ಮಾರ್ಗದರ್ಶನ ಮತ್ತು ಪ್ರೋತ್ಸಾಹ

ಯೋಗದಾ ಸತ್ಸಂಗ ಪತ್ರಿಕೆಯಲ್ಲಿ ಈ ಮುಂಚೆ ಪ್ರಕಟಗೊಂಡ ಶ್ರೀ ದಯಾ ಮಾತಾ ಅವರ ಉಪನ್ಯಾಸಗಳ ಸಂಕಲನ. ಶ್ರೀ ಶ್ರೀ ದಯಾ ಮಾತಾ ಅವರು ಭಾರತದ ಯೋಗದಾ ಸತ್ಸಂಗ ಸೊಸೈಟಿ/ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್‌ನ ಅಧ್ಯಕ್ಷರು ಮತ್ತು ಸಂಘಮಾತಾ ಆಗಿ 1955 ರಿಂದ 2010 ರಲ್ಲಿ ಅವರು ನಿಧನರಾಗುವವರೆಗೆ ಸೇವೆ ಸಲ್ಲಿಸಿದ್ದಾರೆ.

ಚರಿತ್ರೆಯುದ್ದಕ್ಕೂ ಮಾನವ ಜನಾಂಗವು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಾ ಬಂದಿದೆ ಮತ್ತು ಇನ್ನು ಮುಂದೆಯೂ ಇಂತಹ ಸಂಕಟಗಳು ಬಂದು ಹೋಗುತ್ತವೆ. ಈ ಪ್ರಪಂಚವು ತನ್ನಷ್ಟಕ್ಕೆ ತಾನು ಮೇಲಕ್ಕೆ ಮತ್ತು ಕೆಳಕ್ಕೆ ಚಕ್ರೀಯವಾಗಿ ಪುನರಾವರ್ತಿತವಾಗುತ್ತಿರುತ್ತದೆ. ಪ್ರಸ್ತುತ, ಸಮಾಜದ ಪ್ರಜ್ಞೆಯು ಸಂಪೂರ್ಣವಾಗಿ ಮೇಲ್ಮುಖವಾಗಿ ಪ್ರಗತಿಯನ್ನು ಹೊಂದುತ್ತಿದೆ; ಸಾವಿರಾರು ವರ್ಷಗಳ ನಂತರ ಅದು ಉತ್ತುಂಗಕ್ಕೇರಿದಂತೆ ಅದು ಮತ್ತೆ ಕೆಳಕ್ಕೆ ಇಳಿಯಲು ಶುರುವಾಗುತ್ತದೆ. ಇಂತಹ ದ್ವಂದ್ವದ ಜಗದೊಳಗೆ ಪ್ರಗತಿ, ವಿಗತಿಗಳು ನಿರಂತರವಾಗಿ ಏರಿಳಿತಗಳೊಂದಿಗೆ ಸಾಗುತ್ತಿರುತ್ತದೆ.

ಈ ವಿಕಾಸದ ಚಕ್ರಗಳಲ್ಲಿ, ನಾಗರಿಕತೆಗಳು ಏಳು ಬೀಳುಗಳನ್ನು ಕಾಣುತ್ತವೆ. ಪುರಾತನ ಕಾಲದ ಮುಂದುವರಿದ ನಾಗರಿಕತೆಗಳನ್ನು ಹೊಂದಿದ ಭಾರತ ಮತ್ತು ಚೀನಾದಂತಹ ದೇಶಗಳನ್ನು ಗಮನಿಸಿ. ಉದಾಹರಣೆಗೆ, ಭಾರತದ ಪುರಾತನ ಸಂಸ್ಕೃತ ಮಹಾಕಾವ್ಯಗಳಲ್ಲಿ, ಕ್ರಿಶ್ಚಿಯನ್ ಯುಗಕ್ಕಿಂತ ಸಾವಿರಾರು ವರ್ಷಗಳ ಪೂರ್ವದಲ್ಲಿ, ಶ್ರೀ ರಾಮನ ಕಾಲದಲ್ಲಿ ತಂತ್ರಜ್ಞಾನವು ಬಹಳ ಮುಂದುವರಿದಿತ್ತು ಎಂಬುದಕ್ಕೆ ,ಅದ್ಭುತವಾದ ಪುಷ್ಪಕ ವಿಮಾನವು ಅವರ ಬಳಿ ಇದ್ದದ್ದನ್ನು ಗಮನಿಸಬಹುದು. ಮತ್ತು ಆ ಸುವರ್ಣ ಯುಗದಲ್ಲಿ ಜೀವಿಸುತ್ತಿದ್ದವರಲ್ಲಿ ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳು ಅತ್ಯಧಿಕವಾಗಿದ್ದವು. ಆದರೆ ಅಂತಿಮವಾಗಿ, ನಾಗರಿಕತೆಗಳು ಅವನತಿಯತ್ತ ಸಾಗಿದವು, ಅಂಧಕಾರ ಯುಗದಲ್ಲಿ ಅಂತಹ ಪ್ರಗತಿಯು ಮರೆಯಾಯಿತು. ಇದಕ್ಕೆ ಕಾರಣವಾಗಿದ್ದೇನು? ಇಂದು ಪ್ರಪಂಚದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಾನು ನಿನ್ನೆ ನನ್ನ ಧ್ಯಾನದ ನಂತರ ಆಲೋಚಿಸಲಾರಂಭಿಸಿದೆ.

ಇಂದಿನ ಬಿಕ್ಕಟ್ಟುಗಳ ಸ್ವರೂಪ

ಆವರ್ತದ ಇಳಿಕೆಯ ಹಂತದಲ್ಲಿ, ಸಾಮಾನ್ಯವಾಗಿ ಜನರು ತಮ್ಮ ಸ್ವಭಾವದ ಆಧ್ಯಾತ್ಮಿಕ ಪಾರ್ಶ್ವದ ಬಗ್ಗೆ ಹೆಚ್ಚಾಗಿ ಅಜ್ಞಾನಿಗಳಾಗುತ್ತಾ ಹೋಗುತ್ತಾರೆ, ಕೊನೆಗೊಮ್ಮೆ ಉದಾತ್ತವಾಗಿರುವುದೆಲ್ಲವೂ ಅದೃಶ್ಯವಾಗುತ್ತದೆ. ಅಂತಹ ಸನ್ನಿವೇಶದಲ್ಲಿ ಆ ನಾಗರಿಕತೆಯು ಅವನತಿಗೊಳ್ಳಲು ಹೆಚ್ಚಿನ ಕಾಲ ಬೇಕಾಗುವುದಿಲ್ಲ. ಇದೇ ಪ್ರಕ್ರಿಯೆಯು ಆವರ್ತದ ಏರಿಕೆಯ ಹಂತದಲ್ಲಿರುವ ದೇಶಗಳಿಗೂ ಸಂಭವಿಸಬಹುದು. ಮಾನವನ ನೈತಿಕ ಮತ್ತು ಆಧ್ಯಾತ್ಮಿಕ ವಿಕಾಸವು ಜ್ಞಾನ ಮತ್ತು ತಂತ್ರಜ್ಞಾನದ ಏರಿಕೆಯ ಪ್ರಗತಿಗೆ ತಕ್ಕಂತೆ ಆಗದಿದ್ದಲ್ಲಿ, ತಾನು ಗಳಿಸಿದ ಶಕ್ತಿಯನ್ನು ತನ್ನದೇ ವಿನಾಶಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಾನೆ. ವಾಸ್ತವವಾಗಿ ಇದು ಇಂದು ನಾವು ಎದುರಿಸುತ್ತಿರುವ ವಿಶ್ವದ ಬಿಕ್ಕಟ್ಟಿನ ಸ್ವರೂಪವೂ ಆಗಿದೆ.

ಮಾನವನ ಪ್ರಜ್ಞೆಯು ಪರಮಾಣುವಿನ ರಹಸ್ಯ ಮತ್ತು ಅದರ ಅದ್ಭುತ ಶಕ್ತಿಯನ್ನು ಹೊರಗೆಡಹುವಷ್ಟು ವಿಕಸನಗೊಂಡಿದೆ, ಈ ಪರಮಾಣುವಿನ ಶಕ್ತಿಯಿಂದ ನಾವು ಕನಸಿನಲ್ಲೂ ಊಹಿಸದ ಅದ್ಭುತವಾದ ಕಾರ್ಯಗಳನ್ನು ಸಾಧ್ಯವಾಗಿಸುವಂತೆ ಮಾಡಬಹುದು. ಆದರೆ ಆ ಜ್ಞಾನದಿಂದ ನಾವೇನು ​​ಮಾಡಿದ್ದೇವೆ? ವಿನಾಶ ಮಾಡುವ ಉಪಕರಣಗಳ ಅಭಿವೃದ್ಧಿಯ ಕಡೆ ನಾವು ನಮ್ಮ ಪ್ರಮುಖ ಗಮನವನ್ನು ಹರಿಸಿದ್ದೇವೆ. ನಮ್ಮ ಜೀವನವನ್ನು ಸಾಗಿಸಲು ಒಂದು ಕಾಲದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದ ಕೆಲಸ ಕಾರ್ಯಗಳಿಂದ ಆಧುನಿಕ ತಂತ್ರಜ್ಞಾನವು ನಮಗೆ ಮುಕ್ತಿಯನ್ನು ನೀಡಿದೆ. ಆದಾಗ್ಯೂ, ಸಾಮಾನ್ಯವಾಗಿ, ಮನುಷ್ಯನು ಗಳಿಸಿದ ಈ ವಿರಾಮದ ಸಮಯವನ್ನು ಅವನ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ವಭಾವಗಳನ್ನು ಮುನ್ನಡೆಸಲು ಉಪಯೋಗಿಸುತ್ತಿಲ್ಲ, ಆದರೆ ಮನುಷ್ಯನು ತನ್ನ ಕೊನೆಯಿರದ ಭೌತಿಕ ಮತ್ತು ಇಂದ್ರಿಯ ಸುಖಗಳ ಈಡೇರಿಕೆಗೆ ತನಗೆ ದೊರೆತ ಹೆಚ್ಚಿನ ವಿರಾಮದ ಸಮಯವನ್ನು ಊಪಯೋಗಿಸುತ್ತಿದ್ದಾನೆ. ಮನುಷ್ಯನು ದ್ವೇಷ, ಅಸೂಯೆ, ಕಾಮ ಮತ್ತು ದುರಾಸೆಗಳಿಂದ ಆಳಲ್ಪಡುವ ತನ್ನ ಇಂದ್ರಿಯ ಸುಖಗಳ ಕುರಿತಾಗಿ ಮಾತ್ರ ಆಲೋಚಿಸಿದಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಸಾಮರಸ್ಯದ ಕೊರತೆ, ಸಮಾಜದೊಳಗೆ ಪ್ರಕ್ಷುಬ್ಧತೆ, ರಾಷ್ಟ್ರಗಳ ನಡುವಿನ ಸಂಘರ್ಷಗಳಿಗೆ ಕಾರಣವಾಗುತ್ತದೆ. ಯುದ್ಧಗಳಿಂದ ಯಾವುದೇ ಪರಿಹಾರಗಳು ಸಾಧ್ಯವಾಗಿಲ್ಲ: ಇದಕ್ಕೆ ಬದಲಾಗಿ ಒಂದು ಮುಖಾಮುಖಿ ಇನ್ನೊಂದು ದೊಡ್ಡ ಹತ್ಯಾಕಾಂಡಕ್ಕೆ ಕಾರಣವಾಗುತ್ತದೆ. ಬುದ್ಧಿವಂತರೂ, ಹೆಚ್ಚು ಪ್ರೀತಿಯುಳ್ಳವರೂ ಆದ ಮಾನವರ ವಿಕಾಸದಿಂದ ಮಾತ್ರ ಜಗತ್ತು ನಿಜವಾಗಿಯೂ ಉತ್ತಮ ಸ್ಥಳವಾಗುತ್ತದೆ.

