
60 ವರ್ಷಗಳಿಗಿಂತಲೂ ಅಧಿಕ ಕಾಲ ಪರಮಹಂಸ ಯೋಗಾನಂದರ ಸನ್ಯಾಸಿ ಶಿಷ್ಯರಾಗಿದ್ದ ನಮ್ಮ ಪೂಜ್ಯ ಸ್ವಾಮಿ ಶಾಂತಾನಂದ ಗಿರಿಯವರು ಲಾಸ್ ಏಂಜಲೀಸ್‌ನ ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಅಂತರರಾಷ್ಟ್ರೀಯ ಕೇಂದ್ರಕಾರ್ಯಾಲಯದಲ್ಲಿ ಬುಧವಾರ, ಜನವರಿ 4 (ಪೆಸಿಫಿಕ್ ಕಾಲಮಾನ), 2023ರಂದು ಶಾಂತವಾಗಿ ಸ್ವರ್ಗಸ್ಥರಾದರು.
ಸ್ಮರಣಾರ್ಥ ಕಾರ್ಯಕ್ರಮ
ಅಸಂಖ್ಯಾತ ಸದಸ್ಯರು ಮತ್ತು ಸ್ನೇಹಿತರಿಗೆ ಸ್ಫೂರ್ತಿ ನೀಡಿದ ಮತ್ತು ಗುರುಗಳ ಕಾರ್ಯಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಪ್ರೇಮಪೂರ್ಣ ಶಿಷ್ಯರಾದ ಸ್ವಾಮಿ ಶಾಂತಾನಂದರ ಸ್ಮರಣಾರ್ಥ ಕಾರ್ಯಕ್ರಮವು ಗುರುವಾರ, ಜನವರಿ 26ರಂದು ನಡೆಯಿತು. ಸ್ವಾಮಿ ಶುದ್ಧಾನಂದ ಗಿರಿಯವರು ನಡೆಸಿಕೊಟ್ಟ ಈ ಕಾರ್ಯಕ್ರಮವು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ರಾಂಚಿ ಆಶ್ರಮದಿಂದ ಜಗದಾದ್ಯಂತ ನೇರ ಪ್ರಸಾರವಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನ ಚತುರ್ವೇದಿ ಮತ್ತು ಡಾ. ಕೆ. ವಿ. ರಾಮ ರಾವ್, ಇಬ್ಬರೂ ಭಾರತದ ಬೇರೆ ಪ್ರದೇಶಗಳಿಂದ ಮಾತನಾಡಿದ್ದೂ ಸೇರಿದಂತೆ ಇತರ ವೈಎಸ್‌ಎಸ್ ಸ್ವಾಮಿಗಳ ಪ್ರಶಂಸನಾ ಭಾಷಣಗಳೂ ಸೇರಿದ್ದವು.
“ಆನಂದಮಯ ಮಹಾಕಾವ್ಯ”
ಇತರ ಪ್ರಶಂಸನಾ ಭಾಷಣಗಳ ನಂತರ, ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು ಸ್ವಾಮಿ ಶಾಂತಾನಂದರ ಬಗ್ಗೆ ಸ್ಫೂರ್ತಿದಾಯಕ ನುಡಿಗಳನ್ನಾಡಿದರು. ಅವರ ಅಭಿನಂದನೆಯ ಆಯ್ದ ಭಾಗಗಳು ಹೀಗಿವೆ:
“ನಮ್ಮಲ್ಲಿ ಬಹಳಷ್ಟು ಜನರಿಗೆ — ನಾನೂ ಸೇರಿದಂತೆ — ಅತ್ಯಂತ ಪ್ರೀತಿಪಾತ್ರ ಸ್ನೇಹಿತರಾಗಿದ್ದ ನಮ್ಮ ನಲ್ಮೆಯ ಸ್ವಾಮಿ ಶಾಂತಾನಂದಜಿ ಅವರ ಸ್ಫೂರ್ತಿ ಮತ್ತು ದಿವ್ಯ ಗುಣಗಳನ್ನು ನೆನಪಿಸಿಕೊಳ್ಳುವಾಗ ನನ್ನ ಹೃದಯ ತುಂಬಿ ಬರುತ್ತದೆ.
