ಪರಮಹಂಸ ಯೋಗಾನಂದರ 125 ನೆಯ ಜನ್ಮೋತ್ಸವ – ಸ್ವಾಮಿ ಚಿದಾನಂದ ಗಿರಿಯವರಿಂದ ಒಂದು ಸಂದೇಶ

5 ಜನವರಿ, 2018

ಜನ್ಮೋತ್ಸವ 2018
ಸ್ವಾಮಿ ಚಿದಾನಂದ ಗಿರಿಯವರಿಂದ ಸಂದೇಶ,
ಅಧ್ಯಕ್ಷರು

ಪ್ರಿಯ ಬಾಂಧವರೆ,

ನಮ್ಮ ಪ್ರೀತಿಯ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರ 125 ನೆಯ ಈ ಪವಿತ್ರ ಜನ್ಮೋತ್ಸವದಂದು ನಿಮಗೆಲ್ಲರಿಗೂ ಪ್ರೀತಿಯ ಶುಭಾಶಯಗಳು. ಎರಡು ತಿಂಗಳ ಹಿಂದೆ ನಾನು ಗುರೂಜಿಯವರ ತಾಯ್ನಾಡಿಗೆ ಭೇಟಿ ನೀಡಿ ನಿಮ್ಮೆಲ್ಲರೊಂದಿಗೆ ಇದ್ದಾಗ ಅನುಭವಿಸಿದ ಸಂತೋಷ, ಸ್ಫೂರ್ತಿ ಮತ್ತು ಆಶೀರ್ವಾದದಿಂದ ನನ್ನ ಹೃದಯವು ಇನ್ನೂ ತುಂಬಿದೆ. ಶುದ್ಧ ಭಕ್ತಿ ಮತ್ತು ಆಧ್ಯಾತ್ಮಿಕ ಉತ್ಸಾಹವನ್ನು ಪ್ರತಿಬಿಂಬಿಸುವ ನಿಮ್ಮ ಉಜ್ವಲ ಮುಖಗಳು ನನ್ನ ಸ್ಮರಣೆಯಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ. ನಿಮ್ಮ ಹಂಬಲದ ಅಯಸ್ಕಾಂತದಿಂದ ಎಳೆಯಲ್ಪಟ್ಟ, ನಮ್ಮ ಪೂಜ್ಯ ಗುರುಗಳ ಪ್ರೀತಿಯು ನಮ್ಮೆಲ್ಲರನ್ನೂ ಆವರಿಸಿತು, ನಮ್ಮ ಹೃದಯಗಳನ್ನು ಒಂದುಗೂಡಿಸಿತು ಮತ್ತು ನಾವು ಯಾರಿಂದ ಬಂದಿಹೆವೋ ಆ ಭಗವಂತನ ಹತ್ತಿರಕ್ಕೆ ನಮ್ಮನ್ನು ಎಳೆದುಕೊಂಡಿತು – ಈ ಮಾಯಾ ಪ್ರಪಂಚದಲ್ಲಿ ನಾವು ಜನ್ಮಜನ್ಮಾಂತರಗಳಿಂದ ಬಯಸಿದ ಪರಿಪೂರ್ಣ ಪ್ರೀತಿಯ ಹಂಬಲವನ್ನು ತೃಪ್ತಿಪಡಿಸಬಲ್ಲ ಆ ಭಗವಂತನ ಬಳಿಗೆ.

