ವೈಎಸ್‌ಎಸ್‌ ದತ್ತಿ ತರಬೇತಿ ಕೇಂದ್ರದ ಹಳೆಯ ವಿದ್ಯಾರ್ಥಿಗಳು ಐಐಟಿಗಳಲ್ಲಿ ಸೇರ್ಪಡೆಯಾಗಿದ್ದಾರೆ

3 ಜನವರಿ, 2022

ವೈಎಸ್‌ಎಸ್‌ ನೋಯ್ಡಾ ಆಶ್ರಮದ ದತ್ತಿ ತರಬೇತಿ ಕೇಂದ್ರದಿಂದ ಕಳೆದ ಸಾಲಿನ ಮೂವರು ವಿದ್ಯಾರ್ಥಿಗಳು ಅತ್ಯಂತ ಪ್ರತಿಷ್ಠಿತ ಇಂಡಿಯನ್‌ ಇನ್‌ಸ್ಟಿಟ್ಯೂಟ್ಸ್ ಆಫ್‌ ಟಿಕ್ನಾಲಜಿ ಅಥವಾ ಐಐಟಿಗಳಿಗೆ ಆಯ್ಕೆಯಾಗಿದ್ದಾರೆ. ರೋಹಿಣಿ ಮಿಶ್ರಾ ಐಐಟಿ ಖರಗ್‌ಪುರಕ್ಕೆ ಸೇರಿಕೊಂಡಿದ್ದಾರೆ, ಯೋಗೇಶ್‌ ಲೋಧಿ ಐಐಟಿ, ಪಾಟ್ನದಲ್ಲಿ ಓದುತ್ತಿದ್ದಾರೆ ಮತ್ತು ಅಂಶು ಪಾಲ್‌ ದೆಹಲಿ ಕಾಲೇಜ್‌ ಆಫ್‌ ಇಂಜನೀಯರಿಂಗನ್ನು ಸೇರಲು ಇಷ್ಟ ಪಟ್ಟಿದ್ದಾರೆ.

ದಶಕಗಳ ಹಿಂದೆ ಪ್ರಾರಂಭವಾದ ಈ ತರಬೇತಿ ಕೇಂದ್ರವು ವೈಎಸ್‌ಎಸ್‌ ಆಶ್ರಮದ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಂದ ಬಂದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದೆ. ಒಂಬತ್ತರಿಂದ ಹನ್ನೆರಡನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವರ ಶಾಲಾ ಸಮಯದ ನಂತರ ಆಶ್ರಮದ ಆವರಣದಲ್ಲಿಯೇ ಬೋಧಿಸಲಾಗುತ್ತಿದೆ. ಎಲ್ಲಾ ಉಪನ್ಯಾಸಕರು ವೈಎಸ್‌ಎಸ್‌ನ ಭಕ್ತ-ಸ್ವಯಂಸೇವಕರಾಗಿದ್ದು, ಅವರಲ್ಲಿ ಬಹಳಷ್ಟು ಮಂದಿ, ಮಾಜಿ ಉಪನ್ಯಾಸಕರು ಅಥವಾ ಶೈಕ್ಷಣಿಕ ವೃತ್ತಿಗೆ ಸಂಬಂಧಪಟ್ಟವರೇ ಆಗಿದ್ದಾರೆ.

ಸ್ವಾಮಿ ಸ್ಮರಣಾನಂದ ಗಿರಿ ಮತ್ತು ಭಕ್ತ-ಉಪನ್ಯಾಸಕರ ಜೊತೆ ತರಬೇತಿ ಕೇಂದ್ರದ ಪ್ರತಿಭಾವಂತ ವಿದ್ಯಾರ್ಥಿಗಳು

ಈ ವಿದ್ಯಾರ್ಥಿಗಳಿಗೆ ಅವರು ಆಯ್ಕೆ ಮಾಡಿಕೊಂಡ ಪಠ್ಯಕ್ರಮದಲ್ಲಿನ ವಿಷಯಗಳ ಜೊತೆಜೊತೆಗೆ ಇಂಗ್ಲಿಷ್‌ ಮಾತನಾಡುವುದನ್ನೂ ಹೇಳಿಕೊಡಲಾಗುತ್ತಿದೆ. ಈ ವಿದ್ಯಾರ್ಥಿಗಳು ಹಿಂದಿ ಮಾಧ್ಯಮದಲ್ಲಿ ಓದುತ್ತಿರುವುದರಿಂದ, ಅವರ ಇಂಗ್ಲೀಷ್‌ ಭಾಷೆಯಲ್ಲಿ ಮಾತನಾಡುವ ಕಲೆಯನ್ನು ಉತ್ತಮಗೊಳಿಸಬೇಕಾಗಿದೆ. ಅವರು ತಮ್ಮ ಹನ್ನೆರಡನೇ ತರಗತಿಯನ್ನು ಪೂರೈಸುವ ಹೊತ್ತಿಗೆ ಸಾಮಾನ್ಯ ವಿಷಯಗಳ ಬಗ್ಗೆ ಸರಳ ಇಂಗ್ಲೀಷ್‌ನಲ್ಲಿ ಮಾತನಾಡುವುದನ್ನು ಕಲಿಸುವ ಪ್ರಯತ್ನ ಮಾಡಲಾಗುತ್ತದೆ.

