ಚಕ್ರಗಳು. ಯೋಗ ವಿಜ್ಞಾನದ ಪ್ರಕಾರ, ಬೆನ್ನುಹುರಿ ಹಾಗೂ ಮಿದುಳಿನಲ್ಲಿ ಪ್ರಾಣ ಮತ್ತು ಪ್ರಜ್ಞೆಯ ಏಳು ಅತೀಂದ್ರಿಯ ಕೇಂದ್ರಗಳಿರುತ್ತವೆ, ಅವು ಮನುಷ್ಯನ ಸ್ಥೂಲ ಮತ್ತು ಸೂಕ್ಷ್ಮ ಶರೀರಗಳನ್ನು ಸಚೇತನಗೊಳಿಸುತ್ತವೆ. ಈ ಕೇಂದ್ರಗಳನ್ನು “ಚಕ್ರಗಳು” ಎಂದು ಕರೆಯಲಾಗುತ್ತದೆ. ಏಕೆಂದರೆ ಪ್ರತಿಯೊಂದರಲ್ಲೂ ಇರುವ ಕೇಂದ್ರೀಕೃತ ಶಕ್ತಿಯು ಒಂದು ಕೇಂದ್ರಸ್ಥಾನದಂತಿದ್ದು, ಅಲ್ಲಿಂದ ಪ್ರಾಣದಾಯಕ ಬೆಳಕು ಮತ್ತು ಶಕ್ತಿಯ ಕಿರಣಗಳು ಪ್ರಸರಿಸುತ್ತವೆ. ಆರೋಹಣ ಕ್ರಮದಲ್ಲಿ, ಈ ಚಕ್ರಗಳು ಮೂಲಾಧಾರ (ಬೆನ್ನುಹುರಿಯ ತಳದಲ್ಲಿ); ಸ್ವಾಧಿಷ್ಠಾನ (ಮೂಲಾಧಾರದ ಎರಡು ಇಂಚು ಮೇಲೆ); ಮಣಿಪೂರ (ಹೊಕ್ಕುಳಿಗೆ ಅಭಿಮುಖವಾಗಿ); ಅನಾಹತ (ಹೃದಯಕ್ಕೆ ಅಭಿಮುಖವಾಗಿ); ವಿಶುದ್ಧ (ಕುತ್ತಿಗೆಯ ತಳದಲ್ಲಿ); ಆಜ್ಞ (ಸಾಂಪ್ರದಾಯಿಕವಾಗಿ ಹುಬ್ಬುಗಳ ನಡುವೆ ಇದೆ; ವಾಸ್ತವದಲ್ಲಿ, ಧ್ರುವೀಯತೆಯಿಂದ ಮೆಡುಲ್ಲಾದೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ; ಶಬ್ದಾರ್ಥ ಸಂಗ್ರಹದಲ್ಲಿ ಮೆಡುಲ್ಲಾ ಹಾಗೂ ಆಧ್ಯಾತ್ಮಿಕ ಚಕ್ಷು ವನ್ನೂ ನೋಡಿ); ಹಾಗೂ ಸಹಸ್ರಾರ (ಮುಮ್ಮಿದುಳಿನ ಅತ್ಯಂತ ಮೇಲ್ಭಾಗದಲ್ಲಿದೆ). ಏಳು ಕೇಂದ್ರಗಳು ದೈವ ನಿಯೋಜಿತ “ಹೊರಬಾಗಿಲುಗಳು”. ಇವುಗಳ ಮೂಲಕ ಆತ್ಮವು ಶರೀರದೊಳಕ್ಕೆ ಇಳಿದಿದೆ ಹಾಗೂ ಇವುಗಳ ಮೂಲಕವೇ ಒಂದು ಧ್ಯಾನ ಪ್ರಕ್ರಿಯೆಯಿಂದ ಅದರ ಪುನರಾರೋಹಣವಾಗಬೇಕು. ಏಳು ಅನುಕ್ರಮ ಹಂತಗಳ ಮೂಲಕ ಆತ್ಮವು ವಿಮೋಚನಗೊಂಡು ವಿಶ್ವ ಪ್ರಜ್ಞೆಯಲ್ಲಿ ಸೇರಿಹೋಗುತ್ತದೆ. ತನ್ನ ಪ್ರಜ್ಞಾಪೂರ್ವಕ ಮೇಲ್ಮುಖ ಪಯಣದಲ್ಲಿ ಆತ್ಮವು ಬೆನ್ನುಹುರಿಯ ಏಳು ತೆರೆದಿರುವ ಅಥವಾ “ಜಾಗೃತ” ಕೇಂದ್ರಗಳ ಮೂಲಕ ಅನಂತದೆಡೆಗಿನ ಹೆದ್ದಾರಿಯಲ್ಲಿ ಸಾಗುತ್ತದೆ, ಇದೇ ಆತ್ಮವು ಪರಮಾತ್ಮನೊಂದಿಗೆ ಮತ್ತೆ ಐಕ್ಯವಾಗಲು ತನ್ನ ಪಥದಲ್ಲಿ ವಾಪಸಾಗಬೇಕಾದ ನಿಜವಾದ ಮಾರ್ಗ. ಯೋಗದ ಪುಸ್ತಕಗಳು ಸಾಮಾನ್ಯವಾಗಿ ಕೆಳಗಿನ ಆರು ಚಕ್ರಗಳನ್ನು ಮಾತ್ರ ಪರಿಗಣಿಸುತ್ತವೆ, ಸಹಸ್ರಾರವನ್ನು ಏಳನೆಯ ಕೇಂದ್ರವೆಂದು ಪ್ರತ್ಯೇಕವಾಗಿ ಪ್ರಸ್ತಾಪಿಸಲಾಗುತ್ತದೆ. ಆದಾಗ್ಯೂ ಹೆಚ್ಚಾಗಿ ಎಲ್ಲ ಏಳು ಕೇಂದ್ರಗಳನ್ನು ಪದ್ಮಗಳೆಂದೇ ಹೇಳಲಾಗುತ್ತದೆ, ಪ್ರಾಣ ಮತ್ತು ಪ್ರಜ್ಞೆಯು ಬೆನ್ನುಹುರಿಯಲ್ಲಿ ಮೇಲಕ್ಕೆ ಸಾಗುತ್ತಿರುವಂತೆ ಆಧ್ಯಾತ್ಮಿಕ ಜಾಗೃತಿಯಲ್ಲಿ ಅವುಗಳ ದಳಗಳು ತೆರೆದಿರುತ್ತವೆ, ಅಥವಾ ಮೇಲ್ಮುಖವಾಗಿರುತ್ತವೆ. ಏಳು ಕೇಂದ್ರಗಳು ದೈವನಿಯೋಜಿತ ನಿರ್ಗಮನ ಮಾರ್ಗಗಳು ಅಥವಾ “ನೆಲ ಬಾಗಿಲುಗಳು,” ಅವುಗಳ ಮೂಲಕ ಆತ್ಮವು ಶರೀರದೊಳಕ್ಕೆ ಇಳಿಯುತ್ತದೆ ಹಾಗೂ ಅವುಗಳ ಮೂಲಕವೇ ಅದು ಧ್ಯಾನದ ಪ್ರಕ್ರಿಯೆಯಿಂದ ಪುನಃ ಮೇಲೇರಬೇಕು. ಆತ್ಮವು ಅನುಕ್ರಮವಾಗಿ ಏಳು ಹಂತಗಳ ಮೂಲಕ ಪಾರಾಗಿ ಬ್ರಹ್ಮಾಂಡ ಪ್ರಜ್ಞೆಗೆ ಹೋಗುತ್ತದೆ. ಏಳು ತೆರೆದ ಅಥವಾ “ಜಾಗೃತಗೊಂಡ” ಚಕ್ರಗಳ ಮೂಲಕ ಆತ್ಮವು ತನ್ನ ಮೇಲ್ಮುಖ ಮಾರ್ಗದಲ್ಲಿ, ಅನಂತನೆಡೆಗಿನ ಹೆದ್ದಾರಿಯಲ್ಲಿ ಪಯಣಿಸುತ್ತದೆ, ಆತ್ಮವು ಪರಮಾತ್ಮನೊಂದಿಗೆ ಒಂದಾಗುವ ಸಲುವಾಗಿ ಬಂದ ಮಾರ್ಗದಲ್ಲಿ ಹಿಂದಿರುಗಲು ಇದೇ ನಿಜವಾದ ಹಾದಿ. ಯೋಗ ಗ್ರಂಥಗಳು ಸಾಮಾನ್ಯವಾಗಿ ಆರು ಕೆಳಗಿನ ಕೇಂದ್ರಗಳನ್ನು ಮಾತ್ರ ಚಕ್ರಗಳೆಂದು ಪರಿಗಣಿಸುತ್ತವೆ, ಸಹಸ್ರಾರವನ್ನು ಪ್ರತ್ಯೇಕವಾಗಿ ಏಳನೇ ಕೇಂದ್ರವೆಂದು ಉಲ್ಲೇಖಿಸಲಾಗುತ್ತದೆ. ಈ ಎಲ್ಲಾ ಏಳು ಕೇಂದ್ರಗಳನ್ನು ಹೆಚ್ಚಾಗಿ ಪದ್ಮಗಳು ಎಂದು ಹೇಳಲಾಗುತ್ತದೆ, ಆಧ್ಯಾತ್ಮಿಕ ಜಾಗೃತಿಯಲ್ಲಿ ಪ್ರಾಣ ಹಾಗೂ ಪ್ರಜ್ಞೆಗಳು ಬೆನ್ನೆಹುರಿಯಲ್ಲಿ ಮೇಲೆ ಚಲಿಸುತ್ತಿರುವಾಗ, ಅವುಗಳ ದಳಗಳು ತೆರೆದುಕೊಂಡಿರುತ್ತವೆ ಅಥವಾ ಮೇಲ್ಮುಖವಾಗಿರುತ್ತವೆ.
