ಕೆಳಗಿನ ಸಂದೇಶ “ಮಾನಸಿಕ ದೌರ್ಬಲ್ಯಗಳಿಂದ ಹೊರಬರುವುದು ಹೇಗೆ” ಎಂಬ ಭಾಷಣದ ಆಯ್ದ ಭಾಗವಾಗಿದೆ, ಇದನ್ನು ಜೀವನದ ರಹಸ್ಯವನ್ನು ಪರಿಹರಿಸುವುದು ಎಂಬ ಪರಮಹಂಸ ಯೋಗಾನಂದರ ಭಾಷಣಗಳು ಮತ್ತು ಪ್ರಬಂಧಗಳ ಸಂಗ್ರಹದ ಸಂಪುಟ IV ರಲ್ಲಿ ಸಂಪೂರ್ಣವಾಗಿ ಓದಬಹುದು — ಇದನ್ನು ಶೀಘ್ರದಲ್ಲೇ ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ ಮತ್ತು ನಂತರ ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಬಿಡುಗಡೆ ಮಾಡಲಿದೆ. ಪೂರ್ಣ ಭಾಷಣವನ್ನು ಜುಲೈ 14, 1940 ರಂದು ಕ್ಯಾಲಿಫೋರ್ನಿಯಾದ ಎನ್ಸಿನಿಟಾಸ್ ನಲ್ಲಿರುವ ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ ಗೋಲ್ಡನ್ ಲೋಟಸ್ ಟೆಂಪಲ್ ನಲ್ಲಿ ನೀಡಲಾಯಿತು.

ಭೂಮಿಯ ಮೇಲೆ ನಮ್ಮ ಪ್ರಮುಖ ಕರ್ತವ್ಯವೆಂದರೆ ನಮ್ಮ ಸ್ಥಿತಿಯನ್ನು ಮರ್ತ್ಯತೆಯಿಂದ ದೈವಿಕತೆಗೆ ಬದಲಾಯಿಸುವುದು. ಆದರೆ ಈ ಜಗತ್ತು ಪ್ರಲೋಭನೆಯನ್ನು ಒಡ್ಡುವಂತ ಆಟಿಕೆಗಳಿಂದ ತುಂಬಿದೆ — ನಮ್ಮ ಗಮನವನ್ನು ಸೆಳೆಯುವ ಹೊಳೆಯುವ ಭೌತಿಕ ಆಟಿಕೆಗಳು — ಮತ್ತು ನಮ್ಮ ಆಲೋಚನೆಗಳು ಮತ್ತು ನಡವಳಿಕೆಯನ್ನು ಬಯಕೆಗಳ ಸಂಕುಚಿತ ಹಾದಿಗಳೆಡೆಗೆ ಒಯ್ಯುವ ಅಸಂಖ್ಯಾತ ಮಾರ್ಗಗಳಿವೆ.
ಜ್ಞಾನದಿಂದ ಮಾರ್ಗದರ್ಶಿಸಲ್ಪಡದ ಹೊರತು, ನಾವು ಈ ಸೀಮಿತ ಹಾದಿಗಳಲ್ಲಿ ಸಿಲುಕಿಕೊಳ್ಳುತ್ತೇವೆ ಮತ್ತು ಆತ್ಮ ಪ್ರಗತಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ನಮ್ಮ ಎಲ್ಲಾ ಆಸೆಗಳಲ್ಲಿ ದೈವಿಕ ಅನ್ವೇಷಣೆಯನ್ನು ಪ್ರಮುಖವೆಂದು ನಾವು ಪರಿಗಣಿಸಿದಾಗ ಮಾತ್ರ ಶಾಶ್ವತ ಸಂತೋಷಕ್ಕೆ ಕಾರಣವಾಗುವ ಮಾರ್ಗವನ್ನು ನಾವು ಕಂಡುಕೊಳ್ಳುತ್ತೇವೆ.
ನಿಮ್ಮ ಜೀವನದ ಪ್ರಗತಿಯನ್ನು ವಿಶ್ಲೇಷಿಸಿ: ನೀವು ಹತಾಶೆಯಲ್ಲಿದ್ದೀರಾ?
