ಸ್ವಾಮಿ ಚಿದಾನಂದರಿಂದ 2017 ರ ಕೃತಜ್ಞತಾ ನಿವೇದನೆಯ (ಥ್ಯಾಂಕ್ಸ್‌ಗಿವಿಂಗ್‌) ಸಂದೇಶ

ಈ ವರ್ಷದ ಕೃತಜ್ಞತಾ ನಿವೇದನೆಯ (Thanksgiving) ಮುಂಚಿನ ವಾರಗಳಲ್ಲಿ ಭಾರತಕ್ಕೆ ಬಹಳ ಪವಿತ್ರವಾದ ಪ್ರಯಾಣ ಮಾಡಿದೆ, ಗುರುದೇವ ಪರಮಹಂಸ ಯೋಗಾನಂದರು ನಮ್ಮ ಆಧ್ಯಾತ್ಮಿಕ ತಾಯ್ನಾಡಿನಿಂದ ತಂದ ಜೀವನ-ಪರಿವರ್ತಕ ಬೋಧನೆಗಳಿಗಾಗಿ; ಹಾಗೂ ದೈನಂದಿನ ಜೀವನದಲ್ಲಿ ಆ ಆದರ್ಶಗಳನ್ನು ಬಹಳ ಸುಂದರವಾಗಿ ವ್ಯಕ್ತಪಡಿಸುವ — ಪ್ರಪಂಚದಾದ್ಯಂತದ ಅವರ ಪ್ರೀತಿಯ ಭಕ್ತರ ದಿವ್ಯ ಕುಟುಂಬವಾದ ನಿಮ್ಮೆಲ್ಲರಿಗಾಗಿ ನನ್ನ ಹೃದಯವು ವಿಶೇಷ ಕೃತಜ್ಞತೆಯಿಂದ ತುಂಬಿದೆ.

ಗುರೂಜಿ ಹಲವು ವರ್ಷಗಳ ಹಿಂದೆ ಅಮೆರಿಕಕ್ಕೆ ಮೊದಲ ಬಾರಿಗೆ ಆಗಮಿಸಿದಾಗ, ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಜೀವನದಲ್ಲಿನ ಎಲ್ಲ ಒಳ್ಳೆಯ ವಿಷಯಗಳ ಅತ್ಯುತ್ಕೃಷ್ಟ ಮೂಲವಾಗಿರುವ ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸಲು ಈ ದಿನವನ್ನು ರಾಷ್ಟ್ರೀಯ ರಜಾದಿನವನ್ನು ನಿಗದಿಪಡಿಸಿರುವುದನ್ನು ಕಂಡು ಅವರು ಸಂತೋಷಪಟ್ಟರು. ನಮ್ಮ ಗುರುಗಳು ಕೃತಜ್ಞತಾ ನಿವೇದನೆಯ ರಜಾದಿನವನ್ನು ಆಧ್ಯಾತ್ಮಿಕ ಆಚರಣೆಯಾಗಿ ಅಳವಡಿಸಿಕೊಂಡುದು, ಶೀಘ್ರದಲ್ಲೇ ಅವರ ಆಶ್ರಮಗಳಲ್ಲಿ ಸಂತೋಷದಾಯಕ ಸಂಪ್ರದಾಯವಾಯಿತು. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಿಂದ, ಕೃತಜ್ಞತೆಯನ್ನು ಸಲ್ಲಿಸುವ ಆಂತರಿಕ ಅಭ್ಯಾಸವು ನಮ್ಮ ಪ್ರಜ್ಞೆಯನ್ನು ಉನ್ನತೀಕರಿಸಲು ಮತ್ತು ಶಾಶ್ವತವಾಗಿ ಪರಿವರ್ತಿಸಲು ಹೇಗೆ ಪ್ರಬಲ ತಂತ್ರವಾಗಬಲ್ಲುದು ಎಂಬುದನ್ನು ನಾವು ಕಲಿಯುತ್ತೇವೆ.

