“ಆಂತರ್ಯದ ಮಾರ್ಗದರ್ಶನದಿಂದ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದು” ಶ್ರೀ ದಯಾ ಮಾತಾರವರಿಂದ

10 ಮಾರ್ಚ್‌, 2023

ಈ ಕೆಳಗಿನದು, ಅವರು 2010ರಲ್ಲಿ ಸ್ವರ್ಗಸ್ಥರಾಗುವುದಕ್ಕಿಂತ ಮುಂಚೆ 1955ರಿಂದ ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಸಂಘಮಾತಾ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ದಯಾ ಮಾತಾರವರ ಅಂತರ್ಬೋಧೆ: ಜೀವನದ ನಿರ್ಧಾರಗಳಿಗೆ ಆತ್ಮದ-ಮಾರ್ಗದರ್ಶನ”ದ ಆಯ್ದ ಭಾಗ.

ಪರಮಹಂಸ ಯೋಗಾನಂದರು ಆಗಾಗ್ಗೆ ಈ ನುಡಿಗಳನ್ನು ಉಲ್ಲೇಖಿಸುತ್ತಿದ್ದರು: “ಯಾರು ತನಗೆ ತಾನು ಸಹಾಯ ಮಾಡಿಕೊಳ್ಳಬಲ್ಲನೋ ಅವನಿಗೆ ಭಗವಂತ ಸಹಾಯ ಮಾಡುತ್ತಾನೆ.”

ನಿರ್ಧಾರವನ್ನು ತೆಗೆದುಕೊಳ್ಳಬೇಕಾದಾಗ, ನಾವು ಏನು ಮಾಡಬೇಕೆಂದು ಹೇಳಲು ಯಾವುದಾದರೂ ದಿವ್ಯ ಶಕ್ತಿಗಿಂತ ಉತ್ತಮವಾದುದನ್ನು ನಾವು ಬಯಸುವುದಿಲ್ಲ. ಅದು ಎಷ್ಟು ಸುಲಭ; ನಿರ್ದಿಷ್ಟ ಕ್ಷಣದಲ್ಲಿ ಭಗವಂತನ ನೇರ ಮಾರ್ಗದರ್ಶನವನ್ನು ನಾವು ಪಡೆಯುತ್ತಿದ್ದೇವೆ ಎಂದು ನಾವು ತಿಳಿದಲ್ಲಿ, ನಾವು ಯಾವುದೇ ಪ್ರಯತ್ನವನ್ನು ಮಾಡಬೇಕಾಗಿರುವುದಿಲ್ಲ.

ಆದರೆ ಅದು ಅಷ್ಟು ಸುಲಭವಾಗಿರತಕ್ಕದ್ದಲ್ಲ, ಮತ್ತು ಅದಕ್ಕೆ ಕಾರಣ ಇದು: ನಾವು ಭಗವಂತನ ಒಂದು ಭಾಗವಾಗಿದ್ದೇವೆ, ಆದರೆ ಅದು ನಮಗೆ ತಿಳಿದಿಲ್ಲ – ನಾವು ಒಂದು ಮೂಕ ಬೊಂಬೆಯ ಹಾಗೆ ಹಾಗೂ ಅವನು ಬೊಂಬೆಯಾಡಿಸುವವನು ಎಂಬಂತೆ, “ನಾನು ಏನು ಮಾಡಬೇಕೆಂದು ನೀನು ಹೇಳು” ಎಂದು ಅವನ ಮೇಲೆ ಭಾರ ಹಾಕುವುದನ್ನು ಮಾತ್ರ ಮಾಡಿದರೆ ನಾವು ಎಂದೂ ಇದನ್ನು ತಿಳಿಯುವುದಿಲ್ಲ. ಇಲ್ಲ, ಅವನ ಮಾರ್ಗದರ್ಶನವನ್ನು ಕೇಳುವಾಗ ಅವನು ನಮಗೆ ನೀಡಿರುವ ಬುದ್ಧಿಯನ್ನು ನಾವು ಉಪಯೋಗಿಸಬೇಕೆಂದು ಅವನು ಬಯಸುತ್ತಾನೆ.