ನೀವು ಒಂದು ಮಣ್ಣಿನ ರಸ್ತೆಯಲ್ಲಿ ಪ್ರಯಾಣಿಸುತ್ತಿರುವಾಗ ನಿಮ್ಮ ವಾಹನವು ಕೆಸರಿನಲ್ಲಿ ಸಿಲುಕಿಕೊಂಡರೆ, ಆ ಕೆಸರಿಂದ ನಿಮ್ಮ ಕಾರನ್ನು ಮುಕ್ತಗೊಳಿಸಲು ಕೌಶಲ್ಯಪೂರ್ಣ ಚಾಲನೆ — ಮತ್ತು ಬಹುಶಃ ಒಂದು ಟೋ ವಾಹನದ! — ಅಗತ್ಯವಿದೆ. ಅದೇ ರೀತಿ, ಮಾನವಕುಲವು ಮಾನಸಿಕ ಕಿರಿಕಿರಿಗಳಲ್ಲಿ ಸಿಲುಕಿಕೊಳ್ಳುತ್ತದೆ; ಮತ್ತು ಅವುಗಳಿಂದ ಹೊರಬರುವುದು ಹೇಗೆ ಎಂಬುದು ನಾವು ಗಮನ ಹರಿಸಬೇಕಾಗಿರುವ ವಿಷಯವಾಗಿದೆ.
ನೀವೆಲ್ಲರೂ ನಿಮ್ಮ ಜೀವನದ ಪ್ರಗತಿಯನ್ನು ಕಾಲ ಕಾಲಕ್ಕೆ ನಿಯಮಿತವಾಗಿ ವಿಶ್ಲೇಷಿಸಿ, ನೀವು ಹಳಿತಪ್ಪಿದ್ದೀರಾ ಎಂದು ನೋಡಿ. ಮೊದಲು, ನೀವು ಯಾವ ರೀತಿಯ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದೀರಿ ಎಂದು ನಿಮ್ಮನ್ನು ಕೇಳಿಕೊಳ್ಳಿ. ನೀವು ನಿಮ್ಮ ಜೀವನದ ಗಮ್ಯಸ್ಥಾನಕ್ಕೆ ಖಂಡಿತವಾಗಿಯೂ ಕರೆದೊಯ್ಯುವ ಸುಗಮ, ಪ್ರಕಾಶಮಾನವಾದ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದೀರಾ?…
ಆದರೂ ಸಹ ನೀವು ಸರಿಯಾಗಿ ಚಾಲನೆ ಮಾಡದಿರುವ ಸಾಧ್ಯತೆ ಇರುತ್ತದೆ. ನೀವು ನಿಮ್ಮ ಬಗ್ಗೆ ತುಂಬಾ ಖಚಿತವಾಗಿದ್ದರೆ ಮತ್ತು ಅಜಾಗರೂಕತೆಯಿಂದ ನಿಮ್ಮ ಕಣ್ಣುಗಳನ್ನು ರಸ್ತೆಯಿಂದ ಬೇರೆಡೆಗೆ ತಿರುಗಿಸಿದರೆ, ನೀವು ದಿಕ್ಕು ತಪ್ಪಿ ರಸ್ತೆಯ ಪಕ್ಕದಲ್ಲಿ ಹಳಿ ತಪ್ಪಬಹುದು.
ಮರ್ತ್ಯ ಜೀವನದ ಯಾವುದೇ ಹಾದಿಯಲ್ಲಿ ಒಬ್ಬರು ಹಳಿತಪ್ಪಿ ಹೋಗಬಹುದು; ಅವು ಮನುಷ್ಯನ ಪ್ರಜ್ಞೆಯನ್ನು ಸೆರೆಹಿಡಿಯಲು ಎಲ್ಲೆಡೆ ಇರುತ್ತವೆ. ಕೆಲವು ನಿಮ್ಮ ಭಾವನೆಗಳನ್ನು ಬಲವಂತವಾಗಿ ಕೋಪಕ್ಕೆ ದೂಡುತ್ತವೆ; ಕೆಲವು ನಿಮ್ಮನ್ನು ನಿರಾಶಾವಾದ ಅಥವಾ ಹತಾಶೆಯ ಮನಸ್ಥಿತಿಯಲ್ಲಿ ಸಿಲುಕಿಸುತ್ತವೆ; ಇತರ ಪರಿಸ್ಥಿತಿಗಳು ನಿಮ್ಮನ್ನು ದುರಾಸೆ ಅಥವಾ ಅಸೂಯೆ ಅಥವಾ ಅತಿಯಾದ ಟೀಕಿಸುವ ಸ್ಥಿರ ಅಭ್ಯಾಸಗಳಲ್ಲಿ ಹಿಡಿದಿಟ್ಟುಕೊಳ್ಳಬಹುದು, ಇತ್ಯಾದಿ….
