ಚೈತನ್ಯದ ಸುಪ್ತ ಮೂಲದೊಡನೆ ಸಂಪರ್ಕ ಸಾಧಿಸುವುದರ ಕುರಿತು ಪರಮಹಂಸ ಯೋಗಾನಂದರು

10 ಏಪ್ರಿಲ್‌, 2024

ಒಂದು ಪರಿಚಯ:

ನೀವು ಅಧಿಕ ಚೈತನ್ಯವನ್ನು ಮನಗಾಣಲು ಬಯಸುತ್ತೀರೇನು? ಅದು ನಮಗೆಲ್ಲರಿಗೂ ಬೇಕಾಗಿದೆ. ಹಾಗೆ ಮಾಡಲು, ನಾವು ಹೇಗೆ ತಿನ್ನುತ್ತೇವೆ, ನಮಗೆಷ್ಟು ವಿಶ್ರಾಂತಿಯು ಸಿಗುತ್ತದೆ, ಅಥವಾ ವಿಭಿನ್ನ ಕಾರ್ಯಗಳನ್ನು ನಾವು ಹೇಗೆ ಮಾಡುತ್ತೇವೆ ಮತ್ತು ಅತಿಯಾದ ಉತ್ಸಾಹ ಮತ್ತು ದೃಢನಿರ್ಧಾರದಿಂದ ನಮ್ಮ ಕನಸುಗಳನ್ನು ಹೇಗೆ ಹಿಂಬಾಲಿಸುತ್ತೇವೆ ಎಂಬುದರ ಬಗ್ಗೆ ನಾವು ಹೊಂದಾಣಿಕೆ ಮಾಡಿಕೊಳ್ಳಬೇಕು. ಆಗ ನಾವು ಇವುಗಳ ಪ್ರಯೋಜನಗಳನ್ನು ನಮ್ಮ ಚೈತನ್ಯ ಮತ್ತು ದೃಷ್ಟಿಕೋನದಲ್ಲಿ ಕಾಣುತ್ತೇವೆ.

ಆದರೆ ಪರಮಹಂಸ ಯೋಗಾನಂದರ ಬೋಧನೆಗಳು ನಾವು ಪ್ರಜ್ಞಾಪೂರ್ವಕವಾಗಿ ಜೀವನ್ನಾಟಕದ ದೃಶ್ಯಗಳ ಹಿಂದೆ ಅಡಗಿರುವ ಚೈತನ್ಯದ ಮೂಲದೊಡನೆ ಸಂಪರ್ಕ ಸಾಧಿಸಿದಾಗ ನಮ್ಮ ದಿನಗಳು ಹೇಗೆ ಮಹತ್ತರವಾಗಿ ಹೆಚ್ಚು ಜೀವಂತ ಹಾಗೂ ಚೈತನ್ಯಪೂರ್ಣವಾಗುತ್ತದೆ ಎಂಬುದರ ಮೇಲೆ ಹೆಚ್ಚು ಒತ್ತು ನೀಡುತ್ತವೆ.

ವೈಎಸ್‌ಎಸ್/ಎಸ್‌ಆರ್‌ಎಫ್‌ನ ಸಂಘಮಾತಾ ಹಾಗೂ ಮೂರನೆಯ ಅಧ್ಯಕ್ಷರಾದ ಶ್ರೀ ದಯಾ ಮಾತಾ ಒಮ್ಮೆ ಹೇಳಿದರು, “ಮನುಷ್ಯನು ಭಗವಂತನನ್ನು ಒಪ್ಪಿಕೊಳ್ಳುತ್ತಾನೋ ಇಲ್ಲವೋ, ಸತ್ಯವೇನೆಂದರೆ ನಮ್ಮ ನಿಜ ಅಸ್ತಿತ್ವವೇ ಕ್ಷಣ ಕ್ಷಣಕ್ಕೂ ಅವ್ಯಕ್ತ ದಿವ್ಯ ಮೂಲದಿಂದ ನಿರಂತರವಾಗಿ ಹರಿಯುವ ಪ್ರಾಣ ಮತ್ತು ಚೈತನ್ಯ ಮತ್ತು ಬುದ್ಧಿಶಕ್ತಿಯನ್ನು ಅವಲಂಬಿಸಿದೆ.”

