“ನಾವು ಆಧ್ಯಾತ್ಮಿಕ ಪ್ರಜ್ಞೆಯ ಆಶೀರ್ವಾದಕ್ಕೆ ಯೋಗ್ಯರು” ಸ್ವಾಮಿ ಚಿದಾನಂದ ಗಿರಿ ಅವರಿಂದ

10 ಸೆಪ್ಟೆಂಬರ್, 2025

ಈ ಬ್ಲಾಗ್ ಪೋಸ್ಟ್ ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್‌ನ ಅಧ್ಯಕ್ಷರಾದ ಸ್ವಾಮಿ ಚಿದಾನಂದ ಗಿರಿ ಅವರು 2025 ರ ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ ವಿಶ್ವ ಅಧಿವೇಶನದಲ್ಲಿ ನೀಡಿದ ಸತ್ಸಂಗದಿಂದ ಸಂಪಾದಿಸಿದ ಆಯ್ದ ಭಾಗವಾಗಿದೆ. “ಭೌತಿಕ ಜಗತ್ತಿನಲ್ಲಿ ಬದುಕುಳಿಯಲು, ಬೆಳೆಯಲು ಮತ್ತು ವಿಜಯ ಸಾಧಿಸಲು ಹೇಗೆ ಜೀವಿಸಬೇಕು ಎಂಬ ಕೌಶಲ್ಯಗಳು” ಎನ್ನುವ ಈ ಸಂಪೂರ್ಣ ಭಾಷಣವನ್ನು, ಎಸ್‌ಆರ್‌ಎಫ್‌ ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.

ಕಮಲ-ಕೇಸರಿ-ರೇಖಾಚಿತ್ರ

ಪರಮಹಂಸ ಯೋಗಾನಂದರ ಕಥೆಯೊಂದನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ, ಇದು ಹುರುಪು, ಉತ್ಸಾಹ, ಮತ್ತು ಶಿಷ್ಯತ್ವದ ನಿಜವಾದ ಅರ್ಥದ ಒಂದು ಪ್ರಮುಖ ಅಂಶದ ಮೇಲೆ ಬೆಳಕು ಚೆಲ್ಲುತ್ತದೆ. ಪರಮಹಂಸಜಿಯವರು ಈ ಕಥೆಯನ್ನು 1941 ರಲ್ಲಿ ತಮ್ಮ “ಮ್ಯಾನ್ಸ್ ಎಟರ್ನಲ್ ಕ್ವೆಸ್ಟ್” ಎಂಬ ಭಾಷಣದಲ್ಲಿ ಹೇಳಿದ್ದರು.

ಅವರು ಹೇಳಿದರು: “ಕಳೆದ ಬೇಸಿಗೆಯಲ್ಲಿ, ನಾನು ಒಂದು ಮಠದಲ್ಲಿ ತಂಗಿದ್ದೆ, ಅಲ್ಲಿ ನಾನು ಒಬ್ಬ ಪುರೋಹಿತರನ್ನು ಭೇಟಿಯಾದೆ. ಅವರು ಅದ್ಭುತ ಚೇತನದವರಾಗಿದ್ದರು. ನಾನು ಅವರನ್ನು, ಸನ್ಯಾಸಿಯಾಗಿ ಎಷ್ಟು ವರ್ಷಗಳಿಂದ ಆಧ್ಯಾತ್ಮಿಕ ಮಾರ್ಗದಲ್ಲಿದ್ದೀರಿ ಎಂದು ಕೇಳಿದೆ.

‘ಸುಮಾರು ಇಪ್ಪತ್ತೈದು ವರ್ಷಗಳು’ ಎಂದು ಅವರು ಉತ್ತರಿಸಿದರು.

ನಂತರ ನಾನು ಕೇಳಿದೆ, ‘ನೀವು ಕ್ರಿಸ್ತರನ್ನು ನೋಡುತ್ತೀರಾ?’

‘ನಾನು ಅದಕ್ಕೆ ಯೋಗ್ಯನಲ್ಲ,’ ಎಂದು ಅವರು ಉತ್ತರಿಸಿದರು. ‘ಬಹುಶಃ ಮರಣದ ನಂತರ ಅವರು ನನ್ನನ್ನು ಭೇಟಿಯಾಗಬಹುದು.’

‘ಇಲ್ಲ,’ ನಾನು ಅವರಿಗೆ ಭರವಸೆ ನೀಡಿದೆ, ‘ನೀವು ಮನಸ್ಸು ಮಾಡಿದರೆ ಇಂದಿನ ರಾತ್ರಿಯಿಂದಲೇ ಅವರನ್ನು ನೋಡಬಹುದು.’”

