ಉನ್ನತ ಕ್ರಿಯಾಯೋಗಿಯಾಗಿದ್ದ ಮತ್ತು 1920 ರಲ್ಲಿ ತಮ್ಮ ಆಧ್ಯಾತ್ಮಿಕ ಮಿಷನ್ ಅನ್ನು ಪ್ರಾರಂಭಿಸಲು ಯೋಗಾನಂದರು ಭಾರತವನ್ನು ತೊರೆದಾಗ, ನಿರ್ಣಾಯಕ ಆರ್ಥಿಕ ಸಹಾಯವನ್ನು ನೀಡಿದವರೂ ಆದ ತಮ್ಮ ತಂದೆ ಭಗವತಿ ಚರಣ ಘೋಷರ ಬಗ್ಗೆ ಯೋಗಾನಂದರು ಆಗಾಗ್ಗೆ ಬಹಳ ಗೌರವದಿಂದ ಮಾತನಾಡಿದ್ದಾರೆ. ಈಗ ಭಗವತಿ ಚರಣ ಘೋಷರಿಂದಲೇ ಒಂದು ಶತಮಾನಕ್ಕೂ ಹಿಂದೆ ಸ್ಥಾಪಿಸಲ್ಪಟ್ಟ ಹಣಕಾಸು ಸಂಸ್ಥೆಯಿಂದ ಅವರ ಜೀವನ ಮತ್ತು ಔದಾರ್ಯವನ್ನು ಮತ್ತೊಮ್ಮೆ ಗೌರವಿಸಲಾಗಿದೆ.

ಭಗವತಿ ಚರಣ ಘೋಷ್ (1853-1942), ಪರಮಹಂಸ ಯೋಗಾನಂದರ ತಂದೆ, ಲಾಹಿರಿ ಮಹಾಶಯರ ಶಿಷ್ಯ
ಅಕ್ಟೊಬರ್ 19, 2020 ರಂದು ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿರುವ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಎಸ್.ಇ., ಎಸ್.ಇ.ಸಿ ಅಂಡ್ ಇ. ಕೊ. ರೈಲ್ವೆ ನೌಕರರ ಸಹಕಾರಿ ಕ್ರೆಡಿಟ್ ಸೊಸೈಟಿಯು ಭಗವತಿ ಚರಣ ಘೋಷ್ ಅವರ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿತು. ಮೂಲತಃ “ಕಲ್ಕತ್ತಾ ಅರ್ಬನ್ ಬ್ಯಾಂಕ್” ಎಂಬ ಹೆಸರಿನಲ್ಲಿ 1909ರಲ್ಲಿ ಅವರು ಸ್ಥಾಪಿಸಿದ ಸಂಸ್ಥೆಯ ಮೂಲಕ ಒಂದು ಶತಮಾನಕ್ಕೂ ಹೆಚ್ಚು ಕಾಲ ಕಡಿಮೆ ಬಡ್ಡಿ ದರದ ಸಾಲವನ್ನು ನೀಡಿ ರೈಲ್ವೆ ಕಾರ್ಮಿಕರ ಕಲ್ಯಾಣಕ್ಕಾಗಿ ದುಡಿದ ಶ್ರೀ ಘೋಷ್ ರ ಬದ್ಧತೆಯನ್ನು ಈ ಪ್ರತಿಮೆ ಗುರುತಿಸುತ್ತದೆ. ಆ ಸಮಯದಲ್ಲಿ ಶ್ರೀ ಘೋಷರು ಬಂಗಾಳ ನಾಗಪುರ ರೈಲ್ವೆಯಲ್ಲಿ (ಈಗ ಆಗ್ನೇಯ ರೈಲ್ವೆ) ಉನ್ನತ ಹುದ್ದೆಯಲ್ಲಿದ್ದರು.
