ಇದು ಪರಮಹಂಸ ಯೋಗಾನಂದರ ಖ್ಯಾತ ಕೃತಿ, ಯೋಗಿಯ ಆತ್ಮಕಥೆಯ “ಗುರುವಿನ ಆಶ್ರಮದಲ್ಲಿ ಕಳೆದ ವರ್ಷಗಳು” ಎಂಬ ಅಧ್ಯಾಯದಿಂದ ಆಯ್ದ ಒಂದು ಭಾಗವಾಗಿದೆ. ಇದರಲ್ಲಿ ಅವರು ತಮ್ಮ ಪ್ರಖ್ಯಾತ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರೊಂದಿಗಿನ ಅನೇಕ ಪ್ರೇರಣಾದಾಯಕ ಅನುಭವಗಳನ್ನು ನಿರೂಪಿಸಿದ್ದಾರೆ. ಈ ಕೆಳಗೆ ನೀಡಿರುವುದು ಸ್ವಾಮಿ ಶ್ರೀ ಯುಕ್ತೇಶ್ವರರ ಆಧ್ಯಾತ್ಮಿಕ ಔನ್ನತ್ಯ ಮತ್ತು ಸನಾತನ ಜ್ಞಾನದ ಒಂದು ಇಣುಕು ನೋಟವಾಗಿದೆ. ಈ ಭಾಗದಲ್ಲಿ ಪರಮಹಂಸರು ಶ್ರೀ ಯುಕ್ತೇಶ್ವರರನ್ನು ಸಾಮಾನ್ಯವಾಗಿ “ಮಾಸ್ಟರ್” ಎಂದು ಕರೆಯುತ್ತಾರೆ. ಇದು ತಮ್ಮ ಗುರುಗಳನ್ನು ಗೌರವಪೂರ್ವಕವಾಗಿ ಸಂಬೋಧಿಸುವ ವಿಧಾನವಾಗಿದ್ದು, ತನ್ನಮೇಲೆ ಸಂಪೂರ್ಣ ಸ್ವಾಧೀನತೆಯನ್ನು ಸಾಧಿಸಿದ ಆತ್ಮವನ್ನು ಸೂಚಿಸುತ್ತದೆ.
ಶ್ರೀಯುಕ್ತೇಶ್ವರರೊಡನೆ ನಾನು ಕಳೆದ ಮೊದಲ ಮಾಸಗಳು: “ಸೊಳ್ಳೆಯನ್ನು ವಂಚಿಸುವುದು ಹೇಗೆ.” ಎಂಬ ಉಪಯುಕ್ತ ಪಾಠದೊಡನೆ ಕೊನೆಗೊಂಡವು. ಮನೆಯಲ್ಲಿ ನನ್ನ ಕುಟುಂಬದವರು ರಾತ್ರಿಯಲ್ಲಿ ರಕ್ಷಣೆಗೆ ಯಾವಾಗಲೂ ಪರದೆಯನ್ನು ಬಳಸುತ್ತಿದ್ದರು. ಸಿರಾಂಪುರದ ಆಶ್ರಮದಲ್ಲಿ ಈ ಜಾಣಪದ್ಧತಿಯನ್ನು ಉಲ್ಲಂಘಿಸಿದ್ದುದನ್ನು ಕಂಡು ನನಗೆ ಗಾಬರಿಯಾಯಿತು. ಆದರೂ ಸೊಳ್ಳೆಗಳು ತುಂಬಾ ತುಂಬಿಕೊಂಡಿರುತ್ತಿದ್ದವು; ತಲೆಯಿಂದ ಕಾಲವರೆಗೂ ಅವು ನನ್ನನ್ನು ಕಚ್ಚುತ್ತಿದ್ದವು. ಗುರುವಿಗೆ ನನ್ನ ಮೇಲೆ ಕರುಣೆ ಬಂತು.
