ಶ್ರೀ ಶ್ರೀ ಮೃಣಾಲಿನಿ ಮಾತಾರವರಿಂದ ಹೊಸ ವರ್ಷದ ಸಂದೇಶ
ಹೊಸ ವರ್ಷ 2014
“ಆಂತರ್ಯದಲ್ಲಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಲು ನಿರ್ಧರಿಸಿ. ಆಗ ನಿಮ್ಮ ಇಚ್ಚಾನುಸಾರ ನಿಮ್ಮ ವಿಧಿಯನ್ನು ಬದಲಾಯಿಸಿಕೊಳ್ಳಬಲ್ಲಿರಿ.”
— ಪರಮಹಂಸ ಯೋಗಾನಂದ
ನಾವು ಹೊಸ ವರ್ಷವನ್ನು ಸ್ವಾಗತಿಸುತ್ತಿರುವಾಗ, ಗುರುದೇವ ಪರಮಹಂಸ ಯೋಗಾನಂದರ ಆಶ್ರಮಗಳಲ್ಲಿರುವ ನಾವೆಲ್ಲರೂ ವಿಶೇಷವಾಗಿ ನಮ್ಮ ಪ್ರಾರ್ಥನೆಗಳಲ್ಲಿ ನಮ್ಮ ಜಾಗತಿಕ ಅಧ್ಯಾತ್ಮಿಕ ಕುಟುಂಬದವರೆಲ್ಲರನ್ನೂ ಸ್ಮರಿಸಿಕೊಳ್ಳುತ್ತೇವೆ ಮತ್ತು ನಿಮ್ಮ ಅರ್ಹ ಉದ್ದೇಶಗಳು ಸಫಲಗೊಳ್ಳಲು ಭಗವಂತ ಆಂತರಿಕ ಶಾಂತಿ ಮತ್ತು ಆನಂದದಿಂದ ನಿಮ್ಮೆಲ್ಲರ ಜೀವನವನ್ನು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇವೆ. ನಿಮ್ಮ ಪ್ರೇಮಪೂರ್ಣ ಚಿಂತನೆಗಳು, ರಜಾದಿನದ ಶುಭಾಶಯಗಳು ಮತ್ತು ಕ್ರಿಸ್ಮಸ್ ಸಮಯದಲ್ಲಿನ ನೆನಪುಗಳಿಗೆ ಮತ್ತು ಹಿಂದಿನ ವರ್ಷ ನೀವು ಮಾಡಿದ ಹಲವಾರು ದಯಾಪರ ಕಾರ್ಯಗಳಿಗೆ ನಾವು ನಿಮಗೆ ಅಭಿನಂದನೆಯನ್ನು ಸಲ್ಲಿಸುತ್ತೇವೆ. ಭಗವಂತ ಹಾಗೂ ಗುರುಗಳ ಆದರ್ಶಗಳಿಗೆ ಮತ್ತು ಅವರ ನಿತ್ಯ ಪ್ರೇಮದಲ್ಲಿ ನಮ್ಮೆಲ್ಲರನ್ನೂ ಒಗ್ಗೂಡಿಸುವ ದಿವ್ಯ ಸ್ನೇಹವನ್ನು ನಮ್ಮ ಹೃದಯಗಳಲ್ಲಿ ಸದಾ ಹಿಡಿದಿಟ್ಟುಕೊಳ್ಳುತ್ತೇವೆ.
ಈ ವರ್ಷದ ಜನವರಿ 31, ನಮ್ಮ ಪ್ರೀತಿಯ ಶ್ರೀ ದಯಾ ಮಾತಾರವರ ನೂರನೇ ಜನ್ಮ ದಿನೋತ್ಸವವಾಗಿದೆ. ಆಕೆಯ ದಿವ್ಯ ಜೀವನ ನಮ್ಮೆಲ್ಲರನ್ನೂ ಸ್ಪರ್ಶಿಸಿದೆ. ಆಕೆಯ ಆತ್ಮ, ಈ ಜಗತ್ತಿನಾಚೆಗಿನ ಬೆಳಕು ಮತ್ತು ಆನಂದದ ಆನಂದಮಯ ಸಾಮ್ರಾಜ್ಯದಲ್ಲಿ ಮುಕ್ತವಾಗಿದ್ದರೂ, ಪೂರ್ವ ಮತ್ತು ಪಶ್ಚಿಮಗಳೆರಡರಲ್ಲೂ ಗುರೂಜಿಯವರ ಆಧ್ಯಾತ್ಮಿಕ ಪರಿವಾರಕ್ಕೆ ಆಕೆ ವರ್ಷಿಸಿದ ಪ್ರೇಮ, ಇಂದಿಗೂ ನಮ್ಮಲ್ಲಿದೆ. “ಕೇವಲ ಪ್ರೇಮ ಮಾತ್ರ ನನ್ನ ಜಾಗವನ್ನು ತೆಗೆದುಕೊಳ್ಳಬಲ್ಲದು,” ಎಂಬ ಗುರುಗಳ ನುಡಿಗಳು, ಆಕೆಯಲ್ಲಿ ಸಂಪೂರ್ಣವಾಗಿ ಅಭಿವ್ಯಕ್ತವಾಗಿತ್ತು ಮತ್ತು ಆಕೆಯ ಸುಂದರ ಉದಾಹರಣೆಯಿಂದ ಅದು ನಮ್ಮ ಪ್ರಜ್ಞೆಯಲ್ಲಿ ಸದಾ ಅನುರಣಿಸುತ್ತಿರುತ್ತದೆ. ಈ ಹೊಸ ವರ್ಷದಲ್ಲಿ ಮತ್ತು ಸದಾ ಆ ಪ್ರೇಮ ಮತ್ತು ಆಕೆಯ ಧನಾತ್ಮಕ ಚೈತನ್ಯ ಮತ್ತು ಭಗವಂತನಲ್ಲಿದ್ದ ನಂಬಿಕೆ ನಿಮ್ಮೆಲ್ಲರನ್ನೂ ಹುರಿದುಂಬಿಸಲಿ.
