ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರಿಂದ ಹೊಸ ವರ್ಷದ ಸಂದೇಶ – 2020

31 ಡಿಸೆಂಬರ್‌, 2019

ಹೊಸ ವರ್ಷದ ಸಂದೇಶ 2020: ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಶತಮಾನೋತ್ಸವ

"ಪರಮ ಪಿತನೆ, ನಾವು ನಿನ್ನನ್ನು ನಿನ್ನ ಅನಂತ ಅಭಿವ್ಯಕ್ತಿಯಲ್ಲಿ ಅನುಭವಿಸುವಂತಾಗುವವರೆಗೆ ಪ್ರತಿದಿನವೂ ಆಧ್ಯಾತ್ಮಿಕ ಗ್ರಹಿಕೆಯ ಹೊಸ ವರ್ಷವಾಗಲಿ, ಹೊಸ ಯುಗವಾಗಲಿ ಎಂದು ನಮ್ಮನ್ನು ಆಶೀರ್ವದಿಸು.”

ಆತ್ಮೀಯರೆ,

ಶ್ರೀ ಶ್ರೀ ಪರಮಹಂಸ ಯೋಗಾನಂದರ ವಿಶ್ವಾದ್ಯಂತದ ಆಧ್ಯಾತ್ಮಿಕ ಕುಟುಂಬದಲ್ಲಿರುವ ನಮ್ಮ ಆತ್ಮೀಯ ಸ್ನೇಹಿತರಿಗೆ ಹೃತ್ಪೂರ್ವಕ ಸ್ನೇಹ ಮತ್ತು ಪ್ರೀತಿಯೊಂದಿಗೆ ಸಂತೋಷದಾಯಕ ಹೊಸ ವರ್ಷದ ಶುಭಾಶಯಗಳು! ನಮ್ಮ ಆತ್ಮಕ್ಕೆ ಸ್ವಭಾವಸಿದ್ಧವಾಗಿರುವ ಭರವಸೆ ತುಂಬಿದ ಪ್ರಜ್ಞೆಯಲ್ಲಿ, ಮೇಲೆ ಉಲ್ಲೇಖಿಸಿದ ಪರಮಹಂಸಜಿಯವರ ಪ್ರಬಲವಾದ ಪ್ರಾರ್ಥನೆಯಿಂದ ಉನ್ನತಿಗೇರಿದವರಾಗಿ 2020 ಕ್ಕೆ ಪ್ರವೇಶಿಸೋಣ — ವರ್ಷದ ಈ ವಿಶೇಷ ಸಮಯವು ಬೆಳವಣಿಗೆಗೆ, ಬದಲಾವಣೆಗೆ, ಪರಿವರ್ತನೆಗೆ ಹಾಗೂ ನವೀಕರಣಕ್ಕೆ ದಿವ್ಯ ಅವಕಾಶವನ್ನು ಸಂಕೇತಿಸುತ್ತದೆ ಎಂಬ ಅರಿವಿನೊಂದಿಗೆ.

ಈಗಷ್ಟೇ ಮುಗಿದ ಕ್ರಿಸ್‌ಮಸ್ ಋತುವಿನಲ್ಲಿ ನೀವು ಕಳುಹಿಸಿದ ಶುಭಾಶಯದ ಕಾರ್ಡ್‌ಗಳು, ಉಡುಗೊರೆಗಳು ಹಾಗೂ ಪ್ರೀತಿ ಮತ್ತು ಬೆಂಬಲದ ಸಂದೇಶಗಳಿಗಾಗಿ ಪ್ರಪಂಚದಾದ್ಯಂತದ ನಿಮ್ಮೆಲ್ಲರಿಗೂ— ಸನಿಹದಲ್ಲಿರುವವರಿಗೂ ಮತ್ತು ದೂರದಲ್ಲಿರುವವರಿಗೂ — ನಾನು ಧನ್ಯವಾದಗಳನ್ನು ಹೇಳಲು ಈ ಅವಕಾಶವನ್ನು ತೆಗೆದುಕೊಳ್ಳುತ್ತೇನೆ. ನಿಮ್ಮ ದಿವ್ಯ ಸ್ನೇಹವನ್ನು ಪಡೆಯುವುದು, ನನ್ನ ಹೃದಯವನ್ನು ಹೇಗೆ ಮುಟ್ಟುತ್ತದೆ ಹಾಗೂ ಪರಮಹಂಸಜಿಯವರ ಆಶ್ರಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮೆಲ್ಲ ಸನ್ಯಾಸಿಗಳಿಗೆ ಎಷ್ಟು ಮಹತ್ವದ್ದಾಗಿದೆ ಎಂದು ನಿಮಗೆ ತಿಳಿದಿಲ್ಲ; ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಗುರುಗಳ ಪವಿತ್ರ ಬೋಧನೆಗಳು ಮತ್ತು ತಂತ್ರಗಳನ್ನು ನಿಮ್ಮ ಜೀವನದ ಭಾಗವಾಗಿಸುವ ಪ್ರಾಮಾಣಿಕತೆ ಮತ್ತು ಸಮರ್ಪಣೆಯನ್ನು ನೋಡಲು. ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ಭಗವಂತನು ಆಶೀರ್ವದಿಸಲಿ!