ಕೃತಜ್ಞತಾ ನಿವೇದನೆಯು ನಮ್ಮ ಹೃದಯ ಮತ್ತು ಮನಸ್ಸನ್ನು ಭಗವಂತನ ಸರ್ವವ್ಯಾಪಿತ್ವಕ್ಕೆ ಹೊಸದಾಗಿ ತೆರೆಯಲು ಒಂದು ದಿವ್ಯ ಅವಕಾಶವನ್ನು ತರುತ್ತದೆ — ಪ್ರಕೃತಿಯಲ್ಲಿ, ತನ್ನ ಅನನ್ಯ ಪ್ರತಿಬಿಂಬವಾಗಿ ಅವನು ಸೃಷ್ಟಿಸಿದ ಪ್ರತಿ ಆತ್ಮದಲ್ಲಿ ಹಾಗೂ ಒಳ್ಳೆಯ ಮತ್ತು ಸುಂದರವಾದ ಎಲ್ಲದರಲ್ಲಿ ಅವನ ಸಂಕೀರ್ಣವಾದ ಕರಕುಶಲತೆಯ ಹಿಂದೆ ಅವನನ್ನು ನೋಡಲು ಒಂದು ದಿವ್ಯ ಅವಕಾಶವನ್ನು ತೆರೆದಿಡುತ್ತದೆ. ಗುರುದೇವರು ನಮಗೆ ಹೇಳಿದಂತೆ, “ಭಗವಂತನು ತನ್ನ ಸೃಷ್ಟಿಯಿಂದ ದೂರವಿಲ್ಲ; ಅವನು ಸದಾ ನಮ್ಮೊಂದಿಗಿದ್ದಾನೆ….ಅವನ ಉಪಸ್ಥಿತಿಯಿಂದ ಇಡೀ ವಿಶ್ವವೇ ಕಂಪಿಸುತ್ತದೆ.” ಪರಮಾತ್ಮನು ನಮ್ಮೆಲ್ಲರೊಳಗೂ ಇದ್ದಾನೆ ಎಂಬುದನ್ನು ಅವನು ನಮಗೆ ನೆನಪಿಸುತ್ತಾನೆ. ಅವನಿಲ್ಲದೆ ನಾವು ಯೋಚಿಸಲು ಅಥವಾ ಪರಿಭಾವಿಸಲು ಅಥವಾ ಒಂದೇ ಒಂದು ಉಸಿರನ್ನು ತೆಗೆದುಕೊಳ್ಳಲೂ ಸಾಧ್ಯವಿಲ್ಲ. ಆದರೂ ದೈನಂದಿನ ಜೀವನದ ಒತ್ತಡಗಳ ನಡುವೆ, ನಾವು ಎಷ್ಟು ಸುಲಭವಾಗಿ ನಮ್ಮ ಪರಮೋಚ್ಚ ಪೋಷಕನನ್ನು (ಭಗವಂತನನ್ನು) ಮರೆತೇ ಬಿಡುತ್ತೇವೆ ಮತ್ತು ಅವನ ಉಡುಗೊರೆಗಳನ್ನು ಲಘುವಾಗಿ ತೆಗೆದುಕೊಳ್ಳುತ್ತೇವೆ. ಉಪಕಾರ ಸ್ಮರಣೆಯ ಹೃದಯವನ್ನು ಬೆಳೆಸಿಕೊಳ್ಳುವ ಮೂಲಕ ಮಾತ್ರ ನಾವು ಮಾಯೆಯ ಮುಸುಕಿನಿಂದಾಚೆಗೆ ನೋಡಲು ಮತ್ತು ಅವನ ಅನೇಕ ಬಾಹ್ಯರೂಪಗಳ ಹಿಂದಿರುವ ಅವನನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಕೃತಜ್ಞತೆ ಮತ್ತು ಮೆಚ್ಚುಗೆಯ ಆಲೋಚನೆಗಳು — ಸಣ್ಣ ವಿಷಯಗಳಿಗೂ ಸಹ — ನಮ್ಮ ಹೃದಯವನ್ನು ಹಗುರಗೊಳಿಸುತ್ತವೆ ಮತ್ತು ನಮ್ಮ ಪ್ರಜ್ಞೆಯನ್ನು ಮೇಲಕ್ಕೆತ್ತುತ್ತವೆ, ನಮ್ಮನ್ನು ಅವನ ಹತ್ತಿರಕ್ಕೆ ಸೆಳೆಯುತ್ತವೆ, ನಮ್ಮ ಜೀವನದಲ್ಲಿ ಅವನ ಆಶೀರ್ವಾದಗಳು ಅಡೆತಡೆಯಿಲ್ಲದೆ ಹರಿಯುವಂತೆ ವಿಶಾಲವಾದ ಚಾನಲ್ ಅನ್ನು ತೆರೆಯುತ್ತವೆ.