ಬೆಳಕಿನ ಭರವಸೆ

ಇಂದು ಜಗತ್ತಿನಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ನಿರಾಕರಣೆ ಮತ್ತು ಕತ್ತಲೆಯನ್ನು ನಾವು ಹೇಗೆ ಉತ್ತಮವಾಗಿ ನಿಭಾಯಿಸಬಹುದು ಎಂದು ಒಬ್ಬರು ನನ್ನನ್ನು ಕೇಳಿದರು. ನಾನು ಅದರ ಬಗ್ಗೆ ಬಹಳ ಆಳವಾಗಿ ಪ್ರಾರ್ಥಿಸಿದೆ, ಮತ್ತು ಮೂವತ್ತು ವರ್ಷಗಳ ಹಿಂದೆ ಭಾರತದಲ್ಲಿ ನಾನು ಕೈಗೊಂಡ ತೀರ್ಥಯಾತ್ರೆಯ ಸಮಯದಲ್ಲಿ ಮಹಾವತಾರ ಬಾಬಾಜಿಯ ಗುಹೆಯಲ್ಲಿ ನಾನು ಅನುಭವಿಸಿದ ದೈವಿಕ ಅನುಭವಕ್ಕೆ ನನ್ನ ಮನಸ್ಸು ಮರಳಿತು.

ನಾನು ಮತ್ತು ನನ್ನ ಸಹಚರರು ಗುಹೆಗೆ ಹೋಗುವ ದಾರಿಯಲ್ಲಿದ್ದ ಒಂದು ಸಣ್ಣ ಗುಡಿಸಲಿನಲ್ಲಿ ರಾತ್ರಿ ಕಳೆಯುತ್ತಿದ್ದೆವು. ಮಧ್ಯರಾತ್ರಿಯಲ್ಲಿ ನಾನು ಅತೀಂದ್ರಿಯ ದೃಷ್ಟಿಯಲ್ಲಿ ಕಂಡುಕೊಂಡಿದ್ದೆಂದರೆ ಜಗತ್ತು ಪ್ರಕ್ಷುಬ್ಧತೆ, ಅಶಾಂತಿ ಮತ್ತು ಗೊಂದಲಗಳಿಂದ ಕೂಡಿದ ಬಹಳ ಕಷ್ಟದ ಸಮಯವನ್ನು ಎದುರಿಸಲಿದೆ. ಈ ಸಂದರ್ಭದಲ್ಲಿ ನಾನು ಜೋರಾಗಿ ಕೂಗಿದೆ. ನನ್ನ ಬಳಿ ಇದ್ದ ಇತರರು ನನ್ನ ಕೂಗಿಗೆ ಕಾರಣವೇನು ಎಂದು ಕೇಳಿದರು. ಆಗ ಆದ ಅನುಭವದ ಬಗ್ಗೆ ಮಾತನಾಡಲು ನನಗೆ ಇಷ್ಟವಿರಲಿಲ್ಲ; ಆದರೆ ಕೇವಲ ದಯಾ ಮಾತಾಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ದೊಡ್ಡ ಅರ್ಥವನ್ನು ಇದು ಸೂಚಿಸುತ್ತದೆ ಎಂದು ನನಗೆ ತಿಳಿದಿತ್ತು. ಈ ಅತೀಂದ್ರಿಯ ದರ್ಶನದಲ್ಲಿ ಬ್ರಹ್ಮಾಂಡದ ಮೇಲೆ ಒಂದು ದೊಡ್ಡ ಕಪ್ಪು ಮೋಡವು ಹರಡಿಕೊಂಡಿತ್ತು; ಈ ಅಶುಭ ಕತ್ತಲೆಯು ನೋಡಲು ಭಯಾನಕವಾಗಿತ್ತು. ಆದರೆ ಮುಂದಿನ ಕ್ಷಣದಲ್ಲಿ, ಆ ಮೋಡದ ಕಪ್ಪು ಅಲೆಗಳನ್ನು ಹಿಂದಕ್ಕೆ ತಳ್ಳುವ ಭಗವಂತನ ಮಹಾನ್ ದೈವಿಕ ಪ್ರೀತಿಯ, ಆನಂದದಾಯಕವಾದ ಬೆಳಕನ್ನು ನಾನು ನೋಡಿದೆ. ಮತ್ತು ಎಲ್ಲವೂ ಅಂತಿಮವಾಗಿ ಸರಿಯಾಗುತ್ತದೆ ಎಂಬುದು ನನಗೆ ತಿಳಿದಿತ್ತು.

ಆ ಅನುಭವದಲ್ಲಿ ಮುಂಗಾಣಲಾದ ತೊಂದರೆಗೀಡಾಗುವ ಸಮಯವನ್ನು ನಾವು ಈಗ ಹಾದು ಹೋಗುತ್ತಿದ್ದೇವೆ. ಪ್ರಸ್ತುತ ಯುದ್ಧಗಳು, ಕ್ಷಾಮ, ಗುಣಪಡಿಸಲಾಗದ ಖಾಯಿಲೆಗಳು, ಆರ್ಥಿಕ ಸಂಕಷ್ಟಗಳು, ದುರಂತದ ವಿಪತ್ತುಗಳು, ಧಾರ್ಮಿಕ ಗಲಭೆಗಳು ಮತ್ತು ಆಂತರಿಕ ಕಲಹಗಳು ಪ್ರತಿಯೊಂದು ದೇಶದಲ್ಲೂ ಜರುಗುತ್ತಿವೆ. ಎಲ್ಲಕ್ಕಿಂತ ಕೆಟ್ಟದ್ದಾದ ಅಂಶವೆಂದರೆ ಮುಂದುವರೆಯುತ್ತಿರುವ ಅರಾಜಕ ವಾತಾವರಣದಲ್ಲಿ ಭಯ ಮತ್ತು ಅಸಹಾಯಕತೆಗಳು ಬೆಳೆಯುತ್ತಿರುವ ಭಾವನೆ ಎಲ್ಲೆಡೆ ಇದೆ.

ಈ ಯಾತನೆಗಳು ನಮ್ಮನ್ನೇಕೆ ಬಾಧಿಸುತ್ತಿವೆ? ನಮ್ಮ ಪರಿಸ್ಥಿತಿಯು ಪ್ರಾಚೀನ ಈಜಿಪ್ಟಿನವರಿಗಿಂತ ಭಿನ್ನವಾದುದೇನಲ್ಲ, ಅವರ ಪವಿತ್ರ ಗ್ರಂಥಗಳಲ್ಲಿ ದಾಖಲಿಸಲ್ಪಟ್ಟಿರುವಂತೆ ದೈವೇಚ್ಛೆಯನ್ನು ಧಿಕ್ಕರಿಸಿದ ಕಾರಣಕ್ಕಾಗಿ ಪ್ಲೇಗ್ ಮತ್ತು ವಿಪತ್ತುಗಳಿಂದ ಬಳಲುತ್ತಿದ್ದರು. ಅಂತಹ ಘಟನೆಗಳು ಬೈಬಲ್‌ನ ಕಾಲದಲ್ಲಿ ಮಾತ್ರ ಸಂಭವಿಸಿವೆ ಎಂದು ನಾವು ಭಾವಿಸುತ್ತೇವೆ, ಆದರೆ ಇದು ಹಾಗಲ್ಲ. ಈಗಲೂ ಸಹ ಅನೇಕರು ಪ್ಲೇಗ್‌ ಖಾಯಿಲೆಯಿಂದ ಬಳಲುತ್ತಿರುವುದನ್ನು ನೋಡುತ್ತಿದ್ದೇವೆ. “ಓಹ್, ಇವುಗಳು ನಾವು ದೈವಿಕ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮವಾಗಿ ಉಂಟಾಗಿರಲಾರದು. ಇದು ಕೇವಲ ಕಾಕತಾಳೀಯವಾಗಿದೆ,” ಎಂದು ನಾವು ಕುರುಡಾಗಿ ಯೋಚಿಸುತ್ತೇವೆ. ಇದು ಕಾಕತಾಳೀಯವಲ್ಲ.

ಸಮರ್ಪಕ ನಡವಳಿಕೆಗಳು ವಿಶ್ವ ನಿಯಮದ ಭಾಗವಾಗಿವೆ

ನಿಮ್ಮನ್ನು ನೀವು ಕೇಳಿಕೊಳ್ಳಿ: “ಸತ್ಯದಿಂದ ನಾವು ಎಷ್ಟು ದೂರ ಬಂದಿದ್ದೇವೆ?” “ನೀನು ಕೊಲ್ಲಬಾರದು; ನೀನು ವ್ಯಭಿಚಾರ ಮಾಡಬಾರದು; ನೀನು ಕಳ್ಳತನ ಮಾಡಬಾರದು….” ಈ ಸತ್ಯದ ನಿಯಮಗಳು ಕ್ರಿಸ್ತನ ಬೋಧನೆಗಳಾದ ದಶಾನುಶಾಸನಗಳು ಮತ್ತು ಅದಕ್ಕೂ ಪೂರ್ವದಲ್ಲಿ ಅಷ್ಟಾಂಗ ಯೋಗದಲ್ಲಿ ಪ್ರತಿಪಾದಿತವಾಗಿವೆ — ಅಷ್ಟಾಂಗ ಯೋಗದಲ್ಲಿ ಪ್ರತಿಪಾದಿತವಾದ ಮೊದಲ ಎರಡು ಹಂತಗಳೆಂದರೆ ಯಮ ಮತ್ತು ನಿಯಮ, ನಾವು ಅಳವಡಿಸಿಕೊಳ್ಳಬೇಕಾದ ಸರಿಯಾದ ನಡವಳಿಕೆಯ ತತ್ವಗಳು ಮತ್ತು ನಾವು ದೂರವಿಡಬೇಕಾದ ತಪ್ಪು ನಡವಳಿಕೆಯ ತತ್ವಗಳು.