“ನಿನಗೆ ಒಂದು ಪರದೆಯನ್ನು ಕೊಂಡುಕೊ; ನನಗೂ ಒಂದು. ನಿನಗೆ ಮಾತ್ರ ನೀನು ಒಂದು ಪರದೆಯನ್ನು ಕೊಂಡುಕೊಂಡರೆ, ಎಲ್ಲಾ ಸೊಳ್ಳೆಗಳೂ ನನಗೇ ಮುತ್ತಿಕೊಳ್ಳುತ್ತವೆ!” ಎಂದು ನಗುತ್ತಾ ಮಾತು ಸೇರಿಸಿದರು.
ಅವರ ಆಜ್ಞಾಪರಿಪಾಲನೆ ಮಾಡುವಲ್ಲಿ ಅವರನ್ನು ಅಭಿನಂದಿಸುವುದಕ್ಕಿಂತ ಮಿಗಿಲಾದ ಶ್ರದ್ಧೆ ನನಗುಂಟಾಯಿತು. ನಾನು ಸಿರಾಂಪುರದಲ್ಲಿ ಕಳೆದ ಪ್ರತಿ ರಾತ್ರಿಯಲ್ಲೂ ಹಾಸಿಗೆಗೆ ಪರದೆಗಳನ್ನು ಕಟ್ಟುವಂತೆ ಗುರುಗಳು ನನಗೇ ಹೇಳುತ್ತಿದ್ದರು.
ಒಂದು ರಾತ್ರಿ, ಸೊಳ್ಳೆಗಳ ಮೋಡವೇ ನಮ್ಮನ್ನು ಸುತ್ತುಗಟ್ಟಿದಾಗ ರೂಢಿಯಂತೆ ನನಗೆ ಆಜ್ಞೆಮಾಡುವುದನ್ನು ಅವರು ಮರೆತರು. ಆ ಸೊಳ್ಳೆಗಳ ನಿರೀಕ್ಷೆಯ ಗಾನವನ್ನು ಭಾವೋದ್ವಿಗ್ನತೆಯಿಂದ ಆಲಿಸಿದೆ. ಹಾಸಿಗೆ ಸೇರಿದ ಮೇಲೆ, ಸಾಧಾರಣವಾಗಿ ಅವು ನುಗ್ಗಿ ಬರುತ್ತಿದ್ದ ದಿಕ್ಕಿಗೆ ತಿರುಗಿ ಅವುಗಳನ್ನು ಶಮನಗೊಳಿಸುವ ಪ್ರಾರ್ಥನೆಯನ್ನು ಮಾಡಿದೆ. ಅರ್ಧಗಂಟೆಯ ತರುವಾಯ ಗುರುಗಳ ಗಮನವನ್ನು ಸೆಳೆಯಲೆಂದು ನಾನು ಕೃತಕವಾಗಿ ಕೆಮ್ಮಿದೆ. ಸೊಳ್ಳೆಗಳು ತಮ್ಮ ರಕ್ತದಾಹವನ್ನು ತೃಪ್ತಿಪಡಿಸುವ ಕಾರ್ಯಾಚರಣೆಯಲ್ಲಿ ತೊಡಗಿ ವಿಶೇಷವಾಗಿ ಝೇಂಕರಿಸುತ್ತಿರಲು, ಅವುಗಳ ಕಡಿತದಿಂದ ನನಗೆ ಹುಚ್ಚು ಹಿಡಿದೀತೆಂದು ಭಾವಿಸಿದೆ.
ಗುರುಗಳಿಂದ ಪ್ರತಿಕ್ರಿಯಾತ್ಮಕವಾದ ಯಾವ ಚಲನೆಯೂ ಕಾಣಲಿಲ್ಲ; ಎಚ್ಚರಿಕೆಯಿಂದ ನಾನವರ ಬಳಿ ಹೋದೆ. ಅವರು ಉಸಿರಾಡುತ್ತಲೇ ಇರಲಿಲ್ಲ. ಅವರು ಯೌಗಿಕ ಸಮಾಧಿಯಲ್ಲಿದ್ದಾಗ ಅದೇ ಮೊದಲು ನಾನು ಅವರನ್ನು ಹತ್ತಿರದಿಂದ ಪರಿಶೀಲಿಸಿದುದು; ನನಗೆ ಭಯವಾಯಿತು.
