ಜನವರಿ 31, 2026 — ನಮ್ಮ ಪ್ರೀತಿಯ ಶ್ರೀ ಶ್ರೀ ದಯಾ ಮಾತಾ, ಮೂರನೇ ಅಧ್ಯಕ್ಷರು ಮತ್ತು ಸಂಘಮಾತಾ, ಅವರ ಪವಿತ್ರ ಜನ್ಮ ವಾರ್ಷಿಕೋತ್ಸವದಂದು — ಯೋಗದಾ ಸತ್ಸಂಗ ಮಾಧ್ಯಮಿಕ ಮಹಾವಿದ್ಯಾಲಯ, (ವೈಎಸ್ಐಎಂ) ಜಗನ್ನಾಥಪುರ ಶೈಕ್ಷಣಿಕ ಆವರಣದಲ್ಲಿ ಅದರ ಪ್ರಸ್ತಾವಿತ ಮಾಧ್ಯಮಿಕ ಮಹಾವಿದ್ಯಾಲಯ ಕಟ್ಟಡದ ಭೂಮಿ ಪೂಜೆಯೊಂದಿಗೆ (ಶಂಕುಸ್ಥಾಪನಾ ಸಮಾರಂಭ) ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿತು.
ವೈಎಸ್‌ಎಸ್ ಸನ್ಯಾಸಿಗಳು, ಶೈಕ್ಷಣಿಕ ಸಂಸ್ಥೆಗಳ ಆಡಳಿತ ಸಮಿತಿಯ ಸದಸ್ಯರು, ಬೋಧಕವರ್ಗ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಭಕ್ತರು ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತದಲ್ಲಿ ತೀರ್ಥಯಾತ್ರೆಗೆಂದು ಆಗಮಿಸಿದ್ದ ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್‌ನ ಸ್ವಾಮಿಗಳಾದ ಕೇಶವಾನಂದರು ಮತ್ತು ಪ್ರಫುಲ್ಲಾನಂದರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೈವಿಕ ಆಶೀರ್ವಾದಗಳ ಆವಾಹನೆ
ಭೂಮಿ ಪೂಜೆಯು ಮುಂಜಾನೆ ಸಾಂಪ್ರದಾಯಿಕ ವೈದಿಕ ವಿಧಿವಿಧಾನಗಳೊಂದಿಗೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಸ್ವಾಮಿ ಗೋಕುಲಾನಂದರು ಯಜಮಾನರಾಗಿ, ಯೋಜನೆಯ ಯಶಸ್ವಿ ಕಾರ್ಯಸಿದ್ಧಿಗಾಗಿ ದೈವಿಕ ಆಶೀರ್ವಾದಗಳನ್ನು ಆಹ್ವಾನಿಸಿದರು.
ಈ ಔಪಚಾರಿಕ ಕಾರ್ಯಕ್ರಮವು ದೀಪ ಬೆಳಗುವುದರೊಂದಿಗೆ ಪ್ರಾರಂಭವಾಯಿತು. ತದನಂತರ ಬ್ರಹ್ಮಚಾರಿ ಭಾಸ್ಕರಾನಂದರಿಂದ ಸಂಕ್ಷಿಪ್ತ ಧ್ಯಾನ ನಡೆಸಲಾಯಿತು. ಅಲ್ಲಿ ನೆರೆದಿದ್ದ ಎಲ್ಲರೂ ಯೋಜನೆಯ ಸುಗಮ ಪೂರ್ಣಗೊಳಿಸುವಿಕೆಗಾಗಿ ಮತ್ತು ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಸೇವಕರು ಹಾಗೂ ಕೆಲಸಗಾರರ ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಗುರುಗಳ ಸಂಕಲ್ಪವನ್ನು ಮುಂದುವರೆಸುವುದು
ಸಂಸ್ಥೆಯ ಪರಂಪರೆಯನ್ನು ಸ್ಮರಿಸುತ್ತಾ, ಶ್ರೀ ಎ. ಕೆ. ಸಕ್ಸೇನಾ (ಯೋಗದಾ ಸತ್ಸಂಗ ಮಹಾವಿದ್ಯಾಲಯದ ಕಾರ್ಯದರ್ಶಿ) ರಾಂಚಿಯಲ್ಲಿರುವ ಯೋಗದಾ ಸತ್ಸಂಗ ಶಿಕ್ಷಣ ಸಂಸ್ಥೆಗಳ ಇತಿಹಾಸವನ್ನು ವಿವರಿಸಿದರು. ನಮ್ಮ ಗುರುದೇವರಾದ ಶ್ರೀ ಶ್ರೀ ಪರಮಹಂಸ ಯೋಗಾನಂದರು ಬ್ರಹ್ಮಚರ್ಯ ವಿದ್ಯಾಲಯವನ್ನು ಸ್ಥಾಪಿಸಿದರು ಮತ್ತು ಅವರ ಜೀವಿತಾವಧಿಯಲ್ಲಿ ಶ್ರೀ ರವೀಂದ್ರನಾಥ ಠಾಕೂರ್ ಹಾಗೂ ಮಹಾತ್ಮಾ ಗಾಂಧೀಜಿಯವರಂತಹ ಪ್ರಖ್ಯಾತ ವ್ಯಕ್ತಿಗಳ ಭೇಟಿಗಳಿಂದ ಇದು ಗೌರವಿಸಲ್ಪಟ್ಟಿತು ಎಂದು ಅವರು ತಿಳಿಸಿದರು.