ಈ ದೈವಿಕ ನಿಯಮಗಳು ನಮ್ಮ ಪ್ರೀತಿಯ ದೇವರಿಂದ ಮಾನವರಿಗೆ ನೀಡಲಾಗಿರುವ ಶಾಶ್ವತವಾದ ಸತ್ಯದ ಅಂಶಗಳಾಗಿವೆ. ಭಗವಂತನು ಈ ವಿಶ್ವವನ್ನು ಅತ್ಯಂತ ವೈಜ್ಞಾನಿಕವಾಗಿ ಮತ್ತು ಕರಾರುವಾಕ್ಕಾದ ಸ್ವರೂಪದಲ್ಲಿ ನಿರ್ಮಿಸಿದ್ದಾನೆ; ಅದರ ಪ್ರತಿಯೊಂದು ಅಂಶವೂ ನಿಯಮಕ್ಕೊಳಪಟ್ಟಿದೆ. ಯೇಸು ಮತ್ತು ಪ್ರಾಚೀನ ಭಾರತದ ಋಷಿಗಳಂತಹ ಮಹಾನ್ ಆತ್ಮಗಳಿಗೆ ಜ್ಞಾನವನ್ನು ನೀಡುವ ಮೂಲಕ ಅವನು ತನ್ನ ನಿಯಮಗಳನ್ನು ನಮಗೆ ಸ್ಪಷ್ಟಪಡಿಸುತ್ತಾನೆ. ನಮ್ಮ ಜೀವನವನ್ನು ಅವನೊಂದಿಗೆ ಶ್ರುತಿಗೂಡಿಕೊಂಡಿರುವಂತೆ ಮಾಡಲು ನಾವು ಯಾವ ರೀತಿ ವರ್ತಿಸಬೇಕು ಎಂಬುದರ ಕುರಿತಾದ ಮಾರ್ಗಸೂಚಿಗಳನ್ನು ನೀಡಿ ನಮಗೆ ಸಹಾಯ ಮಾಡಲು ಈ ನಿಯಮಗಳನ್ನು ಭಗವಂತನು ನಮಗಾಗಿ ರೂಪಿಸಿದ್ದಾನೆ.

ಯುಗಯುಗಗಳಿಂದ ಭಗವಂತನ ಮಹಾನ್ ಪ್ರೇಮಿಗಳು ತಮ್ಮ ದೈವಿಕ ಸಂದೇಶಗಳ ಜೊತೆ ಈ ಜಗತ್ತಿಗೆ ಬಂದಿದ್ದಾರೆ. ಪ್ರಾಚೀನ ಕಾಲದಲ್ಲಿ ಮೋಸಸ್ ಈ ನಿಯಮಗಳನ್ನು ನಮಗೆ ನೀಡಿದ್ದ. ಉದಾಹರಣೆಗೆ “ಕಣ್ಣಿಗೆ ಕಣ್ಣು” “ಹಲ್ಲಿಗೆ ಹಲ್ಲು”. ಏನನ್ನು ನಾವು ಬಿತ್ತುತ್ತೇವೋ, ಅದನ್ನೇ ಬೆಳೆಯುವೆವು ಎಂಬ ದೈವಿಕ ನಿಯಮದ ನಿಷ್ಠುರತೆಯನ್ನು ಆತನು ನಮಗೆ ತೋರಿಸಿಕೊಟ್ಟ. ಹಲವಾರು ಶತಮಾನಗಳ ನಂತರ ಬಂದ ಏಸುಕ್ರಿಸ್ತನು ನಮಗೆ ಮಹಾನ್ ಕರುಣೆಯ ಬೋಧನೆಯನ್ನು ನೀಡಿದ. ಆ ಸಂದರ್ಭದಲ್ಲಿ ಮಾನವ ಜನಾಂಗವು ಕ್ಷಮೆ ಮತ್ತು ದಯೆಯ ಗುಣಗಳನ್ನು ಕಲಿಯುವ ಅವಶ್ಯಕತೆ ಇತ್ತು, “ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು” ಇದರಲ್ಲಿ, ಅನೇಕ ವರ್ಷಗಳ ಪ್ರತೀಕಾರವಿತ್ತು. ಕ್ರಿಸ್ತನು ಕ್ಷಮೆ, ಹಂಚಿಕೆ, ದೈವಿಕ ಪ್ರೀತಿಯನ್ನು ಕಲಿಸುವ ಮೂಲಕ ನಿಯಮದ ಮೇಲೆ ಇರುವ ನಿರ್ಬಂಧಕರವಾದ, ಪಟ್ಟುಬಿಡದ ತೀವ್ರತೆಯನ್ನು ಸಮತೋಲನಗೊಳಿಸಲು ಪ್ರಯತ್ನಿಸಿದನು. ಆತನ ಪ್ರಭಾವ ಇಂದಿನವರೆಗೂ ಮುಂದುವರೆದಿದೆ.

ಈಗ ನಾವು ಮತ್ತೊಂದು ಯುಗವನ್ನು ಪ್ರವೇಶಿಸಿದ್ದೇವೆ — ಮಹಾವತಾರ ಬಾಬಾಜಿಯು ಏಸು ಕ್ರಿಸ್ತನೊಂದಿಗಿನ ಆಧ್ಯಾತ್ಮಿಕ ಸಂಸರ್ಗದಲ್ಲಿ ಯಾವುದು ಮಾನವಕೋಟಿಯನ್ನು ಕೇವಲ ಕ್ರಿಸ್ತನ ಬೋಧನೆಗಳನ್ನು ಕೇಳುವುದು ಮತ್ತು ಮಾತನಾಡುವುದಕ್ಕಿಂತ, ಅಥವಾ ಕೇವಲ ಭಾರತದ ಮಹಾನ್‌ ಗ್ರಂಥವಾದ ಭಗವದ್ಗೀತೆಯನ್ನು ಓದುವುದು ಅಥವಾ ಪಠಿಸುವುದಕ್ಕಿಂತ ಆಚೆಗೆ ಹೋಗಲು ಸಾಧ್ಯವಾಗಿಸುವುದೋ ಅಂತಹ ಒಂದು ಕಾಲ ಎಂದು ಪರಮಹಂಸಜಿ ನಮಗೆ ಹೇಳಿದ್ದಾರೆ, ಏಕೆಂದರೆ ಮಾನವಕೋಟಿಯು ಒಂದು ಗಹನವಾದದ್ದಕ್ಕಾಗಿ ಪರಿತಪಿಸುತ್ತಿದೆ.

ಆ “ಯಾವುದೋ ಒಂದು,” ಅಂದರೆ, ಪ್ರೀತಿಯ ಭಗವಂತನೊಂದಿಗೆ ಇರುವ ನೇರ ಸಂಪರ್ಕ. ನಮ್ಮೊಳಗಿನ ಯಾರೊಬ್ಬರೂ ಆ ದೈವಿಕ ಅರಿವಿನ ಆಚೆಗಿಲ್ಲ. ನಾವೆಲ್ಲರೂ ಅವನ ಪ್ರತಿಬಿಂಬದಿಂದ ಮಾಡಲ್ಪಟ್ಟಿದ್ದೇವೆ. ನಮ್ಮ ವರ್ಣ, ಪಂಥ, ನಂಬಿಕೆ, ಸಿದ್ದಾಂತಗಳು ಏನೇ ಇದ್ದಾಗ್ಯೂ ನಾವೆಲ್ಲರೂ ಅವನ ಅಂಶವಾಗಿದ್ದೇವೆ. ನಮ್ಮ ಪ್ರತಿಯೊಬ್ಬರ ಒಳಗೂ ದೈವತ್ವದ ಕಿಡಿಯಿದೆ. “ನೀನೇ ದೇವಮಂದಿರ ಮತ್ತು ಭಗವಂತನ ಚೈತನ್ಯವು ನಿನ್ನೊಳಗಿದೆ ಎಂಬುದು ನಿನಗೆ ತಿಳಿದಿಲ್ಲವೇ?” ಎಂದು ಶಾಸ್ತ್ರಗಳು ಹೇಳಿವೆ.

ನಮ್ಮೊಳಗಿರುವ ಭಗವಂತನ ಚೈತನ್ಯ ಯಾವುದು? ಅದು ಆತ್ಮ; ನಾವೇನಾಗಿದ್ದೇವೋ ಅದರ ಸಾರಸಂಗ್ರಹ. ಆದರೆ ನಾವು ದಿವ್ಯ ಆತ್ಮಗಳೆಂದು ನಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆ? ಬಹಳಷ್ಟು ಜನರು ಆ ಅರಿವಿನಿಂದ ಎಷ್ಟು ದೂರ ಸಾಗಿದ್ದಾರೆಂದರೆ, ಅವರಿಗೆ ದಿನದ ಒಂದು ನಿಮಿಷ ಕೂಡ ಭಗವಂತನ ನೆನಪಾಗುವುದಿಲ್ಲ. ಇಂದ್ರಿಯಗಳ ದುರ್ಬಳಕೆಯಿಂದ ಅವರ ಪ್ರಜ್ಞೆಯು ಜಡಗಟ್ಟಿದೆ. ರುಚಿಯ ಗ್ರಹಿಕೆ, ಮದ್ಯಪಾನ, ದುರಾಸೆ, ಅನುಚಿತ ತಿನ್ನುವ ಅಭ್ಯಾಸಗಳಿಂದ ಜಡಗಟ್ಟಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಅವಲೋಕಿಸುವ ವಿಷಯ ಲೋಲುಪತೆಯಿಂದ ಕಣ್ಣುಗಳು ಜಡಗಟ್ಟಿವೆ. ನಾವು ಕೇಳುವ ಎಲ್ಲ ಅಹಿತಕರ ವಿಷಯಗಳಿಂದ ಕಿವಿಗಳು ಜಡಗಟ್ಟಿವೆ. ಕೆಟ್ಟ ಯೋಚನೆಗಳನ್ನು ಪ್ರತಿಬಿಂಬಿಸುವ ಕೆಟ್ಟ ಶಬ್ದಗಳನ್ನು ಉಗಿಯುತ್ತ ನಮ್ಮ ನಾಲಿಗೆಯು ಜಡಗಟ್ಟಿದೆ.

