ಸಮೃದ್ಧಿ ಪ್ರಜ್ಞೆಯನ್ನು ಸೃಷ್ಟಿಸುವುದು

ಪರಮಹಂಸ ಯೋಗಾನಂದರ ಜ್ಞಾನ ಪರಂಪರೆಯಿಂದ ಆಯ್ದ ಭಾಗಗಳು
ಸೆಲ್ಫ್-ರಿಯಲೈಝೇಷನ್‌ ನಿಯತಕಾಲಿಕದ ಮಾರ್ಚ್-ಜೂನ್‌ 2009 ರ ಸಂಚಿಕೆಯಲ್ಲಿನ, “ಕ್ರಿಯೇಟಿಂಗ್‌ ಪ್ರಾಸ್ಪೆರಿಟಿ ಕಾನ್ಷಿಯಸ್‌ನೆಸ್‌: ನೈನ್‌ ಸ್ಪಿರಿಚುವಲ್‌ ಪ್ರಿನ್ಸಿಪಲ್ಸ್‌ ಫಾರ್‌ ಆಕ್ಟಿವೇಟಿಂಗ್‌ ದಿ ಲಾ ಆಫ್‌ ಅಬಾಂಡನ್ಸ್‌ ಟು ಸಪ್ಲೈ ಯುವರ್‌ ನೀಡ್ಸ್‌ ಇನ್‌ ಗುಡ್‌ ಟೈಮ್ಸ್‌ ಅಂಡ್‌ ಬ್ಯಾಡ್” ಲೇಖನದಿಂದ ಆಯ್ದ ಭಾಗಗಳು.

ಜಗತ್ತಿಗಾಗಿ ಭಗವಂತನ ಯೋಜನೆಯು ಸಮೃದ್ಧಿ ಮತ್ತು ಆನಂದ ಎಂದು ತಿಳಿಯಿರಿ
ಲೌಕಿಕ ಹಾಗೂ ಆಧ್ಯಾತ್ಮಿಕ ಸಮೃದ್ಧಿಯು ರಿತ, ಅಂದರೆ ಬ್ರಹ್ಮಾಂಡ ನಿಯಮ ಅಥವಾ ಸಹಜ ಸದಾಚಾರದ ರಚನಾತ್ಮಕ ಅಭಿವ್ಯಕ್ತಿಯಾಗಿದೆ….

ವಾಸ್ತವದ ಅಂತರಾಳವನ್ನು ಭೇದಿಸಿದ ಪ್ರತಿಯೊಬ್ಬ ಸಂತನು, ದಿವ್ಯ ಸಾರ್ವಕಾಲಿಕ ಯೋಜನೆಯು ಅಸ್ತಿತ್ವದಲ್ಲಿದೆ ಮತ್ತು ಅದು ಸುಂದರವೂ ಹಾಗೂ ಆನಂದಮಯವೂ ಆದುದೆಂದೂ ಪ್ರಮಾಣಪೂರ್ವಕವಾಗಿ ಕಂಡಿದ್ದಾನೆ.

ಭಗವಂತನ ನಿಯಮ ಮತ್ತು ಕ್ರಿಶ್ಚಿಯನ್ ಭ್ರಾತೃತ್ವದ ಪ್ರಕಾರ, ಈ ಭೂಮಿಯ ಉದ್ದೇಶ, ಇಡೀ ಮನುಕುಲಕ್ಕೆ ಆಶ್ರಯ ಮತ್ತು ಪೂರೈಕೆಯನ್ನು ಒದಗಿಸುವುದಾಗಿತ್ತು; ಗಣಿಗಳ ಸಂಪತ್ತು ಮತ್ತು ಇತರ ಸಂಪನ್ಮೂಲಗಳನ್ನು ಸಮಾನ ಕೆಲಸ ಮಾಡುವವರಿಗೆ ಸಮಾನವಾಗಿ ವಿತರಿಸುವುದಾಗಿತ್ತು. ಮತ್ತು ಭಗವಂತನು ದಿವ್ಯ ಜನ್ಮಸಿದ್ಧ ಹಕ್ಕಿನ ನಿಯಮವನ್ನು ಸ್ಥಾಪಿಸಿದನು: ಅಂದರೆ ಎಲ್ಲಾ ಪುರುಷರು ಮತ್ತು ಮಹಿಳೆಯರು ಅವನ ಪ್ರತಿರೂಪದಲ್ಲಿ ಮಾಡಲ್ಪಟ್ಟಿದ್ದಾರೆ, ಆದ್ದರಿಂದ ಅವರು ಮೂಲಭೂತವಾಗಿ ದಿವ್ಯ ಜೀವಿಗಳು; ಮತ್ತು ಎಲ್ಲಾ ದೇಶದವರು ಎಲ್ಲರ ಪೋಷಕರಾದ ಆಡಮ್ ಮತ್ತು ಈವ್‌ರ ವಂಶಸ್ಥರಾದುದರಿಂದ ಅವರೆಲ್ಲರೂ ಒಂದೇ ರಕ್ತದವರು.

