ದಯೆಯ ಆಳವಾದ ಅಭ್ಯಾಸ ಮತ್ತು ಪರಿಣಾಮಗಳ ಬಗ್ಗೆ ಪರಮಹಂಸ ಯೋಗಾನಂದರು

ನವೆಂಬರ್‌ 20, 2024

ಒಂದು ಪರಿಚಯ: 

ನಾವೆಲ್ಲರೂ ನಮ್ಮ ಜೀವನದಲ್ಲಿ ಮತ್ತು ಪ್ರಪಂಚದಲ್ಲಿ ಭಗವಂತನ ಉಪಸ್ಥಿತಿ ಹೆಚ್ಚು ಸ್ಪಷ್ಟವಾಗಿರಬೇಕೆಂದು ಬಯಸುತ್ತೇವೆ. 

ಮತ್ತು ಇದನ್ನು ಸಾಧಿಸುವ ಹೆಚ್ಚು ತತ್‌ಕ್ಷಣದ ಮತ್ತು ಸಾರ್ವತ್ರಿಕ ಮಾರ್ಗವೆಂದರೆ ನಾವು ಹೇಗೆ ಇತರರನ್ನು ನೋಡುತ್ತೇವೆ ಮತ್ತು ಆದರಿಸುತ್ತೇವೆ ಎಂಬುದು. 

ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿಯವರು ಸಲಹೆ ನೀಡಿರುವ ಹಾಗೆ: “ನೀವು ಭೇಟಿಯಾಗುವ ಎಲ್ಲ ವ್ಯಕ್ತಿಗಳಲ್ಲಿ ಸದ್ಭಾವನೆಯ ಮತ್ತು ಆಧ್ಯಾತ್ಮಿಕ ಪ್ರಜ್ಞೆಯ ಅಭಿವ್ಯಕ್ತಿಗಳನ್ನು ಗುರುತಿಸಿ ಮತ್ತು ಅವುಗಳ ಮೇಲೆ ಏಕಾಗ್ರರಾಗಿ — ಅವರ ಅಭಿಪ್ರಾಯಗಳು ನಿಮ್ಮದರ ಜೊತೆಗೆ ತಾಳೆಯಾಗದಿದ್ದವರಲ್ಲೂ ಸಹ — ಆಗ ಈ ರೀತಿಯಲ್ಲಿ ಗಮನ ಹರಿಸುವ ಕ್ರಿಯೆಯು ಈ ಪ್ರಪಂಚದಲ್ಲಿ ಭಗವಂತನ ಉಪಸ್ಥಿತಿಯ ಅಭಿವ್ಯಕ್ತಿಯನ್ನು ಹೆಚ್ಚಿಸುವುದನ್ನು ನೀವು ಮನಗಾಣುತ್ತೀರಿ….ಇತರರನ್ನು ಆತ್ಮಗಳೆಂಬತೆ ನೋಡಿ, ಆ ಗೌರವಾನ್ವಿತ ಮತ್ತು ಮನ್ನಣೆಯ ಪ್ರವೃತ್ತಿಯಿಂದ ನೀವು ಆತ್ಮದ ಸದ್ಗುಣಗಳ ಮಹತ್ತರವಾದ ಅಭಿವ್ಯಕ್ತಿಯನ್ನು ಅವರಿಂದ ಮತ್ತು ನಿಮ್ಮಿಂದ ಸೂಕ್ಷ್ಮವಾಗಿ ಸೆಳೆಯುತ್ತೀರಿ.” 

ಕೆಳಗೆ ಹಂಚಿಕೊಂಡಿರುವ ದಯೆಯ ಆತ್ಮದ ಗುಣವನ್ನು ಅಭ್ಯಾಸ ಮಾಡುವ ಮಹತ್ವ — ಮತ್ತು ಮಹತ್ತರ ಪ್ರಯೋಜನದ — ಬಗ್ಗೆಯ ಪರಮಹಂಸ ಯೋಗಾನಂದರ ಲೇಖನದಲ್ಲಿ ನೀವು ಸ್ಫೂರ್ತಿದಾಯಕ ಹಾಗೂ ಸಮತೋಲಿತ ಅರಿವನ್ನು ಕಾಣುತ್ತೀರಿ.