ನಿಮ್ಮ ಮಾರ್ಗದರ್ಶಕರು ಮತ್ತು ಶಾಶ್ವತ ಸ್ನೇಹಿತರಾಗಿರುವಂತೆ, ನಮ್ಮ ಪ್ರೀತಿಯ ಗುರುದೇವರನ್ನು ನಿಮಗೆ ಕಳುಹಿಸುವ ಮೂಲಕ ಭಗವಂತನನ್ನು ಅರಿಯುವ ನಿಮ್ಮ ಬಯಕೆಯ ಪ್ರಾಮಾಣಿಕತೆಗೆ ಅವನು ಪ್ರತಿಕ್ರಿಯಿಸಿದ್ದಾನೆ. ಗುರುವು ನೀಡುವ ನೆರವಿನಲ್ಲಿ ಸಂಪೂರ್ಣ ನಂಬಿಕೆಯನ್ನಿಟ್ಟು, ಅವರು ಬೋಧಿಸಿದ ಸಾಧನೆಯನ್ನು ನಾವು ಅನುಷ್ಠಾನ ಮಾಡಿದರೆ, ಅವರು ನಮ್ಮನ್ನು ಭಗವಂತನೊಂದಿಗಿನ ಸಂಯೋಗಕ್ಕೆ ತಪ್ಪದೆ ಮುನ್ನಡೆಸುತ್ತಾರೆ. ವಿಶ್ವಾದ್ಯಂತ ಪ್ರಸಾರ ಮಾಡಲು ನೇಮಿಸಲ್ಪಟ್ಟಿದ್ದ ನಮ್ಮ ಗುರುಗಳು ನೀಡಿದ ಕ್ರಿಯಾ ಯೋಗದ ಪವಿತ್ರ ವಿಜ್ಞಾನದ ಮೂಲಕ, ಅವರು ನಮಗೆ ಎಲ್ಲಕ್ಕಿಂತ ಅಮೂಲ್ಯವಾದ ನಿಧಿಯನ್ನು ನೀಡಿದ್ದಾರೆ – ಭಗವಂತನ ಅನಂತ ಪ್ರಜ್ಞೆಯ ಸ್ಪರ್ಶದಿಂದ ಆತ್ಮದ ಮೌನ ಧಾಮದಲ್ಲಿ ಅರಿವಿಗೆ ಬರುವ, ಮಾನುಷ ಕಲ್ಪನೆಗೆ ಮೀರಿದ ಆನಂದವನ್ನು ನಮಗೆ ನಾವೇ ಅನುಭವಿಸುವ ಒಂದು ವಿಧಾನ. ಇದು, ಆ ದಿವ್ಯ ಕೊಡುಗೆಯ ಮಹತ್ವವನ್ನು – ಮತ್ತು ನಿಮ್ಮ ಬೆನ್ನ ಹಿಂದೆ ಇದ್ದು ಸದಾ ನಿಮ್ಮನ್ನು ಕಾಯುವ ಗುರುವಿನ ಅನಿರ್ಬಂಧಿತ ಪ್ರೀತಿಯ ಉಡುಗೊರೆಯನ್ನು, ಹೊಸದಾಗಿ ಅರಿತುಕೊಳ್ಳುವ ಸಮಯವಾಗಲಿ. ಆ ಪ್ರೀತಿಯ ಅರಿವನ್ನು ನಿಮ್ಮ ಹೃದಯದಲ್ಲಿ ಹಿಡಿದಿಟ್ಟುಕೊಳ್ಳಿ ಮತ್ತು ಆ ಪ್ರೀತಿಯಲ್ಲಿ ಭಗವಂತ ಮತ್ತು ಗುರುಗಳು ನಿಮ್ಮ ಮಾನುಷ ಸ್ವಭಾವದಲ್ಲಿನ ಯಾವುದೇ ನ್ಯೂನತೆಯನ್ನು ಮೀರಿ ನಿಮ್ಮ ಆತ್ಮದ ಸೌಂದರ್ಯ ಮತ್ತು ಸಾಮರ್ಥ್ಯವನ್ನು ನೋಡುತ್ತಾರೆ ಎಂದು ತಿಳಿಯಿರಿ. ನೀವೂ ಕೂಡ ಆ ದಿವ್ಯ ಪ್ರತಿಬಿಂಬವನ್ನು ಅಂತರಂಗದಲ್ಲಿ ನೋಡಲು ಕಲಿತಾಗ, ನೀವು ಏನನ್ನೂ ಜಯಿಸಬಲ್ಲಿರಿ ಎಂಬ ಆತ್ಮವಿಶ್ವಾಸವನ್ನು ಗಳಿಸುವಿರಿ. ನೀವು ಧ್ಯಾನ ಮಾಡುವಾಗ ಅವನ ಪ್ರೀತಿಯನ್ನು ನೆನಪಿಸಿಕೊಳ್ಳಿ ಮತ್ತು ಅದರ ಶಕ್ತಿಯು ತಂತ್ರಗಳ ಮೂಲಕ ಹರಿದು ನಿಮ್ಮ ಪ್ರಜ್ಞೆಯನ್ನು ಪರಿವರ್ತಿಸುವುದನ್ನು ಅನುಭವಿಸಿ – ಅದು ನಿಮ್ಮ ನೈಜ ಆತ್ಮದ ಶುದ್ಧತೆ ಮತ್ತು ತೇಜಸ್ಸನ್ನು ಮರೆಮಾಡಿದ ಮಾಯೆಯ ಹೊದಿಕೆಯನ್ನು ತೆಗೆದುಹಾಕುತ್ತದೆ. ನೀವು ಹಾಗೆ ಮಾಡಿದಾಗ ಮತ್ತು ನಿಮ್ಮ ಇಚ್ಛೆಯನ್ನು ಗುರುವಿನ ಇಚ್ಛೆಯೊಂದಿಗೆ ಶ್ರುತಿಗೂಡಿಸಲು ಪ್ರಯತ್ನಿಸಿದಾಗ ನಿಮ್ಮ ಅಂತಿಮ ಮುಕ್ತಿ ಖಚಿತವಾಗುತ್ತದೆ.

