ಶ್ರೀ ಮೃಣಾಲಿನಿ ಮಾತಾರವರಿಂದ 2013ರ ಕೃತಜ್ಞತಾ ಸಮರ್ಪಣೆ (ಥ್ಯಾಂಕ್ಸ್‌ ಗಿವಿಂಗ್‌) ಯ ಸಂದೇಶ

“ಎಲ್ಲದಕ್ಕೂ ಎಲ್ಲ ಸಮಯದಲ್ಲೂ ನೀವು ಕೃತಜ್ಞರಾಗಿರಬೇಕು. ಯೋಚಿಸುವ, ಮತ್ತು ಮಾತನಾಡುವ ಮತ್ತು ಕ್ರಿಯೆಯಲ್ಲಿ ತೊಡಗುವ ಎಲ್ಲ ಶಕ್ತಿಯೂ ಭಗವಂತನಿಂದ ಬರುತ್ತದೆ ಮತ್ತು ನಿಮ್ಮನ್ನು ಮಾರ್ಗದರ್ಶಿಸುತ್ತಾ ಮತ್ತು ಪ್ರಚೋದಿಸುತ್ತಾ ಅವನು ಈಗ ನಿಮ್ಮೊಡನಿದ್ದಾನೆ ಎಂಬುದನ್ನು ಅರಿಯಿರಿ.”

— ಪರಮಹಂಸ ಯೋಗಾನಂದ

ಕೃತಜ್ಞತಾ ಸಮರ್ಪಣೆಯ (ಥ್ಯಾಂಕ್ಸ್‌ ಗಿವಿಂಗ) ಈ ಪವಿತ್ರ ಸಂದರ್ಭದಲ್ಲಿ ಪರಮಹಂಸ ಯೋಗಾನಂದರ ಆಶ್ರಮಗಳಲ್ಲಿರುವ ನಮ್ಮೆಲ್ಲರಿಂದ ಶುಭಹಾರೈಕೆಗಳು. ನಮ್ಮ ಜೀವನದಲ್ಲಿಯ ಎಲ್ಲ ಒಳಿತು ಮತ್ತು ಸೊಗಸನ್ನು ಆನಂದಿಸಲು ನಮ್ಮ ಕಣ್ಣುಗಳನ್ನು ಮತ್ತು ಹೃದಯಗಳನ್ನು ತೆರೆಯಲು ಇದೊಂದು ನೆನಪಾಗಿರಲಿ — ನಮ್ಮೊಡನೆ ಮತ್ತು ದಿವ್ಯದೊಡನೆ ಒಂದು ನಿರಂತರ ಪವಿತ್ರ ವಿನಿಮಯವನ್ನು ಕಲ್ಪಿಸುವ ಮಹೋನ್ನತ ಆಧ್ಯಾತ್ಮಿಕ ಅಭ್ಯಾಸದ ನವೀಕರಣ: ಉಪಕಾರ ಸ್ಮರಣೆ. ಕೃತಜ್ಞತಾಭಾವದಿಂದ, ಯಾರು ನಮ್ಮನ್ನು ನಿತ್ಯ ಪ್ರೀತಿಸುತ್ತಿದ್ದಾನೋ ಮತ್ತು ಪ್ರತಿಕ್ಷಣವೂ ನಮ್ಮನ್ನು ಪೋಷಿಸುತ್ತಿದ್ದಾನೋ ಅವನು ಮಹಾನ್‌ ಆತ್ಮಗಳ ಪರಿಜ್ಞಾನದಲ್ಲಿ ಪ್ರಕೃತಿಯ ಅತ್ಯಂತ ಸಣ್ಣದಾದ ಮತ್ತು ಅತ್ಯಂತ ಭವ್ಯವಾದ ಅಭಿವ್ಯಕ್ತಿಗಳಲ್ಲಿ, ನಾವು ಪಡೆಯುವ ಪ್ರತಿಯೊಂದು ಕೃಪೆಯಲ್ಲಿ ಮತ್ತು ನಮ್ಮದೇ ಪ್ರಜ್ಞೆಯ ಆತ್ಮದ-ಪಿಸುಮಾತಿನಲ್ಲಿ ಕಾಣಿಸಿಕೊಳ್ಳುತ್ತಾನೆ.