“ಅವರ ಹೃದಯಕ್ರಿಯೆ ನಿಂತುಹೋಗಿರಬೇಕು!” ಅವರ ಮೂಗಿನ ಕೆಳಗೆ ಒಂದು ಕನ್ನಡಿಯನ್ನು ಹಿಡಿದೆ; ಉಸಿರಾಟದ ಹಬೆಯೇನೂ ಕಾಣಿಸಲಿಲ್ಲ. ಮತ್ತಷ್ಟು ಖಚಿತಪಡಿಸಿಕೊಳ್ಳುವುದಕ್ಕಾಗಿ ಕೆಲವು ನಿಮಿಷಗಳ ಕಾಲ ನನ್ನ ಬೆರಳುಗಳಿಂದ ಅವರ ಬಾಯನ್ನೂ ಮೂಗಿನ ಹೊಳ್ಳೆಗಳನ್ನೂ ಮುಚ್ಚಿದೆ. ಅವರ ದೇಹ ತಣ್ಣಗೆ ಅಚಲವಾಗಿತ್ತು. ನನಗೆ ಗಾಬರಿಯಾಗಿ, ಸಹಾಯಕ್ಕೆ ಜನರನ್ನು ಕರೆಯಲೆಂದು ಬಾಗಿಲ ಕಡೆ ತಿರುಗಿದೆ.
“ಓ ವರ್ಧಿಸುತ್ತಿರುವ ಪ್ರಯೋಗಕರ್ತನೇ! ನನ್ನ ಬಡಪಾಯಿ ಮೂಗೇ!” ಗುರುಗಳು ನಗುತ್ತಿದ್ದುದರಿಂದ ಅವರ ಧ್ವನಿ ಕಂಪಿಸುತ್ತಿತ್ತು. “ಯಾಕಯ್ಯಾ ಮಲಗಲೊಲ್ಲೆ? ನಿನಗೋಸ್ಕರ ಇಡೀ ವಿಶ್ವ ಬದಲಾದೀತೇ? ನೀನೇ ಬದಲಾಗು: ಸೊಳ್ಳೆಯೆಂಬ ಪ್ರಜ್ಞೆಯನ್ನು ದೂರ ಸರಿಸು.”
ನಮ್ರವಾಗಿ ಮತ್ತೆ ಮಲಗಿದೆ. ಒಂದು ಸೊಳ್ಳೆಗೂ ನನ್ನ ಬಳಿ ಬರುವ ಧೈರ್ಯವಾಗಲಿಲ್ಲ. ನನ್ನನ್ನು ಸಂತೋಷಪಡಿಸುವುದಕ್ಕಾಗಿಯೇ ಪರದೆಗಳನ್ನು ತರಲೆಂದು ಮೊದಲು ನನ್ನ ಗುರು ಒಪ್ಪಿಕೊಂಡಿದ್ದುದೆಂದು ನನಗೆ ಅರ್ಥವಾಯಿತು; ಅವರಿಗೆ ಸೊಳ್ಳೆಗಳ ಭಯವೇನೂ ಇರಲಿಲ್ಲ. ಯೌಗಿಕ ಶಕ್ತಿಯಿಂದ ಅವರು ತಮ್ಮನ್ನು ಕಡಿಯದಂತೆ ನಿವಾರಿಸಿಬಿಡುತ್ತಿದ್ದರು; ಇಲ್ಲವೇ ಇಷ್ಟಪಟ್ಟರೆ, ಆಂತರಿಕ ಅಭೇದ್ಯ ನೆಲೆಗೆ ಧಾವಿಸಿಬಿಡುತ್ತಿದ್ದರು.