ಅಂತಿಮ ಪ್ರಾರ್ಥನೆ

ಯೇಸುವು ಅತ್ಯುತ್ಕೃಷ್ಟ ಪ್ರಾರ್ಥನೆಯನ್ನು ಮಾಡಿದನು: “ಪ್ರಭುವೇ, ನಿನ್ನ ಇಚ್ಛೆಯಂತೇ ಆಗಲಿ.” ಈಗ, ಬಹಳಷ್ಟು ಜನರು ಇದರ ಅರ್ಥವನ್ನು ಹೀಗೆ ಅರ್ಥೈಸುತ್ತಾರೆ: ಅವರು ಯಾವುದೇ ಇಚ್ಛೆಯನ್ನು ಅಥವಾ ಯೋಚನೆಯನ್ನು ಮಾಡಬೇಕಾಗಿಲ್ಲ, ಕೂತು ಧ್ಯಾನ ಮಾಡುತ್ತಾ ಅವರ ಮೂಲಕ ಭಗವಂತನು ಏನಾದರೂ ಮಾಡಲು ಸುಮ್ಮನೆ ಕಾಯುವದಷ್ಟೇ. ಇದು ತಪ್ಪು. ನಾವು ಅವನ ಪ್ರತಿಬಿಂಬದಲ್ಲಿ ಮಾಡಲ್ಪಟ್ಟಿದ್ದೇವೆ.

ಬೇರೆ ಯಾವುದೇ ಜೀವಿಗೂ ನೀಡದ ಬುದ್ಧಿವಂತಿಕೆಯನ್ನು ಅವನು ಮಾನವನಿಗೆ ನೀಡಿದ್ದಾನೆ. ನಾವು ಅದನ್ನು ಉಪಯೋಗಿಸಬೇಕೆಂದು ಅವನು ಬಯಸುತ್ತಾನೆ. ಆದ್ದರಿಂದಲೇ ಪರಮಹಂಸಜಿ ನಮಗೆ ಪ್ರಾರ್ಥನೆ ಮಾಡಲು ಹೇಳಿದರು:

“ಪ್ರಭುವೇ, ನಾನು ವಿವೇಚಿಸುತ್ತೇನೆ, ನಾನು ಇಚ್ಛಿಸುತ್ತೇನೆ, ನಾನು ಕಾರ್ಯ ನಿರ್ವಹಿಸುತ್ತೇನೆ; ಅದರೆ ನೀನು ನನ್ನ ವಿವೇಚನೆಯನ್ನು, ಇಚ್ಛೆಯನ್ನು ಮತ್ತು ಕಾರ್ಯಗಳನ್ನು ನಾನು ಮಾಡಬೇಕಾದ ಯುಕ್ತವಾದುದೆಡೆಗೆ ಮಾರ್ಗದರ್ಶಿಸು.”

ಇದನ್ನು ನಾವು ಆಶ್ರಮದಲ್ಲಿ ಕಟ್ಟುನಿಟ್ಟಾಗಿ ಅಭ್ಯಾಸ ಮಾಡುತ್ತೇವೆ. ಕೆಲಸ ಕಾರ್ಯದ ಬಗ್ಗೆಯ ನಮ್ಮ ಒಟ್ಟುಗೂಡುವಿಕೆಯಲ್ಲಿ ಮೊದಲು ನಾವು ಕೆಲವು ನಿಮಿಷಗಳವರೆಗೆ ಧ್ಯಾನ ಮಾಡುತ್ತೇವೆ ಮತ್ತು ನಂತರ ಆ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. ಅದರ ನಂತರವೇ ನಾವು ಚರ್ಚೆ ಮಾಡಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತೇವೆ.

ಆದ್ದರಿಂದ ಸುಮ್ಮನೆ ಕೂತು ಭಗವಂತನು ಯುಕ್ತ ಕಾರ್ಯವನ್ನು ಶುರು ಮಾಡುವನೆಂದು ನಿರೀಕ್ಷಿಸಬೇಡಿ. ವಿವೇಚನೆಯ, ಇಚ್ಛೆಯ ಮತ್ತು ಕ್ರಿಯೆಯ ತತ್ತ್ವಗಳನ್ನು ಅನುಷ್ಠಾನಗೊಳಿಸುತ್ತಾ ಯಾವುದು ಉತ್ತಮವಾದದ್ದು ಎಂದು ಅನಿಸುತ್ತದೋ ಅದನ್ನು ಮಾಡಿ.

ನಿಮ್ಮ ಇಚ್ಛೆ ಮತ್ತು ಬುದ್ಧಿಶಕ್ತಿಯನ್ನು ಉಪಯೋಗಿಸುತ್ತಾ ನಿಷ್ಠೆಯಿಂದ ಕೆಲಸ ಮಾಡಿ ಮತ್ತು ಅದೇ ಸಮಯದಲ್ಲಿ “ಪ್ರಭುವೇ, ನನ್ನನ್ನು ಮಾರ್ಗದರ್ಶಿಸು, ನಾನು ನಿನ್ನ ಇಚ್ಛೆಯನ್ನು ಅನುಸರಿಸುವಂತಾಗಲಿ. ಕೇವಲ ನಿನ್ನ ಇಚ್ಛೆಯೇ ನೆರವೇರಲಿ.” ಎಂದು ಸತತವಾಗಿ ಪ್ರಾರ್ಥಿಸಿ.

