ನಿಮ್ಮ ನೈಜಸ್ವರೂಪವನ್ನು ಜಾಗೃತಗೊಳಿಸಲು ಅಮರತ್ವದ ಚಿಂತನೆಗಳನ್ನು ಹೇಗೆ ಉಪಯೋಗಿಸುವುದು

Paramahansa Yogananda: Author of Autobiography of a Yogi.

ಪರಮಹಂಸ ಯೋಗಾನಂದರ ಜ್ಞಾನ-ಪರಂಪರೆಯಿಂದ

ಪರಮಹಂಸ ಯೋಗಾನಂದರು ಬರೆದಿದ್ದಾರೆ:

“ಭಗವಂತನ ಚಿಂತನೆಗಳಿಂದ ನಿಮ್ಮನ್ನು ಶ್ರುತಿಗೊಳಿಸಿಕೊಂಡು ಸತ್ಯದ ಸರಿಯಾದ ಚಿಂತನೆಗಳೆಂಬ ಸುತ್ತಿಗೆಯಿಂದ ಮಾಯೆಯೆಂಬ ಮೊಳೆಯನ್ನು ಹೊಡೆಯುವುದರ ಮೂಲಕ, ನೀವು ಮಾಯೆಯ ಪ್ರಭಾವದಿಂದ ಹೊರಬರಬಹುದು.

ಅಮರ್ತ್ಯದ ಚಿಂತನೆಗಳಿಂದ ಮರ್ತ್ಯದ ಆಲೋಚನೆಗಳನ್ನು ಬದಲಾಯಿಸಿ ನಾಶಪಡಿಸಬಹುದು.”

ಈ ಲೇಖನದಲ್ಲಿ ಇಟಾಲಿಕ್ಸ್‌ ಶೈಲಿಯಲ್ಲಿ ಬರೆದಿರುವ ವಾಕ್ಯಗಳನ್ನು ಪರಮಹಂಸಜಿಯವರ ಭಾಷಣಗಳಿಂದ ಮತ್ತು ಬರವಣಿಗೆಗಳಿಂದ ಕ್ರೋಡೀಕರಿಸಲಾಗಿದೆ. ಇವುಗಳು “ಅಮರತ್ವದ ಚಿಂತನೆ”ಯ ಸಕಾರಾತ್ಮಕ ಧೃಡೀಕರಣಗಳು ಮತ್ತು ಆತ್ಮದ ಪರಿಕಲ್ಪನೆಯ ವಾಕ್ಯಗಳು. ಇವುಗಳನ್ನು ಅನಂತ ಪ್ರಜ್ಞೆಯ ಮತ್ತು ಸೃಷ್ಟಿಯಲ್ಲಿ ಎಲ್ಲೆಲ್ಲೂ ಪಸರಿಸಿರುವ ಹಾಗೂ ನಿಮ್ಮೊಳಗೂ ಇರುವ ಆನಂದಮಯ ಸತ್ಯತೆಯ ಜಾಗೃತಿಗಾಗಿ ಬಳಸಬಹುದಾಗಿದೆ.

ಹಗಲು ಮತ್ತು ರಾತ್ರಿ, ನಿಮ್ಮ ನೈಜ ಸ್ವರೂಪದ ಬಗ್ಗೆ ದೃಢೀಕರಿಸಿಕೊಳ್ಳಿ

ಈ ಕೆಳಗಿನ ಸತ್ಯವನ್ನು ನಿಮಗೆ ನೀವೇ ನಿರಂತರವಾಗಿ ಪುನರಾವರ್ತಿಸಿ:

“ನಾನು ನಿರ್ವಿಕಾರ, ನಾನು ಅನಂತ. ನಾನು ಮುರಿಯುವ ಮೂಳೆಗಳು ಮತ್ತು ಅಳಿಯುವ ಶರೀರವಿರುವ ಒಬ್ಬ ಅಲ್ಪ ಮರ್ತ್ಯನಲ್ಲ. ನಾನು ಸಾವಿಲ್ಲದ, ಬದಲಾವಣೆಯಿಲ್ಲದ ಅನಂತನು.”

ಒಬ್ಬ ಅಮಲೇರಿದ ರಾಜಕುಮಾರ ಸಂಪೂರ್ಣವಾಗಿ ತನ್ನ ನಿಜಸ್ವರೂಪವನ್ನು ಮರೆತು ಕೊಳೆಗೇರಿಗೆ ಹೋಗಿ, “ನಾನು ಎಷ್ಟು ಬಡವ,” ಎಂದು ಪ್ರಲಾಪಿಸಲಾರಂಭಿಸಿದರೆ, ಅವನ ಸ್ನೇಹಿತರು ಅವನನ್ನು ಕಂಡು ನಗುತ್ತಾ, “ಎಚ್ಚರಾಗು, ನೀನು ಒಬ್ಬ ರಾಜಕುಮಾರ ಎನ್ನುವುದನ್ನು ನೆನಪಿಸಿಕೊ.” ಎಂದು ಹೇಳುತ್ತಾರೆ. ಅದೇ ರೀತಿ ನೀವು ಕೂಡ ಹೆಣಗಾಡುತ್ತ, ದೈನ್ಯದಿಂದಿರುವ ಒಬ್ಬ ಅಸಹಾಯ ಮರ್ತ್ಯನೆಂಬ ಭ್ರಮೆಯಲ್ಲಿರುವಿರಿ. ಪ್ರತಿದಿನ ನೀವು ನಿಶ್ಶಬ್ದವಾಗಿ ಕುಳಿತು ಗಾಢನಂಬಿಕೆಯಿಂದ ದೃಢೀಕರಿಸಿ:

“ಹುಟ್ಟಿಲ್ಲ ಸಾವಿಲ್ಲ, ಜಾತಿ ನನಗಿಲ್ಲ; ತಂದೆ ತಾಯಿ ಯಾರೂ ನನಗಿಲ್ಲ. ಕೇವಲ ಆತ್ಮ, ಶಿವೋಹಂ. ನಾನು ಅನಂತ ಆನಂದ.”

ನೀವು ಈ ಆಲೋಚನೆಗಳನ್ನು ಹಗಲೂ ರಾತ್ರಿ ಪದೇ ಪದೇ ಪುನರಾವರ್ತಿಸಿದರೆ, ಕ್ರಮೇಣ ನೀವು ನಿಜವಾಗಿ ಯಾರೆಂಬುದನ್ನು ಅರಿಯುವಿರಿ: ಒಂದು ಅಮರ ಆತ್ಮ.

ನಿಮ್ಮ ನಿಜ ಅಸ್ತಿತ್ವವನ್ನು ಮರೆಯಾಗಿಸುವ ಎಲ್ಲ ಸೀಮಿತ ಆಲೋಚನೆಗಳನ್ನು ಕಳಚಿ ಹಾಕಿ

ನೀವು ಯಾರು ಎಂದು ನಿಮಗೇ ತಿಳಿಯದಿರುವುದು ಹಾಗೂ ನಿಮ್ಮ ಆತ್ಮವನ್ನೇ ನೀವು ಅರಿಯದಿರುವುದು ಎಷ್ಟು ವಿಚಿತ್ರವಲ್ಲವೇ? ನಿಮ್ಮ ಶರೀರ ಮತ್ತು ನಿಮ್ಮ ಮಾನವೀಯ ಪಾತ್ರಗಳಿಗೆ ಸಂಬಂಧಿಸಿದಂತೆ ನಿಮ್ಮನ್ನು ನೀವು ವಿವಿಧ ಉಪಾಧಿಗಳಿಂದ ವ್ಯಾಖ್ಯಾನಿಸುತ್ತೀರಿ….ಈ ಉಪಾಧಿಗಳನ್ನು ನೀವು ನಿಮ್ಮ ಆತ್ಮದಿಂದ ಕಳಚಿ ಹಾಕಬೇಕು.

“ನಾನು ಆಲೋಚಿಸುತ್ತೇನೆ; ಆದರೆ ನಾನು ಆಲೋಚನೆಯಲ್ಲ. ನಾನು ಭಾವಿಸುತ್ತೇನೆ; ಆದರೆ ನಾನು ಭಾವನೆಯಲ್ಲ. ನಾನು ಇಚ್ಛಿಸುತ್ತೇನೆ; ಆದರೆ ನಾನು ಇಚ್ಛೆಯಲ್ಲ.”

ಇನ್ನು ಉಳಿದಿರುವುದೇನು? ನಿಮಗೆ ಅಸ್ತಿತ್ವವಿದೆ ಎಂದು ಅರಿತಿರುವ ನೀವು; ಯಾವ ಅಂತರ್ಬೋಧೆಯಿಂದ ಆತ್ಮಕ್ಕೆ ತನ್ನ ಅಸ್ತಿತ್ವದ ಬಗ್ಗೆ ನಿರುಪಾಧಿಕವಾಗಿ ತಿಳಿದಿರುವುದೋ ಆ ಅಂತರ್ಬೋಧೆಯ ಮೂಲಕ ಲಭಿಸಿದ ಸಾಕ್ಷ್ಯದಿಂದ ನೀವು ಅಸ್ತಿತ್ವದಲ್ಲಿದ್ದೀರಿ ಎಂದು ಭಾವಿಸುವ ಆ ನೀವು.