ಒಂದು ಕಾರು ಮಣ್ಣಿನಲ್ಲಿ ಅಥವಾ ಮರಳಿನಲ್ಲಿ ಸಿಲುಕಿಕೊಂಡಾಗ, ಚಾಲಕ ವೇಗವರ್ಧಕವನ್ನು ಒತ್ತಿದಾಗ ಚಕ್ರಗಳು ವೇಗವಾಗಿ ತಿರುಗುತ್ತವೆ, ಆದರೆ ಕಾರು ಅದೇ ಸ್ಥಳದಲ್ಲಿ ಉಳಿಯುತ್ತದೆ — ಅನೇಕ ವ್ಯಕ್ತಿಗಳ ಸ್ಥಿತಿ ಇದೇ ಆಗಿದೆ. ಅವರ ಜೀವನದ ಎಂಜಿನ್ ಚಾಲನೆಯಲ್ಲಿದ್ದರೂ, ಅವರ ಚಕ್ರಗಳು ನಿಷ್ಪ್ರಯೋಜಕವಾಗಿ ತಿರುಗುತ್ತಿವೆ. ಅಂತಹ ವ್ಯಕ್ತಿಗಳ ಪ್ರಗತಿ ಮತ್ತು ಬೆಳವಣಿಗೆ ನಗಣ್ಯ. ಅವರು ತಮ್ಮ ದೇಹವು ಪ್ರಬುದ್ಧವಾಗಿರುವುದರಿಂದ ತಾವು ಬೆಳೆದಿದ್ದೇವೆ ಎಂದು ಭಾವಿಸುತ್ತಾರೆ, ಆದರೆ ಅವರ ಮೆದುಳು, ಅವರ ಮನಸ್ಸು, ಅವರ ವರ್ತನೆಗಳು ನಿಶ್ಚಲವಾಗಿ ಉಳಿಯುತ್ತವೆ — ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅಪಕ್ವವಾಗಿರುತ್ತವೆ.

ಮಾನಸಿಕ ಜಡತ್ವದಿಂದ ಹೊರಬರುವುದಕ್ಕೂ ಒಂದು ಕಲೆ ಇದೆ. ಎಲ್ಲರಿಂದ ದೂರವಾಗಿ ಶಾಂತ ಸ್ಥಳದಲ್ಲಿ ಕುಳಿತು ನಿಮ್ಮೊಂದಿಗೆ ಸದ್ದಿಲ್ಲದೆ ಮಾತನಾಡಿ. ನಿಮ್ಮ ಜೀವನವನ್ನು ಹೆಚ್ಚು ಮೌಲ್ಯಯುತ ಮತ್ತು ಆಸಕ್ತಿದಾಯಕವಾಗಿಸುವ, ನಿಮ್ಮನ್ನು ನೀವು ಸುಧಾರಿಸಿಕೊಳ್ಳುವ ಮಾರ್ಗಗಳ ಬಗ್ಗೆ ಯೋಚಿಸಿ.
ನಿಮ್ಮ ಜೀವನದಲ್ಲಿ ದೇವರ ಉಪಸ್ಥಿತಿಯನ್ನು ಹೆಚ್ಚು ಅಭ್ಯಾಸ ಮಾಡುವ ಮೂಲಕ ಆತನೊಂದಿಗೆ ಆಳವಾದ ಸಂಬಂಧವನ್ನು ಬೆಳೆಸಿಕೊಳ್ಳುವುದು ಅತ್ಯಂತ ಉತ್ತಮ ಮಾರ್ಗವಾಗಿದೆ. ನೀವು ಏನು ಮಾಡುತ್ತಿದ್ದೀರಿ ಎಂಬುದರ ಕುರಿತು ಇತರರೊಂದಿಗೆ ಮಾತನಾಡುವ ಅಗತ್ಯವಿಲ್ಲ. ಆಂತರಿಕವಾಗಿ ದೇವರೊಂದಿಗೆ ಇರಿ.