ಹೀಗೆ ಮಾಡುವುದರಿಂದ, ನೀವು ನಿಮ್ಮ ಮನಸ್ಸನ್ನು ಅವನ ಮಾರ್ಗದರ್ಶನಕ್ಕೆ ತೆರೆದಿಡುತ್ತೀರಿ. ಆಗ ನೀವು ಇದ್ದಕ್ಕಿದ್ದಂತೆಯೇ ಸ್ಪಷ್ಟವಾಗಿ ನೋಡುತ್ತಾ “ಇಲ್ಲ, ನಾನು ಈಗ ಈ ದಿಶೆಯಲ್ಲಿ ಹೋಗಬೇಕು” ಎಂಬುದನ್ನು ಮನಗಾಣುತ್ತೀರಿ. ಭಗವಂತನು ನಿಮಗೆ ದಾರಿ ತೋರುತ್ತಾನೆ.

ಆದರೆ ನೆನಪಿನಲ್ಲಿಡಿ, ನಿಮ್ಮನ್ನು ಮಾರ್ಗದರ್ಶಿಸಲು ಭಗವಂತನನ್ನು ಕೋರುವಾಗ, ನಿಮ್ಮ ಮನಸ್ಸು ಎಂದೂ ಸಂಕುಚಿತವಾಗಿರಬಾರದು; ಅದು ಸದಾ ತೆರೆದಿರಲಿ ಮತ್ತು ಗ್ರಹಣಾಕಾಂಕ್ಷಿಯಾಗಿರಲಿ. ಹೀಗೇ, ಯಾರು ತನಗೆ ತಾನು ಸಹಾಯ ಮಾಡಿಕೊಳ್ಳಬಲ್ಲನೋ ಅವನಿಗೆ ಭಗವಂತ ಸಹಾಯ ಮಾಡುತ್ತಾನೆ. ಇದು ಕೆಲಸ ಮಾಡುತ್ತದೆ, ಆದರೆ ಆರಂಭ ಮತ್ತು ಪ್ರಯತ್ನ ನಮ್ಮಿಂದ ಆಗಬೇಕು.

ಭಗವಂತನಿಗೆ ಸೇವೆ ಸಲ್ಲಿಸಲು ಮತ್ತು ಅವನ ಇಚ್ಛೆಯನ್ನು ಅನುಸರಿಸಲು ನೀವು ಒಂದು ಅಶ್ರಮದಲ್ಲೇನೂ ಇರಬೇಕಾಗಿಲ್ಲ. ಈ ಕ್ಷಣದಲ್ಲಿ ನಾವು ಪ್ರತಿಯೊಬ್ಬರೂ, ಭಗವಂತ ಮತ್ತು ನಮ್ಮ ಕರ್ಮಗಳು ನಮ್ಮನ್ನು ಇರಿಸಿರುವ ಜಾಗದಲ್ಲಿದ್ದೇವೆ. ನಿಮ್ಮ ಸದ್ಯದ ಪರಿಸ್ಥಿತಿಯಿಂದ ನೀವು ಸಂತುಷ್ಟವಿಲ್ಲದೇ ಇದ್ದಲ್ಲಿ, ಧ್ಯಾನ ಮಾಡಿ ಭಗವಂತನ ಮಾರ್ಗದರ್ಶನವನ್ನು ಕೋರಿ. ಆದರೆ ಹಾಗೆ ಮಾಡುವಾಗ, ನಿಮಗೆ ಭಗವಂತನು-ನೀಡಿದ ವಿವೇಚನೆಯನ್ನು ಉಪಯೋಗಿಸಿ. ನಿಮ್ಮ ಬದುಕು ಮತ್ತು ಭವಿಷ್ಯಕ್ಕೆ ಸಂಬಂಧಪಟ್ಟಂತೆ ನಿಮಗಿರುವ ಆಯ್ಕೆಗಳನ್ನು ವಿಶ್ಲೇಷಿಸಿ.