Stars on the Sky.ದಿನಪೂರ್ತಿ ನಿರಂತರವಾಗಿ ನೀವು ನಿಮ್ಮ ಶರೀರದ ಮುಖಾಂತರ ಕಾರ್ಯ ನಿರ್ವಹಿಸುತ್ತಿರುವುದರಿಂದ, ನೀವು ಅದರೊಡನೆ ಗುರುತಿಸಿಕೊಳ್ಳುತ್ತೀರಿ. ಆದರೆ ಪ್ರತಿದಿನ ರಾತ್ರಿ, ನಿಮ್ಮ ಆ ಬಂಧನದ ಭ್ರಮೆಯನ್ನು ದೇವರು ನಿಮ್ಮಿಂದ ದೂರ ಮಾಡುತ್ತಾನೆ. ಹಿಂದಿನ ರಾತ್ರಿಯ ಸ್ವಪ್ನರಹಿತ ಗಾಢ ನಿದ್ದೆಯಲ್ಲಿ ನೀವು ಹೆಣ್ಣಾಗಿದ್ದಿರಾ, ಗಂಡಾಗಿದ್ದಿರಾ ಅಥವಾ ಒಬ್ಬ ಅಮೆರಿಕನ್ನರಾಗಿದ್ದಿರಾ, ಹಿಂದುವಾಗಿದ್ದಿರಾ ಅಥವಾ ಶ್ರೀಮಂತರಾಗಿದ್ದಿರಾ, ಬಡವರಾಗಿದ್ದಿರಾ? ಇಲ್ಲ. ನೀವು ಶುದ್ಧ ಚೇತನವಾಗಿದ್ದಿರಿ….ಗಾಢ ನಿದ್ದೆಯ ಅರೆ-ಅತೀತಪ್ರಜ್ಞೆಯ ಸ್ವಾತಂತ್ರ್ಯದಲ್ಲಿ ದೇವರು ನಿಮ್ಮೆಲ್ಲ ಮರ್ತ್ಯ ನಾಮರೂಪಗಳನ್ನು ದೂರ ಮಾಡುತ್ತಾನೆ ಮತ್ತು ನೀವು ದೇಹ ಹಾಗೂ ಅದರ ಎಲ್ಲಾ ಪರಿಮಿತಿಗಳಿಂದ ಪ್ರತ್ಯೇಕವಾಗಿದ್ದೀರೆಂದು — ಆಕಾಶದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಶುದ್ಧ ಪ್ರಜ್ಞೆ ಎಂದು ನಿಮಗೆ ಅನಿಸುವಂತೆ ಮಾಡುತ್ತಾನೆ. ಆ ವೈಶಾಲ್ಯತೆಯೇ ನಿಮ್ಮ ನಿಜವಾದ ಅಸ್ತಿತ್ವ.

ಪ್ರತಿದಿನ ನೀವು ಎಚ್ಚರಗೊಳ್ಳುತ್ತಿದ್ದಂತೆ ಈ ಕೆಳಗಿನ ಸತ್ಯವನ್ನು ನೆನಪಿಗೆ ತಂದುಕೊಳ್ಳಿ:

“ಈಗ ತಾನೆ ನಾನು ನನ್ನ ಆತ್ಮದ ಅಂತರ್ಗ್ರಹಿಕೆಯಿಂದ ಹೊರಬರುತ್ತಿದ್ದೇನೆ. ನಾನು ಶರೀರವಲ್ಲ. ನಾನು ಅಗೋಚರ. ನಾನು ಆನಂದ. ನಾನು ಬೆಳಕು. ನಾನು ಜ್ಞಾನ. ನಾನು ಪ್ರೇಮ. ನಾನು ಕನಸಿನ ಶರೀರದೊಳಗೆ ವಾಸಿಸುತ್ತಿದ್ದೇನೆ, ಅದರ ಮೂಲಕ ನಾನು ಈ ಲೌಕಿಕ ಜೀವನದ ಕನಸು ಕಾಣುತ್ತಿದ್ದೇನೆ; ಆದರೆ ನಾನು ನಿತ್ಯ ನಿರಂತರ ಆತ್ಮ.”

ವೈಫಲ್ಯತೆಯ ಋತುವು ಯಶಸ್ಸಿನ ಬೀಜಗಳನ್ನು ಬಿತ್ತುವುದಕ್ಕೆ ಅತಿ ಪ್ರಶಸ್ತ ಕಾಲ. ಪರಿಸ್ಥಿತಿಗಳೆಂಬ ದೊಣ್ಣೆಯ ಹೊಡೆತವು ನಿಮ್ಮನ್ನು ಘಾಸಿಗೊಳಿಸಬಹುದು, ಆದರೆ ತಲೆ ಎತ್ತಿ ನಡೆಯಿರಿ. ನೀವು ಎಷ್ಟೇ ಬಾರಿ ಸೋತರೂ, ಸದಾ ಮತ್ತೊಮ್ಮೆ ಪ್ರಯತ್ನಿಸಿ. ಇನ್ನು ಹೋರಾಡಲು ಸಾಧ್ಯವಿಲ್ಲ ಎಂದೆನಿಸಿದ ಮೇಲೂ ಅಥವಾ ನಿಮಗೆ ಆಗುವುದನ್ನೆಲ್ಲಾ ಮಾಡಿಯಾಯಿತು ಎಂದು ಯೋಚಿಸಿದ ಮೇಲೂ ಅಥವಾ ಗೆಲುವು ನಿಮ್ಮ ಪ್ರಯತ್ನಗಳ ಮುಡಿಗೇರುವವರೆಗೆ ಹೋರಾಡಿ.

ಯಶಸ್ಸಿನ ಮನಃಶಾಸ್ತ್ರವನ್ನು ಹೇಗೆ ಬಳಸಬೇಕೆಂಬುದನ್ನು ಕಲಿತುಕೊಳ್ಳಿ. ಕೆಲವರು ಸಲಹೆ ನೀಡುತ್ತಾರೆ, “ವೈಫಲ್ಯತೆಯ ಬಗ್ಗೆ ಮಾತನಾಡಲೇ ಬೇಡ.” ಆದರೆ ಅದೊಂದೇ ಪ್ರಯೋಜನಕ್ಕೆ ಬರುವುದಿಲ್ಲ. ಮೊದಲು ನಿಮ್ಮ ಸೋಲನ್ನು, ಅದರ ಕಾರಣಗಳನ್ನು ವಿಶ್ಲೇಷಿಸಿಕೊಳ್ಳಿ, ಅದರ ಅನುಭವದಿಂದ ಲಾಭ ಪಡೆದುಕೊಳ್ಳಿ. ನಂತರ ಅದರ ಬಗ್ಗೆ ಯೋಚಿಸುವುದನ್ನೇ ಬಿಟ್ಟುಬಿಡಿ. ಹಲವಾರು ಬಾರಿ ಸೋತರೂ, ಅಂತರಂಗದಲ್ಲಿ ಸೋಲೊಪ್ಪಿಕೊಳ್ಳದೆ ಮತ್ತೆ ಪ್ರಯತ್ನಿಸುವವನೇ ನಿಜವಾದ ಜಯಶಾಲಿ.

ಬದುಕಿನಲ್ಲಿ ಕತ್ತಲಾವರಿಸಬಹುದು, ಕಷ್ಟಗಳು ಬರಬಹುದು, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳದೆ ಅವು ತಪ್ಪಿ ಹೋಗಬಹುದು, ಆದರೆ ನಿಮ್ಮೊಳಗೆ ನೀವು, “ನನ್ನ ಕಥೆ ಮುಗಿಯಿತು. ದೇವರು ನನ್ನ ಕೈ ಬಿಟ್ಟ.” ಎಂದು ಎಂದಿಗೂ ಅಂದುಕೊಳ್ಳಬೇಡಿ. ಅಂತಹ ವ್ಯಕ್ತಿಗೆ ಯಾರೇನು ಮಾಡಲು ಸಾಧ್ಯ? ನಿಮ್ಮ ಕುಟುಂಬ ನಿಮ್ಮನ್ನು ತೊರೆಯಬಹುದು; ಅದೃಷ್ಟ ಕೈಬಿಟ್ಟಂತೆ ಕಾಣಬಹುದು; ಮನುಷ್ಯ ಮತ್ತು ಪ್ರಕೃತಿಯ ಎಲ್ಲಾ ಶಕ್ತಿಗಳು ನಿಮ್ಮ ವಿರುದ್ಧ ವ್ಯೂಹ ರಚಿಸಬಹುದು; ಆದರೆ ನಿಮ್ಮೊಳಗಿರುವ ದಿವ್ಯ ಕರ್ತೃತ್ವ ಶಕ್ತಿಯ ಗುಣದಿಂದ, ನಿಮ್ಮ ಹಿಂದಿನ ದುರಾಚಾರಗಳಿಂದ ಸೃಷ್ಟಿಯಾದ ವಿಧಿಯ ಪ್ರತಿಯೊಂದು ಆಕ್ರಮಣವನ್ನು ಹಿಮ್ಮೆಟ್ಟಿಸಿ, ಜಯಶಾಲಿಯಾಗಿ ಸ್ವರ್ಗದೊಳಕ್ಕೆ ಕಾಲಿಡಬಹುದು.