ಚಿತ್ತ. ಅಂತರ್ಬೋಧಿತ ಭಾವನೆ; ಪ್ರಜ್ಞೆಯ ಸಮುಚ್ಚಯ, ಇದರಲ್ಲಿ ಅಹಂಕಾರ, ಬುದ್ಧಿ ಮತ್ತು ಮನಸ್ (ಮನಸ್ಸು ಅಥವಾ ಇಂದ್ರಿಯ ಪ್ರಜ್ಞೆ) ಅಂತರ್ಗತವಾಗಿರುತ್ತವೆ.
ಚೈತನ್ಯದಾಯಕ ವ್ಯಾಯಾಮಗಳು. ಮೀನು ನೀರಿನಿಂದ ಸುತ್ತುವರಿಯಲ್ಪಟ್ಟಂತೆಯೇ ಮನುಷ್ಯನು ಬ್ರಹ್ಮಾಂಡ ಶಕ್ತಿಯಿಂದ ಸುತ್ತುವರಿಯಲ್ಪಟ್ಟಿದ್ದಾನೆ. ಪರಮಹಂಸ ಯೋಗಾನಂದರು ಆರಂಭಿಸಿದ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಪಾಠಗಳಲ್ಲಿ (ಇದನ್ನು ಶಬ್ದಾರ್ಥ ಸಂಗ್ರಹದಲ್ಲಿ ನೋಡಿ) ಕಲಿಸಲಾಗುವ ಚೈತನ್ಯದಾಯಕ ವ್ಯಾಯಾಮಗಳು ಮನುಷ್ಯನಿಗೆ ಈ ಬ್ರಹ್ಮಾಂಡ ಶಕ್ತಿ ಅಥವಾ ವಿಶ್ವವ್ಯಾಪಿ ಪ್ರಾಣದಿಂದ ತನ್ನ ಶರೀರವನ್ನು ರೀಚಾರ್ಜ್ ಮಾಡಿಕೊಳ್ಳಲು ಸಾಧ್ಯವಾಗಿಸುತ್ತವೆ.
ಜಗನ್ಮಾತೆ. ಸೃಷ್ಟಿಯಲ್ಲಿ ಕ್ರಿಯಾಶೀಲವಾಗಿರುವ ಭಗವಂತನ ಒಂದು ಅಂಶ; ಅಲೌಕಿಕ ಸೃಷ್ಟಿಕರ್ತನ ಶಕ್ತಿ. ದೈವತ್ವದ ಈ ಅಂಶಕ್ಕೆ ಇರುವ ಇನ್ನಿತರ ಹೆಸರುಗಳೆಂದರೆ, ಓಂ, ಶಕ್ತಿ, ಪವಿತ್ರಾತ್ಮ, ಬ್ರಹ್ಮಾಂಡೀಯ ಬುದ್ಧಿಶೀಲ ಸ್ಪಂದನ, ಪ್ರಕೃತಿ. ಅಲ್ಲದೆ, ಪ್ರಭುವಿನ ಪ್ರೀತಿ ಮತ್ತು ಸಹಾನುಭೂತಿಯ ಗುಣಗಳನ್ನು ಹೊಂದಿರುವ, ಮಾತೆಯ ರೂಪದಲ್ಲಿ ಸಾಕಾರವಾಗಿರುವ ಭಗವಂತನ ಅಂಶ.