ನಾವೇ ಪ್ರಪಂಚದ ಪರಿಸ್ಥಿತಿಗಳ ಸೃಷ್ಟಿಕರ್ತರು

ನಾವು ಎದುರಿಸುವ ಪರಿಸ್ಥಿತಿಗಳನ್ನು ನಾವೇ ಸೃಷ್ಟಿಸಿಕೊಂಡಿರುತ್ತೇವೆ. ನಮ್ಮ ಜೀವನದ ಎಲ್ಲಾ ಹಂತಗಳಲ್ಲಿ ನಾವು ಮಾಡಿದ ಅನೈತಿಕ ವರ್ತನೆಗಳು ಹಾಗೂ ನೈತಿಕ ಮಟ್ಟಗಳ ಕುಸಿತದ ಒಟ್ಟಾರೆ ಮೊತ್ತವೇ ನಾವು ಸೃಷ್ಟಿಸಿಕೊಂಡಿರುವ ಪರಿಸ್ಥಿತಿಗಳಾಗಿವೆ.

ನಾಗರಿಕತೆಯ ಉಳಿವು ಯುಕ್ತ ನಡುವಳಿಕೆಯ ಗುಣಮಟ್ಟವನ್ನು ಪಾಲಿಸುವುದರ ಮೇಲೆ ನಿರ್ಭರಿತವಾಗಿದೆ. ನಾನು ಕಾಲದಿಂದ ಕಾಲಕ್ಕೆ ಬದಲಾಗುವ ಮಾನವ-ನಿರ್ಮಿತ ನಿಯಮಗಳ ಬಗ್ಗೆ ಹೇಳುತ್ತಿಲ್ಲ, ಬದಲಾಗಿ ಆರೋಗ್ಯಕರ, ಸಂತೋಷಕರ, ಶಾಂತಿಯುತ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಉತ್ತೇಜಿಸುವ — ಸಮತೋಲಿತ ಏಕತೆಯೊಳಗೆ ವೈವಿಧ್ಯತೆಗೆ ಅವಕಾಶವನ್ನು ನೀಡುವ ನಡುವಳಿಕೆಯ ಕಾಲಾತೀತ ಸಾರ್ವತ್ರಿಕ ತತ್ತ್ವಗಳ ಬಗ್ಗೆ.

ದೇವರ ವ್ಯವಸ್ಥಿತ ವಿಶ್ವದ ಹಿಂದಿರುವ ಸತ್ಯಗಳ ಅಗಾಧತೆಯನ್ನು ಗ್ರಹಿಸಲು ನಮ್ಮ ಸಾಮಾನ್ಯ ಪ್ರಜ್ಞೆಗೆ ಸಾಧ್ಯವಾಗುವುದು ಕೆಲವು ವೇಳೆ ಕಷ್ಟವೇ ಸರಿ. ಆದರೆ, ಅವುಗಳ ಆತ್ಯಂತಿಕ ಸತ್ಯಾಸತ್ಯತೆಗಳು ಇದ್ದೇ ಇವೆ ಹಾಗೂ ಬ್ರಹ್ಮಾಂಡ ಮತ್ತು ಅದರ ಜೀವಿಗಳನ್ನು ಭಗವಂತನು ಎತ್ತಿಹಿಡಿಯುವ ನಿಷ್ಕೃಷ್ಟ ನಿಯಮಗಳ ಜೊತೆ ಯಾವುದೇ ರಾಜಿ ಇರಲು ಸಾಧ್ಯವಿಲ್ಲ. ವಿಶ್ವದ ಪ್ರತಿಯೊಂದೂ ಒಂದಕ್ಕೊಂದು ಸಂಬಂಧ ಹೊಂದಿವೆ. ಮಾನವ ಜೀವಿಗಳಾಗಿ ನಾವು ಪರಸ್ಪರರೊಂದಿಗೆ ಮಾತ್ರವಲ್ಲದೆ, ಇಡೀ ಪ್ರಕೃತಿಯ ಜೊತೆಗೂ ಕೂಡ ಸಂಬಂಧ ಹೊಂದಿದ್ದೇವೆ. ಏಕೆಂದರೆ, ಎಲ್ಲ ಜೀವಿಗಳೂ ಒಂದೇ ಮೂಲವಾದ ಭಗವಂತನಿಂದ ಸೃಷ್ಟಿಸಲ್ಪಡುತ್ತವೆ. ಅವನು ಪರಿಪೂರ್ಣ ಸಮರಸ; ಆದರೆ ಮನುಷ್ಯನ ತಪ್ಪು ಆಲೋಚನೆಗಳು ಮತ್ತು ಕ್ರಿಯೆಗಳು ಈ ಜಗತ್ತಿನಲ್ಲಿ ಅಭಿವ್ಯಕ್ತಿಸಬೇಕೆಂದಿರುವ ಅವನ ಸಮರಸವಾದ ಉದ್ದೇಶದ ಮೇಲೆ ಅಸಂಗತ ಪರಿಣಾಮವನ್ನು ಉಂಟುಮಾಡುತ್ತವೆ. ನೀವು ಒಂದು ರೇಡಿಯೋ ಸ್ಟೇಷನ್‌ಗೆ ಶ್ರುತಿ ಮಾಡುವಾಗ ಸ್ಥಾಯೀ ಪ್ರವಾಹವು ಕಾರ್ಯಕ್ರಮವನ್ನು ಸ್ಪಷ್ಟವಾಗಿ ಕೇಳಲು ಅಡ್ಡಿಪಡಿಸುವಂತೆಯೇ, ಮನುಷ್ಯನ “ಸ್ಥಾಯೀ” ದುರ್ನಡತೆಯು, ಪ್ರಕೃತಿಯ ಶಕ್ತಿಗಳ ಸಾಮರಸ್ಯವನ್ನು ಪಲ್ಲಟಗೊಳಿಸುತ್ತದೆ. ಇದರ ಪರಿಣಾಮವೇ ಇಂದು ನಾವು ಎದುರಿಸುತ್ತಿರುವ ಯುದ್ಧಗಳು, ನೈಸರ್ಗಿಕ ವಿಪತ್ತುಗಳು, ಸಾಮಾಜಿಕ ಸಂಕಷ್ಟಗಳು ಮತ್ತು ಇತರ ಸಮಸ್ಯೆಗಳು.

“ಭಗವಂತನ ಬೆಳಕು ಮತ್ತು ಸಂತೋಷದಿಂದ ತುಂಬಿದೆ”

ನಾವು ಬದಲಾಗಲೇಬೇಕು. ಇದೇ ಪರಮಹಂಸ ಯೋಗಾನಂದರ ಸಂದೇಶ; ಆದ್ದರಿಂದಲೇ ಅವರು ಸ್ಥಾಪಿಸಿದ ಈ ಕಾರ್ಯವು ಬೆಳೆಯುತ್ತಲೇ ಹೋಗುತ್ತದೆ — ಏಕೆಂದರೆ, ಇದು ಮನುಷ್ಯ ಬದಲಾಗಲು ಸಹಾಯ ಮಾಡಬಲ್ಲದು ಮತ್ತು ಮಾಡುತ್ತದೆ.

ನೋವಿನಿಂದ ಪರಿತಪಿಸುತ್ತಿರುವ ಜನರು ಸಾಮಾನ್ಯವಾಗಿ: “ಭಗವಂತ ನನಗೇಕೆ ಇದನ್ನು ಮಾಡಿದ?” ಎಂದು ಹೇಳುತ್ತಿರುತ್ತಾರೆ. ನಮಗೆ ಅದನ್ನು ಅವನು ಮಾಡಲಿಲ್ಲ. ನಮ್ಮ ಕ್ರಿಯೆಗಳಿಗೆ ನಾವೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ನಾವು ಒಂದು ಕಲ್ಲು ಗೋಡೆಗೆ ಡಿಕ್ಕಿ ಹೊಡೆದಾಗ, ಆ ಗೋಡೆ ನಮಗೆ ನೋವುಂಟುಮಾಡಬೇಕೆಂದು ಬಯಸಿರಲಿಲ್ಲ; ಆದರೂ ನಾವು ನಮ್ಮ ಗೆಣ್ಣುಗಳಿಗೆ ಅಥವಾ ತಲೆಗೆ ಗಾಯ ಮಾಡಿಕೊಳ್ಳಬಹುದು. ಅದಕ್ಕಾಗಿ ನಾವು ಗೋಡೆಯನ್ನು ಶಪಿಸಲಾಗುವುದಿಲ್ಲ. “ಆದರೆ ಆ ಗೋಡೆ ಅಲ್ಲಿತ್ತೆಂದು ನನಗೆ ತಿಳಿದಿರಲಿಲ್ಲ; ತಿಳಿದಿದ್ದರೆ, ಗೋಡೆಗೆ ಡಿಕ್ಕಿ ಹೊಡೆಯುತ್ತಿರಲಿಲ್ಲ!” ಎಂದು ನಾವು ಬೊಬ್ಬೆ ಹೊಡೆಯಬಹುದು. ಆದ್ದರಿಂದಲೇ ಭಗವಂತನು ದೈವಿಕ ನಿಯಮಗಳನ್ನು ರಚಿಸಿ ಪ್ರಪಂಚದ ಎಲ್ಲ ಮಹಾನ್‌ ಧರ್ಮ-ಶ್ರದ್ಧೆಯವರಿಗೆ ಅವನ್ನು ಮಾರ್ಗದರ್ಶಿ ಸೂಚನೆಯೆಂದು ಮಾಡಿದ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಅವನು ಹೇಳುತ್ತಿದ್ದಾನೆ: “ನನ್ನ ಮಗುವೇ, ನೀನು ಅನುಸರಿಸಲೇಬೇಕಾದ ಪರಮ ತತ್ತ್ವಗಳಿವು.” ನಾವು ದುರ್ಬಲರೆಂದು ಅವನಿಗೆ ತಿಳಿದಿತ್ತು; ನಾವು ಸೂಕ್ಷ್ಮ ಪ್ರಕೃತಿಯವರೆಂದು ಅವನಿಗೆ ತಿಳಿದಿತ್ತು. ಈ ಭೌತಿಕ ಜಗತ್ತಿನಲ್ಲಿ ಆಳವಾಗಿ ಮುಳುಗಿರುವುದರಿಂದ ನಾವು ಅವನೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದ್ದೇವೆ — ಹಾಗೂ ನಮ್ಮ ದೃಷ್ಟಿ ಮತ್ತು ವಿವೇಚನೆಗಳು ಮಸುಕಾಗಿವೆ ಎಂದು ಅವನಿಗೆ ತಿಳಿದಿತ್ತು. ಆದ್ದರಿಂದ ನಾವು ಯಾವಾಗ ತಪ್ಪು ಮಾಡುತ್ತೇವೆಂದು ಅರಿಯುವುದಕ್ಕೆ ಸಹಾಯ ಮಾಡಲು ಅವನು ಪ್ರವಾದಿಗಳು ಹಾಗೂ ಋಷಿಗಳ ಮೂಲಕ ಆ ನಿಯಮಗಳನ್ನು ನಮಗೆ ನೀಡಿದ. ನಾವು ಆ ಚಿರಂತನ ದಿವ್ಯ ತತ್ವಗಳನ್ನು ಉಲ್ಲಂಘಿಸಿದಾಗ ಕಷ್ಟಕ್ಕೊಳಗಾಗುತ್ತೇವೆ.