“ಆ ಯೌಗಿಕ ಸ್ಥಿತಿಯನ್ನು ನಾನು ಗಳಿಸಲು ಯತ್ನಿಸಬೇಕೆಂದು, ಅವರು ನನಗೆ ಪ್ರಯೋಗ ಮಾಡಿ ತೋರಿಸುತ್ತಿದ್ದಾರೆ” ಎಂದು ಭಾವಿಸಿದೆ. ನುಸಿಗಳ ಗದ್ದಲ, ಹಗಲಿನ ವ್ಯಾಪ್ತವಾದ ಕಣ್ಣು ಕೋರೈಸುವ ಬೆಳಕು, ಇಂತಹ ಈ ಭೂಮಿಯಿಂದ ಎಂದಿಗೂ ಇಲ್ಲವಾಗದ ಅಸಂಖ್ಯಾತ ಅಪಕರ್ಷಣೆಗಳನ್ನು ಲಕ್ಷ್ಯಕ್ಕೆ ತಾರದೆ ನಿಜವಾದ ಯೋಗಿ, ಆ ಅತಿಂದ್ರೀಯ ಜ್ಞಾನದ ಸ್ಥಿತಿಯನ್ನು ಪ್ರವೇಶಿಸಿ ಹಾಗೆಯೇ ಮುಂದುವರೆಯಲು ಸಮರ್ಥನಾಗುತ್ತಾನೆ! ಮೊದಲ ಹಂತದ ಸಮಾಧಿಯಲ್ಲಿ (ಸವಿಕಲ್ಪ ಸಮಾಧಿಯಲ್ಲಿ) ಸಾಧಕನು ಬಾಹ್ಯಪ್ರಪಂಚದ ಎಲ್ಲ ಇಂದ್ರಿಯ ಪುರಾವೆಯನ್ನೂ ತಡಗಟ್ಟಿಬಿಡುತ್ತಾನೆ. ಆದಿ ಸ್ಥಿತಿಯ ಈಡನ್ ಗಿಂತಲೂ1 ಮನೋಹರವಾದ ಅಂತರಂಗ ಸಾಮ್ರಾಜ್ಯದ ಶಬ್ದಗಳ ಮತ್ತು ದೃಶ್ಯಗಳ ಪ್ರತಿಫಲ ಅವನಿಗೆ ದೊರೆಯುತ್ತದೆ.
ಆ ಶಿಕ್ಷಣಪ್ರದ ಸೊಳ್ಳೆಗಳು ಸದ್ಯದಲ್ಲೇ ಆಶ್ರಮದಲ್ಲಿ ಮತ್ತೊಂದು ಪಾಠವನ್ನು ಕಲಿಸಲು ಕಾರಣವಾದವು. ಅದೊಂದು ಮುಸ್ಸಂಜೆಯ ಕೋಮಲವಾದ ಸಮಯ. ನನ್ನ ಗುರು ಅಸದೃಶ ರೀತಿಯಲ್ಲಿ ಪ್ರಾಚೀನ ಗ್ರಂಥಗಳನ್ನು ವ್ಯಾಖ್ಯಾನಿಸುತ್ತಿದ್ದರು. ನಾನು ಶಾಂತನಾಗಿ ಅವರ ಪಾದದ ಬಳಿ ಇದ್ದೆ. ಒಂದು ಅಸಂಸ್ಕೃತ ಸೊಳ್ಳೆ ತನ್ನ ಜನಪದ ಗೀತೆಯಿಂದ ನನ್ನ ಗಮನವನ್ನು ಸೆಳೆಯಲು ಸ್ಪರ್ಧಿಸುತ್ತಿತ್ತು. ಚರ್ಮದ ಒಳಕ್ಕೆ ನುಸುಳುವ ತನ್ನ “ವಿಷಪೂರಿತವಾದ ಸೂಜಿ”ಯನ್ನು ಅದು ನನ್ನ ತೊಡೆಯೊಳಕ್ಕೆ ನಾಟಿಸಿದಾಗ, ನಾನು ತತ್ ಕ್ಷಣವೇ ಸೇಡು ತೀರಿಸಿಕೊಳ್ಳುವುದಕ್ಕೆ ಕೈ ಎತ್ತಿದೆ. ಆಸನ್ನ ಮರಣದಂಡನೆಯನ್ನು ವಿಳಂಬ ಮಾಡು! ಅಹಿಂಸೆಯನ್ನು2 ಕುರಿತ ಪತಂಜಲಿಯ ಸೂಕ್ತಿಯೊಂದು ಸಂದರ್ಬೋಚಿತವಾಗಿ ನನ್ನ ನೆನಪಿಗೆ ಬಂತು.