ಅವರು ಬೊಟ್ಟು ಮಾಡಿ ತೋರಿಸಿದ ಹಾಗೆ ತಾರುಣ್ಯವು, ಯಾವುದನ್ನು ಬಹಳಷ್ಟು ಸಲ ಒಂದು ಕ್ಷಣಿಕವಾದ ಮತ್ತು ಬಾಹ್ಯ ಸ್ಥಿತಿ ಎಂದು ಪರಿಗಣಿಸಲ್ಪಡಲಾಗುವುದೋ ಅದು, “ಆಂತರ್ಯದೊಳಗಿನಿಂದ ಪ್ರಸರಿಸುವ ಮನಸ್ಸು ಮತ್ತು ಚೈತನ್ಯದ ಒಂದು ಜೀವಂತಿಕೆ – ಭಗವಂತನ ನಿತ್ಯ ಶಕ್ತಿ ಮತ್ತು ಆನಂದದೊಂದಿಗೆ ನಮ್ಮ ಆಳವಾದ ಆಂತರಿಕ ಸಂಬಂಧದ ಅನುಭವದಿಂದ ಜನಿಸಿದ ಆನಂದ.”

ಆದ್ದರಿಂದ ಹೆಚ್ಚು ಹೆಚ್ಚಾಗಿ ಚೈತನ್ಯವನ್ನು ಅನುಭವಿಸಲು ಈ ಸ್ಫೂರ್ತಿಯನ್ನು ನೀವು ಉಪಯೋಗಿಸಬಹದು ಎಂದು ನಾವು ಭಾವಿಸುತ್ತೇವೆ — ಎಲ್ಲ ಜೀವಿಗಳ ಮೂಲದೊಡನೆ ಸಂಬಂಧವನ್ನು ಹೊಂದಲು ಪರಮಹಂಸಜಿ ಅವರ ಸರಳವಾದ ಆದರೆ ಶಕ್ತಿಶಾಲಿಯಾದ ತಂತ್ರಗಳ ಜ್ಞಾನವನ್ನು ಹೀರಿಕೊಂಡು ಅಭ್ಯಾಸ ಮಾಡುವುದರಿಂದ.

ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:

ನೀವು ಬೆಟ್ಟದ ಮೇಲಿಂದ ನೋಡಿದಾಗ ಒಂದು ನಗರದ ಜಗಮಗಿಸುತ್ತಿರುವ ಬೆಳಕು ಎಷ್ಟು ಸುಂದರವಾಗಿ ಕಾಣುತ್ತದೆ, ಬಲ್ಬುಗಳನ್ನು ಬೆಳಗಿಸಲು ಡೈನಮೋ ವಿದ್ಯುಚ್ಛಕ್ತಿಯನ್ನು ನೀಡುತ್ತಿದೆ ಎಂಬುದನ್ನು ನೀವು ಮರೆಯುತ್ತೀರಿ. ಹಾಗೆಯೇ ನೀವು ಮಾನವ ಜೀವಿಗಳ ನಿಗಿನಿಗಿ ಜೀವಂತಿಕೆಯನ್ನು ಕಂಡಾಗ, ಏನದನ್ನು ಜೀವಂತಗೊಳಿಸಿದೆ ಎಂಬುದು ನಿಮಗೆ ತಿಳಿಯದು, ಆಗ ನೀವು ಆಧ್ಯಾತ್ಮಿಕವಾಗಿ ಅಂಧರಾಗಿರುತ್ತೀರಿ. ಆ ಶಕ್ತಿಯು ಕಣ್ಣಿಗೆ ಕಾಣದಿದ್ದರೂ, ಬಹಳ ಸ್ಪಷ್ವವಾದದ್ದು. ಅದು ಸದಾ ನಿಮ್ಮ ಆಲೋಚನೆಗಳ ಹಿಂದೆ ಕಣ್ಣುಮುಚ್ಚಾಲೆಯಾಡುತ್ತಿರುತ್ತದೆ.

[ಶರೀರವು] ಬಾಹ್ಯ ಮೂಲಗಳಿಂದ (ಆಹಾರ, ಆಮ್ಲಜನಕ, ಮತ್ತು ಸೂರ್ಯರಶ್ಮಿ) ಪಡೆದ ಶಕ್ತಿಯಿಂದ ಜೀವಂತವಾಗಿ ನರ್ತಿಸುತ್ತಿರುತ್ತದೆ; ಮತ್ತು ಆಂತರಿಕ ಮೂಲದಿಂದ ಪಡೆದ ಚೈತನ್ಯದಿಂದ (ಪ್ರಾಣ) — ಬ್ರಹ್ಮಾಂಡ ಪ್ರಜ್ಞೆ. ಆಂತರಿಕ ಆತ್ಮದ ಮೂಲದ ಪ್ರಾಣ ಶಕ್ತಿ ಮತ್ತು ಪ್ರಜ್ಞೆಯಿಲ್ಲದೇ, ಶರೀರದೊಳಗೆ ಪ್ರಾಣವನ್ನು ನಿರ್ವಹಿಸಲು ಬಾಹ್ಯ ಮೂಲಗಳ ಶಾರೀರಿಕ ಶಕ್ತಿಯು ಯಾವ ಪ್ರಯೋಜನಕ್ಕೂ ಬಾರದು.

