“ಆತ್ಮಾವಲೋಕನ — ಆಧ್ಯಾತ್ಮಿಕ ಬೆಳವಣಿಗೆಗೆ ಚಮತ್ಕಾರಿ ಸಾಧನ” ಸ್ವಾಮಿ ಚಿದಾನಂದ ಗಿರಿಯವರಿಂದ

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್‌ನ ಅಧ್ಯಕ್ಷ ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿಯವರ “ಭಗವದ್ಗೀತೆ: ದೈನಂದಿನ ಆಧ್ಯಾತ್ಮಿಕ ಜೀವನಕ್ಕಾಗಿ ಶ್ರೇಷ್ಠ ಮಾರ್ಗದರ್ಶಿ” ಎಂಬ ಭಾಷಣದ ಆಯ್ದ ಭಾಗಗಳನ್ನು ಕೆಳಗೆ ನೀಡಲಾಗಿದೆ.

ಯೋಗಕ್ಕೆ ಕುರಿತಾದ ಭಾರತದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯ ಮೊದಲ ಶ್ಲೋಕದಲ್ಲೇ ನಾವು ಆತ್ಮಾವಲೋಕನದ ಮಹತ್ತರವಾದ ಪ್ರಾಮುಖ್ಯತೆಯನ್ನು ನೋಡುತ್ತೇವೆ.

ಅದು ಹೀಗೆ ಆರಂಭವಾಗುತ್ತದೆ, ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಒಟ್ಟು ಸೇರಿದ — ಕುರುಗಳ ದುಷ್ಟ ಶಕ್ತಿಗಳು (ಅಹಂಕಾರವನ್ನು ಪ್ರತಿನಿಧಿಸುತ್ತವೆ) ಮತ್ತು ಪಾಂಡವರ ಒಳ್ಳೆಯ ಶಕ್ತಿಗಳು (ಆತ್ಮವನ್ನು ಪ್ರತಿನಿಧಿಸುತ್ತವೆ), ಪರಸ್ಪರ ಎದುರಿಸುತ್ತಿವೆ.— “ಅವರು ಇಂದು ಏನು ಮಾಡಿದರು?” ಈ ದಿನ ಯುದ್ಧದಲ್ಲಿ ಗೆದ್ದವರು ಯಾರು? ಹಾಗೂ ಗಾಡ್‌ ಟಾಕ್ಸ್‌ ವಿತ್‌ ಅರ್ಜುನ ಎಂಬ ಶೀರ್ಷಿಕೆಯಡಿ, ಗೀತೆಯ ಮೇಲಿನ ಅವರ ಪಾಂಡಿತ್ಯಪೂರ್ಣ ವ್ಯಾಖ್ಯಾನಗಳಲ್ಲಿ, ಪರಮಹಂಸ ಯೋಗಾನಂದರು ಆ ಆತ್ಮಾವಲೋಕನ ವಿಜ್ಞಾನದ ಅತ್ಯಂತ ಸಮಗ್ರ ವಿವರಣೆಯನ್ನು ಸುಂದರವಾಗಿ ಪ್ರಸ್ತುತಪಡಿಸುತ್ತಾರೆ.