ಈ ಮೂಲಭೂತ ಸಂಬಂಧವನ್ನು ನೀವು ನಂಬಿದರೆ, ಇಡೀ ಪ್ರಪಂಚದ ಎಲ್ಲ ನಿವಾಸಿಗಳ ಬಗ್ಗೆ ನಿಮ್ಮದೇ ಕುಟುಂಬದಂತೆ ನಿಮಗೆ ಪ್ರೀತಿಯಿದ್ದರೆ, ಬಾಹ್ಯದೃಷ್ಟಿಗೆ ವಿಭಿನ್ನವಾಗಿರುವ ಯಾವುದೇ ರಾಷ್ಟ್ರೀಯತೆಗಳ ನಡುವೆ ಯಾವುದೇ ಆಂತರಿಕ ವ್ಯತ್ಯಾಸವನ್ನು ಗುರುತಿಸದಿದ್ದರೆ, ನೀವು ಭೂಮಿಯ ಬಂಡವಾಳದ ನಿಮ್ಮ ಪಾಲಿನದಕ್ಕೆ, ಒಂದು ನ್ಯಾಯಸಮ್ಮತ ದೈವಿಕ ಹಕ್ಕನ್ನು ಸ್ಥಾಪಿಸಿದಂತಾಗುತ್ತದೆ.

ಕೇವಲ ತಮ್ಮ ಅಭ್ಯುದಯವನ್ನು ಮಾತ್ರ ಅರಸುವವರು ಕೊನೆಯಲ್ಲಿ ಬಡವರಾಗೇ ಆಗುತ್ತಾರೆ, ಅಥವಾ ಮಾನಸಿಕ ಅಸಾಮರಸ್ಯದಿಂದ ಬಳಲುತ್ತಾರೆ; ಆದರೆ ಇಡೀ ಜಗತ್ತೇ ತಮ್ಮದೆಂದು ಭಾವಿಸುವವರು, ನಿಜವಾದ ಕಳಕಳಿಯಿಂದ ಸಮೂಹದ ಅಥವಾ ಜಗತ್ತಿನ ಅಭ್ಯುದಯಕ್ಕಾಗಿ ಕೆಲಸ ಮಾಡುವವರು, ದೈವಿಕ ಶಕ್ತಿಗಳನ್ನು ಸಕ್ರಿಯಗೊಳಿಸುತ್ತಾರೆ, ಅವು ಅಂತಿಮವಾಗಿ ನ್ಯಾಯಸಮ್ಮತವಾಗಿ ಅವರದೇ ಆಗಿರುವ ವೈಯಕ್ತಿಕ ಸಮೃದ್ಧಿಯನ್ನು ಕಂಡುಕೊಳ್ಳುವ ಸ್ಥಳಕ್ಕೆ ಅವರನ್ನು ಕರೆದೊಯ್ಯುತ್ತದೆ. ಇದು ಖಚಿತ ಮತ್ತು ರಹಸ್ಯ ನಿಯಮ.