“ಅವರ ಜೀವನ, ಮತ್ತು ಭಕ್ತಾದಿಗಳು ಹಂಚಿಕೊಂಡ ಅನೇಕ ಕಥೆಗಳು ಮತ್ತು ಉಪಾಖ್ಯಾನಗಳು ಮತ್ತು ನೆನಪುಗಳ ಬಗ್ಗೆ ಯೋಚಿಸುವಾಗ, ನನ್ನ ಮನಸ್ಸು ನಮ್ಮ ಪೂಜ್ಯ ಗುರುದೇವರು ಅವರ ಕಾರ್ಯದ ಬೆಳಗವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ನೆನಪಿಸಿಕೊಳ್ಳುತ್ತಾ, ‘ಇದೊಂದು ಆನಂದಮಯ ಮಹಾಕಾವ್ಯ’ ಎಂದು ಹೇಳುತ್ತಿದ್ದುದು ನೆನಪಿಗೆ ಬರುತ್ತದೆ. ನಮ್ಮ ನಲ್ಮೆಯ ಸ್ವಾಮಿಯವರು ಬೀರಿದ ಅದ್ಭುತ ಪ್ರಭಾವದ ಬಗ್ಗೆ ಪ್ರಶಂಸನಾ ನುಡಿಗಳನ್ನು ಕೇಳುವಾಗ ಒಬ್ಬರು ಅದನ್ನಲ್ಲದೇ ಬೇರೇನನ್ನೂ ಭಾವಿಸುವುದು ಸಾಧ್ಯವಾಗುವುದಿಲ್ಲ. 1952ರಲ್ಲಿ ಪರಮಹಂಸಜಿ ತಮ್ಮ ಭೌತ ಶರೀರದಿಂದ ನಿರ್ಗಮಿಸಿದಾಗ ಆ ‘ಆನಂದಮಯ ಮಹಾಕಾವ್ಯ’ ಅಲ್ಲಿಗೇ ನಿಲ್ಲಲಿಲ್ಲ. ಆ ಮಹಾಕಾವ್ಯವನ್ನು ಇಂದಿಗೂ ಬರೆಯಲಾಗುತ್ತಿದೆ; ಮತ್ತು ಆ ಮಹಾಕಾವ್ಯದಲ್ಲಿ ನಮ್ಮ ನಲ್ಮೆಯ ಸ್ವಾಮೀಜಿ ಖಂಡಿತಾಗಿ ಒಂದು ಸ್ಮರಣೀಯ ಮತ್ತು ಸ್ಫೂರ್ತಿದಾಯಕ ಅಧ್ಯಾಯವನ್ನು ಹೊಂದಿದ್ದಾರೆ.
“ಅವರು ನಿರೂಪಿಸಿದ ಸ್ಫೂರ್ತಿಯ ಬಗ್ಗೆ ಯೋಚಿಸುವಾಗ — ಒಬ್ಬ ಶಿಷ್ಯನಾಗಿ, ಒಬ್ಬ ಕ್ರಿಯಾಬಾನ್ ಆಗಿ, ಒಬ್ಬ ಯೋಗಿಯಾಗಿ ಮತ್ತು ಭಗವಂತನ ಪ್ರೇಮಿಯಾಗಿ ಮತ್ತು ಗುರುದೇವರ ಭಕ್ತನಾಗಿ — ನಮ್ಮ ನಲ್ಮೆಯ ಸ್ವಾಮೀಜಿಯವರನ್ನು ಸಂಕೇತಿಸುವ ಆ ಗುಣವಿದ್ದರೆ ಸಾಕು ಪ್ರತಿಯೊಬ್ಬ ಭಕ್ತನೂ ಎಂತಹ ಬೆರಗುಗೊಳಿಸುವ ಮತ್ತು ಮಹಾಕಾವ್ಯದಂತಹ ಸುಂದರ ಜೀವನವನ್ನು ನಡೆಸಬಹುದು ಎಂಬುದಕ್ಕೆ ಬಂದು ನಿಲ್ಲುತ್ತದೆ: ಆ ಗುಣವೇ, ಸ್ವ-ವಿಸ್ಮೃತಿ — ಭಗವಂತ ಮತ್ತು ಗುರುಗಳು ತಮ್ಮ ದಿವ್ಯ ಪ್ರೇಮ, ಜ್ಞಾನ, ಆನಂದ ಮತ್ತು ಸ್ಫೂರ್ತಿಯಿಂದ ಪ್ರವಹಿಸಲು ಸಾಧ್ಯವಾಗುವಂತೆ ತನ್ನನ್ನು ತಾನು ಹಾದಿಯಿಂದ ಪಕ್ಕಕ್ಕಿಡುವುದು. ಸ್ವ-ವಿಸ್ಮೃತಿಯಿಂದಾಗಿ ಪ್ರವಹಿಸುವ ದಿವ್ಯ ಶಕ್ತಿಯು ಕೇವಲ ಸ್ವಾಮಿಗಳು ಮತ್ತು ತ್ಯಾಗಿಗಳು ಅನುಭವಿಸುವಂತಹದಲ್ಲ. ಇದು ಈ ಮಾರ್ಗವನ್ನು ಅನುಸರಿಸುವ ಪ್ರತಿಯೊಬ್ಬ ಭಕ್ತನದ್ದೂ ಆಗಿದೆ. ‘ನನ್ನ ಇಚ್ಛೆಯಂತಲ್ಲ, ನಿನ್ನ ಇಚ್ಛೆಯಂತಾಗಲಿ; ನಿನ್ನ ಇಚ್ಛೆಗನುಸಾರ ನನ್ನನ್ನು ಬಳಸಿಕೋ,’ ಎಂದು ನಾವು ಭಗವಂತ ಮತ್ತು ಗುರುಗಳಿಗೆ ಎಷ್ಟು ಹೆಚ್ಚು ಹೇಳುತ್ತೇವೋ, ಅಷ್ಟೇ ಹೆಚ್ಚು ನಾವು ಅದನ್ನು ಮನಗಾಣುತ್ತೇವೆ. ಈ ದಿವ್ಯ ಗ್ರಹಿಕೆಯ ನಿರಂತರ ದೃಢೀಕರಣ ಮತ್ತು ಆಧ್ಯಾತ್ಮಿಕ ಶಕ್ತಿಯ ಆವಾಹನೆ ಸ್ವಾಮೀಜಿಯವರ ಇಡೀ ಬದುಕಾಗಿತ್ತು.”


