ಪರಿಚಯ:
ನಮ್ಮೆಲ್ಲರ ಜೀವನವು ಎಷ್ಟೇ ವಿಭಿನ್ನವಾದುದು ಎಂದು ಕಂಡರೂ, ನಾವೆಲ್ಲರೂ ಹುಡುಕುತ್ತಿರುವುದು ಕೇವಲ ಒಂದನ್ನೇ – ಪರಿಜ್ಞಾನದ ಕಣ್ಣುಗಳ ಮೂಲಕ ನೋಡಿದಾಗ. “ಸಂತೋಷವು ಮೋಡಿಮಾಡುವಷ್ಟು ವೈವಿಧ್ಯಮಯವಾಗಿದ್ದರೂ ಅದರ ಸಾರವು ಅಪರಿವರ್ತಿತವಾದುದು, ಅದೇ ಆಂತರಿಕ ಅನುಭವವನ್ನು ಎಲ್ಲರೂ ಅರಸುತ್ತಿರುವುದು” ಎಂದು ಪರಮಹಂಸ ಯೋಗಾನಂದರು ಹೇಳಿದ್ದಾರೆ.
ಸಮಸ್ಯೆಯೇನೆಂದರೆ, ಅಂತಹ ಒಂದು ಕೊನೆಯಿಲ್ಲದ ಸಂತೋಷವನ್ನು ನಾವು ತಪ್ಪಾದ ಜಾಗದಲ್ಲಿ ಹುಡುಕುತ್ತಿದ್ದೇವೆ. ನಾವು ಒಂದು ಆಸೆಯನ್ನು ಪೂರೈಸಿಕೊಳ್ಳುತ್ತಿರುವಂತೆ, ಅದರಿಂದ ಉಂಟಾದ ಆನಂದವು ಕಡಿಮೆಯಾಗುವುದನ್ನು ಕಾಣುತ್ತೇವೆ ಏಕೆಂದರೆ, ಅಷ್ಟರಲ್ಲಿ ಹೊಸ ಆಸೆಯೊಂದು ಜನ್ಮ ತಾಳಿರುತ್ತದೆ. ನಾವು ಅಪಾರ ಆಸ್ತಿ ಅಥವಾ ದೊಡ್ಡ ಸಾಧನೆಯನ್ನು ಮಾಡಿರಬಹುದು ಆದರೂ “ಇನ್ನೂ ಹೆಚ್ಚಿನದಕ್ಕೆ” ನಮ್ಮಲ್ಲಿ ಆಳವಾದ ಹಂಬಲವಿದೆ ಎಂಬುದನ್ನು ಕಾಣುತ್ತೇವೆ.
ಆ ಹಂಬಲವನ್ನು ಈ ಜನ್ಮದಲ್ಲಿ ತೃಪ್ತಿಪಡಿಸುವುದಕ್ಕೆ ಸಾಧ್ಯವಿದೆಯೇ? ಎಲ್ಲ ಆಧ್ಯಾತ್ಮಿಕ ಪಂಥಗಳ ಸಂತರು ಇದು ನಮ್ಮ ಜನ್ಮಸಿದ್ಧ ಹಕ್ಕು ಎಂದು ಹೇಳಿರುವ, ಎಂದೆಂದಿಗೂ ನಮಗೆ ಬೇಸರ ಪಡಿಸದ ಆನಂದವನ್ನು ಪಡೆಯುವುದು ನಿಜವಾಗಿಯೂ ಸಾಧ್ಯವೇ?
ಈ ಪ್ರಸ್ತುತ ಕಾಲದಲ್ಲಿ ಅವರ ಹೆಸರಾಂತ ಗುರುಗಳ ಪರಂಪರೆಯು ಮತ್ತೆ ಆಚರಣೆಗೆ ತಂದ ಧ್ಯಾನದ ವಿಜ್ಞಾನವನ್ನು ಪ್ರತಿದಿನ ಅಭ್ಯಾಸ ಮಾಡುತ್ತಾ – ಕ್ರಿಯಾ ಯೋಗ – ಆ ನಿತ್ಯ ಪ್ರಶ್ನೆಗೆ ಹೇಗೆ ನೀವು ಖಚಿತವಾಗಿ ಉತ್ತರಿಸಬಹುದು ಎಂಬುದನ್ನು ಪರಮಹಂಸಜಿ ವಿವರಿಸುತ್ತಾರೆ.