ಪ್ರಸ್ತಾವಿತ ಮಾಧ್ಯಮಿಕ ಮಹಾವಿದ್ಯಾಲಯದ ನಾಲ್ಕು ಅಂತಸ್ತಿನ ಕಟ್ಟಡವು ಸುಮಾರು 46,500 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುತ್ತದೆ ಹಾಗೂ 30 ತರಗತಿ ಕೊಠಡಿಗಳು, ವಿಜ್ಞಾನ ಪ್ರಯೋಗಾಲಯಗಳು, ಒಂದು ಗ್ರಂಥಾಲಯ, ಆಡಳಿತ ಕಚೇರಿಗಳು ಮತ್ತು ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
ಲೆಫ್ಟಿನೆಂಟ್ ಜನರಲ್ ಜ್ಞಾನ್ ಭೂಷಣ್‌ರವರು (ವೈಎಸ್ಐಎಂನ ಆಡಳಿತ ಸಮಿತಿಯ ಉಪಾಧ್ಯಕ್ಷರು) ಈ ಉಪಕ್ರಮವು, ವೈಎಸ್ಎಸ್‌ನ ಸಮಗ್ರ ಶಿಕ್ಷಣ ವಿಧಾನದ ವಿಶಿಷ್ಟ ಲಕ್ಷಣಗಳಾದ ಸಚ್ಚಾರಿತ್ರ್ಯ, ಶಿಸ್ತು ಮತ್ತು ಸಮರ್ಪಣಾ ಮನೋಭಾವದ ಮೂಲಕ ಈ ಪ್ರದೇಶದ ಯುವಜನರನ್ನು ರೂಪಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಒತ್ತಿಹೇಳಿದರು.
ಸ್ವಾಮಿ ಪವಿತ್ರಾನಂದರು ತಮ್ಮ ಭಾಷಣದಲ್ಲಿ, ನೂತನ ಕಟ್ಟಡವು ಅವಕಾಶವಂಚಿತ ಮಕ್ಕಳಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಿ, ಅವರ ಶಿಕ್ಷಣಕ್ಕೆ ನೆರವು ನೀಡಲಿದೆ ಎಂದು ಒತ್ತಿ ಹೇಳಿದರು. ಗುರುದೇವರ ‘ಬದುಕುವುದು ಹೇಗೆ’ ಎಂಬ ಆದರ್ಶಗಳಲ್ಲಿ ಆಳವಾಗಿ ಬೇರೂರಿರುವ ಈ ಸಂಸ್ಥೆಯು, ಚಾರಿತ್ರ್ಯ ನಿರ್ಮಾಣವನ್ನು ತನ್ನ ಕೇಂದ್ರವಾಗಿಟ್ಟುಕೊಂಡು, ಶರೀರ, ಮನಸ್ಸು ಮತ್ತು ಆತ್ಮದ ಸಮಗ್ರ ಬೆಳವಣಿಗೆಯನ್ನು ಗುರಿಯಾಗಿ ಹೊಂದಿದೆ. ಈ ಯೋಜನೆಯು ₹14 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಅವರು ಘೋಷಿಸಿದರು ಮತ್ತು ದಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಶ್ರೀ ಅರವಿಂದ್ ಕಟಿಯಾರ್ (ಕಾರ್ಯದರ್ಶಿ, ವೈಎಸ್‌ಐಎಂ) ಅವರಿಂದ ಕೃತಜ್ಞತಾ ಅರ್ಪಣೆಯೊಂದಿಗೆ ಸಮಾರಂಭವು ಸಮಾಪ್ತಿಗೊಂಡಿತು. ತದನಂತರ ಪ್ರಸಾದ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.



