ನಿಮ್ಮ ಆತ್ಮವನ್ನು ದೇವರಿಂದ ಅಗಲಿಸಲಾಗದು ಎನ್ನುವುದನ್ನು ಅರಿಯಿರಿ

Nebula

ಅತ್ಯುನ್ನತ ಪರಿಜ್ಞಾನವೆಂದರೆ ಆತ್ಮಸಾಕ್ಷಾತ್ಕಾರ — ಆತ್ಮವನ್ನು ದೇವರಿಂದ, ಅಂದರೆ ಎಲ್ಲ ಅಸ್ತಿತ್ವಗಳ ಅಂತರಾಳದಲ್ಲಿ ನೆಲೆಸಿರುವ ಆ ಏಕೈಕ ಅಸ್ತಿತ್ವದಿಂದ, ಎಂದಿಗೂ ಅಗಲಿಸಲಾಗದು ಎಂದು ಅರಿಯುವುದು. “ಓ ಅರ್ಜುನ! ಎಲ್ಲ ಜೀವಿಗಳ ಹೃದಯದಲ್ಲಿರುವ ಆತ್ಮನು ನಾನೇ: ನಾನೇ ಅವುಗಳ ಮೂಲ, ಅಸ್ತಿತ್ವ ಮತ್ತು ಅಂತ್ಯ.” (ಗಾಡ್‌ ಟಾಕ್ಸ್‌ ವಿಥ್‌ ಅರ್ಜುನ; ದಿ ಭಗವದ್ಗೀತ X:20)

ಎಲ್ಲ ಮಹಾನ್ ಬೋಧಕರು, ಈ ಶರೀರದೊಳಗೆ ಅಮರವಾದ ಆತ್ಮವಿದೆ, ಅದು ಎಲ್ಲವನ್ನೂ ಪೋಷಿಸುವ ಆ ದೇವರ ಒಂದು ಕಿಡಿ ಎಂದು ಸಾರಿ ಹೇಳಿದ್ದಾರೆ. ಯಾರು ತನ್ನ ಆತ್ಮವನ್ನು ಅರಿತಿದ್ದಾನೋ ಅವನು ಈ ಸತ್ಯವನ್ನು ಅರಿತಿದ್ದಾನೆ:

“ಎಲ್ಲ ಪರಿಮಿತಿಗಳನ್ನು ಮೀರಿದವನು ನಾನು….ನಾನೇ ನಕ್ಷತ್ರಗಳು, ನಾನೇ ಅಲೆಗಳು. ನಾನೇ ಎಲ್ಲದರ ಜೀವ; ನಾನೇ ಎಲ್ಲರ ಹೃದಯಗಳಲ್ಲಡಗಿರುವ ನಗು, ನಾನೇ ಪುಷ್ಪಗಳ ಮುಖಗಳಲ್ಲಿನ ಮತ್ತು ಪ್ರತಿಯೊಂದು ಆತ್ಮದಲ್ಲಿನ ಮುಗುಳ್ನಗೆ. ನಾನೇ ಎಲ್ಲ ಸೃಷ್ಟಿಯನ್ನು ಪೋಷಿಸುವ ಪರಿಜ್ಞಾನ ಮತ್ತು ಶಕ್ತಿ.”

ಯೋಚಿಸಿ, ದೃಢೀಕರಿಸಿ, ನಿಮ್ಮ ದಿವ್ಯ ಸ್ವರೂಪವನ್ನು ಅರಿತುಕೊಳ್ಳಿ

ನಾವು ನಶ್ವರ ಮಾನವ ಜೀವಿಗಳು ಎಂಬ ತಲೆತಲಾಂತರದ ತಪ್ಪು ಕಲ್ಪನೆಯನ್ನು ಕೊನೆಗಾಣಿಸಿರಿ. ನಾವು ದೇವರ ಮಕ್ಕಳು ಎನ್ನುವುದನ್ನು ಪ್ರತಿದಿನ ಯೋಚಿಸಬೇಕು, ಧ್ಯಾನಿಸಬೇಕು, ದೃಢೀಕರಿಸಬೇಕು, ನಂಬಬೇಕು ಮತ್ತು ಅರಿತುಕೊಳ್ಳಬೇಕು.

“ಅದು ಕೇವಲ ಒಂದು ಯೋಚನೆ ಎಂದು ನೀವು ಹೇಳಬಹುದು.” ಸರಿ, ಯೋಚನೆ ಎಂದರೆ ಏನು? ನೀವು ನೋಡುವ ಎಲ್ಲವೂ ಕೂಡ ಒಂದು ಕಲ್ಪನೆಯ ಪರಿಣಾಮ….ಅಗೋಚರವಾದ ಯೋಚನೆಯು ಎಲ್ಲದಕ್ಕೂ ಅವುಗಳ ನಿಜಸ್ಥಿತಿಯನ್ನು ಕೊಡುತ್ತದೆ. ಆದ್ದರಿಂದ, ನೀವು ನಿಮ್ಮ ಯೋಚನಾ ಪ್ರಕ್ರಿಯೆಯನ್ನು ನಿಯಂತ್ರಿಸಿದಲ್ಲಿ, ಯಾವುದನ್ನು ಬೇಕಾದರೂ ದೃಷ್ಟಿಗೆ ಗೋಚರವಾಗುವಂತೆ ಮಾಡಬಹುದು; ಅದನ್ನು ನಿಮ್ಮ ಏಕಾಗ್ರತೆಯ ಶಕ್ತಿಯಿಂದ ನೀವು ಸಾಕಾರಗೊಳಿಸಬಹುದು….

ಗುರುಗಳು ನೀಡಿದ ಧ್ಯಾನದ ವೈಜ್ಞಾನಿಕ ತಂತ್ರಗಳ ಮೂಲಕ ನಿಮ್ಮ ಆಲೋಚನೆಗಳನ್ನು ನಿಯಂತ್ರಿಸಿ ಮನಸ್ಸನ್ನು ಅಂತರ್ಮುಖಿಯಾಗಿಸಲು ಕಲಿತಲ್ಲಿ, ನೀವು ಕ್ರಮೇಣ ಆಧ್ಯಾತ್ಮಿಕವಾಗಿ ಬೆಳೆಯಬಲ್ಲಿರಿ: ನಿಮ್ಮ ಧ್ಯಾನ ಆಳವಾಗುತ್ತದೆ ಮತ್ತು ನಿಮ್ಮ ಅಗೋಚರ ಅಸ್ತಿತ್ವ, ಅಂದರೆ ನಿಮ್ಮೊಳಗಿನ ದೇವರ ಆತ್ಮಸ್ವರೂಪವು ನಿಮಗೆ ವ್ಯಕ್ತವಾಗುತ್ತದೆ.

ನೀವು ನಾಶಮಾಡಬೇಕೆಂದಿರುವ ಆಲೋಚನೆಗಳ ಜಾಗದಲ್ಲಿ, ರಚನಾತ್ಮಕ ಆಲೋಚನೆಗಳನ್ನು ತರುವ ಮೂಲಕ ಅವುಗಳನ್ನು ದೂರಮಾಡಿ. ಇದೇ ಸ್ವರ್ಗದ ಕೀಲಿಕೈ; ಅದು ನಿಮ್ಮ ಕೈಗಳಲ್ಲೇ ಇದೆ….

ನಮ್ಮನ್ನು ನಾವೇನು ಅಂದುಕೊಂಡಿರುತ್ತೇವೋ ಅದೇ ಆಗಿರುತ್ತೇವೆ….ನಿಮ್ಮ ಪ್ರಜ್ಞೆಯನ್ನು ಮರ್ತ್ಯಭಾವದಿಂದ ದೈವತ್ವಕ್ಕೆ ಬದಲಿಸಿಕೊಳ್ಳಿ.


“ನಾನು ಅನಂತ. ನಾನು ಸರ್ವವ್ಯಾಪಿ, ನಾನು ಕಾಲಾತೀತ; ನಾನು ಶರೀರ, ಚಿಂತನೆ ಮತ್ತು ನುಡಿಗಳಿಗೆ ಮೀರಿದವನು; ಎಲ್ಲಾ ವಸ್ತು ಹಾಗೂ ಮನಸ್ಸಿಗೂ ಮೀರಿದವನು. ನಾನು ಅಪರಿಮಿತ ಆನಂದ.”