ಅವನು ಎಲ್ಲಾ ಶಾಂತಿ, ಎಲ್ಲಾ ಸಂತೋಷಗಳ ಮೂಲವಾಗಿದ್ದಾನೆ. ಅವನು ಸದಾ ನವ ನವೀನ ಸಂತೋಷವಾಗಿದ್ದಾನೆ. ಅವನನ್ನು ತಿಳಿದುಕೊಳ್ಳುವುದರಿಂದ, ನಿಮ್ಮ ಜೀವನವು ಇನ್ನು ಮುಂದೆ ಸಪ್ಪೆ ಮತ್ತು ನೀರಸವಾಗುವುದಿಲ್ಲ. ನಿಮ್ಮ ಪ್ರಜ್ಞೆಯಲ್ಲಿ ಯಾವಾಗಲೂ ಸ್ಫೂರ್ತಿಯ ಹೊಸ ಆಲೋಚನೆಗಳು ಹರಿಯುತ್ತಿರುತ್ತವೆ.
“ಮಾನಸಿಕ ಪೀಠೋಪಕರಣ”ಗಳಾಗಿರುವ, ಸ್ವಭಾವದಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆಯನ್ನು ತೋರಿಸದ ಜನರನ್ನು ನೀವು ನೋಡಿದಾಗ, ನೀವು ಯೋಚಿಸುತ್ತೀರಿ: “ನಾನು ಅವರಂತೆ ಇರಲು ಬಯಸುವುದಿಲ್ಲ!”
ಬೋಸ್ಟನ್‌ನಲ್ಲಿ ನನಗೆ ಅಂತಹ ಒಬ್ಬ ವ್ಯಕ್ತಿಯ ಪರಿಚಯವಿತ್ತು. ಅವಳು ಅದ್ಭುತ ಆತ್ಮ, ಬಹಳ ಪರಿಷ್ಕೃತ ಮತ್ತು ಬುದ್ಧಿವಂತೆ. ಆದರೆ ಅವಳಲ್ಲಿ ಕೆಲವು ನಕಾರಾತ್ಮಕ ಗುಣಲಕ್ಷಣಗಳಿದ್ದವು. ಅವಳು ಹದಿನೈದು ವರ್ಷಗಳ ಹಿಂದೆ ಹೊಂದಿದ್ದ ಅದೇ ಭಯಗಳ ಮೇಲೆ ವಾಸಿಸುತ್ತಿದ್ದಳು, ಅದೇ ನಕಾರಾತ್ಮಕ ಆಲೋಚನೆಗಳು ಮತ್ತು ವಿಶಿಷ್ಟತೆಗಳೊಂದಿಗೆ ಪ್ರತಿಕ್ರಿಯಿಸುತ್ತಿದ್ದಳು.
ಹಾಗೆ ಇರಬೇಡಿ. ನಕಾರಾತ್ಮಕತೆಯಿಂದ ಬತ್ತಿಹೋಗಬೇಡಿ. ನೀವು ಸತ್ತ ಕೊರಡಾಗಿರಲು ಅಲ್ಲ, ಬದಲಾಗಿ ಜೀವಂತವಾಗಿರಲು ಬಯಸುತ್ತೀರಿ! ಉದಾಹರಣೆಗೆ, ನೀವು ಹಳೆಯ ಗುಲಾಬಿ ಪೊದೆಯನ್ನು ತೆಗೆದುಕೊಂಡು, ಎಲ್ಲಾ ಸತ್ತ ಕೊಂಬೆಗಳನ್ನು ಕತ್ತರಿಸಿ, ಅದಕ್ಕೆ ನೀರು ಹಾಕಿ, ಅದನ್ನು ನೋಡಿಕೊಂಡರೆ, ಕ್ರಮೇಣ ಜೀವ ಶಕ್ತಿ ಗಿಡದ ಮೂಲಕ ಹರಿಯಲು ಪ್ರಾರಂಭಿಸುತ್ತದೆ ಮತ್ತು ಸಣ್ಣ ಎಲೆಗಳು ಹೊರಬರಲು ಪ್ರಾರಂಭಿಸುತ್ತವೆ. ತದನಂತರ ಸೂರ್ಯನ ಬೆಳಕು ಗಿಡದ ಮೇಲೆ ಸುರಿಯುತ್ತಿದ್ದಂತೆ, ಭವ್ಯವಾದ ಹೂವುಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಆರೈಕೆಯೊಂದಿಗೆ, ಅದು ಬೆಳೆದು ಅರಳುತ್ತಲೇ ಇರುತ್ತದೆ, ಅದರ ಸೌಂದರ್ಯ ಮತ್ತು ಸುವಾಸನೆಯಿಂದ ನಮ್ಮನ್ನು ಸಂತೋಷಪಡಿಸುತ್ತಿರುತ್ತದೆ.
