದ.

ಭಗವಂತನೊಡನೆ ಸಂಸರ್ಗವನ್ನು ಹೊಂದುವುದರಿಂದ ನಿಮ್ಮ ಅಂತಸ್ತು ಒಬ್ಬ ಅಮರ್ತ್ಯ ಜೀವಿಯಿಂದ ಅಮರ ಜೀವಿಗೆ ಬದಲಾವಣೆಗೊಳ್ಳುತ್ತದೆ. ನೀವು ಇದನ್ನು ಮಾಡಿದಾಗ, ನಿಮ್ಮನ್ನು ಮಿತಿಗೊಳಿಸುವ ಎಲ್ಲ ಬಂಧನಗಳೂ ಕಳಚಿ ಬೀಳುತ್ತವೆ. ಇದು ನೆನಪಿಡಬೇಕಾದ ಮಹಾನ್‌ ನಿಯಮ. ನಿಮ್ಮ ಗಮನವು ಕೇಂದ್ರಿತವಾದ ತಕ್ಷಣ, ಎಲ್ಲ ಶಕ್ತಿಗಳ ಶಕ್ತಿಯೂ (ಭಗವಂತ) ಬರುತ್ತದೆ ಮತ್ತು ಅದರಿಂದ ನೀವು ಆಧ್ಯಾತ್ಮಿಕ, ಮಾನಸಿಕ ಮತ್ತು ಭೌತಿಕ ಯಶಸ್ಸನ್ನು ಸಿದ್ಧಿಸಿಕೊಳ್ಳಬಹುದು.

ಪರಿಪೂರ್ಣ ಪ್ರೇಮವನ್ನು ಮನಗಾಣುವುದು

ಮಹತ್ತರ ಪ್ರೇಮವನ್ನು ನೀವು ಮನಗಾಣುವುದೆಂದರೆ ಧ್ಯಾನದಲ್ಲಿ ಭಗವಂತನೊಡನೆಯ ಸಂಸರ್ಗ. ಆತ್ಮ ಮತ್ತು ಪರಮಾತ್ಮನ ನಡುವಿನ ಪ್ರೇಮವೇ ಪರಿಪೂರ್ಣ ಪ್ರೇಮ, ಅದೇ ನೀವೆಲ್ಲರೂ ಅರಸುತ್ತಿರುವ ಪ್ರೇಮ….ನೀವು ಗಾಢವಾಗಿ ಧ್ಯಾನಿಸಿದಲ್ಲಿ, ಯಾವ ಮಾನವ ನುಡಿಯೂ ವಿವರಿಸಲಾರದಂತಹ ಪ್ರೇಮವು ನಿಮ್ಮಲ್ಲಿ ಉದಿಸುತ್ತದೆ ಮತ್ತು ಆ ಪರಿಶುದ್ಧ ಪ್ರೇಮವನ್ನು ಇತರರಿಗೆ ಕೊಡಲು ನಿಮಗೆ ಸಾಧ್ಯವಾಗುತ್ತದೆ….ನೀವು ಆ ದಿವ್ಯ ಪ್ರೇಮವನ್ನು ಅನುಭವಿಸಿದಾಗ, ನಿಮಗೆ ಹೂವು ಮತ್ತು ಪಶುವಿನ ನಡುವೆ, ಒಬ್ಬ ಮನುಷ್ಯ ಮತ್ತು ಇನ್ನೊಬ್ಬ ಮನುಷ್ಯನ ನಡುವೆ ಯಾವುದೇ ವ್ಯತ್ಯಾಸವೂ ಕಾಣುವುದಿಲ್ಲ. ನೀವು ಇಡೀ ಪ್ರಕೃತಿಯ ಜೊತೆ ಮಿಳಿತವಾಗುತ್ತೀರಿ ಮತ್ತು ಎಲ್ಲ ಮಾನವರನ್ನೂ ಸಮಾನವಾಗಿ ಪ್ರೀತಿಸುತ್ತೀರಿ.

ಭಯ ಮತ್ತು ಅಸುರಕ್ಷತೆಯಿಂದ ಮುಕ್ತಿ

ಭಗವತ್‌ ಸಂಪರ್ಕದಿಂದ ಭಯದ ನಿಲುಗಡೆಯಾಗುತ್ತದೆ, ಬೇರಾವುದರಿಂದಲೂ ಆಗುವುದಿಲ್ಲ. ಏಕೆ ಕಾಯಬೇಕು? ಯೋಗದಿಂದ ನೀವು ಅವನೊಡನೆ ಆ ಸಂಸರ್ಗವನ್ನು ಹೊಂದಬಹುದು….ನೀವು ಭಗವಂತನನ್ನು ಕಂಡುಕೊಂಡಾಗ, ಎಂತಹ ಭರವಸೆ ಮತ್ತು ನಿರ್ಭೀತಿ ನಿಮಗೆ ಲಭಿಸುತ್ತದೆ! ಆಗ ಯಾವುದೂ ಕೂಡ ಮುಖ್ಯವಾಗುವುದಿಲ್ಲ, ಯಾವುದೂ ಕೂಡ ನಿಮ್ಮನ್ನು ಎಂದೂ ಭಯಗೊಳಿಸಲಾರದು.

