ನಿಮ್ಮ ಅಚಲ ಬೆಂಬಲಕ್ಕೆ ಧನ್ಯವಾದಗಳು

25 ಮಾರ್ಚ್‌, 2025

ಹೆಸರಿಲ್ಲದ/ಅನಾಮಧೇಯ (9)

ಕಳೆದ ವರ್ಷ ನಾವು ಹಂಚಿಕೊಂಡ ಆಧ್ಯಾತ್ಮಿಕ ಸತ್ಸಂಗದ ಅಮೂಲ್ಯ ಕ್ಷಣಗಳನ್ನು ನಾವು ಅಪಾರ ಆನಂದ ಮತ್ತು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇವೆ. ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ನಿಮ್ಮ ಭಾಗವಹಿಸುವಿಕೆ, ಕಳಿಸಿದ ಹೃತ್ಪೂರ್ವಕ ಸಂದೇಶಗಳು, ಮಾಡಿದ ಸೇವೆ ಮತ್ತು ಆರ್ಥಿಕ ಬೆಂಬಲಗಳು ನಮ್ಮ ಪ್ರೀತಿಯ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರೆಡೆಗೆ ನಮ್ಮ ಹೃದಯಗಳು ಕೃತಜ್ಞತೆಯಿಂದ ತುಂಬುವಂತೆ ಮಾಡುತ್ತವೆ, ಅವರೇ ನಮ್ಮೆಲ್ಲರನ್ನು ತಮ್ಮ ದಿವ್ಯ ಆಲಿಂಗನದಲ್ಲಿ ಒಟ್ಟಿಗೆ ಹಿಡಿದಿದ್ದಾರೆ.

ವರ್ಷವಿಡೀ ಮುಂದುವರಿದ ನಿಮ್ಮ ಔದಾರ್ಯ ಮತ್ತು ಪ್ರೋತ್ಸಾಹಕ್ಕಾಗಿ ನಾವು ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇವೆ, ಅವು ನಮ್ಮ ಗುರುದೇವರ ಪವಿತ್ರ ಧ್ಯೇಯವನ್ನು ಈ ಕೆಳಗಿನ ಕ್ಷೇತ್ರಗಳಲ್ಲಿ ಮುನ್ನಡೆಸಲು ನಮಗೆ ಸಹಾಯ ಮಾಡಿವೆ:

ಗುರುದೇವರ ಬೋಧನೆಗಳ ವ್ಯಾಪ್ತಿಯನ್ನು ವಿಸ್ತರಿಸುವುದು

  • ಯೋಗದಾ ಸತ್ಸಂಗ ಪಾಠಗಳ ಹೊಸ ಆವೃತ್ತಿಯು ಈಗ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿದೆ, ಬಂಗಾಳಿ ಮತ್ತು ಕನ್ನಡ ಭಾಷೆಗಳಲ್ಲಿ ಅನುವಾದ ನಡೆಯುತ್ತಿದೆ.

  • ಯೋಗಿಯ ಆತ್ಮಕಥೆಯ ಆಡಿಯೋ ಪುಸ್ತಕ ಈಗ ಗುಜರಾತಿ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ ಮತ್ತು ಅದರ ಇ-ಪುಸ್ತಕ ಬಂಗಾಳಿ, ಒಡಿಯಾ ಮತ್ತು ನೇಪಾಳಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹಲವಾರು ವೈಎಸ್‌ಎಸ್ ಪುಸ್ತಕಗಳನ್ನು ವಿವಿಧ ಭಾರತೀಯ ಭಾಷೆಗಳಲ್ಲಿ ಪ್ರಕಟಿಸಲಾಗಿದ್ದು, ಅವು ಸತ್ಯಾನ್ವೇಷಕರಿಗೆ ಗುರುದೇವರ ಬೋಧನೆಗಳನ್ನು ತಮ್ಮ ಮಾತೃಭಾಷೆಯಲ್ಲಿ ಓದಲು ಅವಕಾಶ ಮಾಡಿಕೊಟ್ಟಿವೆ.

ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸ್ವಾಮಿ ಚಿದಾನಂದಜಿ ಹೊಸ ವೈಎಸ್ಎಸ್ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು

ಭಕ್ತರಿಗೆ ಹೆಚ್ಚಿನ ಆಧ್ಯಾತ್ಮಿಕ ಬೆಂಬಲ

ಕಳೆದ ವರ್ಷ, ವೈಎಸ್ಎಸ್ ಭಕ್ತರಿಗೆ ಅವರ ಸಾಧನೆಯಲ್ಲಿ ಅಗತ್ಯವಾದ ಬೆಂಬಲವನ್ನು ಒದಗಿಸುವ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ವೈಎಸ್ಎಸ್ ಪ್ರಾರಂಭಿಸಿತು, ಜೊತೆಗೆ, ಗುರುದೇವರ ಸಂದೇಶವನ್ನು ಸಾವಿರಾರು ಹೊಸ ಅನ್ವೇಷಕರಿಗೆ ಪರಿಚಯಿಸುವ ಕೆಲಸವನ್ನೂ ಮಾಡಿತು.

ವಿಶೇಷ ಕಾರ್ಯಕ್ರಮಗಳು:

  • ನಮ್ಮ ಗೌರವಾನ್ವಿತ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು ಬೆಂಗಳೂರು, ಚೆನ್ನೈ, ಅಹಮದಾಬಾದ್, ನೋಯ್ಡಾ ಮತ್ತು ಕಠ್ಮಂಡುಗಳಿಗೆ ಭೇಟಿ ನೀಡಿದ್ದು ಸಾವಿರಾರು ಭಕ್ತರಿಗೆ ಸ್ಫೂರ್ತಿ ಮತ್ತು ಉನ್ನತಿಯನ್ನುಂಟುಮಾಡಿತು.

    ಒಬ್ಬ ಭಕ್ತರು ಹೀಗೆ ಬರೆದಿದ್ದಾರೆ: “ಸ್ವಾಮಿ ಚಿದಾನಂದಜಿಯವರ ಸಾನ್ನಿಧ್ಯದಲ್ಲಿ ಇರುವುದು ಎಂದರೆ ಸೂರ್ಯನ ಸುಖೋಷ್ಣತೆಯಲ್ಲಿ ನಿಂತಂತೆನಿಸಿತು — ಸಾಂತ್ವನದಾಯಕ, ಉದ್ಧರಿಸುವಂತಹ ಮತ್ತು ಆಳವಾದ ಪರಿವರ್ತನೆ ತರುವ…. ಅವರ ಭೇಟಿಯು ನನ್ನೊಳಗೆ ಶಾಂತಿ ಮತ್ತು ಸ್ಪಷ್ಟತೆಯ ಭಾವವನ್ನು ಜಾಗೃತಗೊಳಿಸಿತು, ಅದು ನನಗೆ ಹೆಚ್ಚು ಕೇಂದ್ರೀಕೃತವಾಗಲು ಮತ್ತು ಶ್ರುತಿಗೂಡಲು ಸಹಾಯ ಮಾಡಿತು.”

  • ಅಂತೆಯೇ, 2025 ರ ಕುಂಭ ಮೇಳದಲ್ಲಿ ಸಾವಿರಾರು ಜನರು ವೈಎಸ್ಎಸ್ ಶಿಬಿರ ವಾಸದಿಂದ ಪ್ರಯೋಜನ ಪಡೆದರು. ಒಬ್ಬ ಭಕ್ತರು ಹೀಗೆ ಹೇಳಿದ್ದಾರೆ: “ನನ್ನ ಎಲ್ಲಾ ಆಂತರಿಕ ಹತಾಶೆಗಳು, ಕ್ಲೇಶಗಳು ಇತ್ಯಾದಿಗಳನ್ನು ನಿವಾರಿಸಿಕೊಳ್ಳಲು ನಾನು ಕುಂಭ ಮೇಳಕ್ಕೆ ಹೋಗಬಯಸಿದ್ದೆ. ಅದರಲ್ಲಿ ನಾನು ಯಶಸ್ವಿಯಾಗಿದ್ದಲ್ಲದೆ, ಗುರೂಜಿಯ ಕೃಪೆಯಿಂದ, ವೈಎಸ್ಎಸ್ ಶಿಬಿರದಲ್ಲಿ ಮೂರು ದಿನಗಳ ವಾಸ್ತವ್ಯದಿಂದ ಹಿಂತಿರುಗುವ ಹೊತ್ತಿಗೆ ನನ್ನ ಹೃದಯವು ದಿವ್ಯ ಪ್ರೀತಿ ಮತ್ತು ಅಪಾರ ಆನಂದದಿಂದ ತುಂಬಿತ್ತು. ಗುರುದೇವರ ಪ್ರೀತಿಯಿಂದ ಪ್ರಕಾಶಿಸುತ್ತ, ನಮ್ಮನ್ನು ಬಹಳ ಕಾಳಜಿಯಿಂದ ನೋಡಿಕೊಂಡು, ನಮ್ಮ ವಾಸ್ತವ್ಯವನ್ನು ತುಂಬಾ ಆರಾಮದಾಯಕವಾಗಿಸಿದ ಸನ್ಯಾಸಿಗಳು ಮತ್ತು ಸ್ವಯಂಸೇವಕರಿಗೆ ಧನ್ಯವಾದಗಳು.”

