ಗಾಡ್ ಟಾಕ್ಸ್ ವಿತ್ ಅರ್ಜುನ ಹಿಂದಿಯಲ್ಲಿ ಬಿಡುಗಡೆ ಮಾಡಲಾಯಿತು

2017ರ ನವೆಂಬರ್ 15ರಂದು, ಭಾರತದ ಗೌರವಾನ್ವಿತ ರಾಷ್ಟ್ರ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು, ಪರಮಹಂಸ ಯೋಗಾನಂದರ ಗಾಡ್ ಟಾಕ್ಸ್ ವಿತ್ ಅರ್ಜುನ: ದಿ ಭಗವದ್ಗೀತ ಇದರ ಹಿಂದಿ ಅನುವಾದದ ಅಧಿಕೃತ ಬಿಡುಗಡೆಯ ಗೌರವಾರ್ಥವಾಗಿ ಭಾರತದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ರಾಂಚಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಶ್ರೀ ಕೋವಿಂದ್ ಅವರೊಂದಿಗೆ ಜಾರ್ಖಂಡ್‌ನ ರಾಜ್ಯಪಾಲರಾದ ಶ್ರೀಮತಿ ದ್ರೌಪದಿ ಮುರ್ಮು, ಜಾರ್ಖಂಡ್‌ನ ಮುಖ್ಯಮಂತ್ರಿ ಶ್ರೀ ರಘುಬರ್ ದಾಸ್ (ಬಲಗಡೆಯ ಫೋಟೋ ನೋಡಿ) ಮತ್ತು ಇತರ ಹಲವಾರು ಗಣ್ಯರು ಇದ್ದರು. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‍ನ ಅಧ್ಯಕ್ಷರಾದ ಸ್ವಾಮಿ ಚಿದಾನಂದಜಿಯವರು ಗೌರವಾನ್ವಿತ ಅತಿಥಿಗಳ ಆತಿಥ್ಯ ವಹಿಸಿದ್ದ ವೈಎಸ್‌ಎಸ್ ಮತ್ತು ಎಸ್‌ಆರ್‌ಎಫ್ ಸಂನ್ಯಾಸಿಗಳ ತಂಡವನ್ನು ಮುನ್ನಡೆಸಿದರು. ಜೊತೆಗೆ, ಸಂಸ್ಥೆಯ ಶತಮಾನೋತ್ಸವದ (1917-2017) ಗೌರವಾರ್ಥ ಏರ್ಪಡಿಸಿದ್ದ 2017ರ ವೈಎಸ್ಎಸ್ ಶರದ್ ಸಂಗಮದ ಸಮಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 3,000 ವೈಎಸ್ಎಸ್ ಸದಸ್ಯರು ಮತ್ತು ಸ್ನೇಹಿತರು ಒಟ್ಟುಗೂಡಿದ್ದರು.