ಕಳೆದ ವರ್ಷವು ಯೋಗದಾ ಸತ್ಸಂಗ ಸೊಸೈಟಿ ಮತ್ತು ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ಗೆ ವಿಶೇಷವಾಗಿತ್ತು — ಪೂರ್ಣಗೊಂಡ ವೈಎಸ್‌ಎಸ್/ಎಸ್‌ಆರ್‌ಎಫ್‌ ಪಾಠಗಳ ಬಿಡುಗಡೆಯೊಂದಿಗೆ ಗುರೂಜಿಯವರ ಕಾರ್ಯದ ಇತಿಹಾಸ ಮತ್ತು ಅನಾವರಣದಲ್ಲಿ ಒಂದು ಮೈಲಿಗಲ್ಲು. ಹಾಗೂ ಈ ಹೊಸ ವರ್ಷವೂ ಬಹಳ ಸಂತೋಷದಾಯಕವಾಗಿರುತ್ತದೆ—ಪರಮಹಂಸಜಿಯವರ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ ಸ್ಥಾಪನೆಯ ಶತಮಾನೋತ್ಸವ. ನೂರು ವರ್ಷಗಳ ಹಿಂದೆ, ಭಗವಂತನನ್ನು ಹೇಗೆ ಕಂಡುಕೊಳ್ಳುವುದು ಮತ್ತು ಅವನೊಂದಿಗೆ ಹೇಗೆ ಸಂಸರ್ಗ ನಡೆಸುವುದು ಎಂಬುದರ ಕುರಿತು ಭಾರತದ ಗತಕಾಲದ ಅಮೂಲ್ಯವಾದ ಅತ್ಯುನ್ನತ ಪವಿತ್ರ ಬೋಧನೆಗಳನ್ನು ಪಶ್ಚಿಮಕ್ಕೆ ತರಲು ಅವರು ಅಮೆರಿಕಕ್ಕೆ ಬಂದರು. ಅವರು ಬೋಸ್ಟನ್ನಿನಲ್ಲಿ ಹಡಗಿನಿಂದ ಇಳಿದಾಗ ಒಬ್ಬಂಟಿಯಾಗಿದ್ದರೂ ಮತ್ತು ಸ್ನೇಹಿತರಿಲ್ಲದೆ ಇದ್ದರೂ, ಸ್ವಲ್ಪ ಸಮಯದಲ್ಲೇ ಭಾರತದ ಕಾಲ-ಮಾನಿತ ಸತ್ಯದ ಸಂದೇಶಕ್ಕಾಗಿ ಉತ್ಸುಕರಾಗಿರುವ, ಹೆಚ್ಚು ಹೆಚ್ಚು ಪ್ರಮುಖ ಅನ್ವೇಷಕರಿಂದ ಸುತ್ತುವರೆಯಲ್ಪಟ್ಟರು. ನಮ್ಮ ಗುರುಗಳು ಹೋದಲ್ಲೆಲ್ಲ ಪ್ರಾಣ ಸ್ನೇಹಿತರನ್ನು ಸಂಪಾದಿಸಿದರು ಹಾಗೂ ಅನುಯಾಯಿಗಳು ಮತ್ತು ಶಿಷ್ಯರನ್ನು ಆಕರ್ಷಿಸಿದರು, ಅವರ ಕೆಲಸವು ಜಗದಾದ್ಯಂತದ ಸಂಸ್ಥೆಯಾಗಿ ಇಂದು ಈ ಮಟ್ಟಕ್ಕೆ ಬೆಳೆದುನಿಂತಿದೆ.