2025 ರ ಕುಂಭ ಮೇಳದಲ್ಲಿ ವೈಎಸ್ಎಸ್ ಶಿಬಿರ

ಆಶ್ರಮಗಳನ್ನು ಆಧ್ಯಾತ್ಮಿಕ ಧಾಮಗಳನ್ನಾಗಿ ಪೋಷಿಸುವುದು

ವೈಎಸ್‌ಎಸ್‌ ಚೆನ್ನೈ ಆಶ್ರಮದಲ್ಲಿ ಜನ್ಮೋತ್ಸವದ ಆಚರಣೆ

ನಿಮ್ಮ ಬೆಂಬಲದಿಂದಾಗಿ ವೈಎಸ್ಎಸ್ ಆಶ್ರಮಗಳು ಶಾಂತಿ ಮತ್ತು ದಿವ್ಯ ಪುನಶ್ಚೇತನದ ತಾಣಗಳಾಗಿ ಮುಂದುವರಿಯುತ್ತಿರುವುದರಿಂದ ನಿಮಗೆ ಧನ್ಯವಾದಗಳು:

  • ಚೆನ್ನೈ ಧ್ಯಾನ ಶಿಬಿರವನ್ನು ಅನ್ನು ವಿಧ್ಯುಕ್ತವಾಗಿ ಪೂರ್ಣ ಪ್ರಮಾಣದ ವೈಎಸ್ಎಸ್ ಆಶ್ರಮವೆಂದು ನಿಯೋಜಿಸಲಾಯಿತು, ಇದು ವರ್ಷವಿಡೀ ಸನ್ಯಾಸಿಗಳ ನೇತೃತ್ವದ ಧ್ಯಾನ ಶಿಬಿರಗಳು, ಸಂಗಮಗಳು ಮತ್ತು ಧ್ಯಾನ ಕಾರ್ಯಕ್ರಮಗಳನ್ನು ನೀಡುತ್ತದೆ.

  • ರಾಂಚಿ ಮತ್ತು ದಕ್ಷಿಣೇಶ್ವರ ಆಶ್ರಮದ ಅತಿಥಿ ಸೌಲಭ್ಯಗಳನ್ನು ನವೀಕರಿಸಲಾಗಿದ್ದು, ಭಕ್ತರಿಗೆ ಪ್ರಶಾಂತ ಮತ್ತು ಆರಾಮದಾಯಕ ವಾಸ್ತವ್ಯವನ್ನು ಖಚಿತಪಡಿಸುತ್ತವೆ.

  • ರಾಂಚಿ ಸಭಾಂಗಣವನ್ನು ನವೀಕರಿಸಲಾಗಿದ್ದು, ಅದು ಅತ್ಯಾಧುನಿಕ ಆಡಿಯೋ-ವಿಡಿಯೋ ವ್ಯವಸ್ಥೆಗಳು ಮತ್ತು ಆರಾಮದಾಯಕ ಆಸನ ಸೌಲಭ್ಯಗಳನ್ನು ಹೊಂದಿರುವ, ಎಲ್ಲಾ ಹವಾಮಾನಕ್ಕೂ ಸೂಕ್ತವಾದ ಹವಾನಿಯಂತ್ರಿತ ಸಭಾಂಗಣವಾಗಿದೆ.

  • 2024 ರಲ್ಲಿ ಉದ್ಘಾಟನೆಯಾದ ರಾಜಮಂಡ್ರಿ ಸಾಧನಾಲಯವು ಈಗ ಸಾಧನೆ ಮತ್ತು ಆಧ್ಯಾತ್ಮಿಕ ಚಿಂತನೆಗೆ ಒಂದು ಪ್ರಶಾಂತವಾದ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ.