ಮನಸ್ಸಾಕ್ಷಿ ಮತ್ತು ಅಂತರ್ಬೋಧೆ: ಆಂತರ್ಯದಲ್ಲಿರುವ ದಿವ್ಯ ವಾಣಿ

ನಮ್ಮ ಆಂತರ್ಯದಲ್ಲಿರುವ ದಿವ್ಯ ವಾಣಿಯು ನಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ನಮಗೆ ಸಹಾಯ ಮಾಡುತ್ತದೆ. ಮನಸ್ಸಾಕ್ಷಿಯ ಧ್ವನಿಯು, ಪ್ರತಿಯೊಬ್ಬ ಮಾನವನಲ್ಲೂ ಇರುವ ಭಗವಂತನು-ನೀಡಿರುವ ದಿವ್ಯ ಮಾರ್ಗದರ್ಶನದ ಸಾಧನ.

ಆದರೆ ಬಹಳಷ್ಟು ಜನರಲ್ಲಿ, ಅದು ಕೇಳಿಸುವುದಿಲ್ಲ, ಏಕೆಂದರೆ ಅವರ ಒಂದು ಅಥವಾ ಅಸಂಖ್ಯಾತ ಜನ್ಮಗಳ ಅವಧಿಯಲ್ಲಿ ಅವರು ಅದಕ್ಕೆ ಗಮನ ಕೊಡಲು ನಿರಾಕರಿಸಿದ್ದಾರೆ. ಅದರ ಪರಿಣಾಮವಾಗಿ, ಆ ಧ್ವನಿಯು ನಿಶ್ಶಬ್ದವಾಗಿದೆ ಅಥವಾ ಬಹಳ ಬಹಳ ಕ್ಷೀಣವಾಗಿದೆ. ಆದರೆ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯುಕ್ತ ನಡವಳಿಕೆಯನ್ನು ಕ್ರಿಯೆಯಲ್ಲಿ ತೊಡಗಿಸಲು ಆರಂಭಿಸಿದಾಗ, ಆಂತರಿಕ ಪಿಸುನುಡಿಗಳು ಮತ್ತೆ ಗಟ್ಟಿಯಾಗುತ್ತವೆ.

ಅರೆ-ಅಂತರ್ಬೋಧಿತ ಮನಸ್ಸಾಕ್ಷಿಯಿಂದಾಚೆಗೆ ಸತ್ಯದ ನೇರ ಗ್ರಹಿಕೆಯ ಆತ್ಮದ ಶುದ್ಧ ಅಂತರ್ಬೋಧೆಯಿದೆ – ಅದು ಅಸ್ಖಲಿತವಾದ ದಿವ್ಯ ವಾಣಿ.

ನಮ್ಮೆಲ್ಲರಲ್ಲೂ ಅಂತರ್ಬೋಧೆ ಇದೆ. ನಮ್ಮಲ್ಲಿ ಐದು ಭೌತಿಕ ಇಂದ್ರಿಯಗಳು ಮತ್ತು ಒಂದು ಆರನೆಯ ಇಂದ್ರಿಯವೂ ಕೂಡ ಇದೆ – ಎಲ್ಲದರ-ಅರಿವಿರುವ ಅಂತರ್ಬೋಧೆ. ಐದು ಭೌತಿಕ ಇಂದ್ರಿಯಗಳ ಮೂಲಕ ನಾವು ಈ ಪ್ರಪಂಚದೊಂದಿಗೆ ಸಂಬಂಧ ಕಲ್ಪಿಸುತ್ತೇವೆ: ಸ್ಪರ್ಶ, ಶ್ರವಣ, ಗಂಧ, ರುಚಿ ಮತ್ತು ನೋಡುವುದು. ಬಹಳಷ್ಟು ಜನರಲ್ಲಿ, ಆರನೆಯ ಇಂದ್ರಿಯವಾದ ಅಂತರ್ಬೋಧಿತ ಸಂವೇದನೆಯು, ಉಪಯೋಗಿಸದೇ ಇರುವುದರಿಂದ ಬೆಳೆದಿರುವುದೇ ಇಲ್ಲ.

ಬಾಲ್ಯದಿಂದಲೂ ಕಣ್ಣುಗಳನ್ನು ಬಟ್ಟೆಯಿಂದ ಕಟ್ಟಿಡಿ ಮತ್ತು ವರ್ಷಗಳ ನಂತರ ಆ ಬಟ್ಟೆಯನ್ನು ತೆಗೆದಾಗ, ಎಲ್ಲವೂ ಚಪ್ಪಟೆಯಾಗಿ ಕಾಣುತ್ತವೆ. ಅಥವಾ ಕೈಯನ್ನು ಕದಲದಂತೆ ಮಾಡಿ, ಆಗ ಅದು ಉಪಯೋಗಿಸದೇ ಇರುವುದರಿಂದ ಸರಿಯಾಗಿ ಬೆಳೆಯುವುದಿಲ್ಲ. ಅದೇ ರೀತಿ, ಉಪಯೋಗಿಸದೇ ಇರುವುದರಿಂದ, ಬಹಳಷ್ಟು ಜನರಲ್ಲಿ ಅಂತರ್ಬೋಧೆಯು ಕಾರ್ಯನಿರ್ವಹಿಸುವುದಿಲ್ಲ.

