(ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ)
ನಿಮ್ಮ ಅತಿ ದೊಡ್ಡ ಶತ್ರುಗಳೆಂದರೆ ನಿಮ್ಮ ದುರಭ್ಯಾಸಗಳು. ನೀವು ಅವುಗಳನ್ನು ಜಯಿಸುವವರೆಗೆ, ಅವುಗಳು ನಿಮ್ಮನ್ನು ಒಂದು ಜನ್ಮದಿಂದ ಇನ್ನೊಂದಕ್ಕೆ ಹಿಂಬಾಲಿಸುತ್ತವೆ. ನಿಮ್ಮನ್ನು ನಿಮ್ಮ ವಿಧಿಯಿಂದ ಮುಕ್ತಗೊಳಿಸಲು, ನೀವೇ ನಿಮ್ಮ ದುರಭ್ಯಾಸಗಳನ್ನು ನೀಗಿಸಿಕೊಳ್ಳಬೇಕು. ಹೇಗೆ? ಸಜ್ಜನರ ಸಹವಾಸವೇ ಅತ್ಯುತ್ತಮ ಔಷಧಗಳಲ್ಲಿ ಒಂದಾಗಿದೆ. ನೀವು ಕುಡಿಯುವ ಪ್ರವೃತ್ತಿಯನ್ನು ಹೊಂದಿದ್ದರೆ, ಕುಡಿಯದ ಜನರೊಂದಿಗೆ ಬೆರೆಯಿರಿ. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ಸಕಾರಾತ್ಮಕ ಮನಸ್ಸನ್ನು ಹೊಂದಿರುವ, ಅನಾರೋಗ್ಯದ ಬಗ್ಗೆ ಯೋಚಿಸದಿರುವ ಜನರೊಡನೆ ಬೆರೆಯಿರಿ. ವೈಫಲ್ಯದ ಪ್ರಜ್ಞೆ ಇದ್ದರೆ, ಯಶಸ್ಸಿನ ಪ್ರಜ್ಞೆ ಇರುವವರ ಸಹವಾಸ ಮಾಡಿ. ನಂತರ ನೀವು ಬದಲಾಗಲಾರಂಭಿಸುವಿರಿ.
ನಿಮ್ಮ ಪ್ರತಿ ಅಭ್ಯಾಸವು ಮೆದುಳಿನಲ್ಲಿ ವಿಶೇಷವಾದ “ತೋಡು” ಅಥವಾ ಮಾರ್ಗವನ್ನು ಸೃಷ್ಟಿಸುತ್ತದೆ. ಈ ಮಾದರಿಗಳು ನಿಮ್ಮನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ಮಾಡುತ್ತವೆ, ಹೆಚ್ಚಾಗಿ ನಿಮ್ಮ ಇಚ್ಛೆಗೆ ವಿರುದ್ಧವಾಗಿ. ಮೆದುಳಿನಲ್ಲಿ ನೀವೇ ಸೃಷ್ಟಿಸಿರುವ ಆ ಮಾದರಿಗಳನ್ನೇ ನಿಮ್ಮ ಜೀವನ ಅನುಸರಿಸುತ್ತದೆ. ಈ ಅರ್ಥದಲ್ಲಿ ನೀವು ಸ್ವತಂತ್ರ ವ್ಯಕ್ತಿಯಲ್ಲ; ನೀವು ಮಾಡಿಕೊಂಡ ಅಭ್ಯಾಸಗಳಿಗೆ ನೀವೇ ಹೆಚ್ಚೂ ಕಡಿಮೆ ಬಲಿಪಶುಗಳಾಗಿದ್ದೀರಿ. ಆ ಮಾದರಿಗಳು ಎಷ್ಟು ಗಾಢವಾಗಿವೆಯೋ, ಅಷ್ಟರ ಮಟ್ಟಿಗೆ ನೀವು ಆ ಮಾದರಿಗಳ ಕೈಗೊಂಬೆ. ಆದರೆ ನೀವು ಆ ದುರಭ್ಯಾಸಗಳ ಪ್ರಭಾವವನ್ನು ನಿಷ್ಕ್ರಿಯಗೊಳಿಸಬಹುದು. ಹೇಗೆ? ಅವುಗಳಿಗೆ ವಿರುದ್ಧವಾದ ಒಳ್ಳೆಯ ಅಭ್ಯಾಸಗಳ ಮೆದುಳಿನ ಮಾದರಿಗಳನ್ನು ಸೃಷ್ಟಿಸುವ ಮೂಲಕ. ಮತ್ತು ನೀವು ಧ್ಯಾನದ ಮೂಲಕ ದುರಭ್ಯಾಸಗಳ ಮಾದರಿಗಳನ್ನು ಸಂಪೂರ್ಣವಾಗಿ ಅಳಿಸಬಹುದು. ಬೇರೆ ದಾರಿಯಿಲ್ಲ. ಆದರೆ ಸಜ್ಜನರ ಸಂಗ ಮತ್ತು ಉತ್ತಮ ಪರಿಸರವಿಲ್ಲದೆ ನಿಮಗೆ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಮತ್ತು ಸಜ್ಜನರ ಸಂಗ ಮತ್ತು ಧ್ಯಾನವಿಲ್ಲದೆ ನಿಮ್ಮನ್ನು ನೀವು ದುರಭ್ಯಾಸಗಳಿಂದ ಮುಕ್ತಗೊಳಿಸಿಕೊಳ್ಳಲು ಸಾಧ್ಯವಿಲ್ಲ.

