ಶ್ರೀ ದಯಾ ಮಾತಾ, 1955 ರಿಂದ 2010 ರಲ್ಲಿ ಅವರು ಸ್ವರ್ಗಸ್ಥರಾಗುವವರೆಗೂ ವೈಎಸ್‌ಎಸ್/ಎಸ್‌ಆರ್‌ಎಫ್‌ನ ಮೂರನೇ ಅಧ್ಯಕ್ಷರಾಗಿ ಮತ್ತು ಸಂಘಮಾತಾ ಆಗಿ ಸೇವೆ ಸಲ್ಲಿಸಿದರು, ಅವರ “ಬಿ ನರಿಷ್ಡ್ ಬೈ ದ ಸೋಲ್” (ಆತ್ಮದಿಂದ ಪೋಷಣೆ ಪಡೆಯಿರಿ) ಲೇಖನದ ಆಯ್ದ ಭಾಗಗಳು ಈ ಕೆಳಗಿನಂತಿವೆ. ದಯಾ ಮಾತಾ ಅವರ ಸಂಪೂರ್ಣ ಲೇಖನವನ್ನು ಯೋಗದಾ ಸತ್ಸಂಗ ಪತ್ರಿಕೆಯ ಏಪ್ರಿಲ್-ಜೂನ್ 2020 ರ ಸಂಚಿಕೆಯ ಡಿಜಿಟಲ್ ಆವೃತ್ತಿಯಲ್ಲಿ ಓದಬಹುದು, ಇದು ನಮ್ಮ ವೆಬ್‌ಸೈಟ್‌ನ ಯೋಗದಾ ಸತ್ಸಂಗ ಪುಟದಲ್ಲಿ ಲಭ್ಯವಿದೆ; ಮತ್ತು ಇದು ಯೋಗದಾ ಸತ್ಸಂಗ ಪತ್ರಿಕೆಯ ಚಂದಾದಾರರಿಗೆ ಲಭ್ಯವಿರುವ ಲೇಖನಗಳ ವ್ಯಾಪಕ ಆನ್‌ಲೈನ್ ಗ್ರಂಥಭಂಡಾರದಲ್ಲಿರುವ ಹಿಂದಿನ ಅನೇಕ ಲೇಖನಗಳಲ್ಲಿ ಒಂದಾಗಿದೆ.

ಮನುಕುಲವು ಸಮತೋಲಿತ ಆಧ್ಯಾತ್ಮಿಕ ಜೀವನ ಕಲೆಯನ್ನು ಅಳವಡಿಸಿಕೊಳ್ಳಬೇಕು ಮತ್ತು ಅದು ಒಂದು ಜಾಗತಿಕ ಕುಟುಂಬವಾಗಿ ಹೊಂದಿಕೊಳ್ಳಲು ಕಲಿಯಬೇಕು. ಸ್ಫೋಟಗೊಳ್ಳುತ್ತಿರುವ ತಾಂತ್ರಿಕ ಪ್ರಗತಿಯ ಈ ಯುಗದಲ್ಲಿ ನಾವು ಅನುಭವಿಸುವ ಒತ್ತಡಗಳು ಮತ್ತು ಆತಂಕಗಳು ನಮಗೆ ಎಂದೋ ಒಂದು ದಿನ ಈ ಪಾಠಗಳನ್ನು ಕಲಿಯುವಂತೆ ಮಾಡೇಮಾಡುತ್ತವೆ.
ಪರಮಹಂಸ ಯೋಗಾನಂದರು ಇದನ್ನು ವರ್ಷಗಳ ಹಿಂದೆಯೇ ಕಂಡುಕೊಂಡರು ಮತ್ತು ನಮಗೆ ಅನೇಕ ಬಾರಿ ಹೇಳಿದರು: “ಜಗತ್ತು ಸರಳ ಜೀವನಕ್ಕೆ ಮರಳಬೇಕಾದ ದಿನ ಬರಲಿದೆ. ಭಗವಂತನಿಗಾಗಿ ಸಮಯ ಮಾಡಿಕೊಳ್ಳಲು ನಾವು ನಮ್ಮ ಜೀವನವನ್ನು ಸರಳಗೊಳಿಸಬೇಕಾಗಿದೆ. ನಾವು ಹೆಚ್ಚು ಭ್ರಾತೃತ್ವದ ಪ್ರಜ್ಞೆಯಿಂದ ಬದುಕಬೇಕಾಗಿದೆ, ಏಕೆಂದರೆ ನಾಗರಿಕತೆಯು ಉನ್ನತ ಯುಗಕ್ಕೆ ವಿಕಸನಗೊಳ್ಳುತ್ತಿದ್ದಂತೆ, ಜಗತ್ತು ಚಿಕ್ಕದಾಗುವುದನ್ನು ನಾವು ಕಾಣುತ್ತೇವೆ. ಪೂರ್ವಾಗ್ರಹ, ಅಸಹಿಷ್ಣುತೆ ಹೋಗಬೇಕು.”