ಆತ್ಮಾವಲೋಕನವು ನಮ್ಮನ್ನು ನಾವು ಬದಲಿಸಿಕೊಳ್ಳಲು ಒಂದು ಚಮತ್ಕಾರಿ ಸಾಧನವಾಗಿದೆ. ದಿನದ ಕೊನೆಯಲ್ಲಿ, ಶಾಂತವಾಗಿ ಕುಳಿತುಕೊಂಡು ಆ ದಿನದ ಘಟನೆಗಳನ್ನು ಪರಿಶೀಲಿಸುವುದು — ನಾವು ಹೇಗೆ ಪ್ರತಿಕ್ರಿಯಿಸಿದೆವು, ಹೇಗೆ ಪ್ರತಿಸ್ಪಂದಿಸಿದೆವು, ನಾವು ಯಾವ ರೀತಿ ಇನ್ನೂ ಉತ್ತಮವಾಗಿ ಮಾಡಬಹುದಾಗಿತ್ತು, ನಮ್ಮ ವಿಭಿನ್ನ ಪ್ರತಿಕ್ರಿಯೆಗಳು ಮತ್ತು ನಮಗಾದ ಅನುಭವಗಳಿಂದ ನಾವು ಏನು ಕಲಿತೆವು — ಎಂದು ಪರಿಶೀಲಿಸುವುದು — ಇದು ಬೆಳವಣಿಗೆಗೆ ಒಂದು ಚಮತ್ಕಾರಿ ಸಾಧನ.

ಆದರೆ ಇದು ಕೆಲವು ಜನರಿಗೆ ಏಕೆ ಕೆಲಸ ಮಾಡುತ್ತದೆ ಮತ್ತು ಇತರರು ಏಕೆ ಈ ವಿಷಯದಲ್ಲಿ ಕಷ್ಟಪಡುತ್ತಾರೆ? ನೀವು ಎಂದಾದರೂ ಅದರ ಬಗ್ಗೆ ಯೋಚಿಸಿದ್ದೀರಾ? ಪರಮಹಂಸಜಿ ಕರೆಯುವಂತೆ ಜೀವನದ ಹೋರಾಟದಲ್ಲಿ ಇದನ್ನು “ಜಯಶಾಲಿ ಮಾನಸಿಕ ಯುದ್ಧದ” ಸಾಧನವಾಗಿ ಬಳಸಲು ನಿಮಗೆ ನಿಜವಾಗಿಯೂ ಸಾಧ್ಯವಾಗುತ್ತಿಲ್ಲ ಎಂದು ನೀವು ಕಂಡುಕೊಂಡಿರುವಿರೆ?

ಅದಕ್ಕೆ ಕಾರಣ ನಿಜವಾಗಿಯೂ ಬಹಳ ಸರಳವಾದುದು, ಅದೆಂದರೆ, ನಾವು ಯಾವ ಮನೋಭಾವದಿಂದ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂಬುದು, ಎಂದು ನಾನು ಭಾವಿಸುತ್ತೇನೆ.

ಒಂದೆಡೆ, ನಮ್ಮಲ್ಲಿ ಕೆಲವರು ಇದನ್ನು ನಮ್ಮ ದೋಷಗಳನ್ನು ಕಂಡುಹಿಡಿಯುವ ಸಾಧನವಾಗಿ ಬಳಸುತ್ತೇವೆ — ಪ್ರತಿಯೊಂದು ಸಣ್ಣ ನ್ಯೂನತೆಯನ್ನೂ ಕಂಡುಹಿಡಿದು, ಹೇಳುವುದು, “ಓಹ್, ನಾನು ಎಂತಹ ಅಸಮರ್ಥ! ಹೇಗೆ ನಾನು ಅಂತಹ ಮೂರ್ಖನಾಗಿದ್ದೆ?” ಇತ್ಯಾದಿ, ಇತ್ಯಾದಿ. ಅದು ಆತ್ಮಾವಲೋಕನದ ವಿಷಯವನ್ನೇ ಸಂಪೂರ್ಣವಾಗಿ ತಪ್ಪಿಸುತ್ತದೆ. ಆತ್ಮಾವಲೋಕನದ ಬಗ್ಗೆ ನಮ್ಮ ಮನೋಭಾವ ಅದಾಗಿದ್ದರೆ, ಅದರಿಂದ ಯಾವ ಪ್ರಯೋಜನವನ್ನೂ ಪಡೆದುಕೊಳ್ಳದೆ, ಅದನ್ನು ಕಡೆಗಣಿಸಲು ಬಯಸಿದರೆ, ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಆದರೆ ಇನ್ನೊಂದೆಡೆ, ತಮ್ಮ ಕಾರ್ಯಗಳು, ವರ್ತನೆಗಳು, ರೂಢಿಗತ ಅಭ್ಯಾಸಗಳು ಹಾಗೂ ತಮ್ಮ ಜೀವನಗತಿ, ಇವುಗಳನ್ನು ನಮ್ಮೆಲ್ಲರೊಳಗಿರುವ ದಿವ್ಯ ಸಾಮರ್ಥ್ಯದ ದೃಷ್ಟಿಕೋನದಿಂದ ನೋಡುವವರೂ ಇದ್ದಾರೆ ಮತ್ತು ಅವರು ಹೀಗೆ ಹೇಳುತ್ತಾರೆ: “ಈ ಸಾಮರ್ಥ್ಯವನ್ನು ಹೊರತರಲು ನಾನು ಏನು ಮಾಡಬಹುದು? ಇದರಿಂದ ನಾನು ಆ ಅಪಾರ ಆನಂದ, ಅಪಾರ ಪ್ರೀತಿ, ಅಪಾರ ಜ್ಞಾನ, ಅಪಾರ ಭದ್ರತೆ ಮತ್ತು ಶಾಂತಿಯ ಪ್ರಜ್ಞೆಯಲ್ಲಿ ಬದುಕಲು ಸಾಧ್ಯವಾಗುವಂತೆ, ಅಡೆತಡೆಗಳನ್ನು ತೊಡೆದುಹಾಕಲು ನಾನು ಏನು ಮಾಡಬಹುದು?” ಆ ವಿಧಾನವು ನಾವು ಆತ್ಮಾವಲೋಕನ ಮಾಡುವ ಬಗೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.

ಹಾಗಾಗಿ ಈ ಆತ್ಮಾವಲೋಕನದ ಕಲೆಯನ್ನು ಬಳಸಲು ನಾನು ಒಂದು ಸಲಹೆಯನ್ನು ನೀಡುತ್ತೇನೆ: ಅದು ಕಷ್ಟಕರವಾದದ್ದಾಗಬೇಕಿಲ್ಲ. ನೀವು ಅದನ್ನು ತುಂಬಾ ಸರಳ ಮತ್ತು ವೈಯಕ್ತಿಕ ಮಾಡಿಕೊಳ್ಳಬಹುದು.

ನಿಮ್ಮ ಜೀವನದಲ್ಲಿ ನೀವು, ಆಧ್ಯಾತ್ಮಿಕವಾಗಿ ಮತ್ತು ಮಾನಸಿಕವಾಗಿ, ಭೌತಿಕವಾಗಿ ಕೂಡ ಸಾಧಿಸಲು ಪ್ರಯತ್ನಿಸುತ್ತಿರುವ ವಿಷಯಗಳನ್ನು ಬರೆಯಿರಿ — ನಿಮ್ಮ ಗುರಿಗಳು, ನೀವು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿರುವ ಗುಣಗಳು, ನಿಮ್ಮ ದೈನಂದಿನ ಜೀವನದಲ್ಲಿ ಬೆಳೆಸಿಕೊಳ್ಳಲು ನೀವು ನಿಜವಾಗಿಯೂ ಪ್ರಯತ್ನಿಸುತ್ತಿರುವ ವಿಷಯಗಳು: ಧ್ಯಾನ ಮತ್ತು ಇತರ ಉದ್ದೇಶಗಳು ಉದಾಹರಣೆಗೆ ಸೇವಾ ಮನೋಭಾವ, ಅಥವಾ ದಯೆ, ಅಥವಾ ಇತರರೆಡೆಗೆ ಸೂಕ್ತ ಮನೋಭಾವ.