ಮನಸ್ಸಿಗೆ ದಿವ್ಯ ಸತ್ಯವನ್ನು ನಿರಂತರವಾಗಿ ಮನದಟ್ಟು ಮಾಡುತ್ತಿರಿ

ಅನಾರೋಗ್ಯ, ವೃದ್ಧಾಪ್ಯ ಮತ್ತು ಸಾವುಗಳಂತಹ ಮಾನವ ಸಹಜ ಇತಿಮಿತಿಗಳ ಯಾವುದೇ ಸುಳಿವುಗಳಿಂದ ಮನಸ್ಸನ್ನು ದೂರವಿಡಿ. ಬದಲಿಗೆ ಮನಸ್ಸಿಗೆ ನಿರಂತರವಾಗಿ ಈ ಸತ್ಯವನ್ನು ಮನದಟ್ಟು ಮಾಡುತ್ತಿರಿ:

“ಅನಂತನಾದ ನಾನು ಈ ಶರೀರವಾಗಿದ್ದೇನೆ. ದಿವ್ಯಚೈತನ್ಯದ ಅಭಿವೃಕ್ತಿಯಾದ ಶರೀರವು ಸದಾ ಪರಿಪೂರ್ಣ, ಸದಾ ಯೌವ್ವನಭರಿತ ಚೇತನ.”

ಅಶಕ್ತತೆ ಮತ್ತು ವಯಸ್ಸಿನ ಯೋಚನೆಗಳಿಂದ ಸೀಮಿತಗೊಳ್ಳದಿರಿ. ನಿಮಗೆ ವಯಸ್ಸಾಗಿದೆ ಎಂದು ನಿಮಗೆ ಯಾರು ಹೇಳಿದರು? ನೀವು ವೃದ್ಧರಲ್ಲ. ಆತ್ಮವಾಗಿರುವ ನೀವು, ಚಿರ ತರುಣರು. ಈ ಆಲೋಚನೆಯನ್ನು ನಿಮ್ಮ ಪ್ರಜ್ಞೆಗೆ ಮನದಟ್ಟು ಮಾಡಿ:

“ನಾನು ಆತ್ಮ, ಚಿರಯೌವನದ ದಿವ್ಯಚೇತನದ ಪ್ರತಿಬಿಂಬ. ನಾನು ಯೌವನ, ಮಹತ್ವಾಕಾಂಕ್ಷೆ ಹಾಗೂ ಸಫಲನಾಗುವ ಶಕ್ತಿಯಿಂದ ತುಡಿಯುತ್ತಿದ್ದೇನೆ.”

Waterfall depicting continuous effort.

ನಿಮ್ಮನ್ನು ನೀವು ವಿಶ್ವಶಕ್ತಿಯೊಂದಿಗೆ ಶೃತಿಗೂಡಿಸಿಕೊಳ್ಳಿ ಮತ್ತು ನೀವು ಒಂದು ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿರಲಿ ಅಥವಾ ವ್ಯವಹಾರ ಪ್ರಪಂಚದ ಜನರೊಡನೆ ಬೆರೆಯುತ್ತಿರಲಿ, ಸದಾ ಈ ರೀತಿ ದೃಢೀಕರಿಸಿ:

“ಎಲ್ಲೆಯಿಲ್ಲದ ಸೃಜನಾತ್ಮಕ ಶಕ್ತಿ ನನ್ನೊಳಗಿದೆ. ಯಾವುದೇ ಸಾಧನೆಯನ್ನು ಮಾಡದೆ ನಾನು ಮೃತ್ಯುವಶವಾಗುವುದಿಲ್ಲ. ನಾನು ದೇವತಾ ಮನುಷ್ಯ, ಒಬ್ಬ ವಿವೇಚನಾಶೀಲ ವ್ಯಕ್ತಿ. ನನ್ನ ಆತ್ಮದ ಕ್ರಿಯಾಶೀಲ ಆಕರವಾದ ಅಮೂರ್ತಚೇತನದ ಶಕ್ತಿಯೇ ನಾನಾಗಿದ್ದೇನೆ. ನಾನು ವ್ಯವಹಾರ ಪ್ರಪಂಚದಲ್ಲಿ, ಯೋಚನಾ ಪ್ರಪಂಚದಲ್ಲಿ ಮತ್ತು ವಿವೇಚನಾ ಪ್ರಪಂಚದಲ್ಲಿ ದಿವ್ಯಜ್ಞಾನವನ್ನು ಹುಟ್ಟುಹಾಕುತ್ತೇನೆ. ನಾನು ಮತ್ತು ನನ್ನ ತಂದೆಯಾದ ಭಗವಂತ ಒಂದೇ. ನನ್ನನ್ನು ಸೃಷ್ಟಿಸಿದ ಸೃಷ್ಟಿಕರ್ತನಾದ ನನ್ನ ತಂದೆಯಂತೆ ನಾನೂ ಕೂಡ ಇಚ್ಛಿಸಿದ ಏನನ್ನಾದರೂ ಸೃಷ್ಟಿಸಬಲ್ಲೆ.”

ವೈಎಸ್ಎಸ್/ಎಸ್‌ಆರ್‌ಎಫ್ ಪಾಠಮಾಲಿಕೆಗಳು ನಿಮಗೆ ವಿಶ್ವ ಚೇತನವನ್ನು ಅಂದರೆ ದೇವರ ವಿಶ್ವಶಕ್ತಿಯ ಸಾಗರವನ್ನು ಹೇಗೆ ಸಂಪರ್ಕಿಸುವುದು ಎಂದು ತಿಳಿಸುತ್ತವೆ. ಆ ಶಕ್ತಿಯನ್ನು ಪಡೆಯುವ ಅತ್ಯುನ್ನತ ವಿಧಾನವೆಂದರೆ ಅದನ್ನು ಆಂತರಿಕ ಮೂಲದಿಂದ ನೇರವಾಗಿ ಪಡೆಯುವುದು, ಅದನ್ನು ಬಿಟ್ಟು ಔಷಧಿಗಳು, ಭಾವೋದ್ವೇಗಗಳು ಇತ್ಯಾದಿ ಕೃತಕ ಉದ್ದೀಪನೆಗಳಿಂದಲ್ಲ. ನಂತರ ನೀವು ಹೇಳಬಹುದು:

“ರಕ್ತಮಾಂಸದ ಕೆಳಗಡೆಯಷ್ಟೆ ಒಂದು ಅದ್ಭುತ ಹರಿವಿದೆ. ನಾನು ಅದನ್ನು ಮರೆತಿದ್ದೆ, ಆದರೀಗ ಆತ್ಮಸಾಕ್ಷಾತ್ಕಾರದ ಪಿಕಾಸಿಯಿಂದ ಅಗೆದು ಆ ಜೀವಶಕ್ತಿಯನ್ನು ಮತ್ತೆ ಕಂಡುಕೊಂಡಿದ್ದೇನೆ..ನಾನು ಈ ಮಾಂಸಲ ಶರೀರವಲ್ಲ. ನಾನು ಈ ಶರೀರವನ್ನು ವ್ಯಾಪಿಸಿರುವ ದಿವ್ಯ ವಿದ್ಯುಚ್ಛಕ್ತಿಯ ವಿದ್ಯುದಾವೇಶವಾಗಿದ್ದೇನೆ.”

ಕಷ್ಟಗಳಿಂದ ನಿಮ್ಮ ಆತ್ಮಕ್ಕೆ ಹಾನಿಯಾಗಲಾರದು

ನೀವು ಅಮರರೆಂದು ಅರಿಯಿರಿ — ಮರ್ತ್ಯ ಪಾಠಗಳಿಂದ ತತ್ತರಿಸಿ ಹೋಗಲಲ್ಲ, ಬದಲಿಗೆ ನಿಮ್ಮ ಅಮರತ್ವದ ಬಗ್ಗೆ ಅರಿತು ಅಭಿವ್ಯಕ್ತಿಸಿ ಮುಗುಳ್ನಗಲು.

“ನಾನು ಅಮರ, ನನ್ನ ಅಮರತ್ವದ ಬಗ್ಗೆ ಕಲಿತು ಪುನಃ ಅದನ್ನು ಹೊಂದುವುದಕ್ಕಾಗಿ ನನ್ನನ್ನು ಮರ್ತ್ಯ ಶಾಲೆಗೆ ಕಳುಹಿಸಲಾಗಿದೆ. ಭೂಮಿಯಲ್ಲಿನ ಶುದ್ಧಿಗೊಳಿಸುವ ಎಲ್ಲ ಅಗ್ನಿಗಳಿಂದ ಸವಾಲಿಗೀಡಾದರೂ, ನಾನು ಆತ್ಮ, ನನ್ನನ್ನು ನಾಶಪಡಿಸಲಾಗದು. ಅಗ್ನಿ ನನ್ನನ್ನು ಸುಡಲಾರದು; ನೀರು ನನ್ನನ್ನು ತೇವಗೊಳಿಸಲಾರದು; ಮಂದ ಮಾರುತಗಳು ನನ್ನನ್ನು ಬಾಡಿಸಲಾರವು; ಅಣುಗಳು ನನ್ನನ್ನು ಧ್ವಂಸಮಾಡಲಾರವು; ಅಮರತ್ವದ ಪಾಠಗಳ ಕನಸು ಕಾಣುತ್ತಿರುವ ಅಮರ ನಾನು — ತುಳಿಯಲ್ಪಡಲಲ್ಲ, ಹೊರತು ಮನರಂಜಿಸಲ್ಪಡಲು.” ಎಂದು ಹೇಳಿ.

