ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಶಬ್ದಾರ್ಥ ಸಂಗ್ರಹ (ಬ, ಭ)

ಬಾಬಾಜಿ. ಶಬ್ದಾರ್ಥ ಸಂಗ್ರಹದಲ್ಲಿ ಮಹಾವತಾರ ಬಾಬಾಜಿ ನೋಡಿ.

ಬ್ರಹ್ಮನ್ (ಬ್ರಹ್ಮ). ನಿರುಪಾಧಿಕ ಪರಮಾತ್ಮ. ಬ್ರಹ್ಮನ್ ಅನ್ನು ಕೆಲವೊಮ್ಮೆ ಸಂಸ್ಕೃತದಲ್ಲಿ ಬ್ರಹ್ಮ ಎಂದು ಹೇಳಲಾಗುತ್ತದೆ; ಆದರೆ ಅದಕ್ಕೆ ಬ್ರಹ್ಮನ್‌ಗೆ ಇರುವ ಅರ್ಥವೇ ಇದೆ: ಪರಮಾತ್ಮ, ಅಥವಾ ಪರಮಪಿತ, ಬ್ರಹ್ಮಾ-ವಿಷ್ಣು-ಶಿವ (ಕೊನೆಯಲ್ಲಿ ಬ್ರಹ್ಮಾ ಎಂದು ದೀರ್ಘವಾದ ಅ ಎಂದು ನಿರೂಪಿಸಲಾಗಿದೆ) ದಲ್ಲಿನ ವೈಯಕ್ತಿಕ “ಬ್ರಹ್ಮ-ಸೃಷ್ಟಿಕರ್ತ” ಎಂಬ ಪರಿಮಿತಿಯ ಪರಿಕಲ್ಪನೆಯಲ್ಲ. ಬ್ರಹ್ಮಾ-ವಿಷ್ಣು-ಶಿವ ನೋಡಿ.

ಬ್ರಹ್ಮಾಂಡ ಪ್ರಜ್ಞೆ. ಬ್ರಹ್ಮ; ಸೃಷ್ಟಿಯಿಂದಾಚೆಗಿನ ಪರಮಾತ್ಮ. ಸ್ಪಂದಿಸುವ ಸೃಷ್ಟಿಯ ಹೊರಗೂ ಒಳಗೂ ಭಗವಂತನೊಂದಿಗಿನ ಏಕತೆಯ ಸಮಾಧಿ ಧ್ಯಾನ ಸ್ಥಿತಿ. (ಶಬ್ದಾರ್ಥ ಸಂಗ್ರಹದಲ್ಲಿ ತ್ರಿಮೂರ್ತಿತ್ವ ನೋಡಿ).

ಬ್ರಹ್ಮಾಂಡ ಬುದ್ಧಿಶೀಲ ಸ್ಪಂದನ. ಓಂ ನೋಡಿ.

ಬ್ರಹ್ಮಾಂಡ ಭ್ರಮೆ. ಶಬ್ದಾರ್ಥ ಸಂಗ್ರಹದಲ್ಲಿ ಮಾಯೆ ನೋಡಿ.

ಬ್ರಹ್ಮಾಂಡ ಶಕ್ತಿ. ಶಬ್ದಾರ್ಥ ಸಂಗ್ರಹದಲ್ಲಿ ಪ್ರಾಣ ನೋಡಿ.

ಬ್ರಹ್ಮಾಂಡ ಶಬ್ದ. ಓಂ ನೋಡಿ.

ಬ್ರಹ್ಮಾ-ವಿಷ್ಣು-ಶಿವ. ಸೃಷ್ಟಿಯಲ್ಲಿ ಭಗವಂತನ ಸರ್ವಾಂತರ್ಯಾಮಿತ್ವದ ಮೂರು ಅಂಶಗಳು. ಇವರು ವಿಶ್ವ ಪ್ರಕೃತಿಯ ಸೃಷ್ಟಿ, ಸ್ಥಿತಿ, ಲಯಗಳ ಚಟುವಟಿಕೆಗಳನ್ನು ಮಾರ್ಗದರ್ಶಿಸುವ ಕ್ರಿಸ್ತ ಪ್ರಜ್ಞೆ(ತತ್)ಯ ತ್ರಿತಯೈಕ್ಯ ಕಾರ್ಯವನ್ನು ಪ್ರತಿನಿಧಿಸುತ್ತಾರೆ. ತ್ರಿಮೂರ್ತಿತ್ವ ನೋಡಿ.