ಯೇಸುವು ಹೇಳಿದ್ದಾನೆ, “ತನ್ನಲ್ಲೇ ಒಡಕು ಹುಟ್ಟಿರುವ ಮನೆಯು ನಿಲ್ಲಲಾರದು.” ವಿಜ್ಞಾನವು ರಾಷ್ಟ್ರಗಳನ್ನು ಪರಸ್ಪರ ಹತ್ತಿರಕ್ಕೆ ತಂದಿದೆ, ಅಂದರೆ ಒಮ್ಮೆ ವಿಶಾಲವಾಗಿದ್ದ ಜಗತ್ತು ಈಗ ಒಂದು ಕುಟುಂಬದಂತಾಗಿದೆ, ಅದರ ಪ್ರತಿಯೊಬ್ಬ ಸದಸ್ಯನೂ ಪರಸ್ಪರ ಸಂಬಂಧ ಹೊಂದಿದ್ದಾನೆ ಹಾಗೂ ಇತರರ ಮೇಲೆ ಅವಲಂಬಿತನಾಗಿದ್ದಾನೆ.
ನಮ್ಮ ಕಾಲದ ಒಡಕುಂಟುಮಾಡುವ ಪ್ರವೃತ್ತಿಗಳ ನಡುವೆ, ಒಂದು ಚಿಕ್ಕ ಕುಟುಂಬವೂ ಒಟ್ಟಿಗೆ ಇರಲು ಕಷ್ಟವಾಗಿರುವಾಗ, ಇಡೀ ಜಗತ್ತಿನ ಏಕತೆಗೆ ಭರವಸೆ ಇದೆಯೇ? ಭರವಸೆ ಇದೆ — ವೈಯಕ್ತಿಕ ಕುಟುಂಬಗಳಿಗೆ ಮತ್ತು ಎಲ್ಲ ರಾಷ್ಟ್ರಗಳ ಜಾಗತಿಕ ಕುಟುಂಬದ ನಡುವಿನ ಸಂಬಂಧಗಳಿಗೆ — ನಿಜವಾದ ಶಾಂತಿ ಮತ್ತು ಆಧ್ಯಾತ್ಮಿಕ ಅರಿವಿಗೆ ಅನುಕೂಲಕರವಾದ ಗುರಿಗಳು ಮತ್ತು ಮೌಲ್ಯಗಳನ್ನು ಪೋಷಿಸಲು ನಾವು ಸಮಯವನ್ನು ನೀಡಿದ್ದೇ ಆದರೆ….
ನಾವು ಬೆಂಬತ್ತಿ ಹೋಗುವ ಗುರಿಗಳು ನಮ್ಮ ಆತ್ಮಗಳನ್ನು ತೃಪ್ತಿಪಡಿಸುವುದಿಲ್ಲ ಎಂದು ನಾವು ಹೆಚ್ಚು ಹೆಚ್ಚು ಅರಿತುಕೊಳ್ಳುತ್ತಿದ್ದೇವೆ, ವಿಶೇಷವಾಗಿ ಪಾಶ್ಚಿಮಾತ್ಯ ಜಗತ್ತಿನಲ್ಲಿ. ಮುಂದಿನ ಪೀಳಿಗೆಗಳಲ್ಲಿ, ಪಾಶ್ಚಿಮಾತ್ಯ ಭೌತಿಕ ಮೌಲ್ಯಗಳನ್ನು ಅತಿಯಾಗಿ ಆರಾಧಿಸುತ್ತಿರುವ ಮತ್ತು ಅನುಕರಿಸುವ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದೇ ತಿಳುವಳಿಕೆ ಹೊರಹೊಮ್ಮುವುದನ್ನು ನಾವು ನೋಡಲಿದ್ದೇವೆ.