ಒಬ್ಬನು ಅಭ್ಯುದಯ ಹೊಂದುವುದು ಒಬ್ಬನ ಸೃಜನಶೀಲ ಸಾಮರ್ಥ್ಯವನ್ನು ಮಾತ್ರ ಅವಲಂಬಿಸಿರುವುದಿಲ್ಲ, ಬದಲಾಗಿ ಅವನ ಹಿಂದಿನ ಕ್ರಿಯೆಗಳನ್ನೂ ಮತ್ತು ಕಾರಣ ಮತ್ತು ಪರಿಣಾಮದ ಆಸ್ಟ್ರಲ್ ನಿಯಮವನ್ನು ಸಕ್ರಿಯಗೊಳಿಸುವ ಅವನ ಪ್ರಸ್ತುತ ಪ್ರಯತ್ನಗಳನ್ನೂ ಅವಲಂಬಿಸಿರುತ್ತದೆ. ಇಡೀ ಮನುಕುಲವು ನಿಸ್ವಾರ್ಥದಿಂದ ವರ್ತಿಸಿದರೆ, ಆ ನಿಯಮದ ಶಕ್ತಿಯು ಅಪವಾದ ಇಲ್ಲದೆ ಎಲ್ಲ ಜನರಿಗೆ ಸಮಾನವಾಗಿ ಸಮೃದ್ಧಿಯನ್ನು ವಿತರಿಸುತ್ತದೆ. ಪ್ರಬಲವಾದ ಒಳ್ಳೆಯ ಆಲೋಚನೆಗಳು ಮತ್ತು ಕ್ರಿಯೆಗಳಿಂದ ಸಕಾರಾತ್ಮಕ ಸಮೃದ್ಧಿಯನ್ನು ಸೃಷ್ಟಿಸಲು ಈ ದೈವಿಕ ಶಕ್ತಿಯನ್ನು ಪ್ರಚೋದಿಸುವವರು ಎಲ್ಲಿ ಹೋದರೂ ಯಶಸ್ವಿಯಾಗುತ್ತಾರೆ, ಅವರು ಸಮೃದ್ಧ ಪರಿಸರದಲ್ಲಿರಲಿ ಅಥವಾ ಬಡತನದ ಪರಿಸರದಲ್ಲಿರಲಿ.

ಸಮೃದ್ಧಿಯನ್ನು ಸೃಷ್ಟಿಸಲು ಕಾರಣ ಮತ್ತು ಪರಿಣಾಮದ ನಿಯಮವನ್ನು ಬಳಸಿಕೊಳ್ಳಿ
ಮನುಷ್ಯನಿಗೆ ಎಲ್ಲಾ ಸಮೃದ್ಧಿಯನ್ನು ಕಾರಣ-ಪರಿಣಾಮದ ನಿಯಮದ ಪ್ರಕಾರ ಅಳೆದು ಕೊಡಲಾಗುತ್ತದೆ, ಈ ನಿಯಮವು ಈ ಜೀವನಕ್ಕೆ ಮಾತ್ರವಲ್ಲದೆ ಹಿಂದಿನ ಎಲ್ಲ ಜನ್ಮಗಳಿಗೂ ಅನ್ವಯವಾಗುತ್ತದೆ. ಆದ್ದರಿಂದಲೇ ಬುದ್ಧಿವಂತರು ಬಡವರಾಗಿ ಅಥವಾ ರೋಗಪೀಡಿತರಾಗಿ ಹುಟ್ಟಬಹುದು, ಹಾಗೂ ಮಾನಸಿಕವಾಗಿ ಮಧ್ಯಮ ದರ್ಜೆಯ ಯೋಗ್ಯತೆಯುಳ್ಳ ವ್ಯಕ್ತಿಯು ಆರೋಗ್ಯವಂತನಾಗಿಯೂ ಶ್ರೀಮಂತನಾಗಿಯೂ ಹುಟ್ಟಬಹುದು. ಎಲ್ಲ ಜನರೂ ಮೂಲತಃ ಭಗವಂತನ ಮಕ್ಕಳಾಗಿದ್ದು, ಅವನ ಪ್ರತಿರೂಪದಲ್ಲಿ ಮಾಡಲ್ಪಟ್ಟಿರುತ್ತಾರೆ, ಅವರಿಗೆ ಮುಕ್ತ ಆಯ್ಕೆ ಮತ್ತು ಸಮಾನ ನೈಪುಣ್ಯದ ಶಕ್ತಿ ಇರುತ್ತದೆ. ಆದರೆ ಭಗವಂತನು ನೀಡಿದ ವಿವೇಚನೆ ಮತ್ತು ಇಚ್ಛಾಶಕ್ತಿಯ ದುರುಪಯೋಗದಿಂದ, ಮನುಷ್ಯನು ಕರ್ಮದ ಕಾರಣ-ಪರಿಣಾಮದ ನೈಸರ್ಗಿಕ ನಿಯಮದ ನಿಯಂತ್ರಣಕ್ಕೆ ಒಳಪಟ್ಟಿದ್ದಾನೆ ಮತ್ತು ಆ ಮೂಲಕ ತನ್ನ ಜೀವನವನ್ನು ಯಶಸ್ವಿಯಾಗಿಸುವ ಸ್ವಾತಂತ್ರ್ಯವನ್ನು ಸೀಮಿತಗೊಳಿಸಿಕೊಂಡಿದ್ದಾನೆ. ಒಬ್ಬ ವ್ಯಕ್ತಿಯ ಯಶಸ್ಸು ಅವನ ಬುದ್ಧಿಶಕ್ತಿ ಮತ್ತು ದಕ್ಷತೆಯನ್ನು ಮಾತ್ರವಲ್ಲದೆ ಅವನ ಹಿಂದಿನ ಕರ್ಮಗಳ ಸ್ವರೂಪವನ್ನೂ ಅವಲಂಬಿಸಿರುತ್ತದೆ.