ಲೋಕೋಪಕಾರಿ ಮತ್ತು ದತ್ತಿ ಚಟುವಟಿಕೆಗಳು

ನಿಮ್ಮ ಬೆಂಬಲಕ್ಕೆ ಧನ್ಯವಾದಗಳು, ಭಾರತದಾದ್ಯಂತ ನಮ್ಮ ವೈಎಸ್‌ಎಸ್‌ ಔಷಧಾಲಯಗಳು ಮತ್ತು ಚಿಕಿತ್ಸಾಲಯಗಳು ಸಾವಿರಾರು ಬಡವರಿಗೆ ಉಚಿತ ವೈದ್ಯಕೀಯ ಸಲಹೆ ಮತ್ತು ಔಷಧಿಗಳನ್ನು ಒದಗಿಸುತ್ತಿವೆ. ನಮ್ಮ ವೈಎಸ್‌ಎಸ್‌ ಶಿಕ್ಷಣ ಸಂಸ್ಥೆಗಳಲ್ಲಿ ಸೌಲಭ್ಯವಂಚಿತ ಕುಟುಂಬಗಳ ವಿದ್ಯಾರ್ಥಿಗಳಿಗೆ ನಾವು ಬೆಂಬಲ ನೀಡುವುದನ್ನು ಮುಂದುವರಿಸುತ್ತಿದ್ದೇವೆ ಮತ್ತು ಅಗತ್ಯವಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ನೆರವು ನೀಡುತ್ತೇವೆ.

ನಿಮ್ಮ ಬೆಂಬಲಕ್ಕೆ ಧನ್ಯವಾದಗಳು

ಗುರುದೇವರ ಧ್ಯೇಯವನ್ನು ಮುಂದುವರಿಸುವಲ್ಲಿ ನಿಮ್ಮ ಪ್ರಾರ್ಥನೆ, ಭಾಗವಹಿಸುವಿಕೆ ಮತ್ತು ಕೊಡುಗೆಗಳು ಅತ್ಯಗತ್ಯ. ನಿಮ್ಮ ನಿರಂತರ ಬೆಂಬಲವು ಕ್ರಿಯಾ ಯೋಗದ ಆತ್ಮ-ವಿಮೋಚಕ ಬೋಧನೆಗಳನ್ನು ಹೆಚ್ಚಿನ ಸತ್ಯಾನ್ವೇಷಕರೊಂದಿಗೆ ಹಂಚಿಕೊಳ್ಳುವಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆಯಲು ನಮಗೆ ಸಾಧ್ಯವಾಗಿಸುತ್ತದೆ.

ಪರಮಹಂಸ ಯೋಗಾನಂದಜಿ ಹೇಳಿದ್ದಾರೆ, “ಮಹಾನ್ ಸಂತರೂ ಕೂಡ ತಮ್ಮ ಉದ್ದೇಶ ಸಾಧನೆಯನ್ನು, ದೈವ ಸಾಕ್ಷಾತ್ಕಾರದ ಅತ್ಯುತ್ಕೃಷ್ಟ ಅನುಭವಗಳನ್ನು, ಇತರರಲ್ಲಿ ಹಂಚಿಕೊಳ್ಳುವ ಮೂಲಕ ಇತರರಿಗೆ ದೈವ ಸಾಕ್ಷಾತ್ಕಾರಕ್ಕೆ ನೆರವಾಗುವವರೆಗೆ ಅವರು ಸಂಪೂರ್ಣ ವಿಮೋಚನೆ ಹೊಂದುವುದಿಲ್ಲ.”

ನಾವು ಮುಂದೆ ಸಾಗುತ್ತಿರುವಂತೆ, ಭಗವಂತ ಹಾಗೂ ನಮ್ಮ ಪ್ರೀತಿಯ ಗುರುದೇವರ ಮಾರ್ಗದರ್ಶಕ ಬೆಳಕು ನಮ್ಮನ್ನು ಉದ್ಧರಿಸಿ ರಕ್ಷಿಸುವುದನ್ನು ಮುಂದುವರಿಸಲಿ. ಈ ದಿವ್ಯ ಕುಟುಂಬದಲ್ಲಿ ನಿಮ್ಮ ಉಪಸ್ಥಿತಿಗೆ ನಾವು ಮಾನ್ಯತೆ ಕೊಡುತ್ತೇವೆ ಮತ್ತು ಈ ಪವಿತ್ರ ಧ್ಯೇಯದ ಪ್ರಮುಖ ಭಾಗವಾಗಿರಲು ನಿಮ್ಮನ್ನು ಆಹ್ವಾನಿಸುತ್ತೇವೆ.

ದಿವ್ಯ ಸ್ನೇಹದಲ್ಲಿ,
ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ

ಇದನ್ನು ಹಂಚಿಕೊಳ್ಳಿ