ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಿ: ನೀವೇನಾಗಬೇಕೆಂದು ಬಯಸಿದ್ದೀರೋ ಅದಾಗಿ!

ಪರಮಹಂಸ ಯೋಗಾನಂದರಿಂದ

ಈ ಕೆಳಗಿನ ಆಯ್ದ ಭಾಗಗಳು ಪರಮಹಂಸ ಯೋಗಾನಂದರು ಸ್ಥಾಪಿಸಿದ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ [ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ] ನ ಅಂತರರಾಷ್ಟ್ರೀಯ ಕೇಂದ್ರಾಲಯದಲ್ಲಿ 1934ರ ಹೊಸ ವರ್ಷದ ಹಿಂದಿನ ದಿನದಂದು ಅವರು ನೀಡಿದ ಉಪನ್ಯಾಸದಿಂದ ಆಯ್ದುಕೊಳ್ಳಲಾಗಿದೆ. ಸಂಪೂರ್ಣ ಉಪನ್ಯಾಸವನ್ನು ಪರಮಹಂಸ ಯೋಗಾನಂದರ ಪ್ರವಚನಗಳು ಮತ್ತು ಪ್ರಬಂಧಗಳ ಮೂರನೇ ಸಂಪುಟ – ಜರ್ನಿ ಟು ಸೆಲ್ಫ್‌-ರಿಯಲೈಝೇಷನ್ನಲ್ಲಿ ಪ್ರಕಟಿಸಲಾಗಿದೆ (ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದಿಂದ ಪ್ರಕಟಿತವಾಗಿದೆ).

ಮುಂಬರುವ ವರ್ಷದಲ್ಲಿ ನೀವು ಏನು ಮಾಡುತ್ತೀರಿ ಮತ್ತು ನೀವೇನಾಗ ಬಯಸುತ್ತೀರಿ ಎಂಬ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಿ. ನಿಮಗಾಗಿ ಒಂದು ರೂಪುರೇಷೆಯನ್ನು ಹಾಕಿಕೊಳ್ಳಿ; ಅದನ್ನು ನೆರವೇರಿಸಿ. ಆಗ ನೀವೆಷ್ಟು ಸಂತೋಷದಿಂದಿರುವಿರಿ ಎಂಬುದನ್ನು ನೀವು ಮನಗಾಣುತ್ತೀರಿ. ನಿಮ್ಮ ಸುಧಾರಣೆಯ ದಿನಚರಿಯನ್ನು ನೀವು ಅನುಸರಿಸಲು ವಿಫಲರಾದಿರಿ ಎಂದರೆ ನೀವು ನಿಮ್ಮ ಇಚ್ಛಾಶಕ್ತಿಯನ್ನು ಅಶಕ್ತಗೊಳಿಸಿಕೊಂಡಂತೆ. ನೀವು ನಿಮ್ಮನ್ನು ನಿಮ್ಮ ಮಿತ್ರರನ್ನಾಗಿಸಿಕೊಂಡರೆ, ನೀವು ಸಂಪನ್ನರಾಗುತ್ತೀರಿ. ನೀವು ಏನಾಗಬೇಕೆಂದು ಬಯಸುತ್ತೀರೋ ಹಾಗಾಗುವುದಕ್ಕೆ ಮತ್ತು ನೀವು ಏನು ಸಾಧಿಸಬೇಕೆಂದಿದ್ದೀರೋ ಅದನ್ನು ಸಾಧಿಸುವುದಕ್ಕೆ ಅಡ್ಡಿ ಬರುವಂತಹ ಭಗವಂತನ ಯಾವುದೇ ನಿಯಮವಿಲ್ಲ. ನೀವೇ ಅನುಮತಿ ಕೊಡದೇ ಇದ್ದಲ್ಲಿ, ಸಂಭವಿಸುವ ಯಾವುದೇ ಹಾನಿಕರ ಸಂಗತಿಯೂ ನಿಮ್ಮನ್ನು ಬಾಧಿಸಲಾರದು.

