ಆತ್ಮೀಯರೆ,
ಭಗವಾನ್ ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಲು ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರೊಂದಿಗೆ ನಾವು ಸೇರಿಕೊಳ್ಳುತ್ತಿರುವಾಗ, ಅವನ ಜೀವನ ಮತ್ತು ಅಮರ ಬೋಧನೆಗಳ ಶುದ್ಧ ಸಂಪರ್ಕವಾಹಕದ ಮೂಲಕ ಹರಿಯುವ ಭಗವಂತನ ಪ್ರೀತಿ ಮತ್ತು ಸಂತೋಷದ ಸಮ್ಮೋಹಕ ಕರೆಯಿಂದ ನಮ್ಮ ಹೃದಯಗಳು ಹೊಸ ರೀತಿಯಲ್ಲಿ ಉದ್ಧರಿಸಲ್ಪಡುತ್ತವೆ. ನಾವು ನಮ್ಮ ಗಮನವನ್ನು ಮಾಯಾಬಂಧನಕ್ಕೊಳಗಾದ ಅಹಂನಿಂದ ನಮ್ಮೊಳಗಿರುವ ಶಾಶ್ವತ ಆತ್ಮ ಸ್ವಾತಂತ್ರ್ಯ ಮತ್ತು ಆನಂದದತ್ತ ಹರಿಸಿದ್ದೇ ಆದರೆ ಜನ್ಮಜನ್ಮಾಂತರಗಳಿಂದ ನಾವು ಅರಸುತ್ತಿರುವ ನಿರಂತರ ಸುಖವು ನಮ್ಮ ಕೈಗೆಟುಕುತ್ತದೆ ಎಂದು ಭಗವದ್ಗೀತೆಯ ದಿವ್ಯಗಾನದಿಂದ ಭಗವಾನ್ ಕೃಷ್ಣನು ನಮಗೆ ಮತ್ತೆ ಮತ್ತೆ ನೆನಪಿಸುತ್ತಿದ್ದಾನೆ. ಅನಿಶ್ಚಿತ ಬಾಹ್ಯ ಜಗತ್ತಿನಿಂದ ಸಾರ್ಥಕತೆಯನ್ನು ಅರಸುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ, ಅದರಿಂದ ನಮಗೆ ಮತ್ತೆ ಮತ್ತೆ ನಿರಾಶೆಯಾಗುತ್ತದೆಯಷ್ಟೆ. ಆದರೆ ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಹಾಗೂ ಒಂದಾದ ಮೇಲೊಂದು ಬರುವ ಸುಖದುಃಖಗಳ ಏಳುಬೀಳುಗಳಿಂದ ಬೇಸತ್ತಿರುವ ಎಲ್ಲರಿಗೂ ಈ ಸುಳಿಯಿಂದ ಹೊರಬರುವುದು ಹೇಗೆ ಎಂದು ಹೇಳುತ್ತಾನೆ: ಅಹಂ ನ ಸ್ವಯಂ-ಸೀಮಿತಗೊಳಿಸುವ, ಕರ್ಮಗಳನ್ನು ಹುಟ್ಟುಹಾಕುವ ಅಭ್ಯಾಸಗಳನ್ನು ಮೀರಿ ನಿಂತು ನಮ್ಮ ಆತ್ಮವು ಹಾತೊರೆಯುವ ಎಲ್ಲಕ್ಕೂ ಆಧಾರವಾದ ಆ ಭಗವಂತನನ್ನು ಹಿಂಬಾಲಿಸುವುದು.
