ಪ್ರಿಯ ಬಾಂಧವರೆ,
ನಮ್ಮ ಪ್ರೀತಿಯ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರು ಸಂಸ್ಥಾಪಿಸಿದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಶತಮಾನೋತ್ಸವ ಸಮಾರಂಭದ ಶುಭ ಸಂದರ್ಭವನ್ನು ನಿಮ್ಮೆಲ್ಲರ ಜೊತೆ ಆಚರಿಸುತ್ತಿರುವುದು ನನಗೆ ಬಹಳ ಸಂತೋಷ ತಂದಿದೆ. ನನ್ನ ಪ್ರೀತಿಯ ಶುಭಾಶಯಗಳು ಮತ್ತು ಆಶೀರ್ವಾದವು ನಿಮಗಿರಲಿ. ನಮ್ಮ ಆದರಣೀಯ ಗುರುದೇವರ ಮತ್ತು ಅವರು ಇಡೀ ವಿಶ್ವದಲ್ಲಿ ಮತ್ತು ಭಾರತದಲ್ಲಿ ಮಾಡಿರುವ ಕಾರ್ಯಗಳ ಗೌರವಾರ್ಥ ಪ್ರೀತಿ ಮತ್ತು ಅಕ್ಕರೆಯಿಂದ ಯೋಜಿಸಲಾಗಿರುವ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭೌತಿಕವಾಗಿ ನನಗೆ ಸಾಧ್ಯವಾಗದೇ ಹೋದರೂ, ನನ್ನ ಆತ್ಮವು ಈ ಹರ್ಷದಾಯಕ ಸಂದರ್ಭದಲ್ಲಿ ನಿಮ್ಮೊಂದಿಗಿದೆ. ದಿಹಿಕಾದಲ್ಲಿ ಬಾಲಕರಿಗೆಂದು ಸ್ಥಾಪಿತವಾದ “ಬದುಕುವುದು-ಹೇಗೆ” ಎಂಬ ಸಣ್ಣ ಶಾಲೆಯೊಂದಿಗೆ ಪ್ರಾರಂಭವಾದ ಗುರೂಜಿಯವರ ಯೋಗದಾ ಸತ್ಸಂಗ ಸೊಸೈಟಿಯು ಬೃಹದಾಕಾರವಾಗಿ ಬೆಳೆದು ಇಂದು ಅನೇಕ ವಿಶಾಲ ಆಶ್ರಮಗಳು, ಚಟುವಟಿಕೆಯಿಂದ ಕೂಡಿದ ಸದಾ ವೃದ್ದಿಸುತ್ತಿರುವ ಸಂನ್ಯಾಸ ವೃಂದ, ಭಾರತದಾದ್ಯಂತ ಇನ್ನೂರಕ್ಕೂ ಹೆಚ್ಚು ಧ್ಯಾನ ಕೇಂದ್ರಗಳಲ್ಲದೆ, ನೂರಾರು ಶೈಕ್ಷಣಿಕ ಸಂಸ್ಥೆಗಳು ಮತ್ತು ಧರ್ಮಾರ್ಥ ಸೇವೆಗಳನ್ನು ಒಳಗೊಂಡಿರುವುದನ್ನು ನೋಡಿ ಗುರುದೇವರಿಗೆ ಆಗಿರುವ ಸಂತಸವನ್ನು ನಾನು ಊಹೆ ಮಾಡಬಲ್ಲೆ. ಈ ವಾರ್ಷಿಕೋತ್ಸವದ ಸಂತೋಷದ ಸಮಯದಲ್ಲಿ ಅವರು ತಮ್ಮೆಲ್ಲ ಭಕ್ತರ ಮೇಲೆ ಮತ್ತು ಇಡೀ ಭಾರತ ದೇಶದ ಮೇಲೆ ಅದರಲ್ಲೂ ವಿಶೇಷವಾಗಿ ಈ ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ತಮ್ಮ ಅಪರಿಮಿತ ಆತ್ಮಶ್ಲಾಘನೆಯ ಆಶೀರ್ವಾದಗಳನ್ನು ವರ್ಷಿಸುತ್ತಿದ್ದಾರೆ.