ಜೀವನದ ನಿಜವಾದ ಉದ್ದೇಶ
ಜೀವನದ ಬಾಹ್ಯ ಪರಿಸ್ಥಿತಿಗಳನ್ನು ಸುಧಾರಿಸುವಲ್ಲಿ ನಾವು ಸಾಕಷ್ಟನ್ನು ಸಾಧಿಸಿದ್ದೇವೆ, ಆದರೆ ಅತ್ಯಂತ ಪ್ರಮುಖ ಸಾಧನೆಯನ್ನು ನಿರ್ಲಕ್ಷಿಸಿದ್ದೇವೆ – ನಮ್ಮನ್ನು ಉತ್ತಮರನ್ನಾಗಿಸಿಕೊಂಡು ಬದಲಾಗಲು, ನಮ್ಮನ್ನು ಅರಿತುಕೊಳ್ಳಲು, ನಾವು ಏಕೆ ಹುಟ್ಟಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಜೀವನದಲ್ಲಿ ನಮ್ಮ ನಿಜವಾದ ಉದ್ದೇಶವನ್ನು ಅರಿತುಕೊಳ್ಳಲು.
“ಜೀವನದ ಗುರಿಯೇ ಸತ್ಯವನ್ನು ಅರಿತುಕೊಳ್ಳುವುದು” ಎಂದು ಪರಮಹಂಸಜಿ ಹೇಳಿದ್ದಾರೆ. “ನಮಗೆ ಇತರ ಗುರಿಗಳಿವೆ ಎಂದು ನಾವು ಭಾವಿಸಬಹುದು, ಮತ್ತು ನಾವು ಕೆಳಮಟ್ಟದ ಗುರಿಗಳನ್ನು ಹೊಂದಿರಬಹುದು; ಆದರೆ ಅಂತಿಮವಾಗಿ, ಒಂದು ಜನ್ಮದಲ್ಲಾಗಲಿ ಅಥವಾ ಮತ್ತೊಂದರಲ್ಲಾಗಲಿ, ಸಾಧಿಸಲು ಇರುವುದು ಒಂದೇ ಗುರಿ ಎಂದು ಮನುಷ್ಯನಿಗೆ ಅರಿವಾಗುತ್ತದೆ ಮತ್ತು ಆ ಗುರಿಯೇ ತಾನು ಭಗವಂತನ ಪ್ರತಿರೂಪವಾಗಿರುವ ಆತ್ಮ ಎಂದು ವಾಸ್ತವದಲ್ಲಿ ತಿಳಿದುಕೊಳ್ಳುವುದು; ಹಾಗೂ ಸತ್ಯವೇ ಆಗಿರುವ ಆ ಭಗವಂತನನ್ನು ಅರಿತುಕೊಳ್ಳುವುದು.”…
ಧ್ಯಾನವು ಬಾಹ್ಯ ಜೀವನವನ್ನು ಆಂತರಿಕ ಮೌಲ್ಯಗಳೊಂದಿಗೆ ಜತೆಗೂಡಿಸುತ್ತದೆ
ಧ್ಯಾನವು ನಮ್ಮ ಬಾಹ್ಯ ಜೀವನವನ್ನು ಆತ್ಮದ ಆಂತರಿಕ ಮೌಲ್ಯಗಳೊಂದಿಗೆ ಜತೆಗೂಡಿಸುವಲ್ಲಿ ಜಗತ್ತಿನ ಬೇರಾವುದೂ ಮಾಡದಷ್ಟು ಸಹಾಯ ಮಾಡುತ್ತದೆ. ಇದು ಕುಟುಂಬ ಜೀವನ ಅಥವಾ ಇತರರೊಂದಿಗಿನ ಸಂಬಂಧಗಳಿಂದ ದೂರ ಮಾಡುವುದಿಲ್ಲ. ಬದಲಿಗೆ, ಇದು ನಮ್ಮನ್ನು ಹೆಚ್ಚು ಪ್ರೀತಿಯುಳ್ಳವರನ್ನಾಗಿಯೂ, ಹೆಚ್ಚು ತಿಳುವಳಿಕೆಯುಳ್ಳವರನ್ನಾಗಿಯೂ ಮಾಡುತ್ತದೆ — ಇದು ನಾವು ನಮ್ಮ ಪತಿ, ನಮ್ಮ ಪತ್ನಿ, ನಮ್ಮ ಮಕ್ಕಳು ಮತ್ತು ನಮ್ಮ ನೆರೆಹೊರೆಯವರ ಸೇವೆ ಮಾಡಲು ಬಯಸುವಂತೆ ಮಾಡುತ್ತದೆ.
