ಕೃತಜ್ಞತಾ ಸಮರ್ಪಣಾ ದಿನ (ಥ್ಯಾಂಕ್ಸ್‌ ಗಿವಿಂಗ್‌) 2011

“ಈಗ ನಿಮ್ಮಲ್ಲಿರುವ ಒಳ್ಳೆಯದರ ಕಡೆಗೆ ನಿಮ್ಮ ಕಣ್ಣುಗಳನ್ನು ತೆರೆಯಿರಿ; ಭಗವಂತನ ಅನುಗ್ರಹದ ಪ್ರತಿ ನವೀನ ಅಭಿವ್ಯಕ್ತಿಗೆ ಸದಾ ಜಾಗರೂಕರಾಗಿರಿ ಮತ್ತು ಸಂವೇದಿಯಾಗಿರಿ.” — ಪರಮಹಂಸ ಯೋಗಾನಂದ

ಕೃತಜ್ಞತಾ ಸಮರ್ಪಣೆಯ ದಿನದಂದು — ದಾತಾರನಿಂದ ನಾವೆಲ್ಲರೂ ಪಡೆದ ಪ್ರತಿಯೊಂದು ಸೊಗಸಾದ ಉಡುಗೊರೆಯನ್ನು ಪ್ರೇಮಪೂರ್ವಕ ಕೃತಜ್ಞತೆಯಿಂದ ಆಚರಿಸಲು ಕುಟುಂಬ ಮತ್ತು ಸ್ನೇಹಿತರು ಒಟ್ಟುಗೂಡುವಂತೆ ಸೆಳೆಯುವ ಒಂದು ದಿನ — ನಮ್ಮ ಅಂತರಾಳದ ಕೃತಜ್ಞತೆಯನ್ನು ಭಗವಂತನಿಗೆ ಸಮರ್ಪಿಸಲು ಪರಮಹಂಸ ಯೋಗಾನಂದರ ಆಶ್ರಮಗಳಲ್ಲಿರುವ ನಾವೆಲ್ಲರೂ ನಿಮ್ಮ ಜೊತೆ ಸೇರುತ್ತಿದ್ದೇವೆ. ನಿಮ್ಮ ದಿವ್ಯ ಸ್ನೇಹ, ಬಹಳ ಅತ್ಯಮೂಲ್ಯವಾದ ಆಶೀರ್ವಾದ ಎಂಬ ನಿತ್ಯ ಪ್ರಜ್ಞೆಯಲ್ಲಿ ನಾವು ನಮ್ಮ ವಿಶಿಷ್ಟ ನೆನಪುಗಳನ್ನು ಮತ್ತು ಪ್ರೀತಿಯನ್ನು ಮತ್ತು ಪ್ರಾರ್ಥನೆಗಳನ್ನು ಜಗದಾದ್ಯಂತ ಇರುವ ನಮ್ಮ ಆಧ್ಯಾತ್ಮಿಕ ಪರಿವಾರಕ್ಕೆ ಕಳುಹಿಸುತ್ತಿದ್ದೇವೆ.