ನೀವೆಲ್ಲರೂ ಆ ಬೆಳವಣಿಗೆಯ ಒಂದು ಭಾಗವಾಗಿರುವಿರಿ. ಜನರು ಮತ್ತು ರಾಷ್ಟ್ರಗಳನ್ನು ಅಜ್ಞಾನ, ಸ್ವಾರ್ಥ ಮತ್ತು ಕತ್ತಲೆಯಿಂದ ಭಗವಂತನ ಬೆಳಕಿನೆಡೆಗೆ ಮತ್ತು ಆಧ್ಯಾತ್ಮಿಕ ಪ್ರಜ್ಞೆಯೆಡೆಗೆ ತಿರುಗುವಂತೆ ಉತ್ತೇಜಿಸುತ್ತಿರುವ, ಬಲ ಮತ್ತು ಆವೇಗವನ್ನು ಪಡೆದುಕೊಳ್ಳುತ್ತಿರುವ ಒಂದು ದಿವ್ಯ ಪ್ರಚಾರವನ್ನು, ಒಂದು ಜಾಗತಿಕ ಬೋಧನೆಯನ್ನು ಬೆಳಗಲು ನೆರವಾಗುತ್ತಿರುವ ನಿಮ್ಮೆಲ್ಲರನ್ನು ನಾನು ಈ ಭೂಮಿಯ ಮೇಲೆ ಚೆದುರಿದ ಹೊಳೆಯುತ್ತಿರುವ ರತ್ನಗಳಂತೆ ಕಾಣುತ್ತೇನೆ. ಐದು, ಹತ್ತು, ಇಪ್ಪತ್ತು, ಮೂವತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ವೈಎಸ್‌ಎಸ್/ಎಸ್‌ಆರ್‌ಎಫ್ ಬೋಧನೆಗಳನ್ನು ಅಭ್ಯಾಸ ಮಾಡಿದ ಭಕ್ತರನ್ನು ಪ್ರಪಂಚದಾದ್ಯಂತ ನಾನು ಭೇಟಿ ಮಾಡಿದ್ದೇನೆ. ಎಂತಹ ಪ್ರೀತಿ ಮತ್ತು ಸದ್ಗುಣ, ಎಂತಹ ಸಕಾರಾತ್ಮಕ ಚೈತನ್ಯ ಮತ್ತು ಆಂತರಿಕ ಸಾಕ್ಷಾತ್ಕಾರ, ಅವರ ಕಣ್ಣುಗಳು, ಮುಖಗಳು ಮತ್ತು ಇಡೀ ಅಸ್ತಿತ್ವದಿಂದ ಹೊರಹೊಮ್ಮುತ್ತದೆ! ಕಾರ್ಯೋಪಯೋಗಿ ಆಧ್ಯಾತ್ಮಿಕತೆಯು ಪೂರೈಸುವುದು ಈ ಭರವಸೆಯನ್ನೇ.

ಹಾಗಾಗಿ, ನಮಗೆ ಮತ್ತು ಜಗತ್ತಿಗೆ ಪರಮಹಂಸಜಿ ಮತ್ತು ಅವರ ಗುರು ಪರಂಪರೆಯ ಮೂಲಕ ಕೊಡಲಾದ ಆತ್ಮದ ಉಡುಗೊರೆಗಳು ಮತ್ತು ಅವಕಾಶಕ್ಕಾಗಿ, ನವೀಕೃತ ಸ್ಫೂರ್ತಿ ಮತ್ತು ಕೃತಜ್ಞತೆಯೊಂದಿಗೆ ಈ ಶತಮಾನೋತ್ಸವ ವರ್ಷವು ಅದ್ಭುತವಾದ ಸ್ಮರಣೆಯ ಸಮಯವಾಗಿರುತ್ತದೆ. ಯೋಜಿಸಲಾದ ವಿಶೇಷ ಕಾರ್ಯಕ್ರಮಗಳನ್ನು ಅರಿತುಕೊಳ್ಳಲು ನಿಮ್ಮಲ್ಲಿ ಪ್ರತಿಯೊಬ್ಬರೂ ವೈಎಸ್‌ಎಸ್ ವೆಬ್‌ಸೈಟ್‌ಗೆ ಭೇಟಿ ನೀಡುವಿರಿ ಎಂದು ನಾನು ಭಾವಿಸುತ್ತೇನೆ.