Tide on ocean representing difficulty in life.

ಬಹಳಷ್ಟು ಜನ್ಮಗಳಲ್ಲಿ ನೀವು ಬಹಳಷ್ಟು ಪಾತ್ರಗಳನ್ನು ಅಭಿನಯಿಸಿದ್ದೀರಿ. ಆದರೆ, ಅವೆಲ್ಲವನ್ನೂ ನಿಮಗೆ ಕೊಟ್ಟಿದ್ದು ನಿಮ್ಮನ್ನು ರಂಜಿಸುವುದಕ್ಕಾಗಿ — ಭಯಪಡಿಸುವುದಕ್ಕಲ್ಲ. ನಿಮ್ಮ ಅಮರ ಆತ್ಮವನ್ನು ಮುಟ್ಟಲು ಸಾಧ್ಯವಿಲ್ಲ. ಜೀವನದ ಚಲನಚಿತ್ರದಲ್ಲಿ ನೀವು ಅಳಬಹುದು, ನಗಬಹುದು, ಹಲವಾರು ಪಾತ್ರಗಳಲ್ಲಿ ಅಭಿನಯಿಸಬಹುದು; ಆದರೆ ನೀವು ಆಂತರಿಕವಾಗಿ, “ನಾನು ಆತ್ಮ” ಎಂದು ಸದಾ ಹೇಳಿಕೊಳ್ಳುತ್ತಿರಬೇಕು. ಆ ಜ್ಞಾನದ ಅರಿವಿನಿಂದ ಅದ್ಭುತ ಸಾಂತ್ವನ ಲಭಿಸುತ್ತದೆ.

“ಹುಟ್ಟು ಸಾವುಗಳ ನಾಟಕವನ್ನು ಅಭಿನಯಿಸುವುದಕ್ಕಾಗಿ ಇಲ್ಲಿಗೆ ಕಳುಹಿಸಲ್ಪಟ್ಟ ಮಧುರ ಅಮರತ್ವದ ಅನುಗ್ರಹಿತ ಮಗು ನಾನು, ಆದರೆ ಸಾವಿಲ್ಲದ ನನ್ನ ಆತ್ಮವನ್ನು ಸದಾ ನೆನಪಿಸಿಕೊಳ್ಳುತ್ತಿರುತ್ತೇನೆ.

“ಚೈತನ್ಯದ ಮಹಾಸಾಗರವು ಸಣ್ಣ ನೀರ್ಗುಳ್ಳೆಯಾದ ನನ್ನ ಆತ್ಮವಾಗಿ ಪರಿವರ್ತಿತವಾಗಿದೆ. ವಿಶ್ವಪ್ರಜ್ಞೆಯ ಮಹಾಸಾಗರದೊಡನೆ ಒಂದಾಗಿರುವ ನಾನು ಈ ಜೀವನದ ನೀರ್ಗುಳ್ಳೆ. ನಾನು ಸಾಯಲು ಸಾಧ್ಯವಿಲ್ಲ. ಜನನದಲ್ಲಿ ತೇಲುತ್ತಿರಲಿ ಅಥವಾ ಮರಣದಲ್ಲಿ ಮರೆಯಾಗುತ್ತಿರಲಿ, ಚೈತನ್ಯದ ಅಮರತ್ವದ ವಕ್ಷಸ್ಥಳದಲ್ಲಿ ಸಂರಕ್ಷಿಸಲ್ಪಟ್ಟಿರುವ ನಾನು ಅವಿನಾಶೀ ಪ್ರಜ್ಞೆ.”

ನೀವು ದೇವರ ಮಗು, ಯಾವುದಕ್ಕೂ ಭಯಪಡಬೇಡಿ

ಧ್ಯಾನದಲ್ಲಿ ನೀವು ಕಣ್ಣುಗಳನ್ನು ಮುಚ್ಚಿ ಕುಳಿತಾಗ ನಿಮ್ಮ ಪ್ರಜ್ಞೆಯ ವ್ಯಾಪಕತೆಯನ್ನು ಮನಗಾಣುವಿರಿ — ನೀವು ಅನಂತತೆಯ ಕೇಂದ್ರದಲ್ಲಿದ್ದೀರೆಂದು ಅರಿಯುವಿರಿ. ಅಲ್ಲಿ ಮನಸ್ಸನ್ನು ಕೇಂದ್ರೀಕರಿಸಿ; ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸ್ವಲ್ಪ ಸಮಯ ತೆಗೆದುಕೊಂಡು ಕಣ್ಣುಗಳನ್ನು ಮುಚ್ಚಿ ಹೇಳಿಕೊಳ್ಳಿ:

“ನಾನು ಅನಂತ; ನಾನು ಅವನ ಮಗು. ಅಲೆಯು ಸಾಗರದ ಉಬ್ಬಾದರೆ, ನನ್ನ ಪ್ರಜ್ಞೆಯು ಅದ್ಭುತ ಬ್ರಹ್ಮಾಂಡ ಶಕ್ತಿಯ ಉಬ್ಬು. ನನಗೆ ಯಾವುದರ ಬಗ್ಗೆಯೂ ಹೆದರಿಕೆಯಿಲ್ಲ. ನಾನು ಆತ್ಮ.”

ದೇವರ ಅಂತರ್ನಿಹಿತ ಸಾನ್ನಿಧ್ಯದ ಪ್ರಜ್ಞೆಯನ್ನು ಸದಾ ಹಿಡಿದಿಟ್ಟುಕೊಳ್ಳಿ. ಸಮಚಿತ್ತದಿಂದಿರಿ ಹಾಗೂ ಹೀಗೆ ಹೇಳಿಕೊಳ್ಳಿ:

“ನನಗೆ ಭಯವಿಲ್ಲ; ನಾನು ದೇವರ ಅಂಶದಿಂದ ಸೃಷ್ಟಿಸಲ್ಪಟ್ಟಿದ್ದೇನೆ. ನಾನು ಚೇತನದ ಅಗ್ನಿಯ ಒಂದು ಕಿಡಿ. ನಾನು ಬ್ರಹ್ಮಾಂಡ ಜ್ವಾಲೆಯ ಒಂದು ಅಣು. ನಾನು ದೇವರ ಅಗಾಧ ವಿಶ್ವವ್ಯಾಪಿ ಶರೀರದ ಒಂದು ಜೀವಕೋಶ. ‘ನಾನು ಮತ್ತು ನನ್ನ ತಂದೆ ಒಂದೇ.ʼ”

Melting of Lava represents merging of soul in God.ಪ್ರಜ್ಞೆಯಲ್ಲಿ ನಿರ್ಭೀತರಾಗಿರಿ:

“ಬದುಕಿನಲ್ಲಿ ಮತ್ತು ಸಾವಿನಲ್ಲಿ ನಾನು ಎಂದೆಂದಿಗೂ ದೇವರೊಡನೆ ಜೀವಿಸುತ್ತಿರುತ್ತೇನೆ.”

ನೀವು ತಂತ್ರಗಳನ್ನು ಅಭ್ಯಾಸ ಮಾಡಿದಾಗ ದಿನದಿಂದ ದಿನಕ್ಕೆ ಈ ಪ್ರಜ್ಞೆಯು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ. ಧ್ಯಾನದಲ್ಲಿ ನೀವು ಆಳವಾದ ಆಂತರಿಕ ಪ್ರಶಾಂತತೆಯನ್ನು ಅನುಭವಿಸಿದಾಗ, ಈ ಶರೀರದ ಬಂಧನದಿಂದ ಮುಕ್ತರಾಗುತ್ತೀರಿ. ಆಗ ನಿಮಗೆ ಸಾವು ಎಲ್ಲಿಯದು? ಭಯವೆಲ್ಲಿದೆ? ಯಾವುದಕ್ಕೂ ನಿಮ್ಮನ್ನು ಭಯಪಡಿಸುವ ಶಕ್ತಿಯಿರುವುದಿಲ್ಲ. ಅದೇ ನೀವು ಅರಸುತ್ತಿರುವ ಸ್ಥಿತಿ. ಓಂ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಗಾಢವಾದ ಧ್ಯಾನದಲ್ಲಿ ಓಂ ನೊಂದಿಗೆ ಒಂದಾಗಿ; ಆಗ ವಿಶ್ವ ಕಂಪನದಲ್ಲಿ ದೇವರ ವಿಶ್ವವ್ಯಾಪಕತೆಯ ಅರಿವಿನ ಮೂಲಕ ನೀವು “ತಂದೆಯ ಬಳಿ ಬರುತ್ತೀರಿ” — ಆ ಅನಂತ ಅಲೌಕಿಕ ನಿರುಪಾಧಿಕ ಆನಂದ ಪ್ರಜ್ಞೆಯ ಬಳಿ. ಆಗ ನೀವು ಹೀಗೆ ಹೇಳುತ್ತೀರಿ:

“ನಾನು ಮತ್ತು ನನ್ನ ಪರಮಾನಂದ ದೇವರು ಒಂದೇ. ಈ ಬ್ರಹ್ಮಾಂಡದಲ್ಲಿ ಎಲ್ಲವನ್ನೂ ನಾನು ಹೊಂದಿದ್ದೇನೆ. ಸಾವು, ಅನಾರೋಗ್ಯ, ಪ್ರಳಯ, ಅಗ್ನಿಗಳು ಯಾವುದೂ ಆ ಪರಮಾನಂದವನ್ನು ನನ್ನಿಂದ ಕಸಿಯಲಾರದು!”

