“ನಿಮ್ಮೊಳಗೆ ಆ ಅನಂತ ಕ್ರಿಸ್ತನ ಸಾನ್ನಿಧ್ಯವನ್ನು ಹೊಂದಿರುವ ನಿಮ್ಮೆಲ್ಲರಿಗೂ ನಾನು ವಂದಿಸುತ್ತೇನೆ. ಓ ಕ್ರಿಸ್ತನೇ, ನಿನ್ನ ಆನಂದದ ಭಾವಪರವಶತೆಯನ್ನು ಪ್ರತೀ ದಿನದ ಪ್ರತೀ ಘಂಟೆ, ಪ್ರತೀ ನಿಮಿಷವೂ ನಮಗೆ ನೀಡು.”
— Sri Sri Paramahansa Yogananda
ಕ್ರಿಸ್ ಮಸ್ 2015
ಗುರುದೇವ ಪರಮಹಂಸ ಯೋಗಾನಂದರ ಆಶ್ರಮದಲ್ಲಿರುವ ನಮ್ಮೆಲ್ಲರಿಂದ ನಿಮಗೆ ಕ್ರಿಸ್ಮಸ್‌ನ ಆಶೀರ್ವಾದಗಳು. ಕ್ರಿಸ್ತನ ಪ್ರೀತಿ ಮತ್ತು ಸಂತೋಷದ ಕಂಪನಗಳಿಂದ ವ್ಯಾಪಿಸಿರುವ ಈ ಪವಿತ್ರ ಋತುವಿನಲ್ಲಿ, ಪ್ರೀತಿಯ ಕರ್ತನಾದ ಯೇಸುವಿನಲ್ಲಿ ಅವತರಿಸಿದ ಆ ಕ್ರಿಸ್ತ ಪ್ರಜ್ಞೆಯು ನಿಮ್ಮ ಹೃದಯಗಳಲ್ಲೂ ನೆಲೆಸಿ ಆತನ ಉಪಸ್ಥಿತಿಯನ್ನು ನಿಮ್ಮ ಹೃದಯದ ಭಕ್ತಿಯ ಗ್ರಹಿಕೆಯ ಮೂಲಕ ನೀವು ಅನುಭವಿಸಬೇಕೆಂದು ನಾವು ಪ್ರಾರ್ಥಿಸುತ್ತೇವೆ. ಈ ಮಾಯೆಯ ವಿಭಜಕ ಶಕ್ತಿಗಳಿಂದ ಪ್ರಭಾವಿತವಾದ ಜಗತ್ತಿನಲ್ಲಿ, ಭಗವಂತನ ಬೆಳಕನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವ ಎಲ್ಲಾ ಜನರ ಬದುಕಿನಿಂದ ಹೊರ ಹೊಮ್ಮುವ ನಮ್ರತೆ ಮತ್ತು ಪ್ರೀತಿಯ ಏಕೀಕರಣ ಶಕ್ತಿಯ ಶಾಂತಿಯ ಮುಲಾಮಿಗೆ ನಮ್ಮ ಆತ್ಮಗಳು ಎಷ್ಟು ಆಳವಾಗಿ ಪ್ರತಿಕ್ರಿಯಿಸುತ್ತವೆ. ಆ ಬ್ರಹ್ಮಾಂಡ ಪ್ರಜ್ಞೆಯ ವಾಸ್ತವತೆಯು ನಿಮ್ಮನ್ನು ಆವರಿಸಲಿ, ನಿಮ್ಮೊಳಗಿನ ದೈವಿಕ ಚಿತ್ರಣ ಆವಿರ್ಭವಿಸಲು ಸಾಧ್ಯ ಎಂಬ ನಂಬಿಕೆ ಮೂಡಿಸಲಿ.