ಜಾತಿ. ಮೂಲ ಪರಿಕಲ್ಪನೆಯಲ್ಲಿ ಜಾತಿ ಎಂಬುದು ಆನುವಂಶಿಕ ಸ್ಥಾನಮಾನವಾಗಿರಲಿಲ್ಲ, ಬದಲಿಗೆ ಅದು ಮನುಷ್ಯನ ನೈಸರ್ಗಿಕ ಸಾಮರ್ಥ್ಯಗಳನ್ನು ಆಧರಿಸಿದ ವರ್ಗೀಕರಣವಾಗಿತ್ತು. ಮನುಷ್ಯ ತನ್ನ ವಿಕಾಸದಲ್ಲಿ, ಪ್ರಾಚೀನ ಹಿಂದೂ ಋಷಿಗಳು ಗೊತ್ತುಪಡಿಸಿದ ಶೂದ್ರ, ವೈಶ್ಯ, ಕ್ಷತ್ರಿಯ ಮತ್ತು ಬ್ರಾಹ್ಮಣ ಎಂಬ ನಾಲ್ಕು ವಿಭಿನ್ನ ಶ್ರೇಣಿಗಳನ್ನು ಹಾದು ಹೋಗುತ್ತಾನೆ. ಶೂದ್ರನು ಪ್ರಮುಖವಾಗಿ ತನ್ನ ದೈಹಿಕ ಅಗತ್ಯಗಳು ಮತ್ತು ಆಸೆಗಳನ್ನು ಪೂರೈಸುವಲ್ಲಿ ಆಸಕ್ತನಾಗಿರುತ್ತಾನೆ; ವೈಶ್ಯನು ಪ್ರಾಪಂಚಿಕ ಲಾಭ ಹಾಗೂ ಇಂದ್ರಿಯ ತೃಪ್ತಿಗಾಗಿ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾನೆ; ಅವನಲ್ಲಿ ಶೂದ್ರನಿಗಿಂತ ಹೆಚ್ಚು ಸೃಜನಾತ್ಮಕ ಸಾಮರ್ಥ್ಯವಿರುತ್ತದೆ ಹಾಗೂ ಅವನ ಮನಸ್ಸಿನ ಆಸೆ ಎಲ್ಲಿ ನೆರವೇರುವುದೋ ಅಂತಹ ಉದ್ಯೋಗವನ್ನು ಅರಸುತ್ತಾನೆ. ಕ್ಷತ್ರಿಯನು ಅನೇಕ ಜನ್ಮಗಳಲ್ಲಿ ಶೂದ್ರ ಹಾಗೂ ವೈಶ್ಯ ಸ್ಥಿತಿಗಳಲ್ಲಿರುವ ಆಸೆಗಳನ್ನು ಪೂರೈಸಿರುವುದರಿಂದ, ಜೀವನದ ಅರ್ಥವನ್ನು ಹುಡುಕಲು ಪ್ರಾರಂಭಿಸುತ್ತಾನೆ; ಅವನು ತನ್ನ ದುರಭ್ಯಾಸಗಳನ್ನು ಜಯಿಸಲು, ತನ್ನ ಇಂದ್ರಿಯಗಳನ್ನು ನಿಯಂತ್ರಿಸಲು ಹಾಗೂ ಸೂಕ್ತವಾದದ್ದನ್ನು ಮಾಡಲು ಪ್ರಯತ್ನಿಸುತ್ತಾನೆ. ಕ್ಷತ್ರಿಯರು ವೃತ್ತಿಯಲ್ಲಿ ಉದಾತ್ತ ಅರಸರು, ರಾಜ ನೀತಿಜ್ಞರು, ಯೋಧರು ಆಗಿರುತ್ತಾರೆ. ಬ್ರಾಹ್ಮಣನು ತನ್ನ ಕೀಳುಮಟ್ಟದ ಸ್ವಭಾವವನ್ನು ಜಯಿಸಿರುತ್ತಾನೆ, ಆಧ್ಯಾತ್ಮಿಕ ಅನ್ವೇಷಣೆಗಳಿಗೆ ಸ್ವಾಭಾವಿಕ ಒಲವನ್ನು ಹೊಂದಿರುತ್ತಾನೆ ಹಾಗೂ ಭಗವಂತನನ್ನು ಅರಿತಿರುತ್ತಾನೆ, ಅದರಿಂದಾಗಿ ಇತರರಿಗೆ ಕಲಿಸಲು ಮತ್ತು ಅವರು ಮೋಕ್ಷ ಹೊಂದಲು ಸಹಾಯ ಮಾಡುತ್ತಾನೆ.