ವೈಎಸ್‌ಎಸ್ ಸಂಸ್ಥೆಯು ಪ್ರಾರಂಭವಾಗಿ ಇಂದಿಗೆ ನೂರು ವರ್ಷಗಳು ಸಂದಿದ್ದು, ಭಾರತ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಗುರುದೇವರು ದಿವ್ಯ ಪ್ರೇಮದ ಅವತಾರವೆಂದೇ ಗುರುತಿಸಲ್ಪಟ್ಟಿದ್ದಾರೆ – ಜಗತ್ತನ್ನು ಬದಲಾಯಿಸುವ ಉದ್ದೇಶಕ್ಕಾಗಿ ಜನಿಸಿದ ಯುಗಪ್ರವರ್ತಕ ಜಗದ್ಗುರು. ನಮ್ಮ ಆತ್ಮದ ತ್ವರಿತ ಬೆಳವಣಿಗೆಗಾಗಿ ಹಾಗೂ ಮನುಕುಲದ ವಿಕಾಸಕ್ಕಾಗಿ, ವಿಶೇಷಾನುಗ್ರಹವಾದ ಪವಿತ್ರ ಕ್ರಿಯಾಯೋಗ ವಿಜ್ಞಾನವನ್ನು ಆಧುನಿಕ ಯುಗದಲ್ಲಿ ಹರಡುವುದು, ಅವರಿಗಾಗಿ ದೇವರು-ನಿಶ್ಚಯಿಸಿದ ಕಾರ್ಯವಾಗಿತ್ತು. ಅವರ ಮೊದಲ “ಬದುಕುವುದು-ಹೇಗೆ” ಶಾಲೆಯನ್ನು ಸ್ಥಾಪಿಸಿದ ಕೇವಲ ಮೂರು ವರ್ಷಗಳ ನಂತರ, ಗುರೂಜಿಯವರಿಗೆ ರಾಂಚಿಯಲ್ಲಿ ಒಂದು ಅಲೌಕಿಕ ದರ್ಶನವಾಯಿತು, ಅದರಲ್ಲಿ ಈ ಮಹತ್ವಪೂರ್ಣ ಕಾರ್ಯವನ್ನು ಕೈಗೊಳ್ಳಲು ಅವರು ಅಮೇರಿಕಾಕ್ಕೆ ಹೋಗುವ ಸಮಯ ಬಂದಿದೆ ಎಂಬುದನ್ನು ಬಹಿರಂಗಪಡಿಸಲಾಯಿತು ತದನಂತರ ಅವರು ಜೀವನಪರ್ಯಂತ ಅಲ್ಲಿಯೇ ನೆಲೆಸಬೇಕೆಂದು ವಿಧಿಲಿಖಿತವಾಗಿದ್ದರೂ, ಭಾರತವು ಎಂದೆಂದಿಗೂ ಅವರ ಹೃದಯದಲ್ಲಿ ಹಾಗೂ ಪ್ರಜ್ಞೆಯಲ್ಲಿ ನಿರಂತರವಾಗಿ ಪ್ರೀತಿಪಾತ್ರವಾಗಿದ್ದಿತು. ತಮ್ಮ ಕವನ “ಮೈ ಇಂಡಿಯಾ”ದಲ್ಲಿ ಅವರು ಬರೆಯುತ್ತಾರೆ, “ನಾನು ಭಾರತವನ್ನು ಪ್ರೀತಿಸುತ್ತೇನೆ. ಏಕೆಂದರೆ ನಾನು ಅಲ್ಲಿಯೇ ಭಗವಂತನನ್ನು ಮತ್ತು ಎಲ್ಲಾ ಸುಂದರ ವಸ್ತುಗಳನ್ನು ಪ್ರೀತಿಸಲು ಕಲಿತದ್ದು.” ಅವರು ತಮ್ಮ ಉದ್ದೇಶ ಸಾಧನೆಯನ್ನು ಭಾರತದಿಂದಲೇ ಪ್ರಾರಂಭಿಸಿದರು ಮತ್ತು ತಮ್ಮ ಪ್ರೀತಿಯ ತಾಯ್ನಾಡಿನ ಬಗ್ಗೆ ಕೃತಜ್ಞತಾಪೂರ್ವಕ ನುಡಿಗಳನ್ನು ಹೇಳುತ್ತಲೇ ತಮ್ಮ ಮರ್ತ್ಯ ಶರೀರವನ್ನು ತ್ಯಜಿಸಿದರು. ಅವರ ಚೈತನ್ಯ ಹಾಗೂ ಭಾರತದಿಂದ ಸ್ಪೂರ್ತಿ ಪಡೆದ ಕೆಲಸವು ಸದಾ ಮುಂದುವರೆಯುವುದು.
