“ನಮ್ಮ ಪ್ರತಿಯೊಂದು ಆಲೋಚನೆ ಮತ್ತು ಇಚ್ಛೆಯ ಹಿಂದೆ ಭಗವಂತನ ಅನಂತ ಚೈತನ್ಯವಿದೆ. ಅವನನ್ನು ಅರಸಿ, ಆಗ ನೀವು ಸಂಪೂರ್ಣ ವಿಜಯವನ್ನು ಹೊಂದುವಿರಿ.”
— ಶ್ರೀ ಶ್ರೀ ಪರಮಹಂಸ ಯೋಗಾನಂದ
ರಜಾದಿನದ ಉತ್ಸಾಹ ಮತ್ತು ಆನಂದಗಳು ಹೊಸ ವರ್ಷದ ಹಾದಿಗೆ ಬೆಳಕು ತೋರುತ್ತಿದ್ದಂತೆ, ಗುರುದೇವ ಪರಮಹಂಸ ಯೋಗಾನಂದರ ಆಶ್ರಮಗಳಲ್ಲಿರುವ ನಾವೆಲ್ಲರೂ ಪ್ರಪಂಚದಾದ್ಯಂತದ ನಮ್ಮ ಆತ್ಮೀಯ ಆಧ್ಯಾತ್ಮಿಕ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ಆ ಬೆಳಕು ಆವರಿಸಿರುವುದನ್ನು ದೃಶ್ಯೀಕರಿಸಿಕೊಳ್ಳುತ್ತೇವೆ. ಕ್ರಿಸ್‌ಮಸ್ ಸಮಯದಲ್ಲಿ ನಿಮ್ಮ ಅನೇಕ ವಿಚಾರಪೂರ್ಣ ಅಭಿವ್ಯಕ್ತಿಗಳಿಗಾಗಿ ಮತ್ತು ಇಡೀ ವರ್ಷದ ನಿಮ್ಮ ದಿವ್ಯ ಸ್ನೇಹ ಮತ್ತು ಬೆಂಬಲಕ್ಕಾಗಿ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಈ ಹೊಸ ಆರಂಭಗಳ ಸಮಯದಲ್ಲಿ, ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ಸಾಧಿಸುವಂತಾಗಲು ಮತ್ತು ಪ್ರತಿ ಉದಾತ್ತ ಆಕಾಂಕ್ಷೆ ಮತ್ತು ಪ್ರಯತ್ನದ ಹಿಂದಿನ ಈಡೇರಿಸುವ ಶಕ್ತಿಯಾದ ಭಗವಂತನೊಂದಿಗೆ ಪ್ರಜ್ಞಾಪೂರ್ವಕ ಶ್ರುತಿಯಲ್ಲಿ ಬದುಕುವಂತಾಗಲು, ಅವನು ನಿಮ್ಮ ಹೃದಯ ಮತ್ತು ಮನಸ್ಸನ್ನು, ಪುನರುಜ್ಜೀವನಗೊಂಡ ಸಂಕಲ್ಪದಿಂದ ತುಂಬಿಸಲಿ ಎಂಬುದೇ ನಮ್ಮ ವಿಶೇಷ ಪ್ರಾರ್ಥನೆ.
ಮುಂದಿರುವ ವರ್ಷವು ನಮ್ಮ ಆತ್ಮಗಳ ದಿವ್ಯ ಸಾಮರ್ಥ್ಯವನ್ನು ಅರಳಿಸಲೆಂದು ಹೊಸ ಅವಕಾಶಗಳೊಂದಿಗೆ ನಮ್ಮನ್ನು ಕರೆಯುತ್ತದೆ ಮತ್ತು ನಮಗೆ ಸಹಾಯ ಮಾಡಲು ಭಗವಂತನಿಗಿಂತ ಹೆಚ್ಚು ಸಂತೋಷದಿಂದ ಯಾರೂ ಉತ್ಸುಕರಾಗಿಲ್ಲ. ಪಶ್ಚಾತ್ತಾಪ ಮತ್ತು ಚಿಂತೆಗಳು, ಹಿಂದೆ ಮಾಡಿದ ತಪ್ಪುಗಳು ಮತ್ತು ಸ್ವವೈಫಲ್ಯಕಾರಿಯಾದ ರೂಢಿಗತ ಅಭ್ಯಾಸಗಳೆಂಬ ಗಂಟುಮೂಟೆಯನ್ನು ಹಿಂದಕ್ಕೆ ಬಿಟ್ಟು, ನೀವು ಹೊಸ ವರ್ಷದಲ್ಲಿ ಹಗುರವಾಗಿ ಪಯಣಿಸಿದರೆ ಉನ್ನತ ಸಾಧ್ಯತೆಗಳ ಅವನ ಕೊಡುಗೆಗಳೆಡೆಗೆ ನಿಮ್ಮ ಗ್ರಹಣಶೀಲತೆ ಹೆಚ್ಚಾಗುತ್ತದೆ. ಆ ಗಂಟುಮೂಟೆಯ ಬದಲು, ನಿಮ್ಮ ಸಹಜ ಅಜೇಯ ಸ್ವಭಾವವನ್ನು ಹೊರತರಲು ನಿಮ್ಮನ್ನು ಪ್ರೇರೇಪಿಸುವ ಶಕ್ತಿದಾಯಕ ಮತ್ತು ಉನ್ನತೀಕರಿಸುವ ಆಲೋಚನೆಗಳನ್ನು ಮಾತ್ರ ಹೊತ್ತಿರಲು ನೀವು ನಿರ್ಧರಿಸಿದಾಗ ಹೆಚ್ಚಿನ ಸ್ವಾತಂತ್ರ್ಯವನ್ನು ಅನುಭವಿಸುವಿರಿ. ಗುರುದೇವ ನಮ್ಮನ್ನು ಒತ್ತಾಯಿಸಿದರು: “ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪ್ರಗತಿಶೀಲವಾಗಿರುವ ಮನಸ್ಸುಗಳಿಂದ ಚೈತನ್ಯವನ್ನು ಸೇವಿಸಿರಿ ಮತ್ತು ಮಾನಸಿಕ ಪೋಷಣೆಯನ್ನು ಪಡೆಯಿರಿ. ನಿಮ್ಮ ಮತ್ತು ಇತರರೊಳಗಿನ ಸೃಜನಾತ್ಮಕ ಚಿಂತನೆಯನ್ನು ಧಾರಾಳವಾಗಿ ಸವಿಯಿರಿ. ಆತ್ಮವಿಶ್ವಾಸದ ಹಾದಿಯಲ್ಲಿ ದೀರ್ಘ ಮಾನಸಿಕ ನಡಿಗೆಯನ್ನು ಕೈಗೊಳ್ಳಿ. ತೀರ್ಪು, ಆತ್ಮಾವಲೋಕನ ಮತ್ತು ಉಪಕ್ರಮದ ಸಾಧನಗಳೊಂದಿಗೆ ಪ್ರಯೋಗ ಮಾಡಿ.” ಆ ಸಲಹೆಯನ್ನು ಅನುಸರಿಸುವುದರಿಂದ ನಿಮ್ಮ ಮಾನಸಿಕ ಮತ್ತು ಆಧ್ಯಾತ್ಮಿಕ ಚೈತನ್ಯಗಳು ಸಂಪೂರ್ಣವಾಗಿ ರೀಚಾರ್ಜ್ ಆಗುತ್ತವೆ, ಅದು ನಿಮಗೆ ನಿಮ್ಮ ನಿತ್ಯ-ತಾರುಣ್ಯ ಆತ್ಮದ ಸಹಜವಾದ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಭವಿಷ್ಯವನ್ನು ಎದುರಿಸಲು ಸಾಧ್ಯವಾಗಿಸುತ್ತದೆ. ಬಯಸಿದ ಸುಧಾರಣೆಗಳನ್ನು ಕಾರ್ಯಗತಗೊಳಿಸಲು ಇಚ್ಛೆಯ ಸ್ನಾಯುವನ್ನು ಬೆಳೆಸುವುದು ಕೂಡ ಮುಖ್ಯವೇ, ಏಕೆಂದರೆ ಬಲವಾದ ಇಚ್ಛೆಯು ದೇಹ ಮತ್ತು ಮನಸ್ಸನ್ನು ನಿಯಂತ್ರಿಸಲು, ಅನುಕೂಲಕರವಾದದ್ದಕ್ಕಿಂತ ಸೂಕ್ತವಾದದ್ದನ್ನು ಮಾಡಲು ಮತ್ತು ಎದೆಗುಂದಿಸಲಾಗದ ತಾಳ್ಮೆಯಿಂದ ಭಗವಂತನನ್ನು ಅರಸಲು ನಿಮಗೆ ಸಾಧ್ಯವಾಗಿಸುತ್ತದೆ. ಜಯಶಾಲಿಯಾಗಲು ಭಗವಂತ-ಅನುಗ್ರಹಿಸಿದ ನಿಮ್ಮ ಸಾಮರ್ಥ್ಯವನ್ನು ಮತ್ತೆ ಮತ್ತೆ ದೃಢೀಕರಿಸಿ, ವಿಶೇಷವಾಗಿ ಆತ್ಮ-ಸಂಶಯ ಅಥವಾ ತಾತ್ಕಾಲಿಕ ವೈಫಲ್ಯದ ಆಕ್ರಮಣಕ್ಕೊಳಗಾದಾಗ; ಏಕೆಂದರೆ ಅವನ ಮೇಲಿನ ಪ್ರೀತಿ ಮತ್ತು ವಿಶ್ವಾಸದಿಂದ ಹುಟ್ಟಿದ ಏಕನಿಷ್ಠ ಸಾಧನೆಯು ಯಶಸ್ಸನ್ನು ಸೃಷ್ಟಿಸುವ ನಿಮ್ಮ ಇಚ್ಛೆಯನ್ನು, ವಿಶ್ವವನ್ನು ಸೃಷ್ಟಿಸುವ ಭಗವಂತನ ಇಚ್ಛೆಯೊಂದಿಗೆ ಸಂಪರ್ಕಿಸುತ್ತದೆ.