ಜ್ಞಾನ ಯೋಗ. ಬುದ್ಧಿಯ ವಿವೇಚನಾಶಕ್ತಿಯನ್ನು ಆತ್ಮದ ಸರ್ವಜ್ಞ ಜ್ಞಾನವಾಗಿ ಪರಿವರ್ತಿಸುವ ಮೂಲಕ ಭಗವಂತನೊಂದಿಗೆ ಸಂಯೋಗವಾಗುವ ಮಾರ್ಗ. ಸನಾತನ ಧರ್ಮ ನೋಡಿ.
ತತ್ವಗಳು. ಪಂಚತತ್ವಗಳು ನೋಡಿ.
ತ್ರಿಮೂರ್ತಿತ್ವ. ಅಮೂರ್ತ ಚೈತನ್ಯವು ಸೃಷ್ಟಿಯನ್ನು ರಚಿಸಿದಾಗ, ಅದು ತ್ರಿಮೂರ್ತಿತ್ವವಾಯಿತು: ಸತ್, ತತ್, ಓಂ ಅಥವಾ ತಂದೆ, ಪುತ್ರ, ಪವಿತ್ರಾತ್ಮ. ಸತ್ (ತಂದೆ) ಎಂದರೆ ಸೃಷ್ಟಿಯಿಂದಾಚೆಗೆ ಅಸ್ತಿತ್ವದಲ್ಲಿರುವ ಸೃಷ್ಟಿಕರ್ತನಾದ ಪರಬ್ರಹ್ಮ. ತತ್ (ಪುತ್ರ) ಎಂದರೆ ಸೃಷ್ಟಿಯಲ್ಲಿ ಅಸ್ತಿತ್ವದಲ್ಲಿರುವ ಭಗವಂತನ ಸರ್ವವ್ಯಾಪಿ ಪ್ರಜ್ಞಾನ (ಕ್ರಿಸ್ತ ಪ್ರಜ್ಞೆ ಅಥವಾ ಕೂಟಸ್ಥ ಚೈತನ್ಯ). ಓಂ (ಪವಿತ್ರಾತ್ಮ) ಎಂದರೆ ಇಂದ್ರಿಯಗೋಚರವಾಗುವ ಅಥವಾ ಸೃಷ್ಟಪ್ರಪಂಚವಾಗುವ ಭಗವಂತನ ಸ್ಪಂದನಾತ್ಮಕ ಶಕ್ತಿ. ಅನಂತಕಾಲ (ಯುಗ ನೋಡಿ)ದಲ್ಲಿ ಬ್ರಹ್ಮಾಂಡೀಯ ಸೃಷ್ಟಿ ಹಾಗೂ ಪ್ರಳಯಗಳ ಅನೇಕ ಆವರ್ತಗಳು ಬಂದು ಹೋಗಿವೆ. ಬ್ರಹ್ಮಾಂಡೀಯ ಪ್ರಳಯ ಕಾಲದಲ್ಲಿ, ತ್ರಿಮೂರ್ತಿತ್ವ ಹಾಗೂ ಸೃಷ್ಟಿಯ ಇತರ ಎಲ್ಲ ಸಾಪೇಕ್ಷತೆಗಳು ಪುರುಷೋತ್ತಮನಲ್ಲಿ ಲಯವಾಗುತ್ತವೆ.
ದರ್ಶನ. “ಪವಿತ್ರ ದೃಶ್ಯ,” ಒಬ್ಬರ ಗುರುವಿನದರಂತೆ; ಅರ್ಥಾತ್, ಭಗವತ್‌ಸಾಕ್ಷಾತ್ಕಾರ ಹೊಂದಿರುವವರ ದರ್ಶನದಿಂದ ಪ್ರಾಪ್ತವಾಗುವ ಆಶಿರ್ವಾದ.
ದೀಕ್ಷೆ. ಆಧ್ಯಾತ್ಮಿಕ ದೀಕ್ಷೆ; ಸಂಸ್ಕೃತದ ಮೂಲಪದ ದೀಕ್ಷ್‌ನಿಂದ, ಅದರರ್ಥ ತನ್ನನ್ನು ತಾನು ಸಮರ್ಪಿಸಿಕೊಳ್ಳುವುದು. ಶಬ್ದಾರ್ಥ ಸಂಗ್ರಹದಲ್ಲಿ ಶಿಷ್ಯ ಹಾಗೂ ಕ್ರಿಯಾ ಯೋಗವನ್ನೂ ನೋಡಿ.