ಭಾರತದ ರಾಷ್ಟ್ರಗೀತೆಯೊಂದಿಗೆ ಉತ್ಸವವು ಪ್ರಾರಂಭವಾಯಿತು. ನಂತರ ಸ್ವಾಮಿ ಚಿದಾನಂದ ಗಿರಿ ಮತ್ತು ವೈಎಸ್‍ಎಸ್ ನಿರ್ದೇಶಕ ಮಂಡಳಿಯ ಸದಸ್ಯರು ಗೌರವಾನ್ವಿತ ಅತಿಥಿಗಳನ್ನು ಹೂಗುಚ್ಛ ಮತ್ತು ಶಾಲುಗಳಿಂದ ಔಪಚಾರಿಕವಾಗಿ ಸ್ವಾಗತಿಸಿದರು. ನಂತರ ಶ್ರೀ ಕೋವಿಂದ, ಶ್ರೀಮತಿ ಮುರ್ಮು ಮತ್ತು ಶ್ರೀ ದಾಸ್ ಸಮಾರಂಭದ ದೀಪ ಬೆಳಗಿಸಿದರು. ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಿದ್ದಂತೆ, ಗಾಡ್ ಟಾಕ್ಸ್ ವಿತ್ ಅರ್ಜುನದ ಹಿಂದಿ ಆವೃತ್ತಿಯನ್ನು ಜಾರ್ಖಂಡ್‌ನ ರಾಜ್ಯಪಾಲರು ಅಧಿಕೃತವಾಗಿ ಬಿಡುಗಡೆ ಮಾಡಿದರು. ನಂತರ ಅವರು ಮೊದಲ ಪ್ರತಿಯನ್ನು ಭಾರತದ ರಾಷ್ಟ್ರಪತಿಗಳಿಗೆ ನೀಡಿದರು. ವೈಎಸ್‍ಎಸ್‍ನ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸ್ಮರಣಾನಂದರು, ಯೋಗದ ಈ ಪವಿತ್ರಗ್ರಂಥವನ್ನು ಅರ್ಥಮಾಡಿಕೊಳ್ಳಲು ಪರಮಹಂಸ ಯೋಗಾನಂದರು ನೀಡಿದ ಅಸಾಧಾರಣ ಕೊಡುಗೆಯ ಮೇಲೆ ಕೇಂದ್ರೀಕರಿಸುತ್ತ, ಭಗವದ್ಗೀತೆಯ ವ್ಯಾಖ್ಯಾನದ ಮಹತ್ವದ ಬಗ್ಗೆ ಮಾತನಾಡಿದರು. “ಭಗವದ್ಗೀತೆಯು ಶತಶತಮಾನಗಳಿಂದ ವಿವಿಧ ಧರ್ಮಗಳ ಅನೇಕಾನೇಕ ಸಂತರ ನೆಚ್ಚಿನ ಗ್ರಂಥವಾಗಿದೆ”ಎಂದು ಅವರು ವಿವರಿಸಿದರು. “ಗೀತೆಯ ಅಸಂಖ್ಯಾತ ವ್ಯಾಖ್ಯಾನಗಳು ಲಭ್ಯವಿವೆ. ಇನ್ನೂ ಮತ್ತೊಂದು ವ್ಯಾಖ್ಯಾನದ ಅಗತ್ಯವಿದೆಯೇ? ಇದೆ. ಏಕೆಂದರೆ ಗಾಡ್‍ಟಾಕ್ಸ್ ವಿತ್ ಅರ್ಜುನ ಕೇವಲ ಮತ್ತೊಂದು ವ್ಯಾಖ್ಯಾನವಲ್ಲ. ಇದು ಗೀತೆಯ ಹೊಸ ದಿವ್ಯದರ್ಶನವಾಗಿ ವಿಶಿಷ್ಟವಾಗಿದೆ, ವಿಶೇಷವಾಗಿ ಯೋಗ ವಿಜ್ಞಾನಕ್ಕೆ ಪ್ರಸ್ತುತವಾಗಿದೆ.”



ಸ್ವಾಮಿ ಚಿದಾನಂದ ಗಿರಿಯವರ ನುಡಿಗಳು
ನಂತರ ಸ್ವಾಮಿ ಚಿದಾನಂದಜಿ ಸಭಿಕರನ್ನು ಉದ್ದೇಶಿಸಿ, ಗಾಡ್ ಟಾಕ್ಸ್ ವಿತ್ ಅರ್ಜುನ ಹೇಗೆ ಪ್ರಕಟವಾಯಿತು ಎಂಬುದರ ಸಾರಾಂಶವನ್ನು ನೀಡಿದರು ಮತ್ತು ಭಾರತದ ಆಧ್ಯಾತ್ಮಿಕತೆಯ ಸಾರವನ್ನು ಮೊದಲು ಪಶ್ಚಿಮಕ್ಕೆ ನಂತರ ಭಾರತ ಸೇರಿದಂತೆ ಇಡೀ ಜಗತ್ತಿಗೆ ಪ್ರಚುರ ಪಡಿಸುವ ಪರಮಹಂಸಜಿಯವರ ಧ್ಯೇಯದ ಬಗ್ಗೆ ಮಾತನಾಡಿದರು.