ಭಗವಂತನು ನಮ್ಮನ್ನು ಘನಾಕೃತಿಯಲ್ಲಿ ಆವರಿಸಿದ ಚೈತನ್ಯದ ದೇವತೆಗಳನ್ನಾಗಿ ರೂಪಿಸಿದ್ದಾನೆ — ತುಂಬುಮೈಯ ಭೌತಿಕ ಬಲ್ಬಿನ ಮೂಲಕ ಪ್ರಕಾಶಿಸುತ್ತಿರುವ ಜೀವ ಪ್ರವಾಹಗಳನ್ನಾಗಿ. ಆದರೆ, ಶಾರೀರಿಕ ಬಲ್ಬಿನ ದೌರ್ಬಲ್ಯ ಮತ್ತು ನಾಜೂಕು ರಚನೆಯ ಮೇಲೆ ಏಕಾಗ್ರರಾಗಿ, ನಾವು ಅಸ್ಥಿರ ದೇಹದೊಳಗಿರುವ ಅಮರವಾದ, ನಿತ್ಯ ಪ್ರಾಣ ಶಕ್ತಿಯ ಅವಿನಾಶಿ ಗುಣಗಳನ್ನು ಹೇಗೆ ಅನುಭವಿಸಬಹುದು ಎಂಬುದನ್ನೇ ಮರೆತಿದ್ದೇವೆ.

1916ರಲ್ಲಿ ನಾನು ಅನ್ವೇಷಿಸಿದ ಮತ್ತು ಅಭಿವೃದ್ಧಿ ಪಡಿಸಿದ ಚೈತನ್ಯದಾಯಕ ವ್ಯಾಯಾಮಗಳ ಪದ್ಧತಿಯು ಪ್ರಜ್ಞಾಪೂರ್ವಕವಾಗಿ ಜೀವಾಧಾರಕ ಪ್ರಾಣದಿಂದ ಶರೀರವನ್ನು ಪುನರಾವೇಶಿಸುವ ಬಹಳ ಪ್ರಯೋಜನಕಾರಿಯಾದ, ಸರಳವಾದ ಮತ್ತು ಪ್ರಯಾಸರಹಿತ ವಿಧಾನವಾಗಿದೆ. ಅಂಗಾಂಶಗಳು, ಜೀವಕೋಶಗಳು ಮತ್ತು ರಕ್ತದ ಈ ಉತ್ತೇಜನೆ ಮತ್ತು ವಿದ್ಯುದೀಕರಣವು ವ್ಯಾಧಿಗಳನ್ನು ಎದುರಿಸಲು ಅವುಗಳನ್ನು ಪ್ರತಿರಕ್ಷಿಸಲು ಸಹಾಯ ಮಾಡುತ್ತದೆ.