ನಮ್ಮ ಗುರುಗಳಿಗೆ ನಾವು ಮನ್ನಣೆಯನ್ನು ವ್ಯಕ್ತಪಡಿಸುವ ಶ್ರೇಷ್ಠ ಮಾರ್ಗವೆಂದರೆ ಅವರ ಬೋಧನೆಗಳು ಮತ್ತು ಆದರ್ಶಗಳಿಗೆ ಮಾದರಿಯಾಗಿರುವುದು. ಮತ್ತು ಈ ಹೊಸ ವರ್ಷದ ಆರಂಭವು ಆ ಸಂಕಲ್ಪವನ್ನು ಮಾಡಿಕೊಳ್ಳಲು ಅತ್ಯುತ್ತಮ ಸಮಯವಾಗಿದೆ. ಭಗವಂತನ ಪ್ರತಿರೂಪದಲ್ಲಿ ಮಾಡಲ್ಪಟ್ಟಿರುವ ಆತ್ಮವಾಗಿ ನಾವು ಏನಾಗಬೇಕಿದೆಯೋ, ಏನನ್ನು ಸಾಧಿಸಬೇಕಿದೆಯೋ ಅದರಂತೆ ಆಗಲು ಮತ್ತು ಅದನ್ನು ಸಾಧಿಸಲು ನಮ್ಮನ್ನು ತಡೆಹಿಡಿಯುವ ಅಧ್ಯಾತ್ಮಿಕವಲ್ಲದ ಅಭ್ಯಾಸಗಳನ್ನು ನಮ್ಮ ಜೀವನದಿಂದ ಕಿತ್ತುಹಾಕೋಣ — ಕನಿಷ್ಠ ಅವುಗಳಲ್ಲಿ ಕೆಲವನ್ನಾದರೂ!