ಭಗವಂತನ ಕೊಡುಗೈತನವನ್ನು ಅಭಿವ್ಯಕ್ತಿಸುವುದಕ್ಕಾಗಿ ಒಂದು ರಾಷ್ಟ್ರೀಯ ದಿನವನ್ನು ಮೀಸಲಿಡುವ ಪರಂಪರೆಗೆ ಗುರುದೇವರು ಬಹಳ ಮನ್ನಣೆ ಕೊಡುತ್ತಿದ್ದರು; ಮತ್ತು ನಾವೆಲ್ಲರೂ ಪ್ರತಿ ದಿನವೂ ಕೃತಜ್ಞತಾ ಸಮರ್ಪಣೆಯ ಭಾವದಿಂದ ಇರಬೇಕೆಂದು ನಮ್ಮೆಲ್ಲರನ್ನೂ ಉತ್ತೇಜಿಸುತ್ತಿದ್ದರು. ನಾವು ಭಗವಂತನನ್ನು ಒಪ್ಪಿಕೊಳ್ಳುತ್ತೇವೋ ಇಲ್ಲವೋ, ಭಗವಂತ ನಮ್ಮನ್ನು ಪೋಷಿಸುತ್ತಾನೆ. ಆದರೆ ಅವನ ಉಪಸ್ಥಿತಿಯು ನಮ್ಮ ಬದುಕನ್ನು ಎಷ್ಟು ಅಸಂಖ್ಯಾತ ರೀತಿಯಲ್ಲಿ ಆಕ್ರಮಿಸಿದೆ ಎಂದು ನಾವು ಅರಿತಾಗ ಆ ಬಾಂಧವ್ಯವು ಎಷ್ಟು ಮಧುರ ಮತ್ತು ಹೆಚ್ಚು ಪರಿವರ್ತಿಸಬಲ್ಲದ್ದಾಗಿರುತ್ತದೆ. ನಾವು ನಮ್ಮ ಕಣ್ಣುಗಳನ್ನು ಅವನ ಸೃಷ್ಟಿಯ ಅದ್ಭುತಗಳೆಡೆಗೆ ತೆರೆದು, ಅವನ ಪ್ರೇಮದ ಸ್ಪರ್ಶವನ್ನು ಅವನ ಪ್ರತಿಯೊಂದು ಉಪಕಾರದಲ್ಲಿ, ಭಗವಂತನೊಡನೆ-ಶ್ರುತಿಗೂಡಿದ ಆತ್ಮಗಳಿಂದ ಪ್ರಕಟವಾದ ಪ್ರತಿಯೊಂದು ಉನ್ನತಿಗೇರಿಸುವ ಸತ್ಯದಲ್ಲಿ ಮತ್ತು ಅವಶ್ಯಕತೆಯ ಸಮಯಗಳಲ್ಲಿಯ ಪ್ರತಿಯೊಂದು ಸಾಂತ್ವನದ ಸೂಕ್ಷ್ಮದೃಷ್ಟಿಯಲ್ಲಿ ಮನಗಂಡಾಗ, ನಾವು ನಮ್ಮ ಒಳಿತಿಗಾಗಿ ಅವನೆಷ್ಟು ಗಾಢವಾದ ಕಳಕಳಿಯನ್ನು ಹೊಂದಿದ್ದಾನೆ ಎಂಬುದನ್ನು ಅರಿಯಲು ಆರಂಭಿಸುತ್ತೇವೆ. ಪ್ರಾಮಾಣಿಕ ಉಪಕಾರ ಸ್ಮರಣೆಯಿಂದ ನಾವು ನಮ್ಮ ಅರಿವಿನ ಗ್ರಹಿಕೆಯನ್ನು ಪರಿಷ್ಕರಿಸಿದಾಗ, ಅವನೊಡನೆಯ ನಮ್ಮ ಬಾಂಧವ್ಯವು ಬಲಿಷ್ಠವಾಗುತ್ತದೆ ಮತ್ತು ಈ ಪ್ರಪಂಚದ ದ್ವಂದ್ವಗಳ ನಕಾರಾತ್ಮಕ ಭಾವನೆಗಳಿಂದ ನಾವು ಅಷ್ಟು ಬಾಧಿತರಾಗುವುದಿಲ್ಲ.