ನಮ್ಮ ಹಿತಚಿಂತನೆಯಲ್ಲಿ ನಾವು ಇತರರದನ್ನೂ ಸೇರಿಸಿದಾಗ ಮತ್ತು ನಮ್ಮ ಆಲೋಚನೆಗಳನ್ನು “ನಾನು ಮತ್ತು ನನ್ನದು” ಎಂಬುದನ್ನು ಮೀರಿ ವಿಸ್ತರಿಸಿದಾಗ ನಿಜವಾದ ಆಧ್ಯಾತ್ಮಿಕತೆಯು ಪ್ರಾರಂಭವಾಗುತ್ತದೆ. …
ಹೆಚ್ಚಿನವರು ಧ್ಯಾನದಿಂದ ದೂರವಿರಬಯಸುತ್ತಾರೆ, ಏಕೆಂದರೆ ಅವರಿಗೆ ನಿಜವಾಗಿಯೂ ಸಮಯವಿಲ್ಲವೆಂದಲ್ಲ, ಆದರೆ ಅವರು ತಮ್ಮನ್ನು ತಾವು ಎದುರಿಸಬಯಸುವುದಿಲ್ಲ — ಅದು ಧ್ಯಾನದ ಆಂತರಿಕೀಕರಣದಲ್ಲಿ ಆಗೇ ಆಗುವಂಥದ್ದು. ತಾವು ಇಷ್ಟಪಡದಿರುವಂಥದ್ದು ಅವರೊಳಗೆ ಬಹಳವಿದೆ, ಆದ್ದರಿಂದಲೇ ಅವರು ಮಾಡಿಕೊಳ್ಳಬೇಕಾದ ಸ್ವ-ಸುಧಾರಣೆಗಳ ಬಗ್ಗೆ ಹೆಚ್ಚು ಆಳವಾಗಿ ಯೋಚಿಸದೆ, ಬಾಹ್ಯ ವಿಷಯಗಳಲ್ಲೇ ಮನಸ್ಸನ್ನು ನಿರತವಾಗಿರಿಸಿಕೊಳ್ಳುವುದು ಲೇಸು ಎಂದುಕೊಳ್ಳುತ್ತಾರೆ. ಅಂತಹ ಮಾನಸಿಕ ಸೋಮಾರಿತನದಿಂದ ದೂರವಿರಿ. ಮಾನಸಿಕ ಸೋಮಾರಿತನವು ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗುವ ಪ್ರಮುಖ ಅಡಚಣೆಗಳಲ್ಲಿ ಒಂದಾಗಿದೆ ಎಂದು ಪತಂಜಲಿಯು ತನ್ನ ಯೋಗ ಸೂತ್ರಗಳಲ್ಲಿ ಸೂಚಿಸಿದ್ದಾನೆ. ಮಾನಸಿಕ ಸೋಮಾರಿತನವು, “ಭಗವಂತನೇ ನಾಳೆ ನಾನು ನಿನ್ನ ಬಗ್ಗೆ ಯೋಚಿಸುತ್ತೇನೆ. ಇಂದು ನಾನು, ನೀನು ಕೊಟ್ಟಿರುವ ಚಿಂತೆಗಳಲ್ಲಿ ಮುಳುಗಿಹೋಗಿದ್ದೇನೆ,” ಎಂದು ಹೇಳುವಂತೆ ಮಾಡುತ್ತದೆ….