ನಮ್ಮಲ್ಲಿ ಪ್ರತಿಯೊಬ್ಬರಿಗೂ ಅದು ವಿಭಿನ್ನವಾಗಿರುತ್ತದೆ, ಆದರೆ ನಾವು ಪಟ್ಟಿ ಮಾಡಬಹುದು ಮತ್ತು ದಿನಕ್ಕೊಮ್ಮೆ ಅದನ್ನು ಪರಿಶೀಲಿಸಬಹುದು – ಅಷ್ಟೆ. ಅದು ನಿಗೂಢವಲ್ಲ; ಅದು ಕಷ್ಟಕರವಲ್ಲ.

ನೀವು ಮಾಡಬಹುದಾದ ಇತರ ವಿಷಯಗಳೂ ಇವೆ. ನಿಮ್ಮ ಪಟ್ಟಿಯಲ್ಲಿರುವ ವಿವಿಧ ವಿಷಯಗಳ ಬಗ್ಗೆ ಪರಮಹಂಸ ಯೋಗಾನಂದರು ಹೇಳಿದ್ದನ್ನು ನೀವು ಅಧ್ಯಯನ ಮಾಡಬಹುದು; ಮತ್ತು ಬಹುಶಃ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ನೀವು ಒಂದು ದೃಢೀಕರಣವನ್ನು ಅಭ್ಯಾಸ ಮಾಡಬಹುದು. ಆದರೆ ಕೇವಲ ನೀವು ಬರೆದದ್ದನ್ನು ನೆನಪಿಟ್ಟುಕೊಳ್ಳಲು, ನೀವು ದಿನಕ್ಕೊಮ್ಮೆ ಪಟ್ಟಿಯನ್ನು ನೋಡುವುದನ್ನು ಬಿಟ್ಟು ಬೇರೇನೂ ಮಾಡದಿದ್ದರೂ, ನೀವು ಭ್ರಮೆಯ ವಿರುದ್ಧ ಹೋರಾಡುತ್ತಿರುತ್ತೀರಿ — ನೀವು ಸುಧಾರಿಸುತ್ತಿರುತ್ತೀರಿ ಮತ್ತು ನಿಮ್ಮನ್ನು ನೀವು ಬದಲಾಯಿಸಿಕೊಳ್ಳುತ್ತಿರುತ್ತೀರಿ.

ನಿಮಗೆ ತಿಳಿದಿದೆಯೇ, ಯಾರೋ ಒಬ್ಬರು ಒಮ್ಮೆ ಹೇಳಿದರು: “ಸಂತರು ಮಾಡುವ ಕೆಲಸಗಳು ಬಹಳ ಅಸಾಧಾರಣವಲ್ಲ; ಅವರು ಅದನ್ನು ಸದಾ ಕಾಲ ಮಾಡುತ್ತಿರುತ್ತಾರೆ ” ನಾವೆಲ್ಲರೂ ನಮ್ಮ ಜೀವನವನ್ನು ಹೇಗೆ ಜೀವಿಸಬೇಕೆಂಬ ಬಗ್ಗೆ ನಮಗೆ ವಿವೇಚನೆ ಇದೆ. ಅದನ್ನು ನೆನಪಿಸಿಕೊಳ್ಳಬೇಕಷ್ಟೆ.

ಆದ್ದರಿಂದ ಆತ್ಮಾವಲೋಕನ ಮಾಡಿಕೊಳ್ಳಿ, ದೈನಂದಿನ ಆತ್ಮ-ವಿಶ್ಲೇಷಣೆಯ ಈ ಚಮತ್ಕಾರಿ ಸಾಧನ, ನಿಮ್ಮ ಉತ್ತಮ ಅಭ್ಯಾಸಗಳಲ್ಲೊಂದು: ಸಂಜೆ ಧ್ಯಾನದ ನಂತರ ನಿಮ್ಮ ಪಟ್ಟಿಯನ್ನು ನೋಡಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಿ. ನೀವು ಇದನ್ನು ಸೂಕ್ತ ಮನೋಭಾವದಿಂದ ಮಾಡಿದರೆ, ನಿಮ್ಮ ಗುರಿಗಳನ್ನು ತಲುಪುವ ನಿಮ್ಮ ಸಾಮರ್ಥ್ಯದಲ್ಲಿ ನೀವು ಕಾಣುವ ಬದಲಾವಣೆಗಳು ಮತ್ತು ನೀವು ಅನುಭವಿಸುವ ಆನಂದದ ಬಗ್ಗೆ ನೀವು ನಿಜವಾಗಿಯೂ ಆಶ್ಚರ್ಯಚಕಿತರಾಗುವಿರಿ.

