
ಪ್ರಿಯ ಬಾಂಧವರೇ,
ನಿಮಗೆಲ್ಲರಿಗೂ ಕ್ರಿಸ್ತಜಯಂತಿಯ ಶುಭ ಹಾರೈಕೆಗಳು! ಭಗವಂತನ ಬೆಳಕು ಮತ್ತು ಆನಂದಗಳು ನಿಮ್ಮ ಗ್ರಹಣಶೀಲ ಹೃದಯಗಳಿಗೆ ಮತ್ತು ವಿಶ್ವದಾದ್ಯಂತ ಇರುವ ನಮ್ಮ ಆಧ್ಯಾತ್ಮಿಕ ಕುಟುಂಬವರ್ಗದವರೆಲ್ಲರಿಗೂ ಮತ್ತು ಸ್ನೇಹಿತರೆಲ್ಲರಿಗೂ ಈ ಪವಿತ್ರ ಋತುವಿನುದ್ದಕ್ಕೂ ಸಮೃದ್ಧವಾಗಿ ಹರಿದು ಬರಲೆಂದು ನಾನು ಪ್ರಾರ್ಥಿಸುತ್ತೇನೆ. ನಮ್ಮ ಮಾನವ ಕುಟುಂಬವು ಎದುರಿಸುತ್ತಿರುವ ಸವಾಲುಗಳನ್ನು ಆಧ್ಯಾತ್ಮಿಕ ಸತ್ಯ ಮತ್ತು ದಿವ್ಯ ಮೌಲ್ಯಗಳ ವಿಜಯಗಳನ್ನಾಗಿ ಪರಿವರ್ತಿಸಲು ಕ್ರಿಸ್ತನ ಮತ್ತು ಗುರುಗಳೆಲ್ಲರ ವಿಶೇಷ ಆಶೀರ್ವಾದಗಳು ನಮ್ಮಲ್ಲಿ ಪ್ರತಿಯೊಬ್ಬರನ್ನು ಉನ್ನತ ಪ್ರಜ್ಞಾವಲಯಕ್ಕೆ ಮೇಲೆತ್ತಲಿ. ಸಾವಿರಾರು ವರ್ಷಗಳ ಹಿಂದೆ ಪುಟ್ಟ ಯೇಸುವಿನ ಜನನದಲ್ಲಿ ಹಾಗೂ ಮತ್ತೊಮ್ಮೆ ವರ್ಷದ ಈ ಪವಿತ್ರ ಸಮಯದಲ್ಲಿ ಮೂಡಿದ ಬೆಳಕು ಹಾಗೂ ಆನಂದಗಳೇ ಕ್ರಿಸ್ತ-ಪ್ರೇಮದ ಬೆಳಕು, ಅದಕ್ಕೆ ನಮ್ಮ ಜೀವನವನ್ನು ಬದಲಿಸುವ ಮತ್ತು ಈ ಪ್ರಪಂಚದ ನೋವುಗಳನ್ನು ಗುಣಪಡಿಸುವ ಶಕ್ತಿಯಿದೆ. ಆ ಬೆಳಕು, ಪ್ರೀತಿ ಮತ್ತು ಆನಂದಗಳೇ, ಭಗವಂತನ ಪ್ರತಿರೂಪದಲ್ಲಿ ಸೃಷ್ಟಿಯಾಗಿರುವ ನಮ್ಮ ಆತ್ಮಗಳ ಪರಮಸತ್ವವಾಗಿದೆ; ಹಾಗೂ ನಾವು ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರೆ, ಅದು ಅಲುಗಾಡಿಸಲಾಗದ ಅಂತರ್ಬೋಧಿತ ವಿಶ್ವಾಸ ಮತ್ತು ಭರವಸೆಯನ್ನು ಹುಟ್ಟುಹಾಕುತ್ತದೆ.