ಇದ್ದಷ್ಟರಲ್ಲೇ ತೃಪ್ತಿಪಟ್ಟುಕೊಳ್ಳುವುದರಿಂದಾಗುವ ದುರಂತವೆಂದರೆ, ಹೆಚ್ಚಿನ ಜನರು ತಮ್ಮ ಹೃದಯವು ಹಿಂಸೆ, ದುಃಖ, ಹತಾಶೆ, ಸಂಕಷ್ಟದಿಂದ ಹಿಂಡಿಹೋಗುವವರೆಗೆ ತಮ್ಮ ಆಧ್ಯಾತ್ಮಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಏನನ್ನೂ ಮಾಡುವುದಿಲ್ಲ. ಹಾಗಾದಾಗ ಮಾತ್ರ ಅವರು ಭಗವಂತನನ್ನು ಅರಸುವತ್ತ ನೋಡುತ್ತಾರೆ. ಅಂತಹ ಬೇಗುದಿಯನ್ನು ಅನುಭವಿಸುವವರೆಗೆ ಏಕೆ ಕಾಯಬೇಕು? ಈಗ ನಾವು ಧ್ಯಾನದಲ್ಲಿ ಅಲ್ಪ ಮಾತ್ರ ಪ್ರಯತ್ನ ಮಾಡಿದರೂ ಭಗವಂತನನ್ನು ಅನುಭವಿಸುವುದು ಬಹಳ ಸರಳ.
ಆನಂದದಿಂದ ಬದುಕಿ
ಪರಮಹಂಸ ಯೋಗಾನಂದರು ನಮಗೆ ತೋರಿಸಿದಂತಹ ಭಗವಂತನಲ್ಲಿ ಬದುಕುವ ಸಮತೋಲಿತ ಜೀವನವು ಬಹಳ ಅದ್ಭುತ ರೀತಿಯಲ್ಲಿ ವಿಭಿನ್ನ ಮತ್ತು ತೃಪ್ತಿಕರವಾದುದು: “ಜಗನ್ಮಾತೆಯೇ, ನನಗೆ ಸಂತೋಷದಿಂದ ಬದುಕಲು ಕಲಿಸು. ನನ್ನ ಐಹಿಕ ಕರ್ತವ್ಯಗಳನ್ನು ಮತ್ತು ಸೃಷ್ಟಿಯ ಅಸಂಖ್ಯಾತ ಸೌಂದರ್ಯಗಳನ್ನು ನಾನು ಸುಖಿಸುವಂತಾಗಲಿ. ನಿನ್ನ ಪ್ರಕೃತಿಯ ಅದ್ಭುತ ಜಗತ್ತನ್ನು ವೀಕ್ಷಿಸಲು ಮತ್ತು ಪ್ರಶಂಸಿಸಲು ನನ್ನ ಇಂದ್ರಿಯಗಳಿಗೆ ತರಬೇತಿ ನೀಡಲು ನನಗೆ ನೆರವಾಗು. ನಿನ್ನಲ್ಲಿರುವ ಉತ್ಸಾಹದಿಂದ ನಾನು ಎಲ್ಲ ಮುಗ್ಧ ಸಂತೋಷಗಳನ್ನು ಸವಿಯುವಂತಾಗಲಿ. ನಿರಾಕರಣೆ ಮತ್ತು ಅನಗತ್ಯವಾದ ಸಂತೋಷನಾಶಕ ಮನೋಭಾವಗಳಿಂದ ನನ್ನನ್ನು ಉಳಿಸು.”
ಇದು ನನಗೆ ವಿಶೇಷವಾಗಿ ಇಷ್ಟವಾಗುತ್ತದೆ: “ನಿನ್ನಲ್ಲಿರುವ ಉತ್ಸಾಹದಿಂದ ನಾನು ಎಲ್ಲ ಮುಗ್ಧ ಸಂತೋಷಗಳನ್ನು ಸವಿಯುವಂತಾಗಲಿ.” ಭಗವಂತನನ್ನು ಅರಸುತ್ತಿರುವಾಗ, ನೀವು ತುಂಬಾ ಗಂಭೀರವಾಗಿರಬೇಕು ಎಂದು ಜನರು ಅಂದುಕೊಂಡಿದ್ದಾರೆ! ಆದರೆ ಅಂತಹ ಹುಸಿ ಧರ್ಮನಿಷ್ಠೆ ಆತ್ಮಕ್ಕೆ ಸೇರಿದ್ದಲ್ಲ. ಪರಮಹಂಸಜಿಯವರೂ ಸೇರಿದಂತೆ ನಾನು ಭೇಟಿಯಾದ ಮತ್ತು ಒಡನಾಡಿದ್ದ ಅನೇಕ ಸಂತರು ಸಂತೋಷದಿಂದಿದ್ದರು, ಸಹಜವಾಗಿದ್ದರು ಹಾಗೂ ಮಗುವಿನಂತಿದ್ದರು. ಮಗುವಿನಂತೆ ಎಂದರೆ, ಬಾಲಿಶ — ಅಪಕ್ವ, ಬೇಜವಾಬ್ದಾರಿಯ ಎಂಬರ್ಥದಲ್ಲಿ ನಾನು ಹೇಳುತ್ತಿಲ್ಲ; ನಾನು ಹೇಳುತ್ತಿರುವ ಅರ್ಥದಲ್ಲಿ ಮಗುವಿನಂತೆ ಎಂದರೆ — ಅತ್ಯಂತ ಸರಳವಾದ ಸಂತೋಷಗಳನ್ನು ಆನಂದಿಸುವವರು, ಸಂತೋಷದಿಂದ ಬದುಕುವವರು.