ಉಪಕಾರ ಸ್ಮರಣೆಯ ಸಾಮಾನ್ಯ ಉದ್ದೇಶವೆಂದರೆ, ನಾವು ನಿರೀಕ್ಷಿಸದಂತಹ ಕೆಲವು ಮನಮೋಹಕ ಆಶ್ಚರ್ಯಕರ ಸಂಗತಿ ಅಥವಾ ಉಡುಗೊರೆಗೆ ನಾವು ನೀಡುವ ಪ್ರತಿಸ್ಪಂದನ. ಆದರೆ ಒಂದು ಆಧ್ಯಾತ್ಮಿಕ ಅಭ್ಯಾಸವಾಗಿ ಕೃತಜ್ಞತಾಭಾವ ಇನ್ನೂ ಆಳವಾದದ್ದು. ಇದು ಭಗವಂತನು ಸರ್ವಾಂತರ್ಯಾಮಿ ಮತ್ತು ಎಲ್ಲದರಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂಬ ಒಂದು ಕ್ರಿಯಾಶೀಲ ಜಾಗೃತಿಗೆ ನಮ್ಮ ಹೃದಯವನ್ನು ಮತ್ತೆ ಮತ್ತೆ ಶ್ರುತಿಗೂಡಿಸುವುದು. ಅಮುಖ್ಯವಲ್ಲದ್ದನ್ನೂ ಕೂಡ ಪ್ರಜ್ಞಾಪೂರ್ವಕ ಸೂಕ್ಷ್ಮ ಸಂವೇದನೆಯಿಂದ ಕಾಣುವುದರಿಂದ ನಾವು ಈ ಸಾಮರ್ಥ್ಯವನ್ನು ಹರಿತಗೊಳಿಸಬಹುದು — ಎಲ್ಲ ಒಳಿತು ಮತ್ತು ಸೊಗಸಾಗಿರುವುದನ್ನು “ನಮ್ಮ ಹಕ್ಕೆಂದು” ಭಾವಿಸುವುದು. ನಮ್ಮ ಜೀವನವು ನಿಜವಾಗಿಯೂ ಅನುಗ್ರಹಗಳಿಂದ ಎಷ್ಟು ಸಂಪದ್ಭರಿತವಾಗಿದೆ ಎಂಬ ಆಲೋಚನೆಯೇ ಭಗವತ್‌-ಸಾಕ್ಷಾತ್ಕಾರದ ಒಂದು ಸ್ವರೂಪ. ನಮ್ಮ ಸ್ನೇಹಿತರು ಮತ್ತು ಕುಟುಂಬದ ಮೂಲಕ ಮತ್ತು ನಮ್ಮ ದಾರಿಯನ್ನು ಸುಗಮಗೊಳಿಸುವ ಮತ್ತು ನಮ್ಮ ದೈನಂದಿನ ಅವಶ್ಯಕತೆಗಳ ಪೂರೈಕೆಗೆ ಸಹಾಯ ಮಾಡುವ ಎಲ್ಲ ಸಣ್ಣ ಪುಟ್ಟ ಸಂಗತಿಗಳ ಮೂಲಕ ನಮ್ಮನ್ನು ಪ್ರೀತಿಯಿಂದ ಪೋಷಿಸುತ್ತಿರುವವನು ಅವನೇ ಎನ್ನುವುದರ ಬಗ್ಗೆ ನಾವು ಅರಿವುಳ್ಳವರಾಗುತ್ತೇವೆ. ಆಧ್ಯಾತ್ಮಿಕ ವಿಸ್ಮೃತಿಯನ್ನು “ಪ್ರಭುವೇ, ನಿನಗೆ ಧನ್ಯವಾದಗಳು” ಎಂದು ಹೇಳುವ ಅಭ್ಯಾಸದಿಂದ ಬದಲಾಯಿಸುವ ಮೂಲಕ, ನಮ್ಮ ಜೀವನದಲ್ಲಿ ಅವನ ಸಂಪತ್ತು ಸಮೃದ್ಧವಾಗಿ, ನಿಲ್ಲದೇ ಹರಿಯಲು ಅನುವುಮಾಡಿಕೊಡುವಂತಹ ಆತ್ಮೀಯ ವೈಯಕ್ತಿಕ ಸಂಬಂಧವನ್ನು ನಾವು ಭಗವಂತನೊಡನೆ ಬೆಳೆಸಿಕೊಳ್ಳುತ್ತೇವೆ.

