
ಸರ್ವವನ್ನೂ ಒಳಗೊಳ್ಳುವ ಕ್ರಿಸ್ತ ಪ್ರಜ್ಞೆಯ (ಕೂಟಸ್ಥ ಚೈತನ್ಯ) ಸಾಕಾರರೂಪವಾಗಿದ್ದ, ಪ್ರೀತಿಯ ಅವತಾರ (ಭಗವಂತನ ವೈಯಕ್ತಿಕ ಆವಿರ್ಭಾವ) ಪುರುಷನಾದ ಯೇಸು ಹಾಗೂ ಮಹಾವತಾರ ಬಾಬಾಜಿ, ಭಾರತದ ಕ್ರಿಯಾಯೋಗವನ್ನು ಪಶ್ಚಿಮಕ್ಕೆ ಹರಡುವ ವಿಷಯದಲ್ಲಿ ಶಾಶ್ವತ ಸಂಬಂಧ ಹೊಂದಿದ್ದಾರೆ. ಯೇಸು ಮತ್ತು ಬಾಬಾಜಿಯವರ ಆಜ್ಞೆಯ ಮೇರೆಗೆ ಪರಮಹಂಸ ಯೋಗಾನಂದರು ವಿಶ್ವಾದ್ಯಂತ ಪ್ರಸರಿಸಿದ ಭವ್ಯವಾದ ಬೋಧನೆಗಳು ಮತ್ತು ತಂತ್ರಗಳ ಮೂಲಕ ಅನಂತತೆಯ ಕ್ರಿಸ್ತ ಶಿಶುವಿನ ಜನನಕ್ಕಾಗಿ ನಮ್ಮಲ್ಲಿನ ಪ್ರತಿಯೊಬ್ಬರಿಗೂ ನಮ್ಮ ಹೃದಯದಲ್ಲೇ ತೊಟ್ಟಿಲನ್ನು ಸಿದ್ಧಪಡಿಸುವ ಸಾಧನವನ್ನು ನೀಡಲಾಗಿದೆ. ಧ್ಯಾನದಲ್ಲಿ ಆ ಪವಿತ್ರ ಪ್ರಜ್ಞೆಯೊಂದಿಗಿನ ಸಂಸರ್ಗದಿಂದ, ನಾವು ನಿಜವಾದ “ಕ್ರಿಸ್ತನ ಎರಡನೇ ಬರುವಿಕೆಯನ್ನು” ನಮ್ಮೊಳಗೇ ಕಂಡುಕೊಳ್ಳುತ್ತೇವೆ. ಈ ಪವಿತ್ರ ಋತುವಿನಲ್ಲಿ ಸ್ವರ್ಗೀಯ ಸ್ತರಗಳಿಂದ ವಿಶೇಷ ಶಕ್ತಿಯೊಂದಿಗೆ ಹೊರಹೊಮ್ಮುವ ದಿವ್ಯ ಕಾಂತೀಯತೆ ಮತ್ತು ಅನುಗ್ರಹಗಳು ನಿಮ್ಮ ಧ್ಯಾನಸ್ಥ ಆತ್ಮವನ್ನು ಭಗವಂತನ ಪ್ರೀತಿಪೂರ್ವಕ ಮತ್ತು ಬದುಕನ್ನು ಪರಿವರ್ತಿಸುವ ಉಪಸ್ಥಿತಿಯಲ್ಲಿ ಆಳವಾಗಿ ಸೆಳೆಯಲಿ ಎಂಬುದೇ ನನ್ನ ಹೃತ್ಪೂರ್ವಕ ಪ್ರಾರ್ಥನೆಯಾಗಿದೆ. ಇದು ಎಲ್ಲಾ ಜೀವಿಗಳನ್ನು ಒಂದು ದಿವ್ಯ ಕುಟುಂಬದಲ್ಲಿ ಒಂದುಗೂಡಿಸುತ್ತದೆ. ಇದೇ ಕ್ರಿಸ್‌ಮಸ್‌ನ ನಿಜವಾದ, ಆಧ್ಯಾತ್ಮಿಕ ಆಚರಣೆ, ಇದನ್ನೇ ಪ್ರಪಂಚದಾದ್ಯಂತದ ಪರಮಹಂಸಜಿಯವರ ಅನುಯಾಯಿಗಳು ವರ್ಷದ ಈ ಸಮಯದಲ್ಲಿ ತುಂಬಾ ಎದುರು ನೋಡುವುದು.