ಭಕ್ತಿ ಯೋಗ. ಇದು ಭಗವಂತನನ್ನು ಸಮೀಪಿಸುವ ಆಧ್ಯಾತ್ಮಿಕ ವಿಧಾನವಾಗಿದ್ದು, ಭಗವಂತನೊಂದಿಗಿನ ಸಂಸರ್ಗ ಹಾಗೂ ಸಂಯೋಗಕ್ಕೆ ಸರ್ವಶರಣಾಗತಿಯ ಪ್ರೀತಿಯೇ ಪ್ರಮುಖ ಸಾಧನ ಎಂದು ಒತ್ತಿ ಹೇಳುತ್ತದೆ ಯೋಗ ನೋಡಿ.

ಭಗವದ್ಗೀತೆ. “ಭಗವಂತನ ಗೀತೆ.” ಮಹಾಭಾರತ ಮಹಾಕಾವ್ಯದ ಆರನೇ ಪರ್ವ (ಭೀಷ್ಮ ಪರ್ವ)ದ ಹದಿನೆಂಟು ಅಧ್ಯಾಯಗಳನ್ನು ಒಳಗೊಂಡಿರುವ ಭಾರತದ ಒಂದು ಪ್ರಾಚೀನ ಗ್ರಂಥ. ಐತಿಹಾಸಿಕ ಕುರುಕ್ಷೇತ್ರದ ಯುದ್ಧದ ಮುನ್ನಾದಿನದಂದು ಅವತಾರ (ಶಬ್ದಾರ್ಥ ಸಂಗ್ರಹದಲ್ಲಿ ಇದನ್ನು ನೋಡಿ) ಪುರುಷ ಭಗವಾನ್ ಶ್ರೀಕೃಷ್ಣ ಮತ್ತು ಅವನ ಶಿಷ್ಯ ಅರ್ಜುನನ ನಡುವಿನ ಸಂವಾದದ ರೂಪದಲ್ಲಿ ಪ್ರಸ್ತುತಪಡಿಸಲಾದ ಗೀತೆಯು ಯೋಗ ವಿಜ್ಞಾನದ (ಭಗವಂತನೊಂದಿಗೆ ಸಂಯೋಗ) ಗಹನ ಗ್ರಂಥವಾಗಿದೆ ಹಾಗೂ ದೈನಂದಿನ ಜೀವನದಲ್ಲಿ ಸಂತೋಷ ಮತ್ತು ಯಶಸ್ಸನ್ನು ಕಂಡುಕೊಳ್ಳಲು ನೀಡಿರುವ ಕಾಲಾತೀತ ಅನುಶಾಸನವಾಗಿದೆ. ಸಾಂಕೇತಿಕವೂ, ಐತಿಹಾಸಿಕವೂ ಆಗಿರುವ ಗೀತೆಯು ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಪ್ರವೃತ್ತಿಗಳ ನಡುವಿನ ಆಂತರಿಕ ಯುದ್ಧದ ಆಧ್ಯಾತ್ಮಿಕ ಪ್ರಬಂಧವಾಗಿದೆ. ಸಂದರ್ಭಕ್ಕನುಗುಣವಾಗಿ ಕೃಷ್ಣನು ಗುರು, ಆತ್ಮ ಅಥವಾ ಭಗವಂತನನ್ನು ಸಂಕೇತಿಸುತ್ತಾನೆ; ಅರ್ಜುನನು ಆಕಾಂಕ್ಷಿ ಭಕ್ತನನ್ನು ಪ್ರತಿನಿಧಿಸುತ್ತಾನೆ. ಈ ಸಾರ್ವತ್ರಿಕ ಗ್ರಂಥದ ಬಗ್ಗೆ ಮಹಾತ್ಮ ಗಾಂಧಿಯವರು ಹೀಗೆ ಬರೆದಿದ್ದಾರೆ: “ಭಗವದ್ಗೀತೆಯನ್ನು ಕುರಿತು ಧ್ಯಾನಿಸುವವರು ಪ್ರತಿದಿನವೂ ತಾಜಾ ಸಂತೋಷ ಹಾಗೂ ಹೊಸ ಅರ್ಥಗಳನ್ನು ಕಂಡುಕೊಳ್ಳುತ್ತಾರೆ. ಗೀತೆಯಿಂದ ಬಿಡಿಸಲು ಸಾಧ್ಯವಾಗದ ಯಾವುದೇ ಆಧ್ಯಾತ್ಮಿಕ ಗೋಜಲು ಇಲ್ಲ.”