ಒಳಿತಿಗಾಗಿ ನೋಡುವುದನ್ನು ಮತ್ತು ದಯಪಾಲಿಸುವವನನ್ನು ಪರಿಗಣಿಸುವುದನ್ನು ನಾವು ಬಿಡದೇ ಮುಂದುವರೆಸಿದಲ್ಲಿ, ಅವನ ಬೆಂಬಲ ನೀಡುವ ಉಪಸ್ಥಿತಿಯ ಪುನರ್‌ ಆಶ್ವಾಸನೆ ನಮ್ಮನ್ನು ನಂಬಿಕೆ ಮತ್ತು ವಿಶ್ವಾಸದಿಂದ ಶಕ್ತಿಯುತಗೊಳಿಸುತ್ತದೆ ಮತ್ತು ಜೀವನವು ನಮ್ಮ ಹಾದಿಯಲ್ಲಿ ಕಷ್ಟಗಳ ಕಲ್ಲುಗಳನ್ನು ಎಸೆದಾಗ ನಮ್ಮನ್ನು ಸದೃಢಗೊಳಿಸುತ್ತದೆ. ಭಯದಿಂದ ಪ್ರತಿಕ್ರಿಯಿಸುವ ಅಥವಾ ಓಡಿ ಹೋಗುವುದರ ಬದಲು, ಆ ಅನುಭವಗಳಲ್ಲಿ ಅಂತರ್ಗತವಾಗಿರುವ ಪಾಠಗಳನ್ನು ಮತ್ತು ಅನುಗ್ರಹಗಳನ್ನು ನೋಡುತ್ತಾ ಮತ್ತು ಮಹತ್ವ ನೀಡುತ್ತಾ ಅವನ್ನು ಕೈಗೆತ್ತುಕೊಳ್ಳುವುದರಿಂದ, ಅವು ಅನುಗ್ರಹಗಳಾಗಿ ಪರಿವರ್ತನೆಗೊಂಡಿರುವುದನ್ನು ನಾವು ಮನಗಾಣುತ್ತೇವೆ. ಭಗವಂತನಲ್ಲಿರುವ ನಮ್ಮ ವಿಶ್ವಾಸವು ವೃದ್ಧಿಸುವುದರಿಂದ, ನಮ್ಮ ಕೃತಜ್ಞತಾಭಾವ ಒಂದು ಬಾಹ್ಯ ಉದ್ದೇಶವನ್ನು ಎಂದೂ ಬಯಸುವುದಿಲ್ಲ. ನಮ್ಮ ಬದುಕಿನ ಎಲ್ಲದರಲ್ಲೂ ಇರುವ ಅಂತರಾಳದ ಉಪಕಾರ ಸ್ಮರಣೆಯ ನಿರಂತರ ಒಳಹರಿವಿನಿಂದ ಅದು ಪುಟಿದೇಳುತ್ತದೆ, ಏಕೆಂದರೆ ನಮ್ಮ ಆತ್ಮಗಳನ್ನು ಅವುಗಳ ಸಹಜ ದಿವ್ಯತೆ, ಅಜೇಯತೆ ಮತ್ತು ಆನಂದವನ್ನು ಜಾಗೃತಗೊಳಿಸಲು ಅವನು ಎಲ್ಲ ಪರಿಸ್ಥಿತಿಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬುದು ನಮಗೆ ತಿಳಿದಿದೆ.

ದಿವ್ಯ ದಾತನಿಗೆ ನೀಡುವ ಕೃತಜ್ಞತೆಯು ಇತರರಿಗೆ ಸಹಾನುಭೂತಿಯನ್ನು ತೋರುವ ಮತ್ತು ಅವರೊಂದಿಗೆ ಅವನ ಔದಾರ್ಯ ಮತ್ತು ಪ್ರೀತಿಪೂರ್ವಕ ಕರುಣೆಯನ್ನು ಹಂಚಿಕೊಳ್ಳುವ ಆನಂದವಾಗಿ ಸಹಜವಾಗಿ ಉಕ್ಕಿಹರಿಯುತ್ತಿದೆ. ಆ ಗುಣಗಳನ್ನು ಕ್ರಿಯೆಯಲ್ಲಿ ತೋರಿಸುವುದರಿಂದ, ನೀವು ಇತರರು ನಿಮಗೆ ಕೃತಜ್ಞತೆಯನ್ನು ಅರ್ಪಿಸುವಂತಹ ವ್ಯಕ್ತಿಯಾಗುತ್ತೀರಿ — ಮತ್ತು ಇದರ ಪರಿಣಾಮವಾಗಿ ಅವರು ಕೊಡುವುದರಲ್ಲಿ, ಈ ಅನಿತ್ಯ ಜಗತ್ತಿನಲ್ಲಿ ಭಗವಂತನ ದಿಟವಾದ ಅನುಗ್ರಹವನ್ನು ನೀಡುವ ಕೊಡುಗೆಯ ಪವಿತ್ರ ವ್ಯೂಹವನ್ನು ಪ್ರವೇಶಿಸುತ್ತಾರೆ.

ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಕೃತಜ್ಞತಾ ಸಮರ್ಪಣೆಯ ನೈಜ ಆನಂದವನ್ನು ಹಾರೈಸುತ್ತಾ,

ಮೃಣಾಲಿನಿ ಮಾತಾ

ಕೃತಿಸ್ವಾಮ್ಯ © 2013 ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌. ಎಲ್ಲ ಹಕ್ಕುಗಳನ್ನೂ ಕಾದಿರಿಸಲಾಗಿದೆ.

ಇದನ್ನು ಹಂಚಿಕೊಳ್ಳಿ