
ಆತ್ಮೀಯರೆ,
ನಿಮಗೆ ಮತ್ತು ಪರಮಹಂಸ ಯೋಗಾನಂದರ ಪ್ರಪಂಚದಾದ್ಯಂತದ ಆಧ್ಯಾತ್ಮಿಕ ಕುಟುಂಬ ಮತ್ತು ಸ್ನೇಹಿತರಿಗೆ ಅತ್ಯಂತ ಪವಿತ್ರ ಕ್ರಿಸ್ಮಸ್‌ನ ಶುಭಾಶಯಗಳು! ವರ್ಷದ ಈ ಮಂಗಳಕರ ಸಮಯದಲ್ಲಿ ಸ್ವರ್ಗೀಯ ಸ್ತರಗಳಿಂದ ಹೊರಹೊಮ್ಮುತ್ತಿರುವ ಶಾಂತಿ ಮತ್ತು ಸಂತೋಷದ ಸ್ಪಂದನಗಳಿಂದ ನಿಮ್ಮ ಹೃದಯ ಮತ್ತು ಆತ್ಮಗಳು ಉನ್ನತಿಗೇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಬೆತ್ಲೆಹೆಮ್‌ನಲ್ಲಿ ಯೇಸುವಿನ ಜನನವಾಗಿ ಶತಮಾನಗಳೇ ಕಳೆದಿವೆ; ಆದರೂ ದಿವ್ಯ ಪ್ರೇಮದ ಈ ನಿತ್ಯ-ಜೀವಂತ ಅವತಾರ ಪುರುಷನ ಬೋಧನೆಗಳು ಮತ್ತು ಉದಾಹರಣೆ ಇನ್ನೂ ತಮ್ಮ ಆತ್ಮ-ವಿಮೋಚಕ ಶಕ್ತಿಯನ್ನು ಹೊರಸೂಸುತ್ತ, ನೈತಿಕ ಧೈರ್ಯ, ಸರ್ವರೆಡೆಗೂ ಸಹಾನುಭೂತಿ ಮತ್ತು ಭಗವತ್-ಕೇಂದ್ರಿತ ಜೀವನಕ್ಕಾಗಿ ಸಾರ್ವತ್ರಿಕ ನಿಯಮಗಳೊಂದಿಗೆ ಪ್ರಪಂಚದ ಮೂಲೆ ಮೂಲೆಗಳಲ್ಲೂ ಆತ್ಮಗಳನ್ನು ಪ್ರೇರೇಪಿಸುತ್ತಿವೆ. ಆ ಅನುಗ್ರಹ ಮತ್ತು ಶಕ್ತಿಯೊಂದಿಗೆ ನಾವು ಶ್ರುತಿಗೂಡಿಕೊಂಡರೆ, ಯೇಸುವು ತನ್ನ ಐಹಿಕ ಅವತಾರದ ಸಮಯದಲ್ಲಿ ಮಾಡಿದ ದೈಹಿಕ ಉಪಶಮನದ ಪವಾಡಗಳಿಗಿಂತಲೂ ಹೆಚ್ಚಿನದೆಂದರೆ, ಅವನು ಈಗಲೂ ಮಾಡುತ್ತಿರುವ ಆಧ್ಯಾತ್ಮಿಕ ಪರಿವರ್ತನೆಗಳು ಎಂದು ನಮಗೆ ತಿಳಿಯುತ್ತದೆ.
ಜ್ಞಾನೋದಯ ಹೊಂದಿದ ಪ್ರಜ್ಞೆ ಇರುವಂತಹ ನವಯುಗದೆಡೆಗೆ ಮನುಕುಲದ ಪುನರುಜ್ಜೀವನಕ್ಕಾಗಿ ಯೇಸುವು ಮಹಾವತಾರ ಬಾಬಾಜಿಯವರೊಂದಿಗೆ ಕೆಲಸ ಮಾಡುತ್ತಿದ್ದಾನೆ ಎಂದು ನಮ್ಮ ಪೂಜ್ಯ ಗುರುಗಳು ನಮಗೆ ಭರವಸೆ ನೀಡಿದ್ದಾರೆ. ಅವರಿಬ್ಬರೂ ಕೂಡಿ, ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ / ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಕ್ರಿಯಾ ಯೋಗ ಬೋಧನೆಗಳನ್ನು ಜಗತ್ತಿಗೆ ನೀಡಿದ್ದಾರೆ, ಅದರ ಮೂಲಕ ನಾವು ಅನಂತ ಬಾಲ ಕ್ರಿಸ್ತನ ಜನನಕ್ಕೆ ನಮ್ಮ ಪ್ರಜ್ಞೆಯ ತೊಟ್ಟಿಲನ್ನು ಸಿದ್ಧಪಡಿಸಬಹುದು.