ಮನಸ್ಸಿನ ಸಕಾರಾತ್ಮಕ ಬಳಕೆಯು, ಸಾಧಿಸಲು ಬೇಕಾಗಿರುವ ಸಕಲ ಶಕ್ತಿಯ ಆಕರದೊಂದಿಗೆ ಶ್ರುತಿಗೂಡುವುದನ್ನು ಹೆಚ್ಚಿಸುತ್ತದೆ; ಆದರೆ ಧ್ಯಾನದಲ್ಲಿ ನಾವು ಅಶಾಂತತೆಯ ಅಸ್ಪಷ್ಟ ತೂಗಾಟಗಳನ್ನು ಸ್ತಬ್ಧಗೊಳಿಸಲಾರಂಭಿಸಿ, ಕಾಯುತ್ತಿರುವ ಭಗವಂತನ ಪ್ರೀತಿ ಮತ್ತು ಬೆಳಕಿನ ಅಪ್ಪುಗೆಗೆ ನಮ್ಮ ಪ್ರಜ್ಞೆಯನ್ನು ಒಪ್ಪಿಸಿದಾಗ, ಅತ್ಯಂತ ಆಳವಾದ ಬದಲಾವಣೆಗಳು ಉಂಟಾಗುತ್ತವೆ. ನಾವು ಅವನನ್ನು ಗಾಢವಾಗಿ ಪ್ರಾರ್ಥಿಸುತ್ತ, ನಮ್ಮ ಮಿದುಳಿನ ಜೀವಕೋಶಗಳಲ್ಲಿ ಸ್ವಾತಂತ್ರ್ಯ ಮತ್ತು ಸೃಜನಶೀಲ ಸಾಧ್ಯತೆಯ ಕಾರಣ (causal) ಸಂಬಂಧಿ ಬೆಳಕು ವ್ಯಾಪಿಸುತ್ತಿದೆ ಎಂದು ದೃಶ್ಯೀಕರಿಸಿಕೊಂಡರೆ, ಅದು ಅನಗತ್ಯ ರೂಢಿಗತ ಅಭ್ಯಾಸಗಳ ಬೇರೂರಿದ “ತೋಡುಗಳನ್ನು” ನಿರ್ಮೂಲನ ಮಾಡುತ್ತದೆ, ಇದು ನಮ್ಮ ಪ್ರಜ್ಞೆಯನ್ನು ಭಗವಂತನೊಂದಿಗೆ ಮತ್ತು ನಮ್ಮದೇ ಉನ್ನತ ಹಿತದೊಂದಿಗೆ, ಸಾಮರಸ್ಯದಿಂದಿರುವಂತಹ ಹೊಸದಾಗಿ ದೃಢೀಕರಿಸಿದ ಆಲೋಚನೆಗಳು ಮತ್ತು ನಡವಳಿಕೆಯ ಸಂಕಲ್ಪಗಳೊಂದಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ನಿಮ್ಮ ಭಕ್ತಿ ಮತ್ತು ಬದಲಾಗುವ ಪ್ರಾಮಾಣಿಕ ಇಚ್ಛೆಯಿಂದ ಸೆಳೆಯಲ್ಪಡುವ ಭಗವಂತನ ಆಶೀರ್ವಾದಗಳು ನಿಮ್ಮ ಜೀವನವನ್ನು ನಿಮಗೆ ಮತ್ತು ಇತರರಿಗೆ ಸಂತೋಷದ ಹೊಸ ಉದಯವನ್ನು ತರುವ ರೀತಿಯಲ್ಲಿ ಪರಿವರ್ತಿಸುತ್ತದೆ ಎಂಬ ಅದಮ್ಯ ವಿಶ್ವಾಸದೊಂದಿಗೆ ನೀವು ಮುಂದಿನ ವರ್ಷವನ್ನು ಪ್ರವೇಶಿಸುವಂತಾಗಲಿ.
ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಹೊಸ ವರ್ಷವು ಅತ್ಯಂತ ದಿವ್ಯವಾದುದೂ ಮತ್ತು ಸಾರ್ಥಕವಾದುದೂ ಆಗಿರಲಿ ಎಂಬ ಹಾರೈಕೆಯೊಂದಿಗೆ,
ಶ್ರೀ ಶ್ರೀ ಮೃಣಾಲಿನಿ ಮಾತಾ

