ದ್ವಂದ್ವಗಳ ಈ ಲೋಕದಲ್ಲಿ, ಬದುಕಿನಲ್ಲಿರುವ ವೈಷಮ್ಯ ಹಾಗೂ ಅನಿಶ್ಚಿತತೆಗಳ ಹೊರತಾಗಿಯೂ, ನಮಗೆ ಆ ಪರಮಪಿತನ ಹಾಗೂ ಅವನು ನಮ್ಮ ನೆರವಿಗಾಗಿ ಕಳಿಸಿರುವ ದೇವತಾ ಮನುಷ್ಯರ ಪ್ರೋತ್ಸಾಹ ಮತ್ತು ಆಸರೆಗಳಿಗೆ ಬಾಗಿಲು ಸದಾ ತೆರೆದಿರುತ್ತದೆ. ಪ್ರಭು ಯೇಸುವು ಅಂಥವನಾಗಿದ್ದನು, ಅವನ ಜೀವನವು ದಿವ್ಯ ಗುಣಗಳ ಸುಂದರ ಸ್ವರಮೇಳವಾಗಿದೆ, ಅದರ ಮೂಲಕ ನಾವು ಬಾಹ್ಯ ಪರಿಸ್ಥಿತಿಗಳು ಹಾಗೂ ಮಾನುಷ ಅಜ್ಞಾನದ ಎಲ್ಲ ಮಿತಿಗಳನ್ನು ಮೀರಿ ಮೇಲೇರಬಹುದು ಮತ್ತು ಭಗವತ್‌ಪ್ರಜ್ಞೆಯ ಆಂತರಿಕ ಸ್ವಾತಂತ್ರ್ಯದಲ್ಲಿ ಬದುಕಬಹುದು. ನಮ್ಮ ಗುರು ಪರಮಹಂಸ ಯೋಗಾನಂದರು, ಯೇಸುವಿನ ಆಧ್ಯಾತ್ಮಿಕ ಸಾಧನೆಯನ್ನು ಅಪವಾದವೆಂದು ಪರಿಗಣಿಸಿ ಶ್ಲಾಘಿಸದೆ, ನಾವೆಲ್ಲರೂ ಏನನ್ನು ಅರಿತುಕೊಳ್ಳಬೇಕು ಮತ್ತು ಸಾಧಿಸಬೇಕು ಎಂಬುದಕ್ಕೆ ಒಂದು ಉದಾಹರಣೆಯನ್ನಾಗಿ ಭಾವಿಸಬೇಕು ಎಂದು ನಮಗೆ ನೆನಪಿಸಿದ್ದಾರೆ. ಈ ಶುಭ ಸಮಯದಲ್ಲಿ “ಕ್ರಿಸ್‌ಮಸ್‌ನ ಹುರುಪು” ಅಥವಾ ಸ್ವರ್ಗಾನುಭೂತಿಯ ಅಲೆಗಳು ಈ ಭೂಮಿಯ ಮೇಲೆ ಪಸರಿಸುತ್ತಿರುವಾಗ, ಕ್ರಿಸ್ತನಂತಹ ಗುಣಗಳನ್ನು ವ್ಯಕ್ತಪಡಿಸುವುದು – ಅಲ್ಪ “ನಾನು” ಎಂಬುದನ್ನು ಮೀರಿ ನಮ್ಮ ಕಾಳಜಿಯನ್ನು ವಿಸ್ತರಿಸುವುದು; ನಮ್ಮ ದಯಾಗುಣ, ಹೊಂದಾಣಿಕೆ ಹಾಗೂ ಕ್ಷಮಾಗುಣವನ್ನು ವ್ಯಕ್ತಪಡಿಸುವುದು; ಎಲ್ಲರಲ್ಲಿಯೂ ಒಳ್ಳೆಯದನ್ನು ಮತ್ತು ಭಗವಂತನನ್ನು ಕಾಣುವುದು ಮತ್ತು ನಮ್ರತೆಯಿಂದ ಸೇವೆ ಮಾಡುವುದು ಹೆಚ್ಚು ಸುಲಭವಾಗುತ್ತದೆ. ನಮ್ಮ ಪ್ರತಿಯೊಂದು ಮಹತ್ವಾಕಾಂಕ್ಷೆಯ ಆಲೋಚನೆಯನ್ನು ಉದಾತ್ತ ಕ್ರಿಯೆಯಾಗಿ ಪರಿವರ್ತಿಸಿದಾಗ, ಯೇಸುವು ಬದುಕಿದಂಥ ಕ್ರಿಸ್ತಪ್ರಜ್ಞೆಗೆ ಇನ್ನೂ ಹತ್ತಿರವಾಗುತ್ತೇವೆ.
