ಗುರು ಪೂರ್ಣಿಮೆ – 2015 ಕ್ಕೆ ಶ್ರೀ ಶ್ರೀ ಮೃಣಾಲಿನಿ ಮಾತಾರ ಸಂದೇಶ

ಆತ್ಮೀಯರೆ,

31 ಜುಲೈ, 2015

ಗುರುವಿಗೆ ಗೌರವ ಸಲ್ಲಿಸುವ ಭಾರತದ ಸಂಪ್ರದಾಯವನ್ನು ಅನುಸರಿಸುವ ವಿಶ್ವದಾದ್ಯಂತದ ಭಕ್ತರು ಆಚರಿಸುವ ಗುರು ಪೂರ್ಣಿಮೆಯ ಈ ಪವಿತ್ರ ದಿನದಂದು, ನಾವು ನಮ್ಮ ಪ್ರಿಯ ಗುರುದೇವರಾದ ಶ್ರೀ ಶ್ರೀ ಪರಮಹಂಸ ಯೋಗಾನಂದರ ಪಾದಗಳಲ್ಲಿ ನಮ್ಮ ಹೃದಯದ ಭಕ್ತಿ ಮತ್ತು ಕೃತಜ್ಞತೆಯನ್ನು ಅರ್ಪಿಸುತ್ತೇವೆ. ಮಾಯೆಯ ಕತ್ತಲೆಯಿಂದ ನಾವು ಭಗವಂತನಲ್ಲಿ ಕಂಡುಕೊಳ್ಳಬೇಕಾದ ಬೆಳಕು ಮತ್ತು ಸ್ವಾತಂತ್ರ್ಯದೆಡೆಗಿನ ಪಯಣದಲ್ಲಿ ನಮ್ಮ ಸಾರ್ವಕಾಲಿಕ ಸ್ನೇಹಿತ ಮತ್ತು ಮಾರ್ಗದರ್ಶಕನಾಗಿರಲು ಭಗವಂತನು ತನ್ನ ಪ್ರೀತಿಯ ಶುದ್ಧ ಸಂಪರ್ಕವಾಹಕದೆಡೆಗೆ ನಮ್ಮನ್ನು ಸೆಳೆದಿರುವುದಕ್ಕೆ ನಾವೆಷ್ಟು ಧನ್ಯರು. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಹೃದಯ ಮತ್ತು ಮನಸ್ಸನ್ನು ಗುರುವಿನ ಪ್ರೀತಿ ಮತ್ತು ಜ್ಞಾನಕ್ಕೆ ಹೊಸದಾಗಿ ತೆರೆಯಬೇಕೆಂದು ನಾನು ಪ್ರಾರ್ಥಿಸುತ್ತೇನೆ, ಆಗ ಗುರುಗಳು ನಿಮಗಾಗಿ ಅವರಲ್ಲಿರುವ ಅತ್ಯಂತ ಪ್ರೀತಿಯ ಇಚ್ಛೆಯನ್ನು ಪೂರೈಸುತ್ತಾರೆ—ಪ್ರಿಯ ದೇವನೊಂದಿಗೆ ನಿಮ್ಮ ಆತ್ಮದ ಐಕ್ಯತೆ.