ನೀವು ಏನಾಗಬೇಕೆಂದು ಬಯಸುವಿರೋ ಅದಾಗುವಿರಿ ಎಂಬ ನಿಮ್ಮ ಗಾಢನಂಬಿಕೆಯನ್ನು ಯಾವುದೂ ಕೂಡ ದುರ್ಬಲಗೊಳಿಸದಿರಲಿ. ನಿಮ್ಮನ್ನು ಬಿಟ್ಟು ಬೇರೆ ಯಾರೂ ನಿಮ್ಮನ್ನು ತಡೆಹಿಡಿಯುತ್ತಿಲ್ಲ. ನನ್ನ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರ್‌ಜಿ ಇದನ್ನು ನನಗೆ ಬಾರಿ ಬಾರಿ ಹೇಳಿದರೂ, ಮೊದಲಿಗೆ ಅದನ್ನು ನಂಬುವುದು ಬಹಳ ಕಷ್ಟವಾಗಿತ್ತು. ಆದರೆ ಭಗವಂತನು ದಯಪಾಲಿಸಿದ ಸಂಕಲ್ಪ ಶಕ್ತಿಯ ಉಡುಗೊರೆಯನ್ನು ನಾನು ನನ್ನ ಜೀವನದಲ್ಲಿ ಉಪಯೋಗಿಸಲು ಶುರು ಮಾಡಿದ ಮೇಲೆ, ಅದು ನನ್ನ ಸಂರಕ್ಷಕ ಎಂಬುದನ್ನು ಕಂಡಕೊಂಡೆ. ಇಚ್ಛಾಶಕ್ತಿಯನ್ನು ಉಪಯೋಗಿಸದೇ ಇರುವುದೆಂದರೆ ಒಂದು ನಿಶ್ಚೇಷ್ಟ ಕಲ್ಲುಬಂಡೆಯಿದ್ದಂತೆ, ಒಂದು ನಿರ್ಜೀವ ವಸ್ತುವಿನಂತೆ — ಒಬ್ಬ ನಿಷ್ಪರಿಣಾಮಕಾರಿ ಮನುಷ್ಯನಂತೆ.

ರಚನಾತ್ಮಕ ಆಲೋಚನೆಯು ಕಾಣದ ಒಂದು ಮಹಾನ್‌ ಶೋಧಕದೀಪದಂತೆ ಖಂಡಿತವಾಗಿಯೂ ನಿಮಗೆ ಯಶಸ್ಸಿನ ಹಾದಿಯನ್ನು ತೋರುತ್ತದೆ. ನೀವು ಆಳವಾಗಿ ಯೋಚಿಸಿದರೆ, ಒಂದು ಹಾದಿಯನ್ನು ಸದಾ ಕಂಡುಕೊಳ್ಳಬಲ್ಲಿರಿ. ಸ್ವಲ್ಪ ಸಮಯದ ನಂತರ ಪ್ರಯತ್ನವನ್ನು ಬಿಟ್ಟುಬಿಡುವಂತಹ ಜನರು ಅವರ ಚಿಂತನಾ ಶಕ್ತಿಯನ್ನು ಮಬ್ಬುಗೊಳಿಸುತ್ತಾರೆ. ನಿಮ್ಮ ಗುರಿಯನ್ನು ಸೇರಲು, ನಿಮ್ಮ ಆಲೋಚನೆಯನ್ನು ಅದು ನಿಮ್ಮ ಗುರಿಯ ಮಾರ್ಗವನ್ನು ತೋರಿಸಲು ಸಾಕಷ್ಟು ಪ್ರಕಾಶಮಾನವಾಗುವವರೆಗೂ ಉಪಯೋಗಿಸಲು ನೀವು ಸಾಕಷ್ಟು ಶ್ರಮಪಡಬೇಕು.