ಸ್ವಾಮಿ ಶಾಂತಾನಂದರ ಭಗವಂತನ ಏಕ-ಮುಖ ಭಕ್ತಿ ಹಾಗೂ ಪರಮಹಂಸ ಯೋಗಾನಂದರ ಕ್ರಿಯಾ ಯೋಗದ ಬೋಧನೆಗಳ ಅವರ ನಿರರ್ಗಳವಾದ ಮತ್ತು ವಿವೇಚನಾಯುಕ್ತ ಪ್ರಸ್ತುತಿಗಾಗಿ ಅವರನ್ನು ಬಹಳ ಭಯಭಕ್ತಿಗಳಿಂದ ಕಾಣಲಾಗುತ್ತಿತ್ತು ಮತ್ತು ಅದು ವೈಎಸ್‌ಎಸ್/ಎಸ್‌ಆರ್‌ಎಫ್ ಭಕ್ತಾದಿಗಳು ಮತ್ತು ಸನ್ಯಾಸಿಗಳಿಬ್ಬರ ಹೃದಯಗಳನ್ನೂ ಮುಟ್ಟಿತ್ತು.
ಪರಮಹಂಸ ಯೋಗಾನಂದರ ಭಾರತದಲ್ಲಿಯ ಕಾರ್ಯಕ್ಕೆ ಅವರು ನೀಡಿದ ಎಡೆಬಿಡದ ಬದ್ಧತೆಗೆ ಅವರನ್ನು ವಿಶೇಷವಾಗಿ ನೆನಪಿಸಿಕೊಳ್ಳಲಾಗುತ್ತದೆ – ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್‌ಎಸ್) – ಅಲ್ಲಿ ಅವರು ವೈಎಸ್‌ಎಸ್‌ನ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾ ಮತ್ತು ಇತರ ಕಾರ್ಯಗಳೊಂದಿಗೆ ಅದರ ಪ್ರಕಟಣೆಗಳು, ಶಿಕ್ಷಣ, ಕಾನೂನು, ಕೇಂದ್ರ ಮತ್ತು ಆರ್ಥಿಕ ವಿಭಾಗಗಳಿಗೆ ನೆರವಾಗುತ್ತಾ ಸುಮಾರು ಐದು ದಶಕಗಳ ಕಾಲ ಇದ್ದುಕೊಂಡು ಸೇವೆ ಸಲ್ಲಿಸಿದರು.