ಯೇಸುವಿನ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಅವರ ದೈವಿಕ ಜೀವನದ ಗ್ರಂಥದಿಂದ ಅರಗಿಸಿಕೊಂಡ, ನಮ್ಮಲ್ಲಿ ದೇವರ ಉಪಸ್ಥಿತಿಯನ್ನು ಜಾಗೃತಗೊಳಿಸುವ ಹೊಸ ಸಂಕಲ್ಪದಿಂದ ಸದಾ ಜೀವಂತವಾಗಿರುವ ಆ ಕ್ರಿಸ್ತ ಪ್ರಜ್ಞೆಯನ್ನು ಗೌರವಿಸೋಣ. ಎಲ್ಲಾ ಮಾನವ ಮಿತಿಗಳ ಎಲ್ಲೆಗಳನ್ನೂ ಮೀರಿದ ಆತನ ವಿಜಯದಿಂದ ಧೈರ್ಯ ತಂದುಕೊಂಡು, ಅಹಂಕಾರ ಮತ್ತು ಬಾಹ್ಯ ಪರಿಸ್ಥಿತಿಗಳನ್ನು ಮೀರಲು ನೀವು ಮಾಡುವ ಪ್ರತಿ ಪ್ರಯತ್ನವೂ ಕ್ರಿಸ್ತ ಪ್ರಜ್ಞೆಯ ಹೊಸ ವಿಮೋಚನಾ ಶಕ್ತಿಯನ್ನು ನಿಮ್ಮೊಳಗೆ ಎಚ್ಚರಿಸುತ್ತದೆ, ಹಾಗೂ ಪ್ರೀತಿ ಮತ್ತು ಸತ್ಯದ ನಿಯಮಗಳ ಮೂಲಕ ನಿಮ್ಮ ಆತ್ಮವನ್ನು ಇಂದ್ರಿಯಗಳ ಆಜ್ಞೆಗಳಿಂದ ಮುಕ್ತಗೊಳಿಸುತ್ತದೆ. ಇದು ಮನಸ್ಸು ಮತ್ತು ಹೃದಯದ ಪರಿಧಿಯನ್ನು ವಿಸ್ತರಿಸಲು ನಿರಂತರವಾಗಿ ನಮ್ಮನ್ನು ಪ್ರೋತ್ಸಾಹಿಸುವ ಶಕ್ತಿಯಾಗಿದೆ. ನಮಗಿಂತ ಬಹಳ ಭಿನ್ನವಾಗಿರುವ ಜನರನ್ನು ನಾವು ಎದುರಿಸಿದಾಗ, ಮನುಷ್ಯನ ಸ್ವಭಾವವು ಭಿನ್ನತೆಗಳ ಮೇಲೆ ಕೇಂದ್ರಿಕರಿಸಲು ಆರಂಭಿಸುತ್ತದೆ, ಮತ್ತು ಬಹಳಷ್ಟು ಸಲ ವಿಮರ್ಶಿಸಲು. ಆದರೆ ಏಸು, ಕೃಷ್ಣ ಹಾಗೂ ಎಲ್ಲ ಮಹಾತ್ಮರು ಹೊರಸೂಸಿದ ಸರ್ವಾಂಗೀಣ ಪ್ರೀತಿಯು ಪ್ರತಿಯೊಬ್ಬರನ್ನೂ ಭಗವಂತನ ಮಗುವಂತೆ ನೋಡುವುದು ಎಷ್ಟು ಒಂದುಗೂಡಿಸುವಂತಹದ್ದು ಎಂಬುದನ್ನು ಪ್ರಕಟಿಸುತ್ತದೆ. ನಮ್ಮ ತಿಳಿವು ಮತ್ತು ತಾದಾತ್ಮ್ಯದ ವಿಸ್ತರಣೆಯೊಂದಿಗೆ, ಇತರರನ್ನು ನಾವು ನಮ್ಮ ಮಹಾನ್ ಆತ್ಮದ ಒಂದು ಭಾಗ ಎಂದು ಕಾಣಲಾರಂಭಿಸುತ್ತೇವೆ – ಏಸು ಮಾಡಿದ ಹಾಗೆ ನಮ್ಮ ಬದುಕಿನಲ್ಲಿ ಕ್ಷಮೆಯ ಉಪಶಮನಕಾರಿ ಶಕ್ತಿಗೆ ಸ್ಥಳಾವಕಾಶ ನೀಡಲು ಮತ್ತು ಸೇವೆ ಮಾಡುವ ನೈಜ ಆನಂದವನ್ನು ಅನುಭವಿಸಲು. ಅವನ ಜನನದ ಈ ಅವಧಿಯು, ನಮ್ಮೊಳಗೆ ಒಂದು ಮಹತ್ತರ ದಯೆ, ಔದಾರ್ಯಗಳನ್ನು ಉದ್ದೀಪನಗೊಳಿಸುತ್ತಾ ಮತ್ತು ಮನಮುಟ್ಟುವಂತೆ ಇತತರರನ್ನು ತಲುಪಲು ಒತ್ತಾಯಿಸುತ್ತಾ, ಅವನು ಯಥೋಚಿತವಾಗಿ ಅಭಿವ್ಯಕ್ತಿಸಿದ ಮಹೋನ್ನತ ಗುಣಗಳ ಪ್ರಬಲವಾದ ಜಾಗೃತಿಯನ್ನು ಮೂಡಿಸುತ್ತದೆ.