ಅವರು ತಮ್ಮ ಭಾಷಣವನ್ನು ಈ ಮಾತುಗಳೊಂದಿಗೆ ಮುಕ್ತಾಯಗೊಳಿಸಿದರು: “ಗೌರವಾನ್ವಿತ ರಾಷ್ಟ್ರಪತಿಗಳೇ, ರಾಜ್ಯಪಾಲರೇ, ಮುಖ್ಯಮಂತ್ರಿಗಳೇ ಇಂದು ನೀವು ಪರಮಹಂಸಜೀಯವರ ಜಗತ್ಪ್ರಸಿದ್ಧ ಗೀತಾ ಭಾಷ್ಯದ ಈ ಸುಂದರವಾದ ಹೊಸ ಆವೃತ್ತಿಯನ್ನು ಕೇವಲ ಬಿಡುಗಡೆ ಮಾಡುತ್ತಿಲ್ಲ; ನೀವು ವಿಶೇಷವಾಗಿ, ಜಗತ್ತಿಗೆ ಭಾರತದ ಅನನ್ಯ ಮತ್ತು ಅತ್ಯಂತ ಶಕ್ತಿಶಾಲಿ ಕೊಡುಗೆಯನ್ನು ದೃಢೀಕರಿಸುತ್ತಿದ್ದೀರಿ ಮತ್ತು ಅಂಗೀಕರಿಸುತ್ತಿದ್ದೀರಿ. ಇದನ್ನು ನಾವು ಅಂಗೀಕರಿಸಿ ಸಂತೋಷದಿಂದ ಆಚರಿಸೋಣ. ನಿಜವಾಗಿಯೂ, ಭಾರತವು ಸಂರಕ್ಷಿಸಿ, ಉದಾರವಾಗಿ ವಿಶ್ವ ರಾಷ್ಟ್ರಗಳ ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿರುವಂತಹ ಸಾರ್ವತ್ರಿಕ ವೈಜ್ಞಾನಿಕ ಆಧ್ಯಾತ್ಮಿಕತೆಯಿಲ್ಲದೆ ನಾಗರಿಕತೆಯು ಉಳಿಯಲು ಸಾಧ್ಯವಿಲ್ಲ. ವಿಭಜಿಸದ ಮತ್ತು ಒಗ್ಗೂಡಿಸುವ ಆಧ್ಯಾತ್ಮಿಕ ಪ್ರಜ್ಞೆಯು ಅಷ್ಟು ಮುಖ್ಯವಾದುದು — ಪ್ರತಿ ಆತ್ಮದಲ್ಲಿ, ಪ್ರತಿ ಮಾನವ ಆತ್ಮದಲ್ಲಿ ಅಪಾರ ದಿವ್ಯ ಸಾಮರ್ಥ್ಯಗಳನ್ನು ಜಾಗೃತಗೊಳಿಸುವಂತಹ ಆಧ್ಯಾತ್ಮಿಕತೆ ಮತ್ತು ಆಧ್ಯಾತ್ಮಿಕವಾಗಿ ಹೇಳುವುದಾದರೆ, ಎಲ್ಲಾ ಆತ್ಮಗಳು ಒಬ್ಬ ಭಗವಂತನ ಒಂದೇ ಪಿತೃತ್ವದ ಅಡಿಯಲ್ಲಿ ಸೋದರ ಸೋದರಿಯರು ಎಂದು ತಿಳಿಸುವಂತಹುದು — ಜಾಗತಿಕ ಇತಿಹಾಸದ ಈ ನಿರ್ಣಾಯಕ ಘಟ್ಟದಲ್ಲಿ ಮನುಕುಲದ ಉಳಿವಿಗಾಗಿ, ಇದೇ ನಿಜವಾದ ಮೇಲ್ಮುಖ ಪ್ರಗತಿಯ ಪ್ರಮುಖ ಅಗತ್ಯತೆ.