ನಿಮ್ಮಲ್ಲಿನ ಪ್ರತಿಯೊಬ್ಬರಿಗಾಗಿಯೂ ನನ್ನ ಪ್ರಾರ್ಥನೆಯೆಂದರೆ, ಇಂದಿನಿಂದ ನೀವು ಭಗವಂತನಿಗಾಗಿ ಅತಿಶಯ ಶ್ರಮವನ್ನು ಹಾಕುತ್ತೀರ ಮತ್ತು ನೀವು ಅವನೊಡನೆ ಸ್ಥಿತವಾಗುವವರೆಗೂ ಎಂದೂ ಬಿಟ್ಟುಕೊಡುವುದಿಲ್ಲ ಎಂಬುದು. ನೀವು ಅವನನ್ನು ಪ್ರೀತಿಸಿದಲ್ಲಿ, ಕ್ರಿಯಾವನ್ನು ಮಹತ್ತರ ಭಕ್ತಿ ಮತ್ತು ನಿಷ್ಠೆಯಿಂದ ಅಭ್ಯಾಸ ಮಾಡುತ್ತೀರಿ. ಪ್ರಾರ್ಥನೆ ಮತ್ತು ಕ್ರಿಯಾ ಯೋಗದ ಮೂಲಕ ಅವನನ್ನು ನಿರಂತರವಾಗಿ ಅನ್ವೇಷಿಸಿ. ಸದಾ ಒಳ್ಳೆಯ ಉತ್ಸಾಹದಿಂದಿರಿ, ಏಕೆಂದರೆ ಬಾಬಾಜಿ ಭಗವದ್ಗೀತೆಯಿಂದ ಉದ್ಧರಿಸುತ್ತಾ ಒಮ್ಮೆ ಹೇಳಿದ ಹಾಗೆ: “ಈ ನೈಜ ಧರ್ಮದ ಒಂದು ಸಣ್ಣ ತೃಣವೂ ಕೂಡ ಒಬ್ಬರನ್ನು ಮಹಾನ್‌ ಭಯದಿಂದ ರಕ್ಷಿಸುತ್ತದೆ (ಜನನ ಮರಣದ ನಿರಂತರ ಆವರ್ತನೆಯೊಳಗೆ ಅಂತಸ್ಥವಾದ ಬೃಹತ್‌ ಪ್ರಮಾಣದ ಸಂಕಷ್ಟಗಳು).”

*ಜಾನ್‌ “ಏಳು ತಾರೆಗಳ ರಹಸ್ಯ” ಮತ್ತು “ಏಳು ಇಗರ್ಜಿಗಳ” ಬಗ್ಗೆ ಹೇಳುತ್ತಾನೆ (ದಿವ್ಯಸಂದೇಶ 1:20); ಈ ಸಂಕೇತಗಳು ಬೆನ್ನುಹುರಿಯಲ್ಲಿರುವ ಬೆಳಕಿನ ಏಳು ಸೂಕ್ಷ್ಮ ಕೇಂದ್ರಗಳನ್ನು ಸೂಚಿಸುತ್ತವೆ. ಬೈಬಲ್‌ನ ಈ ಸಂಪೂರ್ಣವಾಗಿ ಅರ್ಥವಾಗದ ಅಧ್ಯಾಯದ ಗಹನವಾದ ಚಿತ್ರಣಗಳು, ಜೀವ ಮತ್ತು ಪ್ರಜ್ಞೆಯ ಈ ಕೇಂದ್ರಗಳನ್ನು ತೆರೆಯುವುದರಿಂದ ಬರುವ ದಿವ್ಯ ಸಂದೇಶಗಳ ಒಂದು ಸಾಂಕೇತಿಕ ನಿರೂಪಣೆ.

ಬೇಸಿಗೆ 2011ರ ಯೋಗದಾ ಸತ್ಸಂಗ ಮ್ಯಾಗಜಿನ್‌ನಿಂದ

ಇದನ್ನು ಹಂಚಿಕೊಳ್ಳಿ