ಆರಂಭದ ಬದುಕು
ಆಂಟಿಯೋಚ್, ಕ್ಯಾಲಿಫೋರ್ನಿಯಾದಲ್ಲಿ ಜುಲೈ 28, 1932ರಂದು ಪೌಲ್ ಸ್ಟೀಲೆ ಫ್ಲೀಟ್‌ವುಡ್ ಎಂದು ಜನಿಸಿದ ಸ್ವಾಮಿ ಶಾಂತಾನಂದರು ಒಂದು ಸಂತೋಷಭರಿತ ಮತ್ತು ಸಮರಸ ಬಾಲ್ಯವನ್ನು ಕಳೆದರು. 1950ರಲ್ಲಿ ಕ್ಯಾಲಿಫೋರ್ನಿಯಾದ ಕಾನ್‌ಕಾರ್ಡ್ ಶಾಲೆಯಿಂದ ಪದವೀಧರರಾದರು. 1954ರಲ್ಲಿ ಬರ್ಕ್‌ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಕೆಮಿಕಲ್ ಎಂಜಿನೀಯರಿಂಗ್‌ನಲ್ಲಿ ಬ್ಯಾಚಲರ್ ಆಫ್ ಸೈನ್ಸ್ ಪದವಿಯನ್ನು ಪಡೆದರು ಮತ್ತು ಕೊಲರಾಡೋನ ಗ್ರೀಲೆಯಲ್ಲಿರುವ ಕೊಲಾರಾಡೋ ಸ್ಟೇಟ್ ಕಾಲೇಜ್‌ನಲ್ಲಿ ಫಿಸಿಕಲ್ ಸೈನ್ಸ್‌ನಲ್ಲಿ ಮಾಸ್ಟರ್ಸ್ ಪದವಿಯನ್ನು ಮುಂದುವರೆಸಿದರು.
ಅವರ ವಿಶಿಷ್ಟ ವಿದ್ವತ್ಪೂರ್ಣ ಅಧ್ಯಯನಗಳ ಹೊರತಾಗಿಯೂ, ಸ್ವಾಮಿ ಶಾಂತಾನಂದರ ಅತಿಮುಖ್ಯ ಬಯಕೆಯೇನಾಗಿತ್ತೆಂದರೆ, ಒಬ್ಬ ಭಗವತ್-ಸಾಕ್ಷಾತ್ಕಾರ ಹೊಂದಿದ ಗುರುವಿನ ಆಶ್ರಮವನ್ನು ಸೇರುವುದು, ಇದು 1960ರಲ್ಲಿ ಅವರನ್ನು ಲಾಸ್ ಏಂಜಲೀಸ್‌ನ ಎಸ್‌ಆರ್‌ಎಫ್ ಸನ್ಯಾಸಿಗಳ ಸಮುದಾಯದತ್ತ ಕರೆದುಕೊಂಡು ಹೋಯಿತು. ಒಬ್ಬ ಸನ್ಯಾಸಿಯಾಗಬೇಕೆಂದು ಬರೆದ ಅವರ ಅರ್ಜಿಯಲ್ಲಿ ಅವರು, “ನನ್ನ ಅಲ್ಪ ಸಾಮರ್ಥ್ಯಗಳಿಗನುಗುಣವಾಗಿ ನಾನು ಭಗವಂತನನ್ನು ಅರಸಬೇಕು” ಎಂದು ಬರೆದಿದ್ದರು.
ಭಾರತದಲ್ಲಿಯ ದಿನಗಳು
ಅವರು 1963ರಲ್ಲಿ ಎಸ್‌ಅರ್‌ಎಫ್‌ನ ಮದರ್ ಸೆಂಟರ್‌ನಲ್ಲಿ ಬ್ರಹ್ಮಚಾರಿ ದೀಕ್ಷೆಯನ್ನು ಸ್ವೀಕರಿಸಿದ ನಂತರ, ಶ್ರೀ ದಯಾ ಮಾತಾಜಿ ಶಾಂತಾನಂದರನ್ನು ವೈಎಸ್‌ಎಸ್ ರಾಂಚಿ ಹಾಗೂ ದಕ್ಷಿಣೇಶ್ವರದ ಆಶ್ರಮಗಳಿಗೆ ಕಳಿಸಿದರು. ಅಲ್ಲಿ ಅವರು (ಲಾಸ್ ಏಂಜಲೀಸ್‌ನ ಎಸ್‌ಆರ್‌ಎಫ್ ಸನ್ಯಾಸಿಗಳ ಆಶ್ರಮ ಕೇಂದ್ರಕ್ಕೆ ವಾಪಸ್ ಬರುವವರೆಗೆ ಅಲ್ಲಿ 2011ರ ವರೆಗೆ ಇರುತ್ತಾ) ದಣಿವಿಲ್ಲದೇ ಮತ್ತು ಬಹಳ ಆನಂದದಿಂದ ಸೇವೆ ಮಾಡಿದರು. ಜುಲೈ 4, 1971ರಂದು ಅವರು ಅಂತಿಮ ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡರು.