ನೀವು ಆತ್ಮ: ನಿಮ್ಮ ಆಧ್ಯಾತ್ಮಿಕ ಗುಣಗಳನ್ನು ದೃಢೀಕರಿಸಿ

Lotus depicting non-attachment quality of Spirit.

ನಿಮ್ಮ ಜೀವನದ ಎಲ್ಲ ಸುಂದರ ಮತ್ತು ಸಕಾರಾತ್ಮಕ ಗುಣಗಳನ್ನು ನೆನಪಿಸಿಕೊಳ್ಳಲು ಮತ್ತು ಅವುಗಳ ಮೇಲೆ ಏಕಾಗ್ರಗೊಳ್ಳಲು ಪ್ರಯತ್ನಿಸಿ, ಆದರೆ ನಿಮ್ಮ ನ್ಯೂನತೆಗಳನ್ನು ದೃಢೀಕರಿಸಬೇಡಿ.

ಔನ್ನತ್ಯಕ್ಕೇರಬಯಸುವ ಯೋಗಿಯು ತಾನು ಕೋಪೋದ್ರಿಕ್ತನಾದಾಗ “ಅದು ನಾನಲ್ಲ!” ಎನ್ನುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಅವನ ನಿರುದ್ವಿಗ್ನ ಮನಸ್ಸು ಕಾಮಾತುರತೆ ಅಥವಾ ಲೋಭದಿಂದ ಕಂಗೆಟ್ಟಾಗ “ಅದು ನಾನಲ್ಲ!” ಎಂದು ಅವನು ತನಗೆ ತಾನು ಹೇಳಿಕೊಳ್ಳಬೇಕು. ಅವನ ನೈಜ ಪ್ರಕೃತಿಯನ್ನು ದ್ವೇಷವು ಕೆಟ್ಟ ಭಾವನೆಯ ಮುಖವಾಡದಿಂದ ಮರೆಮಾಚಲೆತ್ನಿಸಿದಾಗ ಅವನು “ಅದು ನಾನಲ್ಲ!” ಎಂದು ಅದರಿಂದ ಬಲವಂತವಾಗಿ ಬೇರ್ಪಡಿಸಿಕೊಳ್ಳಬೇಕು. ಹೀಗೆ ಎಲ್ಲ ಅನಪೇಕ್ಷಿತ ಭೇಟಿಗಾರರು ಒಳಗೆ ಬಂದು ಬೀಡು ಬಿಡಲು ಪ್ರಯತ್ನಿಸಿದಾಗ ಅವನು ತನ್ನ ಪ್ರಜ್ಞೆಯ ಬಾಗಿಲುಗಳನ್ನು ಮುಚ್ಚಲು ಕಲಿಯುತ್ತಾನೆ. ಹಾಗೂ ಆ ಭಕ್ತನನ್ನು ಇತರರು ಉಪಯೋಗಿಸಿಕೊಂಡಾಗ ಅಥವಾ ದುರುಪಯೋಗ ಪಡಿಸಿಕೊಂಡಾಗಲೂ ಅವನು ಅಂತರಂಗದಲ್ಲಿ ಕ್ಷಮೆ ಮತ್ತು ಪ್ರೇಮದ ಪವಿತ್ರ ಚೇತನದ ಪ್ರೇರಣೆಯನ್ನು ಅನುಭವಿಸುತ್ತಾನೆ, ಆಗ ಅವನು ದೃಢನಿಶ್ಚಯದಿಂದ, “ಅದೇ ನಾನು! ಅದೇ ನನ್ನ ನಿಜ ಸ್ವಭಾವ!” ಎಂದು ದೃಢೀಕರಿಸಬಹುದು. ಧ್ಯಾನಯೋಗವು ನಿರ್ದಿಷ್ಟ ಆಧ್ಯಾತ್ಮಿಕ ಮತ್ತು ಮನೋದೈಹಿಕ ವಿಧಿವಿಧಾನಗಳಿಂದ ಒಬ್ಬನ ನೈಜ ಪ್ರಕೃತಿಯ ಅರಿವನ್ನು ಬೆಳೆಸಿಕೊಳ್ಳುವ ಹಾಗೂ ಭದ್ರಪಡಿಸುವ ಪ್ರಕ್ರಿಯೆ, ಅದರಿಂದ ಸಂಕುಚಿತ ಅಹಂ, ಅಂದರೆ ದೋಷಪೂರಿತ ಆನುವಂಶಿಕ ಮಾನವ ಪ್ರಜ್ಞೆಯ ಸ್ಥಾನದಲ್ಲಿ ಆತ್ಮಪ್ರಜ್ಞೆಯು ಪ್ರತಿಷ್ಠಾಪಿಸಲ್ಪಡುತ್ತದೆ.

ಪ್ರೀತಿಪಾತ್ರರೇ, ಯಾರೂ ನಿಮ್ಮನ್ನು ಪಾಪಿಯೆಂದು ಕರೆಯದಿರಲಿ. ನೀವು ದೇವರ ಮಕ್ಕಳು, ಏಕೆಂದರೆ ಅವನು ನಿಮ್ಮನ್ನು ತನ್ನ ಪ್ರತಿರೂಪದಲ್ಲಿ ಸೃಷ್ಟಿಸಿದ್ದಾನೆ….ನಿಮಗೆ ನೀವೇ ಹೇಳಿಕೊಳ್ಳಿ:

“ನನ್ನ ಪಾಪಗಳು ಸಾಗರದಷ್ಟು ಆಳವಾಗಿರಲಿ ಅಥವಾ ತಾರೆಗಳಷ್ಟು ಎತ್ತರದಲ್ಲಿರಲಿ, ನಾನು ಇನ್ನೂ ಅಜೇಯ, ಏಕೆಂದರೆ, ನಾನೇ ಅಮೂರ್ತ ಚೇತನ.”

ನೀವೇ ಬೆಳಕು, ನೀವೇ ಆನಂದ

ಒಂದು ಗುಹೆಯಲ್ಲಿ ಕತ್ತಲು ಸಾವಿರಾರು ವರ್ಷ ವಿರಾಜಿಸಿರಬಹುದು. ಆದರೆ, ಬೆಳಕನ್ನು ಒಳಗೆ ತನ್ನಿ, ಆಗ ಕತ್ತಲು ಯಾವತ್ತೂ ಇರಲೇ ಇಲ್ಲವೇನೋ ಎಂಬಂತೆ ಕಣ್ಮರೆಯಾಗುತ್ತದೆ. ಅದೇ ರೀತಿ, ನಿಮ್ಮ ನ್ಯೂನತೆಗಳು ಏನೇ ಇರಲಿ, ನೀವು ಸದ್ಗುಣದ ಬೆಳಕನ್ನು ತಂದಾಗ ಇನ್ನು ಮುಂದೆ ಅವು ನಿಮ್ಮವಾಗಿರುವುದಿಲ್ಲ. ಆತ್ಮದ ಬೆಳಕು ಎಷ್ಟು ಅದ್ಭುತವಾದದ್ದೆಂದರೆ, ಜನ್ಮಾಂತರಗಳ ಪಾಪಗಳು ಅದನ್ನು ನಾಶಪಡಿಸಲಾಗುವುದಿಲ್ಲ. ಆದರೆ, ಸ್ವಯಂಕೃತ ಪಾಪದ ತಾತ್ಕಾಲಿಕ ಕತ್ತಲು ಆತ್ಮವನ್ನು ಅತೀವ ದುಃಖಕ್ಕೀಡು ಮಾಡುತ್ತದೆ, ಏಕೆಂದರೆ ನೀವು ಆ ಪಾಪಕೂಪದಲ್ಲಿ ನರಳುತ್ತಿರುತ್ತೀರಿ. ಆಳವಾದ ಧ್ಯಾನದಲ್ಲಿ ನಿಮ್ಮ ಆಧ್ಯಾತ್ಮಿಕ ಚಕ್ಷುವನ್ನು ತೆರೆದು, ನಿಮ್ಮ ಪ್ರಜ್ಞೆಯನ್ನು ಅದರ ಸರ್ವದೃಗ್ಗೋಚರ ದಿವ್ಯ ಬೆಳಕಿನಿಂದ ತುಂಬಿಕೊಂಡು ಪಾಪವನ್ನು ಹೊರದೂಡಲು ನಿಮಗೆ ಸಾಧ್ಯವಿದೆ.