ಭಗವಾನ್ ಕೃಷ್ಣ. ಕ್ರಿಶ್ಚಿಯನ್ ಯುಗಕ್ಕಿಂತ ಮುಂಚೆಯೇ ಪ್ರಾಚೀನ ಭಾರತದಲ್ಲಿ ವಾಸಿಸುತ್ತಿದ್ದ ಅವತಾರ (ಶಬ್ದಾರ್ಥ ಸಂಗ್ರಹದಲ್ಲಿ ಇದನ್ನು ನೋಡಿ) ಪುರುಷ. ಹಿಂದೂ ಧರ್ಮಗ್ರಂಥಗಳಲ್ಲಿ ಕೃಷ್ಣ ಎಂಬ ಪದಕ್ಕೆ ನೀಡಲಾದ ಅರ್ಥಗಳಲ್ಲಿ ಒಂದು “ಸರ್ವಜ್ಞ ಪರಮಾತ್ಮ.” ಆದ್ದರಿಂದ, ಕ್ರಿಸ್ತನ ತರಹ ಕೃಷ್ಣ ಎನ್ನುವುದೂ ಸಹ ಅವತಾರದ ದಿವ್ಯ ಘನತೆಯನ್ನು ಸೂಚಿಸುವ ಆಧ್ಯಾತ್ಮಿಕ ಶೀರ್ಷಿಕೆಯಾಗಿದೆ. ಅಂದರೆ ಪರಮಾತ್ಮನೊಂದಿಗಿನ ಅವನ ಅನನ್ಯತೆ. ಭಗವಾನ್ ಅಂದರೆ “ಪ್ರಭು” ಎಂದರ್ಥ. ತನ್ನ ಬಾಲ್ಯದಲ್ಲಿ, ಕೃಷ್ಣನು ತನ್ನ ಕೊಳಲಿನ ಸಂಗೀತದಿಂದ ತನ್ನ ಸ್ನೇಹಿತರನ್ನು ಮಂತ್ರಮುಗ್ಧರನ್ನಾಗಿಸುತ್ತ ಗೋಪಾಲಕನಾಗಿ ಬದುಕಿದ. ಈ ಪಾತ್ರದಲ್ಲಿ ಕೃಷ್ಣನನ್ನು ಹೆಚ್ಚಾಗಿ ಸಾಂಕೇತಿಕವಾಗಿ – ಎಲ್ಲಾ ತಪ್ಪು ಆಲೋಚನೆಗಳನ್ನು ಸರ್ವಜ್ಞತೆಯಲ್ಲಿ ವಿಲೀನವಾಗಿಸುವಂತೆ ಮಾರ್ಗದರ್ಶಿಸುವ ಧ್ಯಾನವೆಂಬ ಕೊಳಲನ್ನು ನುಡಿಸುವ ಆತ್ಮವನ್ನು ಪ್ರತಿನಿಧಿಸುತ್ತಾನೆ ಎಂದು ಪರಿಗಣಿಸಲಾಗುತ್ತದೆ.

ಇದನ್ನು ಹಂಚಿಕೊಳ್ಳಿ