ಸಮರ್ಪಣಾ ಕಾರ್ಯಕ್ರಮದಲ್ಲಿ ಭಗವತಿ ಚರಣ ಘೋಷರ ಮರಿಮಗ ಶ್ರೀ ಸೋಮನಾಥ್ ಘೋಷ್ ಮತ್ತು ಅವರ ಪತ್ನಿ ಶ್ರೀಮತಿ ಸರಿತಾ ಘೋಷ್ ಪ್ರತಿಮೆಯನ್ನು ಅನಾವರಣಗೊಳಿಸಿ ತಮ್ಮ ಮುತ್ತಜ್ಜನ ಜೀವನದ ಬಗ್ಗೆ ಮಾತನಾಡಿದರು. ನಂತರ ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸ್ವಾಮಿ ಅಚ್ಯುತಾನಂದ ಗಿರಿಯವರು ಬ್ಯಾಂಕ್ ಸ್ಥಾಪನೆಯಲ್ಲಿ ಭಗವತಿ ಚರಣ ಘೋಷರ ಮಾನವೀಯತೆಯನ್ನು ಗುರುತಿಸಿದಕ್ಕಾಗಿ ಸೊಸೈಟಿಗೆ ಧನ್ಯವಾದ ಅರ್ಪಿಸಿದರು ಮತ್ತು ಪರಮಹಂಸ ಯೋಗಾನಂದರು ಯೋಗಿಯ ಆತ್ಮಕಥೆಯಲ್ಲಿ ತಮ್ಮ ತಂದೆಯ ಕೊಡುಗೆಯನ್ನು ಗುರುತಿಸಿರುವುದನ್ನು ಉಲ್ಲೇಖಿಸಿದರು:
“ಅಧಿಕಾರಕ್ಕಾಗಿ ಹಣವನ್ನು ಸಂಗ್ರಹಿಸಿಡುವುದರಲ್ಲಿ ತಂದೆಗೆ ಆಸಕ್ತಿಯಿರಲಿಲ್ಲ. ಒಂದು ಸಂದರ್ಭದಲ್ಲಿ ಕಲ್ಕತ್ತಾ ನಗರ ಬ್ಯಾಂಕನ್ನು ತಾವೇ ಸಂಘಟಿಸಿ ರೂಪಿಸಿದ ಮೇಲೆ ತಾವೇ ಅದರ ಷೇರುಗಳನ್ನು ಪಡೆದು ಅದರಿಂದ ಪ್ರಯೋಜನ ಹೊಂದುವುದನ್ನು ನಿರಾಕರಿಸಿದರು. ತಮ್ಮ ಬಿಡುವಿನ ಸಮಯದಲ್ಲಿ ಸಾಮಾಜಿಕ ಕರ್ತವ್ಯವನ್ನು ಮಾಡಬೇಕೆಂದಷ್ಟೇ ಅವರು ಬಯಸಿದ್ದುದು.”
ತಂದೆ ಮತ್ತು ಮಗನ ನಡುವಿನ ಹೋಲಿಕೆಯ್ನನು ವಿವರಿಸುತ್ತಾ ಸ್ವಾಮಿ ಅಚ್ಯುತಾನಂದರು: “ವಿನಮ್ರವಾಗಿ ಆರಂಭವಾದ ರೈಲ್ವೆ ನೌಕರರ ಸಹಕಾರಿ ಕ್ರೆಡಿಟ್ ಸೊಸೈಟಿಯ ಬೆಳವಣಿಗೆ ಮತ್ತು ಅವರ ಪುತ್ರ ಪರಮಹಂಸ ಯೋಗಾನಂದರು ಸ್ಥಾಪಿಸಿದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಬೆಳವಣಿಗೆಯ ನಡುವೆ ಹೆಚ್ಚಿನ ಹೋಲಿಕೆಯನ್ನು ನಾವು ಗಮನಿಸಿದ್ದೇವೆ” ಎಂದು ಹೇಳಿದರು. ಎರಡೂ ಸಂಸ್ಥೆಗಳು ಸೇವೆಗಾಗಿ ಮೀಸಲಾಗಿವೆ ಎಂದರು.