Light on earth represents soul is light.ಬೇರಾರೂ ನಿಮ್ಮನ್ನು ರಕ್ಷಿಸಲಾರರು. “ನಾನು ಬೆಳಕೇ ಆಗಿದ್ದೇನೆ. ಕತ್ತಲು ಎಂದಿಗೂ ನನಗಾಗಿ ಇರಲಿಲ್ಲ; ಅದು ನನ್ನ ಆತ್ಮದ ಬೆಳಕನ್ನು ಎಂದಿಗೂ ಮರೆಮಾಡಲಾರದು.” ಎನ್ನುವುದನ್ನು ಅರಿತಾಕ್ಷಣ ನೀವೇ ನಿಮ್ಮ ಸಂರಕ್ಷಕರು.

ಸದ್ಯದ ಅಸಮರ್ಥತೆಗಳ ದುಃಸ್ವಪ್ನವನ್ನು ಮರೆತುಬಿಡಿ. ರಾತ್ರಿ ನಿದ್ರಿಸುವ ಮುನ್ನ ಹಾಗೂ ಬೆಳಿಗ್ಗೆ ಎದ್ದಾಗ ಈ ರೀತಿ ದೃಢೀಕರಿಸಿ:

“ಏಸು ಮತ್ತು ಇತರ ಮಹಾನ್ ಗುರುಗಳಂತೆ ನಾನು ದೇವರ ಮಗ. ನಾನು ಅವನಿಂದ ಅಜ್ಞಾನದ ಪರದೆಯ ಹಿಂದೆ ಬಚ್ಚಿಟ್ಟುಕೊಳ್ಳುವುದಿಲ್ಲ. ಹೆಚ್ಚುತ್ತಲೇ ಇರುವ ನನ್ನ ಆಧ್ಯಾತ್ಮಿಕ ಪಾರದರ್ಶಕತೆಯ ಮೂಲಕ ಅವನ ಸರ್ವಪರಿಪೂರ್ಣ ಬೆಳಕನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ಪರಿಜ್ಞಾನದಿಂದ ಹೊಳೆಯುತ್ತೇನೆ. ಅವನ ಬೆಳಕನ್ನು ಸಂಪೂರ್ಣವಾಗಿ ಪಡೆದ ನಾನು ದೇವರ ಮಗನೆಂದು ಅರಿತುಕೊಳ್ಳುತ್ತೇನೆ, ಅವನ ಪ್ರತಿರೂಪದಲ್ಲಿ ಮಾಡಲ್ಪಟ್ಟ ನಾನು ಎಂದೆಂದಿಗೂ ಅವನ ಮಗನೇ ಆಗಿದ್ದೆ.”

“ನಾನು ಸದಾ ದೇವರ ಮಗು. ನನ್ನ ಎಲ್ಲ ಪರೀಕ್ಷೆಗಳಿಗಿಂತ ನನ್ನ ಶಕ್ತಿ ದೊಡ್ಡದು. ಈ ಹಿಂದೆ ಮಾಡಿದ ನನ್ನ ಎಲ್ಲ ತಪ್ಪುಗಳನ್ನೂ ಈಗ ನಾನು ಒಳ್ಳೆಯ ಕ್ರಿಯೆಗಳಿಂದ ಮತ್ತು ಧ್ಯಾನದಿಂದ ಸರಿಪಡಿಸಬಲ್ಲೆ. ನಾನು ಅವುಗಳನ್ನು ನಾಶ ಮಾಡುತ್ತೇನೆ. ನಾನು ಎಂದೆಂದಿಗೂ ಅಮರ.”

ನಿಮ್ಮ ಎಲ್ಲ ಐಹಿಕ ಆಲೋಚನೆಗಳು ಮತ್ತು ಆಸೆಗಳನ್ನು ಕೊನೆ ಗಾಣಿಸಲು ನಿಮಗೆ ಸಾಧ್ಯವಾಗುವವರೆಗೂ ಪ್ರತಿದಿನ ರಾತ್ರಿ ಧ್ಯಾನಿಸಿ….ನಿಮ್ಮ ಎಲ್ಲ ಅವಿಶ್ರಾಂತ ಆಲೋಚನೆಗಳು ಮತ್ತು ಭಾವನೆಗಳಿಂದ ಪಕ್ಕಕ್ಕೆ ಸರಿದು ನಿಮ್ಮ ಆತ್ಮಾಲಯದಲ್ಲಿ ಕುಳಿತುಕೊಳ್ಳಿ. ಅಲ್ಲಿ ದೇವರ ಮಹದಾನಂದವು ವಿಸ್ತಾರಗೊಂಡು ಇಡೀ ಪ್ರಪಂಚವನ್ನು ಆವರಿಸಿಕೊಳ್ಳುತ್ತದೆ. ಆಗ ಅದು ಬಿಟ್ಟು ಬೇರೇನೂ ಇಲ್ಲ ಎಂಬುದನ್ನು ನೀವು ಮನಗಾಣುವಿರಿ. ಆಗ ನೀವು ಹೇಳುತ್ತೀರಿ:

“ನಾನು ದೇವರ ಶಾಶ್ವತ ಬೆಳಕಿನೊಂದಿಗೆ ಮತ್ತು ಏಸುವಿನ ಶಾಶ್ವತ ಆನಂದದೊಂದಿಗೆ ಒಂದಾಗಿದ್ದೇನೆ. ಸೃಷ್ಟಿಯ ಎಲ್ಲ ಅಲೆಗಳೂ ನನ್ನೊಳಗೆ ಉರುಳಾಡುತ್ತಿವೆ. ನಾನು ನನ್ನ ಶರೀರವೆಂಬ ಅಲೆಯನ್ನು ದಿವ್ಯ ಚೇತನದ ಸಾಗರದಲ್ಲಿ ಕರಗಿಸಿಬಿಟ್ಟಿದ್ದೇನೆ. ನಾನು ದಿವ್ಯಚೇತನದ ಸಾಗರ. ಇನ್ನೆಂದಿಗೂ ನಾನು ಈ ಶರೀರವಲ್ಲ. ನನ್ನ ಆತ್ಮವು ಬಂಡೆಗಳಲ್ಲಿ ನಿದ್ರಿಸುತ್ತಿದೆ. ನಾನು ಹೂವುಗಳಲ್ಲಿ ಕನಸು ಕಾಣುತ್ತಿದ್ದೇನೆ, ಮತ್ತು ಹಕ್ಕಿಗಳಲ್ಲಿ ಹಾಡುತ್ತಿದ್ದೇನೆ. ನಾನು ಮಾನವನಲ್ಲಿ ಯೋಚಿಸುತ್ತಿದ್ದೇನೆ ಮತ್ತು ಅತಿಮಾನವನಲ್ಲಿ ನಾನಿದ್ದೇನೆಂಬ ಅರಿವು ನನಗಿದೆ.”

ಈ ಸ್ಥಿತಿಯಲ್ಲಿ ಅಗ್ನಿಯು ನಿಮ್ಮನ್ನು ದಹಿಸಲು ಸಾಧ್ಯವಿಲ್ಲ; ಭೂಮಿ ಮತ್ತು ಹುಲ್ಲು ಮತ್ತು ಆಕಾಶ ಎಲ್ಲವೂ ನಿಮ್ಮ ರಕ್ತಸಂಬಂಧಿಗಳೇ ಎನ್ನುವುದನ್ನು ನೀವು ಅರಿಯುತ್ತೀರಿ. ನಂತರ ನೀವು ಸೃಷ್ಟಿಯ ಪ್ರಕ್ಷುಬ್ಧ ಅಲೆಗಳ ಬಗ್ಗೆ ಎಂದಿಗೂ ಭಯಪಡದೆ ಒಬ್ಬ ಚೈತನ್ಯ ಸ್ವರೂಪಿಯಂತೆ ಭೂಮಿಯ ಮೇಲೆ ನಡೆದಾಡುತ್ತೀರಿ.

ನೀವೇ ಪ್ರೇಮ

“ನನ್ನ ದೇವರೇ ಪ್ರೇಮ, ನಾನು ಅವನ ಪ್ರತಿರೂಪದಲ್ಲಿ ಮಾಡಲ್ಪಟ್ಟಿದ್ದೇನೆ. ನಾನು ಪ್ರೇಮದ ಗೋಳ, ಅದರಲ್ಲಿ ಎಲ್ಲ ಗ್ರಹಗಳು, ಎಲ್ಲ ನಕ್ಷತ್ರಗಳು, ಎಲ್ಲ ಜೀವಿಗಳು, ಎಲ್ಲ ಸೃಷ್ಟಿಯೂ ಮಿನುಗುತ್ತಿವೆ. ಸಂಪೂರ್ಣ ಬ್ರಹ್ಮಾಂಡವನ್ನು ವ್ಯಾಪಿಸಿರುವ ಪ್ರೇಮವೇ ನಾನು.”