ಜೀವನದ ನಿಜವಾದ ಸಂತೋಷಗಳು
ಇಂದು ಪಾಶ್ಚಿಮಾತ್ಯ ನಾಗರಿಕತೆಯಲ್ಲಿ ಜನರಿಗೆ ಸರಳವಾದ ವಿಷಯಗಳನ್ನು ಹೇಗೆ ಆನಂದಿಸಬೇಕೆಂದು ತಿಳಿದಿಲ್ಲ. ಅವರು ತಮ್ಮ ಅಭಿರುಚಿಯಲ್ಲಿ ಎಷ್ಟು ಜಡ್ಡುಗಟ್ಟಿ ಹೋಗಿದ್ದಾರೆ ಎಂದರೆ ಅವರಿಗೆ ಯಾವುದೂ ತೃಪ್ತಿ ನೀಡುವುದಿಲ್ಲ: ಬಾಹ್ಯದಲ್ಲಿ ಅತಿಯಾಗಿ ಪ್ರಚೋದಿಸಲ್ಪಟ್ಟ, ಆಂತರಿಕವಾಗಿ ಹಸಿದಿರುವ ಮತ್ತು ಶೂನ್ಯವಾಗಿರುವ, ಅವರು ಮರೆಯಲೆಂದು ಕುಡಿಯಲಾರಂಭಿಸುತ್ತಾರೆ ಅಥವಾ ಮಾದಕವಸ್ತುಗಳನ್ನು ಸೇವಿಸುತ್ತಾರೆ. ಸಮಕಾಲೀನ ಸಂಸ್ಕೃತಿಯ ಮೌಲ್ಯಗಳು ಅನಾರೋಗ್ಯಕರ ಮತ್ತು ಅಸ್ವಾಭಾವಿಕ; ಆದ್ದರಿಂದಲೇ ಅದು, ಸ್ವಾಸ್ಥ್ಯ ಕಳೆದುಕೊಳ್ಳದಿರುವ, ನಿಜವಾದ ಸಮತೋಲಿತ ವ್ಯಕ್ತಿಗಳು ಮತ್ತು ಕುಟುಂಬಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲು ವಿಫಲವಾಗುತ್ತದೆ. ಮತ್ತು ಈ ದೇಶದಲ್ಲಿ ಮಾತ್ರವಲ್ಲ; ಮೌಲ್ಯ ಹೀನತೆ ಎಲ್ಲ ದೇಶಗಳಲ್ಲಿ ಹರಡುತ್ತಿದೆ, ಭಾರತದಲ್ಲಿಯೂ ಸಹ.
ನಾವು ಜೀವನದ ಸರಳ ಸಂತೋಷಗಳಿಗೆ ಹಿಂತಿರುಗೋಣ. ನಿಮ್ಮ ರಜೆಯ ದಿನದಂದು ನೀವು ಎಂದಾದರೂ ಪರ್ವತಗಳಿಗೆ ಅಥವಾ ಮರುಭೂಮಿಗೆ ಅಥವಾ ಬೇರೆ ಯಾವುದಾದರೂ ಶಾಂತ ಸ್ಥಳಕ್ಕೆ ಹೋಗಿ, ವಿಹಾರಪ್ರವಾಸ ಮಾಡಿ, ಶಾಂತವಾಗಿ ಕುಳಿತು ಭಗವಂತನ ಬಗ್ಗೆ ಯೋಚಿಸಿದ್ದೀರಾ? ಇವೇ ನಿಜವಾದ ಸಂತೋಷಗಳು; ಪ್ರಕೃತಿಯ ಸೌಂದರ್ಯದಲ್ಲಿ ಭಗವಂತನ ಉಪಸ್ಥಿತಿಯನ್ನು ಆಸ್ವಾದಿಸುವ ಸೂಕ್ಷ್ಮತೆಯನ್ನು ನೀವು ಬೆಳೆಸಿಕೊಂಡರೆ ಅವು ಎಂತಹ ಸಂತೋಷವನ್ನು ಕೊಡುತ್ತವೆ.