“ನಮ್ಮ ಅನುಗ್ರಹಗಳನ್ನು ಲೆಕ್ಕಹಾಕುವ” ಅಭ್ಯಾಸವು ನಮ್ಮ ಮನಸ್ಸು ಒಳ್ಳೆಯದನ್ನು ಅನ್ವೇಷಿಸುವುದಕ್ಕೆ ಮತ್ತು ನಮ್ಮಲ್ಲಿ, ಇತರರಲ್ಲಿ ಮತ್ತು ಜೀವನದ ವಿಭಿನ್ನ ಪರಿಸ್ಥಿತಿಗಳಲ್ಲಿ — ಭಗವಂತನ ಮೇಲಿನ ನಮ್ಮ ನಂಬಿಕೆಯನ್ನು ಪರೀಕ್ಷಿಸುವವರ ಮೇಲೆ ಕೂಡ — ಒಳ್ಳೆಯದರ ಮೇಲೆ ಏಕಾಗ್ರವಾಗುವಂತೆ ತರಬೇತುಗೊಳಿಸುತ್ತದೆ. ಹೀಗೆ, ಅವನ ಅನುಗ್ರಹ ನಮಗೆ ಒಂದು ಫಲಿಸಿದ ಪ್ರಾರ್ಥನೆಯ ರೂಪದಲ್ಲಿ ಬರುತ್ತದೋ ಅಥವಾ ನಮ್ಮ ಸಾಮರ್ಥ್ಯಗಳನ್ನು ಹಿಗ್ಗಿಸಲು ಮತ್ತು ಆಧ್ಯಾತ್ಮಿಕ ದೃಢತೆ ಮತ್ತು ಅರಿವನ್ನು ಬೆಳಸಿಕೊಳ್ಳುವ ಒಂದು ಅವಕಾಶವಾಗಿಯೋ, ನಾವು ಅವನ ಮಾರ್ಗದರ್ಶನ ಮತ್ತು ಪ್ರೀತಿಗೆ ಹೆಚ್ಚು ಗ್ರಹಣಶೀಲರಾಗುತ್ತೇವೆ. ನಾವು ಸಕಾರಾತ್ಮಕದತ್ತ ನೋಡಿದಾಗ ಮತ್ತು ಅದರ ಹಿಂದೆ ಭಗವಂತನ ಸಹಾಯ ಹಸ್ತವನ್ನು ನೋಡಿದಾಗ, ಅವನಲ್ಲಿರುವ ನಮ್ಮ ವಿಶ್ವಾಸವನ್ನು ಮತ್ತೆ ಬಲಪಡಿಸಿಕೊಳ್ಳಲು ಬೇಕಾದ ಅವನ ಸಹಾಯದ ಅತ್ಯಮೂಲ್ಯ ನೆನಪುಗಳನ್ನು ಹಿಡಿದಿಟ್ಟುಕೊಳ್ಳುತ್ತೇವೆ. ಅವನಲ್ಲಿರುವ ನಂಬಿಕೆ ಮತ್ತು ಶ್ರುತಿಗೂಡುವಿಕೆ ಹೆಚ್ಚಿದಂತೆಲ್ಲ, ಅವನು ಎಂದೂ ನಮ್ಮನ್ನು ಅಸಡ್ಡೆಯಿಂದ ನೋಡಲಿಲ್ಲ ಎಂಬುದನ್ನು ಅರಿಯುತ್ತೇವೆ. “ನೀವು ಅವನಿಗಾಗಿ ಕಾಯುವುದನ್ನು ಮತ್ತು ಎಷ್ಟೆಲ್ಲಾ ರೀತಿಯಲ್ಲಿ ಅವನು ಪ್ರತಿಸ್ಪಂದಿಸುತ್ತಾನೆ ಎಂದು ನೋಡುವುದನ್ನು ಮುಂದುವರೆಸಿದಾಗ, ವಸ್ತುತಃ ಅವನು ನಿಮಗೆ ಎಲ್ಲ ಸಮಯದಲ್ಲೂ ಉತ್ತರಿಸುತ್ತಿದ್ದಾನೆ ಎಂಬುದನ್ನು ಮನಗಾಣುತ್ತೀರಿ” ಎಂದು ಗುರುಗಳು ಹೇಳಿದರು. ಆಂತರಿಕ ಸಂಸರ್ಗದ ನೀರವತೆಯಲ್ಲಿ ಲೌಕಿಕ ಜಗತ್ತಿನ ಆಂತರಿಕ ಹೋರಾಟಗಳು ಕಳಚಿಕೊಂಡು ಬಿದ್ದಾಗ ಮತ್ತು ನಾವು ಅವನ ಬೆಳಕು ಮತ್ತು ಪ್ರಕಾಶದಲ್ಲಿ ಮಿಂದಾಗ, ಭಗವಂತನು ನಮ್ಮನ್ನು ಸದಾ ಪೋಷಿಸುತ್ತಿದ್ದಾನೆ ಎಂಬ ಮಹತ್ತರವಾದ ಭರವಸೆ ಬರುತ್ತದೆ. ನಮ್ಮ ಪ್ರಜ್ಞೆಯ ಅಡಿಯಲ್ಲಿ ಅವನ ಮೇರೆಯಿಲ್ಲದ ಜೀವನ ಮತ್ತು ಅಸ್ತಿತ್ವದ ರಕ್ಷಣಾ ಸಾಗರವನ್ನು ಮನಗಂಡಾಗ, ನಾವು ಅದನ್ನು ತಿಳಿಯದೇ ಹೋಗಿದ್ದರೂ, ಅವನು ನಮಗೆ ಅಮೂಲ್ಯವಾದ ಸಂಪತ್ತನ್ನು ಅನುಗ್ರಹಿಸಿದ್ದಾನೆ ಎಂಬುದನ್ನು ಅರಿಯುತ್ತೇವೆ — ಸ್ವತಃ ತನ್ನನ್ನು ತಾನು ನೀಡಿದಂತಹ ಶಾಶ್ವತ ಉಡುಗೊರೆ.