ದುಷ್ಟತೆ. ಸೃಷ್ಟಿಯಲ್ಲಿ ಭಗವಂತನ ಸರ್ವವ್ಯಾಪಿ ಗುಣವನ್ನು ಮರೆಮಾಚುವ ಸೈತಾನ ಶಕ್ತಿ, ಇದು ಮನುಷ್ಯ ಹಾಗೂ ಪ್ರಕೃತಿಯಲ್ಲಿ ಅಸಾಮರಸ್ಯಗಳಾಗಿ ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಮಾನವನಿಗೆ ಭಗವಂತನೊಂದಿಗಿನ ತನ್ನ ಮೂಲಭೂತ ಏಕತೆಯ ಪ್ರಜ್ಞೆಯನ್ನು ಕಳೆದುಕೊಳ್ಳುವಂತೆ ಮಾಡುವ ಹಾಗೂ ಭಗವತ್ಸಾಕ್ಷಾತ್ಕಾರದ ಪ್ರಾಪ್ತಿಗೆ ಅಡ್ಡಿಯುಂಟುಮಾಡುವ, ದೈವ ನಿಯಮ(ಧರ್ಮ ನೋಡಿ)ಗಳಿಗೆ ವಿರುದ್ಧವಾದ ಯಾವುದನ್ನೇ ಆದರೂ ವ್ಯಾಖ್ಯಾನಿಸಲು ಬಳಸುವ ಸ್ಥೂಲ ಪದ.
ಧರ್ಮ. ಇಡೀ ಸೃಷ್ಟಿಯನ್ನು ಬೆಂಬಲಿಸುವ ನೀತಿನಿಷ್ಠೆಯ ಶಾಶ್ವತ ತತ್ವಗಳು; ಈ ತತ್ವಗಳನ್ನಿಟ್ಟುಕೊಂಡು ಸಾಮರಸ್ಯದ ಬಾಳ್ವೆ ನಡೆಸಬೇಕಾದದ್ದು ಮನುಷ್ಯನ ಸಹಜ ಕರ್ತವ್ಯ. ಶಬ್ದಾರ್ಥ ಸಂಗ್ರಹದಲ್ಲಿ ಸನಾತನ ಧರ್ಮವನ್ನೂ ನೋಡಿ.
ಧ್ಯಾನ. ಸಾಮಾನ್ಯವಾಗಿ, ಭಗವಂತನನ್ನು ಗ್ರಹಿಸುವ ಉದ್ದೇಶದಿಂದ ಆಂತರೀಕರಿಸಿದ ಏಕಾಗ್ರತೆ. ನಿಜವಾದ ಧ್ಯಾನವೆಂದರೆ ಅಂತರ್ಬೋಧೆಯ ಗ್ರಹಿಕೆಯಿಂದ ಭಗವಂತನ ಪ್ರಜ್ಞಾಪೂರ್ವಕ ಅನುಭವ. ಭಕ್ತನು ಸ್ಥಿರವಾದ ಏಕಾಗ್ರತೆಯನ್ನು ಹೊಂದಿದ ನಂತರವೇ ಅದು ಸಾಧ್ಯವಾಗುತ್ತದೆ, ಆ ಮೂಲಕ ಅವನು ತನ್ನ ಗಮನವನ್ನು ಇಂದ್ರಿಯಗಳಿಂದ ಬೇರ್ಪಡಿಸಿಕೊಳ್ಳುತ್ತಾನೆ ಮತ್ತು ಬಾಹ್ಯ ಜಗತ್ತಿನಿಂದ ಬರುವ ಇಂದ್ರಿಯ ಛಾಪುಗಳಿಂದ ಸಂಪೂರ್ಣವಾಗಿ ಅಕ್ಷುಬ್ಧತೆಯಿಂದಿರುತ್ತಾನೆ. ಪತಂಜಲಿಯು ವಿವರಿಸಿರುವ ಅಷ್ಟಾಂಗ ಯೋಗದಲ್ಲಿ ಧ್ಯಾನವು ಏಳನೆಯ ಹಂತ, ಎಂಟನೆಯ ಹಂತ ಸಮಾಧಿ, ಸಂಸರ್ಗ, ಭಗವಂತನೊಂದಿಗೆ ಏಕತೆ. ಪತಂಜಲಿ ನೋಡಿ.