ಅವರು ಭಾರತದಲ್ಲಿದ್ದ ಹಲವಾರು ವರ್ಷಗಳ ಕಾಲದಲ್ಲಿ, ಸ್ವಾಮಿ ಶಾಂತಾನಂದರು ಶ್ರೀ ದಯಾ ಮಾತಾರವರಿಂದ ಅಡಿಗಡಿಯ ಮಾರ್ಗದರ್ಶನ ಮತ್ತು ನಿರ್ದೇಶನವನ್ನು ಪಡೆದರು. ಆಕೆಯ ಅನೇಕ ಭಾರತದ ಪ್ರವಾಸಗಳಲ್ಲಿ ಅವರು ಆಕೆಯ ಮತ್ತು ಇತರ ಸಹಾಯಕರೊಂದಿಗೆ ಪಯಣಿಸಿದರು, ಆಕೆ ಇವರ ನೆಟ್ಟಗಮನದ ಸಹಾಯದ ಮೇಲೆ ಬಲವಾಗಿ ನಂಬಿಕೆಯಿಟ್ಟಿದ್ದರು. ಅದರ ಜೊತೆಗೆ, ಸುಮಾರು ಎರಡು ವರ್ಷಗಳಿಗೊಮ್ಮೆ ಅವರು ಆಕೆಯನ್ನು ಲಾಸ್ ಏಂಜಲೀಸ್‌ನಲ್ಲಿ ಭೇಟಿ ಮಾಡಿ ಭಾರತದಲ್ಲಿಯ ಪರಮಹಂಸಜಿಯವರ ಕಾರ್ಯದ ಬೆಳವಣಿಗೆಯ ಬಗ್ಗೆ ಮುಖ್ಯವಾದ ವಿಷಯಗಳನ್ನು ಚರ್ಚಿಸುತ್ತಿದ್ದರು. ಹೀಗೆ ಸ್ವಾಮಿ ಶಾಂತಾನಂದರು ವೈಎಸ್ಎಸ್ ಅನ್ನು ಅದು ಈಗಿರುವ ಬಲಿಷ್ಠ ಆಧ್ಯಾತ್ಮಿಕ ಸಂಸ್ಥೆಯನ್ನಾಗಿ ಪರಿವರ್ತಿಸುವಲ್ಲಿ ಹಾಗೂ ಈಗ ಉಚ್ಛ್ರಾಯಸ್ಥಿತಿಯಲ್ಲಿರುವ ವೈಎಸ್ಎಸ್ ಸನ್ಯಾಸಿಗಳ ಶ್ರೇಣಿಯನ್ನು ಒಂದು ಸುಭದ್ರವಾದ ಬುನಾದಿಯ ಮೇಲೆ ನಿಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ದಯಾ ಮಾತಾರವರ ಆಪ್ತ ಸಲಹೆಯಡಿಯಲ್ಲಿ, 1972ರಿಂದ 2011ರ ವರೆಗೂ ವೈಎಸ್‌ಎಸ್ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸಿದರು ಮತ್ತು ಜಂಟಿ ಮುಖ್ಯ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ಕಾರ್ಯ ನಿರ್ವಹಿಸಿದರು. 2020ರ ವರೆಗೂ ಅವರು ವೈಎಸ್‌ಎಸ್ ನಿರ್ದೇಶಕರ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.


ಭಾರತದಲ್ಲಿಯ ಪರಮಹಂಸ ಯೋಗಾನಂದಜಿಯವರ ಕಾರ್ಯದ ಬೆಳವಣಿಗೆಯನ್ನು ಸ್ಮರಿಸಿಕೊಳ್ಳುತ್ತಾ ಸ್ವಾಮಿ ಶಾಂತಾನಂದರು, “ದಯಾ ಮಾತಾಜಿಯವರ ಐದು ಭೇಟಿಗಳ ಮುಖ್ಯ ವೃತ್ತಾಂತ, ವೈಎಸ್‌ಎಸ್ ಅನ್ನು ಒಂದು ಭದ್ರ ಬುನಾದಿಯ ಮೇಲೆ ನಿಲ್ಲಿಸುವುದಾಗಿತ್ತು. ಆದರೆ ದಯಾ ಮಾತಾರವರು [1959ರಲ್ಲಿ] ಭಾರತದಲ್ಲಿ ಮೊದಲು ಕಾಲಿರಿಸಿದಾಗ, ಈ ಶ್ರೇಷ್ಠ ಕಾರ್ಯದ ಯಶಸ್ಸು ಸಾಕಾರವಾಗುವುದಕ್ಕಿಂತ ಬಹಳ ದೂರದಲ್ಲಿತ್ತು. ಕೆಲವೇ ವಾರಗಳಲ್ಲಿ ಅವರು ಹಲವಾರು ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂಬುದನ್ನು ಅರಿತರು. ಸರಿಯಾದ ಜನರನ್ನು ಹುಡುಕಬೇಕಾಗಿತ್ತು,” ಎಂದು ಹೇಳಿದರು.
ಮುಂದೆ ಹಂಸ ಸ್ವಾಮಿ ಶ್ಯಾಮಾನಂದ ಗಿರಿ (1911-1971) ಎಂದು ಪರಿಚಿತರಾದ ಶ್ರೀ ಬಿನಯ್ ನಾರಾಯಣ್ ದುಬೆ ಅವರಲ್ಲಿ “ಸರಿಯಾದ ವ್ಯಕ್ತಿ”ಯನ್ನು ಕಂಡುಕೊಳ್ಳಲಾಯಿತು ಎಂದು ಸ್ವಾಮಿ ಶಾಂತಾನಂದರು ವಿವರಿಸಿದರು. ಇವರು ದಯಾ ಮಾತಾಜಿಯವರ ನಿರಂತರ ಸ್ಫೂರ್ತಿ ಮತ್ತು ಮಾರ್ಗದರ್ಶನದಲ್ಲಿ ವೈಎಸ್‌ಎಸ್ ಅನ್ನು ಪುನರುಜ್ಜೀವನಗೊಳಿಸಿದರು. ಆ ಸಮಯದಲ್ಲಿ ಸ್ವಾಮಿ ಶಾಂತಾನಂದರು, ಸ್ವಾಮಿ ಶ್ಯಾಮಾನಂದರ ನಿಧನಾನಂತರ ವೈಎಸ್‌ಎಸ್‌ನ ಬದಲಾವಣೆಯಲ್ಲಿ ತಾವು ಸ್ವತಃ ನಿರ್ವಹಿಸಲಿರುವ ಅಮೂಲ್ಯವಾದ ಪಾತ್ರದ ಬಗ್ಗೆ ಅರಿತಿರಲಿಲ್ಲ: “ನಾವು ಕೆಲವು ಯುವಕರು, ಯೋಗಾಚಾರ್ಯಜಿ [ಸ್ವಾಮಿ ಶ್ಯಾಮಾನಂದ] ಅವರಿಗೆ ಸಹಾಯಕರಾಗಿದ್ದೆವು. ಗುರಿಯ ಮೇಲಿದ್ದ ಅವರ ದೂರದೃಷ್ಟಿ ಮತ್ತು ಬದ್ಧತೆಯಿಂದ ನಾವು ಬಹಳಷ್ಟನ್ನು ಕಲಿತೆವು. 1971ರಲ್ಲಿ ಅವರು ನಿಧನರಾದ ಮೇಲೂ, ವೈಎಸ್‌ಎಸ್‌ಗೆ ಯಶಸ್ಸನ್ನು ತರಲು, ಅವರು ಸ್ಪಷ್ಟವಾಗಿ ಆರಂಭಿಸಿದ್ದ ಮತ್ತು ನಿರ್ಣಯಿಸಿದ್ದ ಮಾರ್ಗವನ್ನೇ ನಾವು ಅನುಷ್ಠಾನಗೊಳಿಸಬೇಕು ಎಂಬುದನ್ನು ನಾವು ಅರಿತೆವು.”
ಸ್ವಾಮಿ ಶ್ಯಾಮಾನಂದರ ನಿಧನಾನಂತರ, ವೈಎಸ್‌ಎಸ್‌ನ ದಿನ ನಿತ್ಯದ ಕಾರ್ಯಗಳ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಇಬ್ಬರು ಯುವ ಸನ್ಯಾಸಿಗಳಾದ ಸ್ವಾಮಿ ಭಾವಾನಂದ (ಇವರು 2010ರಲ್ಲಿ ಸ್ವರ್ಗಸ್ಥರಾದರು) ಮತ್ತು ಸ್ವಾಮಿ ಶಾಂತಾನಂದರ ಹೆಗಲಿಗೇರಿಸಲಾಯಿತು.
ಅವರ ಅನೇಕ ಜವಾಬ್ದಾರಿಗಳ ಜೊತೆಯಲ್ಲಿ, ವೈಎಸ್‌ಎಸ್‌ನ ಮುಖ್ಯ ಕಾರ್ಯದರ್ಶಿಯಾಗಿ ಸ್ವಾಮಿ ಶಾಂತಾನಂದರು ಭಾರತ ಸರ್ಕಾರ ಹಾಗೂ ಇತರ ಸಂಸ್ಥೆಗಳೊಂದಿಗಿನ ಅಸಂಖ್ಯಾತ ಅಧಿಕಾರಕ್ಕೆ ಸಂಬಂಧಪಟ್ಟ ಮಾತುಕತೆಗಳಲ್ಲಿ ವೈಎಸ್‌ಎಸ್‌ನ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು.