ನಾವು ಅವರ ಬಳಿ ಹಿಂತಿರುಗಲೇ ಬೇಕು. ಕ್ರಿಸ್ತ ಹೇಳಿದಂತೆ ನಮ್ಮ ಸಾಮ್ರಾಜ್ಯವು ಈ ಪ್ರಪಂಚಕ್ಕೆ ಸಂಬಂಧಿಸಿದ್ದಲ್ಲ ಎಂಬುದನ್ನು ನಾವು ಅರಿಯಲೇಬೇಕು. ಈ ಐಹಿಕ ಸಾಮಾನ್ಯ ಸಾಮ್ರಾಜ್ಯದಾಚೆ ಆ ಸಾಮ್ರಾಜ್ಯವಿದ್ದು ಅಲ್ಲಿ ದಿವ್ಯ ಜೀವಿಗಳು, ಮಹಾನ್ ಸಂತರು ಮತ್ತು ಗುರುಗಳು ಇರುತ್ತಾರೆ. ನಾನು ಅದೆಷ್ಟು ಬಾರಿ ಪರಮಹಂಸಜಿ ತಮ್ಮ ಕೋಣೆಯಲ್ಲಿ ಇದ್ದಕ್ಕಿದ್ದಂತೆ ನಿಶ್ಚಲರಾಗಿ ಏಕಾಂತಕ್ಕೆ ಹೋಗುವುದನ್ನು ಕಂಡಿದ್ದೇನೆ. ಆ ಸಂದರ್ಭಗಳಲ್ಲಿ ಅವರ ಪಾದಗಳ ಬಳಿ ಕುಳಿತು ಅವರೊಡನೆ ಧ್ಯಾನ ಮಾಡುವ ಪುಣ್ಯ ನಮ್ಮಲ್ಲಿ ಕೆಲವರಿಗೆ ಲಭಿಸಿತ್ತು. ಅವರು ಕಣ್ಣುಗಳನ್ನು ತೆರೆದ ನಂತರ, ಆ ಬೇರೊಂದು ಪ್ರಪಂಚದ ಬಗ್ಗೆ ಮಾತನಾಡುತ್ತಿದ್ದರು: “ನೀವು ಈ ಅನಿತ್ಯ ಜಗತ್ತನ್ನು ನೋಡುತ್ತಿದ್ದೀರಿ? ಇದು ಎಷ್ಟು ಅಪರಿಪೂರ್ಣವಾಗಿದೆ. ಇದರಾಚೆಗಿರುವ, ಭಗವಂತನ ಪ್ರಕಾಶ ಮತ್ತು ಆನಂದದಿಂದ ತುಂಬಿರುವ ಆ ಮಹಾನ್‌ ಪ್ರಪಂಚವನ್ನು ನಾನು ನೋಡಿದ ಹಾಗೆ ನೀವು ಕೂಡ ನೋಡಲು ಸಾಧ್ಯವಾಗಿದ್ದರೆ.”

ನನ್ನ ಪ್ರೀತಿಯ ಬಾಂಧವರೇ, ನಿಮ್ಮ ಸಾಮ್ರಾಜ್ಯವೂ ಸಹ ಈ ಪ್ರಪಂಚಕ್ಕೆ ಸೇರಿದ್ದಲ್ಲ. ನಮ್ಮ ನೈಜ ಸಾಮ್ರಾಜ್ಯದ ಅರಿವನ್ನು ನಾವು ಕಳೆದುಕೊಳ್ಳದಿರೋಣ; ಈ ಪ್ರಪಂಚದ ವಸ್ತು ವಿಷಯಗಳಿಗಾಗಿ ನಮ್ಮೆಲ್ಲಾ ಸಮಯ ಮತ್ತು ಗಮನವನ್ನು ವ್ಯಯ ಮಾಡದಿರೋಣ. ಏಕೆಂದರೆ ನಾವು ಒಂದು ದಿನ ಈ ಪ್ರಪಂಚವನ್ನು ಬಿಟ್ಟು ಹೋಗಲೇಬೇಕು.

ನಾಶ ಮತ್ತು ನಿರಾಶೆಯನ್ನು ಒಪ್ಪಿಕೊಳ್ಳಬೇಡಿ

ಈ ಪ್ರಪಂಚದಲ್ಲಿ ನಾವು ʼನಾಶ ಮತ್ತು ನಿರಾಶೆಯನ್ನು ಹೇಗೆ ಎದುರಿಸುವುದು?ʼ ಎಂದು ನನ್ನನ್ನು ಕೇಳಿದರೆ, ನಾನು ನಿಮಗೆ ಹೇಳುತ್ತೇನೆ: ಅದನ್ನು ಒಪ್ಪಿಕೊಳ್ಳಬೇಡಿ! ನಿಮ್ಮ ಪ್ರಜ್ಞೆಯಲ್ಲಿ ಅದನ್ನು ಕ್ಲೇಶವಾಗಿ ಅಸ್ತಿತ್ವದಲ್ಲಿರಲು ಬಿಡದ ಹೊರತು ಅದು ಅಸ್ತಿತ್ವದಲ್ಲಿರುವುದಿಲ್ಲ. ನಿಮ್ಮ ಅರಿವಿನ ಕೇಂದ್ರವನ್ನು ಬದಲಾಯಿಸಲು ಪ್ರಯತ್ನ ಪಡಿ. ನಾವು ದಿನದಲ್ಲಿ ಎಷ್ಟು ಬಾರಿ ಭಗವಂತನ ಬಗ್ಗೆ ಯೋಚಿಸುತ್ತೇವೆ? ಎಷ್ಟು ಬಾರಿ ಆಂತರ್ಯದಲ್ಲಿರುವ ಭಗವಂತನೆಡೆಗೆ ಹೋಗುತ್ತೇವೆ? ಸದಾ ಅವನ ಉಪಸ್ಥಿತಿಯ ಪ್ರಜ್ಞೆಯಲ್ಲಿದ್ದು, “ನನ್ನ ದೇವರೇ ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂಬ ಚಿಂತನೆಯಲ್ಲಿ ಸದಾ ಇರುವುದು ಎಷ್ಟು ಅದ್ಭುತವಾಗಿದೆ. ಎಂತಹ ರೋಮಾಂಚನವದು. “ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ಮೊದಲು ನಾನು ನಿನ್ನನ್ನು ಪ್ರೀತಿಸುವುದರಿಂದ, ನಾನು ಎಲ್ಲ ಮಾನವಕೋಟಿಯ ಬಗ್ಗೆ ಪ್ರೀತಿಯಿಂದಿದ್ದೇನೆ. ನಾನು ನಿನ್ನನ್ನು ಪ್ರೀತಿಸುವುದರಿಂದ ಯಾರು ನನ್ನನ್ನು ತಪ್ಪಾಗಿ ತಿಳಿದುಕೊಂಡಿದ್ದಾರೋ ಅವರನ್ನು ಕ್ಷಮಿಸಬಲ್ಲೆ. ನಾನು ನಿನ್ನನ್ನು ಪ್ರೀತಿಸುವುದರಿಂದ, ಈ ಪ್ರಪಂಚದಲ್ಲಿ ನಾನು ಕೇವಲ ಒಳ್ಳೆಯದನ್ನೇ ಮಾಡಲು ಬಯಸುತ್ತೇನೆ.” ಇದೇ ನಾವು ಬದುಕಬೇಕಾದ ದಾರಿ.

ಈ “ನಾಶ ಮತ್ತು ನಿರಾಶೆಯಿಂದ” ಧೈರ್ಯಗುಂದದಿರಿ; ಇದು ಸರಿದು ಹೋಗುತ್ತದೆ. ಈ ಪ್ರಪಂಚದಲ್ಲಿ ಅನೇಕ ನಾಗರಿಕತೆಗಳು ಬಂದು ಹೋಗಿವೆ. ನಾವು ಇಂದು ನೋಡುತ್ತಿರುವ ಹಾಗೆಯೇ ಅಸಂಖ್ಯಾತ ಸಂಕಷ್ಟಗಳು ಇದ್ದವು–ನಮಗೆ ತಿಳಿದಿರಲು ಮತ್ತು ನೆನಪಿರಲು ಸಾಧ್ಯವಿರುವುದಕ್ಕಿಂತ ಹೆಚ್ಚು — ನಮ್ಮ ಆತ್ಮಗಳು ನಮ್ಮ ಪುನರ್ಜನ್ಮಗಳ ದೀರ್ಘ ಪಯಣದಲ್ಲಿ ಅಂತಹ ಅವಧಿಗಳನ್ನು ಹಾದು ಹೋಗಿದ್ದರೂ. ಆದರೆ ಇರುವುದು ಇದಷ್ಟೇ ಅಲ್ಲ. ಆ ಬೇರೆ ಪ್ರಪಂಚದಲ್ಲಿ ನಮಗೆ ಇದಕ್ಕಿಂತ ಆಚೆಗಿನ ಉತ್ತಮವಾದದ್ದೊಂದಿದೆ. ನಾವು ನಮ್ಮ ಮನಸ್ಸನ್ನು ಎಷ್ಟು ಶರೀರದ ಬಂಧನದ ಆವರಣದಿಂದ ಆಚೆಗೆ ಕರೆದೊಯ್ಯುತ್ತೇವೆಯೋ ಅಷ್ಟೇ ನಮ್ಮ ಅರಿವನ್ನು ದಿವ್ಯ ಸಾಮ್ರಾಜ್ಯದೆಡೆಗೆ ಮೇಲೆತ್ತಬಹುದು.