ಪಾಶ್ಚಿಮಾತ್ಯ ದೇಶದಲ್ಲಿ ತಮ್ಮ ಕಾರ್ಯವನ್ನು ಸ್ಥಾಪಿಸುವ ಅಪರಿಮಿತ ಜವಾಬ್ದಾರಿಗಳ ನಡುವೆಯೂ, ವೈಎಸ್‌ಎಸ್ ಸಂಸ್ಥೆಯ ಹಾಗೂ ಭಾರತದ ತಮ್ಮ ಶಿಷ್ಯರ ಯೋಗಕ್ಷೇಮದ ಬಗ್ಗೆ ಗುರುದೇವರ ಪ್ರೀತಿಪೂರ್ವಕ ಕಾಳಜಿಯು ಬದಲಾಗದೇ ಹಾಗೆಯೇ ಉಳಿಯಿತು. 1935-36ರಲ್ಲಿ ಭಗವಂತನು ಅವರಿಗೆ ಭಾರತಕ್ಕೆ ಭೇಟಿ ಕೊಡುವ ಅವಕಾಶವನ್ನು ನೀಡಿದಾಗ ಅವರು ದೇಶದಾದ್ಯಂತ ಪ್ರವಾಸ ಮಾಡಿ ಅನೇಕ ಪ್ರವಚನಗಳನ್ನು ನೀಡಿದ್ದಲ್ಲದೇ, ವೈಎಸ್‌ಎಸ್ ಸಂಸ್ಥೆಯ ಭವಿಷ್ಯವನ್ನು ಭದ್ರಪಡಿಸಲು ತಮ್ಮಿಂದಾದುದೆಲ್ಲವನ್ನೂ ಮಾಡಿದರು. ಅನೇಕ ಬಾರಿ ಅವರು ಮತ್ತೊಮ್ಮೆ ಭಾರತಕ್ಕೆ ಹಿಂತಿರುಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದುದನ್ನು ನಾನು ಕೇಳಿದ್ದೇನೆ. ಆದರೆ, ತಮ್ಮ ಜೀವಿತದ ಕೊನೆಗಾಲದಲ್ಲಿ, ಇದು ಆ ದಿವ್ಯಮಾತೆಯ ಇಚ್ಛೆಯಲ್ಲವೆಂದು ಅರಿತಾಗ, ಅವರು ತಮ್ಮ ಅಲ್ಲಿನ ಜವಾಬ್ದಾರಿಗಳನ್ನು ತಾವು ಮಾಡಬಹುದಾಗಿದ್ದಂತೆಯೇ ಮಾಡಲು ಶ್ರೀ ಶ್ರೀ ದಯಾಮಾತಾಜಿಯವರಿಗೆ ವಹಿಸಿಕೊಟ್ಟರು. ಆಕೆಯು ಹೃತ್ಪೂರ್ವಕವಾಗಿ ಆ ಪವಿತ್ರ ವಿಶ್ವಾಸವನ್ನು ಈಡೇರಿಸಿದರು, ಅದರಿಂದಾಗಿ ಆಕೆಯು ಭಕ್ತರಿಗೆ ಎಲ್ಲರನ್ನೂ ಪ್ರೀತಿಸುವ ದಿವ್ಯ ಮಾತೆಯ ನಿಜವಾದ ಪ್ರತಿಬಿಂಬವಾದರು ಹಾಗೂ ಗುರುದೇವರೊಂದಿಗೆ ತಮ್ಮ ಪ್ರಜ್ಞೆಯ ಸಂಪೂರ್ಣ ಶ್ರುತಿಗೂಡುವಿಕೆಯ ಮೂಲಕ ಅವರನ್ನು ಪ್ರೇರೇಪಿಸಿದರು. ಆ ಉನ್ನತ ಸ್ತರದಿಂದಲೇ ಆಕೆಯು ಗುರುದೇವರ ಆದರ್ಶ ಮತ್ತು ಆಶಯಗಳಿಗನುಗುಣವಾಗಿ ವೈಎಸ್‌ಎಸ್ ಕಾರ್ಯಗಳನ್ನು, ಐದು ದಶಕಗಳಿಗೂ ಹೆಚ್ಚು ಕಾಲ ಮಾರ್ಗದರ್ಶಿಸುತ್ತ, ಸಂಸ್ಥೆಯು ಇಂದು ನಾವು ನೋಡುತ್ತಿರುವ ಮಟ್ಟಕ್ಕೆ ಬೆಳೆಯುವಂತೆ ಪೋಷಿಸಿದರು. ಆಕೆಯ ಕಾರ್ಯಗಳ ನಿರ್ವಹಣೆಯಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುವ ಮೂಲಕ ಪ್ರಮುಖ ಪಾತ್ರ ವಹಿಸಿದ ಹಂಸ ಸ್ವಾಮಿ ಶ್ಯಾಮಾನಂದರು ಮತ್ತು ಇಲ್ಲಿ ಹೆಸರಿಸಲು ಅಸಾಧ್ಯವಾದಷ್ಟು ಬಹುಸಂಖ್ಯೆಯಲ್ಲಿರುವ, ನಮ್ಮ ಹೃದಯಗಳಲ್ಲಿ ಪ್ರತಿಷ್ಠಾಪಿತರಾಗಿರುವ ನಿಷ್ಠಾವಂತ ವೈಎಸ್‌ಎಸ್ ಭಕ್ತರು ಆಕೆಗೆ ನೀಡಿದ ಅಮೂಲ್ಯ ಸಹಾಯ ಮತ್ತು ಬೆಂಬಲಕ್ಕಾಗಿಯೂ ನಾವು ಕೃತಜ್ಞರಾಗಿದ್ದೇವೆ.
ಶ್ರೀ ದಯಾಮಾತಾಜಿಯವರ ಅನೇಕ ಭಾರತ ಪ್ರವಾಸಗಳಿಗೆ ಜೊತೆಯಾಗಬೇಕಾಗಿ ಬಂದದ್ದು ನನ್ನ ಸೌಭಾಗ್ಯವೆಂದೇ ನಾನು ಭಾವಿಸಿದ್ದೇನೆ. ಭಾರತೀಯ ಪರಂಪರೆಯಲ್ಲಿ ಬೇರೂರಿರುವ ದೇವರೆಡೆಗಿನ ಪರಿಶುದ್ಧ ಹಾಗೂ ಪ್ರಾಮಾಣಿಕ ಭಕ್ತಿಯನ್ನು ನಾವು ಭೇಟಿ ಮಾಡಿದ ವೈಎಸ್‌ಎಸ್‌ನ ಅನೇಕ ಅಪೂರ್ವ ಭಕ್ತರಲ್ಲಿ ಪ್ರತಿಫಲಿಸಿರುವುದು ಆಕೆಯಂತೆ ನನ್ನ ಮನಸ್ಸಿನಲ್ಲಿಯೂ ಅಚ್ಚೊತ್ತಿದೆ. ಆ ಭೇಟಿಗಳು ಮತ್ತು ಗುರೂಜಿಯವರ ತಾಯ್ನಾಡಿಗೆ ಮಾಡಿದ ಅನೇಕ ಪ್ರವಾಸಗಳು ನನ್ನ ಅತ್ಯಮೂಲ್ಯ ನೆನಪುಗಳಾಗಿ, ನನ್ನ ಹೃದಯ ಮತ್ತು ಮನಸ್ಸಿನಲ್ಲಿ ಅಚ್ಚಳಿಯದಂತೆ ಕೆತ್ತಲ್ಪಟ್ಟಿವೆ. ನಾನು ಅವುಗಳನ್ನು ಪುನಃ ಪುನಃ ನೆನಪಿಸಿಕೊಳ್ಳುತ್ತೇನೆ. ಭಾರತದಲ್ಲಿನ ಗುರುದೇವರ ಶಿಷ್ಯರಿಗಾಗಿ ಮತ್ತು ಯೋಗದಾ ಸತ್ಸಂಗ ಸೊಸೈಟಿಯ ಕಾರ್ಯಗಳಿಗಾಗಿ ಮತ್ತು ಅವರ ಧ್ಯೇಯ ಸಾಧನೆಗಾಗಿ ಬಹಳ ಶ್ರಮಿಸುತ್ತಿರುವ ಎಲ್ಲರಿಗಾಗಿ ನನ್ನ ಗಾಢವಾದ ಪ್ರಾರ್ಥನೆಗಳನ್ನು ಸಲ್ಲಿಸದೆ ನಾನು ಒಂದು ದಿನವನ್ನೂ ಕಳೆಯುವುದಿಲ್ಲ. ನಾನು ವೈಎಸ್‌ಎಸ್ ಕಾರ್ಯಕಲಾಪಗಳ ಫೋಟೋಗಳನ್ನು ನೋಡಿದಾಗ, ಗುರುದೇವರ ಬೋಧನೆಗಳ ಅಭ್ಯಾಸದಲ್ಲಿ ಆಳವಾಗಿ ತೊಡಗಿಸಿಕೊಳ್ಳಲು ತುಂಬಾ ಉತ್ಸುಕರಾಗಿರುವ – ಧ್ಯಾನ ಮಾಡಲು ಮತ್ತು ಗುರುದೇವರ ಜ್ಞಾನವನ್ನು ಹೀರಿಕೊಳ್ಳಲು ನಿಯತವಾಗಿ ಒಟ್ಟಿಗೆ ಸೇರುವ ಮತ್ತು ಅಸಂಖ್ಯಾತ ರೀತಿಯಲ್ಲಿ ಗುರುದೇವರ ಕೆಲಸವನ್ನು ಮಾಡುವ ಸುಂದರ ಆತ್ಮಗಳ ಸಮೂಹವನ್ನು ನೋಡಿ ನನಗೆ ರೋಮಾಂಚನವಾಗುತ್ತದೆ. ಬೆರಳೆಣಿಕೆಯಷ್ಟು ಇದ್ದ ಭಕ್ತರು ಇಂದು ಅಗಾಧ ಆಧ್ಯಾತ್ಮಿಕ ಕುಟುಂಬವಾಗಿ ಬೆಳೆದು ಭಗವಂತನ ಮತ್ತು ಗುರುವಿನ ಪ್ರೀತಿಯಲ್ಲಿ ಒಂದಾಗಿದ್ದಾರೆ.