ಪ್ರತಿ ವರ್ಷದ ಆರಂಭ, ನಮ್ಮ ಜೀವನದೊಳಗೆ ನವೀನ ಆರಂಭದ ಆಶೀರ್ವಾದನ್ನು ನೀಡುತ್ತದೆ, ಅಂದರೆ ನಮ್ಮ ಉದಾತ್ತ ಆಕಾಂಕ್ಷೆಗಳನ್ನು ಪುನಶ್ಚೈತನ್ಯಗೊಳಿಸಲು ಮತ್ತು ಅವುಗಳನ್ನು ಸಿದ್ಧಿಸಿಕೊಳ್ಳಲು ನಮ್ಮ ಸಂಕಲ್ಪ ಶಕ್ತಿಯನ್ನು ಶಕ್ತಿಯುತಗೊಳಿಸಲು ಒಂದು ಅವಕಾಶ. ನವಚೈತನ್ಯದ ಹುರುಪಿನಿಂದ ಭವಿಷ್ಯದಲ್ಲಿರುವ ಸಂಭಾವ್ಯತೆಗಳನ್ನು ಅನ್ವೇಷಿಸುವ ಮತ್ತು ಹಿಂದಿನ ಅನುಭವಗಳು ಮತ್ತು ವಿನ್ಯಾಸಗಳಿಂದಾಚೆಗೆ ನೋಡುವ ನಮ್ಮ ದೃಷ್ಟಿಕೋನವನ್ನು ವಿಸ್ತರಿಸಲು ಅದು ನಮ್ಮನ್ನು ಉತ್ತೇಜಿಸುತ್ತದೆ. ಯಾರು ನಮ್ಮನ್ನು ಅವನ ಪ್ರತಿರೂಪದಲ್ಲಿ ಸೃಷ್ಟಿಸಿದ್ದಾನೆಯೋ ಆ ಭಗವಂತನಲ್ಲಿ ನಮ್ಮ ಬದುಕನ್ನು ನೆಲೆಗೊಳಿಸುವುದರಿಂದ, ಭವಿಷ್ಯವನ್ನು ಆನಂದಮಯವಾಗಿ, ಭಯರಹಿತವಾಗಿ ಮತ್ತು ಸಕಾರಾತ್ಮಕ ನಿರೀಕ್ಷೆಗಳಿಂದ ಎದುರಿಸುವ ಆಂತರಿಕ ರಕ್ಷಣೆ ದೊರಕುತ್ತದೆ. “ನಾವು ಪ್ರತಿಯೊಬ್ಬರೂ ಭಗವಂತನ ಕೂಸಾಗಿದ್ದೇವೆ. ನಾವು ಅವನ ಚೈತನ್ಯ, ಅದರ ಎಲ್ಲ ಶುದ್ಧತೆ ಮತ್ತು ಹಿರಿಮೆ ಮತ್ತು ಆನಂದದಿಂದ ಜನ್ಮವೆತ್ತಿದ್ದೇವೆ. ಆ ಪರಂಪರೆ ಅಭೇದ್ಯವಾಗಿದೆ” ಎಂದು ಗುರುದೇವರು ನಮಗೆ ಹೇಳಿದ್ದಾರೆ. ನಾವು ನಮ್ಮ ಮನಸ್ಸು ಮತ್ತು ಸಂಕಲ್ಪವನ್ನು ಆಳಲು ಮತ್ತು ಅದನ್ನು ಆಯ್ಕೆ ಮಾಡಲಿರುವ ವಿವೇಚನೆಯನ್ನು ಉಪಯೋಗಿಸುವ ಸಾಮರ್ಥ್ಯದ ಸ್ವಾತಂತ್ರ್ಯವನ್ನು ಹೊಂದಿರುವ ಅದಮ್ಯ ಆತ್ಮವಾಗಿದ್ದೇವೆಯೇ ಹೊರತು ದುರ್ಬಲ ಮಾನವ ಜೀವಿಯಲ್ಲ ಎಂಬ ಮನೋನಿರ್ಧಾರದೊಂದಿಗೆ ನಾವು ಹೊಸ ವರ್ಷವನ್ನು ಪ್ರವೇಶಿಸಿದರೆ, ಯಾವುದೇ ಅಭ್ಯಾಸ ಅಥವಾ ಪರಿಸ್ಥಿಯೂ ಕೂಡ ನಮ್ಮ ದಾರಿಯಲ್ಲಿ ನಿಲ್ಲಲಾಗುವುದಿಲ್ಲ. ನಮ್ಮ ಸಾಮರ್ಥ್ಯಗಳನ್ನು ಹಿಡಿದೆಳೆಯುವ ಅಥವಾ ನಮ್ಮ ಅರಿವಿಗೆ ಸವಾಲೊಡ್ಡುವ ಆ ಸನ್ನಿವೇಶಗಳು ಕೂಡ ನಾವು ನಮ್ಮ ಪ್ರಜ್ಞೆಯಲ್ಲಿ ಆಳವಾಗಿ ಹೋಗಲು ಮತ್ತು ನಮ್ಮ ಅತ್ಮದ ಸಂಪೂರ್ಣ ಶಕ್ತಿಯನ್ನು ಹೊರಹಾಕಲು ಬೇಕಾದದ್ದನ್ನು ಕೊಡುವುದನ್ನು ನಾವು ಕಾಣುತ್ತೇವೆ.
ಧ್ಯಾನದಲ್ಲಿ ನಾವು ಭಗವಂತನ ಉಪಸ್ಥಿತಿಯನ್ನು ಅರಿತಾಗ, ಅವನ ಬೆಳಕು ಮತ್ತು ಅನುಗ್ರಹವು ಅನಾವಶ್ಯಕ ವಿನ್ಯಾಸಗಳಲ್ಲಿ ಕರಗಲು ಅನುವು ಮಾಡಿಕೊಡುತ್ತಾ ನಮ್ಮ ಪ್ರಜ್ಞೆಯು ಹೆಚ್ಚು ಹೊಂದಿಕೊಳ್ಳಬಲ್ಲದ್ದಂತಾಗುತ್ತದೆ. ಹೆಚ್ಚು ಹೆಚ್ಚು ಅವನ ಚಿಂತನೆಯಲ್ಲಿ ನಾವು ನೆಲೆಗೊಂಡಾಗ, ನಾವು ಸಾಧಿಸಲು ಬೇಕಾದ ಆನಂದ ಮತ್ತು ಶಕ್ತಿ ಆ ಅನಂತ ಮೂಲದಿಂದ ನಮ್ಮೆಡೆಗೆ ಹರಿಯುತ್ತದೆ ಮತ್ತು ಆಗ “ಅವನ ಅಕ್ಷಯವಾದ ಪ್ರಕೃತಿಯೊಡನೆ ನಿಮ್ಮನ್ನು ನೀವು ಗುರುತಿಸಿಕೊಂಡಾಗ, ಭಗವಂತನು ಏನು ಬೇಕಾದರೂ ಮಾಡಬಲ್ಲ ಮತ್ತು ಹಾಗೆಯೇ ನೀವೂ ಕೂಡ” ಎಂಬ ಗುರುದೇವರ ನುಡಿಗಳನ್ನು ಹೆಚ್ಚು ಅರ್ಥಗರ್ಭಿತವಾಗಿ ಅರಿಯುತ್ತೇವೆ. ನಿಮ್ಮ ನಂಬಿಕೆ ಮತ್ತು ನಿರ್ಧಾರದಿಂದ ನೀವು ಆ ಸತ್ಯವನ್ನು ತಿಳಿಯಬಹುದು ಮತ್ತು ನಿಮ್ಮದೇ ಗೆಲುವಿನ ಬದುಕಿನಿಂದ ಇತರರನ್ನು ಕೂಡ ಪ್ರೋತ್ಸಾಹಿಸಬಹುದು.
ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಭಗವಂತನ ಅನುಗ್ರಹಗಳಿಂದ ತುಂಬಿದ ಒಂದು ಹೊಸ ವರ್ಷವನ್ನು ಹಾರೈಸುತ್ತಾ,
ಶ್ರೀ ಶ್ರೀ ಮೃಣಾಲಿನಿ ಮಾತಾ
ಕೃತಿಸ್ವಾಮ್ಯ © 2013 ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್. ಎಲ್ಲ ಹಕ್ಕುಗಳನ್ನೂ ಕಾದಿರಿಸಲಾಗಿದೆ.

