ಅಂತಹದರಲ್ಲಿ ಒಂದು ಘಟನೆಯೆಂದರೆ, 1993ರಲ್ಲಿ ಕೊಲ್ಕತ್ತಾದ ಮದರ್ ತೆರೆಸಾ, ಗಲಭೆಗಳಲ್ಲಿ ಸಿಲುಕಿದ ಬಡವರಿಗೆ ಸಹಾಯ ಮಾಡಲು ಸಾರ್ವಜನಿಕವಾಗಿ ಕೋರಿಕೊಂಡಾಗ. ಸ್ವಾಮಿ ಶಾಂತಾನಂದರ ನಿರ್ದೇಶನದಲ್ಲಿ, ಗಲಭೆಗಳಲ್ಲಿ ಹಾನಿಗೊಳಗಾದ ಅನೇಕ ಮನೆಗಳನ್ನು ದುರಸ್ತಿಗೊಳಿಸುವ ಮೂಲಕ ವೈಎಸ್‌ಎಸ್ ಇದಕ್ಕೆ ಸ್ಪಂದಿಸಿತು. ವೈಎಸ್‌ಎಸ್ ಪರಿಹಾರ ಕಾರ್ಯಗಳ ಉದ್ಘಾಟನೆಯ ಸಮಯದಲ್ಲಿ ಮದರ್ ತೆರೆಸಾ ಸ್ವಾಮಿ ಶಾಂತಾನಂದರಿಗೆ ಸೇಂಟ್ ಫ್ರಾನ್ಸಿಸ್‌ನ, “ಭಗವಂತ, ನನ್ನನ್ನು ನಿನ್ನ ಶಾಂತಿಯ ಒಂದು ಸಾಧನವನ್ನಾಗಿ ಮಾಡು” ಎಂಬ ಸುಂದರವಾದ ಪ್ರಾರ್ಥನೆಯನ್ನು ಓದಲು ಕೋರಿದರು (ಮೇಲಿರುವ ಫೋಟೋ ನೋಡಿ).
ವೈಎಸ್‌ಎಸ್ ಸುಮಾರು ನೂರು ಮನೆಗಳಿಗೆ ಹೊಸ ಮೇಲ್ಛಾವಣಿಯನ್ನು ಕಟ್ಟಿದ ಮೇಲೆ ಮದರ್ ತೆರೆಸಾ ಈ ಕೆಳಗಿನ ಅಭಿನಂದನಾ ಬರಹವನ್ನು ಕಳಿಸಿದರು: “ನಲ್ಮೆಯ ಸ್ವಾಮಿ ಶಾಂತಾನಂದ ಗಿರಿಯವರೇ, ತಾಂಗ್ರಾದಲ್ಲಿ ನಮ್ಮ ಬಡವರ ಮನೆಗಳನ್ನು ದುರಸ್ತಿಗೊಳಿಸಿ ಅವರ ಮೇಲೆ ನೀವು ತೋರಿಸಿದ ಪ್ರೀತಿಗೆ ಭಗವಂತ ನಿಮ್ಮನ್ನು ಪ್ರೀತಿಸಲಿ. ನಿಮಗೆ ಮತ್ತು ನಿಮಗೆ ಸಹಾಯ ಮಾಡಿದ ಎಲ್ಲರಿಗೂ ನನ್ನ ಕೃತಜ್ಞತೆಯೇ ನನ್ನ ಪ್ರಾರ್ಥನೆ. ಎಂ. ತೆರೆಸಾ, ಎಂ. ಸಿ.”
“ಎಲ್ಲರಿಗೂ ಪ್ರೀತಿ ನೀಡಲು ನನ್ನ ಕೈಲಾದುದನ್ನು ನಾನು ಮಾಡಿದೆ”
ಅವರ ಆಶ್ರಮದ 50ನೇ ವರ್ಷಾಚರಣೆಯ ಸಮಯದಲ್ಲಿ ಶ್ರೀ ದಯಾ ಮಾತಾ, “ಭಗವಂತ ಮತ್ತು ಗುರೂಜಿಯವರಿಗೆ ಕದಲದ ಉತ್ಸಾಹ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೀರಿ. ಹಲವಾರು ವರ್ಷಗಳ ಕಾಲ ಒಬ್ಬ ಸನ್ಯಾಸಿ ಬದುಕನ್ನು ತುಂಬು ಹೃದಯದಿಂದ ಬಾಳಿದ್ದಕ್ಕೆ ಅವರು ನಿಮ್ಮನ್ನು ನಿರಂತರವಾಗಿ ಆಶೀರ್ವದಿಸುತ್ತಾರೆ ಎಂಬುದು ನನಗೆ ತಿಳಿದಿದೆ.” ಎಂದು ಹೇಳಿದರು.