ನಮ್ಮ, ಇತರರ ಹಾಗೂ ಇಡೀ ಜಗತ್ತಿನ ಯೋಗಕ್ಷೇಮಕ್ಕೆ ಅತ್ಯಂತ ಶ್ರೇಷ್ಠವಾದ ಕೊಡುಗೆಯೆಂದರೆ ನಮ್ಮ ಪ್ರಜ್ಞೆಯನ್ನು ಅದಕ್ಕೆ ಮರುಹೊಂದಾಣಿಕೆ ಮಾಡಿಕೊಳ್ಳುವುದು. ಕೃಷ್ಣ ಅರ್ಜುನನಿಗೆ ನೆನಪಿಸಿದಂತೆ, ಅಹಂ ಅನ್ನು ಅಡಗಿಸಲು ಧ್ಯಾನವೆಂಬ ಆಧ್ಯಾತ್ಮದ ಅಭ್ಯಾಸ ಹಾಗೂ ಲೌಕಿಕ ಜಗತ್ತಿನಲ್ಲಿ ನಿಸ್ವಾರ್ಥ ಸೇವೆ ಎರಡೂ ಅಗತ್ಯ. ಧ್ಯಾನದ ಗಾಢ ಮೌನದಲ್ಲಿ ಭಗವಂತನ ಪರಿವರ್ತನಕಾರಿ ಅಸ್ತಿತ್ವದ ವಾಸ್ತವದ ಅನುಭವವಾಗುತ್ತದೆ; ಹಾಗೂ ನಾವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವಾಗ ಅವನನ್ನು ಸಮೀಪ ಇರಿಸಿಕೊಂಡರೆ ನಮ್ಮ ಅಹಂನ ಪ್ರಭಾವವನ್ನು ಎದುರಿಸಲು ಶಕ್ತಿಯನ್ನು ಬೆಳೆಸಿಕೊಳ್ಳುತ್ತೇವೆ.
ಆಧ್ಯಾತ್ಮ ಮತ್ತು ಲೌಕಿಕ ಚಟುವಟಿಕೆಗಳಿಂದ ಬಿಡುಗಡೆ ಪಡೆಯುವ ಶಕ್ತಿಯ ಉತ್ತರವಿರುವುದು ನಮ್ಮ ಉದ್ದೇಶದಲ್ಲಿ. ನಾವು ಅಹಂನ ನಿಯಂತ್ರಣದಲ್ಲಿರುವವರೆಗೆ ಹಾಗೂ ನಮ್ಮ ಕಾರ್ಯಗಳ ಫಲಗಳಿಗೆ ಅಂಟಿಕೊಂಡಿರುವವರೆಗೆ ಮಾಯೆಯ ಏಳುಬೀಳುಗಳಿಗೆ ಒಳಗಾಗಿರುತ್ತೇವೆ. ಆದರೆ ನಾವು ಭಗವಂತನಲ್ಲಿ ನೆಲೆಗೊಂಡು ಅವನಿಗಾಗಿ ಕೆಲಸ ಮಾಡಲಾರಂಭಿಸಿದರೆ ನಮ್ಮ ಜೀವನವು ಎಷ್ಟು ಸರಳವೂ ಸಂತೋಷಕರವೂ ಆಗಿರುತ್ತದೆ. ವೈಯಕ್ತಿಕ ಲಾಭಕ್ಕಾಗಿ ಅಥವಾ ಇತರರ ಮನ್ನಣೆ ಪಡೆಯುವುದಕ್ಕಾಗಿ ಕಷ್ಟಪಟ್ಟು ಕೆಲಸ ಮಾಡಿದರೆ, ಅದರ ಫಲಿತಾಂಶದ ಚಿಂತೆಯು ನಿಮ್ಮ ಮನಸ್ಸನ್ನು ಆಗಾಗ ಆವರಿಸುತ್ತದೆ. ಆದರೆ ನೀವು ಅಂತರಂಗದಿಂದ ಯಾವುದೇ ಉದಾತ್ತವಾದ ಲೌಕಿಕ ಅಥವಾ ಆಧ್ಯಾತ್ಮಿಕ ಪ್ರಯತ್ನವನ್ನು ಭಗವಂತನಿಗೆ ಭಕ್ತಿಯ ಕಾಣಿಕೆಯಾಗಿ ಅರ್ಪಿಸಿದರೆ, ಅದನ್ನು ಸಾಧಿಸಲು ಅದೇ ಉತ್ಸಾಹವಿರುತ್ತದೆ; ಆಗ ನಿಮ್ಮ ಪ್ರಯತ್ನಗಳಿಗೆ ಅವನ ಆಶೀರ್ವಾದವಿದೆ ಎಂಬ ಭರವಸೆಯಿಂದ ನೀವು ಸಮಚಿತ್ತರಾಗಿ ಕಾರ್ಯನಿರ್ವಹಿಸಬಹುದು. ಭಗವಂತನು ಕೃಷ್ಣನ ಮೂಲಕ ಅರ್ಜುನನಿಗೆ ಹೇಳಿದ್ದಾನೆ: “ಎಲ್ಲ ಚಟುವಟಿಕೆಗಳನ್ನೂ ನನ್ನಲ್ಲಿ ತ್ಯಜಿಸು! ಅಹಂ ಮತ್ತು ನಿರೀಕ್ಷೆಯಿಲ್ಲದೆ ನಿನ್ನ ಗಮನವನ್ನು ಆತ್ಮದಲ್ಲಿ ಏಕಾಗ್ರಗೊಳಿಸಿ, ಚಡಪಡಿಕೆಯ ಚಿಂತೆಯಿಂದ ದೂರವಾಗಿ ಹೋರಾಟದಲ್ಲಿ (ಚಟುವಟಿಕೆಯ) ನಿರತನಾಗಿರು.” ಅಂತೆಯೇ ನಿಮಗೆ ಒಂದು ರೂಢಿಗತ ಅಭ್ಯಾಸವನ್ನು ಬದಲಿಸಬೇಕೆಂದಿದ್ದರೆ, ಗೀಳು ಹಿಡಿದಂತೆ ಅದನ್ನೇ ಕುರಿತು ಚಿಂತಿಸುವ ಬದಲು, ಅದನ್ನು ಭಗವಂತನ ಚರಣಗಳಲ್ಲಿಟ್ಟು, ಜೊತೆಜೊತೆಗೇ ಅದನ್ನು ಜಯಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ, ಅವನ ನೆರವಿಗೆ ನೀವು ತೆರೆದುಕೊಳ್ಳುವಿರಿ. ಧ್ಯಾನದಲ್ಲಿಯೂ ನೀವು ಫಲಿತಾಂಶದ ಆತಂಕದಿಂದ ವಿಚಲಿತರಾಗದೆ, ನಿಮ್ಮ ಪ್ರಾಮಾಣಿಕ ಪ್ರಯತ್ನ ಮಾಡಿದರೆ ನೀವು ಅವನ ಅನುಗ್ರಹಕ್ಕೆ ಹೆಚ್ಚು ಗ್ರಹಣಶೀಲರಾಗುವಿರಿ.
ಪ್ರತಿದಿನ ನಿಮ್ಮ ಆಧ್ಯಾತ್ಮಿಕ ಮತ್ತು ಲೌಕಿಕ ಚಟುವಟಿಕೆಗಳನ್ನು ಕೃಷ್ಣ ಹೇಳಿದಂತೆ ದಿವ್ಯಭಾವದಿಂದ ಮಾಡಿದರೆ ಅಹಂನ ಆತಂಕ, ಹತಾಶೆಗಳು ಕಳಚಿ, ನೆಮ್ಮದಿ ಮತ್ತು ಸಕಾರಾತ್ಮಕ, ಭಗವಂತನಲ್ಲಿ ನೆಲೆಗೊಂಡ ಆನಂದ ಭಾವದ ಹೃದಯವು ಅದರ ಸ್ಥಾನವನ್ನು ಆಕ್ರಮಿಸಿಕೊಳ್ಳುವುದನ್ನು ಕಾಣುವಿರಿ. ಒಂದು ಕಾಲಕ್ಕೆ ಮೇಲುಗೈ ಸಾಧಿಸಿದ್ದ ಲೌಕಿಕ ಪ್ರಜ್ಞೆಯು ನಿಮ್ಮ ಮೇಲಿನ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತದೆ, ಆಗ ಅಚಲವಾದ ಅಂತರಂಗದ ಶಾಂತಿ ಮತ್ತು ದಿವ್ಯ ಸಂತೋಷ ನಿಮ್ಮದಾಗುತ್ತದೆ.
ಭಗವಂತ ಮತ್ತು ಗುರುಗಳ ದಿವ್ಯಪ್ರೇಮದಲ್ಲಿ,
ಶ್ರೀ ಶ್ರೀ ಮೃಣಾಲಿನಿ ಮಾತಾ
ಕಾಪಿರೈಟ್ © 2017 ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

