“ಆದ್ದರಿಂದ, ಕೊನೆಯಲ್ಲಿ, ಶ್ರೀ ಶ್ರೀ ಪರಮಹಂಸ ಯೋಗಾನಂದಜೀ ಅವರು ಆಧ್ಯಾತ್ಮಿಕವಾಗಿ ಪ್ರಕಟಿಸಿದ ಮಹಾನ್‍ಗ್ರಂಥವಾದ ಪವಿತ್ರ ಭಗವದ್ಗೀತೆಯ ಬೆಳಕು ನಮ್ಮೆಲ್ಲರ, ಇಡೀ ಭಾರತದ ಮತ್ತು ಜಗತ್ತಿನ ಹಾದಿಯನ್ನು ಬೆಳಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ದೇವರು ನಿಮ್ಮೆಲ್ಲರನ್ನೂ ಆಶೀರ್ವದಿಸಲಿ. ಓಂ. ಶಾಂತಿ. ಶಾಂತಿ. ಶಾಂತಿ.”

ಭಾರತದ ರಾಷ್ಟ್ರಪತಿಗಳ ಭಾಷಣ
ನಂತರ, ರಾಷ್ಟ್ರ್ರಪತಿ ಕೋವಿಂದ್ ಅವರು ಸಭಿಕರನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡಿದರು. ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕತೆಯ ವಿಶಿಷ್ಟ ಸಂಯೋಜನೆಯನ್ನು ಹೊಂದಿರುವ ಆಶ್ರಮದ ಆವರಣದಲ್ಲಿ ನಡೆಯುವಾಗ ತಾನು ಎಷ್ಟು ಪ್ರಭಾವಿತನಾದೆ ಎಂದು ಹೇಳುತ್ತ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಭಾರತದ ಎಲ್ಲ ಭಾಗಗಳಿಂದ ಬಂದ ಮತ್ತು ಇತರ ದೇಶಗಳ ಭಕ್ತರ ಉಪಸ್ಥಿತಿಯನ್ನು ಗುರುತಿಸುತ್ತ ಅವರು ಆಂಗ್ಲ ಭಾಷೆಯಲ್ಲಿ ಅವರ ಧ್ಯಾನದ ಮಾರ್ಗದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಮತ್ತು ಅವರೆಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು.
ಶ್ರೀ ಕೋವಿಂದ್ ಅವರು, “ಎಲ್ಲಾ ಮಾನವಕುಲಕ್ಕೆ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾವು ನೂರು ವರ್ಷಗಳ ನಿರಂತರ ಸೇವೆಯನ್ನು ಪೂರೈಸಿದಕ್ಕಾಗಿ ನಾನು ಅಭಿನಂದಿಸುತ್ತೇನೆ ಮತ್ತು ಪರಮಹಂಸ ಯೋಗಾನಂದರ ಚಿಂತನೆಗಳು ಮತ್ತು ಆದರ್ಶಗಳೊಂದಿಗೆ ಸಂಪರ್ಕ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.”ಎಂದರು. “ಪರಮಹಂಸ ಯೋಗಾನಂದರ ಸಂದೇಶ ಆಧ್ಯಾತ್ಮದ ಸಂದೇಶವಾಗಿದೆ. ಧರ್ಮದ ಮಿತಿಯನ್ನು ಮೀರಿ ಎಲ್ಲಾ ಧರ್ಮಗಳನ್ನು ಗೌರವಿಸುವ ಸಂದೇಶ ಅವರದು; ಅವರ ದೃಷ್ಟಿಕೋನವು ವಿಶ್ವ ಭ್ರಾತೃತ್ವದ್ದು,” ಎಂದು ಅವರು ಹೇಳಿದರು.