ನಾವು ಇಂದ್ರಿಯಗಳನ್ನು ಆಧ್ಯಾತ್ಮೀಕರಿಸಲು ಪ್ರಯತ್ನಿಸುವುದರಿಂದ ಆರಂಭಿಸುತ್ತೇವೆ. ಕೇವಲ ಒಳ್ಳೆಯದನ್ನು ಮಾತ್ರ ನೋಡಿ, ಕೇವಲ ಒಳ್ಳೆಯದನ್ನು ಮಾತ್ರ ಯೋಚಿಸಿ. ಇದು ನಾವು ಹರ್ಷಚಿತ್ತದ ಆಶಾವಾದಿಗಳಾಗಬೇಕೆಂದು ಅರ್ಥವಲ್ಲ; ಬದಲಿಗೆ, “ನನ್ನ ದೇವರೇ, ನಾನು ನಿನ್ನವನು. ಇತರರನ್ನು ಉಲ್ಲಾಸದಿಂದಿಡಲು ಮತ್ತು ಅವರನ್ನು ಮೇಲ್ಮಟ್ಟಕ್ಕೇರಿಸಲು ಪ್ರಪಂಚದ ನನ್ನ ಪುಟ್ಟ ಮೂಲೆಯಲ್ಲಿ ನನ್ನ ಕೈಲಾದಷ್ಟೂ ಮಾಡುತ್ತೇನೆ — ಅದು ನನ್ನ ಕುಟುಂಬವಾಗಿರಲಿ, ನನ್ನ ನೆರೆಹೊರೆಯವರಾಗಿರಲಿ, ನನ್ನ ಸಮುದಾಯದವರಾಗಿರಲಿ, ಯಾರನ್ನು ತಲುಪಬಲ್ಲೆನೋ ಅವರೆಲ್ಲರನ್ನೂ. ನಾನು ಪ್ರಯಾಸ ಪಡುತ್ತಿದ್ದರೂ ಸಹ, ನನ್ನ ಕೈಲಾದದ್ದನ್ನು ಮಾಡುತ್ತೇನೆ,” ಎಂದು ಹೇಳುವ ಸಂಕಲ್ಪ ಶಕ್ತಿ, ಸಾಮರ್ಥ್ಯ, ಭಕ್ತಿ ಮತ್ತು ನಂಬಿಕೆ ನಮ್ಮೊಳಗಿದೆ ಎಂದರ್ಥ.

“ತಮ್ಮದೇ ಸಂಕಷ್ಟಗಳ ಮಧ್ಯೆಯೂ, ತಮ್ಮ ಬಳಿಗೆ ಬರುವ ಎಲ್ಲರ ಜೀವನದಲ್ಲಿ ಉಲ್ಲಾಸ ಮತ್ತು ಸ್ವಾಸ್ಥ್ಯವನ್ನು ತರುವವರೇ ನೈಜ ಸಂತರು.” ಎಂದು ನಮ್ಮ ಗುರುಗಳು ಆಗಾಗ್ಗೆ ಹೇಳುತ್ತಿದ್ದರು. ಇದೇ ಒಬ್ಬ ನೈಜ ಭಗವದ್ಭಕ್ತನ ನಡೆನುಡಿ. ಅವನು ಅಥವಾ ಅವಳು ಏನನ್ನೇ ಅನುಭವಿಸುತ್ತಿದ್ದರೂ, ಅವರ ಬಳಿಗೆ ಬರುವ ಯಾರೊಬ್ಬರೂ ಕೂಡ ತುಳಿತಕ್ಕೆ ಸಿಕ್ಕಿದವರಂತೆ, ಧೈರ್ಯಗುಂದಿದವರಂತೆ, ಸೋತವರಂತೆ ಅಲ್ಲಿಂದ ಹೋಗುವುದಿಲ್ಲ. ನಾವೆಲ್ಲರೂ ಭಗವಂತನ ಮಕ್ಕಳೇ; ಮತ್ತು ನಾವು ಪ್ರತಿಯೊಬ್ಬರೂ ಜೀವನದ ಸಂಕಷ್ಟಗಳನ್ನು ಜಯಿಸುವ ಆ ಶಕ್ತಿಯನ್ನು ಹೊಂದಿದ್ದೇವೆ. ಆದರೆ ನಾವು ಅದನ್ನು ನಂಬಬೇಕು, ಅದನ್ನು ಪ್ರಯೋಗಿಸಬೇಕು — ಮತ್ತು ನಾವು ಸದಾ ಹಸನ್ಮುಖಿಯಾಗಿರಲು ಪ್ರಯತ್ನಿಸಬೇಕು.

“ದುಃಖಿತನಾಗಿರುವ ಸಂತ ದುಃಖೀ ಸಂತ!” ಎಂದು ಪರಮಹಂಸಜಿ ಉಲ್ಲೇಖಿಸಿದರು. ಪರಮಹಂಸಜಿ ಯಾವಾಗಲೂ ಆನಂದಪೂರ್ಣರಾಗಿರುತ್ತಿದ್ದರು — ಈ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ ಸಂಸ್ಥೆಗಳನ್ನು ಕಟ್ಟುವಾಗ ಪಡುತ್ತಿದ್ದ ಪ್ರಯಾಸದ ನಡುವೆಯೂ. ಭಗವಂತನಿಗೆ ಸೇವೆ ಸಲ್ಲಿಸುವುದು ಸುಲಭವಲ್ಲ; ಈ ಜಗತ್ತಿನಲ್ಲಿ, ಬದುಕು ಸುಲಭವಲ್ಲ! ಆದರೆ ಭಗವಂತ ನಮ್ಮ ಹಿಂದಿರುವುದರಿಂದ ನಾವು ಗೆದ್ದೇ ಗೆಲ್ಲುತ್ತೇವೆ, ಉತ್ತಮವಾಗಿರುತ್ತೇವೆ ಎಂದು ಸಂತೋಷದಿಂದ, ಉಲ್ಲಾಸದಿಂದ ಮತ್ತು ಸ್ಥಿರ ಸಂಕಲ್ಪದಿಂದ ಜೀವಿಸೋಣ.

ಎಂದೆಂದಿಗೂ ಒಬ್ಬ ಚಿಂತಾಕ್ರಾಂತನಾದ ವ್ಯಕ್ತಿಯಾಗಿರಬೇಡಿ; ಎಂದೆಂದಿಗೂ ನಕಾರಾತ್ಮಕ ಭಾವನೆಗಳನ್ನು ಹರಡುವ ವ್ಯಕ್ತಿಯಾಗಿರಬೇಡಿ. ನೆನಪಿನಲ್ಲಿಡಿ: ಈ ಜಗತ್ತು ದ್ವಂದ್ವದ ನಿಯಮದಿಂದ ಸೃಷ್ಟಿಯಾಗಿದೆ; ಪ್ರತಿಯೊಂದಕ್ಕೂ ಎರಡು ಮುಖಗಳಿರುತ್ತವೆ — ಒಂದು ಧನಾತ್ಮಕ ಇನ್ನೊಂದು ಋಣಾತ್ಮಕ — ಮತ್ತು ಪ್ರತಿಯೊಬ್ಬ ಮಾನವ ಜೀವಿಯೂ ಅವೆರಡರಲ್ಲಿ ಒಂದರ ಜೊತೆಗೆ ತನ್ನ ಪ್ರಜ್ಞೆಯನ್ನು ಜತೆಗೂಡಿಸುವ ಆಯ್ಕೆಯನ್ನು ಹೊಂದಿರುತ್ತಾನೆ. ಯಾರೊಬ್ಬರೂ ಕೂಡ ದುರ್ಗಂಧ ಬೀರುವ ಒಂದು ಕಳೆಯ ಹತ್ತಿರ ಇರಲು ಬಯಸುವುದಿಲ್ಲ. ಅದು ನಕಾರಾತ್ಮಕವಾದುದದಲ್ಲದೆ ನಮ್ಮ ಉತ್ಸಾಹವನ್ನೂ ಕುಂದಿಸುತ್ತದೆ. ಆದರೆ, ಗುರುಗಳು ಹೇಳುತ್ತಿದ್ದ ಹಾಗೆ, ಪ್ರತಿಯೊಬ್ಬರೂ ಮಧುರ ಸುವಾಸನೆಯನ್ನು ಬೀರುವ ಒಂದು ಗುಲಾಬಿಯ ಸುತ್ತ ಸೇರಲು ಬಯಸುತ್ತಾರೆ. ನೀವೊಬ್ಬ ಸಕಾರಾತ್ಮಕ ಗುಲಾಬಿಯಾಗಿರಿ.

ಸಕಾರಾತ್ಮಕವಾಗಿರಲು, ಉಲ್ಲಾಸದಿಂದಿರಲು ಮತ್ತು ಆನಂದದಿಂದಿರಲು ನಿರ್ಧರಿಸಿ. ನೀವು ಹಾಗೆ ಮಾಡಿದಾಗ, ಒಳ್ಳೆಯದೆಲ್ಲ ನಿಮ್ಮಲ್ಲಿಗೆ ಬರುವುದನ್ನು ನೀವು ಕಾಣುವಿರಿ ಎಂದು ನಾನು ನಿಮಗೆ ಖಚಿತವಾಗಿ ಹೇಳುತ್ತೇನೆ. ಏಕೆಂದರೆ, ಆಲೋಚನೆಯು ಆಕರ್ಷಿಸುವ ಶಕ್ತಿಯನ್ನು ಹೊಂದಿದೆ. ನಮ್ಮ ಆಲೋಚನೆಗಳು ಯಾವಾಗಲೂ ನಕಾರಾತ್ಮಕವಾಗಿದ್ದರೆ, ನಾವು ನಕಾರಾತ್ಮಕ ಪರಿಸ್ಥಿತಿಗಳನ್ನೇ ಆಕರ್ಷಿಸುತ್ತೇವೆ. ನಾವು ಸಕಾರಾತ್ಮಕವಾಗಿ ಯೋಚಿಸಿ ಬದುಕು ನಡೆಸಿದರೆ, ನಾವು ಸಕಾರಾತ್ಮಕ ಫಲಿತಗಳನ್ನೇ ಆಕರ್ಷಿಸುತ್ತೇವೆ. ಇದು ಅಷ್ಟು ಸರಳ: ಅದು ಅದನ್ನೇ ಆಕರ್ಷಿಸುತ್ತದೆ.

