ನೀವು ಶಾಂತಿಯನ್ನು ಅಂತರಂಗದಲ್ಲಿ ಮತ್ತು ಎಲ್ಲೆಡೆ ಹೇಗೆ ಸ್ಥಾಪಿಸಬಹುದು, ಪರಮಹಂಸ ಯೋಗಾನಂದರಿಂದ

06 ಸೆಪ್ಟೆಂಬರ್‌, 2022

PY-ಕೊನೆಯ-ಸ್ಮೈಲ್

ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ...

ನೀವು ಈ ಜಗತ್ತನ್ನು ನಿಮ್ಮದೇ ರಾಷ್ಟ್ರವೆಂಬಂತೆ ಪ್ರೀತಿಸುವಿರಿ ಮತ್ತು ನಿಮ್ಮ ರಾಷ್ಟ್ರವನ್ನು, ನಿಮ್ಮ ಕುಟುಂಬವನ್ನು ಪ್ರೀತಿಸುವಂತೆ ಪ್ರೀತಿಸುತ್ತೀರಿ ಎಂದು ಸಂಕಲ್ಪಿಸಿ. ಈ ತಿಳುವಳಿಕೆಯ ಮೂಲಕ ನೀವು ವಿವೇಚನೆಯ ಅವಿನಾಶೀ ಅಡಿಪಾಯದ ಮೇಲೆ ವಿಶ್ವ ಕುಟುಂಬವನ್ನು ಸ್ಥಾಪಿಸಲು ಸಹಾಯ ಮಾಡುತ್ತೀರಿ.

ತಮ್ಮ ದೈನಂದಿನ ಭಕ್ತಿಪೂರ್ವಕ ಧ್ಯಾನದ ಅಭ್ಯಾಸದಿಂದ ಶಾಂತಿಯನ್ನು ಉಂಟುಮಾಡುವವರೇ ನಿಜವಾದ ಶಾಂತಿದೂತರು.

ಧ್ಯಾನ ಮತ್ತು ಭಗವಂತನ ಸಂಸರ್ಗವನ್ನು ನಿಯತವಾಗಿ ಅಭ್ಯಾಸ ಮಾಡಿ, ಆಗ ನಿಮ್ಮ ಬಾಹ್ಯ ಪರಿಸ್ಥಿತಿಗಳು ಹೇಗೇ ಇದ್ದರೂ, ನೀವು ಎಲ್ಲ ಸಮಯದಲ್ಲೂ ಆನಂದ ಮತ್ತು ಆಹ್ಲಾದಕರತೆಯ ದ್ರಾಕ್ಷಾರಸವನ್ನು ಸವಿಯುತ್ತೀರಿ. ನಿಮ್ಮ ಮೌನ-ಸಾಕ್ಷಾತ್ಕಾರದ ದೇವತೆಯ ಕೈಗಳಿಂದ ಆಂತರಿಕ ಶಾಂತಿಯ ಅಮೃತವನ್ನು ಕುಡಿದ ನೀವು ನಿಮ್ಮ ದೈನಂದಿನ ಜೀವನದ ಗೊಂದಲಗಳು ಮತ್ತು ದುಃಖಗಳನ್ನು ಮುಳುಗಿಸುತ್ತೀರಿ.

ಒಮ್ಮೆ ನೀವು ಅಂತರಂಗದಲ್ಲಿ ಆ ಶಾಂತಿಯನ್ನು ಕಂಡುಕೊಂಡರೆ, ಅದು ನಿಮ್ಮ ಪರಿಸರ ಮತ್ತು ಜಗತ್ತಿಗೆ ಆಶೀರ್ವಾದವಾಗಿ ಹರಿಯುತ್ತದೆ. ಒಳಗೆ ಸಾಮರಸ್ಯ, ಹೊರಗೆ ಸಾಮರಸ್ಯ, ಎಲ್ಲೆಡೆ ಸಾಮರಸ್ಯ! ಭಗವಂತನ ಶಾಂತಿಯಿಂದ ತುಂಬಿರುವ ವ್ಯಕ್ತಿಯು ಎಲ್ಲರೆಡೆಗೆ ಕೇವಲ ಸದ್ಭಾವನೆಯನ್ನು ಹೊಂದಿರುತ್ತಾನಷ್ಟೇ ಅಲ್ಲದೆ ಬೇರೇನಲ್ಲ. ಆ ಪ್ರಜ್ಞೆ ಮಾತ್ರ ಭೂಮಿಯ ಮೇಲೆ ಶಾಶ್ವತ ಶಾಂತಿಯನ್ನು ತರಬಲ್ಲದು.

 

ಸ್ವಾಮಿ ಭೂಮಾನಂದ ಗಿರಿಯವರ ನೇತೃತ್ವದಲ್ಲಿ “ಪರಮಹಂಸ ಯೋಗಾನಂದರ ‘ಭೂಮಿಯ ಮೇಲೆ ಶಾಂತಿಯ ಸ್ಥಾಪನೆಗಾಗಿ ಪ್ರಾರ್ಥನೆ’” ಕುರಿತ ಮಾರ್ಗದರ್ಶಿತ ಧ್ಯಾನದಲ್ಲಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಈ ಧ್ಯಾನವು ಪರಮಹಂಸ ಯೋಗಾನಂದರ ಪ್ರಾರ್ಥನೆಯಿಂದ ಆಯ್ದ ದೃಶ್ಯೀಕರಿಸುವ ಮತ್ತು ದೃಢೀಕರಿಸುವ ಪ್ರಬಲವಾದ ಆಲೋಚನೆಗಳನ್ನು ಒಳಗೊಂಡಿರುತ್ತದೆ. ನಿಮ್ಮೊಳಗೆ ಶಾಂತಿಯು ಸ್ಥಾಪಿತವಾದ ನಂತರ, ನಿಮ್ಮ ಶಾಂತಿ ಮತ್ತು ಪ್ರೀತಿಯಿಂದ “ಜಗತ್ತಿನ ಎಲ್ಲ ಮುಖಂಡರು ಮತ್ತು ನಾಗರಿಕರ ಹೃದಯಗಳನ್ನು ತುಂಬುವ ಮೂಲಕ” ನೀವು ಇಂದು ಮತ್ತು ಯಾವುದೇ ದಿನ ಜಗತ್ತನ್ನು ಸಕಾರಾತ್ಮಕವಾಗಿ ಪ್ರಭಾವಿಸಬಹುದು.

ಇದನ್ನು ಹಂಚಿಕೊಳ್ಳಿ