ಎಲ್ಲ ನಕಾರಾತ್ಮಕ ಆಲೋಚನೆಗಳು ಮತ್ತು ಭಯಗಳನ್ನು ಕಿತ್ತುಬಿಸಾಡಿ. ಭಗವಂತನ ಮಗುವಾಗಿ, ನೀವು ಕೂಡ ಮನುಷ್ಯರಲ್ಲಿ ಅತ್ಯಂತ ಶ್ರೇಷ್ಠರಾದವರಲ್ಲಿರುವಷ್ಟೇ ಸಾಮರ್ಥ್ಯಗಳಿಂದ ಅನುಗ್ರಹಿಸಲ್ಪಟ್ಟಿದ್ದೀರಿ ಎಂಬುದನ್ನು ನೆನಪಿನಲ್ಲಿಡಿ. ಆತ್ಮಗಳಾಗಿ, ಯಾರೂ ಕೂಡ ಇನ್ನೊಬ್ಬರಿಗಿಂತ ದೊಡ್ಡವರಲ್ಲ. ನಿಮ್ಮ ಇಚ್ಛಾಶಕ್ತಿಯನ್ನು, ಋಷಿಗಳ ಜ್ಞಾನದಲ್ಲಿ ವ್ಯಕ್ತಪಡಿಸಿದಂತೆ ಭಗವಂತನ ಪರಿಜ್ಞಾನವು ನಿಮ್ಮನ್ನು ಮಾರ್ಗದರ್ಶಿಸಲು ಶ್ರುತಿಗೂಡಿಸಿಕೊಳ್ಳಿ. ನಿಮ್ಮ ಇಚ್ಛಾಶಕ್ತಿಯು ವಿವೇಚನೆಯೊಂದಿಗೆ ಜೊತೆಗೂಡಿದಲ್ಲಿ, ನೀವು ಏನನ್ನು ಬೇಕಾದರೂ ಸಾಧಿಸಬಹುದು.

ಕೆಟ್ಟ ಅಭ್ಯಾಸಗಳು ನೀವು ಹೊಂದಬಹುದಾದ ಅತಿ ದುಷ್ಟ ಶತ್ರುಗಳು. ಆ ಅಭ್ಯಾಸಗಳಿಂದ ನೀವು ಶಿಕ್ಷೆಗೊಳಗಾಗುತ್ತೀರಿ. ನೀವು ಮಾಡ ಬಯಸದಂತಹ ಕೆಲಸಗಳನ್ನು ಮಾಡುವಂತೆ ಅವು ಪ್ರೇರೇಪಿಸುತ್ತವೆ ಮತ್ತು ನೀವು ಅದರ ಪರಿಣಾಮಗಳಿಗೆ ಈಡಾಗುವಂತೆ ಮಾಡುತ್ತವೆ. ನೀವು ಕೆಟ್ಟ ಅಭ್ಯಾಸಗಳನ್ನು ತೊರೆಯಬೇಕು ಮತ್ತು ಅವನ್ನು ಹಿಂದೆ ಬಿಟ್ಟು ಮುಂದೆ ಸಾಗಬೇಕು. ಪ್ರತಿ ದಿನವೂ ಕೆಟ್ಟ ಅಭ್ಯಾಸಗಳಿಂದ ಉತ್ತಮ ಅಭ್ಯಾಸಗಳನ್ನು ಹೊಂದುವ ಒಂದು ಪರಿವರ್ತನಾ ದಿನವಾಗಿರಬೇಕು. ಮುಂಬರುವ ವರ್ಷದಲ್ಲಿ ನಿಮ್ಮ ಅತ್ಯಂತ ಒಳ್ಳೆಯದಕ್ಕೆ ಸಹಕಾರಿಯಾಗುವ ಅಭ್ಯಾಸಗಳನ್ನು ಮಾತ್ರ ಇಟ್ಟುಕೊಳ್ಳುವ ಒಂದು ವಿಧ್ಯುಕ್ತ ನಿರ್ಣಯವನ್ನು ತೆಗೆದುಕೊಳ್ಳಿ.

ನಿಮ್ಮ ಅನಪೇಕ್ಷಿತ ಪ್ರವೃತ್ತಿಗಳನ್ನು ದೂರ ಮಾಡಲು ಇರುವ ಅತ್ಯುತ್ತಮ ದಾರಿಯೆಂದರೆ, ಅವುಗಳ ಬಗ್ಗೆ ಯೋಚಿಸದೇ ಇರುವುದು; ಅವುಗಳನ್ನು ಒಪ್ಪಿಕೊಳ್ಳಬೇಡಿ. ಒಂದು ಅಭ್ಯಾಸವು ನಿಮ್ಮ ಮೇಲೆ ಹಿಡಿತ ಸಾಧಿಸಿದೆ ಎಂದು ಎಂದೂ ಒಪ್ಪಿಕೊಳ್ಳಬೇಡಿ….ನೀವು “ಒಪ್ಪುವುದಿಲ್ಲ” ಅಭ್ಯಾಸವನ್ನು ಬೆಳೆಸಿಕೊಳ್ಳಲೇಬೇಕು. ಮತ್ತು ಕೆಟ್ಟ ಅಭ್ಯಾಸಗಳನ್ನು ಪ್ರಚೋದಿಸುವ ವಿಷಯ ವಸ್ತುಗಳಿಂದ ದೂರವಿರಿ.