ನಂತರ, ನಮ್ಮೊಳಗೆ ಜಾಗೃತಗೊಂಡ ದೈವತ್ವದಿಂದ ನವೀಕೃತರಾಗಿ, ನಾವು ಆ ಪ್ರಜ್ಞೆಯನ್ನು ಕ್ರಿಸ್ಮಸ್ ಸಮಯದ ಸುಂದರವಾದ ಸಾಮಾಜಿಕ ಆಚರಣೆಗಳು ಮತ್ತು ಹಬ್ಬಗಳಿಗೆ ಒಯ್ಯೋಣ — ನಮ್ಮ ಪ್ರೀತಿಪಾತ್ರರಿಗೆ ಬೆಳಕು ಮತ್ತು ಆನಂದವನ್ನು ಹೊರಸೂಸುತ್ತ, ಅವರಿಗೆ ನಮ್ಮ ದಯೆ, ತಿಳುವಳಿಕೆ ಮತ್ತು ಮೆಚ್ಚುಗೆಯ ಉಡುಗೊರೆಗಳನ್ನು ನೀಡೋಣ. ನಮ್ಮೊಳಗಿರುವ ಕ್ರಿಸ್ತನ ಆ ಬೆಳಕಿನೊಂದಿಗೆ ನಾವು ಸಂಪರ್ಕದಲ್ಲಿರುವಾಗ, ನಾವು ಎಲ್ಲಿಗೇ ಹೋದರೂ ಸಹಜವಾಗಿಯೇ ಸಾಮರಸ್ಯವನ್ನು ಹರಡುತ್ತೇವೆ. ಹೊಸ ವರ್ಷದುದ್ದಕ್ಕೂ ನಮ್ಮ ಧ್ಯಾನಗಳಲ್ಲಿ ಮತ್ತು ಇತರರಿಗಾಗಿ ನಮ್ಮ ದಯೆ ಮತ್ತು ಸೇವಾ ಕಾರ್ಯಗಳಲ್ಲಿ ನಮ್ಮ ಪ್ರಜ್ಞೆಯನ್ನು ದಿವ್ಯ ಪ್ರೇಮದಿಂದ ಹೊಸದಾಗಿ ತುಂಬಿಕೊಳ್ಳುತ್ತಿರುವಂತೆ, ಅದು ಪ್ರತಿ ದಿನ ವಿಸ್ತರಿಸುವುದನ್ನು ನಾವು ಅನುಭವಿಸುವಂತಾಗಲಿ, ಹಾಗೂ ಆ ಮೂಲಕ ನಮ್ಮ ಸಮುದಾಯಗಳು, ರಾಷ್ಟ್ರಗಳು ಮತ್ತು ಜಗತ್ತಿನಲ್ಲಿ ನಾವು ಶಾಂತಿ ಮತ್ತು ಸೌಹಾರ್ದತೆಗೆ ವೈಯಕ್ತಿಕ ರೀತಿಯಲ್ಲಿ ಕೊಡುಗೆ ನೀಡುವಂತಾಗಲಿ.
ಈ ಕ್ರಿಸ್‌ಮಸ್‌ನಲ್ಲಿ ನಿಮಗೆ ಮತ್ತು ನಿಮ್ಮ ಆತ್ಮೀಯರಿಗೆ ಇವೇ ನನ್ನಾತ್ಮದ ಶುಭಾಶಯಗಳು — ಸದಾ ಜೀವಂತವಾಗಿರುವ ಯೇಸುವಿನ ಸರ್ವವ್ಯಾಪಕತೆ ಹಾಗೂ ಮನುಕುಲದ ಪ್ರತಿಯೊಬ್ಬ ಸದಸ್ಯನಿಗೂ ಶಾಶ್ವತ ಕೊಡುಗೆಯಾಗಿರುವ ಕ್ರಿಸ್ತ-ಪ್ರೇಮ ಮತ್ತು ಆನಂದಗಳು ನಿಮ್ಮ ಪ್ರಜ್ಞೆಯಲ್ಲಿ ಮತ್ತೊಮ್ಮೆ ಹುಟ್ಟಿಬರಲಿ ಎಂಬ ಶುಭಾಶಯ.
ಅತ್ಯಂತ ದಿವ್ಯಾನಂದವನ್ನನುಭವಿಸುವ ಕ್ರಿಸ್ಮಸ್ ಮತ್ತು ಆಧ್ಯಾತ್ಮಿಕವಾಗಿ ಸಾರ್ಥಕವಾಗುವ ಹೊಸ ವರ್ಷವು ನಿಮ್ಮದಾಗಲಿ!
ಸ್ವಾಮಿ ಚಿದಾನಂದ ಗಿರಿ