ಪರಮಹಂಸಜಿಯವರು ಹೇಳಿದರು, “ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು, ಮತ್ತು ಅವರು ಮೌನವಾಗಿದ್ದರು.”

“ನೀವು ಮನಸ್ಸು ಮಾಡಿದರೆ ಇಂದಿನ ರಾತ್ರಿಯಿಂದಲೇ ಅವರನ್ನು ನೋಡಬಹುದು.” ಇಲ್ಲಿ ಅವರು ಕೇವಲ ಅಚಲ ಇಚ್ಛಾಶಕ್ತಿಯಿಂದ ಅಥವಾ ಹೆಚ್ಚು ಪ್ರಯತ್ನ ಮಾಡುವುದರ ಬಗ್ಗೆ ಮಾತ್ರ ಹೇಳುತ್ತಿರಲಿಲ್ಲ. ಖಂಡಿತ, ತೀವ್ರ ಪ್ರಯತ್ನ ಮಾಡುವುದು ಅದರ ಒಂದು ಭಾಗ; ಆದರೆ, ಅತ್ಯಂತ ಪ್ರಮುಖವಾಗಿ ನಮ್ಮಲ್ಲಿ ಅನೇಕರಿಗೆ ಅದರ ಅರ್ಥವೇನೆಂದರೆ, ನಾವು ಯೋಗ್ಯರು, ನಮಗೆ ಆ ಆಶೀರ್ವಾದ ಸಿಗುತ್ತದೆ ಮತ್ತು ನಮಗೆ ಆ ಆಧ್ಯಾತ್ಮಿಕ ಪ್ರಜ್ಞೆ ಲಭ್ಯವಾಗುತ್ತದೆ ಎಂದು ನಮ್ಮ ಮನಸ್ಸಿನಲ್ಲಿ ದೃಢಪಡಿಸಿಕೊಳ್ಳುವುದು.

ಧ್ಯಾನದಲ್ಲಿ ಮತ್ತು ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ಎಷ್ಟು ಆಶೀರ್ವಾದಗಳು ನಮಗೆ ಸಿಗದೆ ಉಳಿದುಬಿಡುತ್ತವೆ, ಕೇವಲ ನಾವು ಅದಕ್ಕೆ ಯೋಗ್ಯರಲ್ಲ ಎಂದು ಭಾವಿಸುವುದರಿಂದಲೇ? ನೀವು ಯೋಗ್ಯರು. “ಇಂದಿನ ರಾತ್ರಿಯಿಂದಲೇ ಮನಸ್ಸು ಮಾಡಿ,” ಎಂದು ನಮ್ಮ ಗುರುಗಳು ಹೇಳಿದರು.

ಕೇವಲ ಊಹಿಸಿ: ಯಾರೋ ಒಬ್ಬರು ಕೋಣೆಯಲ್ಲಿ ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆ, ನಿಮ್ಮ ಬಗ್ಗೆ ಎಷ್ಟು ಗೌರವ ಮತ್ತು ಮೆಚ್ಚುಗೆಯನ್ನು ಹೊಂದಿದ್ದಾರೆ ಎಂದು ನಿಧಾನವಾಗಿ ಪಿಸುಗುಡುತ್ತಿದ್ದಾರೆ ಎಂದು ಭಾವಿಸಿ. ಆದರೆ ಅದೇ ಸಮಯದಲ್ಲಿ, ನೀವು “ಇಲ್ಲ, ಇಲ್ಲ, ನಾನು ಒಳ್ಳೆಯವನಲ್ಲ; ಇಲ್ಲ, ಇಲ್ಲ, ನಾನು ಒಳ್ಳೆಯವನಲ್ಲ” ಎಂದು ಹೇಳುತ್ತಾ ಆ ಧ್ವನಿಯನ್ನು ಸಂಪೂರ್ಣವಾಗಿ ಮುಳುಗಿಸುತ್ತಿದ್ದೀರಿ. ಇದನ್ನು ನೀವು ನಿಮ್ಮ ಜೀವನಕ್ಕೆ ಹೋಲಿಸಿಕೊಳ್ಳಬಹುದೇ? ದೇವರ ಮತ್ತು ಗುರುವಿನೊಂದಿಗಿನ ನಮ್ಮ ಸಂಬಂಧದಲ್ಲಿ ನಾವು ಹೆಚ್ಚಾಗಿ ತಪ್ಪಾಗಿ ಹೀಗೆ ಮಾಡುತ್ತೇವೆ.