ಸ್ವಾರ್ಥಪರತೆಯ ಅಲ್ಪತೆಯಿಂದ ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳಬೇಡಿ. ನಿಮ್ಮ ಸಾಧನೆಗಳಲ್ಲಿ ಮತ್ತು ಸಂತೋಷದಲ್ಲಿ ಇತರರನ್ನು ಸೇರಿಸಿಕೊಳ್ಳಿ, ಆಗ ನೀವು ಭಗವಂತನ ಇಚ್ಛೆಯನ್ನು ಪೂರೈಸಿದಂತಾಗುತ್ತದೆ. ಯಾವಾಗ ನೀವು ನಿಮ್ಮ ಬಗ್ಗೆ ಯೋಚಿಸುತ್ತೀರೋ, ಆಗ ಇತರರ ಬಗ್ಗೆಯೂ ಆಲೋಚಿಸಿ. ನೀವು ಶಾಂತಿಯನ್ನು ಅರಸುತ್ತಿರುವಾಗ, ಶಾಂತಿಯ ಅವಶ್ಯಕತೆಯಿರುವ ಇತರರ ಬಗ್ಗೆ ಯೋಚಿಸಿ. ಇತರರನ್ನು ಸಂತೋಷವಾಗಿಡಲು ನೀವು ನಿಮ್ಮ ಅತ್ಯುತ್ತಮವಾದುದನ್ನು ಮಾಡಿದಾಗ, ನೀವು ಪರಮಾತ್ಮನನ್ನು ಸಂತುಷ್ಟಗೊಳಿಸುತ್ತಿದ್ದೀರಿ ಎಂಬುದನ್ನು ಮನಗಾಣುತ್ತೀರಿ.

ಸಾಮರಸ್ಯದಿಂದಿರಲು, ನಿಮ್ಮನ್ನು ಕಳಿಸಿದ ಭಗವಂತನ ಇಚ್ಛೆಯನ್ನು ಪೂರೈಸಲು ದೃಢವಾದ ಇಚ್ಛಾಶಕ್ತಿಯಿಂದಿರುವುದರಲ್ಲಿ ಮಾತ್ರ ನೀವು ಆಸಕ್ತಿ ಹೊಂದಿರಬೇಕು. ಎಂದೂ ಧೈರ್ಯಗೆಡಬೇಡಿ ಮತ್ತು ಸದಾ ಮುಗುಳ್ನಗುತ್ತಿರಿ. ಆಂತರ್ಯದ ನಗುವಿನಲ್ಲಿ ಮತ್ತು ಮೊಗದ ನಗುವಿನಲ್ಲಿ ಸಂಪೂರ್ಣ ಸಾಮರಸ್ಯವಿರಲಿ. ನಿಮ್ಮ ಶರೀರ, ಮನಸ್ಸು ಮತ್ತು ಆತ್ಮವು ಭಗವತ್‌ಪ್ರಜ್ಞೆಯ ಆಂತರಿಕ ನಗುವನ್ನು ಕಂಡುಕೊಂಡಲ್ಲಿ, ನೀವು ಎಲ್ಲೇ ಹೋದರೂ ನಿಮ್ಮ ಸುತ್ತಲೂ ನಗುವನ್ನು ಪಸರಿಸಬಹುದು.

ಸದಾ ನಿಮ್ಮನ್ನು ಉತ್ತೇಜಿಸುವ ಜನರೊಡನಿರಿ; ನಿಮಗೆ ಬಲ ತುಂಬುವ ಜನರು ನಿಮ್ಮ ಸುತ್ತಮುತ್ತಲಿರಲಿ. ಕೆಟ್ಟ ಸಹವಾಸದಿಂದ ನಿಮ್ಮ ದೃಢನಿಶ್ಚಯಗಳು ಹಾಗೂ ಸಕಾರಾತ್ಮಕ ಯೋಚನೆಗಳು ವಿಷಪೂರಿತವಾಗದಿರಲಿ. ನಿಮ್ಮನ್ನು ಸ್ಫೂರ್ತಿಗೊಳಿಸಲು ನಿಮಗೆ ಒಂದು ಒಳ್ಳೆಯ ಸಹವಾಸ ಸಿಗದಿದ್ದರೂ, ಅದನ್ನು ನೀವು ಧ್ಯಾನದಲ್ಲಿ ಕಂಡುಕೊಳ್ಳಬಹುದು. ನೀವು ಪಡೆಯಬಹುದಾದ ಅತ್ಯುತ್ತಮ ಸಹವಾಸವೆಂದರೆ, ಧ್ಯಾನದ ಆನಂದ.