ಇದೇ ರೀತಿ, ವಿದ್ಯಾರ್ಥಿಗಳ ಶೈಕ್ಷಣಿಕ ಫಲಿತಾಂಶ, ಅವರ ಆಸಕ್ತಿ ಮತ್ತು ಅವರ ಆರ್ಥಿಕ ಸ್ಥಿತಿಗತಿ ಇತ್ಯಾದಿಗಳ ಆಧಾರದ ಮೇಲೆ ಅವರ ವೃತ್ತಿಯ ಆಯ್ಕೆಯ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ಉದಾಹರಣೆಗೆ, ಹನ್ನೆರಡನೇ ತರಗತಿಯನ್ನು ಪೂರೈಸಿದ ವಿದ್ಯಾರ್ಥಿನಿಯ ಪೋಷಕರು ಅವಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲು ಆರ್ಥಿಕವಾಗಿ ಅಸಮರ್ಥರಾಗಿದ್ದ ಕಾರಣ, ಆಕೆಗೆ, ಎರಡು ವರ್ಷಗಳ ಡಿಪ್ಲೋಮ ತರಬೇತಿಯನ್ನು ಪಡೆದು ವೈದ್ಯಕೀಯ-ಲ್ಯಾಬೊರೆಟರಿ ಸಹಾಯಕಿಯಾಗುವಂತೆ ಸಲಹೆ ನೀಡಲಾಯಿತು. ವೈಎಸ್‌ಎಸ್‌ ಸಂಸ್ಥೆಯು ಆಕೆಯ ಕಾಲೇಜು ಶುಲ್ಕದ ಒಂದು ಭಾಗವನ್ನು ಭರಿಸಲು ವಿದ್ಯಾರ್ಥಿವೇತನವನ್ನೂ ನೀಡಿತು. ಆಕೆಯು ಈಗ ತನ್ನ ವ್ಯಾಸಂಗವನ್ನು ಮುಗಿಸಿ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳೆ.

ತರಬೇತಿ ಕೇಂದ್ರದ ಉಪನ್ಯಾಸಕರು ಈ ಮೂವರು ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಸಹಾಯವನ್ನು ಪ್ರಾಮಾಣಿಕತೆಯಿಂದ ನೀಡಿದ್ದು, ಅವರು ಎಲ್ಲಾ ರಂಗಗಳಲ್ಲಿಯೂ ಉತ್ತಮ ಸಾಧನೆ ಮಾಡಲು ಮತ್ತು ಉನ್ನತ ಗುರಿಯನ್ನು ತಲುಪಲು ನೆರವಾಗುವಂತಹ ಶಿಸ್ತುಬದ್ಧ ಜೀವನವನ್ನು ನಡೆಸಲು ಸಹಾಯ ಮಾಡಿದ್ದಾರೆ. ಅವರಿಗೆ ತಮ್ಮ ವೃತ್ತಿಯ ಆಯ್ಕೆಯ ಬಗ್ಗೆಯೂ ಮಾರ್ಗದರ್ಶನ ಮಾಡಿದ್ದಾರೆ.

ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಸಂಸ್ಥೆಯ ಜೊತೆ ತಮ್ಮ ಉಪನ್ಯಾಸಕರುಗಳ ಮೂಲಕ ವಿಶೇಷ ಸಂಬಂಧವನ್ನು ಬೆಳೆಸಿಕೊಂಡ ಈ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವನ್ನು ಕೋರಿ ವೈಎಸ್‌ಎಸ್‌ಅನ್ನು ಸಂಪರ್ಕಿಸಿದ್ದರು. ಅವರ ಶೈಕ್ಷಣಿಕ ಸಾಧನೆಯನ್ನು ಗಮನಿಸಿದ ವೈಎಸ್‌ಎಸ್‌ ಸಂಸ್ಥೆಯು ಅವರ ಕಾಲೇಜು ಶುಲ್ಕದ ಹೆಚ್ಚಿನಾಂಶವನ್ನು ಭರಿಸಿ ಅವರಿಗೆ ಸಹಾಯ ಮಾಡುತ್ತಿದೆ.

para-ornament

ಭಾರತದಾದ್ಯಂತ ಪರಮಹಂಸ ಯೋಗಾನಂದರ ಯೋಗದಾ ಸತ್ಸಂಗ ಸಂಸ್ಥೆಯು ಕೈಗೊಂಡಿರುವ ಆಧ್ಯಾತ್ಮಿಕ ಮತ್ತು ಇತರ ದತ್ತಿ ಕಾರ್ಯಗಳು, ಶೈಕ್ಷಣಿಕ ಮತ್ತು ವೈದ್ಯಕೀಯ ಸೇವೆಗಳಿಗೆ ನೀವೂ ಸಹ ಕಾಣಿಕೆಗಳನ್ನು ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಲಿಂಕ್‌ನ್ನು ಒತ್ತಿ:

ಇದನ್ನು ಹಂಚಿಕೊಳ್ಳಿ