ಪರಮಹಂಸಜಿಯವರ “ಕಾಸ್ಮಿಕ್ ಚಾಂಟ್ಸ್” ನನ್ನ ಮೇಲೆ ಎಷ್ಟು ಪ್ರಭಾವ ಬೀರಿದೆ ಮತ್ತು ಅವುಗಳಿಂದ ನಾನು ಎಷ್ಟು ಪ್ರಯೋಜನ ಪಡೆದಿದ್ದೇನೆ ಎಂಬುದನ್ನು ನಾನು ಹಿಂದೆ ಹೇಳಿದ್ದೇನೆ, ಮತ್ತು ನಿಮ್ಮೆಲ್ಲರಿಗೂ ಹಾಗೆಯೇ ಆಗಿದೆ ಎಂದು ನಾನು ಭಾವಿಸುತ್ತೇನೆ. ನಾನು ಆಧ್ಯಾತ್ಮಿಕ ಹಾದಿಯಲ್ಲಿ ಹೊಸದಾಗಿ ಪ್ರಾರಂಭಿಸಿದ ಸಮಯದಿಂದ, ನನಗೆ ಬಹಳ ಶಕ್ತಿಯುತವಾಗಿ ಸ್ಪರ್ಶಿಸಿದ ಒಂದು ಭಕ್ತಿಗೀತೆ — ಏಕೆಂದರೆ ಅದು ನನಗೆ ತುಂಬಾ ಅಗತ್ಯವಾಗಿತ್ತು ಮತ್ತು ಆ ಹಂತದವರೆಗೆ ನನ್ನ ಸ್ವಭಾವದಲ್ಲಿದ್ದ ದೊಡ್ಡ ಕೊರತೆಯನ್ನು ನಿಜವಾಗಿಯೂ ತುಂಬುತ್ತಿತ್ತು — ಅದುವೇ ಸುಂದರವಾದ “ಎನ್ನ ಹೃದಯ ದ್ವಾರವ” ಎಂಬ ಭಕ್ತಿಗೀತೆ:

“ಎನ್ನ ಹೃದಯ ದ್ವಾರವ, ವಿಶಾಲವಾಗಿ ತೆರೆದಿಹೆ ನಿನಗೆ.

ಬರುವೆಯಾ? ನೀ ಬರುವೆಯಾ? ಒಮ್ಮೆಯಾದರೂ, ಎನ್ನೆಡೆಗೆ?

ಎನ್ನಯ ದಿನಗಳು ಗತಿಸುವವೇ ಪ್ರಭು ನಿನ್ನಯ ದರುಶನವಿಲ್ಲದೆಯೇ?

ಇರುಳು ಹಗಲು, ಇರುಳು ಹಗಲು ನಿನಗೆ ಕಾಯುವೆ ಇರುಳು ಹಗಲು.”

ಆ ಭಕ್ತಿಗೀತೆಯು ನನ್ನ ಆಧ್ಯಾತ್ಮಿಕ ಪಯಣದ ಆರಂಭದ ಹಲವು ವರ್ಷಗಳಲ್ಲಿ ನನಗೆ ಮಾರ್ಗದರ್ಶನ ನೀಡಿತು.

ಆದರೆ ಇಲ್ಲಿ ನಾನು ನಿಮಗೆ ಯೋಗ್ಯತೆಯ ಈ ಕಲ್ಪನೆಗೆ ಸಂಬಂಧಿಸಿದಂತೆ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಒಂದು ಸಮಯದಲ್ಲಿ ನಾನು ಅರಿತುಕೊಂಡೆ, “ನಾನು ಈ ಭಕ್ತಿಗೀತೆಯ ಅರ್ಧದಷ್ಟು ಅರ್ಥವನ್ನು ಮಾತ್ರ ತಿಳಿದುಕೊಂಡಿದ್ದೇನೆ.” ಏಕೆಂದರೆ ಈ ಗೀತೆಯನ್ನು ನಮ್ಮ ಭಕ್ತಿ, ಹಂಬಲ, ಹಠ ಮತ್ತು ನಿರಂತರತೆಯನ್ನು ಹೆಚ್ಚಿಸಲು ಬಳಸುವುದು ಎಷ್ಟು ಶಕ್ತಿಶಾಲಿಯಾಗಿದೆಯೋ — “ಬರುವೆಯಾ? ನೀ ಬರುವೆಯಾ? ಒಮ್ಮೆಯಾದರೂ, ಎನ್ನೆಡೆಗೆ?” — ಇದರ ಇನ್ನೊಂದು ಅರ್ಧವೆಂದರೆ, ವಾಸ್ತವವಾಗಿ ಜಗನ್ಮಾತೆಯೂ ನಮಗೆ ಅದೇ ಹಾಡನ್ನು ಹಾಡುತ್ತಿದ್ದಾಳೆ ಎಂದು ನಾವು ಅರಿತುಕೊಳ್ಳುವುದು.