ಪ್ರತಿ ಬಾರಿ ನೀವು ದೇವರ ಮೇಲೆ ಆಳವಾಗಿ ಧ್ಯಾನ ಮಾಡಿದಾಗಲೂ, ನಿಮ್ಮ ಮೆದುಳಿನ ಮಾದರಿಗಳಲ್ಲಿ ಲಾಭದಾಯಕ ಬದಲಾವಣೆಗಳು ಸಂಭವಿಸುತ್ತವೆ. ನೀವು ಹಣಕಾಸಿನ ವೈಫಲ್ಯ ಅಥವಾ ನೈತಿಕ ವೈಫಲ್ಯ ಅಥವಾ ಆಧ್ಯಾತ್ಮಿಕ ವೈಫಲ್ಯಕ್ಕೊಳಗಾಗಿರುವಿರಿ ಎಂದುಕೊಳ್ಳಿ. ಆಳವಾದ ಧ್ಯಾನದ ಮೂಲಕ, “ನಾನು ಮತ್ತು ನನ್ನ ತಂದೆ ಇಬ್ಬರೂ ಒಂದೇ” ಎಂದು ದೃಢಪಡಿಸುತ್ತಿದ್ದರೆ, ನೀವು ದೇವರ ಮಗುವೆಂದು ಅರಿಯುವಿರಿ. ಆ ಆದರ್ಶವನ್ನು ಹಿಡಿದಿಟ್ಟುಕೊಳ್ಳಿ. ನೀವು ಶ್ರೇಷ್ಠ ಆನಂದವನ್ನು ಅನುಭವಿಸುವತನಕ ಧ್ಯಾನ ಮಾಡಿ. ಯಾವಾಗ ಆನಂದವನ್ನು ನಿಮ್ಮ ಹೃದಯದಲ್ಲಿ ಅನುಭವಿಸುವಿರೋ, ದೇವರು ನಿಮ್ಮ ಪ್ರಾರ್ಥನೆಗೆ ಉತ್ತರಿಸಿದ್ದಾನೆ ಎಂದು ತಿಳಿಯಿರಿ; ದೇವರು ನಿಮ್ಮ ಪ್ರಾರ್ಥನೆಗಳಿಗೆ ಮತ್ತು ಧನಾತ್ಮಕ ಚಿಂತನೆಗಳಿಗೆ ಪ್ರತಿಕ್ರಿಯಿಸುತ್ತಿದ್ದಾನೆ. ಇದು ಸ್ಪಷ್ಟ ಮತ್ತು ನಿಖರವಾದ ವಿಧಾನವಾಗಿದೆ:
ಮೊದಲು, ಆಳವಾದ ಶಾಂತಿಯನ್ನು, ನಂತರ ನಿಮ್ಮ ಹೃದಯದಲ್ಲಿ ಮಹದಾನಂದವನ್ನು ಅನುಭವಿಸಲು ಪ್ರಯತ್ನಿಸುತ್ತ, “ನಾನು ಮತ್ತು ನನ್ನ ತಂದೆ ಇಬ್ಬರೂ ಒಂದೇ,” ಎಂಬ ವಿಚಾರದ ಮೇಲೆ ಧ್ಯಾನ ಮಾಡಿ. ಆನಂದದ ಅನುಭವವಾದಾಗ, “ತಂದೆಯೇ, ನೀನು ನನ್ನೊಂದಿಗಿರುವೆ. ನನ್ನ ದುರಭ್ಯಾಸಗಳು ಮತ್ತು ಹಳೆಯ ಪ್ರವೃತ್ತಿಗಳ ಬೀಜಗಳಿಂದ ತುಂಬಿದ ನನ್ನ ಮೆದುಳಿನ ಜೀವಕೋಶಗಳನ್ನು ನನ್ನಲ್ಲಿರುವ ನಿನ್ನ ಶಕ್ತಿಯು ದಹಿಸಿ ಹಾಕುವಂತೆ ಆದೇಶಿಸುತ್ತೇನೆ,” ಎಂದು ಹೇಳಿ. ಧ್ಯಾನದಲ್ಲಿರುವ ಭಗವಂತನ ಶಕ್ತಿಯು ಅದನ್ನು ಮಾಡಿಬಿಡುತ್ತದೆ. ನೀವು ಪುರುಷ ಅಥವಾ ಮಹಿಳೆ ಎಂಬ ಸೀಮಿತ ಪ್ರಜ್ಞೆಯನ್ನು ತೊಡೆದುಹಾಕಿ; ನೀವು ಭಗವಂತನ ಶಿಶುವೆಂದು ನಿಮಗೆ ತಿಳಿದಿರಲಿ. ನಂತರ ಮನಸ್ಸಿನಲ್ಲಿ ಸಂಕಲ್ಪಿಸಿಕೊಂಡು ಭಗವಂತನಲ್ಲಿ ಪ್ರಾರ್ಥಿಸಿ: “ನನ್ನ ಮೆದುಳಿನ ಜೀವಕೋಶಗಳು ಬದಲಾಗಲು ಮತ್ತು ನನ್ನನ್ನು ಕೈಗೊಂಬೆಯನ್ನಾಗಿ ಮಾಡಿದ ದುರಭ್ಯಾಸಗಳ ಕೊರಕಲುಗಳನ್ನು ನಾಶಪಡಿಸಲು ನಾನು ಆದೇಶ ನೀಡುತ್ತೇನೆ. ಪ್ರಭುವೇ, ಅವುಗಳನ್ನು ನಿನ್ನ ದಿವ್ಯ ಪ್ರಕಾಶದಲ್ಲಿ ದಹಿಸಿಬಿಡು.” ಮತ್ತು ನೀವು ಸೆಲ್ಫ್-ರಿಯಲೈಝೇಷನ್ ಧ್ಯಾನ ತಂತ್ರಗಳನ್ನು, ವಿಶೇಷವಾಗಿ ಕ್ರಿಯಾ ಯೋಗವನ್ನು ಅಭ್ಯಾಸ ಮಾಡಿದಾಗ, ದೇವರ ಬೆಳಕು ನಿಮ್ಮನ್ನು ಹರಸುತ್ತಿರುವುದನ್ನು ನೀವು ನಿಜವಾಗಿಯೂ ನೋಡುತ್ತೀರಿ.

ಈ ತಂತ್ರದ ಪರಿಣಾಮಕಾರಿತ್ವವನ್ನು ವಿವರಿಸುವ ನಿಜವಾದ ಕಥೆಯನ್ನು ನಾನು ನಿಮಗೆ ಹೇಳುತ್ತೇನೆ. ಭಾರತದಲ್ಲಿ, ಕೆಟ್ಟ ಕೋಪವಿರುವ ಒಬ್ಬ ವ್ಯಕ್ತಿ ನನ್ನ ಬಳಿ ಬಂದ. ಅವನಿಗೆ ಕೋಪ ಬಂದಾಗ ತನ್ನ ಮೇಲಧಿಕಾರಿಗಳಿಗೆ ಕಪಾಳಮೋಕ್ಷ ಮಾಡುವುದರಲ್ಲಿ ಪರಿಣತನಾಗಿದ್ದನು; ಆದ್ದರಿಂದ ಅವನು ಒಂದರ ನಂತರ ಒಂದರಂತೆ ಕೆಲಸವನ್ನು ಕಳೆದುಕೊಳ್ಳುತ್ತಿದ್ದನು. ಅವನು ಅನಿಯಂತ್ರಿತವಾಗಿ ಎಷ್ಟು ಕುಪಿತನಾಗುತ್ತಿದ್ದನೆಂದರೆ, ತನಗೆ ತೊಂದರೆ ಕೊಟ್ಟವರೆಡೆಗೆ ಕೈಗೆ ಸಿಕ್ಕಿದ್ದನ್ನು ಎಸೆದುಬಿಡುತ್ತಿದ್ದ. ಅವನು ನನ್ನ ಸಹಾಯ ಕೇಳಿದ. ನಾನು ಅವನಿಗೆ, “ಮುಂದಿನ ಬಾರಿ ನೀನು ಕೋಪಗೊಂಡಾಗ, ಏನಾದರೂ ಮಾಡುವ ಮುನ್ನ ನೂರನ್ನು ಎಣಿಸು,” ಎಂದು ಹೇಳಿದೆ. ಅವನು ಪ್ರಯತ್ನಿಸಿದ, ಆದರೆ ನನ್ನ ಬಳಿಗೆ ಹಿಂದಿರುಗಿ ಬಂದು ಹೇಳಿದ, “ನಾನು ಅದನ್ನು ಮಾಡುವಾಗ ಇನ್ನಷ್ಟು ಕೋಪ ಬರುತ್ತದೆ. ನಾನು ಎಣಿಸುತ್ತಿರುವಾಗ, ಅಷ್ಟು ಹೊತ್ತು ಕಾಯಬೇಕಾದುದಕ್ಕಾಗಿ ನನ್ನ ಕೋಪ ತೀವ್ರವಾಗುತ್ತಿತ್ತು.” ಅವನ ಪರಿಸ್ಥಿತಿ ನಿರಾಶಾದಾಯಕವಾಗಿತ್ತು.