“ನೀನು ಯಾಕೆ ಕೆಲಸ ಮುಗಿಸಿಬಿಡಲಿಲ್ಲ?”
“ಗುರುಗಳೇ! ಅದರ ಪ್ರಾಣ ತೆಗೆಯಬೇಕೆಂದು ಪ್ರತಿಪಾದಿಸುವಿರಾ?”
“ಇಲ್ಲ, ಆದರೆ ನಿನ್ನ ಮನಸ್ಸಿನಲ್ಲಿ ನೀನಾಗಲೇ ಅದಕ್ಕೆ ಸಾಯುವಂತಹ ಪೆಟ್ಟು ಕೊಟ್ಟೆ.”
“ನನಗೆ ಅರ್ಥವಾಗಲಿಲ್ಲ.”
ಅಹಿಂಸಾ ಎಂದರೆ ಪತಂಜಲಿಯ ಅರ್ಥ ಕೊಲ್ಲುವ ಬಯಕೆಯನ್ನೂ ಹೊರದೂಡುವುದು. ನನ್ನ ಮನಸ್ಸಿನಲ್ಲಿ ನಡೆದುದೆಲ್ಲವನ್ನೂ ಶ್ರೀಯುಕ್ತೇಶ್ವರರು ತೆರೆದ ಪುಸ್ತಕದಂತೆಯೇ ಕಂಡಿದ್ದರು. “ಅಹಿಂಸೆಯನ್ನು ಅಕ್ಷರಶಃ ಪಾಲಿಸುವುದಕ್ಕೆ ಈ ಪ್ರಪಂಚ ಪ್ರತಿಕೂಲಕರವಾಗಿ ರಚಿತವಾಗಿದೆ. ದುಷ್ಟ ಜಂತುಗಳನ್ನು ನಾಶ ಮಾಡಲು ಮನುಷ್ಯನಿಗೆ ಒತ್ತಾಯ ಬರಬಹುದು. ಆದರೆ ರೋಷಗೊಳ್ಳುವುದಕ್ಕಾಗಲಿ ದ್ವೇಷ ತಳೆಯುವುದಕ್ಕಾಗಲಿ ಅವನಿಗೆ ಅದೇ ಬಗೆಯ ಒತ್ತಾಯವಿಲ್ಲ. ಈ ಮಾಯೆಯ ವಾತಾವರಣದಲ್ಲಿ ಎಲ್ಲ ಬಗೆಯ ಜೀವಿಗಳಿಗೂ ಸಮಾನವಾದ ಹಕ್ಕಿದೆ. ಸೃಷ್ಟಿಯ ರಹಸ್ಯವನ್ನು ಕಂಡುಹಿಡಿದುಕೊಂಡ ಮಹಾತ್ಮ ಪ್ರಕೃತಿಯ ಅಸಂಖ್ಯಾತ ವಿಸ್ಮಯಕರ ಜೀವಿಗಳೊಡನೆ ಸೌಹಾರ್ದದಿಂದ ವರ್ತಿಸುತ್ತಾನೆ. ವಿನಾಶ ಮಾಡಬೇಕೆಂಬ ಬಯಕೆಯನ್ನು ಮೀರಿದರೆ ಎಲ್ಲ ಮಾನವರೂ ಈ ಸತ್ಯವನ್ನು ಅರ್ಥಮಾಡಿಕೊಂಡಾರು.”