ಜನ್ಮಜನ್ಮಾಂತರಗಳಿಂದ ನೀವು ಅಹಂಕಾರದ ಮಿತಿಗಳನ್ನು, ನಿಮ್ಮ ಸಂತೋಷದ ಮೇಲೆ ಅದು ಇರಿಸುವ ಕಟ್ಟುಪಾಡುಗಳನ್ನು ಮತ್ತು ಈ ಪ್ರಪಂಚದ ಅನಿರೀಕ್ಷಿತ ಪರಿಸ್ಥಿತಿಗಳಿಗೆ ಅದು ಗುರಿಯಾಗಿರುವುದನ್ನು ಒಪ್ಪಿಕೊಳ್ಳುತ್ತ ಅದರ ಸಣ್ಣ ಪಂಜರದಲ್ಲಿ ವಾಸಿಸುತ್ತಿದ್ದಿರಬಹುದು. ಗುರು ಬರುವುದು ಆತ್ಮದ ಧೀರೋದಾತ್ತ ಗುಣಗಳನ್ನು ಬಡಿದೆಬ್ಬಿಸಲು, ಅದರ ಮೂಲಕ ನಮ್ಮ ಸಹಜ ದೈವತ್ವದ ಅಭಿವ್ಯಕ್ತಿಗೆ ಅಡ್ಡಿಯಾಗುವ ಎಲ್ಲವನ್ನೂ ನಾವು ಜಯಿಸುತ್ತೇವೆ. ಗುರೂಜಿಯವರು ತಮ್ಮ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರ ಕುರಿತು ಹೇಳಿದಂತೆ: “ಅವರು ನನಗಾಗಿ ಪರಿಪೂರ್ಣತೆಯನ್ನು ಬಯಸಿದ್ದರು. ನಾನು ಅತ್ಯಂತ ಸಂತೋಷದಿಂದ ಇರಬೇಕೆಂದು ಅವರು ಬಯಸಿದ್ದರು. ಅದೇ ಅವರ ಸಂತೋಷವಾಗಿತ್ತು. ನಾನು ಭಗವಂತನನ್ನು ಅರಿಯಬೇಕೆಂದು; ನನ್ನ ಹೃದಯವು ಹಾತೊರೆಯುವ ದಿವ್ಯ ಮಾತೆಯೊಂದಿಗೆ ನಾನು ಇರಬೇಕೆಂದು ಅವರು ಬಯಸಿದರು.” ಅದು ನಮ್ಮ ಗುರುಗಳ ಆಶಯವೂ ಹೌದು. ಅವರು ನೀಡಿದ ಸಾಧನೆಯನ್ನು ನಿಷ್ಠೆಯಿಂದ ಅಭ್ಯಾಸ ಮಾಡಿದಾಗ, ಅದು ತಪ್ಪದೆ ಆ ಗುರಿಯತ್ತ ಕೊಂಡೊಯ್ಯುತ್ತದೆ ಮತ್ತು, “ಭಗವಂತ ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದ್ದಾನೆ ಮತ್ತು ನಾನು ನಿಮ್ಮನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ,” ಎಂದು ಅವರು ನಮಗೆ ಭರವಸೆ ನೀಡಿದ್ದಾರೆ. ಅವರ ವಾಗ್ದಾನದಲ್ಲಿ, ಸ್ಥಳ ಮತ್ತು ಸಮಯದ ಎಲ್ಲಾ ಗಡಿಗಳನ್ನು ಮೀರಿದ ಅನಿರ್ಬಂಧಿತ ಪ್ರೀತಿಯು ಅಂತರ್ಗತವಾಗಿದೆ ಮತ್ತು ನೀವು ಭಗವತ್ ಪ್ರಜ್ಞೆಯನ್ನು ತಲುಪುವವರೆಗೆ ಅದು ನಿಮ್ಮನ್ನು ನೋಡಿಕೊಳ್ಳುತ್ತದೆ. ಗುರುವಿನ ಪ್ರೀತಿಯನ್ನು ಅದರ ಎಲ್ಲ ಸ್ವರೂಪಗಳಲ್ಲಿ ಗುರುತಿಸುವುದು ಮತ್ತು ಸ್ವೀಕರಿಸುವುದು ಶಿಷ್ಯನ ಕರ್ತವ್ಯವಾಗಿದೆ—ಅವರ ಮಾರ್ಗದರ್ಶನದ ಮಾತುಗಳಲ್ಲಿ, ಫಲಿಸಿದ ಪ್ರಾರ್ಥನೆಗಳಲ್ಲಿ ಮತ್ತು ವಿಶೇಷವಾಗಿ ಒಬ್ಬರ ವಿಶ್ವಾಸ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸುವ, ಬೆಳೆದು ಬದಲಾಗಲು ಹೊಸ ಅವಕಾಶಗಳನ್ನು ನೀಡುವ ಸವಾಲುಗಳು ಮತ್ತು ಕಷ್ಟಗಳಲ್ಲಿ. ಗುರುದೇವರ ಜೊತೆಯಲ್ಲಿದ್ದ ನಾವು ಆಧ್ಯಾತ್ಮಿಕ ಪ್ರಗತಿಯಲ್ಲಿ ಹೊಸ ಘಟ್ಟವನ್ನು ತಲುಪಿದ್ದೇವೆ ಎಂದು ಅಂದುಕೊಳ್ಳುವಷ್ಟರಲ್ಲೇ ನಾವು “ತಲುಪಬೇಕಾದ ಮಟ್ಟವನ್ನು” ಅವರು ಇನ್ನೂ ಮೇಲಕ್ಕೇರಿಸುತ್ತಿದ್ದರು. “ನನಗೆ ಸಾಧ್ಯವಿಲ್ಲ,” ಎಂದು ಯೋಚಿಸುವುದನ್ನೇ ನಾವು ನಮ್ಮ ಪ್ರಜ್ಞೆಯಿಂದ ಹೊರಹಾಕುವುದನ್ನು ಕಲಿತಿದ್ದೇವೆ, ಗುರೂಜಿಯವರು ನಿಮ್ಮಿಂದಲೂ ಅದನ್ನೇ ಬಯಸುತ್ತಾರೆ. ಏಕೆಂದರೆ ಸ್ವಲ್ಪ ಮೇಲಿನ ಮಟ್ಟವನ್ನು ತಲುಪಬೇಕೆಂದು ನೀವು ಸಂಕಲ್ಪಿಸಿದರೆ ನಿಮಗೆ ಗುರೂಜಿಯವರ ಪೂರ್ಣಾನುಗ್ರಹವಾಗುತ್ತದೆ. ಅದಕ್ಕೆ ಮಾನವ ಸಹಜ ಸ್ವಭಾವ ಅಡ್ಡಿ ಬಂದರೆ, ಚತುರವಾಗಿ ತಾರ್ಕಿಕವಾದ ಮನಸ್ಸನ್ನು ನಿರ್ಲಕ್ಷಿಸಿ, ಭಗವಂತನಲ್ಲಿ ಶ್ರದ್ಧೆಯಿರಿಸಿ ಶರಣಾಗಲು ಪ್ರೇರೇಪಿಸುವ ಹೃದಯದ ಭಕ್ತಿಯ ನಿಶ್ಶಬ್ದ ಧ್ವನಿಯನ್ನು ಆಲಿಸಬೇಕು. ಗುರುವಿನ ಪರಿಶುದ್ಧಗೊಳಿಸುವ, ಪರಿವರ್ತನೆಗೊಳಿಸುವ ಶಕ್ತಿಯೆಡೆಗೆ ನಮ್ಮ ಪ್ರಜ್ಞೆಯ ಪ್ರತಿಯೊಂದು ಮುಚ್ಚಿದ ಬಾಗಿಲನ್ನು ತೆರೆಯುವ ಬೀಗದ ಕೈ ಎಂದರೆ ಶರಣಾಗತಿ.

ಗುರುದೇವರಿಗೆ ನೀವು ಕೊಡಬಹುದಾದ ಅತ್ಯುನ್ನತ ಕೊಡುಗೆಯೆಂದರೆ, ನಿಮ್ಮದೇ ಮುಕ್ತಿಗಾಗಿ ಗುರುವಿನೊಂದಿಗೆ ಸಹಕರಿಸುವುದು. ಅವರ ಮಾನದಂಡ ಉನ್ನತವಾದುದು, ಆದರೂ ಅವರು ಅಪಾರ ಸಹಾನುಭೂತಿಯಿಂದ ನಿಮಗೆ ಮಾರ್ಗದರ್ಶನ ನೀಡುತ್ತಾರೆ, ಏಕೆಂದರೆ ಅವರು ನಿಮ್ಮಲ್ಲಿರುವ ದೈವತ್ವವನ್ನು ಕಾಣುತ್ತಾರೆ ಹಾಗೂ ಅದನ್ನು ಆದರಿಸುತ್ತಾರೆ, ಅಲ್ಲದೆ ನಿಮಗೂ ಅದನ್ನು ಆದರಿಸಲು ಹೇಳುತ್ತಾರೆ. ಅವರು ಕಲಿಸಿದ ಸತ್ಯವನ್ನು ನೀವು ಪ್ರಯೋಗಿಸಲು ಹಾಗೂ ಮಾಯೆಯು ತಲುಪಲಾರದ ಆತ್ಮ-ಮೌನದಲ್ಲಿ ಪ್ರತಿದಿನ ಗುರುವಿನೊಂದಿಗೆ ನೀವು ಶ್ರುತಿಗೂಡಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ಅಲ್ಲಿ ನೀವು ಗುರುವಿನ ಸಾನಿಧ್ಯ ಹಾಗೂ ಭಗವಂತನ ಶಕ್ತಿಯು ಗುರುವಿನ ಮೂಲಕ ಹರಿದುಬರುವುದನ್ನು ಬಹಳ ಸ್ಪಷ್ಟವಾಗಿ ಅನುಭವಿಸಬಹುದು. ಅದು ನಿಮ್ಮ ಸಣ್ಣ “ನಾನು” ಎಂಬುದರ ಇತಿಮಿತಿಗಳನ್ನು ತೆಗೆದುಹಾಕಿ ನೀವು ನಿಜವಾದ ದೈವತ್ವವನ್ನು ಹೊಂದಲು ನೆರವಾಗುತ್ತದೆ. ಜೈ ಗುರು!

ಭಗವಂತ ಮತ್ತು ಗುರುದೇವರ ಪ್ರೀತಿ ಮತ್ತು ನಿರಂತರ ಆಶೀರ್ವಾದದಲ್ಲಿ,

ಶ್ರೀ ಶ್ರೀ ಮೃಣಾಲಿನಿ ಮಾತಾ

ಕಾಪಿರೈಟ್‌ © 2015 ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್. ಎಲ್ಲ ಹಕ್ಕುಗಳನ್ನೂ ಕಾದಿರಿಸಲಾಗಿದೆ.

ಇದನ್ನು ಹಂಚಿಕೊಳ್ಳಿ