ನಿಮ್ಮ ರಕ್ತವು ಚೈತನ್ಯದಿಂದ ಆವೇಶಿಸಲು ಸರಿಯಾದ ಉಸಿರಾಟ ಬಹಳ ಮುಖ್ಯವಾದದ್ದು….ಈ ವಿಧಾನವನ್ನು ಕಲಿತು ಅಭ್ಯಾಸ ಮಾಡಿ: ರಭಸವಾದ ಜೊತೆಯುಸಿರಿನ ನಿಶ್ವಾಸದೊಂದಿಗೆ ಉಸಿರನ್ನು ಹೊರ ಹಾಕಿ (ಒಂದು ಹ್ರಸ್ವ ಮತ್ತು ಒಂದು ದೀರ್ಘ). ನಂತರ, ಶ್ವಾಸಕೋಶಗಳಿಗೆ ಹಿತಕರವೆನಿಸುವಷ್ಟು ತುಂಬುತ್ತ ಜೊತೆಯುಸಿರಿನ ಉಚ್ಛ್ವಾಸದೊಂದಿಗೆ ಉಸಿರು ತೆಗೆದುಕೊಳ್ಳಿ (ಒಂದು ಹ್ರಸ್ವ ಮತ್ತು ಒಂದು ದೀರ್ಘ). ಆಮ್ಲಜನಕವನ್ನು ಸಂಪೂರ್ಣವಾಗಿ ಹೀರಿಕೊಂಡು ಅದು ಪ್ರಾಣವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತ, ಕೆಲವು ಕ್ಷಣಗಳವರೆಗೆ ಶ್ವಾಸಕೋಶಗಳಲ್ಲಿ ಗಾಳಿಯನ್ನು ಹಿಡಿದಿಟ್ಟುಕೊಳ್ಳಿ. ನಂತರ ಜೊತೆಯುಸಿರಿನೊಂದಿಗೆ ಉಸಿರನ್ನು ಹೊರಹಾಕಿ, ನಂತರ ಮತ್ತೆ ಜೊತೆಯುಸಿರಿನೊಂದಿಗೆ ಉಚ್ಛ್ವಾಸ ಮಾಡಿ. ತಾಜಾ ಗಾಳಿಯಲ್ಲಿ ಈ ವಿಧಾನವನ್ನು ಬೆಳಿಗ್ಗೆ 30 ಬಾರಿ ಮತ್ತು ರಾತ್ರಿ 30 ಬಾರಿ ಅಭ್ಯಾಸ ಮಾಡಿ. ಇದು ಬಹಳ ಸರಳವಾದದ್ದು. ಇದನ್ನು ನೀವು ಅನುಸರಿಸಿದಲ್ಲಿ ನೀವು ಹಿಂದೆಂದಿಗಿಂತಲೂ ಆರೋಗ್ಯವಂತರಾಗಿರುತ್ತೀರಿ. ಈ ವ್ಯಾಯಾಮವು ಅತ್ಯಂತ ಹೆಚ್ಚಿನ ಪ್ರಾಣಶಕ್ತಿಯನ್ನು ನೀಡುತ್ತದೆ; ಮತ್ತು ನಿಮ್ಮ ರಕ್ತವನ್ನು ಇಂಗಾಲ-ಮುಕ್ತಮಾಡಿ ಪ್ರಶಾಂತತೆಯನ್ನು ನೀಡುತ್ತದೆ.

ನಿಮ್ಮೊಳಗೆ ತುಂಬಿತುಳುಕುತ್ತಿರುವ ಆಳವಾದ ಸಂತೋಷದಿಂದ, ಕೆಚ್ಚೆದೆಯ ಹರ್ಷಚಿತ್ತದಿಂದ ನಿಮ್ಮೆಲ್ಲ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಕಲಿಯಿರಿ. ಆಗ ನೀವು ನಿಮ್ಮ ದಿನನಿತ್ಯದ ಕಾರ್ಯಗಳಲ್ಲಿ ತೊಡಗುವಾಗ ನಿಮ್ಮ ಇಡೀ ಶರೀರವು ಚೈತನ್ಯದ ಪ್ರವಾಹದಿಂದ ತುಂಬಿತುಳುಕುವುದನ್ನು ಮನಗಾಣುವಿರಿ.

ಈ ಮಹಾನ್‌ ನಿಯಮವನ್ನು ಕೆಲವರು ತಿಳಿದಿದ್ದಾರೆ, ಆದರೆ ಬಹಳ ಕೆಲವೇ ಮಂದಿ ಅದನ್ನು ಬಳಕೆಗೆ ತರುತ್ತಾರೆ: ನಿಮ್ಮ ಶರೀರವು ಚೈತನ್ಯದಿಂದ ತುಂಬಿದೆ ಎಂದು ಸದಾ ಯೋಚಿಸುತ್ತಿರಿ, ವಿಶೇಷವಾಗಿ ಅದು ಸ್ವಲ್ಪ ನಿಶ್ಶಕ್ತವಾಗಿದೆ ಎಂದು ಕಂಡಾಗ, ಆಗ ಶಕ್ತಿಯು ನಿಮ್ಮ ಮನಸ್ಸಿನಿಂದ ನಿಮ್ಮ ಶರೀರದೊಳಗೆ ವ್ಯಾಪಿಸುವುದನ್ನು ನೀವು ಮನಗಾಣುತ್ತೀರಿ. ನೀವು ಬಾಹ್ಯ ಭೌತಿಕ ಮೂಲಗಳಾದ ಆಹಾರ, ಗಾಳಿ ಮತ್ತು ಸೂರ್ಯರಶ್ಮಿಯಿಂದಷ್ಟೇ ಅಲ್ಲದೆ, ಒಂದು ಹೊಸ, ರಹಸ್ಯಮಯ, ಅಗೋಚರ ಸ್ವ-ಚೈತನ್ಯದಾಯಕ ಮೂಲವನ್ನು ತೆರೆಯಲು ಆರಂಭಿಸುತ್ತೀರಿ.