“ಗುರೂಜಿ ಕ್ರೂರಮೃಗವನ್ನು ಕೊಲ್ಲುವುದಕ್ಕಿಂತ ತನ್ನನ್ನೇ ಅದಕ್ಕೆ ಬಲಿಯನ್ನಾಗಿ ಅರ್ಪಿಸಿಕೊಂಡು ಬಿಡಬೇಕೇ?”
“ಇಲ್ಲ, ಮಾನವನ ದೇಹ ಅಮೂಲ್ಯವಾದುದು. ಅನುಪಮವಾದ ಮೆದುಳನ್ನು ಕಶೇರು ರಜ್ಜುವಿನ ಕೇಂದ್ರಗಳನ್ನು ಹೊಂದಿರುವುದರಿಂದ ಅದಕ್ಕೆ ಅತ್ಯಂತ ಹೆಚ್ಚಿನ ವಿಕಾಸಾತ್ಮಕವಾದ ಮೌಲ್ಯವಿದೆ. ಮೆದುಳೂ ಕಶೇರು ರಜ್ಜುವಿನ ಕೇಂದ್ರಗಳೂ ದೇವತ್ವದ ಪರಮೋಚ್ಛ ಸಂಗತಿಗಳನ್ನು ಗ್ರಹಿಸುವುದಕ್ಕೂ ಪ್ರದರ್ಶಿಸುವುದಕ್ಕೂ ಮುಂದುವರಿದ ಸಾಧಕನಿಗೆ ಪೂರ್ಣ ಸಹಾಯ ಮಾಡುತ್ತದೆ. ಅವನಿಗಿಂತ ಕೆಳದರ್ಜೆಯ ಪ್ರಾಣಿಗಳಾವುದಕ್ಕೂ ಆ ಸಜ್ಜಿಕೆಯಿಲ್ಲ. ಒಂದು ಪಶುವನ್ನಾಗಲಿ ಬೇರಾವುದೇ ಪ್ರಾಣಿಯನ್ನಾಗಲಿ ಕೊಲ್ಲಲೇಬೇಕಾದ ಸಂದರ್ಭವಿದ್ದರೆ ಮನುಷ್ಯ ಒಂದು ಸಣ್ಣ ಪಾಪಕ್ಕೆ ಗುರಿಯಾಗುತ್ತಾನೆಂಬುದು ಸತ್ಯ. ಆದರೆ ನಿರುದ್ದೇಶದಿಂದ ದೇಹವನ್ನು ಕಳೆದುಕೊಳ್ಳುವುದು ಕರ್ಮದ ನಿಯಮದಂತೆ ಗಂಭೀರವಾದ ಪಾಪವೆಂದು ಪವಿತ್ರ ಶಾಸ್ತ್ರಗಳು ಬೋಧಿಸುತ್ತವೆ.”
ನಾನು ನಿರಾಳವಾಗಿ ನಿಟ್ಟುಸಿರು ಬಿಟ್ಟೆ. ಮಾನವನ ಸ್ವಾಭಾವಿಕ ಪ್ರವೃತ್ತಿಗಳ ಮೇಲೆ ಶಾಸ್ತ್ರಗಳ ಒತ್ತಡ ಯಾವಾಗಲೂ ಪ್ರಮುಖವಾಗಿರುವುದಿಲ್ಲ.
ನಾನು ತಿಳಿದ ಮಟ್ಟಿಗೆ, ಗುರುಗಳು, ಚಿರತೆ ಅಥವಾ ಹುಲಿಯ ಹತ್ತಿರ ಎಂದೂ ಇದ್ದದ್ದಿಲ್ಲ. ಆದರೆ ಒಂದು ಭಯಂಕರ ನಾಗರಹಾವು ಮಾತ್ರ ಒಮ್ಮೆ ಅವರಿಗೆ ಎದುರು ಬಿದ್ದಿತ್ತು; ಅದೂ ಅವರ ಪ್ರೀತಿಗೆ ಸೋಲುವುದಕ್ಕಾಗಿಯೇ. ಆ ಹಾವಿನೊಡನೆ ಹೋರಾಟ ನಡೆದದ್ದು ಪುರಿಯಲ್ಲಿ; ಅಲ್ಲಿನ ಕರಾವಳಿಯಲ್ಲಿ ಗುರುಗಳ ಆಶ್ರಮವೊಂದಿತ್ತು. ಶ್ರೀಯುಕ್ತೇಶ್ವರರ ಅನಂತರದ ವರ್ಷಗಳಲ್ಲಿ, ಅವರ ಶಿಷ್ಯನಾಗಿದ್ದ ಪ್ರಫುಲ್ಲ, ಆ ಸಂದರ್ಭದಲ್ಲಿ ಗುರುಗಳೊಡನೆ ಇದ್ದ.
ಪ್ರಫುಲ್ಲ ನನಗೆ ಹೀಗೆ ಹೇಳಿದ: “ನಾವು ಹೊರಗಡೆ ಆಶ್ರಮದ ಸಮೀಪದಲ್ಲೇ ಕುಳಿತಿದ್ದೆವು. ಹತ್ತಿರವೇ ನಾಗರಹಾವು ಕಾಣಿಸಿಕೊಂಡಿತು; ನಾಲ್ಕಡಿ ಉದ್ದದ ಅದು ಕೇವಲ ಭಯದ ಸಾಕಾರವಾಗಿತ್ತು. ಅದು ನಮ್ಮತ್ತ ಧಾವಿಸಿ ಬರತೊಡಗಿದಾಗ ಅದರ ಹೆಡೆ ರೋಷದಿಂದ ಹರಡಿತ್ತು. ಮಗುವಿನತ್ತ ಹಿಗ್ಗಿನಿಂದ ನಗೆ ಬೀರುವಂತೆ ಗುರುಗಳು ಅದರತ್ತ ಸ್ವಾಗತದ ಹಿಗ್ಗನ್ನು ಸೂಚಿಸಿದರು. ಶ್ರೀಯುಕ್ತೇಶ್ವರರು ತಮ್ಮ ಕೈಗಳನ್ನು ಛಂಧೊಭದ್ಧವಾಗಿ ತಟ್ಟತೊಡಗಿದುದನ್ನು ನೋಡಿ ನನಗೆ ಭಯ ಆವರಿಸಿತು3. ಆ ಭೀಕರ ಅತಿಥಿಯನ್ನು ಅವರು ರಂಜನೆಗೊಳಿಸುತ್ತಿದ್ದರು. ಒಳಗೇ ಅನನ್ಯ ಭಕ್ತಿಯಿಂದ ಲಘು ಪ್ರಾರ್ಥನೆಯನ್ನು ಸಲ್ಲಿಸುತ್ತಾ ನಾನು ಪೂರ್ಣ ಸ್ಥಬ್ಧನಾಗಿ ಕುಳಿತೆ. ಗುರುಗಳ ತೀರಾ ಸಮೀಪಕ್ಕೆ ಬಂದಿದ್ದ ಸರ್ಪ ಈಗ, ಅವರ ಲಾಲನೆಯ ಭಾವದಿಂದ ಅಕೃಷ್ಟವಾದಂತೆ ತೋರಿ, ಅಚಲವಾಯಿತು. ಭಯಂಕರವಾಗಿದ್ದ ಹೆಡೆ ಬರಬರುತ್ತಾ ಮುದುಡಿಕೊಂಡಿತು; ಕಡೆಗೆ ಸರ್ಪ ಶ್ರೀಯುಕ್ತೇಶ್ವರರ ಪಾದಗಳ ನಡುವೆ ನುಸುಳಿಕೊಂಡು ಹರಿದು ಪೊದೆಗಳಲ್ಲಿ ಮಾಯವಾಯಿತು.”