ನೀವು ದಿವ್ಯಪ್ರೇಮವನ್ನು ಅನುಭವಿಸಿದಾಗ, ಹೂವು ಮತ್ತು ಮೃಗಗಳ ನಡುವೆ ಮತ್ತು ಒಬ್ಬ ಮಾನವ ಜೀವಿ ಮತ್ತು ಇನ್ನೊಬ್ಬ ಮಾನವ ಜೀವಿಯ ನಡುವೆ ನೀವು ಯಾವುದೇ ವ್ಯತ್ಯಾಸವನ್ನು ಕಾಣುವುದಿಲ್ಲ. ನೀವು ಎಲ್ಲ ಪ್ರಕೃತಿಯೊಂದಿಗೆ ಸಂಭಾಷಿಸುವಿರಿ, ಮತ್ತು ಇಡೀ ಮನುಕುಲವನ್ನು ಸರಿಸಮಾನವಾಗಿ ಪ್ರೀತಿಸುವಿರಿ. ಅವನಲ್ಲಿ ಎಲ್ಲರೂ ನಿಮಗೆ ಸೋದರ ಸೋದರಿಯರು ಅಂದರೆ ದೇವರ ಮಕ್ಕಳು, ಒಂದೇ ಜನಾಂಗ ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು — ನಿಮಗೆ ನೀವು ಹೇಳಿಕೊಳ್ಳುವಿರಿ:

Children depicting human beings are children of God.“ದೇವರು ನನ್ನ ತಂದೆ. ನಾನು ಅವನ ಬೃಹತ್ ಮಾನವ ಕುಟುಂಬದ ಒಂದು ಭಾಗ. ನಾನು ಅವರನ್ನು ಪ್ರೇಮಿಸುತ್ತೇನೆ ಏಕೆಂದರೆ, ಅವರೆಲ್ಲ ನನ್ನವರು. ನನ್ನ ಸಹೋದರನಾದ ಸೂರ್ಯ, ಸಹೋದರಿಯಾದ ಚಂದ್ರ ಮತ್ತು ನನ್ನ ತಂದೆಯು ಸೃಷ್ಟಿಸಿದ ಎಲ್ಲ ಜೀವಿಗಳು ಮತ್ತು ಯಾರಲ್ಲಿ ಅವನ ಚೈತನ್ಯ ಪ್ರವಹಿಸುತ್ತಿದೆಯೋ ಅವರೆಲ್ಲರನ್ನೂ ನಾನು ಪ್ರೇಮಿಸುತ್ತೇನೆ.”

“ಭೂಮಿಯಲ್ಲಿ ಎಲ್ಲರ ತಾಯಿತಂದೆಗಳಾದ ಆಡಂ ಮತ್ತು ಈವ್‌ರಿಗೆ ಜನಿಸಿದ ಮತ್ತು ಚೈತನ್ಯದಲ್ಲಿ ದೇವರಿಗೆ ಜನಿಸಿದ ಆಲಿವ್, ಬಿಳಿ, ಕಪ್ಪು, ಹಳದಿ ಮತ್ತು ಕೆಂಪು ವರ್ಣದ ಎಲ್ಲ ಜನಾಂಗೀಯರನ್ನೂ ನಾನು ನನ್ನ ಹೃದಯದಲ್ಲಿರುವ ಅವರ ಮನೆಗೆ, ಸಹೋದರರಂತೆ ನನ್ನೊಂದಿಗೆ ವಾಸಿಸಲು ಆಹ್ವಾನಿಸುತ್ತೇನೆ.”

“ಭೂಮಿ, ನೀರು, ಅಗ್ನಿ, ವಾಯು, ಆಕಾಶಗಳನ್ನು ನನ್ನ ರಕ್ತಸಂಬಂಧಿಗಳೆಂದು ಆಲಂಗಿಸುತ್ತೇನೆ — ಜೀವಿಸುತ್ತಿರುವ ಪ್ರತಿಯೊಂದು ಸ್ವರೂಪದಲ್ಲಿ ಇರುವ ನನ್ನ ಧಮನಿಗಳಲ್ಲಿ ಹರಿದಾಡುತ್ತಿರುವ ಒಂದು ಸಾಮಾನ್ಯ ಪ್ರಾಣ. ಎಲ್ಲ ಪ್ರಾಣಿಗಳನ್ನೂ, ಗಿಡಗಳನ್ನೂ, ಅಕ್ಕರೆಯ ಅಣುಗಳನ್ನೂ ಮತ್ತು ಶಕ್ತಿಗಳನ್ನೂ ನನ್ನ ಜೀವ ಮಂದಿರದಲ್ಲಿ ಬಿಗಿದಪ್ಪಿಕೊಳ್ಳುತ್ತೇನೆ; ಏಕೆಂದರೆ ನಾನೇ ಪ್ರೇಮ, ನಾನೇ ಪ್ರಾಣ.”

“ನೀನು ಅದೇ”

ಜ್ಞಾನವೆಂದರೆ, ಆತ್ಮಕ್ಕೆ “ಅಹಂ ಬ್ರಹ್ಮಾಸ್ಮಿ (ನಾನೇ ಬ್ರಹ್ಮ),” ಅಥವಾ “ತತ್ ತ್ವಂ ಅಸಿ (ನೀನು ಅದೇ),” ಎಂಬ ಅರಿವುಂಟಾಗುವುದು. ಹಾಗೂ ಒಬ್ಬರು ಧ್ಯಾನಾಸನದಲ್ಲಿ ನೇರವಾಗಿ ಕುಳಿತು ಪ್ರಾಣಶಕ್ತಿಯನ್ನು ಕೂಟಸ್ಥದತ್ತ (ಹುಬ್ಬುಗಳ ನಡುವೆ) ನಿರ್ದೇಶಿಸುವುದೇ ನಿಜವಾದ ತಪಸ್ಸು, ಅಂತರಂಗದ ದಿವ್ಯಶಕ್ತಿಯನ್ನು ಸಂಪೂರ್ಣವಾಗಿ ಅರಿಯುವ ಆಧ್ಯಾತ್ಮಿಕ ಸಂಯಮ ಅಥವಾ ಅಭ್ಯಾಸ.

ಈ ಭೌತಿಕ ಪ್ರಜ್ಞೆಯಿಂದಾಚೆಗೆ ಹೋದಾಗ, ನೀವು ಈ ಶರೀರ ಅಥವಾ ಮನಸ್ಸಲ್ಲ ಎಂಬ ಅರಿವಿದ್ದರೂ ಹಿಂದೆಂದಿಗಿಂತಲೂ ಹೆಚ್ಚು ಅಸ್ತಿತ್ವದಲ್ಲಿರುವಿರಿ ಎಂದು ಅರಿಯುವಿರಿ. ಆ ದಿವ್ಯ ಪ್ರಜ್ಞೆಯೇ ನೀವು. ವಿಶ್ವದ ಪ್ರತಿಯೊಂದೂ ಯಾವುದರಲ್ಲಿ ನೆಲೆಗೊಂಡಿದೆಯೋ “ಅದು” ನೀವಾಗುವಿರಿ.

ನಿಮ್ಮ ಆತ್ಮವನ್ನು ಪರಮಾತ್ಮನಿಂದ ಬೇರ್ಪಡಿಸುವ ಮಿತಿಗಳ ಚೌಕಟ್ಟುಗಳನ್ನು ಧ್ವಂಸ ಮಾಡಿ.

“ನಾನು ಸಾಗರವೇ? ಅದು ಬಹಳ ಸಣ್ಣದು,
ಆಕಾಶದ ನೀಲ ದಳಗಳ ಮೇಲಿನ ಒಂದು ಸುಂದರ ಹಿಮಮಣಿ.
ನಾನು ಆಕಾಶವೇ? ಅದು ಬಹಳ ಸಣ್ಣದು, ಅನಂತತೆಯ ಒಡಲಿನ ಒಂದು ಸರೋವರ.
ನಾನು ಅನಂತತೆಯೇ? ಅದು ಬಹಳ ಸಣ್ಣದು, ಹೆಸರಿನಿಂದ ಬಂಧಿಸಲ್ಪಟ್ಟಿದೆ.
ಹೆಸರಿಲ್ಲದ ವಿಸ್ತಾರ ಪ್ರದೇಶದಲ್ಲಿ ನಾನು ವಾಸಿಸಲು ಇಚ್ಛಿಸುತ್ತೇನೆ,
ಕನಸುಗಳ ನಾಮರೂಪಗಳ, ಕಲ್ಪನೆಗಳ ಮಿತಿಯಿಂದಾಚೆಗೆ.
ನಾನು ಯಾವಾಗಲೂ ನಾನೇ —
ಸದಾ ಇರುವ ಗತದಲ್ಲಿ
ಸದಾ ಇರುವ ಭವಿಷ್ಯದಲ್ಲಿ
ಸದಾ ಇರುವ ವರ್ತಮಾನದಲ್ಲಿ.”

Galaxy depicting vastness of the kingdom of God.

ಹೆಚ್ಚಿನ ಅಧ್ಯಯನಕ್ಕಾಗಿ:

ಇದನ್ನು ಹಂಚಿಕೊಳ್ಳಿ