ನಂತರ ನಾನು ಅವನಿಗೆ ಕ್ರಿಯಾ ಯೋಗವನ್ನು ಅಭ್ಯಾಸ ಮಾಡಲು ಹೇಳಿದೆ, ಜೊತೆಗೆ ಈ ಸೂಚನೆಯನ್ನೂ ನೀಡಿದೆ: “ನೀನು ನಿನ್ನ ಕ್ರಿಯಾವನ್ನು ಅಭ್ಯಾಸ ಮಾಡಿದ ನಂತರ, ದೇವರ ದಿವ್ಯ ಬೆಳಕು ನಿನ್ನ ಮೆದುಳಿಗೆ ಹೋಗುತ್ತಿದೆ, ಅದು ಮೆದುಳನ್ನು ಶಮನಗೊಳಿಸುತ್ತಿದೆ, ನಿನ್ನ ನರಗಳನ್ನು ಶಾಂತಗೊಳಿಸುತ್ತಿದೆ, ನಿನ್ನ ಭಾವನೆಗಳನ್ನು ಶಾಂತಗೊಳಿಸುತ್ತಿದೆ, ಎಲ್ಲಾ ಕೋಪವನ್ನು ಅಳಿಸಿಹಾಕುತ್ತಿದೆ ಎಂದು ಭಾವಿಸು. ಮತ್ತು ಒಂದಲ್ಲ ಒಂದು ದಿನ ನಿನ್ನ ಕೂಗಾಟ-ಹಾರಾಟ ಹೊರಟುಹೋಗುತ್ತದೆ.” ಸ್ವಲ್ಪ ಸಮಯದ ನಂತರ ಅವನು ಮತ್ತೆ ನನ್ನ ಬಳಿ ಬಂದ, ಮತ್ತು ಈ ಬಾರಿ ಹೇಳಿದ, “ನಾನು ಕೋಪದ ಅಭ್ಯಾಸದಿಂದ ಮುಕ್ತನಾಗಿದ್ದೇನೆ. ನಾನು ತುಂಬಾ ಕೃತಜ್ಞನಾಗಿದ್ದೇನೆ.”
ನಾನು ಅವನನ್ನು ಪರೀಕ್ಷಿಸಲು ನಿರ್ಧರಿಸಿದೆ. ಕೆಲವು ಹುಡುಗರನ್ನು ಅವನೊಂದಿಗೆ ಜಗಳವಾಡಲು ವ್ಯವಸ್ಥೆ ಮಾಡಿದೆ. ನಾನು ಗಮನಿಸಲು ಸಾಧ್ಯವಾಗುವಂತೆ, ಅವನು ನಿಯತವಾಗಿ ಹಾದು ಹೋಗುವ ಮಾರ್ಗದಲ್ಲಿದ್ದ ಪಾರ್ಕ್‌ನಲ್ಲಿ ಬಚ್ಚಿಟ್ಟುಕೊಂಡೆ. ಹುಡುಗರು ಅವನೊಂದಿಗೆ ಜಗಳವಾಡುವ ಪ್ರಯತ್ನ ಮತ್ತೆ ಮತ್ತೆ ಮಾಡಿದರೂ ಅವನು ಪ್ರತಿಕ್ರಿಯಿಸಲಿಲ್ಲ. ಅವನು ತನ್ನ ಶಾಂತಿಯನ್ನು ಕಾಪಾಡಿಕೊಂಡಿದ್ದ.