ಎಸ್‌ಆರ್‌ಎಫ್‌ನ ಉಪಾಧ್ಯಕ್ಷರು ಮತ್ತು ವೈಎಸ್‌ಎಸ್/ಎಸ್‌ಆರ್‌ಎಫ್‌ನ ನಿರ್ದೇಶಕರ ಮಂಡಳಿಯ ಸದಸ್ಯರಾದ ಸ್ವಾಮಿ ವಿಶ್ವಾನಂದ, “ವೈಎಸ್‌ಎಸ್ ಇಂತಹ ಅದ್ಭುತವಾದ ಬೆಳವಣಿಗೆಯನ್ನು ಕಂಡಿದ್ದರ ಹಿಂದಿರುವ ಕೆಲವು ಮುಖ್ಯ ಕಾರಣಗಳನ್ನು ಗುರುತಿಸಲು ನಾನು ಸ್ವಾಮಿ ಶಾಂತಾನಂದರೂ ಸೇರಿದಂತೆ ಹಲವಾರು ಹಿರಿಯ ವೈಎಸ್‌ಎಸ್ ಸನ್ಯಾಸಿಗಳನ್ನು ಕೇಳಿದೆ. ವೈಎಸ್‌ಎಸ್ ಕಾರ್ಯಾಚರಣೆಯ ಪ್ರತಿಯೊಂದು ಕ್ಷೇತ್ರದಲ್ಲೂ ನಿರ್ವಹಣೆಯ ಬಗ್ಗೆ ವಸ್ತುತಃ ವ್ಯಾಪಕ ಅನುಭವವಿರುವ ಅವರು ನನಗೆ ಒಂದು ದೀರ್ಘವಾದ ಮತ್ತು ವಿಸ್ತೃತ ವಿಶ್ಲೇಷಣೆಯನ್ನು ನೀಡಬಹುದು ಎಂದು ಭಾವಿಸಿದೆ. ಬದಲಾಗಿ, ಇದು ಅವರ ಪ್ರತಿಕ್ರಿಯೆಯಾಗಿತ್ತು:
“‘ಗುರುದೇವರು ನಿರ್ದೇಶಿಸಿದಂತೆ, ಎಲ್ಲರಿಗೂ ಪ್ರೀತಿ ನೀಡಲು, ಭಗವಂತನ ಪ್ರೀತಿಯನ್ನು ಮನಗಾಣಲು ಮತ್ತು ಪ್ರತಿಯೊಬ್ಬರಲ್ಲೂ ಭಗವಂತನ ಉಪಸ್ಥಿತಿಯನ್ನು ಕಾಣಲು, ನನ್ನ ಕೈಲಾದುದನ್ನು ನಾನು ಮಾಡಿದೆ. ಇಡೀ ಈ ಎಲ್ಲ ವರ್ಷಗಳಲ್ಲೂ ದಿವ್ಯ ಮಾತೆ ಮತ್ತು ಗುರೂಜಿಯವರ ಸಕ್ರಿಯ ಸಹಯೋಗದಿಂದಾಗಿ ಇದೆಲ್ಲವೂ ಬಹಳ ಸುಂದರವಾಗಿ ಕಾರ್ಯಗತವಾಗಿವೆ.ʼ
“ಇದು ಅದೆಷ್ಟು ಸುಂದರವಾಗಿಲ್ಲವೇ? ಗುರೂಜಿಯವರ ಹೇಳಿಕೆಯಲ್ಲಿ ಅಂತರ್ಗತವಾಗಿರುವ ಸೂಚನೆಯನ್ನು ಅವರು ಗಂಭೀರವಾಗಿ ತೆಗೆದುಕೊಂಡಿದ್ದರು, ‘ಕೇವಲ ಪ್ರೇಮ ಮಾತ್ರ ನನ್ನ ಜಾಗವನ್ನು ತೆಗೆದುಕೊಳ್ಳಬಹುದು.ʼ”
ಭಗವಂತನ ನಿತ್ಯ ಆನಂದ ಮತ್ತು ಶಾಂತಿಯ ಮನೆಯಲ್ಲಿರುವ ತಮ್ಮ ಗುರುವಿನೊಡನೆ ಮತ್ತೆ ಸೇರಿದ ನಮ್ಮ ಪೂಜ್ಯ ಸ್ವಾಮಿ ಶಾಂತಾನಂದ ಗಿರಿಯವರಿಗೆ ನಮ್ಮ ಗಾಢವಾದ ಪ್ರೀತಿ ಮತ್ತು ಕೃತಜ್ಞತೆಗಳನ್ನು ನಾವು ಕಳಿಸುವಾಗ ದಯವಿಟ್ಟು ನೀವು ಕೂಡ ನಮ್ಮೊಡನೆ ಭಾಗಿಯಾಗಿ.