ಗುರುದೇವರು ಒಮ್ಮೆ ಹೇಳಿದರು, “ಬಾಲ ಯೇಸು ತನ್ನ ತೊಟ್ಟಿಲಲ್ಲಿ ಅಸಹಾಯಕನಾಗಿದ್ದಾನೆ ಎಂದು ನಾವು ಭಾವಿಸುತ್ತೇವೆ … ಆದರೂ ಆ ಸಣ್ಣ ರೂಪದಲ್ಲಿ ಬ್ರಹ್ಮಾಂಡದ ಬೆಳಕಾಗಿರುವ ಅನಂತ ಕ್ರಿಸ್ತನು ಇದ್ದನು.” ಸೃಷ್ಟಿಯ ಪ್ರತಿಯೊಂದು ಪರಮಾಣುವಿನಲ್ಲಿಯೂ ಮಿಡಿಯುತ್ತಿರುವ ಆ ಸರ್ವವ್ಯಾಪಿ ಕ್ರಿಸ್ತ ಪ್ರಜ್ಞೆಯು [ಕೂಟಸ್ಥ ಚೈತನ್ಯ] ನಮ್ಮ ಜೀವನವನ್ನು ಬೆಳಗಿಸುವ ಮತ್ತು ಜಗತ್ತಿನ ನೋವುಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.
ಮನುಕುಲಕ್ಕಾಗಿರುವ ಈ ಮಹಾನ್ ಕ್ರಿಸ್ಮಸ್ ಉಡುಗೊರೆಯನ್ನು ನಾವು ಹೇಗೆ ಸಕ್ರಿಯವಾಗಿ ಪಡೆದುಕೊಳ್ಳಬಹುದು? ಯೇಸು ವ್ಯಕ್ತಪಡಿಸಿದ ದಯೆ ಮತ್ತು ಅಂತರ್ಗತ ಕ್ರಿಸ್ತ-ಚೇತನವನ್ನು ಮೈಗೂಡಿಸಿಕೊಳ್ಳುವುದರಿಂದ, ಮತ್ತು ಲೌಕಿಕ ಮನ್ನಣೆಯ ಅಥವಾ ಪ್ರತ್ಯೇಕತೆ ಬಯಸುವಂಥ ಸ್ವಾರ್ಥಪರತೆಯ ಅಗತ್ಯವಿಲ್ಲದ ನಮ್ರತೆಯನ್ನು ಹೀರಿಕೊಳ್ಳುವ ಮೂಲಕ ಮತ್ತು ಅತ್ಯಂತ ಕಠಿಣ ಪರೀಕ್ಷೆಗಳ ನಡುವೆಯೂ ಶತ್ರುತ್ವವು ಅವನನ್ನು ಆಂತರಿಕವಾಗಿ ಪ್ರಭಾವಿಸದಂತೆ ಮಾಡಿದ ಎಲ್ಲವನ್ನೂ ಕ್ಷಮಿಸುವಂತಹ ಪ್ರೀತಿಯನ್ನು ನಮ್ಮಲ್ಲಿ ಹೀರಿಕೊಳ್ಳುವ ಮೂಲಕ ಆ ಉಡುಗೊರೆಯನ್ನು ಪಡೆದುಕೊಳ್ಳಬಹುದು. ಪರಮಹಂಸಜಿ ನಮಗೆ ಕಲಿಸಿದಂತೆ, ಧ್ಯಾನದ ಆಂತರಿಕ ನಿಶ್ಚಲತೆಯಲ್ಲಿ ಭಗವಂತನೊಂದಿಗಿನ ಸಂಸರ್ಗದ ಮೂಲಕ ನಾವು ಆಳವಾಗಿ ಪ್ರೀತಿ, ಬೆಳಕು ಮತ್ತು ಅನಂತತೆಯ ವಿಸ್ತೃತ ಪ್ರಜ್ಞೆಯನ್ನು ಅನುಭವಿಸಬಹುದು, ಅದೇ ನಿಜವಾದ ಕ್ರಿಸ್ಮಸ್, ಮತ್ತು ಅದು ನಮ್ಮ ಬಾಹ್ಯ ಜೀವನದಲ್ಲಿ ಉಕ್ಕಿ ಹರಿಯಲಿ.
ಈ ಪವಿತ್ರ ಋತುವಿನ ನಿಜವಾದ ಚೈತನ್ಯ, ಅಂದರೆ, ಕ್ರಿಸ್ತ ಮತ್ತು ಮಹಾನ್ ಗುರುಗಳೆಲ್ಲರ ನಿತ್ಯ-ಜೀವಂತ ಚೈತನ್ಯವು ಈಗ ಮತ್ತು ಹೊಸ ವರ್ಷದುದ್ದಕ್ಕೂ ನಿಮ್ಮ ಹೃದಯ ಮತ್ತು ಮನೆಗಳನ್ನು ತುಂಬಲು ನಾನು ನನ್ನ ಹೃತ್ಪೂರ್ವಕ ಪ್ರಾರ್ಥನೆಯನ್ನು ಕಳುಹಿಸುತ್ತೇನೆ.
ಭಗವಂತ, ಕ್ರಿಸ್ತ ಮತ್ತು ಗುರುಗಳೆಲ್ಲರ ಪ್ರೀತಿ ಮತ್ತು ಆನಂದದಲ್ಲಿ,
ಸ್ವಾಮಿ ಚಿದಾನಂದ ಗಿರಿ