ನೀವು ಹಾಗೆ ಆಗಬಹುದು. ನಿಮ್ಮ ಪ್ರಗತಿಯನ್ನು ಕುಂಠಿತಗೊಳಿಸಿದ ಮತ್ತು ನಿಮ್ಮನ್ನು ನಿಷ್ಪ್ರಯೋಜಕರನ್ನಾಗಿ ಮಾಡಿದ ಎಲ್ಲಾ ಹಳೆಯ ಅಭ್ಯಾಸಗಳನ್ನು ತೊಡೆದುಹಾಕಿ. ಹೊಸ ಅನುಭವಗಳ ಎಲೆಗಳು ಮತ್ತು ಹೂವುಗಳನ್ನು, ಹೊಸ ಗುಣಗಳು, ದೇಹ, ಮನಸ್ಸು ಮತ್ತು ಆತ್ಮದಲ್ಲಿ ಹೊಸ ಸುಧಾರಣೆಗಳನ್ನು ನಿರಂತರವಾಗಿ ಬೆಳೆಸಿಕೊಳ್ಳಿ.
ಪರೀಕ್ಷೆಗಳ ಚಳಿಗಾಲ ಬಂದಾಗ, ಜೀವನದ ಕೆಲವು ಎಲೆಗಳು ಉದುರಿಹೋಗುತ್ತವೆ. ಇದು ಸಾಮಾನ್ಯ. ಏನೂ ಪರವಾಗಿಲ್ಲ. ಅದನ್ನು ನಿಮ್ಮ ದೊಡ್ಡ ಹೆಜ್ಜೆಯಾಗಿ ಪರಿಗಣಿಸಿ. “ಪರವಾಗಿಲ್ಲ, ಬೇಸಿಗೆ ಬರುತ್ತಿದೆ, ಮತ್ತು ನಾನು ಮತ್ತೆ ಅರಳುತ್ತೇನೆ” ಎಂದು ಹೇಳಿಕೊಳ್ಳಿ. ಅತ್ಯಂತ ಕಠಿಣ ಚಳಿಗಾಲದಲ್ಲಿ ಸಹ ಬದುಕಲು ದೇವರು ಮರಕ್ಕೆ ಆಂತರಿಕ ಶಕ್ತಿಯನ್ನು ನೀಡಿದ್ದಾನೆ. ನೀವೂ ಯಾವುದೇ ಕೊರತೆಯನ್ನು ಹೊಂದಿಲ್ಲ.
ಜೀವನದ ಚಳಿಗಾಲವು ನಿಮ್ಮನ್ನು ನಾಶಮಾಡಲು ಬರುವುದಲ್ಲ, ಬದಲಾಗಿ ಎಲ್ಲರಿಗೂ ಬರುವ ಹೊಸ ಅವಕಾಶಗಳ ವಸಂತಕಾಲದಲ್ಲಿ ಅರಳುವ ಹೊಸ ಉತ್ಸಾಹ ಮತ್ತು ರಚನಾತ್ಮಕ ಪ್ರಯತ್ನಗಳಿಗೆ ನಿಮ್ಮನ್ನು ಉತ್ತೇಜಿಸಲು ಬರುತ್ತದೆ.