ಪರಮಹಂಸಜೀಯವರ ಗೀತೆಯ ವ್ಯಾಖ್ಯಾನವನ್ನು ಹಿಂದಿಯಲ್ಲಿ ಹೊರತಂದಿರುವುದಕ್ಕಾಗಿ ವೈಎಸ್‍ಎಸ್ ಅನ್ನು ಶ್ಲಾಘಿಸಿದ ರಾಷ್ಟ್ರ್ರಪತಿ ಕೋವಿಂದ್, “ಈ ಹಿಂದಿ ಅನುವಾದದ ಪ್ರಕಟಣೆಯ ಮೂಲಕ, ದೈನಂದಿನ ಜೀವನದಲ್ಲಿ ಹೆಚ್ಚು ಸಹಾಯ ಮಾಡುವ ಈ ಪುಸ್ತಕದಲ್ಲಿ ಅಂತರ್ಗತವಾಗಿರುವ ಜ್ಞಾನದ ಬೋಧನೆಗಳನ್ನು ಈಗ ಬಹು ದೊಡ್ಡ ಸಂಖ್ಯೆಯ ಓದುಗರಿಗೆ ಲಭ್ಯವಾಗುವಂತೆ ಮಾಡಲಾಗಿದೆ.” “ತಮ್ಮ ನಡವಳಿಕೆಯಲ್ಲಿ ಗೀತೆಯ ಬೋಧನೆಗಳನ್ನು ಅಳವಡಿಸಿಕೊಳ್ಳುವ ಪ್ರತಿಯೊಬ್ಬರೂ ಶಾಂತವಾಗಿ, ಶಾಂತಿಯುತವಾಗಿ ಉಳಿಯಲು ಸಾಧ್ಯವಾಗುತ್ತದೆ ಮತ್ತು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಾ ಮುಂದೆ ಸಾಗಲು ಸಾಧ್ಯವಾಗುತ್ತದೆ,” ಎಂಬ ತಮ್ಮ ನಂಬಿಕೆಯನ್ನೂ ಅವರು ದೃಢಪಡಿಸಿದರು. “ಪರಮಹಂಸ ಯೋಗಾನಂದರ ಗೀತಾ ಭಾಷ್ಯವು ಈಗ ಹಿಂದಿಯಲ್ಲಿ ಲಭ್ಯವಿರುವುದರಿಂದ ಲಕ್ಷಾಂತರ ಜನರು ತಮ್ಮನ್ನು ತಾವು ಚೆನ್ನಾಗಿ ಅರಿತುಕೊಳ್ಳಲು ಮತ್ತು ತಮ್ಮ ಜೀವನವನ್ನು ಉತ್ತಮಗೊಳಿಸುವ ಮಾರ್ಗವನ್ನು ಗುರುತಿಸಲು ಸಾಧ್ಯವಾಗುತ್ತದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇಂದಿನ ಜಗತ್ತಿನ ಮೇಲೆ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಪ್ರಭಾವವನ್ನು ಶ್ಲಾಘಿಸಿದ ರಾಷ್ಟ್ರ್ರಪತಿಗಳು, “ಲೌಕಿಕತೆ ಮತ್ತು ಸ್ಪರ್ಧೆಯಿಂದ ಸುತ್ತುವರೆದಿರುವ ಇಂದಿನ ಯುವ ಪೀಳಿಗೆಯನ್ನೂ ಪರಮಹಂಸ ಯೋಗಾನಂದರು ಗಾಢವಾಗಿ ಪ್ರಭಾವಿಸಿದ್ದಾರೆ. ತೀವ್ರ ಹೋರಾಟದ ನಡುವೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮೃದ್ಧಿ ಮತ್ತು ಯಶಸ್ಸನ್ನು ಸಾಧಿಸಿದ ಅನೇಕ ಯುವಕರು ತಮ್ಮ ಸಾಧನೆಗಳ ಶ್ರೇಯವನ್ನು [ಪರಮಹಂಸಜಿಯವರ] ಯೋಗಿಯ ಆತ್ಮಕಥೆಗೆ ಸಲ್ಲಿಸುತ್ತಾರೆ, ಎಂದು ಹೇಳಿದರು. ಇದು ಬಹಳ ಪ್ರಸಿದ್ಧವಾದ ಪುಸ್ತಕವಾಗಿದೆ ಮತ್ತು ನಿಮ್ಮಲ್ಲಿ ಹೆಚ್ಚಿನವರು ಇದನ್ನು ಓದಿದ್ದೀರಿ ಎಂದು ನಾನು ಭಾವಿಸುತ್ತೇನೆ. ನನಗೂ ಆ ಅವಕಾಶವಿತ್ತು. ಈ ಪುಸ್ತಕವು ಎಲ್ಲರೂ ಜೀವನದಲ್ಲಿ ಅನುಸರಿಸಬೇಕಾದ ಸರಿಯಾದ ಮಾರ್ಗವನ್ನು ಬೆಳಗಿಸುತ್ತದೆ.”
ನಿರ್ಗಮಿಸುವ ಮೊದಲು ಒಂದು ಕ್ಷಣ ಪರ್ಯಾಲೋಚನೆ
ಕಾರ್ಯಕ್ರಮದ ನಂತರ, ರಾಷ್ಟ್ರ್ರಪತಿ ಕೋವಿಂದ್ ಅವರು ಈಗ ಮಂದಿರವಾಗಿರುವ ಪರಮಹಂಸಜಿಯವರ ನಿವಾಸಕ್ಕೆ ಭೇಟಿ ನೀಡಲು ಆಸಕ್ತಿಯನ್ನು ವ್ಯಕ್ತಪಡಿಸಿದರು. ಸ್ವಾಮಿ ಚಿದಾನಂದರು ಅವರನ್ನು ಮತ್ತು ಇತರ ಗಣ್ಯರನ್ನು ಆ ಪವಿತ್ರ ಸ್ಥಳಕ್ಕೆ ಕರೆದೊಯ್ದರು. ಅಲ್ಲಿ ಅವರು ಕೆಲವು ಕ್ಷಣಗಳನ್ನು ಮೌನವಾಗಿ ಕಳೆದರು. ಈ ಅನುಭವದಿಂದ ಪ್ರಭಾವಿತರಾದ ರಾಷ್ಟ್ರ್ರಪತಿ ಕೋವಿಂದ್ ಅವರು ಆಶ್ರಮದ ತಮ್ಮ ಭೇಟಿಯನ್ನು ಮೆಚ್ಚಿಕೊಳ್ಳುತ್ತ ಅಲ್ಲಿಂದ ನಿರ್ಗಮಿಸಿದರು.
ರಾಷ್ಟ್ರಪತಿಯವರ ಭಾಷಣದ ಆಯ್ದಭಾಗಗಳನ್ನು ಭಾರತೀಯ ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು ಮತ್ತು ಮರುದಿನ ಪತ್ರಿಕೆಗಳಲ್ಲಿ ವರದಿಗಳನ್ನು ಪ್ರಕಟಿಸಲಾಯಿತು. ಅವರ ಭಾಷಣದ ವೀಡಿಯೊವನ್ನು (ಹಿಂದಿಯಲ್ಲಿ) ಅವರ ಅಧಿಕೃತ ಯೂಟ್ಯೂಬ್ ಚಾನೆಲ್‍ನಲ್ಲಿ ಪೋಸ್ಟ್ ಮಾಡಲಾಗಿದೆ (ಕೆಳಗಡೆ ನೋಡಿ).