ಆ ಪ್ರತಿರೂಪವನ್ನು ಅರಿತುಕೊಳ್ಳಲು, ನಾವು ಧ್ಯಾನ ಮಾಡಬೇಕು. ಈಗ ಸ್ವಲ್ಪ ಬಿಡುವು ಮಾಡಿಕೊಂಡು, ಅಥವಾ ಈ ಸಂಜೆ ನಿಮ್ಮ ನಿಯತ ಧ್ಯಾನದ ಅವಧಿಯಲ್ಲಿ ಮೌನವಾಗಿ ಕುಳಿತುಕೊಳ್ಳಿ. ಪಾಠಗಳಲ್ಲಿ ಕಲಿಸಿರುವ ತಂತ್ರಗಳನ್ನು ಅಭ್ಯಾಸ ಮಾಡಿ; ನಂತರ ಭಗವಂತನ ಯಾವ ಅಂಶ ಅಥವಾ ರೂಪ ನಿಮಗೆ ಸ್ಫೂರ್ತಿ ನೀಡುವುದೋ ಅದರೊಂದಿಗೆ ಪ್ರಾಮಾಣಿಕವಾಗಿ ಮಾತನಾಡಿ. ಕೂಟಸ್ಥ ಕೇಂದ್ರದಲ್ಲಿ ಕಣ್ಣುಗಳನ್ನು ಇರಿಸಿಕೊಂಡು ಹಾಗೂ ವಿಶ್ವಾಸ ಮತ್ತು ನಿರೀಕ್ಷೆಯೊಂದಿಗೆ ಹೃದಯವನ್ನು ಶ್ರುತಿಗೂಡಿಸಿಕೊಂಡು, ಹಾಗೆ ಮಾಡಿದರೆ ಆಧ್ಯಾತ್ಮಿಕ ಪ್ರಜ್ಞೆಯನ್ನು ಅನಾವರಣಗೊಳಿಸುವ ಆಂತರಿಕ ಭರವಸೆಯನ್ನು ಅನುಭವಿಸುವಿರಿ. ಕೆಲವೊಮ್ಮೆ ನಿಮಗೆ ಆ ಕೂಡಲೆ ಭಗವಂತನ ಸಂಕೇತಗಳು ಮತ್ತು ಸಾಕ್ಷ್ಯಗಳು ದೊರೆಯದಿರಬಹುದು, ಅದಕ್ಕೆ ಕಾರಣ, ನಾವು ಹೆಚ್ಚಿನ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕೆಂದು ಅವನು ಬಯಸುತ್ತಾನೆ, ಅದು ಸ್ನಾಯುವಿನಂತೆ, ಬಳಸಿದಷ್ಟೂ ಹೆಚ್ಚು ಬಲವಾಗಿ ಬೆಳೆಯುತ್ತದೆ. ಅವನು ನಿಜವಾಗಿಯೂ ಇದ್ದಾನೆಯೇ ಎಂದು ನಾವು ಅಚ್ಚರಿ ಪಡುತ್ತೇವೆ. ಆದರೆ ಯೇಸು, “ಎರಡು ಗುಬ್ಬಚ್ಚಿಗಳನ್ನು ಮೂರು ಕಾಸಿಗೆ ಮಾರಿಲ್ಲವೆ? ಆದರೂ ಎರಡರಲ್ಲಿ ಒಂದು ಕೂಡ ನಿಮ್ಮ ಭಗವಂತನ ಅರಿವಿಗೆ ಬಾರದೆ ನೆಲಕ್ಕೆ ಬೀಳಲಾರದು,” ಎಂದು ಹೇಳಿದ್ದಾನೆ. ಭಗವಂತನಿಗೆ ನಮ್ಮ ಬಗ್ಗೆ ತಿಳಿದಿದೆ; ಆದರೆ ನಾವು ಅವನ ಬಗ್ಗೆ ತಿಳಿದುಕೊಳ್ಳಬೇಕಾಗಿದೆ! ಮತ್ತು ಅದು ತಾಳ್ಮೆಯಿಂದ ಧ್ಯಾನವನ್ನು ಅಭ್ಯಾಸ ಮಾಡುವುದರ ಮೂಲಕ ಬರುತ್ತದೆ, ಜೊತೆಗೆ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆ ಇರಬೇಕು — ಏನೇ ಬಂದರೂ ಅದನ್ನು ನಮ್ಮ ಆಧ್ಯಾತ್ಮಿಕ ವಿಕಸನದ ಮುಂದಿನ ಹಂತವೆಂದು ಪರಿಗಣಿಸಿ, ಸದಾ ಶ್ರುತಿಗೂಡುವಿಕೆ ಮತ್ತು ಸೂಕ್ತ ಮನೋಭಾವಕ್ಕಾಗಿ ಆಂತರಿಕವಾಗಿ ಶ್ರಮಿಸುತ್ತ: “ಪ್ರಭುವೇ, ಈ ಅನುಭವದಿಂದ ನಾನು ಏನನ್ನು ಕಲಿಯಬೇಕೆಂದು ನೀನು ಬಯಸುವೆ? ನಾನು ಹೇಗೆ ಪ್ರತಿಕ್ರಿಯಿಸಬೇಕೆಂದು ನೀನು ಬಯಸುವೆ? ಧೈರ್ಯದಿಂದ ಮತ್ತು ನನ್ನ ಹೃದಯದಲ್ಲಿ ನಿನ್ನೊಲುಮೆಯಿಂದ ಈ ಮಾರ್ಗದಲ್ಲಿ ನಡೆಯುವ ಸಾಮರ್ಥ್ಯವನ್ನು ನನಗೆ ಅನುಗ್ರಹಿಸು.” ಈ ರೀತಿಯಲ್ಲಿ ನೀವು ನಿಮ್ಮ ಪಯಣದ ಕೊನೆಯಲ್ಲಿ ಖಂಡಿತವಾಗಿಯೂ ಅವನನ್ನು ಕಂಡುಕೊಳ್ಳುವಿರಿ.