ನೀವು ನಿಮಗೆ ಹೇಳಿಕೊಳ್ಳಬೇಕು, “ನನ್ನ ಜೀವನದ ಈ ಚಳಿಗಾಲವು ದೀರ್ಘಕಾಲ ಉಳಿಯುವುದಿಲ್ಲ. ನಾನು ಈ ಪರೀಕ್ಷೆಗಳ ಹಿಡಿತದಿಂದ ಹೊರಬರುತ್ತೇನೆ, ಮತ್ತು ನಾನು ಸುಧಾರಣೆಗಳ ಹೊಸ ಎಲೆಗಳು ಮತ್ತು ಹೂವುಗಳನ್ನು ಚಿಮ್ಮಿಸುತ್ತೇನೆ. ಮತ್ತು ಮತ್ತೊಮ್ಮೆ ಸ್ವರ್ಗದ ಹಕ್ಕಿ ನನ್ನ ಜೀವನದ ಕೊಂಬೆಗಳ ಮೇಲೆ ಕುಳಿತುಕೊಳ್ಳುತ್ತದೆ.”
ಉದಾಹರಣೆಗೆ, ನೀವು ಹೆದರಿಕೆ ಅಥವಾ ಜೀರ್ಣಕ್ರಿಯೆಯ ಸಮಸ್ಯೆ ಅಥವಾ ಇನ್ನಾವುದೇ ಒತ್ತಡದಿಂದ ಬಳಲುತ್ತಿದ್ದೀರಿ ಎಂದು ಕಂಡುಕೊಂಡರೆ, ಅದರ ಬಗ್ಗೆ ರಚನಾತ್ಮಕವಾಗಿ ಏನಾದರೂ ಮಾಡಿ. ನೀವು ಸ್ವಲ್ಪ ಸಮಯದವರೆಗೆ ಬಳಲುತ್ತಿದ್ದರೂ ಸಹ, ನೀವು ಅಸಹಾಯಕತೆಯ ಸ್ಥಿತಿಗೆ ಸಿಲುಕದಿದ್ದರೆ ಎಲ್ಲವೂ ಸರಿಯಾಗುತ್ತದೆ.
ದೀರ್ಘಕಾಲದ ಕಾಯಿಲೆಯು, ಅದರಿಂದ ನೀವು ಎಂದಿಗೂ ಹೊರಬರಲು ಸಾಧ್ಯವಿಲ್ಲ ಎಂಬ ನಿಮ್ಮ ಭಾವನೆಯಿಂದ ಉಂಟಾದ ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಾಗಿದೆ. ನಿಮ್ಮ ಮನಸ್ಸು ಅನಾರೋಗ್ಯ ಅಥವಾ ಮಿತಿಯ ಯಾವುದೇ ಸಲಹೆಯನ್ನು ಸ್ವೀಕರಿಸಬಾರದು. ಸ್ವಾಭಾವಿಕವಾಗಿ, ದೇಹವು ಯಾವಾಗಲೂ ಒಂದೇ ರೀತಿ ಇರುತ್ತದೆ ಎಂದು ಯೋಚಿಸುವುದು ಅವಾಸ್ತವಿಕವಾಗಿದೆ; ಅದನ್ನು ದೀರ್ಘಕಾಲದವರೆಗೆ ಚೆನ್ನಾಗಿ ಇಡಬಹುದು, ಆದರೆ ಅಂತಿಮವಾಗಿ ಅದಕ್ಕೆ ವಯಸ್ಸಾಗುತ್ತದೆ ಮತ್ತು ದುರ್ಬಲಗೊಳ್ಳುತ್ತದೆ. ಇದರರ್ಥ ನಿಮ್ಮ ಮನಸ್ಸು ಸೋಲು ಒಪ್ಪಿಕೊಳ್ಳಬೇಕೆಂದಲ್ಲ. ಮನಸ್ಸನ್ನು ಮುಕ್ತವಾಗಿಡಬೇಕು.