ಆಂತರ್ಯದೊಳಗೆ ಹೋಗುವ ಹೆಜ್ಜೆ ಹೆಜ್ಜೆಯ ಮಾರ್ಗದ ಮೂಲಕ, ಕ್ಷಣಿಕ ಸಂತೋಷವನ್ನುಂಟುಮಾಡುವುಗಳಿಗಿಂತ ಹೆಚ್ಚಿನದಕ್ಕಾಗಿ ಶ್ರಮಪಡುವ ಯಾರೇ ಆದರೂ ಹಂತ ಹಂತವಾಗಿ ಆತ್ಮಕ್ಕೆ ಆ ದೀರ್ಘ ಕಾಲದಿಂದ ಅರಸುತ್ತಿರುವ ನಿತ್ಯ ನೂತನ ಆನಂದದ ಭರವಸೆಯನ್ನು ನೀಡಬಹುದು – ನಂತರ ಆ ಆನಂದವು ಜೀವನದ ಎಲ್ಲ ಕ್ಷೇತ್ರಗಳಲ್ಲೂ ತುಂಬಿ ಹರಿಯುವಂತೆ ಮಾಡಬಹುದು.

ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:
ನಾವೆಲ್ಲರೂ ಸಂತೋಷವನ್ನು ಅರಸುತ್ತಿದ್ದೇವೆ, ಸುಮ್ಮನೆ ಬಂದು ಹೋಗುವ ಸಂತೋಷವನ್ನಲ್ಲ. ನಮಗೆ ಕೊನೆಯಾಗದ ಸಂತೋಷ ಬೇಕಾಗಿದೆ – ಸದಾ ಹೊಸದಾದ ಮತ್ತು ನಿತ್ಯ-ಪ್ರಸ್ತುತವಾದ ಆನಂದ. ಹಳಸಿ ಮುಗ್ಗಲಾಗುವಂತಹ ಸಂತೋಷವು ನಮಗೆ ಬೇಕಿಲ್ಲ. ನಮಗೆ ನಿತ್ಯ ನೂತನ ಆನಂದ ಬೇಕಿದೆ.
ಕ್ರಿಯಾ ಯೋಗದ ಆಧ್ಯಾತ್ಮಿಕ ಆನಂದಕ್ಕಿಂತ ಮಹತ್ತರವಾದ ಯಾವುದೇ ಸಂತೋಷವನ್ನು ನಾನು ಪ್ರಪಂಚದಲ್ಲಿ ಎಂದೂ ಕಂಡಿಲ್ಲ. ಪಶ್ಚಿಮದ ಎಲ್ಲ ಸುಖಸೌಕರ್ಯಗಳಿಗೂ ಅಥವಾ ಜಗತ್ತಿನ ಎಲ್ಲ ಬಂಗಾರಕ್ಕೂ ನಾನದನ್ನು ಬಿಟ್ಟುಕೊಡಲಾರೆ. ನನ್ನ ಸಂತೋಷವನ್ನು ನನ್ನ ಜೊತೆ ತೆಗೆದುಕೊಂಡು ಹೋಗುವುದನ್ನು ನಾನು ಕ್ರಿಯಾ ಯೋಗದ ಮೂಲಕ ಸಾಧ್ಯವಿದೆ ಎಂದು ಕಂಡುಕೊಂಡಿದ್ದೇನೆ.
ಕ್ರಿಯಾ ಯೋಗವನ್ನು ಗಾಢವಾಗಿ ಅಭ್ಯಾಸ ಮಾಡಿದಲ್ಲಿ, ಅದು ಉಸಿರನ್ನು ಮನಸ್ಸಿನೊಳಗೆ, ಮನಸ್ಸನ್ನು ಅಂತರ್ಬೋಧೆಯೊಳಗೆ, ಅಂತರ್ಬೋಧೆಯನ್ನು ಆತ್ಮದ ಆನಂದಮಯ ಗ್ರಹಿಕೆಯೊಳಗೆ ಮತ್ತು ಆತ್ಮವನ್ನು ಚೇತನದ ಬ್ರಹ್ಮಾಂಡ ಆನಂದದೊಳಗೆ ವಿಲೀನಗೊಳಿಸುತ್ತದೆ.
ನೀವು ಮಾಡುವ ಪ್ರತಿಯೊಂದು ಒಳ್ಳೆಯ ಕ್ರಿಯೆಯೂ ಪ್ರಜ್ಞೆಯ ಭೂಮಿಯೊಳಗೆ ಒಂದು ಗುದ್ದಲಿಯಂತೆ ಅಗೆಯುತ್ತದೆ ಮತ್ತು ಭಗವದಾನಂದದ ಚಿಲುಮೆಯಿಂದ ಒಂದು ಸಣ್ಣ ಹನಿಯನ್ನು ಸಿಂಪಡಿಸುತ್ತದೆ. ಆದರೆ ಒಂದು ಒಳ್ಳೆಯ ಕ್ರಿಯೆಯ ಅತ್ಯುನ್ನತ ರೂಪವಾದ ಧ್ಯಾನದ ಗುದ್ದಲಿಯು, ಪ್ರಜ್ಞೆಯ ಆಂತರಿಕ ಮೇಲ್ಮೈಯನ್ನು ತೆರೆಯುತ್ತದೆ ಮತ್ತು ಜೀವನದ ಎಲ್ಲ ಆನಂದವನ್ನು ಧಾರಾಕಾರವಾಗಿ ಚಿಮ್ಮಿಸುತ್ತದೆ.
ಯೋಗವೆಂದರೆ ಚೇತನದೊಡನೆ ಆತ್ಮದ ಸಂಯೋಗ – ಪ್ರತಿಯೊಬ್ಬರೂ ಅರಸುತ್ತಿರುವ ಮಹದಾನಂದದೊಂದಿಗಿನ ಸಂಯೋಗ. ಇದು ಒಂದು ಅದ್ಭುತವಾದ ವ್ಯಾಖ್ಯಾನವಲ್ಲವೇ? ಚೇತನದ ನಿತ್ಯ ನೂತನ ಆನಂದದಲ್ಲಿ ನೀವು ಅನುಭವಿಸುತ್ತಿರುವ ಆನಂದವು ಬೇರೆ ಯಾವುದೇ ಸಂತೋಷಕ್ಕಿಂತಲೂ ಮಹತ್ತರವಾದುದು ಎಂದು ನೀವು ಮನಗಾಣುತ್ತೀರಿ ಮತ್ತು ಯಾವುದೂ ಕೂಡ ನಿಮ್ಮನ್ನು ಕೆಳಗೆಳೆಯಲಾರದು.
ನ್ಯೂಯಾರ್ಕಿನಲ್ಲಿ ನಾನು ಒಬ್ಬ ಆಗರ್ಭ ಶ್ರೀಮಂತ ವ್ಯಕ್ತಿಯನ್ನು ಭೇಟಿಯಾದೆ. ತಮ್ಮ ಜೀವನದ ಬಗ್ಗೆ ಏನನ್ನೋ ಹೇಳುತ್ತಿರುವಾಗ, ಅವರು ಎಳೆದೆಳೆದು ಹೇಳಿದರು, “ನಾನು ಹೇಸಿಗೆ ಹುಟ್ಟಿಸುವಷ್ಟು ಶ್ರೀಮಂತನಾಗಿದ್ದೇನೆ ಮತ್ತು ಹೇಸಿಗೆ ಹುಟ್ಟಿಸುವಷ್ಟು ಆರೋಗ್ಯವಂತನಾಗಿದ್ದೇನೆ –” ಅವರು ಹೇಳುವುದನ್ನು ಪೂರೈಸುವಷ್ಟರಲ್ಲೇ ನಾನು ಉದ್ಗಾರ ತೆಗೆದೆ, “ಆದರೆ ನೀವು ಹೇಸಿಗೆ ಹುಟ್ಟಿಸುವಷ್ಟು ಸಂತೋಷವಾಗಿಲ್ಲ! ಸದಾ ಹೊಸತಾದ ಆನಂದದಿಂದಿರಲು ನೀವು ಹೇಗೆ ಸದಾ ಆಸಕ್ತಿಯುಳ್ಳವರಾಗಬಹುದು ಎಂಬುದನ್ನು ನಾನು ನಿಮಗೆ ಕಲಿಸುತ್ತೇನೆ.” ಅವರು ನನ್ನ ಶಿಷ್ಯರಾದರು. ಕ್ರಿಯಾ ಯೋಗವನ್ನು ಅಭ್ಯಾಸ ಮಾಡುತ್ತಾ, ಭಗವಂತನಿಗೆ ಸದಾ ಆಂತರಿಕವಾಗಿ ದೃಢನಿಷ್ಠರಾಗಿ ಒಂದು ಸಮತೋಲಿತ ಜೀವನವನ್ನು ನಡೆಸುತ್ತಾ ಸದಾ ನಿತ್ಯ ನೂತನ ಆನಂದಿಂದ ತುಂಬಿತುಳುಕುತ್ತಾ, ಅವರು ತುಂಬು ವಯಸ್ಸಿನವರೆಗೂ ಜೀವಿಸಿದರು.
ಪ್ರಜ್ಞೆಯ ಸಾಧಾರಣ ಸ್ಥಿತಿಗಳು ಮತ್ತು ಆಂತರ್ಯದಲ್ಲಿ ಚೇತನದ ನಿತ್ಯ ನೂತನ ಆನಂದವನ್ನು ಅನುಭವಿಸುವುದರ ನಡುವಿನ ವ್ಯತ್ಯಾಸವನ್ನು ಇನ್ನಷ್ಟು ವಿವರಿಸುವ ಪರಮಹಂಸ ಯೋಗಾನಂದರ ಒಂದು ಪ್ರವಚನದ ಆಯ್ದ ಭಾಗವನ್ನು ಓದಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ.
ನೈಜ ಸಂತೋಷ ಹಾಗೂ ಪ್ರಜ್ಞೆಯ ಸಂಪೂರ್ಣ ಪರಿವರ್ತನೆಯನ್ನುಂಟುಮಾಡುವ ಕ್ರಿಯಾ ಯೋಗದ ಶಕ್ತಿಯ ಬಗ್ಗೆ ನೀವು ಪರಮಹಂಸ ಯೋಗಾನಂದರು ಹೇಳುವುದನ್ನು ಕೂಡ ಕೇಳಬಹುದು.