ಜಗತ್ತನ್ನು ಬದಲಾಯಿಸಲು ಪ್ರಾರ್ಥನೆಯ ಶಕ್ತಿ

ನಾನು ವಿವರಿಸಿದ ಆ ದೃಶ್ಯಾವಳಿಯ ನಂತರ, ಆಧ್ಯಾತ್ಮಿಕ ತತ್ವಗಳಿಗನುಗುಣವಾಗಿ ಬದುಕುತ್ತಿರುವ ವ್ಯಕ್ತಿಗಳ ಸಂಖ್ಯೆಯ ಹೆಚ್ಚಳದ ಮೂಲಕ ಭಗವಂತನ ಚೈತನ್ಯವು ನಮ್ಮ ಪ್ರಪಂಚವನ್ನು ಬೆದರಿಸುತ್ತಿದ್ದ ಅಂಧಕಾರವನ್ನು ದೂರ ತಳ್ಳಿತು. ಆಧ್ಯಾತ್ಮಿಕತೆಯು ನೈತಿಕತೆಯಿಂದ, ಪ್ರತಿಯೊಂದು ಧರ್ಮಕ್ಕೂ, ಮೂಲವಾದ ಯುಕ್ತ ನಡುವಳಿಕೆಯ ನಿಯಮಗಳಿಂದ, ಅಂದರೆ ಸತ್ಯಪರತೆ, ಆತ್ಮ-ಸಂಯಮ, ವಿವಾಹದ ಶಪಥಗಳಿಗೆ ನಿಷ್ಠೆ, ಇತರರಿಗೆ ಹಾನಿ ಮಾಡದಿರುವುದು, ಇವುಗಳಿಂದ ಆರಂಭವಾಗುತ್ತದೆ. ಮತ್ತು ನಾವು ಕೇವಲ ನಮ್ಮ ನಡುವಳಿಕೆಯನ್ನಷ್ಟೇ ಅಲ್ಲ ನಮ್ಮ ಯೋಚನೆಯ ರೀತಿಯನ್ನೂ ಸರಿಪಡಿಸಿಕೊಳ್ಳಬೇಕು. ನಾವು ಒಂದು ನಿರ್ದಿಷ್ಟ ರೀತಿಯಲ್ಲಿ ಯೋಚಿಸುವುದನ್ನೇ ಮುಂದುವರೆಸಿದರೆ, ಆ ಆಲೋಚನೆಗಳು ಅಂತಿಮವಾಗಿ ಕ್ರಿಯೆಗಳಾಗುತ್ತವೆ. ಆದ್ದರಿಂದ, ನಮ್ಮನ್ನು ನಾವು ಬದಲಾಯಿಸಿಕೊಳ್ಳಲು, ನಾವು ಆಲೋಚನೆಗಳಿಂದ ಪ್ರಾರಂಭಿಸಬೇಕು.

ಆಲೋಚನೆ ಒಂದು ಬಲವಾದ ಶಕ್ತಿ; ಅದು ಅಗಾಧ ಶಕ್ತಿಯನ್ನು ಹೊಂದಿದೆ. ಆದ್ದರಿಂದಲೇ ನಾನು ಪರಮಹಂಸ ಯೋಗಾನಂದರು ಆರಂಭಿಸಿದ ಜಾಗತಿಕ ಪ್ರಾರ್ಥನಾ ವೃಂದವನ್ನು ಗಾಢವಾಗಿ ನಂಬುತ್ತೇನೆ. ನೀವೆಲ್ಲರೂ ಅದರಲ್ಲಿ ಸೇರಿದ್ದೀರೆಂದು ನಾನು ಭಾವಿಸುತ್ತೇನೆ. ಜಾಗತಿಕ ಪ್ರಾರ್ಥನಾ ಸಮೂಹದಲ್ಲಿ ಉಪಯೋಗಿಸಲಾಗುವಂತಹ ಉಪಶಮನಕಾರಿ ತಂತ್ರಗಳ ಮೂಲಕ ಜನರು, ಶಾಂತಿ, ಪ್ರೇಮ, ಸದಾಶಯ ಮತ್ತು ಕ್ಷಮಾಪಣೆಯ ಕೇಂದ್ರೀಕೃತ, ಸಕಾರಾತ್ಮಕ ಚಿಂತನೆಗಳನ್ನು ಕಳುಹಿಸಿದಾಗ, ಇದು ಒಂದು ಮಹಾನ್‌ ಶಕ್ತಿಯನ್ನು ಉತ್ಪಾದಿಸುತ್ತದೆ. ಸಮೂಹಗಳಲ್ಲಿ ಆಚರಿಸಿದಾಗ, ಅದು ಜಗತ್ತನ್ನು ಬದಲಾಯಿಸುವಷ್ಟು ಶಕ್ತಿಯುತವಾದ ಸದ್ಗುಣದ ಸ್ಪಂದನವನ್ನು ಹುಟ್ಟುಹಾಕುತ್ತದೆ.

ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ, ಆಗ ನೀವು ಸಾವಿರಾರು ಜನರನ್ನು ಬದಲಾಯಿಸುವಿರಿ

ನಮ್ಮ ಆಲೋಚನೆಗಳು, ಮಾತುಗಳು ಮತ್ತು ಅನುಕರಣೀಯ ನಡವಳಿಕೆಯಿಂದ ನಾವು ಪ್ರಪಂಚದ ಇತರ ಭಾಗಗಳ ಮೇಲೆ ಆಧ್ಯಾತ್ಮಿಕ ಪ್ರಭಾವ ಬೀರುವಂತೆ ನಮ್ಮ ಜೀವನವನ್ನು ಭಗವಂತನೊಂದಿಗೆ ಶ್ರುತಿಗೂಡಿಸಿಕೊಳ್ಳಲು ಸಾಧ್ಯವಿರುವುದನ್ನೆಲ್ಲ ಮಾಡುವುದೇ ನಮ್ಮ ಪಾತ್ರವಾಗಿದೆ. ಒಬ್ಬರ ಜೀವನದಲ್ಲಿ ಒಬ್ಬರ ನುಡಿಗಳು ಅಭಿವ್ಯಕ್ತಿಯಾಗದೇ ಇದ್ದಲ್ಲಿ ಅದಕ್ಕೆ ಯಾವ ಅರ್ಥವೂ ಇಲ್ಲ. ಕ್ರಿಸ್ತನ ನುಡಿಗಳು ಎರಡು ಸಾವಿರ ವರ್ಷಗಳ ಹಿಂದೆ ಇದ್ದಂತೆಯೇ ಇಂದೂ ಕೂಡ ಬಹಳ ಶಕ್ತಿಯುತವಾಗಿವೆ, ಏಕೆಂದರೆ ಅವನು ಏನು ಹೇಳಿದ್ದನೋ ಅದರಂತೆ ಬದುಕಿದ. ನಮ್ಮ ಬದುಕು ಕೂಡ ಸದ್ದುಗದ್ದಲವಿಲ್ಲದೆ ಆದರೆ ಸ್ಪಷ್ಟವಾಗಿ ನಾವು ನಂಬಿರುವ ಆ ತತ್ವಗಳನ್ನು ಪ್ರತಿಬಿಂಬಿಸಬೇಕು. ನಮ್ಮ ಗುರುಗಳು ಆಗಾಗ್ಗೆ ಉಲ್ಲೇಖಿಸಿದ ಹಾಗೆ, “ನಿಮ್ಮನ್ನು ನೀವು ತಿದ್ದಿಕೊಳ್ಳಿ, ಆಗ ನೀವು ಸಾವಿರಾರು ಜನರನ್ನು ತಿದ್ದಿರುತ್ತೀರಿ.”

ನೀವು ಹೇಳಬಹುದು, “ಸರಿಪಡಿಸಬೇಕಾದಂತಹವು ಜಗತ್ತಿನಲ್ಲಿ ಎಷ್ಟೊಂದಿದೆ; ಎಷ್ಟೊಂದು ಮಾಡಬೇಕಾಗಿದೆ.” ಹೌದು, ಮಾಡಬೇಕಾದಂತಹವು ಕಷ್ಟಸಾಧ್ಯವಾಗಿವೆ; ಆದರೆ ನಾವು ಬಾಹ್ಯ ಸಂಗತಿಗಳನ್ನು ಸರಿಪಡಿಸಲು ಪ್ರಯತ್ನಿಸುವುದರಿಂದ ಪ್ರಪಂಚದ ಸಮಸ್ಯೆಗಳು ದೂರವಾಗುವುದಿಲ್ಲ. ಈ ಎಲ್ಲ ತೊಂದರೆಗಳಿಗೆ ಕಾರಣವಾದ ಮಾನುಷ ಅಂಶವನ್ನು ನಾವು ಬದಲಾಯಿಸಬೇಕು, ಅದನ್ನು ನಾವು ಮೊದಲು ನಮ್ಮಿಂದಲೇ ಅರಂಭಿಸಬೇಕು.

ಧೂಮಪಾನ ಮಾಡಬೇಡವೆಂದು ನೀವು ಒಬ್ಬ ವ್ಯಕ್ತಿಗೆ ಸಾವಿರ ಸಲ ಹೇಳಬಹುದು, ಅದರೆ ಅವನು ಸಿಗರೇಟನ್ನು ಇಷ್ಟಪಡುವುದನ್ನು ಮನಸ್ಸಿನಲ್ಲಿ ನಿರ್ಧರಿಸಿದ ಮೇಲೆ, ನೀವು ಹೇಳುವ ಯಾವುದೂ ಕೂಡ ಅವನ ರೂಢಿಗತ ಅಭ್ಯಾಸವನ್ನು ಬದಲಾಯಿಸಲಾರದು. ಧೂಮಪಾನದಿಂದಾಗಿ ಅವನು ಕೆಮ್ಮಲು ಶುರುಮಾಡಿದಾಗ ಮತ್ತು ನಕಾರಾತ್ಮಕ ಪರಿಣಾಮಗಳು ಅವನನ್ನು ಬಾಧಿಸಲು ತೊಡಗಿದಾಗ ಇದನ್ನು ಅವನು ತಿಳಿದುಕೊಳ್ಳುತ್ತಾನೆ, “ಇದು ನನ್ನನ್ನು ಬಾಧಿಸುತ್ತಿದೆ; ಈಗ ಇದು ನಾನು ಯೋಚಿಸಲೇ ಬೇಕಾದಂತಾಗುತ್ತಿದೆ.” ಅದೇ ರೀತಿ, ಒಬ್ಬ ಸಾಮರಸ್ಯವಿಲ್ಲದ ಮನುಷ್ಯನಿಗೆ ಹೆಚ್ಚು ಶಾಂತಿಯುತವಾಗಿರಬೇಕೆಂದು ಪ್ರಚೋದಿಸಲು ಹೇಳುವ ನಿಮ್ಮ ಮಾತುಗಳು ನಿಷ್ಪರಿಣಾಮಕಾರಿಯಾಗಿರುತ್ತವೆ. ಆದರೆ, ಗ್ರಾಹ್ಯವಾಗಿರುವಂತಹ ನಿಮ್ಮ ಪ್ರಶಾಂತ ಸ್ವಭಾವದಿಂದ ಹರಿಯುವ ಸಾಮರಸ್ಯ ಹಾಗೂ ಆರೋಗ್ಯಪೂರ್ಣ ಸ್ಥಿತಿಯ ಚೈತನ್ಯವನ್ನು ಅವನು ಗ್ರಹಿಸಿದರೆ; ಅದು ಅವನ ಮೇಲೆ ಒಂದು ಪ್ರಯೋಜನಕರ ಪರಿಣಾಮವನ್ನು ಬೀರುತ್ತದೆ.