ಗುರುದೇವರು ನಮ್ಮೊಡನೆ ಇದ್ದಾಗಲೂ ತಮ್ಮ ಶಿಷ್ಯರ ಕ್ಷೇಮ ಮತ್ತು ಪ್ರಗತಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು ಮತ್ತು ಇಂದಿಗೂ ಹೊಂದಿದ್ದಾರೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಅವರ ಧ್ಯಾನದ ತಂತ್ರಗಳನ್ನು ಶ್ರದ್ಧೆಯಿಂದ ಅಭ್ಯಾಸ ಮಾಡುವ ಮೂಲಕ ಮತ್ತು ಜಗನ್ಮಾತೆಯನ್ನು ಮೆಚ್ಚಿಸುವಂತೆ ನಿಮ್ಮ ಜೀವನವನ್ನು ನಡೆಸುವ ಮೂಲಕ ಎಷ್ಟು ಪ್ರಗತಿ ಹೊಂದುತ್ತಿರುವಿರಿ ಎಂಬುದನ್ನು ನೋಡುವುದು ಅವರಿಗೆ ಹೆಚ್ಚಿನ ಸಂತೋಷವನ್ನು ತರುತ್ತದೆ. ನೀವು ಆಧ್ಯಾತ್ಮಿಕ ತಿಳುವಳಿಕೆಯಲ್ಲಿ ಬೆಳೆಯುತ್ತಿರುವುದನ್ನು ಮತ್ತು ದೇವರೊಂದಿಗೆ ಹೆಚ್ಚು ಹೆಚ್ಚಿನ ಆಳವಾದ ಮತ್ತು ಮಧುರವಾದ ಆಂತರಿಕ ಸಂಬಂಧವನ್ನು ಬೆಳೆಸಿಕೊಳ್ಳುತ್ತಿರುವುದನ್ನು ನೋಡಿ ಅವರು ಸಂತೋಷಪಡುತ್ತಾರೆ, ಏಕೆಂದರೆ ಅವರು ನಿಮಗಾಗಿ ಅತ್ಯುನ್ನತವಾದುದನ್ನೇ ಬಯಸುತ್ತಾರೆ. ಭಗವತ್‌ಪ್ರೇಮ ಮತ್ತು ಸೇವೆಯಂತಹ ದಿವ್ಯ ಆದರ್ಶಗಳ ಮೇಲೆ ಅವರು ನೂರು ವರ್ಷಗಳ ಹಿಂದೆ ಯಾವ ಕಾರ್ಯವನ್ನು ಸ್ಥಾಪಿಸಿದರೋ, ಆ ಆದರ್ಶಗಳನ್ನು ಹೆಚ್ಚು ಹೆಚ್ಚು ಉದಾಹರಿಸುವ ಭಕ್ತರಾಗುವುದೇ ನೀವು ಅವರಿಗೆ ಸಲ್ಲಿಸಬಹುದಾದ ಅತ್ಯುನ್ನತ ಗೌರವ.
ಪರಮಹಂಸಜಿಯವರ ಸಂದೇಶಗಳು ಅನೇಕಾನೇಕ ಜೀವಿಗಳನ್ನು ತಟ್ಟಿವೆ, ಏಕೆಂದರೆ ಅವರು ಆತ್ಮದ ಒಗ್ಗೂಡಿಸುವ ಭಾಷೆಯಲ್ಲಿ ಮಾತನಾಡುತ್ತಾರೆ – ದಿವ್ಯಪ್ರೇಮ ಹಾಗೂ ಶಾಶ್ವತ ಸತ್ಯದ ಭಾಷೆ. ಅವರ ಬೋಧನೆಗಳು ಮತ್ತು ಭಗವಂತನ ಮೇಲೆ ಅವರಿಗಿರುವ ಅಪರಿಮಿತ ಪ್ರೇಮದ ಅಯಸ್ಕಾಂತೀಯ ಶಕ್ತಿಯು, ಎಲ್ಲಾ ಜನಾಂಗದ, ಸಂಸ್ಕೃತಿಯ, ರಾಷ್ಟ್ರಗಳ ಮತ್ತು ಧರ್ಮದ ಮಿತಿಗಳನ್ನು ಮೀರಿ ನಿಲ್ಲುತ್ತವೆ. ವೈಎಸ್‌ಎಸ್/ಎಸ್‌ಆರ್‌ಎಫ್‌ನ ಪ್ರಭಾವವು ಒಂದು ಸಣ್ಣ ಮಂದಮಾರುತದಂತೆ ಆರಂಭವಾಗಿ ಕ್ರಮೇಣ ಒಂದು ಚಂಡಮಾರುತವಾಗಿ ಬದಲಾಗಿ ಭಗವಂತನ ಮಕ್ಕಳ ಜೀವನದಲ್ಲಿರುವ ಅಂಧಕಾರವನ್ನು ಗುಡಿಸಿಹಾಕುತ್ತದೆ ಎಂದು ಗುರುದೇವರು ನಮಗೆ ಹೇಳಿದ್ದಾರೆ. ಈ ಶತಮಾನೋತ್ಸವದ ವರ್ಷದಲ್ಲಿ ನಾವು ಆ ಶಕ್ತಿಯ ಆರಂಭವನ್ನು ಮಾತ್ರವಲ್ಲದೆ ಅದರ ಶಾಶ್ವತ ವೃದ್ಧಿಯನ್ನೂ ಆಚರಿಸುತ್ತೇವೆ; ಹಾಗೂ ಮುಂದಿನ ಶತಮಾನದಲ್ಲಿ ಅದರ ಆಧ್ಯಾತ್ಮಿಕ ಪರಿಣಾಮಗಳು ಇನ್ನೂ ಹೆಚ್ಚಿನ ವೇಗವನ್ನು ಪಡೆದುಕೊಳ್ಳುವುದು ದೈವನಿಯಾಮಕವಾಗಿದೆ. ಗುರೂಜಿಯವರು ವೈಎಸ್‌ಎಸ್/ಎಸ್‌ಆರ್‌ಎಫ್ ಸಂಸ್ಥೆಗಳನ್ನು ಪೂರ್ವ ಮತ್ತು ಪಶ್ಚಿಮ ದೇಶಗಳ ಒಗ್ಗೂಡಿಸುವಿಕೆಯ ಆಶಯವನ್ನು ಸಾಕಾರಗೊಳಿಸಲು ಪ್ರಾರಂಭಿಸಿದ್ದಾರೆ ಮತ್ತು ಅದು ಅವರ ಪ್ರೇಮ ಹಾಗೂ ಜ್ಞಾನದ ಪರಿಶುದ್ಧ ವಾಹಿನಿಯಾಗಿ ಚಿರಸ್ಥಾಯಿಯಾಗಿರಲು ಬಯಸುತ್ತಾರೆ. ಈ ಪವಿತ್ರ ಪರಂಪರೆಯಲ್ಲಿ ಜೀವನವನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವ ನಿಮಗೆಲ್ಲರಿಗೂ ಅವರು ಆಶೀರ್ವದಿಸಲೆಂದು ನಾನು ಪ್ರಾರ್ಥಿಸುತ್ತೇನೆ. ಆ ಪ್ರಯತ್ನಗಳು ತರುವ ಆಂತರಿಕ ಪರಿವರ್ತನೆ ಮತ್ತು ನಿಮ್ಮ ಮೊಗದಲ್ಲಿ ಮಿನುಗುತ್ತಿರುವ, ನಾನು ಕಾಣುತ್ತಿರುವ, ಉತ್ಸಾಹಭರಿತ ಸಂತೋಷವೇ ಈ ದಿವ್ಯಬೋಧನೆಗಳ ನಿತ್ಯ- ಜೀವಂತ ಶಕ್ತಿಯ ಅತಿದೊಡ್ಡ ಸಾಕ್ಷಿಯಾಗಿದೆ ಮತ್ತು ಅದು ಮುಂಬರುವ ವರ್ಷಗಳಲ್ಲೂ ಅವರ ಕಾರ್ಯಕ್ಕೆ ಶಕ್ತಿ ನೀಡುತ್ತಿರುತ್ತದೆ.
ಜೈ ಗುರು!
ಭಗವಂತ ಮತ್ತು ಗುರುಗಳ ನಿರಂತರ ಆಶೀರ್ವಾದದೊಂದಿಗೆ,
ಶ್ರೀ ಶ್ರೀ ಮೃಣಾಲಿನಿ ಮಾತಾ