ಧ್ಯಾನವು ಅಂತರ್ಬೋಧೆಯ ಶಕ್ತಿಯನ್ನು ವೃದ್ಧಿಸುತ್ತದೆ.

ಆದರೆ ಅಂತರ್ಬೋಧೆಯನ್ನು ವೃದ್ಧಿಸಿಕೊಳ್ಳಲು ಒಂದು ಮಾರ್ಗವಿದೆ. ನಮ್ಮ ಶರೀರ ಮತ್ತು ಮನಸ್ಸನ್ನು ನಾವು ಶಾಂತಗೊಳಿಸುವವರೆಗೂ ಆರನೆಯ ಇಂದ್ರಿಯವು ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅದ್ದರಿಂದ, ಅಂತರ್ಬೋಧೆಯನ್ನು ವೃದ್ಧಿಸುವ ಮೊದಲನೆ ಹೆಜ್ಜೆಯೆಂದರೆ ಧ್ಯಾನ ಮಾಡುವುದು, ಒಂದು ಆಂತರಿಕ ಶಾಂತತೆಯ ಸ್ಥಿತಿಯನ್ನು ಪ್ರವೇಶಿಸುವುದು.

ನೀವು ಎಷ್ಟು ಗಾಢವಾಗಿ ಧ್ಯಾನ ಮಾಡುತ್ತೀರೋ, ಮತ್ತು ನಂತರ ನಿಮ್ಮ ಮನಸ್ಸನ್ನು ಒಂದು ಸಮಸ್ಯೆಯ ಬಗ್ಗೆ ತೊಡಗಿಸುತ್ತೀರೋ, ಅಷ್ಟು ನಿಮ್ಮ ಅಂತರ್ಬೋಧೆಯ ಶಕ್ತಿಯು ಆ ಸಮಸ್ಯೆಯನ್ನು ಬಗೆಹರಿಸುವುದರಲ್ಲಿ ತನ್ನನ್ನು ತಾನು ವ್ಯಕ್ತಪಡಿಸುತ್ತದೆ. ಆ ಶಕ್ತಿಯು ಕ್ರಮ ಕ್ರಮವಾಗಿ ವೃದ್ಧಿಸುತ್ತದೆ, ಒಂದೇ ಬಾರಿಯಲ್ಲ; ಹೇಗೆ ಒಂದು ಸ್ನಾಯು ಅಥವಾ ಅಂಗವು ವ್ಯಾಯಾಮದಿಂದ ಕ್ರಮ ಕ್ರಮವಾಗಿ ಶಕ್ತಿಯುತವಾಗುವುದೋ ಹಾಗೆ – ಇದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಆಗುವಂತಹದಲ್ಲ….

ನೀವು ದಿನ ನಿತ್ಯದ ಧ್ಯಾನವನ್ನು ಆರಂಭಿಸಲು ಅಥವಾ ವರ್ಧಿಸಲು ಹೆಚ್ಚಿನದನ್ನು ಕಲಿಯಬೇಕೆಂದು ಬಯಸಿದಲ್ಲಿ – “ಆರನೆಯ ಇಂದ್ರಿಯವಾದ ಅಂತರ್ಬೋಧೆಯು” ನಿಮ್ಮ ಪ್ರಜ್ಞೆಯಲ್ಲಿ ಹೆಚ್ಚು ಹೆಚ್ಚು ಅಭಿವ್ಯಕ್ತಿಯಾಗಲು ಮತ್ತು ಅದನ್ನು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಉಪಯೋಗಿಸಲು ಬೇಕಾಗುವ ಪ್ರಶಾಂತತೆ ಮತ್ತು ಶಾಂತಿಯನ್ನು ಸೃಜಿಸಲು – ಮಾರ್ಗದರ್ಶಿತ ಮತ್ತು ಸಮೂಹ ಧ್ಯಾನವೆರಡರ ಅನುಭವವನ್ನು ಪಡೆಯಲು ದಯವಿಟ್ಟು ಕೆಳಗಿನ ಲಿಂಕ್‌ ಒತ್ತಿ.

ಇದನ್ನು ಹಂಚಿಕೊಳ್ಳಿ