ನಿಮ್ಮ ಜೀವನದ ಬಟ್ಟಲು ಒಳಗೆ ಮತ್ತು ಹೊರಗೆ ಭಗವಂತನ ಸನ್ನಿಧಿಯಿಂದ ತುಂಬಿದೆ. ಆದರೆ ಗಮನ ಇಲ್ಲದೇ ಇರುವುದರಿಂದ, ನೀವು ಭಗವಂತನ ವಿಶ್ವವ್ಯಾಪಕತ್ವವನ್ನು ಕಾಣಲಾಗುತ್ತಿಲ್ಲ. ಒಬ್ಬರು ರೇಡಿಯೋವನ್ನು ಶ್ರುತಿಗೂಡಿಸುವ ಹಾಗೆ ನೀವು ಶ್ರುತಿಗೊಂಡಿದ್ದಲ್ಲಿ, ನೀವು ಭಗವಂತನನ್ನು ಒಳಕ್ಕೆ ಬರಮಾಡಿಕೊಳ್ಳುತ್ತೀರಿ. ಇದು ಹೇಗೆ ಅಂದರೆ ಒಂದು ಸೀಸೆಯಲ್ಲಿ ಸಾಗರದ ನೀರನ್ನು ತುಂಬಿಕೊಂಡು, ಅದನ್ನು ಮುಚ್ಚಿ ಸಾಗರದೊಳಕ್ಕೆ ಹಾಕಿದ ಹಾಗೆ; ಸೀಸೆಯು ನೀರಿನಲ್ಲಿ ತೇಲುತ್ತಿದ್ದರೂ, ಅದರೊಳಗಿರುವುದು ಸಾಗರದ ಸುತ್ತುಮುತ್ತಲಿನೊಂದಿಗೆ ಬೆರೆಯುವುದಿಲ್ಲ. ಆದರೆ ಸೀಸೆಯನ್ನು ತೆರೆದೊಡನೆಯೇ ಅದರೊಳಗಿರುವ ನೀರು ಸಾಗರದೊಳಗೆ ಸೇರಿಕೊಳ್ಳುತ್ತದೆ. ಭಗವಂತನೊಡನೆ ಸಂಸರ್ಗವನ್ನು ಹೊಂದಬೇಕಾದರೆ ನಾವು ಅಜ್ಞಾನದ ಬಿರಡೆಯನ್ನು ತೆಗೆಯಬೇಕಾಗುತ್ತದೆ.

ನಿತ್ಯತೆಯೇ ನಮ್ಮ ನಿವಾಸ. ನಮ್ಮ ದೇಹವೆಂಬ ಸತ್ರದಲ್ಲಿ ನಾವು ಸ್ವಲ್ಪ ಕಾಲ ಮಾತ್ರ ತಂಗಿದ್ದೇವೆ. ಭ್ರಮೆಯೆಂಬ ಪಾನದಿಂದ ಮತ್ತರಾದವರು, ಭಗವಂತನೆಡೆಗೆ ದಾರಿ ತೋರುವ ಜಾಡನ್ನು ಮರೆತಿದ್ದಾರೆ. ಆದರೆ ಧ್ಯಾನದಲ್ಲಿ ಭಗವಂತನು ತನ್ನ ಪಥಭ್ರಷ್ಟ ಮಗುವನ್ನು ಹಿಡಿದುಕೊಂಡಾಗ, ಮತ್ತಿನ್ನೆಂದೂ ಅಲೆದಾಟವಿರುವುದಿಲ್ಲ.