ನಿಮ್ಮ ಗುರಿಗಳನ್ನು ಸಾಧಿಸಲು ಮತ್ತು ನಿಮ್ಮ ಜೀವನದಲ್ಲಿ ಹೆಚ್ಚಿನ ಸಂತೋಷ ಮತ್ತು ಯಶಸ್ಸನ್ನು ತರಲು — ಆಧ್ಯಾತ್ಮಿಕ ಮತ್ತು ಭೌತಿಕ ಎರಡಕ್ಕೂ — ಆತ್ಮಾವಲೋಕನದ ಸಾಧನವನ್ನು ಬಳಸುವ ಈ ಪ್ರಮುಖ ವಿಷಯದಲ್ಲಿ ಆಳವಾಗಿ ಅಧ್ಯಯನ ಮಾಡಲು ನಾವು ನಿಮಗೆ ಕೆಲವು ಹೆಚ್ಚುವರಿ ಸಂಪನ್ಮೂಲಗಳನ್ನು ಸೂಚಿಸಲು ಬಯಸುತ್ತೇವೆ:

  • 2021 ರ ಎಸ್‌ಆರ್‌ಎಫ್ ಜಾಗತಿಕ ಘಟಿಕೋತ್ಸವದಲ್ಲಿ ಸ್ವಾಮಿ ಇಷ್ಟಾನಂದ ಗಿರಿಯವರ ಭಾಷಣ – “ಆತ್ಮಾವಲೋಕನ – ನಿಮ್ಮ ಅಂತರಾತ್ಮದ ಕಾರ್ಯಾಚರಣೆಗಳನ್ನು ಅನ್ವೇಷಿಸುವುದು” — ವಿಡಿಯೋ
  • ಎಸ್‌ಆರ್‌ಎಫ್‌ನ ಸಾಪ್ತಾಹಿಕ ಆನ್‌ಲೈನ್ ಸ್ಫೂರ್ತಿದಾಯಕ ಸತ್ಸಂಗಗಳ ಸರಣಿಯಿಂದ ಸ್ವಾಮಿ ಗೋವಿಂದಾನಂದ ಗಿರಿಯವರ 2021 ರ “ಆತ್ಮಾವಲೋಕನ — ಆತ್ಮ-ಶೋಧನೆಗೆ ಉತ್ತರ” — ವಿಡಿಯೋ
  • ಪೂರಕ ಪಾಠ 69, “ದ ಆರ್ಟ್‌ ಆಫ್‌ ಇಂಟ್ರಾಸ್ಪೆಕ್ಷನ್ ಅಂಡ್‌ ಸೈಕಾಲಾಜಿಕಲ್‌ ಸೆಲ್ಫ್-ಅನಾಲಿಸಿಸ್” — ಯೋಗದಾ ಸತ್ಸಂಗ ಪಾಠಗಳ ವಿದ್ಯಾರ್ಥಿಗಳಿಗೆ, ಪರಮಹಂಸ ಯೋಗಾನಂದರಿಂದ ಧ್ಯಾನ ಮತ್ತು ಆಧ್ಯಾತ್ಮಿಕ ಜೀವನಕ್ಕಾಗಿ ಗೃಹಾಧ್ಯಯನದ ಪಠ್ಯಕ್ರಮ

ಇದನ್ನು ಹಂಚಿಕೊಳ್ಳಿ