ಆದರೂ, ಹಿಂದಿನ ಕ್ರಿಯೆಗಳ ಪ್ರತಿಕೂಲ ಫಲಿತಾಂಶಗಳನ್ನು ಜಯಿಸಲು ಒಂದು ಮಾರ್ಗವಿದೆ. ವೈಫಲ್ಯದ ಕಾರಣಗಳನ್ನು ನಾಶಪಡಿಸಬೇಕು ಹಾಗೂ ಯಶಸ್ಸಿಗೆ ಹೊಸ ಕಾರಣವನ್ನು ಚಾಲನಗೊಳಿಸಬೇಕು.

ಯಶಸ್ಸು ಮತ್ತು ಸಮೃದ್ಧಿಯ ಆಕರವಾಗಿರುವ ಅತೀತಪ್ರಜ್ಞೆಯನ್ನು ಸಂಪರ್ಕಿಸಿ
ಯಾವುದೇ ಕ್ಷೇತ್ರದಲ್ಲಾದರೂ ಧನಾತ್ಮಕ ಯಶಸ್ಸನ್ನು ತರುವ ಹೊಸ ಕಾರಣವನ್ನು ಜಾಗೃತ ಮನಸ್ಸೊಂದೇ ಪ್ರಾರಂಭಿಸಲು ಸಾಧ್ಯವಿಲ್ಲ; ಆದರೆ ಅತೀತ ಪ್ರಜ್ಞಾಸ್ಥಿತಿಯಲ್ಲಿ ಮಾನುಷ ಮನಸ್ಸು ತನ್ನನ್ನು ಭಗವಂತನೊಂದಿಗೆ ಶ್ರುತಿಗೂಡಿಸಿಕೊಂಡಾಗ, ಅದಕ್ಕೆ ಯಶಸ್ಸು ದೊರಕುವುದು ಖಂಡಿತ; ಏಕೆಂದರೆ ಅತೀತ ಪ್ರಜ್ಞಾಮನಸ್ಸು ಭಗವಂತನ ಅಸೀಮ ಶಕ್ತಿಯೊಂದಿಗೆ ಶ್ರುತಿಗೂಡಿಕೊಂಡಿರುತ್ತದೆ. ಆದ್ದರಿಂದ ಅದಕ್ಕೆ ಯಶಸ್ಸಿನ ಹೊಸ ಕಾರಣವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.