ನೀವು ನಿಮ್ಮ ದೇಹವನ್ನು ನೋಡಿದಾಗ ಅದು ಮುದಿಯಾಗಿ ಕಾಣಿಸಬಹುದು. ಆದರೆ ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ನಿಜ ಸ್ವರೂಪದ ಒಳಗೆ ನೋಡಿ, ಆಗ ನಿಮ್ಮನ್ನು ನೀವು ಆತ್ಮ ಎಂದು ನೋಡುತ್ತೀರಿ. ನೀವು ಜೀವನದ ಹೊರಗಿನ ಕವಚಕ್ಕೆ ನಿಮ್ಮ ಕಣ್ಣುಗಳನ್ನು ಮುಚ್ಚಿ ಆತ್ಮದ ಒಳಗಣ್ಣನ್ನು ತೆರೆದಾಗ ಅಲ್ಲಿ ಸಾವು ಇಲ್ಲ, ವೃದ್ಧಾಪ್ಯವಿಲ್ಲ, ಯಾವುದೇ ಭೌತಿಕ ನಿರ್ಬಂಧಗಳಿಲ್ಲ.
ನೀವು ಪರಿಶುದ್ಧ ಆತ್ಮ. ಪ್ರತಿ ರಾತ್ರಿಯೂ ಆಳವಾದ ನಿದ್ರೆಯ ಸ್ವಾತಂತ್ರ್ಯದಲ್ಲಿ ನೀವು ನಿಜವಾಗಿಯೂ ನಿಮ್ಮನ್ನು ಹಾಗೆಯೇ ನೋಡುತ್ತೀರಿ, ಹೇಗೆಂದರೆ ನಿಮಗೆ ಯಾವುದೇ ರೂಪವಿಲ್ಲ, ದೇಹದ ತೂಕವಿಲ್ಲ, ಪುರುಷ ಅಥವಾ ಮಹಿಳೆ ಎಂಬ ಪ್ರಜ್ಞೆ ಇಲ್ಲ ಅಥವಾ ಯಾವುದೇ ಸ್ಥಿರ ರೀತಿಯ ವ್ಯಕ್ತಿತ್ವವಿಲ್ಲ. ಎಚ್ಚರವು ಪ್ರಮುಖ ಮಾನಸಿಕ ಸ್ಥಿತಿಯಾಗಿದೆ. ಆ ಸ್ಥಿತಿಯನ್ನು ನಿಯಂತ್ರಿಸುವುದು ಭೌತಿಕ ಜೀವನದ ಬಂಧನದಿಂದ ಒಬ್ಬರನ್ನು ಬಿಡುಗಡೆಗೊಳಿಸುತ್ತದೆ. ನಿದ್ರೆ ಒಂದು ಪ್ರಜ್ಞಾಹೀನ ವಿಶ್ರಾಂತಿ; ಮತ್ತು ಅದರ ಪರಿಣಾಮಗಳು ತಾತ್ಕಾಲಿಕ. ಆಳವಾದ ಧ್ಯಾನದ ಅತೀಂದ್ರಿಯ ಮೌನವು ನಿಮ್ಮ ಪ್ರಜ್ಞೆಯನ್ನು ಶಾಶ್ವತವಾಗಿ ಬಿಡುಗಡೆ ಮಾಡುವ ಏಕೈಕ ಮಾರ್ಗವಾಗಿದೆ. ಧ್ಯಾನದ ಮೂಲಕ, ನೀವು ಎಲ್ಲಾ ಸಮಯದಲ್ಲೂ ಪ್ರಜ್ಞಾಪೂರ್ವಕ ಆಂತರಿಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಕಲಿಯುತ್ತೀರಿ.
ದಿನ ಮುಗಿದ ನಂತರ, ಧ್ಯಾನದಲ್ಲಿ ಶಾಂತವಾಗಿ ಕುಳಿತು ದಿನದ ಚಟುವಟಿಕೆಗಳನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸಿ. ನಂತರ ಮಾನಸಿಕವಾಗಿ ದೃಢೀಕರಣ ಮಾಡಿಕೊಳ್ಳಿ, “ನಾನು ಎಲ್ಲಾ ಜಟಿಲತೆಗಳಿಂದ, ನನ್ನನ್ನು ಸೀಮಿತಗೊಳಿಸಿದ ಎಲ್ಲಾ ಆಲೋಚನೆಗಳು ಮತ್ತು ಅನುಭವಗಳಿಂದ ಮುಕ್ತನಾಗಿದ್ದೇನೆ. ನನ್ನ ಮನಸ್ಸು ದೇವರ ಆನಂದದಾಯಕ, ಅಪರಿಮಿತ ಶಾಂತಿಯಲ್ಲಿ ವಿಶ್ರಾಂತಿ ಪಡೆಯುತ್ತಿದೆ.” ಅಂತಹ ಅವಧಿಗಳಲ್ಲಿ ಒಬ್ಬರಿಗೆ ಎಷ್ಟು ಸಂತೋಷವಾಗುತ್ತದೆ. ಆ ಸಂತೋಷವನ್ನು ಯಾವುದೇ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.