ಭಗವತಿ ಚರಣ ಘೋಷರ ಸ್ಫೂರ್ತಿದಾಯಕ ಜೀವನದ ಅನೇಕ ವಿವರಗಳನ್ನು ಯೋಗಿಯ ಆತ್ಮಕಥೆ ಮತ್ತು ಪರಮಹಂಸಜಿಯವರ ಸಹೋದರ ಸನಂದಲಾಲ್ ಘೋಷ್ ರವರು ಬರೆದ ಪರಮಹಂಸಜಿಯವರ ಜೀವನ ಚರಿತ್ರೆ ಮೇಜ್ದಾ ಪುಸ್ತಕದಲ್ಲಿ ವಿವರಿಸಲಾಗಿದೆ. ಲಾಹಿರಿ ಮಹಾಶಯರ ನೇರ ಶಿಷ್ಯರಾದ ಭಗವತಿ ಚರಣ ಘೋಷರು ತಮ್ಮ ಎಂಟು ಮಕ್ಕಳ ಮೇಲೂ ಪ್ರೀತಿಯ ಆಧ್ಯಾತ್ಮಿಕ ಪ್ರಭಾವವನ್ನು ಬೀರಿದರು. ಮತ್ತು ಅವರ ಹಣಕಾಸಿನ ಕೊಡುಗೆಗಳು ಪರಮಹಂಸರ ಅಂತರಾಷ್ಟ್ರೀಯ ಮಿಷನ್ ಗೆ ಮಾತ್ರವಲ್ಲದೆ 1935ರಲ್ಲಿ ಅವರು ಭಾರತಕ್ಕೆ ಹಿಂದಿರುಗಿದ ಸಮಯದಲ್ಲಿ ರಾಂಚಿಯಲ್ಲಿ ವೈಎಸ್ಎಸ್ ಆಶ್ರಮದ ಶಾಶ್ವತ ಸ್ಥಾಪನೆಗೂ ಸಹಾಯವಾಗಿದೆ.
ಭಗವತಿ ಚರಣ ಘೋಷರು ತಮ್ಮ ಬಾಲ್ಯದಲ್ಲಿ ತೀವ್ರ ಆರ್ಥಿಕ ತೊಂದರೆಗಳನ್ನು ಅನುಭವಿಸಿದರು ಮತ್ತು ನಂತರದ ಜೀವನದಲ್ಲಿ ಅಂತಿಮವಾಗಿ ಭೌತಿಕ ಸಮೃದ್ಧಿಯನ್ನು ಸಾಧಿಸಲು ಶ್ರದ್ಧೆಯಿಂದ ಕೆಲಸ ಮಾಡಿದರು. ಆದರೂ ಅವರು ಆರ್ಥಿಕ ಲಾಭಕ್ಕಿಂತ ಆಧ್ಯಾತ್ಮಿಕತೆಗೇ ಆದ್ಯತೆ ನೀಡಿದರು. ಯೋಗಿಯ ಆತ್ಮಕಥೆ ಪುಸ್ತಕದಲ್ಲಿ ಪರಮಹಂಸ ಯೋಗಾನಂದರು ಅವರ ತಂದೆಯ ವಿಶಿಷ್ಟ ಹೇಳಿಕೆಗಳಲ್ಲಿ ಒಂದನ್ನು ದಾಖಲಿಸಿದ್ದಾರೆ:
“ಭೌತಿಕ ಲಾಭದಿಂದ ಏಕೆ ಉತ್ಸುಕರಾಗಬೇಕು? ಸಮಚಿತ್ತದ ಗುರಿಯನ್ನು ಅನುಸರಿಸುವವನು ಲಾಭದಿಂದ ಸಂತೋಷಪಡುವುದಿಲ್ಲ ಅಥವಾ ನಷ್ಟದಿಂದ ಖಿನ್ನತೆಗೆ ಒಳಗಾಗುವುದಿಲ್ಲ. ಮನುಷ್ಯನು ಈ ಜಗತ್ತಿಗೆ ಹಣವಿಲ್ಲದೆ ಬರುತ್ತಾನೆ ಮತ್ತು ಒಂದು ಬಿಡಿಗಾಸು ಇಲ್ಲದೆ ಇಲ್ಲಿಂದ ನಿರ್ಗಮಿಸುತ್ತಾನೆ ಎಂದು ಅವನಿಗೆ ತಿಳಿದಿದೆ.”