ನಿಮ್ಮ ಆತ್ಮ ಮತ್ತು ಭಗವಂತನೊಂದಿಗೆ ಒಂದು ಆಂತರಿಕ ಸಾಮರಸ್ಯವನ್ನು ಸ್ಥಿತಪಡಿಸಿಕೊಳ್ಳಿ

ಎಲ್ಲರೂ ತ್ವರಿತವಾಗಿ ಬಯಸುವ ಶಾಂತಿ ಮತ್ತು ಸಾಮರಸ್ಯವನ್ನು ಭೌತಿಕ ವಸ್ತುಗಳಿಂದ ಅಥವಾ ಯಾವುದೇ ಬಾಹ್ಯ ಅನುಭವದಿಂದ ಪಡೆಯಲಾಗುವುದಿಲ್ಲ; ಇದು ಸಾಧ್ಯವೇ ಇಲ್ಲ. ಪ್ರಾಯಶಃ ಒಂದು ಸುಂದರ ಸೂರ್ಯಾಸ್ತವನ್ನು ನೋಡುವುದರಿಂದ ಅಥವಾ ಗಿರಿಶಿಖರಗಳಿಗೆ ಹೋಗುವುದರಿಂದ ಅಥವಾ ಸಾಗರದ ಕಡೆ ಹೋಗುವುದರಿಂದ ಒಂದು ತಾತ್ಕಾಲಿಕ ಪ್ರಶಾಂತತೆಯನ್ನು ನೀವು ಅನುಭವಿಸಬಹುದು. ಆದರೆ, ನಿಮ್ಮೊಂದಿಗೇ ನೀವು ಸಮರಸದಿಂದಿಲ್ಲದಿದ್ದಾಗ ಬಹಳ ಅಪ್ಯಾಯಮಾನವಾದ ದೃಶ್ಯವೂ ಕೂಡ ನಿಮಗೆ ಶಾಂತಿಯನ್ನು ನೀಡಲಾರದು.

ನಿಮ್ಮ ಜೀವನದ ಬಾಹ್ಯ ಪರಿಸ್ಥಿತಿಗಳಲ್ಲಿ ಸಾಮರಸ್ಯವನ್ನು ತರುವ ರಹಸ್ಯವೆಂದರೆ, ನಿಮ್ಮ ಆತ್ಮ ಮತ್ತು ಭಗವಂತನೊಂದಿಗೆ ಆಂತರಿಕ ಸಾಮರಸ್ಯವನ್ನು ಸ್ಥಿತಗೊಳಿಸಿಕೊಳ್ಳುವುದು….

ಆ ಸ್ಥಿತಿಗಾಗಿ ಹೆಚ್ಚು ಹೆಚ್ಚು ಜನರು ಶ್ರಮಪಟ್ಟಾಗ, ಪ್ರಪಂಚವನ್ನು ಹೆದರಿಸುವ ಆ ವಿಷಮಸ್ಥಿತಿಗಳು ಕಡಿಮೆಯಾಗುತ್ತವೆ. ಆದರೆ ಈ ಭೂಮಿಯು ಎಂದೂ ಪರಿಪೂರ್ಣವಲ್ಲ ಎಂಬುದನ್ನು ನಾವು ಅರಿಯಬೇಕು, ಏಕೆಂದರೆ, ಇದು ನಮ್ಮ ಶಾಶ್ವತ ನಿವಾಸವಲ್ಲ; ಇದೊಂದು ಶಾಲೆ, ಮತ್ತು ಇದರ ವಿದ್ಯಾರ್ಥಿಗಳು ಕಲಿಯುವ ವಿಭಿನ್ನ ಸ್ತರಗಳಲ್ಲಿದ್ದಾರೆ. ನಾವು ಜೀವನದ ಒಳ್ಳೆಯ ಮತ್ತು ದುಃಖದ ಎಲ್ಲ ಅನುಭವಗಳನ್ನು ಅನುಭವಿಸಲು ಮತ್ತು ಆ ಮೂಲಕ ಅವುಗಳಿಂದ ಕಲಿಯಲು ಇಲ್ಲಿಗೆ ಬಂದಿದ್ದೇವೆ.

ಭಗವಂತನು ನಿತ್ಯನು, ಹಾಗೆಯೇ ನಾವು ಕೂಡ. ಅವನ ವಿಶ್ವವು ಅದರ ಏಳು ಬೀಳುಗಳೊಂದಿಗೆ ಮುಂದುವರಿಯುತ್ತಲೇ ಇರುತ್ತದೆ. ಅವನ ಸೃಷ್ಟಿಯ ನಿಯಮಗಳ ಜೊತೆಗೆ ನಾವು ನಮ್ಮನ್ನು ಸಾಮರಸ್ಯದಿಂದ ಇರಿಸಿಕೊಳ್ಳುವುದು ನಮಗೆ ಬಿಟ್ಟದ್ದು. ಹಾಗೆ ಮಾಡುವವರು ಅವರ ಬಾಹ್ಯ ಪರಸ್ಥಿತಿಗಳು ಅಥವಾ ಅವರು ಜನಿಸಿದ ನಿರ್ದಿಷ್ಟ ಜಾಗತಿಕ ಚಕ್ರದ ಹೊರತಾಗಿಯೂ ಸದಾ ವಿಕಾಸವಾಗುತ್ತ ಹೋಗುತ್ತಾರೆ; ಮತ್ತು ಅವರ ಅರಿವಿನ ಸುಧಾರಣೆಯಿಂದ, ಅವರು ಭಗವಂತನಲ್ಲಿ ಮುಕ್ತಿಯನ್ನು ಕಂಡುಕೊಳ್ಳುತ್ತಾರೆ.

ಮೂಲಭೂತವಾಗಿ, ನಮ್ಮ ಪ್ರತಿಯೊಬ್ಬರ ಮುಕ್ತಿಯೂ ಕಡೆಗೆ ನಮ್ಮನ್ನೇ ಅವಲಂಬಿಸಿದೆ — ನಾವು, ಬದುಕನ್ನು ಹೇಗೆ ಎದುರಿಸುತ್ತೇವೆ; ನಾವು ಹೇಗೆ ನಡೆದುಕೊಳ್ಳುತ್ತೇವೆ; ನಾವು ನಮ್ಮ ಜೀವನವನ್ನು ಪ್ರಾಮಾಣಿಕತೆ, ನಿಷ್ಠೆ, ಇತರರಿಗೆ ಗೌರವ, ಮತ್ತು ಎಲ್ಲಕ್ಕಿಂತ ಮಿಗಿಲಾಗಿ, ಭಗವಂತನಲ್ಲಿ ಧೈರ್ಯ, ನಂಬಿಕೆ ಮತ್ತು ವಿಶ್ವಾಸದಿಂದ ನಡೆಸುತ್ತಿದ್ದೇವೆಯೇ ಎಂಬುದರ ಮೇಲೆ. ಭಗವಂತನನ್ನು ಪ್ರೀತಿಸುವುದರ ಮೇಲೆ ನಾವು ಏಕಾಗ್ರರಾದರೆ, ಇದು ಬಹಳ ಸುಲಭವಾಗುತ್ತದೆ. ಆಗ ನಾವು ಒಳ್ಳೆಯದನ್ನು ಮಾಡ ಬಯಸುತ್ತೇವೆ ಮತ್ತು ಒಳ್ಳೆಯವರಾಗಿರಲು ಬಯಸುತ್ತೇವೆ, ಏಕೆಂದರೆ, ನಾವು ಎಲ್ಲಿಂದ ಬಂದಿದ್ದೇವೋ ಆ ಭಗವಂತನಿಂದ ಶಾಂತಿ, ಜ್ಞಾನ ಮತ್ತು ಆನಂದವು ನಮ್ಮ ಪ್ರಜ್ಞೆಯೊಳಗೆ ಹರಿಯುವುದನ್ನು ಕಾಣುತ್ತೇವೆ.

ನಮ್ಮ ಜೀವನವನ್ನು ಆನಂದವೇ ಆಗಿರುವ ಭಗವಂತನಲ್ಲಿ ಬದುಕಬೇಕೆಂಬ ದೃಢೀಕರಣವನ್ನು ಪರಮಹಂಸಜಿಯವರು ನಮಗೆ ತಮ್ಮೊಂದಿಗೆ ಅದೆಷ್ಟು ಸಲ ಹೇಳಿಸಿದ್ದರು:

ಬಂದಿಹೆ ನಾ ಆನಂದದಿಂದ, ಬದುಕುವೆ, ಚಲಿಸುವೆ ಹಾಗೂ ನನ್ನ ಅಸ್ತಿತ್ವವನ್ನಿರಿಸುವೆ ಆನಂದದಲ್ಲಿ. ಮತ್ತು ಮತ್ತೆ ಕರಗುವೆ ಆ ಪವಿತ್ರಾನಂದದಲಿ.

ಈ ಸತ್ಯವನ್ನು ಹಿಡಿದುಕೊಂಡಿರಿ, ನಿಮ್ಮ ಜೀವನದಲ್ಲಿ ಏನೇ ಬರಲಿ, ಆಗ ಆ ಆನಂದವು ಆಂತರ್ಯದಲ್ಲಿ ನಿಮಗೆ ಆಧಾರವಾಗಿರುತ್ತದೆ ಎಂಬುದನ್ನು ಮನಗಾಣುವಿರಿ. ಆ ಆನಂದವು ಈ ಚಿತ್ರವಿಚಿತ್ರ ಘಟನಾವಳಿಗಳುಳ್ಳ ಪ್ರಪಂಚದ ನಿತ್ಯ ಬದಲಾಗುವ ಸಂಗತಿಗಳಿಗಿಂತ ನಿಮಗೆ ಹೆಚ್ಚು ನಿಜವಾದುದಾಗುತ್ತದೆ.

ಇದನ್ನು ಹಂಚಿಕೊಳ್ಳಿ