ನನ್ನ ಧ್ಯಾನದಲ್ಲಿ ನಾನು ನಿಮ್ಮೆಲ್ಲರಿಗಾಗಿ ಪ್ರಾರ್ಥಿಸುತ್ತೇನೆ. ಭಗವಂತನ ಆಶೀರ್ವಾದಗಳು ನಿಮಗೆ ಹರಿದುಬರುತ್ತಿರುವುದನ್ನು ಅನುಭವಿಸಿ. ಭಗವಂತನ ಪ್ರೀತಿಯು ರಕ್ಷಾಕವಚದಂತೆ ನಿಮ್ಮನ್ನು ಸುತ್ತುವರೆದಿರುವುದನ್ನು ದೃಶ್ಯೀಕರಿಸಿಕೊಳ್ಳಿ. ಆತ್ಮಗಳ ಒಟ್ಟು ಕುಟುಂಬವಾಗಿ ಆ ಬೆಳಕು ಮತ್ತು ಪ್ರೀತಿಯಲ್ಲಿ ಸುತ್ತುವರೆದಿರುವ ನಾವು ಈ ವರ್ಷವನ್ನು ಗುರೂಜಿಯವರ ಕಾರ್ಯದ ಇತಿಹಾಸದಲ್ಲಿ ಒಂದು ಮೈಲುಗಲ್ಲನ್ನಾಗಿ ಮಾತ್ರವಲ್ಲದೆ ನಮ್ಮ ಸ್ವಂತದ ಆಧ್ಯಾತ್ಮಿಕ ಜೀವನದಲ್ಲೂ ವೈಯಕ್ತಿಕ ಮೈಲುಗಲ್ಲನ್ನಾಗಿ ಮಾಡಿಕೊಳ್ಳೋಣ. ಗುರೂಜಿಯವರ ಈ ಸುಂದರ ನುಡಿಗಳನ್ನು ನೆನಪಿಟ್ಟುಕೊಳ್ಳಿ:

“ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್‌ನ [ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ] ಒಂದು ಉದ್ದೇಶವೆಂದರೆ ಜನರಿಗೆ ಭಗವಂತನೊಂದಿಗಿನ ವೈಯಕ್ತಿಕ ಸಂಪರ್ಕದ ಮಾರ್ಗವನ್ನು ಕಲಿಸುವುದು. ಪ್ರಯತ್ನವನ್ನು ಮಾಡುವವರು ಅವನನ್ನು ಪಡೆದುಕೊಳ್ಳದೆ ಇರಲಾರರು. ನಿಮ್ಮ ಹೃದಯದಲ್ಲಿ ಒಂದು ಗಂಭೀರವಾದ ಪ್ರತಿಜ್ಞೆಯನ್ನು ಮಾಡಿ ಮತ್ತು ನೀವು ಇನ್ನು ಮುಂದೆ ಸಮಯವನ್ನು ವ್ಯರ್ಥ ಮಾಡದೆ, ಭಗವಂತನನ್ನು ಕಂಡುಕೊಳ್ಳುವ ತೀವ್ರ ಹಂಬಲವನ್ನು ನಿಮಗೆ ಅನುಗ್ರಹಿಸುವಂತೆ ಅವನಲ್ಲಿ ಪ್ರಾರ್ಥಿಸಿ.... ನಿಮ್ಮಲ್ಲಿ ಪ್ರತಿಯೊಬ್ಬರಿಗಾಗಿ ನನ್ನ ಪ್ರಾರ್ಥನೆ ಏನೆಂದರೆ, ಇಂದಿನಿಂದ ನೀವು ಭಗವಂತನಿಗಾಗಿ ಅತ್ಯುನ್ನತ ಪ್ರಯತ್ನ ಮಾಡುವಂತಾಗಲಿ ಮತ್ತು ನೀವು ಅವನಲ್ಲಿ ನೆಲೆಗೊಳ್ಳುವವರೆಗೆ ನೀವು ಎಂದಿಗೂ ಪ್ರಯತ್ನವನ್ನು ನಿಲ್ಲಿಸದಿರುವಂತಾಗಲಿ.”

ಈ ಹೊಸ ವರ್ಷದಲ್ಲಿ ಭಗವಂತನು ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ತನ್ನ ಶಾಂತಿ, ಪ್ರೀತಿ ಮತ್ತು ಸಂತೋಷದಿಂದ ಆಶೀರ್ವದಿಸಲಿ,

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