ಭಾರತದಲ್ಲಿ ಗುರೂಜಿಯವರ ಕಾರ್ಯದ ಶತಮಾನೋತ್ಸವದ ಸ್ಮರಣಾರ್ಥದ ಕಳೆದ ವರ್ಷವು ಅವರ ಬೋಧನೆಗಳ ಶಕ್ತಿಯನ್ನು ನೆನಪಿಸುವಂಥದ್ದಾಗಿತ್ತು ಹಾಗೂ ಅವು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಹರಡುತ್ತಿರುವ ಗತಿಶೀಲತೆಯ ಪುರಾವೆಯಾಗಿದೆ. ಈ ವಾರ್ಷಿಕೋತ್ಸವವು ವೈಯಕ್ತಿಕವಾಗಿ ಅಥವಾ ಚೈತನ್ಯದಲ್ಲಿ ಭಾಗವಹಿಸಿದವರ ವ್ಯಕ್ತಿಗತ ಪ್ರಯತ್ನಗಳಿಗೂ ಶಕ್ತಿ ತುಂಬಿದೆ. ಈ ಜನ್ಮೋತ್ಸವದ ಆಚರಣೆ ಮತ್ತು ಕಳೆದ ವರ್ಷದ ಎಲ್ಲ ಸುಂದರ ಕಾರ್ಯಕ್ರಮಗಳಿಂದಾಗಿ, ನೀವು ಅನುಭವಿಸಿದ ಆತ್ಮ ಸಂತೋಷ, ಗುರುಗಳ ಅನಿರ್ಬಂಧಿತ ಪ್ರೀತಿಯಲ್ಲಿ ಹೆಚ್ಚಿದ ನಂಬಿಕೆ ಮತ್ತು ಸಾಧನೆಯನ್ನು ಎಡೆಬಿಡದೆ ಮುಂದುವರಿಸುವ ನಿಮ್ಮ ದೃಢ ಸಂಕಲ್ಪವನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗುವಂತಾಗಲಿ. ಅವರು ತೋರಿಸಿದ ಮಾರ್ಗವನ್ನು ಅನುಸರಿಸುವುದೇ ಅವರಿಗೆ ನಿಮ್ಮ ಕೃತಜ್ಞತಾ ಉಡುಗೊರೆಯಾಗಲಿ, ಅದರಿಂದಾಗಿ ಅವರು ನಿಮಗಾಗಿ ನೀಡಲು ಹಂಬಲಿಸುವ ಅಪಾರ ಆಧ್ಯಾತ್ಮಿಕ ಅನುಗ್ರಹವನ್ನು ನೀವು ಮುಕ್ತ ಮನಸ್ಸಿನಿಂದ ಮತ್ತು ಮುಕ್ತ ಹೃದಯದಿಂದ, ಸ್ವೀಕರಿಸುವಂತಾಗಲಿ. ಜೈ ಗುರು!

ಭಗವಂತ ಮತ್ತು ಗುರುದೇವರ ಆಶೀರ್ವಾದಗಳು ಸದಾ ನಿಮ್ಮೊಂದಿಗಿರಲಿ,

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