ಈ ಸೂಕ್ಷ್ಮ ಪರಿಜ್ಞಾನದ ಗ್ರಹಿಕೆಯನ್ನು ಬೆಳೆಸಿಕೊಳ್ಳುವುದರಿಂದ, ಭಗವಂತನ ಮೇಲಿರುವ ನಮ್ಮ ಕೃತಜ್ಞತಾಭಾವದಿಂದ ಹೃದಯ ತುಂಬಿಬರುತ್ತದೆ. ಅದು ಕೇವಲ ಕೃತಜ್ಞತಾಭಾವದ ನುಡಿಗಳಿಂದ ಉಕ್ಕಿ ಹರಿಯುವುದಿಲ್ಲ, ನೀಡುವ ಆಕಾಂಕ್ಷೆಯಿಂದ ಕೂಡಿರುತ್ತದೆ — ಅವನನ್ನು ತಿಳಿಯುವ ಮತ್ತು ಪ್ರೀತಿಸುವ ನಮ್ಮ ಪ್ರಯತ್ನಗಳಲ್ಲಿ ನಮ್ಮನ್ನು ನಾವು ಅವನಿಗೆ ನಿರುಪಾಧಿಕವಾಗಿ ಸಮರ್ಪಿಸಿಕೊಳ್ಳುವುದು; ಮತ್ತು ಅವಶ್ಯಕತೆಯಿರುವವರಿಗೆ ಸಹಾಯ ಹಸ್ತ ಚಾಚುವುದು, ವಸ್ತುತಃ ಅಥವಾ ಬೇರೆ ರೀತಿಯಲ್ಲಿ. ಈ ಕೃತಜ್ಞತಾ ಸಮರ್ಪಣೆಯ ವೇಳೆಯಲ್ಲಿ, ಚೈತನ್ಯವು-ವಿಸ್ತರಿಸುವ ಕೃತಜ್ಞತೆಯಿಂದ ನಾವು ಅವನ ಅಧಿಕ್ಯವನ್ನು ನಮ್ಮ ಆಂತರಿಕ ಮತ್ತು ನಂತರ ಬಾಹ್ಯ ಬದುಕಿನಲ್ಲಿ ಮತ್ತು ನಮ್ಮ ಮೂಲಕ ಎಲ್ಲರೆಡೆಗೂ ಮುಕ್ತವಾಗಿ ಹರಿಯಲು ಬಿಟ್ಟಾಗ, ನಿಮಗೆ ನಿರ್ಮಲ ಆನಂದ — ಆತ್ಮ-ಸ್ವಾತಂತ್ರ್ಯ ಮತ್ತು ಭದ್ರತೆ ಸಿಗಲಿ ಎಂದು ನನ್ನ ಹೃದಯಾಂತರಾಳದಿಂದ ಪ್ರಾರ್ಥಿಸುತ್ತೇನೆ.

ನಿಮಗೆ ಮತ್ತು ನಿಮ್ಮ ಪ್ರೀತಿ ಪಾತ್ರರಿಗೆ ಅನುಗ್ರಹ ತುಂಬಿದ ಕೃತಜ್ಞತಾ ಸಮರ್ಪಣೆ,

ಶ್ರೀ ಮೃಣಾಲಿನಿ ಮಾತಾ

ಕೃತಿಸ್ವಾಮ್ಯ © 2011 ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌. ಎಲ್ಲ ಹಕ್ಕುಗಳನ್ನೂ ಕಾದಿರಿಸಲಾಗಿದೆ.

 

 

ಇದನ್ನು ಹಂಚಿಕೊಳ್ಳಿ