ನಮ್ಮ ಧನ್ಯವಾದಗಳನ್ನು ನಿರೀಕ್ಷಿಸದೆ ಭಗವಂತನು ನಮಗೆ ನೀಡುತ್ತಿರುವಾಗ, ಸ್ವ-ಇಚ್ಛೆಯಿಂದ ನಾವು ನಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದಾಗ, ಅವನೊಂದಿಗಿನ ನಮ್ಮ ಸಂಬಂಧವು ಬಹಳ ಮಧುರವೂ ಮತ್ತು ಹೆಚ್ಚು ವೈಯಕ್ತಿಕವೂ ಆಗುತ್ತದೆ. ಅವನಲ್ಲಿ ನಮ್ಮ ವಿಶ್ವಾಸವು ಬೆಳೆಯುತ್ತದೆ ಮತ್ತು ನಾವು ಒಂದು ವಿಭಿನ್ನ ಜಗತ್ತನ್ನು, ಅವನ ಎಣೆಯಿಲ್ಲದ ಒಲವಿನ ಉಪಸ್ಥಿತಿಯ ವಾಸ್ತವತೆಯ ಉತ್ಸಾಹದಿಂದ ತುಡಿಯುತ್ತಿರುವ ಜಗತ್ತನ್ನು ನೋಡಲಾರಂಭಿಸುತ್ತೇವೆ. ನಾವು ಆನಂದ ಮತ್ತು ಭದ್ರತೆಯನ್ನು ಅವನ ಕೊಡುಗೆಗಳಲ್ಲಿ ಮಾತ್ರವಲ್ಲ, ದಾತನ (ಭಗವಂತನ) ಪ್ರೀತಿಯಲ್ಲಿಯೂ ಕಾಣುತ್ತೇವೆ. ಅವನ ಪ್ರಜ್ಞಾನದಲ್ಲಿ ಮತ್ತು ನಿತ್ಯ-ಪ್ರಸ್ತುತ ಆಸರೆಯಲ್ಲಿ, ವಿಶ್ವಾಸವಿಟ್ಟಾಗ, ಸವಾಲಿನಂತಹ ಪರಿಸ್ಥಿತಿಗಳಲ್ಲಿಯೂ ಆಳವಾದ ತಿಳುವಳಿಕೆ ಮತ್ತು ಆಧ್ಯಾತ್ಮಿಕ ಶಕ್ತಿಯ ಗುಪ್ತ ರತ್ನಗಳನ್ನು ಕಂಡುಹಿಡಿಯಲು ನಮಗೆ ಸಾಧ್ಯವಾಗುತ್ತದೆ.

ಕೃತಜ್ಞತೆಯ ಮನೋಭಾವದಲ್ಲಿ ಬದುಕುವ ಸಾಮರ್ಥ್ಯವು ಆಸೆಗಳ ಈಡೇರಿಕೆಯ ಮೇಲೆ ನಿರ್ಭರವಾಗಿರಬೇಕಾಗಿಲ್ಲ. ಅದು, ಬಾಹ್ಯ ಪರಿಸ್ಥಿತಿಗಳು ಏನೇ ಇದ್ದರೂ, ನಮಗೆ ಸದಾ ಒಂದು ಅಪ್ರತಿಮ ಅನುಗ್ರಹ, ಅಂದರೆ ಭಗವಂತನ ಚಿರಂತನ ಪ್ರೇಮವು ಇದ್ದೇ ಇರುತ್ತದೆ ಎಂಬ ಜ್ಞಾನದಿಂದ ನಾವು ಪ್ರತಿದಿನ ಮಾಡಬಹುದಾದ ಆಯ್ಕೆಯಾಗಿದೆ. ಧ್ಯಾನ ಮಂದಿರದಲ್ಲಿ ಅವನ ಹಿತಕರ ಶಾಂತಿಯು ನಿಮ್ಮ ಅಸ್ತಿತ್ವವನ್ನು ಆವರಿಸಿದಾಗ ಮತ್ತು ಅವನ ದಿವ್ಯ ಪ್ರೇಮವು ನಿಮ್ಮ ವಿಸ್ತರಿಸುತ್ತಿರುವ ಹೃದಯವನ್ನು ತುಂಬಿದಾಗ, ಆ ಸತ್ಯವನ್ನು ಅತ್ಯಂತ ಆಳವಾಗಿ ಅನುಭವಿಸಬಹುದು. ಆ ಕೊಡುಗೆಯ ಪರಿವರ್ತನಕಾರಿ ಶಕ್ತಿಗಾಗಿ ಭಗವಂತನೆಡೆಗಿನ ನಿಮ್ಮ ಕೃತಜ್ಞತೆಯು ಇತರರಿಗೆ ದಯೆಯಾಗಿ ಮತ್ತು ಸೇವೆಯಾಗಿ ತುಂಬಿ ತುಳುಕಲಿ, ಹಾಗೂ ನಿಮ್ಮ ಮೂಲಕ ಅವರೂ ಅವನ ಪ್ರೀತಿಪೂರ್ವಕ ಕಾಳಜಿಯನ್ನು ಅನುಭವಿಸುವಂತಾಗಲಿ.

ನಿಮಗೆ ಮತ್ತು ನಿಮ್ಮ ಆತ್ಮೀಯರಿಗೆ ಆನಂದಕರ ಕೃತಜ್ಞತಾ ನಿವೇದನೆ,
ಸ್ವಾಮಿ ಚಿದಾನಂದ, ಅಧ್ಯಕ್ಷರು

ಇದನ್ನು ಹಂಚಿಕೊಳ್ಳಿ