ಸಮುದ್ರವನ್ನು ಅಥವಾ ಬೇರಾವುದೋ ನೈಸರ್ಗಿಕ ದೃಶ್ಯಾವಳಿಗಳನ್ನು — ಸುಂದರವಾದ ಹುಲ್ಲು, ಸುಂದರವಾದ ಮರಗಳನ್ನೂ ಕೂಡ — ನೋಡುವಾಗ ನಾನು ಅದರಿಂದ ಎಂತಹ ರೋಮಾಂಚನವನ್ನು ಅನುಭವಿಸುತ್ತೇನೆಂದರೆ. ಅದನ್ನು ನಾವೆಲ್ಲರೂ ಮಾಡಬಹುದು.
ನೀವು ಹೇಳಬಹುದು, “ಆದರೆ, ಅದು ಬಹಳ ನೀರಸವಾಗಿರುತ್ತದೆ.” ಆದರೆ ಚಲನಚಿತ್ರಕ್ಕೆ ಹೋದಾಗ ನೀವು ಸಾಮಾನ್ಯವಾಗಿ ಪ್ರಕ್ಷುಬ್ಧತೆ ಮತ್ತು ಖಿನ್ನತೆಯಿಂದ ಮರಳುತ್ತೀರಿ. ಅದರ ಬದಲು ಕೇವಲ ಒಮ್ಮೆ ಇದನ್ನು ಪ್ರಯತ್ನಿಸಿ. ಚಲನಚಿತ್ರಕ್ಕೆ ನೀವು ಮನರಂಜನೆಗಾಗಿ ಹೋದಿರಿ, ಆದರೆ ಅದು ನಿಮಗೆ ಸಂತೋಷವನ್ನು ನೀಡಲಿಲ್ಲ. ಅದರ ಬದಲು, ಸೌಂದರ್ಯ ಮತ್ತು ಏಕಾಂತತೆ ಇರುವ ನೈಸರ್ಗಿಕ ಸ್ಥಳಗಳನ್ನು ಹುಡುಕಿ ಮತ್ತು ಭಗವಂತನ ಸೃಷ್ಟಿಯ ಮೂಲಕ ಮಾತನಾಡುವ ಅವನ ಮೌನ ಧ್ವನಿಯನ್ನು ಆಲಿಸಿ. ಅದು ನಿಮಗೆ ಎಂತಹ ಶಾಂತಿಯನ್ನು ತರುತ್ತದೆ!
ಆಧ್ಯಾತ್ಮಿಕ ಸರಳತೆ ಹಾಗೂ ಸಮೃದ್ಧ ಶಾಂತಿ ಮತ್ತು ಆನಂದದ ಜೀವನವನ್ನು ನಡೆಸಲು ಪರಮಹಂಸ ಯೋಗಾನಂದರು ನೀಡಿರುವಂಥ ಪ್ರಾಯೋಗಿಕ ವಿಧಾನಗಳು ಮತ್ತು ಮಾರ್ಗದರ್ಶನವನ್ನು ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳ ಬಯಸಿದರೆ, ಯೋಗದಾ ಸತ್ಸಂಗ ಪಾಠಗಳಿರುವ ನಮ್ಮ ವೆಬ್‌ಸೈಟ್ ಪುಟವನ್ನು ಭೇಟಿ ಮಾಡಬಹುದು, ಇದು ಧ್ಯಾನದ ವಿಜ್ಞಾನ ಮತ್ತು ಸಮತೋಲಿತ ಬದುಕಿನ ಕಲೆಯಲ್ಲಿ ತಮ್ಮ ವೈಯಕ್ತಿಕ ಬೋಧನೆಯನ್ನು ಒದಗಿಸಲು ಪರಮಹಂಸಜಿಯವರು ಆರಂಭಿಸಿದ ಗೃಹಾಧ್ಯಯನದ ಕೋರ್ಸ್.