ಪರಮಹಂಸ ಯೋಗಾನಂದರ ಪ್ರವಚನಗಳು ಮತ್ತು ಬರಹಗಳಿಂದ:

ಪ್ರಾಮಾಣಿಕ, ಮಧುರ ನುಡಿಗಳು ಬಾಯಾರಿದ ಆತ್ಮಗಳಿಗೆ ಅಮೃತವಿದ್ದ ಹಾಗೆ. ಮೃದು ನುಡಿಗಳಿಗೆ ಎಲ್ಲೆಡೆ ಬೇಡಿಕೆಯಿದೆ. 

ಸೌಜನ್ಯತೆ ತೋರಿಸಬೇಕು ಎಂಬ ಕಾರಣಕ್ಕಾಗಿ ನಾವು ಎಲ್ಲದಕ್ಕೂ ಸಮ್ಮತಿಸಬೇಕಾಗಿಲ್ಲ. ಬೇರೆಯವರೊಂದಿಗೆ ಸಹಮತವಿರಲಿ ಬಿಡಲಿ, ಶಾಂತವಾದ ಮೌನ, ಪ್ರಾಮಾಣಿಕತೆ ಮತ್ತು ವಿನಮ್ರತೆಯುಳ್ಳ ಮಾತುಗಳು, ಹೇಗೆ ವರ್ತಿಸಬೇಕು ಎಂದು ತಿಳಿದವನ ಕುರುಹಾಗಿರುತ್ತದೆ.

ಒಬ್ಬ ಬದ್ಧವೈರದ ಶತ್ರುವಿಗೂ ಕೂಡ ನಾನು ನಿರ್ದಯವಾಗಿರಬಲ್ಲೆ ಎಂಬುದನ್ನು ನಾನು ಯೋಚಿಸಲೇ ಆಗದು. ಅದು ನನಗೆ ನೋವುಂಟುಮಾಡುತ್ತದೆ. ಪ್ರಪಂಚದಲ್ಲಿ ಎಷ್ಟು ನಿರ್ದಯತೆಯಿದೆ ಎಂಬುದನ್ನು ನಾನು ನೋಡುತ್ತಿದ್ದೇನೆ ಮತ್ತು ಅದಕ್ಕೆ ಮತ್ತಷ್ಟು ಸೇರಿಸಲು ನನಗೆ ಯಾವ ನೆಪವೂ ಇಲ್ಲ. ನೀವು ಭಗವಂತನನ್ನು ಪ್ರೀತಿಸಿದಾಗ ಮತ್ತು ನೀವು ಪ್ರತಿಯೊಂದು ಆತ್ಮದಲ್ಲೂ ಭಗವಂತನನ್ನು ಕಂಡಾಗ, ನೀವು ನಿರ್ದಯಿಯಾಗಿರಲು ಸಾಧ್ಯವೇ ಇಲ್ಲ.

ಜನರು ನಿಮ್ಮ ಅವಹೇಳನ ಮಾಡಲು ಬಿಡಬೇಡಿ, ಆದರೆ ಅಂತರಂಗದಲ್ಲಿ ಯಾರೂ ಕೂಡ ನಿಮ್ಮನ್ನು ನೋಯಿಸದ ಹಾಗೆ ಅಥವಾ ನಿಮ್ಮ ಮನಃಶಾಂತಿಯನ್ನು ದೂರಮಾಡದ ಹಾಗೆ ಶಾಂತರಾಗಿರಬೇಕು. ಯಾರೋ ಒಬ್ಬರು ನನ್ನ ದಯಾಪರತೆಯನ್ನು ಪುನಃ ಪುನಃ ಹೀಗಳೆಯುತ್ತಿದ್ದಾರೆ ಎಂದು ಮನವರಿಕೆಯಾದಾಗ, ಆ ವ್ಯಕ್ತಿಯು ತನ್ನ ತಪ್ಪನ್ನು ಅರಿಯುವವರೆಗೂ ನಾನು ನಿರ್ದಾಕ್ಷಿಣ್ಯವಾಗಿ ಮೌನವಾಗುತ್ತೇನೆ ಮತ್ತು ತಟಸ್ಥವಾಗುತ್ತೇನೆ; ಆದರೆ ನಾನು ನಿರ್ದಯಿಯಾಗುವುದಿಲ್ಲ.

ಅಲ್ಪ ಅಹಂನ ಮೇಲಿನ ಮಹತ್ತರವಾದ ಗೆಲವುಗಳಲ್ಲೊಂದೆಂದರೆ, ಯಾವಾಗಲೂ ಚಿಂತನಶೀಲರಾಗಿ ಮತ್ತು ಪ್ರೀತಿಯಿಂದ ವರ್ತಿಸುವ ನಿಮ್ಮ ಸಾಮರ್ಥ್ಯದ ಬಗ್ಗೆ ಖಚಿತವಾಗಿರುವುದು, ಯಾರೂ ನಿಮ್ಮನ್ನು ವಿಭಿನ್ನವಾಗಿ ವರ್ತಿಸುವಂತೆ ಮಾಡಲು ಸಾಧ್ಯವಿಲ್ಲ ಎಂಬ ಅರಿವಿನಲ್ಲಿ ನಿರಾತಂಕವಾಗಿರುವುದು. ಇದನ್ನು ಅಭ್ಯಾಸ ಮಾಡಿ. ಇಡೀ ರೋಮನ್‌ ಸರ್ಕಾರ ಕ್ರಿಸ್ತನಲ್ಲಿ ನಿರ್ದಯತೆಯನ್ನು ಮೂಡಿಸಲಾಗಲಿಲ್ಲ. ಅವನನ್ನು ಶಿಲುಬೆಗೇರಿಸಿದವರಿಗಾಗಿ ಕೂಡ ಅವನು ಪ್ರಾರ್ಥಿಸಿದ: “ಪ್ರಭುವೇ, ಅವರನ್ನು ಕ್ಷಮಿಸು; ಏಕೆಂದರೆ ಅವರೇನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲ.”

ಇತರರನ್ನು ಆನಂದಪಡಿಸಲು ನಿಮ್ಮ ಮಿತಿಯಿಂದಾಚೆಗೆ ಹೋಗಿ. ಎಲ್ಲರನ್ನೂ ನೀವು ಸಂತುಷ್ಟಗೊಳಿಸಲು ಸಾಧ್ಯವಿಲ್ಲ. ಆದರೆ ಯಾವ ಆತ್ಮಗಳು ನಿಮ್ಮ ಮಾರ್ಗದಲ್ಲಿ ಬರುವುವೋ ಅವುಗಳಿಗೆ ಅನುಕಂಪ ಮತ್ತು ಪ್ರೇಮವನ್ನು ನೀಡಿ. ನಿರ್ದಯೆಗೆ ಬದಲಾಗಿ ಜನರಿಗೆ ಮನಸಾರೆ ದಯೆಯನ್ನು ತೋರಿಸುವುದಕ್ಕಿಂತ ಹೆಚ್ಚಿನ ಮುಕ್ತಗೊಳಿಸುವ ಕ್ರಮ ಬೇರೊಂದಿಲ್ಲ.

[ದೃಢೀಕರಿಸಿ:] “ಯಾರು ನನ್ನನ್ನು ತಪ್ಪಾಗಿ ತಿಳಿದುಕೊಂಡಿದ್ದಾರೋ ಅವರ ಹೃದಯಗಳನ್ನು ಉಲ್ಲಾಸಗೊಳಿಸುತ್ತೇನೆ ಎಂಬ ನಂಬಿಕೆಯಲ್ಲಿ, ನಾನು ಎಂದೆಂದಿಗೂ ದಯೆಯ ಮಂಕಾಗದ ಪಂಜಿನ ಬೆಳಕನ್ನು ಹಿಡಿಯುತ್ತೇನೆ.”

2023ರಲ್ಲಿ ಭಾರತದ ಹೈದರಾಬಾದ್‌ನಲ್ಲಿ ಸ್ವಾಮಿ ಚಿದಾನಂದ ಗಿರಿಯವರು ಮಾಡಿದ ಒಂದು ವೀಡಿಯೋ ತುಣುಕನ್ನು ನೋಡಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ, ಅದರಲ್ಲಿ ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಅಧಕ್ಷರು: ಧ್ಯಾನದ ವಿಜ್ಞಾನದ ಮೂಲಕ ನಾವು ಹೇಗೆ ನಮ್ಮ ಪ್ರಜ್ಞೆಯನ್ನು ಎತ್ತರಿಸಿ, ನಮ್ಮ ಅತ್ಮದ ನೈಜ ಸಹಜ ಸ್ವಭಾವವನ್ನು ಜಾಗೃತಗೊಳಿಸಬಹುದು ಎಂಬುದರ ಬಗ್ಗೆ ವಿವರಿಸುತ್ತಾರೆ. 

ಇದನ್ನು ಹಂಚಿಕೊಳ್ಳಿ