ಆದರೆ ಹೆಚ್ಚಿನ ಜನರು ಆ ಪ್ರಯತ್ನವನ್ನು ಮಾಡುವುದಿಲ್ಲ. ಅವರ ಆದ್ಯತೆಗಳು ಭೌತಿಕ ವಸ್ತುಗಳ ಬೆಂಬತ್ತಿಹೊಗುವುದೇ ಆಗಿದೆ. ಮತ್ತು ಅವರ ಹೃದಯ ಬಡಿಯುತ್ತಿರುವುದರಿಂದ ಮತ್ತು ಉಸಿರು ಹರಿಯುತ್ತಿರುವುದರಿಂದ ಅವರು ಬದುಕುತ್ತಿದ್ದಾರೆಂದು ಭಾವಿಸುತ್ತಾರೆ. ಆದರೆ ಅದು ಬದುಕುವುದಲ್ಲ; ಅದು ಕೇವಲ ಅಸ್ತಿತ್ವದಲ್ಲಿರುವುದು ಅಷ್ಟೇ. ಅವರ ಸಾಧನೆಯ ಚಕ್ರಗಳು ಜೀವನದ ಹಾದಿಯಲ್ಲಿರುವ ಮರಳಿನ ಹಳ್ಳಗಳಲ್ಲಿ ಸಿಲುಕಿಕೊಂಡಿವೆ.
ನೀವು ಆ ಸ್ಥಿತಿಯಲ್ಲಿದ್ದರೆ, ನಿಮ್ಮ ಜೀವನದ ಕಾರು ಹಳ್ಳದಿಂದ ಹೊರಬಂದು ಸ್ಥಿರವಾದ ಪ್ರಗತಿಯ ಮುಕ್ತವಾಗಿ ಹರಿಯುವ ಹೆದ್ದಾರಿಗೆ ಜಿಗಿಯುವಂತೆ ಮಾಡಲು ಒಳಗಿನಿಂದ ಹೆಚ್ಚುವರಿ ಶಕ್ತಿಯನ್ನು ಚಿಮ್ಮಿಸಿ. ನಂತರ ನೀವು ಮತ್ತಷ್ಟು ಗೊಂದಲಗಳ ಕಂದಕಗಳನ್ನು ತಪ್ಪಿಸುತ್ತ, ದೇವರ ಗ್ರಹಿಕೆಗಳ ವಿಶಾಲವಾದ, ಸುಂದರವಾದ ದೃಶ್ಯಾವಳಿಗಳಾದ — ಸಂತೋಷ, ಶಾಂತಿ, ನೆಮ್ಮದಿಗಳನ್ನು ತಲುಪುವವರೆಗೆ ಸರಾಗವಾಗಿ ಚಲಿಸಬಹುದು — ಮತ್ತು ನೀವು ಅಲ್ಲಿ ವಿಶ್ರಾಂತಿ ಪಡೆಯಬಹುದು.
ಆ ನೋಟವು ನಿಜ. ಅದು ಕಲ್ಪನೆಯಲ್ಲ. ಆದರೆ ಅಲ್ಲಿಗೆ ಹೋಗಲು ನೀವು ಧ್ಯಾನದಿಂದ ಉತ್ಪತ್ತಿಯಾಗುವ ಆಳವಾದ ಮೌನವನ್ನು ಪ್ರವೇಶಿಸಬೇಕು. ಆ ಆಂತರಿಕ ನಿಶ್ಚಲತೆಯಲ್ಲಿ, ಮಾರಣಾಂತಿಕ ಆಲೋಚನೆಗಳಿಂದ ಮುಕ್ತವಾಗಿ, ನಿಮ್ಮ ಆತ್ಮವು ಎಲ್ಲಾ ಮಾನಸಿಕ ಜಟಿಲತೆಗಳಿಂದ ಹೊರಬಂದಿರುವುದನ್ನು ನೀವು ನೋಡುತ್ತೀರಿ.