ಹೊಸ ಭರವಸೆಯೊಂದಿಗೆ ಹೊಸ ವರ್ಷದ ದ್ವಾರಗಳನ್ನು ಪ್ರವೇಶಿಸಿ. ನೀವು ಭಗವಂತನ ಮಗು ಎಂಬುದನ್ನು ನೆನಪಿನಲ್ಲಿಡಿ. ನೀವು ಏನಾಗುತ್ತೀರೆಂಬುದು ನಿಮ್ಮನ್ನೇ ಅವಲಂಬಿಸಿದೆ. ನೀವು ಭಗವಂತನ ಮಗು ಎಂದು ಹೆಮ್ಮೆ ಪಡಿ. ಯಾವುದಕ್ಕೆ ನೀವು ಭಯ ಪಡಬೇಕು? ಏನೇ ಬರಲಿ, ಭಗವಂತನೇ ಅದನ್ನು ನಿಮ್ಮ ಬಳಿ ಕಳಿಸುತ್ತಿದ್ದಾನೆ ಎಂದು ನಂಬಿ; ಮತ್ತು ಆ ದಿನನಿತ್ಯದ ಸವಾಲುಗಳನ್ನು ಜಯಿಸುವುದರಲ್ಲಿ ನೀವು ಯಶಸ್ವಿಯಾಗಬೇಕು. ಅದರೊಳಗೇ ನಿಮ್ಮ ಗೆಲುವಡಗಿದೆ. ಅವನ ಇಚ್ಛೆಯಂತೆ ಮಾಡಿ; ಆಗ ಯಾವುದೂ ಕೂಡ ನಿಮ್ಮನ್ನು ನೋಯಿಸಲಾರದು. ಅವನು ಎಂದೆಂದೂ ನಿಮ್ಮನ್ನು ಪ್ರೀತಿಸುತ್ತಾನೆ. ಅದನ್ನು ಯೋಚಿಸಿ. ಅದನ್ನು ನಂಬಿ. ಅದನ್ನು ತಿಳಿಯಿರಿ. ಮತ್ತು ಒಂದು ದಿನ ಇದ್ದಕ್ಕಿದ್ದ ಹಾಗೆ ಭಗವಂತನಲ್ಲಿ ನೀವು ನಿತ್ಯ ಜೀವಿಸುತ್ತಿದ್ದೀರಿ ಎಂಬುದನ್ನು ಮನಗಾಣುತ್ತೀರಿ.

ಹೆಚ್ಚು ಧ್ಯಾನ ಮಾಡಿ ಮತ್ತು ಏನೇ ಆದರೂ ಭಗವಂತನು ಸದಾ ನಿಮ್ಮೊಡನೆ ಇದ್ದಾನೆ ಎಂಬ ಶಕ್ತಿಯುತ ಪ್ರಜ್ಞೆಯಲ್ಲಿ ನಂಬಿಕೆಯಿಡಿ. ಆಗ ಭ್ರಮೆಯೆಂಬ ಮುಸುಕು ತೆಗೆದುಹಾಕಲ್ಪಡುವುದನ್ನು ಮತ್ತು ನೀವು ಅದರಲ್ಲಿ ಅಂದರೆ ಭಗವಂತನಲ್ಲಿ ಒಂದಾಗಿದ್ದೀರಿ ಎಂಬುದನ್ನು ಕಾಣುತ್ತೀರಿ. ಹಾಗೆಯೇ ನಾನು ನನ್ನ ಜೀವನದ ಮಹತ್ತರ ಸಂತೋಷವನ್ನು ಕಂಡುಕೊಂಡಿದ್ದು. ನಾನು ಈಗ ಯಾವುದನ್ನೂ ಎದುರು ನೋಡುತ್ತಿಲ್ಲ, ಏಕೆಂದರೆ, ನನಗೆ ಬೇಕಾದದ್ದೆಲ್ಲವೂ ಅವನಲ್ಲಿದೆ. ಎಲ್ಲ ಸುಖಸಂಪತ್ತುಗಳಲ್ಲೂ ಶ್ರೀಮಂತವಾದ ಅದನ್ನು ನಾನು ಎಂದೂ ಬಿಟ್ಟುಕೊಡುವುದಿಲ್ಲ.

ಇದೇ ನಿಮಗೆ ನನ್ನ ಹೊಸ ವರ್ಷದ ಸಂದೇಶ.

ಇದನ್ನು ಹಂಚಿಕೊಳ್ಳಿ