ಕ್ರಿಸ್ತನ ತರಹದ ಕ್ರಿಯೆಗಳು ನಮ್ಮ ಬದುಕನ್ನು ಉದ್ಧಾರಮಾಡಬಹುದು ಮತ್ತು ಬದಲಾಯಿಸಬಹುದು, ಆದರೆ ಆಂತರಿಕ ಮೌನದ ಪವಿತ್ರ ಮಂದಿರದಲ್ಲಿ ನಾವು ಅಧಿಕವಾಗಿ ನಿತ್ಯ ಕ್ರಿಸ್ತ ಪ್ರಜ್ಞೆಯ (ಭಾರತದ ಪವಿತ್ರ ಪರಂಪರೆಯಲ್ಲಿ ಪ್ರಸಿದ್ಧವಾಗಿರುವ ಕುಟಸ್ಥ ಚೈತನ್ಯ ಅಥವಾ ಕೃಷ್ಟ ಪ್ರಜ್ಞೆ) ಅದ್ಭುತವನ್ನು ನೇರವಾಗಿ ಮನಗಾಣಬಹುದು. ನಮ್ಮ ಜೀವನ ಮತ್ತು ಅಸ್ತಿತ್ವದ ಸಣ್ಣ ಅಲೆಯ ಹಿಂದಡಗಿರುವ ಭಗವಂತನ ಉಪಸ್ಥಿತಿಯ ಈ ವಿಶಾಲ ಸಾಗರದ ಒಂದು ಕ್ಷಣದ ಸಂಪರ್ಕವೂ ಕೂಡ ಪ್ರತಿಯೊಂದು ಆತ್ಮದಲ್ಲೂ ಅವನು ನೆಲೆಗೊಂಡಿರುವ ವರ್ಣಿಸಲಾಗದ ಗಾಢ ಪ್ರೀತಿಯ ಪರಿವರ್ತಿಸಬಲ್ಲ ಪರಿಜ್ಞಾನವನ್ನು ತರುತ್ತದೆ. “ಭಗವಂತನು ತನ್ನ ಭಕ್ತನಿಗೆ ಕೊಡಬೇಕಾದ ಪ್ರೀತಿ ಎಷ್ಟಿದೆಯೆಂದರೆ, ಅದು ಹೃದಯದ ಎಲ್ಲ ಎಲ್ಲೆಗಳನ್ನು ಒಡೆದುಹಾಕುತ್ತದೆ. ಭಗವಂತನ ಆ ಪ್ರೀತಿಯು ಒಬ್ಬರ ಬದುಕನ್ನು ತುಂಬಿದಾಗ, ಅದು ಪ್ರೇಮ, ಸೇವೆ ಮತ್ತು ದಯೆಯ ಸಾರ್ವತ್ರಿಕ ಪ್ರಜ್ಞೆಯಿಂದ ಪ್ರತಿಯೊಬ್ಬರನ್ನೂ ಆಲಿಂಗಿಸುತ್ತದೆ.” ಎಂದು ನಮ್ಮ ಗುರುಗಳು ಹೇಳಿದ್ದಾರೆ. ಏಸುವಿನಲ್ಲಿದ್ದ ಹಾಗೆಯೇ ಆ ದಿವ್ಯ ಪ್ರೇಮವು ನಿಮ್ಮಲ್ಲಿ ಉದಿಸಲಿ ಮತ್ತು ನಿಮ್ಮ ಧ್ಯಾನದಿಂದ ಶ್ರುತಿಗೂಡಿದ ಪ್ರಜ್ಞೆಯಲ್ಲಿ ಸದಾ ಬಾಳಲಿ.
ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಬೆಳಕು ಮತ್ತು ಆನಂದದಿಂದ ತುಂಬಿದ ಕ್ರಿಸ್ಮಸ್ ಅನ್ನು ಹಾರೈಸುತ್ತಾ,
![]()
ಶ್ರೀ ಶ್ರೀ ಮೃಣಾಲಿನಿ ಮಾತಾ

