ಯೇಸುವು ತನ್ನ ಪರಮಪಿತನೊಡನೆ ಆಳವಾದ ಆಂತರಿಕ ಸಂಸರ್ಗದಿಂದಿರುವ ಮೂಲಕ, ತನ್ನ ಶಕ್ತಿ, ಜ್ಞಾನ ಹಾಗೂ ಎಲ್ಲರನ್ನೂ ಒಳಗೊಳ್ಳುವ ಪ್ರೀತಿಯನ್ನು ಪಡೆದುಕೊಂಡ; ಶ್ರದ್ಧೆಯಿಂದ ಕೂಡಿದ ಧ್ಯಾನ ಹಾಗೂ ಪ್ರಾರ್ಥನೆಯಿಂದ ನಮ್ಮಲ್ಲಿನ ಉತ್ತಮವಾದುದನ್ನು ಹೊರತರಲು ಮತ್ತು ಅದರ ಮೂಲಕ ನಮ್ಮ ಕಾಲಘಟ್ಟದ ಭೇದ ಕಲ್ಪಿಸುವ ಪ್ರವೃತ್ತಿಯನ್ನು ಕೊನೆಗೊಳಿಸುವಲ್ಲಿ ನೆರವಾಗಲು ನಾವೂ ಕೂಡ ಆ ಮೂಲವನ್ನು ಅವಲಂಬಿಸಬಹುದು. ಶಾಂತಿಯು ನಮ್ಮೊಳಗಿನಿಂದಲೇ ಪ್ರಾರಂಭವಾಗುತ್ತದೆ. ಈ ಮಾರ್ಗದಲ್ಲಿ, ಯೇಸು ಹಾಗೂ ಬಾಬಾಜಿಯವರ ಆಣತಿಯಂತೆ ನಮ್ಮ ಗುರುಗಳು 100 ವರ್ಷಗಳ ಹಿಂದೆ ಪಶ್ಚಿಮಕ್ಕೆ ತಂದ ಪವಿತ್ರ ವಿಜ್ಞಾನದ ವರಪ್ರಸಾದವು ನಮ್ಮಲ್ಲಿದೆ, ಅದು ನಮಗೆ ಭಗವಂತ ಹಾಗೂ ಸರ್ವವ್ಯಾಪಿ ಕ್ರಿಸ್ತನೊಂದಿಗೆ ಆ ಸಂಪರ್ಕವನ್ನು ಒದಗಿಸಲು ನೆರವಾಗುತ್ತದೆ — ಮತ್ತು ಕ್ರಿಸ್ತಜಯಂತಿಯಂದು ಕ್ರಿಸ್ತನನ್ನು ಕುರಿತು ವಿಶೇಷ ಧ್ಯಾನ ಮಾಡಲು ಅವರು ಹುಟ್ಟುಹಾಕಿದ ಅದ್ಭುತ ಸಂಪ್ರದಾಯವೂ ನಮ್ಮಲ್ಲಿದೆ. ಗುರೂಜಿಯವರು ಹೇಳುತ್ತಾರೆ, “ಕ್ರಿಸ್ತ ಜಯಂತಿಯಂದು ದಿನಪೂರ್ತಿ ಧ್ಯಾನ ಮಾಡುವ ಯೋಜನೆಯನ್ನು ನನಗೆ ನಿಜವಾಗಿ ಯೇಸು ಕ್ರಿಸ್ತನೇ ನೀಡಿದುದು. ಇದರಿಂದ ಅವನು ನಿಮಗೆ ಏನಾದರೂ ಸಹಾಯ ಮಾಡುವ ಆಶಯವನ್ನು ಹೊಂದಿದ್ದಾನೆ.” ಈ ಕ್ರಿಸ್ತಜಯಂತಿಯಂದು ಧ್ಯಾನ ಮಾಡುವಾಗ ಇದನ್ನು ಮತ್ತು ಮೇಲೆ ಹೇಳಿರುವ ಪರಮಹಂಸಜಿಯವರ ಪ್ರೋತ್ಸಾಹದಾಯಕ ನುಡಿಗಳನ್ನು ಕುರಿತು ಚಿಂತನೆ ಮಾಡಿ. ದಿವ್ಯ ಪ್ರೀತಿ, ಶಾಂತಿ ಹಾಗೂ ಆನಂದವೆಂಬ ಕ್ರಿಸ್ತ-ಕೊಡುಗೆಗಳನ್ನು ಸ್ವೀಕರಿಸಲು ನಿಮ್ಮ ಹೃದಯದ ದ್ವಾರಗಳನ್ನು ತೆರೆಯುವ ಮೂಲಕ, ಅವು ನಿಮ್ಮ ವಿಸ್ತರಿಸುತ್ತಿರುವ ಪ್ರಜ್ಞೆಯಿಂದ, ಆಶೀರ್ವಾದದ ರೂಪದಲ್ಲಿ ನಿಮ್ಮ ಕುಟುಂಬವರ್ಗ, ಸ್ನೇಹಿತರು, ನಿಮ್ಮ ಸಮಾಜ ಹಾಗೂ ಪ್ರಪಂಚದಲ್ಲಿ ಉಕ್ಕಿ ಹರಿಯುತ್ತವೆ.
ನಿಮಗೂ, ನಿಮ್ಮ ಪ್ರೀತಿಪಾತ್ರರೆಲ್ಲರಿಗೂ ಆನಂದಮಯ ಕ್ರಿಸ್ತಜಯಂತಿಯ ಶುಭಾಶಯಗಳು,
ಸ್ವಾಮಿ ಚಿದಾನಂದಗಿರಿ
ಕಾಪಿರೈಟ್ © 2020 ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.