ಇದನ್ನು ನೀವು ಆಚರಣೆಗೆ ತರಬಹುದು. ಇದನ್ನು ತಿರುಗಿಸಿ, ನೀವೇ ಅವಳನ್ನು ಕರೆಯುವ ಬದಲು, ಅವಳೇ ನಿಮ್ಮನ್ನು ಕರೆಯುತ್ತಿದ್ದಾಳೆ ಎಂದು ಯೋಚಿಸಿ. ಅದರ ಬಗ್ಗೆ ಯೋಚಿಸಿ! ಆಕೆ ನಮ್ಮ ಪ್ರತಿಯೊಬ್ಬರಿಗೂ ಹೀಗೆ ಹೇಳುತ್ತಿದ್ದಾಳೆ, “ನನ್ನ ಪ್ರೀತಿಯ ಮಕ್ಕಳೇ, ಎನ್ನ ಹೃದಯ ದ್ವಾರವ, ವಿಶಾಲವಾಗಿ ತೆರೆದಿಹೆ ನಿನಗೆ. ನೀನು ಬರುವೆಯಾ, ನೀನು ಬರುವೆಯಾ? ಒಮ್ಮೆಯಾದರೂ ನನ್ನ ಬಳಿಗೆ?” ಏಕೆಂದರೆ, ನಾವು ಒಮ್ಮೆ ಆಕೆಯ ಬಳಿ ಬಂದರೆ, ಮತ್ತೆಂದೂ ಅವಳನ್ನು ಬಿಟ್ಟು ಹೋಗಲು ಬಯಸುವುದಿಲ್ಲ ಎಂದು ಅವಳಿಗೆ ತಿಳಿದಿದೆ.

ಆಗ, ನಮ್ಮ ಆತ್ಮವು ಉತ್ತರಿಸುತ್ತದೆ, “ನನ್ನ ದಿನಗಳು, ತಾಯಿಯೇ, ನಿನ್ನನ್ನು ನೋಡದೆ ಕಳೆದುಹೋಗುತ್ತವೆಯೇ?” ಆದರೆ ಆಕೆ ನೇರವಾಗಿ ಉತ್ತರಿಸುವುದಿಲ್ಲ, ಬದಲಾಗಿ ಪುನಃ ಹೇಳುತ್ತಾಳೆ, “ರಾತ್ರಿ ಮತ್ತು ಹಗಲು, ರಾತ್ರಿ ಮತ್ತು ಹಗಲು, ನಾನು ನಿನಗಾಗಿ ರಾತ್ರಿ ಮತ್ತು ಹಗಲು ಹುಡುಕುತ್ತಿದ್ದೇನೆ.”

ಇದನ್ನು ನಿಮ್ಮ ಧ್ಯಾನದಲ್ಲಿ ಅಳವಡಿಸಿಕೊಳ್ಳಿ, ಮತ್ತು ನೀವು ಅಯೋಗ್ಯರು ಎಂಬ ಭ್ರಮೆಯು ಹೇಗೆ ನಾಶವಾಗುತ್ತದೆ ಎಂಬುದನ್ನು ನೋಡಿ.

ಕಮಲ-ಕೇಸರಿ-ರೇಖಾಚಿತ್ರ

ನೀವು ಕೆಳಗೆ, ಎಸ್‌ಆರ್‌ಎಫ್‌ ಸಂನ್ಯಾಸಿನಿಯರ ಕೀರ್ತನೆ ತಂಡವು ಲೈಟ್ ದ ಲಾಂಪ್ ಆಫ್ ದೈ ಲವ್ ಎಂಬ ಧ್ವನಿಮುದ್ರಿಕೆಯಲ್ಲಿ ಪ್ರಸ್ತುತಪಡಿಸಿರುವ “ಎನ್ನ ಹೃದಯ ದ್ವಾರವ” ಎಂಬ ಕೀರ್ತನೆಯನ್ನು ಆಲಿಸಬಹುದು (ಇದು ಮತ್ತು ವೈಎಸ್ಎಸ್ ಹಾಗೂ ಎಸ್‌ಆರ್‌ಎಫ್‌ ನ ಇತರ ಅನೇಕ ಕೀರ್ತನೆಗಳ ಧ್ವನಿಮುದ್ರಿಕೆಗಳು ವೈಎಸ್ಎಸ್ ನ ಪುಸ್ತಕದ ಮಳಿಗೆಯಲ್ಲಿ ಲಭ್ಯವಿವೆ).

ಇದನ್ನು ಹಂಚಿಕೊಳ್ಳಿ