ಈ ಜೀವದ ಮೂಲದ ಬಗ್ಗೆ ನಿಮಗೆ ಅರಿವಿದ್ದಲ್ಲಿ, ಅದನ್ನು ಪೋಷಿಸುವ ಶಕ್ತಿಯನ್ನು ನಿರಂತರವಾಗಿ ಹೇಗೆ ಸೆಳೆದುಕೊಳ್ಳಬಹುದು ಎಂಬುದನ್ನು ನೀವು ಅರಿಯುತ್ತೀರಿ….ಜೀವದ ಈ ಸಾರ ಕೋಟ್ಯಂತರ ಜನರಿಗೆ ತಿಳಿದಿಲ್ಲ, ಆದರೂ ಅವರು ಸದಾ ಭಗವಂತನ ಶಕ್ತಿಯನ್ನು ಉಪಯೋಗಿಸುತ್ತಿದ್ದಾರೆ. ಆ ಶಕ್ತಿಯ ಬಗ್ಗೆ ಏಕೆ ಅರಿವನ್ನು ಹೊಂದಬಾರದು?

ಭಗವಂತನ ಸೃಷ್ಟ್ಯಾತ್ಮಕ, ಜೀವ-ಪೋಷಕ ಶಕ್ತಿಯಿಂದ ನೀವು ತುಂಬಿದ್ದೀರಿ ಎಂದು ಭಾವಿಸಿ. ಹಿಂದಿನ ಸೋಲುಗಳು, ಭಯ, ಅನಾರೋಗ್ಯ ಮತ್ತು ವೃದ್ಧಾಪ್ಯದ ಮರ್ತ್ಯ ಪ್ರಜ್ಞೆಯನ್ನು ಅಳಿಸಿಹಾಕುತ್ತಾ, ನಿಮ್ಮ ಶರೀರದಲ್ಲಿ ಭಗವಂತನ ಅವಿನಾಶಿ ಪ್ರಜ್ಞೆಯು ಅಭಿವ್ಯಕ್ತಿಯಾಗುತ್ತಿರುವುದನ್ನು ಮನಗಾಣಿ. ಈ ಆಲೋಚನೆಯನ್ನು ಆಳವಾದ ಏಕಾಗ್ರತೆಯಿಂದ ಪುನರುಚ್ಚರಿಸಿ: “ಭಗವಂತನೇ, ನೀನು ನನ್ನ ಶರೀರ, ನನ್ನ ಮನಸ್ಸು, ನನ್ನ ಆತ್ಮದಲ್ಲಿ ಉಪಸ್ಥಿತನಾಗಿರುವೆ. ನನ್ನ ಶರೀರ, ಮನಸ್ಸು ಮತ್ತು ಆತ್ಮವು ನಿನ್ನ ಅವಿನಾಶಿ ಯೌವನ, ಶಕ್ತಿ, ಅಮರತ್ವ ಮತ್ತು ಆನಂದಿಂದ ಪ್ರಜ್ವಲಿಸುವಂತೆ ನನ್ನನ್ನು ಹರಸು.”

ನಿಮ್ಮ ಪ್ರಾಣವನ್ನು ಹೆಚ್ಚಿನ ಶಕ್ತಿಯಿಂದ ತುಂಬುವುದು ಹೇಗೆ ಎಂಬ ಬಗ್ಗೆ ಮತ್ತು ಪರಮಹಂಸಜಿ ಅವರು ಮೇಲೆ ತಿಳಿಸಿರುವ ಚೈತನ್ಯದಾಯಕ ವ್ಯಾಯಾಮಗಳ ಪದ್ಧತಿಯ ಬಗ್ಗೆ ಅರಿಯಲು ದಿ ಡಿವೈನ್‌ ರೊಮಾನ್ಸ್‌ ಪುಸ್ತಕದ “ದಿ ಸೀಕ್ರೇಟ್‌ ಆಫ್‌ ವೈಟಾಲಿಟಿ” ಅಧ್ಯಾಯದ ಆಯ್ದ ಭಾಗಗಳನ್ನು ಓದಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ.

ಇದನ್ನು ಹಂಚಿಕೊಳ್ಳಿ