ಪರಿಪೂರ್ಣ ಯಶಸ್ಸೆಂದರೆ “ನಿಮ್ಮ ಅತೀತ ಪ್ರಜ್ಞೆಯ ಅಸೀಮ ಶಕ್ತಿಯನ್ನು ಅಭಿವೃದ್ಧಿಪಡಿಸುವ ಮೂಲಕ ನಿಮಗೆ ಬೇಕಾದುದನ್ನು ಸೃಷ್ಟಿಸುವ ಶಕ್ತಿ.” ಭಗವತ್-ಸಾಕ್ಷಾತ್ಕಾರ ಹೊಂದಿದ ಭಾರತದ ಗುರುಗಳು ಕಲಿಸಿದಂತಹ ಧ್ಯಾನದ ನಿರ್ದಿಷ್ಟ ತಂತ್ರವನ್ನು ತಿಳಿದುಕೊಳ್ಳುವ ಮೂಲಕ ಈ ಅತೀತಪ್ರಜ್ಞಾ ಶಕ್ತಿಯನ್ನು ಜಾಗೃತಗೊಳಿಸಬಹುದು. ಯಾವುದೇ ಸಮಯದಲ್ಲಿ, ಇಚ್ಛಾನುಸಾರ ಮತ್ತು ಮಿತಿಯಿಲ್ಲದೆ ಸಮೃದ್ಧಿ, ಆರೋಗ್ಯ, ಯಶಸ್ಸು, ಜ್ಞಾನ ಮತ್ತು ಭಗವತ್-ಸಂಪರ್ಕವನ್ನು ಹೊಂದುವ ಸಲುವಾಗಿ ಮನಸ್ಸಿನ ಕಾರ್ಖಾನೆಯ ಮಾನಸಿಕ ಯಂತ್ರವನ್ನು ನಿಯಂತ್ರಿಸುವ ಕಲೆಯಲ್ಲಿ ಭಾರತವು ಪರಿಣತಿಯನ್ನು ಹೊಂದಿದೆ.

ಪಾಶ್ಚಾತ್ಯ ಸೋದರ ಸೋದರಿಯರು ಮನಸ್ಸಿನ ಆವಿಷ್ಕಾರಗಳಿಗಿಂತ ಮನಸ್ಸೇ ದೊಡ್ಡದು ಎಂದು ಕಲಿಯಬೇಕಾಗಿದೆ. ವೈಜ್ಞಾನಿಕವಾಗಿ ಸರ್ವತೋಮುಖ ಯಶಸ್ಸನ್ನು ಸಾಧಿಸಬೇಕೆಂದರೆ ಮನಸ್ಸನ್ನು ನಿಯಂತ್ರಿಸುವ ಕಲೆಗೆ ಹೆಚ್ಚಿನ ಸಮಯವನ್ನು ನೀಡಬೇಕು. ಸರ್ವ-ಸಾಧಕ, ಸರ್ವಶಕ್ತ ಮನಸ್ಸನ್ನು ಬೆಳೆಸುವುದನ್ನೇ ನಿರ್ಲಕ್ಷಿಸುವಂತಹ ಮನಸ್ಸಿನ ಸಾಮಗ್ರಿಗಳನ್ನು ಹೊಂದಲು ಕಡಿಮೆ ಸಮಯವನ್ನು ಮೀಸಲಿಡಬೇಕು…..

ಆರೋಗ್ಯ ಮತ್ತು ಶಾಂತಿಯಿಲ್ಲದ ಹಣವು ಯಶಸ್ಸು ಎನಿಸಿಕೊಳ್ಳುವುದಿಲ್ಲ ಮತ್ತು ಅವಶ್ಯಕತೆಗಳಿಗಾಗಿ ಹಣವಿಲ್ಲದ, ಶಾಂತಿ ಮತ್ತು ಆರೋಗ್ಯಗಳು ಪರಿಪೂರ್ಣ ಅಥವಾ ಯಶಸ್ವೀ ಜೀವನವನ್ನು ಕೊಡುವುದಿಲ್ಲ ಎಂಬುದನ್ನು ಧ್ಯಾನದ ಮೂಲಕ ತಿಳಿಯಿರಿ. ಭಾರತವು ಕಲಿಸಿರುವ ಮಾರ್ಗವನ್ನು ಅನುಸರಿಸಿ: ಅತೀತ ಪ್ರಜ್ಞೆಯನ್ನು ಹೊಂದಿ ಮತ್ತು ಮನಸ್ಸಿನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿಕೊಳ್ಳಿ; ಆಗ ನಿಮಗೆ ಬೇಕಾದುದನ್ನು ನೀವು ಇಚ್ಛಾನುಸಾರ ಸೃಷ್ಟಿಮಾಡಬಹುದು.