ಪ್ರಫುಲ್ಲ ಹೀಗೆ ತನ್ನ ಮಾತನ್ನು ಕೊನೆ ಮುಟ್ಟಿಸಿದ: “ಗುರುಗಳು ಏಕೆ ತಮ್ಮ ಕೈಗಳನ್ನು ಆಡಿಸುತ್ತಿದ್ದರು. ಸರ್ಪ ಏಕೆ ಅವರನ್ನು ಕಚ್ಚಲಿಲ್ಲ ಎಂಬುದು ಆಗ ನನಗೆ ವೇದ್ಯವಾಗಲಿಲ್ಲ. ನಮ್ಮ ಗುರುವಿಗೆ ಯಾವುದೇ ಪ್ರಾಣಿಯಿಂದ ಘಾಸಿಯಾಗುವ ಭಯವಿಲ್ಲವೆಂದು ಅದರಿಂದ ಆಮೇಲೆ ಅರ್ಥ ಮಾಡಿಕೊಂಡೆ.”
ಅಡಿಟಿಪ್ಪಣಿಗಳು:
- ಯೋಗಿಯಾದವನು ಹೊರಮುಖವಾದ ಇಂದ್ರಿಯಗಳನ್ನು ಬಳಸದೆ ಯಾವ ಒಂದು ಸರ್ವಜ್ಞತ್ವದ ಶಕ್ತಿಗಳಿಂದ ನೋಡಬಲ್ಲನೋ, ಆಘ್ರಾಣಿಸಬಲ್ಲನೋ, ಸ್ಪರ್ಶಿಸಬಲ್ಲನೋ, ಅಳಿಸಬಲ್ಲನೋ, ಆ ಶಕ್ತಿಗಳನ್ನು ತೈತ್ತಿರೀಯ ಅರಣ್ಯಕದಲ್ಲಿ ಹೀಗೆ ವಿವರಿಸಿದ್ದಾರೆ: “ಕಣ್ಣಿಲ್ಲದವನು ಮುತ್ತಿಗೆ ತೂತು ಕೊರೆದ; ಬೆರಳಿಲ್ಲದವನು ಅದರ ಮೂಲಕ ದಾರವನ್ನು ಪೋಣಿಸಿದ; ಕುತ್ತಿಗೆಯಿಲ್ಲದವನು ಅದನ್ನು ಧರಿಸಿದ; ನಾಲಿಗೆಯಿಲ್ಲದವನು ಅದನ್ನು ಹೊಗಳಿದ.”
- “ಅಹಿಂಸೆಯಲ್ಲಿ ನಿಷ್ಣಾತನಾದವನ ಸಮ್ಮುಖದಲ್ಲಿ (ಯಾವುದೇ ಪ್ರಾಣಿಯ ಬಗ್ಗೆ) ದ್ವೇಷ ತಲೆದೋರುವುದಿಲ್ಲ.” — ಯೋಗ ಸೂತ್ರಗಳು II:35.
- ನಾಗರಹಾವು ತನ್ನ ಅಳತೆಯಲ್ಲಿ ಯಾವುದೇ ಚಲಿಸುವ ವಸ್ತುವನ್ನು ಕ್ಷಿಪ್ರವಾಗಿ ಕಚ್ಚಿಬಿಡುತ್ತದೆ. ಅನೇಕ ಸಂದರ್ಭದಲ್ಲಿ ಪೂರ್ಣ ಸ್ತಬ್ಧರಾಗಿ ಉಳಿಯುವುದೇ ರಕ್ಷಣೆಗಿರುವ ಏಕಮಾತ್ರ ಭರವಸೆ.
ಪ್ರಪಂಚದ ಅತ್ಯಂತ ಪ್ರಸಿದ್ಧ ಆಧ್ಯಾತ್ಮಿಕ ಶ್ರೇಷ್ಠ ಕೃತಿಗಳಲ್ಲಿ ಒಂದಾದ ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆ ಕುರಿತು ಹೆಚ್ಚು ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಈ ಕೃತಿಯು ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯಗಳನ್ನು ಸ್ಪರ್ಶಿಸಿ, ಅವರ ಮನಸ್ಸುಗಳನ್ನು ಸಮೃದ್ಧಿಗೊಳಿಸಿದೆ.



