ದೃಢೀಕರಣದ ಅಭಿವ್ಯಕ್ತಿಸುವ ಶಕ್ತಿಯನ್ನು ಚಲಾಯಿಸಿ
ಎಲ್ಲ ಆಧ್ಯಾತ್ಮಿಕ ಮತ್ತು ಲೌಕಿಕ ಕೊಡುಗೆಗಳು [ಭಗವಂತನ] ಮಿತಿಯಿಲ್ಲದ ಸಮೃದ್ಧಿಯಿಂದ ಹರಿದುಬರುತ್ತವೆ. ಅವನ ಕೊಡುಗೆಗಳನ್ನು ಪಡೆದುಕೊಳ್ಳಬೇಕೆಂದರೆ ನೀವು ಇತಿಮಿತಿ ಮತ್ತು ಬಡತನಗಳ ಎಲ್ಲಾ ಆಲೋಚನೆಗಳನ್ನು ನಿಮ್ಮ ಮನಸ್ಸಿನಿಂದ ತೊಡೆದುಹಾಕಬೇಕು. ವಿಶ್ವವ್ಯಾಪಿ ಮನಸ್ಸು (ಭಗವಂತ) ಪರಿಪೂರ್ಣವಾದುದು ಮತ್ತು ಅದಕ್ಕೆ ಕೊರತೆ ಎಂಬುದೇ ತಿಳಿದಿಲ್ಲ; ಎಂದಿಗೂ ನಿಲ್ಲದ ಆ ಪೂರೈಕೆಯನ್ನು ತಲುಪಲು ನೀವು ಸಮೃದ್ಧಿಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಮುಂದಿನ ಡಾಲರ್ ಎಲ್ಲಿಂದ ಬರುತ್ತಿದೆ ಎಂದು ನಿಮಗೆ ತಿಳಿದಿರದಿದ್ದರೂ, ನೀವು ಆತಂಕ ಪಡಬಾರದು. ನೀವು ನಿಮ್ಮ ಪಾತ್ರವನ್ನು ನಿರ್ವಹಿಸಿದಾಗ ಮತ್ತು ಭಗವಂತ ತನ್ನದನ್ನು ಮಾಡುತ್ತಾನೆ ಎಂಬ ಭರವಸೆ ಇದ್ದಾಗ, ನಿಗೂಢ ಶಕ್ತಿಗಳು ನಿಮ್ಮ ಸಹಾಯಕ್ಕೆ ಬರುತ್ತವೆ ಮತ್ತು ನಿಮ್ಮ ರಚನಾತ್ಮಕ ಆಶಯಗಳು ತ್ವರಿತವಾಗಿ ಕಾರ್ಯರೂಪಕ್ಕೆ ಬರುತ್ತವೆ ಎಂದು ನೀವು ಮನಗಾಣುವಿರಿ. ಈ ಆತ್ಮವಿಶ್ವಾಸ ಮತ್ತು ಸಮೃದ್ಧಿಯ ಪ್ರಜ್ಞೆಯನ್ನು ಧ್ಯಾನದ ಮೂಲಕ ಸಾಧಿಸಲಾಗುತ್ತದೆ.

ದೃಢೀಕರಣ: “ಭಗವಂತನು ನನ್ನ ಸ್ವಂತ ಕ್ಷಯವಾಗದ ದಿವ್ಯ ಭಂಡಾರ. ನಾನು ಸದಾ ಸಿರಿವಂತ, ಏಕೆಂದರೆ ನನಗೆ ಬ್ರಹ್ಮಾಂಡದ ಭಂಡಾರವನ್ನು ಪ್ರವೇಶಿಸುವ ಹಕ್ಕಿದೆ. ಸರ್ವವ್ಯಾಪಿಯಾದ ಶ್ರೇಯಸ್ಕರ (ಭಗವಂತ) ಶಕ್ತಿಯು ನನಗೆ ಬೇಕಾದುದು ಬೇಕೆನಿಸಿದಾಗ ತಂದುಕೊಡುವುದೆಂಬ ಸಂಪೂರ್ಣ ಶ್ರದ್ಧೆಯಿಂದ ನಾನು ಮುಂದುವರಿಯುತ್ತೇನೆ.”

ಇದನ್ನು ಹಂಚಿಕೊಳ್ಳಿ